ಪೌರಾಣಿಕ ಕತೆ

ಕಾವ್ಯ ಭಾಗವತ 94 : ಸ್ಯಮಂತಕೋಪಾಖ್ಯಾನ

Share Button

ದಶಮಸ್ಕಂದ – ಉತ್ತರಾರ್ಧ – ಅಧ್ಯಾಯ 8
ಸ್ಯಮಂತಕೋಪಾಖ್ಯಾನ

ದ್ವಾರಕೆಯ ಸತ್ರಾಜಿತ ಯಾದವ
ಅಪಾರ ನಿಷ್ಠೆಯಲಿ ಸೂರ್ಯದೇವನ ಪೂಜಿಸೆ
ಸೂರ್ಯನಾರಾಯಣ ಪ್ರಸನ್ನನಾಗಿ
ಸತ್ರಾಜಿತನಿಗೆ ಸ್ಯಮಂತಕವೆಂಬ
ರತ್ನವನನುಗ್ರಹಿಸಿದನು

ಸತ್ರಾಜಿತ ಅದ ಧರಿಸಿ ಮನೆಗೆ ಬರುತಿರೆ
ಅದರ ಪ್ರಕಾಶ ಸೂರ್ಯಪ್ರಕಾಶದ ಪರಿ
ಜನರ ಆಕರ್ಷಿಸೆ ಕೃಷ್ಣ ದರ್ಶನಕ್ಕಾಗಿ
ಸೂರ್ಯನೇ ಆಗಮಿಸಿದನೆಂದು ಭಾವಿಸಿ
ಕೃಷ್ಣನಿಗೆ ವಿಷಯ ಅರುಹೆ
ಕೃಷ್ಣ ನಸುನಕ್ಕು, ಸೂರ್ಯ ಪ್ರಸಾದಿಸಿದ
ರತ್ನ ಸ್ಯಮಂತಕಮಣಿಯೆಂದು ತಿಳಿಸಿ
ಅದು ಇದ್ದರೆ ಆಧಿವ್ಯಾಧಿಗಳಾಗಲೀ ದುರ್ಭಿಕ್ಷವಾಗಲೀ
ಯಾವ ಅನಿಷ್ಟವಾಗಲೀ ಇರದು ಎಂದರುಹಿದ

ಸತ್ರಾಜಿತನು ರತ್ನದಿಂದ ಪ್ರತಿದಿನ
ಎಂಟು ಭಾರದಷ್ಟು ಚಿನ್ನವ ಪಡೆಯುತ್ತ
ಮಹಾಧನಿಕನಾಗಿ ಮೆರೆಯಿತ್ತಿರೆ
ರತ್ನವನು ಯದುರಾಜ ಉಗ್ರಸೇನನಿಗರ್ಪಿಸುವುದು
ಸೂಕ್ತ ಮತ್ತು ಶೋಭಾಯಮಾನ ಎಂಬ ಕೃಷ್ಣ ಸಲಹೆಗೆ
ಒಪ್ಪದ ಸತ್ರಾಜಿತ ರತ್ನಲೋಭದಿ ಮೆರೆದ

ಸತ್ರಾಜಿತನ ತಮ್ಮ ಪ್ರಸೇನನೊಂದು ದಿನ
ರತ್ನವ ಕೊರಳಲಿ ಧರಿಸಿ ಅರಣ್ಯಕೆ ಭೇಟೆಗೆ ತೆರಳೆ
ಒಂದು ಸಿಂಹ ಅವನ ವಧಿಸಿ
ರತ್ನವ ಬಾಯಲ್ಲಿ ಕಚ್ಚಿ ಒಯ್ಯತಿರೆ
ಜಾಂಬವಂತನೆಂಬ ಕರಡಿ
ಅದ ಸಂಹರಿಸಿ ರತ್ನದೊಡನೆ
ತನ್ನ ಗುಹೆಗೆ ಬಂದು
ಆಟಿಕೆಯ ತೆರದಿ ರತ್ನವ ತನ್ನ ಮಗುವಿನ
ತೊಟ್ಟಿಲಿಗೆ ಕಟ್ಟಿದ

ಕೆಲದಿನಗಳಾದರೂ ಸೋದರ ಪ್ರಸೇನ
ಹಿಂತಿರುಗಿ ಬಾರದುದ ಕಂಡು
ಸತ್ರಾಜಿತ ಚಿಂತಾಕ್ರಾಂತನಾಗಿ
ಕೃಷ್ಣನೇ ಭೇಟೆಯಲ್ಲಿದ್ದ ತನ್ನ ತಮ್ಮನ
ಕೊಂದು ರತ್ನವ ಅಪಹರಿಸಿದನೆಂದು
ಅನುಮಾನಿಸೆ, ಕೃಷ್ಣ ಮನನೊಂದು
ಅಪವಾದ ನಿವಾರಣೆಗಾಗಿ
ಪರಿವಾರದೊಂದಿಗೆ ಪ್ರಸೇನನರಸಿ
ಅರಣ್ಯಕೆ ತೆರಳಿ
ಮಾರ್ಗಮಧ್ಯದಿ ಪ್ರಸೇನನ ಶವವ ನೋಡಿ
ಶವನ ಬಳಿ ಇದ್ದ ಸಿಂಹದ ಹೆಜ್ಜೆಗುರುತ ಅನುಸರಿಸೆ
ಪರ್ವತ ತಪ್ಪಲಿನಲಿ ಸಿಂಹದ ಶವ ಕಾಣಿಸೆ
ಸಿಂಹದೊಡನೆ ಕರಡಿ ಹೋರಾಡಿದ
ಅದರ ಕಾಲಿನ ಹೆಜ್ಜೆ ಗುರುತ ಅರಸುತ ನಡೆಯೆ
ಗುಹೆಯೊಂದರ ಬಳಿ ಕರಡಿಯ ಹೆಜ್ಜೆ ಗುರುತು ಕಾಣಿಸಿ
ಗುಹೆಯ ಪ್ರವೇಶಿಸುವ ಮುನ್ನ ಪರಿವಾರಕೆ
ಹನ್ನೆರಡು ದಿನ ತನಗಾಗಿ ಕಾಯುವಂತೆ ತಿಳಿಸಿ
ಗುಹದ್ವಾರವ ಹೊಕ್ಕ ಶ್ರೀ ಕೃಷ್ಣ

ಗುಹೆಯಲಿ ಬಹುದೂರ ಸಾಗಿ
ನಂತರದಿ ಮಗುವೊಂದು ತೊಟ್ಟಿಲಲಿ
ರತ್ನವ ಕೈಲಿಟ್ಟುಕೊಂಡು ಆಟವಾಡುತ್ತಿರೆ
ಅದರ ಬಳಿ ಕೃಷ್ಣ ನಡೆಯೆ
ಮಗುವಿನ ದಾಸಿ ಭಯದಿಂದ ಚೀರೆ
ಜಾಂಬವಂತ ಕೋಪಾವಿಷ್ಟನಾಗಿ ಬಂದು
ಕೃಷ್ಣನೊಡನೆ ಯುದ್ಧಕ್ಕಿಳಿದನು

ಯುದ್ಧ ಬಲು ಭಯಂಕರ
ವಿವಿಧಾಯುಧ ಮರಗುಂಡುಗಳಿಂದ
ಹೋರಾಡಿ ನಂತರದಿ ಬಾಹು ಯುದ್ಧಕೆ ತೊಡಗಿ
ವಜ್ರಮುಷ್ಠಯಿಂದ ಕೃಷ್ಣ ಜಾಂಬವಂತರು
ಒಬ್ಬರನ್ನೊಬ್ಬರು ಘಾಸಿಸೆ
ಇಪ್ಪತ್ತೆಂಟು ದಿನಗಳ ಯುದ್ಧದ ಕೊನೆಯಲಿ
ಜಾಂಬವಂತನು ಬಹುನೊಂದು
ಸತ್ವಕುಂದಿ ನೆಲಕೆ ಬಿದ್ದನು

ಈ ಯುಗದಲಿ ತನ್ನೊಂದಿಗೆ ಹೋರಾಡಬಲ್ಲ
ಬಲವಂತನು ಯಾರಿರಬಹುದೆಂದು ಯೋಚಿಸುತ
ಇವ ಸಾಮಾನ್ಯ ಮಾನವನಲ್ಲ
ಸೃಷ್ಟಿ ಸ್ಥಿತಿ ಸಂಹಾರಗಳ ಕತೃ
ಮಹಾಮಹಿಮನಾಗದೆ
ಇಷ್ಟರಮಟ್ಟಿಗೆ ಯುದ್ಧ ಮಾಡುವುದಸಾಧ್ಯ
ಎಂದರುಹಿ ನಿಜರೂಪವ ಪ್ರಕಟಿಸಿ
ಉದ್ಧರಿಸಬೇಕೆಂಬ ಪ್ರಾರ್ಥನೆಗೆ ಓಗೊಟ್ಟು
ಕೃಷ್ಣ ಜಾಂಬವಂತಗೆ ರಾಮರೂಪದಿ ದರ್ಶನವಿತ್ತ

ರತ್ನ ಜೊತಗೆ ಮಗಳು ಜಾಂಬವತಿಯನು
ಕೃಷ್ಣನಿಗೆರ್ಪಿಸಿ ಜಾಂಬವಂತ ಧನ್ಯನಾಗಿ
ಅವನಿಂದ ಮೋಕ್ಷಸುಖದನುಗ್ರವ ಪಡೆದನು

ಜಾಂಬವಂತಿಯೊಂದಿಗೆ ದ್ವಾರಕೆಯ ಪ್ರವೇಶ ಮಾಡಿ
ಕೃಷ್ಣ ರತ್ನ ತನಗೆ ಲಭ್ಯವಾದ ವಿವರ ನೀಡಿ
ಅದ ಸತ್ರಾಜಿತನಿಗರ್ಪಿಸಿ
ಅಪವಾದ ಮುಕ್ತನಾದನು

ನಿಷ್ಕಾರಣವಾಗಿ ಕೃಷ್ಣನಿಗೆ
ಅಪವಾದ ಹೊರಿಸಿದ
ಸತ್ರಾಜಿತ ಪಶ್ಚಾತಾಪದಿ
ತನ್ನ ಮಗಳು ಭೂಲೋಕ ಸುಂದರಿ
ಸತ್ಯಭಾಮೆಯನ್ನೂ ರತ್ನದೊಡನೆ ಕೃಷ್ಣನಿರ್ಪಿಸೆ
ಕೃಷ್ಣ ಅವನ ಮನ್ನಿಸಿ ರತ್ನವ ಸ್ವೀಕರಿಸದೆ
ಸತ್ಯಭಾಮೆಯ ವರಿಸಿ ಮದುವೆಯಾದನು

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
https://surahonne.com/?p=45013

-ಎಂ. ಆರ್.‌ ಆನಂದ, ಮೈಸೂರು

2 Comments on “ಕಾವ್ಯ ಭಾಗವತ 94 : ಸ್ಯಮಂತಕೋಪಾಖ್ಯಾನ

  1. ಎಂದಿನಂತೆ ಕಾವ್ಯಭಾಗವತ ಓದಿಸಿಕೊಂಡು ಹೋಯಿತು.. ಚಿಕ್ಜಂದಿನಿಂದಲೂ..ಕೇಳುತಿದ್ದ ಕಥೆಯನ್ನು ಮತ್ತೊಂದು ಸಾರಿ ನೆನಪಿಸಿ ಕೊಂಡಂತಾಯಿತು..ಸಾರ್

  2. ಪ್ರತೀ ವರುಷ ಗಣೇಶನ ಹಬ್ಬದಲ್ಲಿ ಕೇಳುತ್ತಿದ್ದ ಈ ಭಾಗ ಸರಳವಾದ ಕಾವ್ಯ ರೂಪದಲ್ಲಿ ಚಂದದಿಂದ ಹೆಣೆಯಲ್ಪಟ್ಟಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *