ಬೇಸಿಗೆ ರಜೆ ಶುರುವಾಗಿತ್ತು. ವಿದ್ಯಾಸಾಗರ್ ತನ್ನ ಅಣ್ಣನ ಮಗ ವಿವೇಕನನ್ನು ಹಳ್ಳಿಯಿಂದ ಕರೆಸಿಕೊಂಡಿದ್ದ. ಅವನ ಹೆಂಡತಿ ಅದಿತಿಗೂ ಇದು ಸಂತೋಷದ ವಿಷಯವೇ. ಮನೆಯಲ್ಲಿ ಗಲಾಟೆಯೋ ಗಲಾಟೆ. ಅಕ್ಕಪಕ್ಕದ ಮನೆಗಳಲ್ಲಿದ್ದ ಮಕ್ಕಳ ಪರೀಕ್ಷೆಯೂ ಮುಗಿದು ಹೋಗಿದ್ದರಿಂದ ಎಲ್ಲರೂ ಇವರ ಮನೆಯಲ್ಲೇ ಸೇರಿಕೊಂಡು ಧಾಂದಲೆ ಎಬ್ಬಿಸುತ್ತಿದ್ದರು. ಅದಿತಿಯ ಮಗಳು ಹಿತಾಳಿಗೆ ಎಂಟು ವರ್ಷ. ಎರಡನೇ ತರಗತಿಯ ಪರೀಕ್ಷೆ ಮುಗಿಸಿ ಬೇಸಿಗೆ ರಜೆಯನ್ನು ಆನಂದದಿಂದ ಅನುಭವಿಸುತ್ತಿದ್ದ ಮುಗ್ಧ ಹುಡುಗಿ. ಹಳ್ಳಿಯಿಂದ ಬಂದಿದ್ದ ವಿವೇಕನನ್ನು “ಅಣ್ಣಾ….ಅಣ್ಣಾ” ಅಂತ ಕರೆಯುತ್ತಾ ಅವನ ಹಿಂದೆ ಮುಂದೆ ಸುತ್ತುತ್ತಿದ್ದಳು.
ವಿದ್ಯಾಸಾಗರ್ ಮೈಸೂರಿನ ಪ್ರಸಿದ್ಧ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯನಾಗಿ ಕೆಲಸ ಮಾಡುತ್ತಿದ್ದ, ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಅಣ್ಣನ ಮಗ ವಿವೇಕ ತುಂಬಾ ಬುದ್ಧಿವಂತ ಅಂತ ಅವನಿಗೆ ಗೊತ್ತಿತ್ತು. ಪಿ.ಯು.ಸಿಗೆ ಅವನನ್ನು ಇಲ್ಲಿಗೆ ಕರೆತರಬೇಕು ಅಂತ ಅವನ ಆಸೆ. ಅದಕ್ಕೆ ಅದಿತಿಯೂ ಒಪ್ಪಿಕೊಂಡಿದ್ದಳು. ವಿವೇಕನ ಚುರುಕುತನ, ಸದಾ ಉಲ್ಲಾಸ ತುಂಬಿದ ಮುಖ, ಕುತೂಹಲದಿಂದ ಕೇಳುವ ಪ್ರಶ್ನೆಗಳು…. ಎಲ್ಲವೂ ಅವಳಿಗೆ ಮೆಚ್ಚುಗೆಯೇ….
ವಿವೇಕನ ತಂದೆ ತಾಯಿಗೆ ಮಗ ವಿದ್ಯಾವಂತನಾಗುವುದು ಮುಖ್ಯವಾಗಿತ್ತು. ಹೀಗಾಗಿ ಈ ಸಾರಿಯ ಬೇಸಿಗೆ ರಜೆಗೆ ಅವರೇ ಮಗನನ್ನು ಕರೆದುಕೊಂಡು ಬಂದು ನಾಲ್ಕಾರು ದಿವಸ ವಿದ್ಯಾಸಾಗರ್ ಮನೆಯಲ್ಲಿದ್ದು ಹಳ್ಳಿಗೆ ಹಿಂತಿರುಗಿದ್ದರು. ಹೋಗುವಾಗ ವಿವೇಕನ ತಾಯಿ ಅದಿತಿಯ ಕೈ ಹಿಡಿದುಕೊಂಡು “ನನ್ನ ಮಗನನ್ನು ನಿನ್ನ ಉಡಿಗೆ ಹಾಕ್ತೀನಿ ಅದಿತಿ, ಮುಂದಿನ ವರ್ಷದಿಂದ ಅವನು ಇಲ್ಲೇ ಇರ್ತಾನಂತೆ. ಅವನು ನಿನ್ನ ಮನೆಯಲ್ಲಿದ್ದುಕೊಂಡು ಓದಿ ವಿದ್ಯಾವಂತನಾಗಿ ಒಳ್ಳೆಯ ದಾರಿಯಲ್ಲಿ ನಡೆದರೆ ಸಾಕು.” ಅಂತ ಕಣ್ತುಂಬಿಕೊಂಡಿದ್ದರು, “ಅಕ್ಕಾ… ಯೋಚಿಸಬೇಡಿ. ಅವನು ಇಲ್ಲಿಗೆ ಬರೋದಕ್ಕೆ ಇನ್ನೂ ಒಂದು ವರ್ಷ ಸಮಯವಿದೆ. ಅಭ್ಯಾಸವಾಗಲಿ ಅಂತ ನಾವಿಗ ಕರ್ಕೊಂಡು ಬಂದಿರೋದು ಅಷ್ಟೇ. ಈ ವರ್ಷ ಸ್ವಲ್ಪ ಕಷ್ಟಪಟ್ಟು ಓದಲಿ. ಮುಂದಿನ ವರ್ಷ ಒಳ್ಳೆಯ ಕಾಲೇಜಿಗೆ ಸೇರಿಸೋಣ. ಅವನ ಜವಾಬ್ದಾರಿ ನಮ್ಮದು. ನೀವು ತಲೆ ಕೆಡಿಸಿಕೊಳ್ಳಬೇಡಿ, ಅವನು ಕಾಲೇಜಿಗೆ ಸೇರುವಾಗ ನೀವು ಬಂದು ಸ್ವಲ್ಪ ದಿವಸ ಇರಿ.” ಅಂತ ಹೇಳಿ ಅವರನ್ನು ಕಳುಹಿಸಿ ಕೊಟ್ಟಿದ್ದಳು.
ಮೂರು ಬೆಡ್ರೂಮಿನ ಮನೆ ಅವರದು. ಮನೆಯ ಮುಂದಿನ ಗೆಸ್ಟ್ ರೂಮಿನಲ್ಲಿ ವಿವೇಕನಿಗೆ ಎಲ್ಲಾ ರೀತಿಯ ಏರ್ಪಾಡು ಮಾಡಿಕೊಟ್ಟಿದ್ದಳು ಅದಿತಿ. ಆ ರೂಮಿನಲ್ಲಿ ಟಿವಿ ಕೂಡ ಇತ್ತು ಇದು ವಿವೇಕನಿಗೆ ಮತ್ತಷ್ಟು ಖುಷಿ ಕೊಟ್ಟಿತ್ತು. ಬಾಗಿಲು ಹಾಕಿಕೊಂಡು ಟಿ.ವಿ ನೋಡುತ್ತಾ ಕಾಲ ಕಳೆಯುತ್ತಿದ್ದ ವಿವೇಕನನ್ನು ಎಷ್ಟೋ ಸಾರಿ ಬಲವಂತವಾಗಿಯೇ ಹೊರಗೆ ಕರೆ ತರಬೇಕಾಗಿತ್ತು. ಅದಿತಿ ಏನಾದರೂ ಹೇಳಿದರೆ “ಅಯ್ಯೋ…. ಚಿಕ್ಕಮ್ಮ…. ನಿಮ್ಮನೆಗೆ ಬರೋರೆಲ್ಲಾ ಚಿಕ್ಕ ಮಕ್ಕಳು, ಅವರ ಜೊತೆ ನಾನ್ಯಾವ ಆಟ ಆಡೋಕೆ ಸಾಧ್ಯ ಹೇಳಿ….” ಅಂತ ಅದಿತಿಯ ಬಾಯಿ ಮುಚ್ಚಿಸಿ ಬಿಡುತ್ತಿದ್ದ. ಅದಿತಿಗೂ ಅವನ ಮಾತು ಸರಿ ಅನ್ನಿಸುತ್ತಿತ್ತು.
ರಾತ್ರಿ ವಿದ್ಯಾಸಾಗರ್ ಹೇಳಿಕೊಡುತ್ತಿದ್ದ ಎಲ್ಲಾ ಪಾಠಗಳನ್ನೂ ಸುಲಭವಾಗಿಯೇ ಅರ್ಥ ಮಾಡಿಕೊಳ್ಳುತ್ತಿದ್ದ ವಿವೇಕ್ ಕೇಳಿದ ಪ್ರಶ್ನೆಗಳಿಗೆ ಸರಿಯಾಗೇ ಉತ್ತರ ಕೊಡುತ್ತಿದ್ದ. ತಾನು ಬಹಳಷ್ಟು ಪ್ರಶ್ನೆಗಳನ್ನು ಕೇಳಿ ತನ್ನ ಕುತೂಹಲವನ್ನು ತಣಿಸಿಕೊಳ್ಳುತ್ತಿದ್ದ. ಲೆಕ್ಕಗಳನ್ನಂತೂ ನೀರು ಕುಡಿದಷ್ಟೇ ಸಲೀಸಾಗಿ ಮಾಡಿ ಮುಗಿಸುತ್ತಿದ್ದ. ವಿದ್ಯಾಸಾಗರ್ ಅದಿತಿಯ ಮುಂದೆ ವಿವೇಕನನ್ನು ಮನ ಪೂರ್ವಕವಾಗಿಯೇ ಹೊಗಳುತ್ತಿದ್ದ. “ನಮ್ಮ ವಿವೇಕ ತುಂಬಾ ಜಾಣ ಕಣೆ ಅದಿತಿ, ಅವನನ್ನು ಒಳ್ಳೆಯ ಕಾಲೇಜಿಗೆ ಸೇರಿಸಬೇಕು.”
“ಅವನು ಜಾಣ ಅಂತ ನಂಗೂ ಗೊತ್ತು ರೀ….. ಪ್ರತಿ ಟೆಸ್ಟ್ನಲ್ಲೂ ತುಂಬಾ ಚೆನ್ನಾಗಿ ನಂಬರ್ ತಗೋತಾನೆ ಅಂತ ಅವನಮ್ಮನೂ ಹೇಳಿದರು ಅದನ್ನು ಕೇಳಿ ನನಗೂ ಖುಷಿಯಾಯ್ತು.”
“ಹಳ್ಳಿ ಶಾಲೆಯಾದ್ರೂ ಅವನ ಅದೃಷ್ಟದಿಂದ ತುಂಬಾ ಒಳ್ಳೆಯ ಮೇಷ್ಟು ಸಿಕ್ಕಿದ್ದಾರೆ ಅವನಿಗೆ.”
“ಅದೂ ಮುಖ್ಯ ಅಲ್ವಾ?”
“ಓದೋದ್ರಲ್ಲಿ ಮಾತ್ರವಲ್ಲ ಬೇರೆ ವಿಷಯದಲ್ಲೂ ತುಂಬಾ ಆಸಕ್ತಿ ಇದೆ ಅವನಿಗೆ. ತುಂಬಾ ಪ್ರಚಂಡ, ನಾನು ಯಾವ ಸಬ್ಜೆಕ್ಟ್ ಹೇಳ್ಕೊಟ್ರೂ ಸುಲಭವಾಗೇ ಅರ್ಥ ಮಾಡ್ಕೊಂಡು ಬಿಡ್ತಾನೆ. ಅವನು ಎಂತೆಂತ ಪ್ರಶ್ನೆಗಳನ್ನು ಕೇಳ್ತಾನೆ ಗೊತ್ತಾ ಆದಿತಿ….?”
“ಹೌದಾ?”
“ಹೂಂ, ಬೆರಳು ತೋರಿಸಿದರೆ ಹಸ್ತವನ್ನೇ ನುಂಗಿಬಿಡುವಷ್ಟು ಜಾಣತನ ಇದೆ. ಒಟ್ಟಿನಲ್ಲಿ ಈ ಹುಡುಗನಲ್ಲಿ ಕುತೂಹಲ, ಧರ್ಯ, ಬುದ್ಧಿವಂತಿಕೆ ಎಲ್ಲಾ ಸೇರಿಕೊಂಡಿದೆ. ಆದ್ರೂ ನಂಗೇನನಿಸುತ್ತೆ ಗೊತ್ತಾ….?”
“ಏನನಿಸುತ್ತೆ ಮೇಷ್ಟ್ರೇ….” ಅದಿತಿ ನಕ್ಕು ಕೇಳಿದಳು.
“ಏನಿಲ್ಲ ಅದಿತಿ… ಇಂತಹ ಪ್ರಚಂಡ ಮಕ್ಕಳು ಒಮ್ಮೊಮ್ಮೆ ಹಾದಿ ತಪ್ಪಿಬಿಡೋ ಸಂಭವವೂ ಉಂಟು. ಆದ್ರಿಂದ ಇವರನ್ನು ಸರಿದಾರಿಯಲ್ಲೇ ಹೋಗುವಂತೆ ನೋಡಿಕೊಳ್ಳೋದು ಮುಖ್ಯ.”
“ಹಾಗಾಂತೀರಾ?”
“ಹೂಂ ಕಣೆ, ಈ ವಯಸ್ಸಿನಲ್ಲಿ ಯಾವುದು ಅವರಿಗೆ ಸಂಪೂರ್ಣವಾಗಿ ಅರ್ಥವಾಗಿರೋಲ್ಲ. ಯಾವುದು ಸರಿ…. ಯಾವುದು ತಪ್ಪು ಅಂತ ನಿರ್ಧರಿಸೋಕೂ ಆಗೋಲ್ಲ…. ಹೀಗಾಗಿಯೇ ಹಿರಿಯರ ಜವಾಬ್ದಾರಿಯೂ ಜಾಸ್ತಿಯಾಗೇ ಇರುತ್ತೆ.”
“ನಿಮ್ಮ ಮಾತು ನಿಜ.”
ನಾಲ್ಕಾರು ದಿನಗಳವರೆಗೂ ಅದಿತಿ ಗಂಡನ ಮಾತನ್ನೇ ಜ್ಞಾಪಿಸಿಕೊಳ್ಳುತ್ತಿದ್ದಳು.
ಅಂದು ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆಯ ಸಮಯ…. ಅಡುಗೆ ಮನೆಯಿಂದ ಹೊರಗೆ ಬಂದಳು ಅದಿತಿ. ಹಾಲಿನಲ್ಲಿ ಒಂದಿಷ್ಟು ಮಕ್ಕಳು ಕೇರಂಬೋರ್ಡ್ ಆಡುತ್ತಿದ್ದರು. ಮತ್ತೆ ಕೆಲವರು ಟಿವಿಯಲ್ಲಿ ಕಾರ್ಟೂನ್ ನೋಡುತ್ತಾ ಗಟ್ಟಿಯಾಗಿ ನಗುತ್ತಿದ್ದರು, ಕುಣಿಯುತ್ತಿದ್ದರು. ಒಂದಿಬ್ಬರು ನೆಲದ ಮೇಲೆ ಹಾಯಾಗಿ ಮಲಗಿಬಿಟ್ಟಿದ್ದರು. ಅದಿತಿಗೆ ನಗುಬಂತು,
“ಜೋರಾಗಿ ಕಿರುಚಾಡಬೇಡಿ, ಅಕ್ಕಪಕ್ಕದ ಮನೆಯವರಿಗೆ ತೊಂದ್ರೆ ಆಗುತ್ತೆ….” ಅಂದಳು.
“ಇಲ್ಲ ಆಂಟಿ…. ಕಿರುಚಾಡೊಲ್ಲ ಆಂಟಿ…. ಅನ್ನುತ್ತಲೇ ಮತ್ತೆ ಗಟ್ಟಿಯಾಗಿ ಕಿರುಚಿದರು ಮಕ್ಕಳು.
ಅದಿತಿ ಸುತ್ತಾ…ಮುತ್ತಾ… ಕಣ್ಣಾಡಿಸಿದಳು. ಮಗಳು ಕಾಣಿಸಲಿಲ್ಲ.
“ಹಿತಾ ಎಲ್ಲಿ ಮಕ್ಕಳೇ….?
ಅದಿತಿಯ ಪ್ರಶ್ನೆ ಆ ಹುಡುಗರ ಕಿವಿಯನ್ನು ತಲುಪಲಿಲ್ಲ.
ನೋಡೋಣವೆಂದುಕೊಂಡು ಹೊರಗೆ ಬಂದಳು. ತಿಳಿಸಾರಿಗೆ ಬೇಕಾಗಿದ್ದ ಕರಿಬೇವಿನ ಸೊಪ್ಪನ್ನು ಕೀಳಲು ಮನೆಯ ಪಕ್ಕಕ್ಕೆ ಬಂದಳು. ಕಾಂಪೌಂಡ್ ಪಕ್ಕದಲ್ಲಿದ್ದ ಗಿಡವನ್ನು ಕೊಂಚ ಬಾಗಿಸಿ ಸೊಪ್ಪು ಕಿತ್ತುಕೊಂಡು ಅದನ್ನು ತೊಳೆಯಲು ನಲ್ಲಿಯ ಬಳಿಗೆ ಬರುವಾಗ ಮಗಳು ಹಿತಾ ಕಿಲಕಿಲನೆ ನಗುವ ಸದ್ದು ಕೇಳಿಸಿತು. ಏನೋ ಅನುಮಾನದಿಂದ ವಿವೇಕನ ರೂಮಿನ ಬಳಿಗೆ ಹೋದಳು. ಕೊಂಚವೇ ತೆಗೆದುಕೊಂಡಿದ್ದ ಕಿಟಕಿಯಿಂದ ಒಳಗೆ ಬಗ್ಗಿ ನೋಡಿದ ಅದಿತಿಗೆ ಶಾಕ್ ಹೊಡೆಸಿಕೊಂಡ ಹಾಗಾಯಿತು…. ಟೇಬಲ್ ಮುಂದಿನ ಕುರ್ಚಿಯ ಮೇಲೆ ವಿವೇಕ ಕುಳಿತಿದ್ದಾನೆ…. ಅವನ ತೊಡೆಯ ಮೇಲೆ ಹಿತಾ ಕೂತು ಕಾಮಿಕ್ ಬುಕ್ ನೋಡ್ತಾ ಲಾಲಿಪಪ್ ಚೀಪುತ್ತಿದ್ದಾಳೆ….
ವಿವೇಕ ಕಥೆ ಹೇಳ್ತಾ ಹೇಳ್ತಾ ಅವಳ ಮೈಮೇಲೆಲ್ಲಾ ಕೈಯಾಡಿಸುತ್ತಿದ್ದಾನೆ…. ಅವಳ ಹಣೆಗೆ, ಕೆನ್ನೆಗೆ ಮುತ್ತು ಕೊಡುತ್ತಿದ್ದಾನೆ, ಇದಾವುದರ ಅರಿವೂ ಇಲ್ಲದ ಮುಗ್ಧ ಮಗು ಲಾಲಿಪಾಪ್ ಚೀಪುತ್ತಾ ಕಿಲಕಿಲನೆ ನಗುತ್ತಿದ್ದಾಳೆ ಬಾಗಿಲು ಮುಚ್ಚಿದೆ.
ವಿವೇಕ ಯಾವತ್ತೂ ತನ್ನ ಮುಂದೆ ಹೀಗೆ ನಡೆದುಕೊಂಡಿರಲಿಲ್ಲ…. ಅದಿತಿಗೆ ಗಾಬರಿಯಿಂದ ಎದೆ ಹೊಡೆದುಕೊಳ್ಳತೊಡಗಿತು. ‘ಅಪ್ರಾಪ್ತ ವಯಸ್ಸಿನ ಮಗುವಿಗೆ ಲೈಂಗಿಕ ಕಿರುಕುಳ….’ ಎಂಬ ಸುದ್ದಿಯನ್ನು ಬೆಳಿಗ್ಗೆ ದಿನಪತ್ರಿಕೆಯಲ್ಲಿ ಓದಿದ್ದು ತಟ್ಟನೆ ನೆನಪಾಯಿತು. ಮುಖ ಬೆವರಿತು… ನಿಧಾನವಾಗಿ ನಡೆದುಕೊಂಡು ಬಂದು ಸೋಫಾ ಮೇಲೆ ದೊಪ್ಪನೆ ಕುಸಿದಳು. ಪಕ್ಕದ ಟೀಪಾಯ್ ಮೇಲಿಟ್ಟಿದ್ದ ಜಗ್ನಿಂದ ನೀರು ಬಗ್ಗಿಸಿಕೊಂಡು ಗಟಗಟನೆ ಕುಡಿದವಳೇ “ಹಿತಾ…. ಹಿತಾ….” ಅಂತ ಏರು ಧ್ವನಿಯಲ್ಲಿ ಕಿರುಚಿಕೊಂಡಳು.
ಲಾಲಿಪಾಪ್ ಚೀಪುತ್ತಲೇ ರೂಮಿನಿಂದ ಹೊರಗೋಡಿ ಬಂದ ಮುದ್ದು ಹಿತಾ ಅಮ್ಮನ ತೊಡೆಯೇರಿದಳು. ಅವಳನ್ನು ಬಲವಾಗಿ ತಬ್ಬಿ ಹಿಡಿದ ಅದಿತಿಯ ಕಣ್ಣು ತುಂಬಾ ನೀರು ತುಂಬಿಕೊಂಡಿತು. ಮೆಲ್ಲನೆ ಮಗಳನ್ನು ಕೆಳಗಿಳಿಸಿ ಅಡಿಗೆ ಮನೆಯ ಕಡೆಗೆ ನಡೆದ ಅದಿತಿಯ ಹೃದಯ ಆತಂಕದ ಕಡಲಾಗಿತ್ತು.
ಮಾರನೆಯ ದಿವಸದಿಂದ ಅದಿತಿ ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳತೊಡಗಿದಳು. ಆದರೂ ಅರಿಯದ ಆತಂಕ ಅವಳ ಮನಸ್ಸಿನಿಂದ ದೂರವಾಗಲೇ ಇಲ್ಲ. ಮಗಳು ಎಲ್ಲೇ ಹೋದರೂ ಅಮ್ಮನ ದೃಷ್ಟಿ ಅವಳನ್ನೇ ಹಿಂಬಾಲಿಸುತ್ತಿತ್ತು.
ನಾಲ್ಕಾರು ದಿನಗಳು ಕಳೆಯಿತು…. ಸಾಕಷ್ಟು ಯೋಚಿಸಿ ಕೊನೆಗೊಂದು ನಿರ್ಧಾರಕ್ಕೆ ಬಂದಳು ಅದಿತಿ. ಒಂದು ಮಧ್ಯಾಹ್ನ ಹಿತಾ ಗೆಳತಿಯರ ಜೊತೆ ಆಟ ಆಡುತ್ತಿದ್ದಾಗ ವಿವೇಕನ ರೂಮಿಗೆ ಬಂದಳು. ಹಾಸಿಗೆಯ ಮೇಲೆ ಉರುಳಿ ಟಿವಿ ನೋಡುತ್ತಿದ್ದ ವಿವೇಕ ಥಟ್ಟನೆ ಎದ್ದು ಕುಳಿತು “ಬನ್ನಿ ಚಿಕ್ಕಮ್ಮಾ…. ಏನಾದ್ರೂ ಕೆಲಸ ಇತ್ತಾ?” ಅಂದ.
“ಕೆಲಸ ಏನೂ ಇಲ್ಲಪ್ಪ, ಸುಮ್ನೇ ನಿನ್ನ ಜೊತೆ ಸ್ವಲ್ಪ ಮಾತಾಡೋಣ ಅಂತ ಬಂದೆ.” ಅನ್ನುತ್ತಾ ಅವನ ಪಕ್ಕ ಕುಳಿತು ಅವನ ಶಾಲೆ, ಸ್ನೇಹಿತರು, ವಿದ್ಯಾಭ್ಯಾಸ, ಅವನ ಆಸಕ್ತಿ…. ಎಲ್ಲದರ ಬಗ್ಗೆ ವಿಚಾರಿಸುತ್ತಾ ಅವನ ತಂದೆ ತಾಯಿ ಹಳ್ಳಿಯಲ್ಲಿ ಪಡುತ್ತಿರುವ ಕಷ್ಟ, ಮಗನ ಮೇಲಿಟ್ಟಿರುವ ಆಸೆ, ಅಭಿಮಾನ, ನಂಬಿಕೆ…. ಎಲ್ಲವನ್ನೂ ಹಂತಹಂತವಾಗಿ ವಿವರಿಸಿದಳು. ಟಿವಿ ನೋಡುವುದರಿಂದ ಮನರಂಜನೆ, ಜ್ಞಾನಾರ್ಜನೆ ದೊರೆಯುವುದು ಸತ್ಯವಾದರೂ ಅತಿಯಾದ ವೀಕ್ಷಣೆಯಿಂದ ಆಗುವ ತೊಂದರೆಗಳ ಬಗ್ಗೆಯೂ ಹೇಳಿದಳು. ಓದಿನ ಮಹತ್ವದ ಬಗ್ಗೆ ವಿವರಿಸಿ,
“ನಿಮ್ಮ ಚಿಕ್ಕಪ್ಪ ಓದುವಾಗ ಎಷ್ಟು ಕಷ್ಟಪಟ್ಟಿದ್ದಾರೆ ಗೊತ್ತಾ ವಿವೇಕ….?” ಅಂದಾಗ ವಿವೇಕನ ಕಣ್ಣು ಒದ್ದೆಯಾಯಿತು. ನೀನೀಗ ವಿದ್ಯಾರ್ಥಿ…. ಬರೀ ವಿದ್ಯಾರ್ಥಿ…… ಕಷ್ಟಪಟ್ಟು ಓದಬೇಕು. ಓದುವ ಸಮಯದಲ್ಲಿ ಬೇರೆ ಯಾವುದರ ಬಗ್ಗೆಯೂ ಯೋಚಿಸಲೇಬಾರದು. ಅದರಲ್ಲೂ ಹೆಣ್ಣು ಮಕ್ಕಳ ವಿಷಯದಲ್ಲಂತೂ ಎಷ್ಟು ಸಾಧ್ಯವೊ ಅಷ್ಟು ಗಂಭೀರವಾಗಿ ನಡೆದುಕೊಳ್ಳಬೇಕು, ಇಲ್ಲದಿದ್ರೆ ತೊಂದರೆ ಕಟ್ಟಿಟ್ಟ ಬುತ್ತಿ, ಪೊಲೀಸ್ ಸ್ಟೇಷನ್ ಮೆಟ್ಟಲು ಹತ್ತುವ ಸಂಭವವೂ ಬಂದುಬಿಡಬಹುದು….” ಅಂದಾಗ ವಿವೇಕ ನಿಜಕ್ಕೂ ಹೆದರಿದ. “ನಿಜವಾಗ್ಲೂ ನಾನು ಹಾಗೆಲ್ಲಾ ಮಾಡೋಲ್ಲ, ಯಾವ ಹೆಣ್ಣು ಮಕ್ಕಳ ಜೊತೆಯಲ್ಲೂ ತಪ್ಪಾಗಿ ನಡ್ಕೊಳೋದಿಲ್ಲ ಚಿಕ್ಕಮ್ಮ. ಹೆಚ್ಚಾಗಿ ಟಿವಿ ನೋಡೋಲ್ಲ, ಅಪ್ಪ ಅಮ್ಮನ ಆಸೆಯಂತೆ ಚೆನ್ನಾಗಿ ಓದಿ ಮುಂದೆ ಬರ್ತೀನಿ, ನನ್ನನ್ನು ನಂಬಿ ಚಿಕ್ಕಮ್ಮ….” ಅಂತ ಅದಿತಿಯ ತೊಡೆಯ ಮೇಲೆ ತಲೆ ಇಟ್ಟು ಗಟ್ಟಿಯಾಗಿ ಅತ್ತು ಬಿಟ್ಟ. ಅದಿತಿ ಅವನ ಬೆನ್ನು ನೇವರಿಸಿದಳು. ಅವಳ ಕಣ್ಣುಗಳು ತುಂಬಿಕೊಂಡವು. ಕಡೆಗೆ ಸಮಾಧಾನದ ಉಸಿರು ಬಿಟ್ಟು ಹೊರಗೆ ಬಂದಳು.
ಹಾಲಿನಲ್ಲಿ ಬಂದು ಕೂತು ಮಕ್ಕಳ ಆಟ ನೋಡುತ್ತಿದ್ದ ಅದಿತಿಯ ಮನ ವಿವೇಕನ ಸುತ್ತಲೇ ಸುತ್ತುತ್ತಿತ್ತು… ಯಾವುದೋ ಮಾತಿನ ನಡುವೆ ವಿವೇಕ ಒಂದು ವಿಷಯ ಹೇಳಿದ್ದ…. ಅವನ ಪಕ್ಕದ ಮನೆಯ ಕೃಷ್ಣಮೂರ್ತಿಗೆ ಹೊಸದಾಗಿ ಮದುವೆಯಾಗಿತ್ತು. ದಂಪತಿಗಳು ಆಗಾಗ ತಮ್ಮ ತೋಟದ ಮನೆಗೆ ಹೋಗುತ್ತಿದ್ದರು. ಒಮ್ಮೊಮ್ಮೆ ವಿವೇಕನೂ ಅವರ ಜೊತೆಯಲ್ಲಿ ಹೋಗುತ್ತಿದ್ದದ್ದುಂಟು. ಬಹುಶಃ ಆ ನವದಂಪತಿಗಳ ಸರಸ ಹೇಗೋ ವಿವೇಕನ ಕಣ್ಣಿಗೆ ಬಿದ್ದಿರಬಹುದು, ಜೊತೆಗೆ ಚಲನಚಿತ್ರಗಳನ್ನು ಸದಾ ಟಿವಿಯಲ್ಲಿ ನೋಡುವ ಚಪಲ…. ಈ ಎಲ್ಲಾ ಕಾರಣಗಳಿಂದಲೇ ವಿವೇಕ ಹಿತಾಳ ಜೊತೆ ಹಾಗೆ ನಡೆದುಕೊಂಡಿರಬಹುದು ಅನಿಸಿತು.
ಮಾರನೆಯ ದಿವಸದಿಂದ ಅದಿತಿ ಮಧ್ಯಾಹ್ನದ ಹೊತ್ತು ನಿದ್ದೆ ಮಾಡುವುದನ್ನು ಬಿಟ್ಟುಬಿಟ್ಟಳು. ಮಕ್ಕಳಿಗೆ ಮೆಮೊರಿ ಟೆಸ್ಟ್ ಜೊತೆ ಹಳೇ ಆಟಗಳನ್ನು ಹೇಳಿಕೊಡಲು ಪ್ರಾರಂಭಿಸಿದಳು. ತನ್ನ ಜೊತೆಗೆ ಸಹಾಯಕ್ಕೆಂದು ವಿವೇಕನನ್ನು ಕರೆದುಕೊಂಡಳು. ಅವನಲ್ಲೂ ಉತ್ಸಾಹ ಹೆಚ್ಚಿತು. ಆ ಬೀದಿಯಲ್ಲಿದ್ದ ಕೊಂಚ ದೊಡ್ಡ ಹುಡುಗರೂ ಇವರ ಜೊತೆ ಸೇರಿಕೊಂಡಾಗ ಅದಿತಿಗೆ ಖುಷಿಯಾಯಿತು.
ಮುಂದಿನ ಎಂಟು ದಿನಗಳಿಗೆ ವಿವೇಕ ತನ್ನ ಊರಿಗೆ ಹೊರಟ. “ಥ್ಯಾಂಕ್ಸ್ ಚಿಕ್ಕಮ್ಮ…” ಅಂದವನ ಬೆನ್ನು ತಟ್ಟಿದ ಅದಿತಿ
“ನಾನು ಹೇಳಿದ್ದನ್ನ ಮರೀಬೇಡಪ್ಪ” ಅಂದಳು. ಅವಳ ಕಣ್ಣು ಒದ್ದೆಯಾಗಿತ್ತು.
“ರಜಾ ಬಂದಾಗಲೆಲ್ಲ ಬಂದುಬಿಡು ವಿವೇಕಣ್ಣ” ಅನ್ನುತ್ತ ಕೈ ಬೀಸಿದಳು ಹಿತಾ.
ವಿವೇಕ ಊರಿಗೆ ಹೊರಟು ಹೋದ ಮೇಲೆ ಅದಿತಿ ಒಂದು ದಿವಸ ಗಂಡನಿಗೆ ಎಲ್ಲಾ ವಿಷಯ ಹೇಳಿಬಿಟ್ಟಳು. ವಿದ್ಯಾಸಾಗರ ಹೆಂಡತಿಯ ಮಾತು ಕೇಳಿ ಕೋಪಿಸಿಕೊಳ್ಳಲಿಲ್ಲ… ಉದ್ರೇಕಗೊಳ್ಳಲಿಲ್ಲ. “ಎಷ್ಟೋ ಸಾರಿ ಹೀಗಾಗಿ ಬಿಡುವುದುಂಟು ಅದಿತಿ. ನೀನು ಹೇಳಿದ ಹಾಗೆ ಅದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು. ಆದ್ರೆ ನೀನು ಸರಿಯಾದ ಕೆಲಸ ಮಾಡಿದ್ದೀಯ. ಇಂತಹ ಸಣ್ಣ ಘಟನೆಗಳೇ ಮುಂದೆ ಹೆಣ್ಣು ಮಕ್ಕಳಿಗೆ ಕೊಡುವ ಲೈಂಗಿಕ ಕಿರುಕುಳಕ್ಕೋ…. ಮಾಡುವ ಅತ್ಯಾಚಾರಕ್ಕೋ…. ನಾಂದಿಯಾಗಿಬಿಡಬಹುದು. ನೀನು ವಿವೇಕನಿಗೆ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಬುದ್ಧಿ ಹೇಳಿದ್ದೀಯ. ಇದು ತುಂಬಾ ಒಳ್ಳೆಯ ಮತ್ತು ಜಾಣತನದ ಕೆಲಸ. ಇದೇನೋ ಸರಿ ಆದ್ರೆ ನಿನ್ನ ಜವಾಬ್ದಾರಿ ಇಲ್ಲಿಗೆ ಮುಗಿಯಲಿಲ್ಲ…..”
“ಅಂದ್ರೆ…..”
“ನೀನು ನಮ್ಮ ಹಿತಾಗೂ ಕೂಡ ಕೊಂಚ ತಿಳುವಳಿಕೆ ಕೊಡ್ಬೇಕು.”
“ಸ್ಕೂಲಲ್ಲಿ ಗುಡ್ ಟಚ್, ಬ್ಯಾಡ್ ಟಚ್…. ಅಂತೆಲ್ಲಾ ಹೇಳಿಕೊಡ್ತಾರಂತೆ ಈಗ.”
“ಇರ್ಲಿ, ಕೆಲವು ಸಾರಿ ಪುಟ್ಟ ಮಕ್ಕಳು ಅವರದ್ದೇ ಆದ ಪ್ರಪಂಚದಲ್ಲಿರ್ತಾರೆ. ಒಂದು ಚಾಕ್ಲೆಟ್ ಕೈಗೆ ಕೊಟ್ಟುಬಿಟ್ರೆ ಎಲ್ಲಾ ಮರ್ತೇ ಹೋಗ್ತಾರೆ…. ಆದ್ರಿಂದ ತಾಯಿಯಾದವ್ರು ಮಕ್ಕಳ ಮೂಡ್ ನೋಡ್ಕೊಂಡು ಅವರಿಗೆ ಯಾವ ರೀತಿ ಅರ್ಥ ಆಗುತ್ತೋ… ಹಾಗೇ ಹೇಳ್ಕೋಡಬೇಕು. ಸ್ಕೂಲಿನ ಟೀರ್ಸ್ ಮೇಲೆ ಎಲ್ಲಾ ಭಾರ ಹಾಕಿ ಬಿಡಬಾರ್ದು.”
“ಅದೂ ನಿಜ ಅನ್ನಿ.”
“ಇಂಥ ಸೂಕ್ಷ್ಮ ವಿಷಯ ಮಕ್ಕಳಿಗೆ ಅದರಲ್ಲೂ ಪುಟ್ಟ ಮಕ್ಕಳಿಗೆ ಹೇಳ್ಕೊಡೋದು ಕಷ್ಟ ಅಂತ ನಂಗೊತ್ತಿದೆ. ಆದರೆ ನಮಗೆ ಬೇರೆ ದಾರಿಯಿಲ್ಲ. ಗಂಡು ಮಕ್ಕಳಿಗಾಗಲೀ ಹೆಣ್ಣು ಮಕ್ಕಳಿಗಾಗಲೀ ಹೇಳಬೇಕಾದ ವಿಷಯಗಳನ್ನ ಬುದ್ಧಿವಂತಿಕೆಯಿಂದ ಹೇಳಲೇಬೇಕಾಗುತ್ತೆ. ಇಂಥ ವಿಷಯಗಳ ಬಗ್ಗೆ ತಿಳಿದುಕೊಳ್ಳೋದು ಚಿಕ್ಕ ಮಕ್ಕಳಿಗೂ ಅಗತ್ಯ. ನಿಜ ಹೇಳ್ಲಾ ಅದಿತಿ? ಇಂದಿನ ದಿನಗಳಲ್ಲಿ ಅಪ್ಪ ಅಮ್ಮಂದಿರಿಗೆ ಖಂಡಿತ ಜವಾಬ್ದಾರಿ ಹೆಚ್ಚು. ಇತ್ತೀಚೆಗೆ ಹಿರಿಯರಿರೋ ಮನೆಗಳು ಕಡಿಮೆ, ಆದ್ರಿಂದ್ಲೇ ಹೆಚ್ಚು ಸಮಸ್ಯೆ ಆಗೋದು ಅಲ್ವಾ?”
“ಹೂಂ.”
“ನಾವುಗಳು ಮಕ್ಕಳ ಆಹಾರ, ಆರೋಗ್ಯ, ವಿದ್ಯಾಭ್ಯಾಸದ ಜೊತೆಯಲ್ಲೇ ಸಮಾಜದ ವಿವಿಧ ಮುಖಗಳ ಪರಿಚಯವನ್ನೂ ಮಾಡಿಕೊಡ್ಬೇಕಾಗುತ್ತೆ.”
“ಆದ್ರೂ ಈಗಿನ ಕಾಲದಲ್ಲಿ ಮಕ್ಕಳನ್ನು ಬೆಳೆಸೋದು ತುಂಬಾ ಕಷ್ಟ ಅಲ್ವೇನ್ರಿ….?”
“ಕಷ್ಟ ಅನ್ಕೋಬಾರ್ದು ಅದಿತಿ, ಕರ್ತವ್ಯ ಅನ್ಕೋಬೇಕು…. ಯಾವುದೇ ಕರ್ತವ್ಯವನ್ನಾಗಲೀ ಪ್ರೀತಿಯಿಂದ್ಲೇ ಮಾಡ್ಬೇಕು.”
ಅತ್ಯಂತ ಸಮಾಧಾನದಿಂದ ಹೇಳುತ್ತಿದ್ದ ವಿದ್ಯಾಸಾಗರನ ಮುಖವನ್ನು ನೋಡುತ್ತಿದ್ದ ಅದಿತಿ “ಆಯ್ತು ಮೇಷ್ಟ್ರೇ …. ನೀವು ಹೇಳಿದ್ದನ್ನೆಲ್ಲಾ ನೆನಪಿಟ್ಕೋತೀನಿ ಹಾಗೇ ಮಾಡ್ತೀನಿ…..” ಅನ್ನುತ್ತಾ ಕೈಮುಗಿದು ಗಟ್ಟಿಯಾಗಿ ನಕ್ಕಳು.
ವಿದ್ಯಾಸಾಗರನ ಮುಖದಲ್ಲೂ ಸಣ್ಣ ನಗು ಮಿಂಚಿತು.

ಸವಿತಾ ಪ್ರಭಾಕರ, ಮೈಸೂರು

