ದಶಮಸ್ಕಂದ – ಉತ್ತರಾರ್ಧ – ಅಧ್ಯಾಯ – 9
ಶತಧನ್ವ ವಧಾ
ಹಸ್ತನಾವತಿಯಲ್ಲಿ ಕೃಷ್ಣ ಬಂಧುಗಳಾದ ಪಾಂಡವರು
ಲಾಕ್ಷ ಗೃಹದಲಿ ಬೆಂದು ಹೋದರೆಂಬ ವಾರ್ತೆ ತಿಳಿದು ಬಂದರೂ
ನಿಜಸ್ಥಿತಿ ತಿಳಿದ ಕೃಷ್ಣ ಲೋಕನಟನೆಯನ್ನನನುಸರಿಸಿ
ಅವರ ಸಂಸ್ಕಾರದ ನೆಪದಲಿ ಹಸ್ತಿನಾವತಿಗೆ
ಅಣ್ಣನೊಂದಿಗೆ ಹೊರಟನು
ಕೃಷ್ಣನಿಲ್ಲದ ಸಮಯದಿ ದ್ವಾರಕೆಯಲಿ
ಶತಧನ್ವ ಸತ್ಯಭಾಮೆಯ ಬಯಸಿದ್ದ ಕಾಲದಿ
ಸತ್ರಾಜಿತನು ಸತ್ಯಭಾಮಳನು
ಕೃಷ್ಣನಿಗೆ ಒಪ್ಪಿಸುದುದಕೆ
ಅವನನ್ನು ಮನಸಾ ದ್ವೇಷಿಸುತ
ಸೇಡಿಗಾಗಿ ಸಮಯ ಕಾಯುತಲಿದ್ದನು
ಅಕ್ರೂರ ಕೃತವರ್ಮರೆಂಬ ಯಾದವರ ಸಲಹೆಯಂತೆ
ಕೃಷ್ಣ ಊರಲಿಲ್ಲದ ಸಮಯದಿ ರಾತ್ರಿಯಲಿ
ಸತ್ರಾಜಿತನ ಗೃಹ ಪ್ರವೇಶಿಸಿ
ಪಶುವನ್ನು ಕೊಲ್ಲುವಂತೆ ಸತ್ರಾಜಿತನ
ಕೊರಳ ಕೊಯ್ದ ಶತಧನ್ವ ರತ್ನವನಪಹರಿಸಿದ
ಕೆರಳಿದ ಸತ್ಯಭಾಮಾ
ಪಿತೃಹಂತಕನ ವಧಿಸದೆ ಶವವನ್ನು ದಹಿಸದೆ
ಅದ ಎಣ್ಣೆಯ ಕೊಪ್ಪರಿಗೆಯಲ್ಲಿರಿಸಿ
ರಥವೇರಿ ಹಸ್ತಿನಾವತಿಯಲ್ಲಿದ್ದ ಕೃಷ್ಣನಿಗೆ
ನಡೆದ ಸಂಗತಿಯ ತಿಳಿಸೆ
ಅದನರಿತ ಶತಧನ್ವ ತನಗಿನ್ನುಳಿಗಾಲವಿಲ್ಲವೆಂದು ಬಗೆದು
ಅಕ್ರೂರಗೆ ರತ್ನವ ಕೊಟ್ಟು ಶತಯೋಜನ ದೂರದಲ್ಲಿದ್ದ
ದೇಶಕೆ ಓಡಿ ಹೋಗಿ ಬದುಕಲಿಚ್ಚಿಸಿ
ಮಿಥಿಲಾಪಟ್ಟಣದ ಉಪವನದ ಬಳಿ
ಬಳಲಿ ಸತ್ತುಬಿದ್ದ ಕುದುರೆಯ ಬಿಟ್ಟು
ಕಾಲ್ನಡಿಗೆಯಲಿ ಓಡುತ್ತಿರೆ
ಕೃಷ್ಣ ಅವನಲ್ಲಿಗೆ ಬಂದು
ತನ್ನ ಚಕ್ರದಿ ಅವನ ಶಿರವ ಕೆಡುಹಿದ
ಶತಧನ್ವನ ಕೊಂದ ಕೃಷ್ಣ ನಂತರದಿ
ಸತ್ರಾಜಿತ ಮಾವನ ಉತ್ತರಕ್ರಿಯೆಗಳ ಮಾಡಿ
ನಂತರದಿ ಅಕ್ರೂರನ ಬಳಿಯಿದ್ದ ರತ್ನವ ಪಡೆದು
ಅದ ಎಲ್ಲರಿಗೂ ತೋರಿಸಿ
ಪುನಃ ಅಕ್ರೂರನ ವಶಕ್ಕೆ ನೀಡಿದನು
ಸರ್ವೇಶ್ವರನಾದರೂ ಅಪವಾದವ
ಪರಿಹರಿಸಿಕೊಳ್ಳಲು ಪ್ರಯಾಸ ಪಟ್ಟ
ಕೃಷ್ಣಲೀಲೆ ಮತ್ತು ಸ್ಯಮಂತಕಾಪಹರಣದ
ವೃತ್ತಾಂತವು ಸಮಸ್ತ ಪಾಪ ನಿವಾರಕವೂ
ಮಂಗಳಕರವೂ ಹೌದು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45133

-ಎಂ. ಆರ್. ಆನಂದ, ಮೈಸೂರು

