ಕತ್ತಲು ಸರಿದು ಹಬ್ಬಿಹುದು ನೋಡು ಆಗಸದ ತುಂಬಾ ಬಣ್ಣ,
ಬದುಕಲ್ಲೂ ಹೀಗೆಯೇ ಮಿಡಿಯುವುದು ಸಂತಸದ ಸುಮಧುರ ಶೃತಿ
ತಾಳ್ಮೆ ಇರಲು ಸುಂದರ ಪ್ರತಿ ಚರಣ.
ಹಬ್ಬಿ ಕಣ್ಮನ ಸೆಳೆಯುವ ರಂಗು,
ತುಂಬಿಹನು ಆ ರವಿ ಅಂತರಾಳದಲ್ಲೊಂದು ಗುನುಗು,
ಈ ಸಂಜೆಯ ಸೊಬಗು,
ನಡೆಸಿದೆ ಹರಡುವ ಹುನ್ನಾರ ಮನಗಳ ತುಂಬಾ ಬೆರಗು.
ಆಗಸದ ರಂಗಿನಾಟದೊಳಗೆ ಮಾಯ,
ಈ ಬಡಪಾಯಿ ಹೃದಯ,
ಕಲಿಸಿದವರಾರೋ ಗೆಳೆಯ,
ಪ್ರಕೃತಿಗೂ ಸುಂದರ ಬಣ್ಣ ಬಳಿಯುವ ಕಲೆಯ?
ಕಂಡಿಲ್ಲ ನಾನು ಸೃಷ್ಟಿಕರ್ತನ ಮೀರಿಸುವಂತಹ ಚಿತ್ರಕಾರನ,
ಆಗಸದ ತುಂಬಾ ಬಣ್ಣ ತುಂಬಿ ಮೂಡಿಸಿಹನು ಮನದಲ್ಲಿ ಸಂಚಲನ.
ಸೂರ್ಯನ ಹೊಂಗಿರಣ ಭುವಿ ಮೇಲೆ ಸೋಕಲು ಹೊಮ್ಮುವುದೊಂದು ಕಾಂತಿ,
ಈ ನೋಟ ಮನಸಿಗೆ ನಾಟಲು ಇಲ್ಲಿಯೂ ಆವರಿಸುವುದೊಂದು ಉಲ್ಲಾಸ, ಶಾಂತಿ.

-ನಯನ ಬಜಕೂಡ್ಲು

