ಪ್ರಕೃತಿ-ಪ್ರಭೇದ

ತುಳಸೀ ಮಹಿಮೆ – ಕಿಂಚಿತ್‌

Share Button

ʼಒಲ್ಲನೋ ಹರಿ, ಕೊಳ್ಳನೋ,
ತುಳಸೀ ಇಲ್ಲದ ಪೂಜೆ, ಒಲ್ಲನೋ ಹರಿ ಕೊಳ್ಳನೋʼ

 ತುಳಸಿಯ ಪಾವಿತ್ರ್ಯತೆಯನ್ನು ಹೇಳಲು ಇದೊಂದು ದಾಸರ ಪದದ ಸಾಲು ಸಾಕು ಅನ್ನಿಸುತ್ತೆ. ಆ ನಾರಾಯಣನೇ – ನನ್ನ ಪೂಜೆ ಮಾಡುವಿರಾದರೆ, ತುಳಸಿಯೊಂದಿಗೆ ಮಾಡಿದರೆ ಮಾತ್ರ ನಾನು ಸಂಪ್ರೀತನಾಗುತ್ತೇನೆ ಎಂದಿರುವಾಗ, ಈ ತುಳಸೀದಳದ ಮಹತ್ವವನ್ನು ಅರಿಯದಿದ್ದರೆ ನಾವೇ ಹೆಡ್ಡರಾಗುತ್ತೇವೆ.

ನಮ್ಮ ಪುರಾಣೇತಿಹಾಸದಲ್ಲಿ ತುಳಸಿಯಲ್ಲಿ ಲಕ್ಷ್ಮಿದೇವಿಯ ಸನ್ನಿಧಾನ ಇದೆಯೆಂದು ಭಾವಿಸುತ್ತೇವೆ. ಹಾಗಾಗಿ ನಿತ್ಯ ಹೆಣ್ಣುಮಕ್ಕಳು ಮನೆಯ ಮುಂದಿರುವ ಬೃಂದಾವನದಲ್ಲಿ ವಿರಾಜಮಾನಳಾಗಿರುವ ಅಂದರೆ ಹುಲುಸಾಗಿ ಬೆಳೆದಿರುವ ತುಳಸೀ ಗಿಡಕ್ಕೆ ಪೂಜೆಯನ್ನು ಮಾಡುವ ಸತ್ಸಂಪ್ರದಾಯವನ್ನು   ಪಾಲಿಸಿಕೊಂಡು ಬಂದಿದ್ದಾರೆ. 

ದೇವಾಲಯಗಳಲ್ಲಿರುವ, ದೇವರಕೋಣೆಯಲ್ಲಿರುವ ಮೂರ್ತಿಗಳು, ಶಿಲ್ಪಗಳು ನಮ್ಮ ಮನಸ್ಸನ್ನು ದೇವರಲ್ಲಿ, ಧ್ಯಾನದಲ್ಲಿ ಕೇಂದ್ರೀಕರಿಸಲು ಸಹಾಯ ಮಾಡುತ್ತವೆ.  ಆದರೆ ಪ್ರಕೃತಿ ಮಾತೆಯ ಪ್ರತಿನಿಧಿಯಾದ ತುಳಸೀ ಗಿಡ ನಮ್ಮನ್ನು ಮಾತೆಯಾಗಿ, ದೇವತೆಯಾಗಿ ಪೊರೆಯುತ್ತಾಳೆ.

ಮನೆಯಲ್ಲಿರುವ ತುಳಸೀಗಿಡ ಸಕಾರಾತ್ಮಕವಾದ ಅಲೆಗಳನ್ನು ಪಸರಿಸುವಲ್ಲಿ ಅತ್ಯಂತ ಸಹಕಾರಿಯಾಗಿದೆ ಎಂಬುದನ್ನು ವಿಜ್ಞಾನವೂ ಒಪ್ಪಿಕೊಂಡಾಗಿದೆ.

ವಿಜ್ಞಾನ ಎಂಬ ಪದ ಬಂದಿದ್ದರಿಂದ ಈಗಲೇ ಹೇಳಿಬಿಡುತ್ತೇನೆ, ವೈಜ್ಞಾನಿಕವಾಗಿ ಇದನ್ನು ಲ್ಯಾಮಿಯೇಸ್‌ ಎಂಬ ಕುಟುಂಬಕ್ಕೆ ಸೇರಿದ್ದು ಎಂದು ವಿಜ್ಞಾನಿಗಳಯ ವಿಶ್ಲೇಷಿಸಿದ್ದಾರೆ.   ಹಾಗೆಯೇ ಇದನ್ನು ಓಸಿಮಮ್‌ ಟೆನುಫ್ಲೋರಮ್‌ ಅಥವಾ ಓಸಿಮಮ್‌ ಸ್ಯಾಂಕ್ಟಮ್ ಎಂದು ಹೆಸರಿಸಿದ್ದಾರೆ.  ಇದು ಹೊಂದಿರುವ ಔಷಧೀಯ ಗುಣಗಳಿಗಂತೂ ಸಾಟಿಯೇ ಇಲ್ಲ.  ಸುಗುಣಗಳ ಆಗರವಾಗಿದೆ ಈ ಪುಟ್ಟ ತುಳಸೀಗಿಡ ಎಂಬುದನ್ನು ನಮ್ಮ ಪೂರ್ವಿಕರು ಅರಿತು ಅದರ ಔಷಧೀಯ ಮತ್ತು ದೈವೀಕ ಗುಣಗಳನ್ನು ಮನಗಂಡೇ ನಾವೆಲ್ಲರೂ ಕಡ್ಡಾಯವಾಗಿ ತುಳಸೀದೇವಿಯ ಮಡಿಲಲ್ಲಿ ಸುರಕ್ಷಿತವಾಗಿ, ಆರೋಗ್ಯವಂತರಾಗಿ ಇರುವ ಪದ್ಧತಿಗಳನ್ನು ರೂಪಿಸಿಕೊಟ್ಟಿದ್ದಾರೆ. 

ನಮ್ಮ ಆರ್ಯುವೇದ ಹೇಳುವ ವಾತ, ಪಿತ್ಥ, ಕಫ ಮೂರೂ ತರಹದ ಬಾಧೆಗಳಿಗೆ ಇದರ ಔಷಧೀಯ ಗುಣಗಳು ಚಿಕಿತ್ಸಾದಾಯಕವಾಗಿ ಕೆಲಸ ಮಾಡುತ್ತದೆಯಾದರೂ ಮುಖ್ಯವಾಗಿ ಕಫದ ತೊಂದರೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದರ ಸೇವನೆ ಜೀರ್ಣಶಕ್ತಿಯನ್ನು ಸರಾಗಗೊಳಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಉಸಿರಾಟವನ್ನು ಸರಾಗಗೊಳಿಸತ್ತದೆ. ಯತೇಚ್ಛವಾಗಿ ಆಮ್ಲಜನಕವನ್ನು ಪೂರೈಸುತ್ತಾ ಚರ್ಮದ ಸೋಂಕು, ಜ್ವರ, ಬಾಯಿಹುಣ್ಣು ಮುಂತಾದುಗಳ ನಿವಾರಣೆಗೆ ಉಪಯೋಗಿಯಾಗಿದೆ.  ಅಪಾರವಾಗಿ ಬ್ಯಾಕ್ಟೀರಿಯ ಮತ್ತು ವೈರಸ್‌ ಗಳನ್ನು ಎದುರಿಸುವ ಗುಣವನ್ನು ಹೊಂದಿದೆ.   ಚಿಕ್ಕಂದಿನಿಂದಲೇ ಮಕ್ಕಳಿಗೆ ದಿನಾ ಒಂದೊಂದು ದಳ ತುಳಸಿಯನ್ನು ತಿನ್ನುವುದನ್ನು ಅಭ್ಯಾಸ ಮಾಡಿಸಿದರೆ ಕೆಮ್ಮು ನೆಗಡಿಗಳ ಸೊಂಕಿಲ್ಲದಂತೆ ಉಸಿರಾಟ ಸಂಬಂಧೀ ತೊಂದರೆಗಳಿಲ್ಲದಂತೆ ಮಕ್ಕಳೂ ಸಹ ನಮ್ಮ ತುಳಸಿಯಂತೆ ಸೊಂಪಾಗಿ ಬೆಳೆಯುವುದರಲ್ಲಿ ಸಂಶಯವೇ ಬೇಡ.

ಮುಖ್ಯವಾಗಿ ತುಳಸಿಯಲ್ಲಿ ಐದು ಪ್ರಭೇದಗಳಿವೆಯಾದರೂ ನಮ್ಮಲ್ಲಿ ಹೆಚ್ಚಾಗಿ ರೂಢಿಯಲ್ಲಿರುವುದು ಕೃಷ್ಣ ತುಳಸಿ ಮತ್ತು ಶ್ರೀ ತುಳಸಿ ಅಥವಾ ರಾಮ ತುಳಸಿ. ಕೃಷ್ಣ ತುಳಸಿ ಗಾಢವಾದ ಕಪ್ಪುಮಿಶ್ರಿತ ಹಸಿರು ಬಣ್ಣವನ್ನು ಹೊಂದಿದ್ದರೆ ಶ್ರೀ ತುಳಸಿ ಅಚ್ಚ ಹಸಿರು ಬಣ್ಣವನ್ನು ಹೊಂದಿರುತ್ತದೆ.  ಇವುಗಳಲ್ಲದೆ ಕಾಮ ಕಸ್ತೂರಿ, ವನ ತುಳಸಿ ಹಾಗೂ ಅಮೃತ ತುಳಸಿ ಅಥವಾ ಶ್ವೇತ ತುಳಸಿ ಎನ್ನುವುದು ಮಿಕ್ಕ ಪ್ರಬೇಧಗಳು.  ಹೆಚ್ಚಾಗಿ ಇದು ಏಷ್ಯಾ ಖಂಡದ ಆಗ್ನೇಯ ಭಾಗವಾದ ಉಷ್ಣಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಇದನ್ನು ಬಹುವಾರ್ಷಿಕ ಸಸ್ಯವೆಂದೇ ಪರಿಗಣಿಸಬಹುದು. ಆದಾಗ್ಯೂ ಮರವಲ್ಲದೆ ಪೊದೆಯಾಗಿ ಬೆಳೆಯುತ್ತದೆ.  ಒಂದು ಗಿಡ ಸರಾಸರಿ ಐದರಿಂದ ಆರು ವಷರ್ಗಳು ಇರುತ್ತವೆ. 

ಇಟಾಲಿಯನ್‌ ಮತ್ತು ಥಾಯ್‌ ಅಡುಗೆಗಳಲ್ಲಿ ತುಳಸಿಯನ್ನು ಹೆಚ್ಚಾಗಿ ಬಳಸುತ್ತಾರೆ.  ಥಾಯೈ ಅಡುಗೆಗಳಲ್ಲಿ ನಮ್ಮ ಒಣ ಮಸಾಲೆಯಂತೆ ಅಂದರೆ ಪಲಾವ್‌ ಎಲೆ ಅಥವಾ ತೇಜ್‌ ಪತ್ತಾ ಅಂತಾರಲ್ಲ ಹಾಗೆ, ಬಳಸುತ್ತಾರೆ.  ಅಡುಗೆ ಮಾಡುವಾಗಲೇ ಹಾಕುತ್ತಾದರಿಂದ ಅದು ತನ್ನ ವಿಶಿಷ್ಟವಾದ ವಾಸನೆಯನ್ನು, ಔಷಧೀಯ ಗುಣಗಳನ್ನೂ ಪೂರ್ಣವಾಗಿ ಬಿಟ್ಟು ಮಾಡುವ ಅಡುಗೆಯನ್ನ ಹೆಚ್ಚು ರುಚಿಕರವಾಗಿಯೂ ಆರೋಗ್ಯಪೂರ್ಣವಾಗಿಯೂ ಮಾಡುತ್ತದೆ. ನಂತರ  ಕರಿಬೇವನ್ನು ಎತ್ತಿಡುವಂತೆ ತೆಗೆದು ಬಿಡುತ್ತಾರೆ. ಇನ್ನು ಇಟಾಲಿಯನ್ ಅಡುಗೆಗಳಾದ ಪೆಸ್ತೋ ಪಾಸ್ತಾ, ಟೊಮೇಟೋ – ಬೇಸಿಲ್‌ ಸೂಪ್‌, ಪಿಜ್ಜಾಗಳಲ್ಲಿ ಮೃದುವಾದ ಅಮೃತ ತುಳಸಿಯ ಎಲೆಗಳನ್ನು ಕೊತ್ತೊಂಬರಿ ಸೊಪ್ಪಿನಂತೆ ಸಣ್ಣಗೆ ಹೆಚ್ಚಿ ಮೇಲೆ ಉದುರಿಸುತ್ತಾರೆ.  ಅದೂ ಸಹ ಒಂದು ರೀತಿಯ ಸೌಮ್ಯವಾದ ಸುಗಂಧವನ್ನೂ, ರುಚಿಯನ್ನು ಅಡುಗೆಗಳಿಗೆ ನೀಡುವುದಲ್ಲದೆ ಅದನ್ನು ಆರೋಗ್ಯಪೂರ್ಣವಾಗಿಸುತ್ತದೆ ಮತ್ತು ಆಕರ್ಷಕವಾಗಿಯೂ ಕಾಣುವಂತೆ ಮಾಡುತ್ತದೆ.

ಆದರೆ ಭಾರತೀಯರು ಪೂಜಾ ಪುನಸ್ಕಾರಗಳ ಒಂದು ಭಾಗವಾಗಿ ದಿನಕ್ಕೊಂದು ದಳವನ್ನು ನೇರವಾಗಿ ಸೇವಿಸಿ ಅದರ ಹೆಚ್ಚು ಹೆಚ್ಚಾದ ಪ್ರಯೋಜನವನ್ನು ಪಡೆಯುತ್ತಾರೆ.

ಈಗೆಲ್ಲಾ ಪ್ರಪಂಚದೆಲ್ಲಾ ವಿಜ್ಞಾನಿಗಳು ಹದಿನೈದು ದಿನಗಳಿಗೊಮ್ಮೆ ಉಪವಾಸ ಮಾಡುವುದರಿಂದ ದೇಹವನ್ನು ಶುದ್ಧೀಕರಿಸಿದಂತಾಗುತ್ತದೆ ಎಂಬುದನ್ನು ನಿರ್ವಿವಾದವಾಗಿ ಒಪ್ಪಿಕೊಂಡಿದ್ದಾರೆ.  ನಮ್ಮ ಪೂರ್ವಜರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂದು ಒಂದು ಉದ್ಧರಣೆ ನೀರು, ತೀರ್ಥದೊಂದಿಗೆ ನೇರವಾಗಿ ಸೇವಿಸುವೊಂದು ತುಳಸೀದಳ, ಆ ಶುದ್ಧೀಕರಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಪರಿಣಾಮಕಾರಿಯಾಗುವಂತಹ ಪರಿಪಾಠವನ್ನು ಹಾಕಿಕೊಟ್ಟಿದ್ದಾರೆ.  ಆದರದನ್ನು ನಾವು ಪಾಲಿಸಬೇಕಷ್ಟೇ.

ಮಕ್ಕಳಲ್ಲಿ ನಾನು ಆಗಲೇ ಹೇಳಿದಂತೆ ದಿನಕ್ಕೊಂದು ದಳ ತುಳಸಿಯನ್ನು ಸೇವಿಸುವುದನ್ನು ರೂಢಿಗೊಳಿಸಿಬಿಟ್ಟರೆ ಕಫ ಸಂಬಂಧೀ ತೊಂದರೆಗಳು ಉಂಟಾಗುವುದೇ ಇಲ್ಲ. ಇಲ್ಲಿ ನಾನು ಪ್ರತ್ಯಕ್ಷವಾಗಿ ಕಂಡಂತಹ ಒಂದು ಅನುಭವವನ್ನು ಹಂಚಿಕೊಳ್ಳ ಬಯಸುತ್ತೇನೆ.

ನನ್ನ ಪರಿಚಯದವರ ಎರಡು, ಮೂರು ವರ್ಷದ ಮಗುವೊಂದು ಆಗಾಗ್ಗೆ, ತೀವ್ರತರವಾದ ಶೀತದ ಬಾಧೆಯಿಂದ ನರಳುತಿತ್ತು.  ಉಸಿರಾಡಲೂ ಕಷ್ಟಪಡುತಿತ್ತು.  ಡಾಕ್ಟರುಗಳು ಬ್ರಾಂಕಟೈಸ್‌ ತೊಂದರೆಯಿದೆ, ಆಸ್ತಮಾ ಖಾಯಿಲೆಯ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ ಎಂದರು.  ದಂಪತಿಗಳು ಮಗು ಅನುಭವಿಸುವುದನ್ನು ನೋಡಲಾರದೆ ಸಂಕಟಪಡುತ್ತಿದ್ದರು.  ಹಿತೈಷಿಯೊಬ್ಬರು, ಹೆಚ್ಚು ಉಷ್ಣಪ್ರದೇಶವೊಂದಕ್ಕೆ ಸ್ಥಳಾಂತರವಾಗಿಬಿಡಿ, ಸ್ವಲ್ಪಮಟ್ಟಿಗಾದರೂ ಮಗು ಬಾಧೆಪಡುವುದು ಕಡಿಮೆಯಾಗಬಹುದೇನೋ, ಎಂಬ ಸಲಹೆ ನೀಡಿದರು.  ಅವರು ವರ್ಗಾವಣೆಯ ಸಾಧ್ಯತೆಯಿರುವ ನೌಕರಿಯಲ್ಲಿದ್ದ ಕಾರಣದಿಂದಾಗಿ ಬೇರೆಯ ಊರಿಗೆ ಸ್ಥಳಾಂತರಗೊಂಡರು.  ಸರಿ, ಬಾಡಿಗೆಯ ಮನೆಯೊಂದನ್ನು ಹಿಡಿದಾಯಿತು.  ಕೆಳಗಿನ ಮನೆಯಲ್ಲಿ ಅಜ್ಜಿ, ತಾತ ದಂಪತಿಗಳಿದ್ದರು.  ಮೇಲಿನ ಮನೆಗೆ ಇವರು ಬಾಡಿಗೆಗೆಗ ಹೋದದ್ದಾಯಿತು.  ಓನರ್‌ ಅಜ್ಜಿ ಅತೀ ಚಟುವಟಿಕೆಯ ಹೆಂಗಸು.  ಪ್ರತಿದಿನ ತಮ್ಮ ಬೆಳಗಿನ ಕೆಲಸಗಳನ್ನು ಪೂರೈಸಿದ ಕೂಡಲೇ ಅಂಗಳದಲ್ಲಿದ್ದ ತುಳಸೀ ಗಿಡಗಳ ಆರೈಕೆಗೆ ನಿಲ್ಲುತ್ತಿದ್ದರು.  ಗಿಡದಲ್ಲಿ ಬಂದಿದ್ದ ತೆನೆಗಳನ್ನು ತೆಗೆದು ಅದರ ಬೀಜಗಳನ್ನು ಅಲ್ಲೇ ಅಕ್ಕಪಕ್ಕದಲ್ಲಿ ಹಾಕುತ್ತಿದ್ದರು.  ಅವುಗಳು ಸಸಿಯಾಗಿ ಬೆಳೆಯುತ್ತಿದ್ದವು.  ಹೀಗೆ ಅಂಗಳದ ಉದ್ದಕ್ಕೂ ಬೆಳೆದ ತುಳಸೀ ಗಿಡಗಳು ಅವರ ಮನೆಯಂಗಳವನ್ನು ತುಳಸೀವನವನ್ನಾಗಿ ಮಾಡಿಬಿಟ್ಟಿತ್ತು.  ಈಗ ಅಜ್ಜಿಯೊಡನೆ ಈ ಪುಟ್ಟ ಮೊಮ್ಮಗನೂ ಜೊತೆಗೂಡುತ್ತಿದ್ದ.  ಪ್ರತೀ ಗಿಡದಲ್ಲಿ ಎಷ್ಟು ಹೊಸ ಚಿಗುರೊಡೆದಿದೆ, ಎಷ್ಟು ಎಲೆಗಳು ಹಣ್ಣಾಗಿ ಉದುರಿದೆ, ಹೇಗೆ ತೆನೆ ಬಿಡಿಸಬೇಕು, ಹೇಗೆ ಪೂಜೆಗಾಗಿ ದಳ ಬಿಡಿಸಬೇಕು, ಹೀಗೆ ಸಾಗುತಿತ್ತು ಅವರಿಬ್ಬರ ಒಡನಾಟ.  ಆರು ತಿಂಗಳು ಕಳೆಯಿತು, ಎಂಟು ತಿಂಗಳಾಯಿತು, ಶೀತಕಾಲ ಬಂದಾಯಿತು, ಬಂದು ಹೋಗಾಯಿತು, ಯಾರ ಗಮನಕ್ಕೂ ಬರಲೇ ಇಲ್ಲ.  ಒಮ್ಮೆ ಗಂಡ ಹೆಂಡಿರು ಕುಳಿತು ಯೋಚಿಸಿದರು, – ಅರೆ, ಹೌದಲ್ಲವಾ, ನಮ್ಮ ಮಗುವಿಗೆ ಈ ಊರಿಗೆ ಬಂದ ನಂತರ ಒಮ್ಮೆಯೂ ಆಸ್ತಮಾದ ತೊಂದರೆ ಕಾಣಿಸಿಕೊಂಡೇ ಇಲ್ಲವಲ್ಲಾ!

ಕೆಳಗಿನ ಮನೆಯ ಅಜ್ಜಿಯೊಂದಿಗೂ ತಮ್ಮ ಸಂತಸವನ್ನು ಹಂಚಿಕೊಂಡರು.  ಅವರ ಮನೆಗೆ ಬಂದಿದ್ದ ಆರ್ಯುವೇದ ಪಂಡಿತರು ಹೇಳಿದರು – ನಿಮ್ಮ ಮಗ ಸದಾ ಈ ತುಳಸೀ ವನದಲ್ಲಿ ಆಡುತ್ತಿರುತ್ತಾನೆ.  ತುಳಸೀ ತಿಡದ ಮೇಲಿನಿಂದ ಬೀಸುವ ಆರೋಗ್ಯಪೂರ್ಣ, ಆಮ್ಲಜನಕಯುಕ್ತವಾದ ಗಾಳಿಯನ್ನು ಉಸಿರಾಡುತ್ತಾನೆ, ಅಲ್ಲದೇ ಎಳೇ ಬಿಸಿಲಲ್ಲಿ ಅಪರಮಿತ ಜೀವಸತ್ವಗಳನ್ನೂ ಪಡೆಯುತ್ತಿರುತ್ತಾನೆ, ಅವನಿಗ್ಯಾಕೆ ಶೀತದ ಬಾಧೆ ಬರುತ್ತದೆ, ಬರುವ ಪ್ರಮೇಯವೇ ಇಲ್ಲ – ಎಂದರು.  ಹೇಗಿದೆ ನಮ್ಮ ತುಳಸಿಯ ಪ್ರಭಾವ!

ಹಾಗಂದು ವಿಪರೀತ ಬಾಧೆ ಪಡುತ್ತಿದ್ದಾಗ ಡಾಕ್ಟರ್‌ ಹತ್ತಿರ ಹೋಗಬಾರದು ಅಂತ ಅಲ್ಲ, ಆದರೆ ಉತ್ತಮ ಆರೋಗ್ಯವನ್ನು ನಿರ್ವಹಣೆ ಮಾಡುವಲ್ಲಿ ಪ್ರಕೃತಿಯ ಕೊಡುಗೆ, ನಮ್ಮ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾದ ತುಳಸೀ ಗಿಡದ ಹಿರಿಮೆ ದೊಡ್ಡದು ಎಂದಷ್ಟೇ ಹೇಳ ಬಯಸುತ್ತೇನೆ.

ಗಾದೆಯ ವಿಷಯ ಬಂದಿದ್ದರಿಂದ ಮತ್ತೊಂದು ಗಾದೆಯ ಕುರಿತಾಗಿಯೂ ಈಗಲೇ ಹೇಳಿಬಿಡುತ್ತೇನೆ.  ʼಮಾಡೋದು ಅನಾಚಾರ, ಮನೆಯ ಮುಂದೆ ಬೃಂದಾವನʼ ಎಂಬ ಗಾದೆಯನ್ನು ಎಲ್ಲರೂ ಕೇಳಿರಬಹುದು.  ಅಂದರೆ ಮನೆಯ ಮುಂದೆ ಬೃಂದಾವನ ಇರುವಾಗ ಅನಾಚಾರ ಮಾಡುವುದು ಅಕ್ಷಮ್ಯ ಅಪರಾಧ ಎಂಬುದು ಆ ಗಾದೆಯ ಹಿಂದಿರುವ ಸದುದ್ದೇಶ.  ಅಂದರೆ ಯಾರ ಮನೆಯ ಮುಂದೆ ಬೃಂದಾವನ, ತುಳಸೀ ಗಿಡ ಇರುತ್ತದೋ ಆ ಮನೆಯ ಜನ ಸುಸಂಸ್ಕೃತರು, ಆಚಾರವಂತರು ಎಂಬುದು ಗಾದೆಯ ಅರ್ಥ.  ಮನೆಯ ಮುಂದೆ ಇರುವ ಪುಟ್ಟ ತುಳಸೀ ಗಿಡ ಮನೆಯ ಮಂದಿಯ ಸುಗುಣಗಳನ್ನು ಪ್ರತಿಬಿಂಬಿಸುವ ದರ್ಪಣವಾಗಿದೆ ಎಂಬ ವಿಚಾರ ಎಷ್ಟು ಚೆಂದವಲ್ಲವೇ?

ಇನ್ನು ನಮ್ಮ ಪುರಾಣ ಕಥೆಗಳತ್ತ ಹೊರಳಿದರಂತೂ ನಮ್ಮ ತುಳಸೀ ಗಿಡದ ಮಹತ್ವವನ್ನು ಸಾರುವ ಅನೇಕ ಸಂಗತಿಗಳಿವೆ.

ಸತ್ಯಭಾಮೆಯ ಗರ್ವವನ್ನು ಅಡಗಿಸುವಲ್ಲಿ ಒಂದು ತುಳಸೀದಳ ವಹಿಸಿದ ಪಾತ್ರ, ಮಾಡಿದ ಪವಾಡವನ್ನು ಅರಿಯದವರ್ಯಾರಿದ್ದಾರೆ?  ಕೃಷ್ಣ ತನ್ನವನೇ ಆಗಬೇಕೆಂಬ ಹೆಬ್ಬಯಕೆಯಿಂದ ತುಲಾಭಾರಕ್ಕೆ ಹೊರಟ ಸತ್ಯಭಾಮೆ ತನ್ನಲ್ಲಿದ್ದ ಸಕಲೈಶ್ವರ್ಯವನ್ನೂ ತಂದು ಪೇರಿಸಿದರೂ ಮೇಲಕ್ಕೇಳದ ತಕ್ಕಡಿ, ರುಕ್ಮಿಣೀದೇವಿ ಮನಸಾರೆ ಪೂಜಿಸಿ, ಪ್ರಾರ್ಥಿಸಿ ತಂದಿಟ್ಟ ಒಂದು ತುಳಸೀದಳದಿಂದ ಮೇಲಕ್ಕೇರಿದ ಪವಾಡವನ್ನು, ಪ್ರಭಾವವನ್ನು ಪುರಾಣದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಿದ್ದಾರಲ್ಲದೆ ಅದು ಹಲವಾರು ರೀತಿಯಲ್ಲಿ ಮನಃಪರಿವರ್ತನೆಗೂ ದಾರಿಯಾಗಿದೆ.

ನಾನು ಈ ಹಿಂದೆಯೇ ಹೇಳಿದಂತೆ ತುಳಸೀಗಿಡದಲ್ಲಿ ಲಕ್ಷ್ಮಿ ಸನ್ನಿಧಾನವನ್ನು ನಾವು ಪರಿಭಾವಿಸುತ್ತೀವೆ.  ಹಾಗೆಯೇ ಬೆಟ್ಟದ ನೆಲ್ಲೀಕಾಯಿಯಲ್ಲಿ ಶ್ರೀ ಕೃಷ್ಣನ ಸನ್ನಿಧಾನವನ್ನು ಪರಿಭಾವಿಸಿ ಕಾರ್ತೀಕ ಶುದ್ಧ ದ್ವಾದಶಿಯಂದು ಉತ್ವಾನ ದ್ವಾದಶಿ ಹಬ್ಬವನ್ನು ಆಚರಿಸುತ್ತೇವೆ.  ಅಂದು ಶ್ರೀ ಕೃಷ್ಣ ಮತ್ತು ತುಳಸೀದೇವಿಯ ವಿವಾಹ ಮಹೋತ್ಸವದ ವಾರ್ಷಿಕೋತ್ಸವವನ್ನು, ಅಂದರೆ ವೆಡ್ಡಿಂಗ್‌ ಆನಿವರ್ಸರಿಯನ್ನು ಭಕ್ತಿಭಾವದಿಂದ, ಸಡಗರ ಸಂಭ್ರಮದಿಂದ ಆಚರಿಸುತ್ತೇವೆ.  ಹಲವಾರು ಪ್ರಾಂತ್ಯಗಳಲ್ಲಿ ಹಲವಾರು ರೀತಿಯ ಆಚರಣೆಗಳು ಜಾರಿಯಲ್ಲಿವೆಯಾದರೂ ಹರಿಭಕ್ತರೆಲ್ಲರೂ ಹಬ್ಬವನ್ನಾಚರಿಸುವುದಂತೂ ಸತ್ಯ.

ನಮ್ಮ ಕರ್ನಾಟಕದಲ್ಲಿ ಉತ್ಥಾನ ದ್ವಾದಶಿಯಂದು ಮುತ್ಸಂಜೆ ಗೋಧೂಳೀ ಸಮಯದಲ್ಲಿ ತುಳಸಿ ಕೃಷ್ಣರನ್ನು ಪೂಜಿಸಿ, ಆರತಿ ಎತ್ತಿ ಬಂಧು ಭಾಂದವರೊಡಗೂಡಿ ಸಂಭ್ರಮಿಸುತ್ತೇವೆ.

ನಾವು ಈ ಹಿಂದೆ ಇದ್ದ ಗುಜರಾತಿನಲ್ಲಂತೂ ಅಖಂಡ ಐದು ದಿನಗಳು ದ್ವಾದಶಿಯಿಂದ ಮೊದಲ್ಗೊಂಡು ತುಳಸೀ ವಿವಾಹ ಸಂಭ್ರಮವನ್ನು ಆಚರಿಸುತ್ತಾರೆ.

ತುಳಸೀದಳದ ಮತ್ತೊಂದು ಮಹತ್ವವೆಂದರೆ, ದಾನಗಳನ್ನು ನೀಡುವಲ್ಲಿ ಅದರ ಮಹತ್ವ.  ಅದಕ್ಕೆ ಉದಾಹರಣೆಯಾಗಿ ಆಗಲೇ ಸತ್ಯಭಾಮೆಯ ಪ್ರಕರಣವನ್ನು ಪ್ರಸ್ತಾಪಿಸಿಯಾಗಿದೆ.  ಅಂದಿನಿಂದ ಮೊದಲ್ಗೊಂಡು ಇಂದಿನವರೆಗೂ ನಾವು ಯಾವುದೇ ವಸ್ತುವನ್ನು ದಾನ ನೀಡಿದರೂ ಅದರ ಮೇಲೆ ಒಂದು ತುಳಸೀದಳವನ್ನಿಟ್ಟು ʼಕೃಷ್ಣಾರ್ಪಣʼ ಎನ್ನದಿದ್ದರೆ ದಾನದ ಪೂರ್ಣಫಲ ದೊರೆಯದು ಎಂಬ ನಂಬಿಕೆ ಪ್ರಚಲಿತವಾಗಿದೆ.  ದೇವರಿಗೆ ನೈವೇದ್ಯ ಅರ್ಪಿಸುವಾಗಲೂ, ಮೇಲೊಂದು ತುಳಸೀದಳವನ್ನಿಟ್ಟು ಅರ್ಪಿಸುತ್ತೇವೆ.

 ಕನ್ಯಾದಾನ ಮಾಡುವಾಗಲೂ ವರನ ಕೈಯಲ್ಲಿ ವಧುವಿನ ಕೈಯನ್ನಿಟ್ಟು ಅದರ ಮೇಲೊಂದು ತುಳಸೀದಳವನ್ನಿಟ್ಟು ಗಂಗಾಜಲದೊಂದಿಗೆ ಧಾರೆಯೆರೆದು ಕನ್ಯಾದಾನದ ವಿಧಿಯನ್ನು ಪೂರೈಸುವ ಪದ್ಧತಿ ನಮ್ಮಲ್ಲಿದೆ.  ಗುಜರಾತಿನಲ್ಲೊಂದು ಬ್ರಾಹ್ಮಣರ ಪಂಗಡವಿದೆ.  ಅವರು ಹೇಳುತ್ತಿದ್ದರು – ನಮ್ಮಲ್ಲಿ ಕೊಡುವುದು, ಕೊಳ್ಳುವುದು ಯಾವುದೂ ಇಲ್ಲ, ದೇವರ ಸಮಕ್ಷಮದಲ್ಲಿ, ಗುರುಹಿರಿಯರ ಸಮಕ್ಷಮದಲ್ಲಿ ಹಾರ ಬದಲಾಯಿಸಿಕೊಂಡು ತುಳಸೀದಳ, ಗಂಗಾಜಲದೊಂದಿಗೆ ಧಾರೆಯೆರೆದು, ಮಾಂಗಲ್ಯಾಧಾರಣೆಯಾಗಿ ಎಲ್ಲರೂ ಖೀರಿನೊಂದಿಗೆ ಊಟವನ್ನು ಮಾಡಿದರೆ ಮದುವೆಯ ವಿಧಿ ಪರಿಪೂರ್ಣಗೊಂಡಂತೆ – ಎಂದು.  ಎಷ್ಟು ಸರಳ ಮತ್ತು ಸುಲಲಿತ ನೋಡಿ ನಮ್ಮ ತುಳಸೀದಳದೊಂದಿಗೆ ನಾವು ಮಾಡಹೊರಟರೆ ನಮ್ಮ ಮದುವೆಯ ಮಹತ್ಕಾರ್ಯ!

ಹಾಗೆಯೇ ಮರಣ ಸಮಯದಲ್ಲಿಯೂ ತುಳಸೀದಳ, ಗಂಗಾಜಲ ಸೇವಿಸಿ ಪ್ರಾಣಬಿಟ್ಟರೆ ಮುಕ್ತಿ ಶತಸಿದ್ಧ ಎಂಬ ನಂಬಿಕೆ ಇದೆ. ಚಿತೆಗೂ ಸಹ ಶ್ರೀಗಂಧದೊಂದಿಗೆ ತುಳಸೀಕಾಷ್ಠವನ್ನು ಹಾಕಿ ತಮ್ಮ ಅಂತಿಮ ಕರ್ತವ್ಯವನ್ನು ಪರಿಪೂರ್ಣಗೊಳಿಸಿದ ತೃಪ್ತಿ ಹೊಂದುತ್ತಾರೆ.

ಕೆಲವರು ದೇವರಿಗೆ ಎತ್ತುವ ಮಂಗಳಾರತಿಯ ಬತ್ತಿಯನ್ನು ಮಾಡುವಾಗಲೂ ಮಧ್ಯದಲ್ಲಿ ತುಳಸೀಕಾಷ್ಠವನ್ನುಇಟ್ಟು ಅದರ ಸುತ್ತಾ ಹತ್ತಿಯ ಹೊದಿಕೆಯನ್ನು ಹೊಸೆದು ಮಾಡುವ ಪರಿಪಾಠವಿದೆ.

ಇತ್ತೀಚೆಗೆ ಪರಿಸರವಾದಿಗಳು ಆಹ್ವಾನಪತ್ರಿಕೆ, ಮಣ್ಣಿನ ಗಣೇಶ, ಮಕ್ಕಳ ಬಟ್ಟೆಗಳ ಮಧ್ಯದಲ್ಲಿಯೂ ಸಹ ತುಳಸೀ ಬೀಜಗಳನ್ನಿಟ್ಟು ತಯಾರಿಸುವ ಅವಿಷ್ಕಾರವನ್ನು ಮಾಡಿದ್ದಾರೆ.  ಉಪಯೋಗಿಸಿದ ನಂತರ ಅದು ಮಣ್ಣಲ್ಲಿ ಮಣ್ಣಾಗಿ ಬೆರೆತು ಪುಟ್ಟ ತುಳಸೀಸಸಿಯ ಹುಟ್ಟಿಗೆ ಕಾರವಾಗುವ ಚಮತ್ಕಾರವನ್ನು ನಾವು ನೋಡಬಹುದಾಗಿದೆ.  ಈ ಅವಿಷ್ಕಾರಕ್ಕೆ ಕಾರಣರಾದ ಪರಿಸರವಾದಿಗಳಿಗೆ, ಹಾಗೂ ತುಳಸೀ ಮಾತೆಗೊಂದು ಹೃದಯಾಂತರಾಳದ ನಮನದೊಂದಿಗೆ ನನ್ನ ತುಳಸೀಪಾರಾಯಣಕ್ಕೊಂದು ಮಂಗಳವನ್ನು ಹಾಡುತ್ತೇನೆ.

ಇದೊಂದು ತುಳಸೀ ಮಹಿಮೆಯ ಮಹಾನದಿಯೊಳಗಿನ ಒಂದು ಉದ್ಧರಣೆ ತೀರ್ಥವಷ್ಟೇ ಹೊರತು ಸಂಪೂರ್ಣವಾದ ವಿವರವಲ್ಲ ಎಂದು ವಿನೀತಭಾವದಿಂದ ಹೇಳ ಬಯಸುತ್ತೇನೆ.

ತುಳಸಿಯೊಂದಿಗೆ ಹರಿಯನ್ನು ಪೂಜಿಸೋಣ, ಅವನ ಕೃಪಾಕಟಾಕ್ಷಕ್ಕೆ ಭಾಜನರಾಗೋಣ.

ಪದ್ಮಾ ಆನಂದ್, ಮೈಸೂರು

6 Comments on “ತುಳಸೀ ಮಹಿಮೆ – ಕಿಂಚಿತ್‌

  1. ತುಳಸಿ ಲೇಖನ..ಸೊಗಸಾಗಿ ಮೂಡಿ ಬಂದಿದೆ… ಪೂರಕ ಚಿತ್ರ ವೂ.. ಚೆನ್ನಾಗಿ ದೆ..ಲೇಖನ ಬರೆದವರಿಗೂ ಚಿತ್ರ ಹಾಕಿದವರಿಗೂ ಧನ್ಯವಾದಗಳು…

    1. ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

  2. ಪ್ರಕಟಿಸಿದ “ಸುರಹೊನ್ನೆ” ಗೆ ವಂದನೆಗಳು

  3. ತುಳಸಿಯ ಬಗ್ಗೆ ಸಂಗ್ರಹಯೋಗ್ಯ ಲೇಖನ ಬರೆದಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಪದ್ಮ ಮೇಡಂ

    1. ತಮ್ಮ ನಲ್ಮೆಯ ನುಡಿಗಳಿಗಾಗಿ ವಂದನೆಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *