ಪ್ರವಾಸ

ಸಿಂಹದ ನಾಡು ಸಿಂಗಪೂರ್- ಹೆಜ್ಜೆ 5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಕಾಲನ ರೆಕ್ಕೆಗಳು (Wings of Time))

ಸಂಜೆಯಾಗಿತ್ತು. ನಮಗೆಲ್ಲರಿಗೂ ಬೆಳಗಿನಿಂದ ನಡೆದೂ ನಡೆದೂ ದಣಿವಾಗಿತ್ತು. ಸೆಂಟೋಸಾ ದ್ವೀಪದ ‘ಸಿಲೋಸಾ ಬೀಚ್’ ಬಳಿಯದ್ದ ಬಯಲು ರಂಗಮಂದಿರದ ಮೆಟ್ಟಿಲುಗಳ ಮೇಲೆ ಕುಳಿತು ಅಂದಿನ ಕೊನೆಯ ಕಾರ್ಯಕ್ರಮವನ್ನು ನೋಡಲು ಸಿದ್ದರಾದೆವು. ಭೂತಕಾಲದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಭವಿಷ್ಯದ ಬಗ್ಗೆ ಕನಸು ಕಟ್ಟುತ್ತಾ, ವರ್ತಮಾನದಲ್ಲಿ ಬದುಕುವ ನಾವು ಸೆಂಟೋಸಾ ದ್ವೀಪದ ಆಕರ್ಷಣೆಯ ಬಿಂದುವಾದ ‘ವಿಂಗ್ಸ್ ಆಫ್ ಟೈಮ್’ ನೋಡಲು ಹೊರಟೆವು. ಹೆಸರೇ ಹೇಳುವಂತೆ ಇಡೀ ವಿಶ್ವದ ಪ್ರಾಚೀನ ನಾಗರೀಕತೆಗಳು ಬೆಳೆದು ಬಂದ ಹಾದಿ ಹಾಗೂ ಅಲ್ಲಿನ ಪೌರಾಣಿಕ ಮತ್ತು ಐತಿಹಾಸಿಕ ಕಥನಗಳನ್ನು ಪ್ರಸ್ತುತಪಡಿಸುವ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ‘ಶೋ’ ಇದಾಗಿತ್ತು. ಸುಮಾರು ಎರಡು ಕಿ.ಮೀ. ಉದ್ದವಾಗಿದ್ದ ಈ ಸಮುದ್ರ ತೀರದಲ್ಲಿ ನೂರಾರು ಜನ ಸೇರಿದ್ದರು. ನಿಧಾನವಾಗಿ ಸೂರ್ಯ ಅಸ್ತಮಿಸುತ್ತಿದ್ದ, ಇರುಳು ಕವಿಯುತ್ತಿತ್ತು. ಅಲ್ಲಿ ತುಸು ದೂರದಲ್ಲಿ ಒಂದು ನೌಕೆ ನಿಂತಿತ್ತು. ಧ್ವನಿವರ್ಧಕದ ಮೂಲಕ ಸಭಿಕರಿಗೆ ಕೆಲವು ಎಚ್ಚರಿಕೆಗಳನ್ನು ನೀಡುತ್ತಿದ್ದರು, ‘ದಯವಿಟ್ಟು ಯಾರೂ ಸಮುದ್ರದ ಬಳಿ ಬರಬಾರದು, ಅಲ್ಲಿ ಬೆಂಕಿ, ಬಾಣ ಬಿರುಸುಗಳನ್ನು ಹಾರಿಸುವುದರಿಂದ ನಿಮಗೆ ಅಪಾಯ.’ ಹಾಗೆಯೇ ಆ ಶೋ ಆರಂಭವಾಗುವ ಸಮಯವನ್ನೂ ಬಿತ್ತರಿಸುತ್ತಿದ್ದರು. ನಿಗದಿತ ಸಮಯಕ್ಕೆ ಸರಿಯಾಗಿ ಇಪ್ಪತ್ತು ನಿಮಿಷದ ಕಾರ್ಯಕ್ರಮದ ಆರಂಭ. ನಾವೆಲ್ಲರೂ ಮೈಯೆಲ್ಲಾ ಕಣ್ಣಾಗಿ ಕಾಲನ ಪಯಣವನ್ನು ನೋಡುತ್ತಾ ಕುಳಿತೆವು.

ವಿಶಾಲವಾದ ಸಮುದ್ರ, ಅಲ್ಲಿ ಸಿನೆಮಾ ಅಥವಾ ನಾಟಕ ತೋರಿಸುವ ಯಾವ ಪರಿಕರಗಳನ್ನೂ ನಾವು ನೋಡಲಿಲ್ಲ. ಒಂದು ಹಡಗಿನ ಮುಂದೆ ನಾಲ್ಕು ತ್ರಿಕೋನಾಕಾರದ ಪರದೆಗಳು ಇದ್ದವು ಅಷ್ಟೇ. ಇಲ್ಲೇನು ನೋಡಬಹುದು ಎಂಬ ಭಾವ ನಮ್ಮಲ್ಲಿ. ಆದರೆ ಇದ್ದಕ್ಕಿದ್ದಂತೆ ತಂತ್ರಜ್ಞಾನವೆಂಬ ಮಾಯಾಜಾಲ ನಮ್ಮನ್ನೆಲ್ಲಾ ಯಾವುದೋ ಲೋಕಕ್ಕೆ ಕರೆದೊಯ್ದಿತ್ತು. ವಿಶ್ವದ ಹಲವು ನಾಗರೀಕತೆಗಳು ಸಾಗಿ ಬಂದ ಕಥೆ ಸಾಗಿತ್ತು. ಮೊದಲಿಗೆ ಬಂದ ಪೌರಾಣಿಕ ಲೋಕಕ್ಕೆ ಸೇರಿದ ಒಂದು ಪಕ್ಷಿ ‘ಶಹಬಾಝ್’ ಹಾಗೂ ಅದರ ಸ್ನೇಹಿತರಾದ ‘ರೇಚಲ್’ ಮತ್ತು ‘ಫೆಲಿಕ್ಸ್’ ಈ ಕಥೆಯ ನಿರೂಪಕರು. ಈ ಮಕ್ಕಳನ್ನು ಹೊತ್ತ ಪಕ್ಷಿ ಕಾಲಯಂತ್ರದಲ್ಲಿ ಸಾಗಿ ಹಲವು ಶತಮಾನಗಳ ಹಿಂದಿನ ನಾಗರೀಕತೆಯನ್ನು ಇವರಿಗೆ ಪರಿಚಯಿಸುವುದು. ಆಫ್ರಿಕಾದ ಸವನ್ನಾ ಮರಳುಗಾಡುಗಳು, ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಮಾಯನ್ ನಾಗರೀಕತೆ, ಇಜಿಪ್ಟಿನ ಪಿರಮಿಡ್‌ಗಳೂ, ಕೈಗಾರಿಕೀಕರಣಗೊಂಡ ನಗರಗಳು ಆ ಪರದೆಯ ಮೇಲೆ ಒಂದೊಂದಾಗಿ ಮೂಡಿ ಬಂದವು.

ಶಹಬಾಜ್ ಎಂಬ ಮಾಯಾ ಪಕ್ಷಿ ತನ್ನ ಸ್ನೇಹಿತರನ್ನು ಬೆನ್ನ ಮೇಲೆ ಹೊತ್ತು ಬೇರೆ ಬೇರೆ ಕಾಲ ಮತ್ತು ಸ್ಥಳಗಳಿಗೆ ಪಯಣಿಸಿ ವಿಭಿನ್ನ ಸಂಸ್ಕೃತಿಗಳ ರೋಚಕ ಕಥಾನಕಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಈ ‘ಶೋ’ನ ಪ್ರಮುಖ ಆಕರ್ಷಣೆಗಳು ‘೩ ಡಿ ಮ್ಯಾಪಿಂಗ್ ಪ್ರೊಜೆಕ್ಷನ್, ಸಮುದ್ರದ ಅಲೆಗಳ ಮೇಲೆ ಮೂಡುವ ನೀರಿನ ಪರದೆ, ನೀರಿನ ಕಾರಂಜಿಗಳು, ಪೈರೋಟೆಕ್ನಿಕ್ಸ್ ಅಥವಾ ಅಗ್ನಿ ಪ್ರದರ್ಶನ, ಲೇಸರ್ ಮತ್ತು ಪಟಾಕಿಗಳ ಪ್ರದರ್ಶನ ಹಾಗೂ ಇಂಪಾದ ಹಿನ್ನೆಲೆ ಸಂಗೀತ.’ ಹಲವು ಕಥನಗಳನ್ನು ಪ್ರಸ್ತುತ ಪಡಿಸಿದ ‘ಕಾಲಚಕ್ರನ ಪಯಣದಲ್ಲಿ’ ನಾವು ಕಂಡದ್ದು – ಕೃಷಿ ಆಧಾರಿತ ವ್ಯವಸ್ಥೆಯಿಂದ ಕೈಗಾರಿಕೀಕರಣ ವ್ಯವಸ್ಥೆಗೆ ಬದಲಾಗುವ ನಗರಗಳು, ಪ್ರಾಚೀನ ನಾಗರೀಕತೆಗಳಾದ ಅರೇಬಿಯಾ, ಏಷ್ಯಾ, ಮಧ್ಯಪ್ರಾಚ್ಯ ಮುಂತಾದ ಚಿತ್ರಣಗಳು. ಅರೇಬಿಯಾ ಪಟ್ಟಣಗಳಲ್ಲಿ ಚಿನ್ನದ ಲೇಪನದಿಂದ ಕಂಗೊಳಿಸುವ ಅರಮನೆಗಳು, ಆಫ್ರಿಕಾಖಂಡದ ಸವನ್ನಾ ಮರಳುಗಾಡಿನಲ್ಲಿ ವರ್ತಕರ ಒಂಟೆ ಸವಾರಿ, ಮಾಯನ್ ಸಂಸ್ಕೃತಿಯ ಅವಶೇಷಗಳು, ಇಜಿಪ್ಟ್ ನ ಪಿರಮಿಡ್‌ಗಳ ನಿರ್ಮಾಣದ ವಿವರಗಳು, ಚೈನಾ ಮತ್ತು ಜಪಾನೀಯರ ನಾಡಿನಲ್ಲಿ ಕಂಡು ಬರುವ ಪುರಾತನವಾದ ದೇಗುಲಗಳು ಹಾಗೂ ಆಕರ್ಷಣೀಯವಾದ ಅಪೂರ್ವ ಶಿಲ್ಪಕಲೆ ನಮಗೆ ರಸದೌತಣವನ್ನೇ ಉಣಬಡಿಸುತ್ತಿದ್ದವು. ಚೀನೀಯರ ಡ್ರಾಗನ್ ಹಬ್ಬದ ದೃಶ್ಯಗಳು ಮೂಡಿಬಂದಾಗ ಎಲ್ಲರಿಂದ ಸಂತಸದ ಉದ್ಗಾರ ಕೇಳಿ ಬಂದಿತ್ತು. ಇದು ಕೇವಲ ಪುರಾತನ ಸಂಸ್ಕೃತಿಗಳ ಪ್ರದರ್ಶನವಾಗಿರಲಿಲ್ಲ. ಹಿಮಾಲಯ ಹಾಗೂ ಆಲ್ಫ್ಸ್ ಪರ್ವತಶ್ರೇಣಿಗಳ ಚಿತ್ರಣಗಳು ನೀಲಿ ಮತ್ತು ಬಿಳಿ ಬೆಳಕಿನ ಸಂಯೋಜನೆಯಲ್ಲಿ ಅದ್ಭುತವಾಗಿ ಮೂಡಿ ಬಂದಿತ್ತು. ನಾವೇ ಅಲ್ಲಿನ ಹಿಮಶಿಖರಗಳಲ್ಲಿ ಓಡಾಡಿದ ಅನುಭವವಾಗಿತ್ತು. ಪರ್ವತವೇರಿದ ಮೇಲೆ ಸಮುದ್ರದಾಳಕ್ಕೆ ಇಳಿಯಲೇಬೇಕಲ್ಲ, ಸಮುದ್ರದ ಅಲೆಗಳ ಭೋರ್ಗರೆತದ ಮಧ್ಯೆ, ನಾವು ಕಂಡಿರದ ಸಾಗರದಾಳದಲ್ಲಿ ಜೀವಿಸುವ ಜಲಚರಗಳು ನಮಗೆಲ್ಲಾ ಅಚ್ಚರಿಯನ್ನುಂಟು ಮಾಡಿದ್ದವು. ಗಗನದೆತ್ತರಕ್ಕೆ ನಿಂತ ಪರ್ವತಗಳನ್ನೇರಿ, ಭೂಮಿಯ ಮೇಲೆ ಅರಳಿದ ವಿವಿಧ ಸಂಸ್ಕೃತಿಗಳ ವೈವಿಧ್ಯತೆ, ಸಾಗರದಾಳದಲ್ಲಿ ವಾಸಿಸುವ ಜಲಚರಗಳನ್ನು ನೋಡಿದಾಗ ಮನರಂಜನೆಯ ಜೊತೆಜೊತೆಗೇ ಜ್ಞಾನದ ಬೆಳಕೂ ನಮ್ಮಲ್ಲಿ ಮೂಡಿತ್ತು. ಆಗ ನನಗೆ ನೆನೆಪಾಗಿದ್ದು ನಮ್ಮ ನಾಡಿನ ರಾಜಧಾನಿ ದೆಹಲಿ ಮತ್ತು ಅಹಮದಾಬಾದಿನ ಅಕ್ಷರಧಾಮದಲ್ಲಿ ನಾವು ನೋಡಿದ ‘ವಾಟರ್ ಲೇಸರ್ ಶೋ’. ನಚಿಕೇತನ ಕಥಾ ಪ್ರಸಂಗ, ಮಹಾಭಾರತದಲ್ಲಿ ಬರುವ ಯಮಧರ್ಮರಾಯ ಮತ್ತು ಯುಧಿಷ್ಠಿರನ ಮಧ್ಯೆ ನಡೆದ ಸಂವಾದ, ನಳ ದಮಯಂತಿಯರ ಕಥಾನಕ ಇತ್ಯಾದಿ. ಇಂತಹ ‘ಶೋ’ಗಳು ನೋಡುಗರಲ್ಲಿ ವಿಶ್ವ ಸಹೋದರತ್ವ ಭಾವ ಮೂಡಿಸುವುದರಲ್ಲಿ ಸಂದೇಹವೇ ಇಲ್ಲ. ಅಬ್ಬಾ, ಇಂತಹ ಅದ್ಭುತವಾದ ತಂತ್ರಜ್ಞಾನದ ಆವಿಷ್ಕಾರ ಮಾಡಿದ ವಿಜ್ಞಾನಿಗಳಿಗೆ ನಮ್ಮದೊಂದು ದೊಡ್ಡ ಸಲಾಂ.

ರಾತ್ರಿ ಎಂಟು ಗಂಟೆಗೆ ‘ಕಾಲನ ಪಯಣವನ್ನು’ ನೋಡಿ ಹಿಂತಿರುಗುವಾಗ ನಾವು ನೋಡಿದ್ದ ಸಂಗತಿಗಳನ್ನು ಚರ್ಚಿಸುತ್ತಾ ಊಟಕ್ಕೆ ನಡೆದೆವು. ‘ಲಿಟಲ್ ಇಂಡಿಯಾ’ ಎಂಬ ಸ್ಥಳದಲ್ಲಿ ಇದ್ದ ಆನಂದ ಭವನ, ಶರವಣ ಭವನ, ಉಡುಪಿ ರೆಸ್ಟೊರಾಂಟ್‌ನಲ್ಲಿಯೇ ನಮ್ಮ ನಿತ್ಯದ ಊಟ. ಎಲ್ಲಿಂದಲೋ ಬಂದು ರುಚಿ ರುಚಿಯಾದ ಊಟ, ಉಪಹಾರವನ್ನು ಭಾರತದ ಪ್ರವಾಸಿಗರಿಗೆ ಪೂರೈಸುವ ತಮಿಳರ ಸಾಹಸ ಕಂಡು ಬೆರಗಾದೆವು. ನಮ್ಮ ಟೂರ್ ಮ್ಯಾನೇಜರ್ ಹೆಬ್ಬಾರ್‌ರವರು ನಮ್ಮ ಊಟೋಪಚಾರದಲ್ಲಿ ವೈವಿಧ್ಯತೆ ಇರಲಿ ಎಂದು ನಮ್ಮನ್ನು ನಿತ್ಯ ಬೇರೆ ಬೇರೆ ಹೊಟೇಲ್‌ಗಳಿಗೆ ಕರೆದೊಯ್ಯುತ್ತಿದ್ದರು. ಆ ದಿನ ರಾತ್ರಿ ನಾವು ‘ಎ ಟು ಬಿ’ ಎಂಬ ರೆಸ್ಟೊರಾಂಟಿಗೆ ತೆರಳಿದೆವು. ನಮ್ಮ ತಂಡದ ಸದಸ್ಯರೊಲ್ಲಬ್ಬರಾದ ‘ನಟರಾಜ್‌ರವರು’, ಟೂರಿನ ವೇಳಾಪಟ್ಟಿಯನ್ನು ನೋಡುತ್ತಾ, ‘ಜುರಾಂಗ್ ಬರ್ಡ್ ಪಾರ್ಕ್’ ನ್ನು ಏಕೆ ತೋರಿಸಲಿಲ್ಲ ಎಂದು ಹೆಬ್ಬಾರ್‌ರವರನ್ನು ಎಂದು ಕೇಳಿದರು. ‘ಆ ಪಾರ್ಕ್ ಸ್ಥಳಾಂತರವಾಗುತ್ತಿದೆ. ಹಾಗಾಗಿ ಅದನ್ನು ಸಧ್ಯ ಮುಚ್ಚಲಾಗಿದೆ’ ಎಂದು ಮ್ಯಾನೇಜರ್ ಹೇಳಿದರು. ನಾವು ಊಟ ಮಾಡುತ್ತಿರುವಾಗಲೇ ಜುರಾಂಗ್ ಪಾರ್ಕನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು – ಜುರಾಂಗ್ ಪಾರ್ಕ್ ಏಷ್ಯಾದಲ್ಲಿಯೇ ದೊಡ್ಡದಾದ ಪಕ್ಷಿಗಳ ಪಾರ್ಕ್. ಸುಮಾರು ಇಪ್ಪತ್ತು ಹೆಕ್ಟೇರ್ ಪ್ರದೇಶದಲ್ಲಿರುವ ಈ ಪಾರ್ಕಿನಲ್ಲಿ ನಾನ್ನೂರು ಜಾತಿಯ ಪಕ್ಷಿಗಳಿದ್ದು ಒಟ್ಟು ೩,೫೦೦ ಪಕ್ಷಿಗಳಿವೆ. ಆಯಾ ಪಕ್ಷಿಗಳ ಸ್ವಾಭಾವಿಕ ವಾಸಸ್ಥಾನಗಳನ್ನು ದೊಡ್ಡ ದೊಡ್ಡ ಆವರಣಗಳಲ್ಲಿ ರಚಿಸಿದ್ದು, ಆ ಪಕ್ಷಿಗಳು ಆ ವಾತಾವರಣದಲ್ಲಿ ಸ್ವಚ್ಛಂದವಾಗಿ ಹಾರಾಡಿಕೊಂಡಿವೆ. ಇಲ್ಲಿ ಪೆಂಗ್ವಿನ್‌ಗಳಿವೆ, ಫ್ಲೆಮಿಂಗೋಗಳಿವೆ, ವಿವಿಧ ಬಗೆಯ ಗಿಣಿಗಳು, ಹಾರ್ನ್ಬಿಲ್, ಹದ್ದುಗಳು, ಪೆಲಿಕನ್‌ಗಳು ಮುಂತಾದ ಪಕ್ಷಿಗಳು ಇವೆ. ಈ ವಿಸ್ತಾರವಾದ ಪಾರ್ಕ್ ನಲ್ಲಿ ಬಗೆಬಗೆಯ ಗಿಡಮರಗಳು, ಅಲ್ಲಲ್ಲಿ ನೀರಿನ ಕೊಳಗಳೂ ಹಾಗೂ ಬಂಡೆಗಳ ಮೇಲಿನಿಂದ ದುಮ್ಮಿಕ್ಕುವ ಜಲಪಾತಗಳೂ ಇದ್ದು, ಈ ಸ್ಥಳ ಒಂದು ನೈಸರ್ಗಿಕ ಅರಣ್ಯವೆಂಬಂತೆ ಭಾಸವಾಗುತ್ತದೆ. ನಗರದ ವೇಗದ ಜೀವನಕ್ಕೆ ಬೇಸತ್ತು ಶಾಂತಿಯನ್ನು ಅರಸಿ ಬರುವವರಿಗೆ ಇದೊಂದು ಅದ್ಭುತ ತಾಣ.’ ಇಂತಹ ಸುಂದರವಾದ ಸ್ಥಳವನ್ನು ನೋಡಲಾಗಲಿಲ್ಲ ಎಂಬ ಬೇಸರದಿಂದ ನಮ್ಮ ಲಾಡ್ಜಿಗೆ ಹಿಂತಿರುಗಿದೆವು.

ಅಂದು ಮಲಗಿರುವಾಗ ಒಂದು ಕನಸು ಕಂಡೆ – ಕಾಮನಬಿಲ್ಲಿನ ಬಣ್ಣಗಳನ್ನು ಹೊತ್ತ ಒಂದು ಎತ್ತರವಾದ ಪಕ್ಷಿ, (ಸುಮಾರು ನಾಲ್ಕು ಐದು ಅಡಿ ಎತ್ತರವಿರಬಹುದು), ನನ್ನ ಮುಂದೆ ಹಾರಿ ಬಂದು, ‘ಅವ್ವಾ ಬೇಸರವಾಯಿತಾ, ನಮ್ಮನ್ನು ನೋಡಲಾಗಲಿಲ್ಲವೆಂದು. ನನ್ನ ಬೆನ್ನ ಮೇಲೇರು ಬಾ, ನಿನ್ನನ್ನು ಪಕ್ಷಿಗಳ ಸ್ವರ್ಗಕ್ಕೆ ಕರೆದೊಯ್ಯುವೆ’ ಎಂದು ಹೇಳಿತು. ನಾನು ರೆಡಿಯಾಗಿ ಹೊರಟೇಬಿಟ್ಟೆ. ನನ್ನನ್ನು ಬೆನ್ನ ಮೇಲೆ ಹೊತ್ತ ಹಕ್ಕಿಯು, ತನ್ನ ರೆಕ್ಕೆಗಳನ್ನು ಪಟಪಟನೇ ಬಡಿಯುತ್ತಾ ಆಕಾಶ ಮಾರ್ಗವಾಗಿ ಜುರಾಂಗ್ ಪಾರ್ಕಿನ ಬಳಿ ಇಳಿಸಿ, ತನ್ನ ಸಂಕುಲದ ಗೆಳೆಯರ ಪರಿಚಯ ಮಾಡಿಕೊಡತೊಡಗಿತ್ತು. ‘ಇಲ್ಲಿ ನೋಡು, ಹಾರಲು ಬಾರದ ಪಕ್ಷಿ ಸಮೂಹವನ್ನು’ ಎಂದಿತ್ತು. ನಾನು ಅಚ್ಚರಿಯಿಂದ ಗಮನಿಸಿದೆ – ಒಂದು ಗಾಜಿನ ಆವರಣದಲ್ಲಿದ್ದ ನೀರಿನ ಕೊಳದಲ್ಲಿ ಪೆಂಗ್ವಿನ್‌ಗಳು ಸಲೀಸಾಗಿ ಈಜುತ್ತಿದ್ದವು. ಮಧ್ಯೆ ಮಧ್ಯೆ ಇದ್ದ ನಡುಗಡ್ಡೆಗಳಲ್ಲಿ ನಿಂತ ಪೆಂಗ್ವಿನ್‌ಗಳು ನಿಧಾನವಾಗಿ ನಡೆಯುತ್ತಿದ್ದವು. ಇಲ್ಲಿನ ತಾಪಮಾನ ಮೈನಸ್ ಡಿಗ್ರಿಗೆ ಇಳಿಸಿದ್ದರು, ಕಾರಣ ಪೆಂಗ್ವಿನ್‌ಗಳು ವಾಸ ಮಾಡುವುದೇ ಹಿಮದ ಗಡ್ಡೆಗಳ ಮೇಲೆ. ಮುಂದಿದ್ದ ಪಕ್ಷಿಗಳ ತಾಣವನ್ನು ಬೆಕ್ಕಸ ಬೆರಗಾಗಿ ನೋಡಿದೆ – ಬಿಳಿ ಹಾಗೂ ತಿಳಿ ಗುಲಾಬಿ ವರ್ಣಗಳ ಸಮ್ಮಿಶ್ರಣದ ಫ್ಲೆಮಿಂಗೋಗಳು ವೈಯಾರದಿಂದ ಕೊಳದ ಬದಿಯಲ್ಲಿ ಚಲಿಸುತ್ತಿದ್ದವು. ಅವುಗಳ ಒನಪು ವೈಯಾರ, ನಡೆಯುವ ಠೀವಿ ನೋಡಲು ಬಲು ಚೆಂದ.

ನಾನು ಮುಂದೆ ಮುಂದೆ ಸಾಗಿದೆ – ಅಲ್ಲೊಂದು ಎತ್ತರವಾದ ಮಾನವ ನಿರ್ಮಿತ ಜಲಪಾತ. ಪಕ್ಷಿಗಳು ಜಲಪಾತದ ಮೇಲೆಲ್ಲಾ ಹಾರಾಡುತ್ತಿದ್ದವು. ಅಲ್ಲಿಂದ ‘ವಿಂಗ್ಸ್ ಆಫ್ ಏಶ್ಯಾ’ ಎಂಬ ಆವರಣವನ್ನು ಹೊಕ್ಕೆ. ಅಬ್ಬಾ, ಎಷ್ಟೊಂದು ಬಗೆಯ ಪಕ್ಷಿಗಳು, ಇಲ್ಲಿ ಸುಮಾರು ೧೩೫ ಬಗೆಯ ಐನೂರು ಪಕ್ಷಿಗಳು ಕಿರುಚಾಡುತ್ತಾ ಹಾರಾಡುತ್ತಿದ್ದವು. ಕಿವಿ ಕಿವುಡಾಗುವಂತೆ ಸದ್ದು ಮಾಡುತ್ತಿದ್ದವು. ನಮ್ಮೂರಿನಲ್ಲಿ ಕಂಡಂತಹ ಚಿರಪರಿಚಿತವಾದ ಹಲವು ಪಕ್ಷಿಗಳು ನನ್ನನ್ನು ಸ್ವಾಗತಿಸುತ್ತಿದ್ದವು, ನೀಲಿ ಬಣ್ಣದ ಕಿಂಗ್ ಫಿಶರ್, ದೊಡ್ಡದಾದ ಚಪ್ಪಟೆ ಕೊಕ್ಕುಳ್ಳ ಹಾರ್ನ್ಬಿಲ್ ಚಂಗನೆ ಹಾರಿದವು. ಮುಂದೆ ಆಫ್ರಿಕನ್ ಮರಗಳ ಮೇಲೆ ತೂಗುಹಾಕಲಾಗಿದ್ದ ಮನೆಗಳಲ್ಲಿ ಕುಳಿತು ರಾಗಾಲಾಪನೆ ಮಾಡುತ್ತಿದ್ದ ಆಫ್ರಿಕನ್ ಪಕ್ಷಿಗಳನ್ನು ನೋಡಿದೆ. ವಿಸ್ತಾರವಾದ ರೆಕ್ಕೆಗಳನ್ನು ಬೀಸುತ್ತಾ ಗಾಂಭೀರ್ಯದಿಂದ ಗಗನದೆತ್ತರಕ್ಕೆ ಹಾರುವ ಹದ್ದುಗಳು, ವಿಷ್ಣುವಿನ ವಾಹನವಾದ ಗರುಡನಂತೆ ತೋರುವ ಫಾಲ್ಕನ್ ಮುಂತಾದ ಹಕ್ಕಿಗಳು ಒಂದೆಡೆ ಇದ್ದರೆ, ತರಹೇವಾರಿ ಗಿಳಿಗಳ ಸಮೂಹ ‘ನೀವು ಕುಶಲವೇ?’ ಎಂದು ನಮ್ಮನ್ನು ಉಪಚರಿಸುತ್ತಿತ್ತು. ಪೆಲಿಕನ್‌ಗಳು ಗಬಕ್ಕನೇ ನೀರಿನೊಳಗೆ ಮುಳುಗು ಹಾಕಿ ಮೀನನ್ನು ಹಿಡಿದು ತಿನ್ನುವ ಕೌಶಲ ಕಂಡು ಅಚ್ಚರಿಯಾಗಿತ್ತು. ನೀರೊಳಗೆ ಆರಾಮವಾಗಿ ಈಜುವ ಬಾತುಕೋಳಿಗಳು ‘ಕ್ವಾಕ್, ಕ್ವಾಕ್’ ಎಂದು ತಮ್ಮದೇ ರಾಗ ನುಡಿಸಿದ್ದವು.

ನನ್ನನ್ನು ಹೊತ್ತು ತಂದಿದ್ದ ಪಕ್ಷಿ ಗೆಳೆಯ ನನ್ನನ್ನು ‘ಕಿಂಗ್ಸ್ ಆಫ್ ಸ್ಕೈ ಶೋ’ ಗೆ ಕರೆದೊಯ್ದ. ಅಲ್ಲಿ ಆಕಾಶದ ತುಂಬೆಲ್ಲಾ ಹಾರಾಡುವ ವಿವಿಧ ಬಗೆಯ ಹದ್ದುಗಳನ್ನು ಪ್ರದರ್ಶಿಸುತ್ತಾ, ಈ ಪಕ್ಷಿಗಳ ನೈಪುಣ್ಯತೆ, ವೇಗ ಹಾಗೂ ತೀಕ್ಷ್ಣ ದೃಷ್ಟಿಯ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸುತ್ತಿದ್ದರು. ಮುಂದಿನ ಶೋ ‘ಹೈಫ್ಲೆಯರ‍್ಸ್ ಶೋ’ – ಇಲ್ಲಿ ಮೆಕಾನ್, ಹಾರ್ನ್ಬಿಲ್ ಮುಂತಾದ ಪಕ್ಷಿಗಳ ಆಟಗಳನ್ನು ತೋರಿಸುತ್ತಿದ್ದರು. ಪಕ್ಷಿಗಳು ಅವರು ಹಿಡಿದ ರಿಂಗ್‌ನೊಳಗೆ ನುಸುಳುವುದು, ಅಲ್ಲಿ ಚೆಲ್ಲಾಡಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು, ಚಾಕಲೇಟ್ ಪೇಪರ್‌ಗಳನ್ನು ಕಸದ ಡಬ್ಬಿಗೆ ಹಾಕುವುದನ್ನು ಕಂಡು ಚಪ್ಪಾಳೆ ತಟ್ಟಿದೆವು.

ನಾನು ಚಪ್ಪಾಳೆ ತಟ್ಟಿದ ಸದ್ದಿಗೆ ಎಚ್ಚರಗೊಂಡ ಪತಿರಾಯ, ನನ್ನನ್ನು ಎಬ್ಬಿಸಿ, ‘ಏನು ಕನಸು ಬಿತ್ತೆ?’ ಎಂದಾಗ ಸುತ್ತಮುತ್ತಲೂ ನೋಡಿದೆ. ನನ್ನ ಪಕ್ಷಿಗೆಳೆಯ ಮಾಯವಾಗಿದ್ದ. ಗಂಡನಿಗೆ ಏನು ಉತ್ತರ ನೀಡಲಿ ಎಂದು ತೋಚದೆ ಮತ್ತೆ ಕಣ್ಣುಮುಚ್ಚಿ ನಿದ್ರೆಗೆ ಶರಣಾದೆ. ಸಿಂಗಪೂರ್ ಒಂದು ಸಣ್ಣ ದ್ವೀಪ ರಾಷ್ಟ್ರ. ಶಿಸ್ತು ಮತ್ತು ಸ್ವಚ್ಛತೆಗೆ ಜಗತ್ತಿನಾದ್ಯಂತ ಹೆಸರಾದ ಸ್ಥಳ. ಪ್ರವಾಸಿಗರಿಗಾಗಿ ವೈವಿಧ್ಯಮಯವಾದ ಆಕರ್ಷಣೆಗಳನ್ನು ತೋರುವ ಪ್ರವಾಸಿಗರ ಸ್ವರ್ಗ.

(ಮುಂದುವರೆಯುವುದು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=45142

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *