(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮರುದಿನ ಇಬ್ಬರೂ ಕಾಲೇಜಿಗೆ ಹೋದರು. ಬಹಳ ಕಡಿಮೆ ಮಂದಿ ಸ್ನೇಹಿತರು ಭೇಟಿಯಾದರು.
ವಾರುಣಿ, ಆರ್.ಜಿ. ಇಬ್ಬರೂ ಒಟ್ಟಿಗೆ ಆರಾಧ್ಯಸರ್‌ನ ಭೇಟಿ ಮಾಡಿದರು.
“ಕಂಗ್ರಾಚ್ಯುಲೇಷನ್ಸ್.”
“ಥ್ಯಾಂಕ್ಸ್ ಸರ್.”
“ವಾರುಣಿ ನಿನ್ನ ಕಾಲೇಜು ಕುವೆಂಪುನಗರದಲ್ಲಿದೆ. ನಾನು ಈ ಹುದ್ದೆಗೆ ಬಂದಾಗ ಮೊದಲ ಬ್ಯಾಚ್ ಸ್ಟೂಡೆಂಟ್ ಅವನು ರಾಜೇಗೌಡಾಂತ ತುಂಬಾ ಬುದ್ಧಿವಂತ. ಪಿ.ಯು. ಕಾಲೇಜು ಶುರುಮಾಡಿದ. ಆರ್ಟ್ಸ್, ಕಾಮರ್ಸ್, ಸೈನ್ಸ್ ವಿಭಾಗಗಳಿವೆ. ಒಳ್ಳೆಯ ಹೆಸರಿದೆ. ನೀನು ಒಂದನೇ ತಾರೀಕಿನಿಂದ ಅಲ್ಲಿಗೆ ಹೋಗಬೇಕು.”
“ಆಗಲಿ ಸರ್. ಥ್ಯಾಂಕ್ಸ್ ಸರ್.”
“ಸಂಬಳದ ವಿಚಾರ ಅವನೇ ಮಾತಾಡ್ತಾನೆ. ರಾಮ್‌ವರ್ಮ ತಮ್ಮ ತಂದೆಯ ಹೆಸರಿನಲ್ಲಿ 25,000 ರೂ. ಕ್ಯಾಷ್ ಪ್ರೈಜ್ ಇಟ್ಟಿದ್ದರು. ಅದೂ ನಿನಗೆ ಬರ‍್ತಿದೆ.” “ಡ್ರಾಮಾ ಪೇಪರ್‌ನಲ್ಲಿ ಹೆಚ್ಚು ಅಂಕ ನಿನಗೇ ಬಂದಿದೆ.”
“ತುಂಬಾ ಖುಷಿಯಾಗ್ತಿದೆ. ಚಂದ್ರಾವತಿ ಆಂಟಿ ತುಂಬಾ ಸಂತೋಷಪಡ್ತಾರೆ.”
“ಹೌದಮ್ಮ. ಅವರಿಗೆ ನಿಮ್ಮಿಬ್ಬರನ್ನು ಕಂಡರೆ ತುಂಬಾ ಪ್ರೀತಿ. ನಾನು ಕಳೆದವಾರ ಅವರನ್ನು ಭೇಟಿಮಾಡಿದ್ದೆ.”
“ನಾಳೆ ಹೋಗಿ ರಾಜೇಗೌಡನನ್ನು ಭೇಟಿ ಮಾಡು. ಅವನ ಫೋನ್ ನಂಬರ್ ತೊಗೋ.”
ಅವಳು ಸೇವ್ ಮಾಡಿಕೊಂಡಳು.”
“ನೀವಿಬ್ಬರೂ ಎನ್.ಇ.ಟಿ. ಪರೀಕ್ಷೆ ತೊಗೋಬೇಕು. ಒಂದೆರಡು ವರ್ಷವಾದ ಮೇಲೆ ಪಿ.ಎಚ್.ಡಿ.ಗೆ ಟ್ರೈ ಮಾಡಬಹುದು.”
“ವಾರುಣಿ ನೀವು ಹೊರಡಿ ನಾನು ಆರ್.ಜಿ. ಹತ್ತಿರ ಕೊಂಚ ಮಾತಾಡುವುದಿದೆ.”
ವಾರುಣಿ ಹೊರಟಳು.
“ಆರ್.ಜಿ ಕೂತ್ಕೊಳ್ಳಿ.”
ಆರ್.ಜಿ. ಕುಳಿತ.
“ನಿಮಗೂ ಕೆಲಸ ಸಿಗುವಂತಿದೆ. ಆದರೆ ಕೆಲವು ಕಂಡಿಷನ್ಸ್ಗಳಿವೆ. ಅದನ್ನು ಒಪ್ಪಿದರೆ ಆರ್ಡರ್ ಕೈಗೆ ಬರತ್ತೆ.”
“ಕಾಲೇಜು ಎಲ್ಲಿದೆ ಸರ್?”
“ಟಿ.ನರಸೀಪುರಕ್ಕೆ ಹೋಗುವ ದಾರಿಯಲ್ಲಿ ವರುಣ ದಾಟಿದೊಡನೆ ಎಡಭಾಗಕ್ಕೆ ತಿರುಗಿದರೆ “ಮಹೇಶ್ವರಿ ಎಜುಕೇಷನಲ್ ಟ್ರಸ್ಟ್’ ಅನ್ನುವ ಬೋರ್ಡ್ ಕಣ್ಣಿಗೆ ಬೀಳತ್ತೆ. 14 ಎಕರೆ ಪ್ರದೇಶದಲ್ಲಿ ಬಿ.ಎ., ಬಿ.ಎಸ್.ಸಿ, ಬಿ.ಕಾಂ ಹಾಗೂ ಬಿ.ಬಿ.ಎಮ್ ಕಾಲೇಜುಗಳಿವೆ. ಮಹೇಶ್ವರಿ ರಾಜೇಗೌಡನ ಬ್ಯಾಚ್‌ನಲ್ಲಿದ್ದವರು. ನನ್ನ ಸ್ಟೂಡೆಂಟ್. ಮಹೇಶ್ವರಿ ಮಧುಕರ್ ಅಂತ ಹೆಸರು. ಅವರೂ ಫಸ್ಟ್ ರ‍್ಯಾಂಕ್ ಬಂದಿದ್ರು. ಆದ್ದರಿಂದ ಫಸ್ಟ್ ರ‍್ಯಾಂಕ್ ಬಂದವರನ್ನು ಕಂಡರೆ ಒಂದು ತರಹ ಪ್ರೀತಿ.”
“ಅವರು ನನಗೆ ಕೆಲಸ ಕೊಡ್ತಾರಾ?”
“ಕೊಡ್ತಾರೆ. ಕಂಡಿಷನ್ಸ್ ಅಪ್ಲೈ.”
“ಏನು ಕಂಡಿಷನ್ಸ್?”
“ಅವರಿಗೆ ಒಬ್ಬಳೇ ಮಗಳು ಉಮಾಮಧುಕರ್ ಅಂತ ಅವಳು. ನಿಮ್ಮ ಹಾಗೆ ಎಂ.ಎ. ಮುಗಿಸಿದ್ದಾಳೆ. ಎಕನಾಮಿಕ್ಸ್ ಇರಬಹುದು. ಅವಳನ್ನು ಕೈ ಹಿಡಿದು, ಆ ಇಡೀ ಸಂಸ್ಥೆಗಳ ಒಡೆಯನಾಗುವವನಿಗೆ ಈ ಕೆಲಸ. ಮದುವೆಯ ನಂತರ ಹುಡುಗ ಅತ್ತೇ ಮನೆಯಲ್ಲೇ ಇರಬೇಕು. ಕೈ ತುಂಬಾ ಕೆಲಸ. ಐಷಾರಾಮಿ ಜೀವನ ಯೋಚಿಸಿ ಹೇಳಿ.”
“ಇದರಲ್ಲಿ ಯೋಚಿಸುವುದೇನೂ ಇಲ್ಲ ಸರ್. ನನಗೆ ಒಪ್ಪಿಗೆಯಿಲ್ಲ.”
“ನಾನು ಅವರಿಗೆ ಏನೂ ಹೇಳಿರಲ್ಲ. ನಿಮ್ತಂದೆ-ತಾಯಿ ಹತ್ರ ಚರ್ಚೆ ಮಾಡಿ ಆಮೇಲೆ ತಿಳಿಸಿ.”
ಅವನು ನೇರವಾಗಿ ಚಂದ್ರಾವತಿ ಆಂಟಿ ಮನೆಗೆ ಬಂದ. ಶಾರದಾ ಮಲಗಿದ್ದಳು. ವಾರುಣಿ ನಾಗರಾಜನ ಮನೆಗೆ ಹೋಗಿದ್ದಳು.
“ನಿನ್ನ ಕೆಲಸದ್ದು ಏನಾಯ್ತು ಆರ್.ಜಿ.?”
“ಕೆಲಸ ಸಿಕ್ಕಿದೆ. ಆದರೆ ಕಂಡಿಷನ್ಸ್ ಅಪ್ಲೈ.”
ಆರ್.ಜಿ. ಹೇಳಿದ.
“ನಾನು ಹೇಗೆ ಒಪ್ಪಲಿ ಆಂಟಿ? ನಿಮಗೆ ಗೊತ್ತಿರುವಂತೆ ನಾನು ವಾರುಣಿಯನ್ನು ತುಂಬಾ ಪ್ರೀತಿಸ್ತೀನಿ. ಆದರೆ ಹೇಳಕ್ಕೆ ಅಳುಕು. ನಮ್ಮ ತಂದೆ-ತಾಯಿಗೂ ಈ ವಿಚಾರ ಗೊತ್ತಿದೆ ಅಂದುಕೊಳ್ತೇನೆ. ಆದರೆ ಎರಡು ಮನೆಯವರೂ ತಣ್ಣಗಿದ್ದಾರೆ………”
“ನಾನಿಲ್ವಾ ಆರ್.ಜಿ. ಒಂದನೇ ತಾರೀಕಿನ ಒಳಗೆ ನಾನು ಎಲ್ಲಾ ಏರ್ಪಾಡು ಮಾಡ್ತೀನಿ ಧೈರ್ಯವಾಗಿರು.”
“ವಾರುಣಿ ಒಪ್ಪಬೇಕಲ್ಲಾ……?”
“ನೀನು ಸುಮ್ಮನಿದ್ದು ಬಿಡು. ಈ ಕೆಲಸದ ವಿಚಾರ ವರು ಹತ್ರ ಹೇಳಬೇಡ. ಮುಖ ತೊಳೆದು ಬಾ. ಮೊಸರನ್ನ ತಿನ್ನುವೆಯಂತೆ.”
“ವರು ಇಲ್ಲದೆ ನಾನು ಬದುಕಿರಲ್ಲ ಆಂಟಿ” ಅವನು ಪುನಃ ಹೇಳಿದ.
ಅವನು ಮುಖ ತೊಳೆದು ಬಂದು ಮೊಸರನ್ನ ತಿಂದು ಮನೆಗೆ ಹೊರಟ.
ತಕ್ಷಣ ಚಂದ್ರಾವತಿ ರಮಾಗೆ ಫೋನ್ ಮಾಡಿದರು.
“ನೀವು, ನಿಮ್ಮ ಯಜಮಾನರು ತಕ್ಷಣ ಬನ್ನಿ. ನಾನು ವರು ತಾಯಿ-ತಂದೆಗೂ ಬರುವುದಕ್ಕೆ ಹೇಳ್ತೀನಿ. ನಿಮಗೆ ವಾರುಣಿ ಒಪ್ಪಿಗೆಯಾಗಿದ್ದಾಳಾ?”
“ನಮಗೆ ತುಂಬಾ ಇಷ್ಟ. ವಾರುಣಿ ತಾಯಿ-ತಂದೆ ನಮ್ಮ ಸಂಬಂಧ ಒಪ್ಪಿಕೊಳ್ತಾರೆ ಅನ್ನುವ ನಂಬಿಕೆ ನನಗಿದೆ.”
ಮರುದಿನ ಬೆಳಿಗ್ಗೆಯೇ ಆರ್.ಜಿ. ತಂದೆ-ತಾಯಿ ಹೊರಟರು. ಚಂದ್ರಾವತಿ ಶಕುಂತಲಾಗೆ ಫೋನ್ ಮಾಡಿದರು.
“ನಾವು ಈ ಸುದ್ದಿಗೇ ಕಾಯ್ತಿದ್ದೆವು. ವರೂ ಒಪ್ಪಿದ್ದಾಳಾ?”
“ಅವಳಿಗೆ ಆರ್.ಜಿ. ಅಂದ್ರೆ ಇಷ್ಟವಿದೆ. ಅವಳು ಒಪ್ತಾಳೆ ಅನ್ನುವ ನಂಬಿಕೆ ನನಗಿದೆ. ನೀವು ಬನ್ನಿ” ಅವಳಿಗೆ ಎಲ್ಲಾ ಸರ್ ಪ್ರೈಸ್ ಆಗಿರಲಿ.”
ಸೋಮವಾರ ವಾರುಣಿ ಹತ್ತುಗಂಟೆಗೆ ರಾಜೇಗೌಡನನ್ನು ಭೇಟಿಯಾದಳು. ಅವರು ತುಂಬಾ ಚೆನ್ನಾಗಿ ಮಾತನಾಡಿದರು. ಸಧ್ಯಕ್ಕೆ ತಿಂಗಳಿಗೆ ರೂ.60.000/- ಕೊಡುವುದಾಗಿ ಹೇಳಿದರು. ಒಂದನೇ ತಾರೀಕು ಬಂದು ಆರ್ಡರ್ ತೆಗೆದುಕೊಂಡು ರಿಪೋರ್ಟ್ ಮಾಡಿಕೊಳ್ಳಿ.”
“ಆಗಲಿ ಸರ್.”
“ನಿಮ್ಮ ಹಾಗೇ ಇನ್ನಿಬ್ಬರು ಬಂದಿದ್ದಾರೆ ಪರಿಚಯ ಮಾಡಿಕೊಳ್ಳಿ. ವಾರುಣಿಗೆ ಪರಿಮಳಾ ಮತ್ತು ಸ್ನೇಹಾಮೂರ್ತಿಯ ಪರಿಚಯವಾಯಿತು. ಸ್ನೇಹಾಮೂರ್ತಿಯ ಮನೆ ಕಾಲೇಜಿಗೆ ಹತ್ತಿರವಾಗಿತ್ತು. ಪರಿಮಳಾ ವಿದ್ಯಾರಣ್ಯಪುರಂನಿಂದ ಬರಬೇಕಿತ್ತು.
ಅವಳು ಮನೆಗೆ ಬರುವ ವೇಳೆ ಶಕುಂತಲಾರಾವ್ ಬಂದಿದ್ದರು.
“ಅಮ್ಮ-ಅಪ್ಪ ಶಂಕರು?”
“ಯಾಕೆ ಅಷ್ಟು ಆಶ್ಚರ್ಯ? ಲೆಕ್ಚರರ್ ವಾರುಣಿಯವರನ್ನು ನೋಡಬೇಕು ಅನ್ನಿಸಿತು ಅದಕ್ಕೆ ಬಂದೆವು. ಯಾವಾಗಲಿಂದ ಕೆಲಸ ಶುರು?”
“ಒಂದನೇ ತಾರೀಕಿನಿಂದ ಆರಂಭ.”
“ಇವತ್ತು ಸೋಮವಾರ. ಒಂದನೇ ತಾರೀಕೂಂದ್ರೆ ನಾಲ್ಕು ದಿನವಿದೆ.”
“ಹೌದಮ್ಮ. ನಾಲ್ಕು ದಿನಗಳಲ್ಲಿ ನಾನು ಸೀರೆಗಳನ್ನು ಐರನ್ ಮಾಡಿಟ್ಟುಕೊಳ್ಳಬೇಕು. ಮನೆ ಹುಡುಕಬೇಕು. ಕುವೆಂಪುನಗರವಾದರೆ ಅನುಕೂಲ ಅನ್ನಿಸತ್ತೆ.”
“ಅದೆಲ್ಲಾ ಆಗತ್ತೆ ಬಿಡು” ಎಂದರು.
ರಾತ್ರಿ ಏಳು ಗಂಟೆಯ ಹೊತ್ತಿಗೆ ಚಂದ್ರಾವತಿ ಹೊರಗೆ ಹೋದರು.
ಮರುದಿನ ಮಂಗಳವಾರ ಆರ್.ಜಿ. ಅವರ ಮನೆ ಕಡೆ ಸುಳಿಯಲಿಲ್ಲ.
“ಆಂಟಿ ಆರ್.ಜಿ. ಕೆಲಸದ್ದು ಏನಾಯ್ತು?”
“ನಾಳೆ ಶ್ರೀರಂಗಪಟ್ಟಣದ ಹತ್ತಿರ ಒಂದು ಹೊಸ ಕಾಲೇಜು ಆರಂಭವಾಗಿದೆಯಂತೆ. ಅಲ್ಲಿಗೆ ಹೋಗ್ತಿದ್ದಾನೆ.”
ಮರುದಿನ ವಾರುಣಿ, ಬಕುಳಾ, ಅಮೃತ ಇಬ್ಬರನ್ನೂ ಭೇಟಿ ಮಾಡುವ ಪ್ರೋಗ್ರಾಂ ಹಾಕಿಕೊಂಡಳು. ಅಮೃತಾ ಇಬ್ಬರನ್ನೂ ತಮ್ಮ ಮನೆಗೇ ಆಹ್ವಾನಿಸಿದಳು.
ಸುಮಾರು 11 ಗಂಟೆಯ ಹೊತ್ತಿಗೆ ಅವಳು ಅಮೃತಾ ಮನೆಯಲ್ಲಿದ್ದಳು. ಅದೇ ವೇಳೆಗೆ ಬಕುಳಾ ಬಂದಳು. ತನಗೆ ಕೆಲಸ ಸಿಕ್ಕಿರುವ ವಿಚಾರ ತಿಳಿಸಿ ವರು ಸ್ವೀಟ್ ಕೊಟ್ಟಳು.
“ನಮ್ಮಿಬ್ಬರಿಗೂ ಒಂದು ಹೈಸ್ಕೂಲ್‌ನಲ್ಲಿ ಕೆಲಸ ಸಿಕ್ಕಿದೆ ಕಣೆ. ಅವರು ನೀವು ಬಿ.ಎಡ್ ಮಾಡಿಕೊಳ್ಳಲೇ ಬೇಕು ಅಂತ ಹೇಳಿದ್ದಾರೆ. ಕರೆಸ್ಪಾಂಡೆನ್ಸ್ನಲ್ಲಿ ಮಾಡಿ ನಾವು ಎಲ್ಲಾ ಅನುಕೂಲ ಮಾಡಿಕೊಡ್ತೀವಿ ಅಂದ್ರು. 30,000 ರೂ. ಸಂಬಳ. ಸಿದ್ಧಾರ್ಥಲೇ ಔಟ್‌ನಲ್ಲಿ ಶಾಲೆ.”
“ಹೌದಾ?”
“ಸ್ಕೂಲು ಯಾರದು ಗೊತ್ತಾ? ರಶ್ಮಿ ಮೇಡಂ ಅಕ್ಕನದು. ರಮ್ಯ ಮೇಡಂ ಅಂತ ಹೆಸರು. ತುಂಬಾ ಜಾಣೆ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತಾಡ್ತಾರೆ. ತುಂಬಾ ಕೆಲಸ ಮಾಡಿಸ್ತಾರಂತೆ. ನಮಗೆ ವಿಧಿಯಿಲ್ಲ. ಸೇರಲೇಬೇಕು.”
“ಕೆಲಸ ಮಾಡ್ತಾ ಬಿ.ಎಡ್. ಮಾಡಿಕೊಂಡರೆ ಒಳ್ಳೆಯದಲ್ವಾ?”
“ಅದೇನೋ ನಿಜ. ನಿನ್ನ ಮದುವೆ ವಿಚಾರ ಎಲ್ಲಿಗೆ ಬಂತು?”
“ನನ್ನ ತಮ್ಮ ಪಿ.ಯು.ಸಿ.ಗೆ ಬರ‍್ತಿದ್ದಾನೆ. ಅವನ ಪಿ.ಯು.ಸಿ ಮುಗಿಯುವವರೆಗೂ ಮದುವೆ ಆಗೋದು ಬೇಡ ಅನ್ನಿಸ್ತಿದೆ.”
“ನನಗೇನೋ ನೀನು ನಿನ್ನ ತಮ್ಮನ ಬಿ.ಇ. ಮುಗಿಯುವವರೆಗೂ ಮದುವೆಯಾಗದಿರುವುದು ಒಳ್ಳೆಯದು ಅನ್ನಿಸತ್ತೆ. ಇಷ್ಟು ಬೇಗ ಯಾಕೆ ಮದುವೆಯಾಗಬೇಕು? ಎಷ್ಟು ಜನ 30 ವರ್ಷಕ್ಕೆ ಮದುವೆ ಆಗಿಲ್ಲ?” ಅಮೃತಾ ಹೇಳಿದಳು.
“ಆರ್.ಜಿ. ಇವಳೂಂದ್ರೆ ಪ್ರಾಣ ಬಿಡ್ತಾನೆ. ಅವನು ಒಬ್ಬನೇ ಮಗ. ಅವನು ಇನ್ನೂ 5-6 ವರ್ಷ ಮದುವೆ ಆಗದೇ ಇರಕ್ಕಾಗತ್ತಾ? ಅವರಪ್ಪ-ಅಮ್ಮ ಬೇರೆ ಹುಡುಗೀನ್ನ ಮದುವೆಯಾಗೂಂತ ಒತ್ತಾಯ ತರಬಹುದಲ್ವಾ?”
“ಆರ್.ಜಿ. ಒಪ್ತಾನಾ?”
“ತಂದೆ-ತಾಯಿಯರ ಮನಸ್ಸು ಬೇಜಾರು ಮಾಡಕ್ಕಾಗದೆ ಒಪ್ಪಬಹುದು.”
“ದಯವಿಟ್ಟು ನನ್ನ ಮದುವೆ ವಿಚಾರ ಮಾತಾಡಬೇಡಿ. ನನಗೆ ಕಷ್ಟವಾಗತ್ತೆ…..”
ಅವರು ನಗುತ್ತಾ ಸುಮ್ಮನಾದರು. ಅವಳು 4 ಗಂಟೆಗೆ ವಾಪಸ್ಸಾದಳು.
“ಆರ್.ಜಿ. ಬಂದಿದ್ದ. ಅವನಿಗೆ ಶ್ರೀರಂಗಪಟ್ಟಣದ ಹತ್ತಿರದ ಕಾಲೇಜ್‌ನಲ್ಲಿ ಕೆಲಸ ಸಿಗುವಂತಿದೆಯಂತೆ.”
“ಹೌದಾ? ವೆರಿಗುಡ್. ಅಮೃತಾ-ಬಕುಳಾಗೂ ಕೆಲಸ ಸಿಕ್ಕಿದೆ. ಸಿಂಧು-ಕೃತಿಕಾದೇ ಗೊತ್ತಾಗಲಿಲ್ಲ.”
“ಅವರಿಬ್ಬರೂ ಮದುವೆಯಾಗ್ತಾರೆ. ಕೆಲಸಕ್ಕೆ ಹೋಗೋದು ಡೌಟು.”
ವಾರುಣಿ ಆರ್.ಜಿ.ಗೆ ಅಭಿನಂದನೆ ಹೇಳಲು ಕಾಲ್ ಮಾಡಿದಳು. ಅವನು ರಿಸೀವ್ ಮಾಡಲಿಲ್ಲ.
ಮರುದಿನ ಬುಧವಾರ ಅವಳು ಪೇಪರ್ ಓದುತ್ತಾ ಕುಳಿತಿರುವಾಗ ಶಕುಂತಲಾ ಬಂದು ತಲೆಗೆ ಎಣ್ಣೆ ಒತ್ತಿದರು.
“ನಾನು ಭಾನುವಾರ ತಲೆಗೆ ಸ್ನಾನ ಮಾಡಿದ್ದೆ. ಈಗ್ಯಾಕೆ ಎಣ್ಣೆ ಹಚ್ಚಿದೆ?”
“ನಿನ್ನ ಶ್ಯಾಂಪೂ ಸ್ನಾನದಿಂದ ಕೂದಲು ಹೇಗಾಗಿದೆ ನೋಡು. ಅರ್ಧಗಂಟೆ ನೆನೆದು ಸೀಗೆಪುಡಿ ಹಚ್ಚಿಕೊಂಡು ಸ್ನಾನಮಾಡು.”
ಸಿಂಪಲ್ ಆಗಿ ಉಪ್ಪಿಟ್ಟು ಮಾಡಿದ್ದರು ಚಂದ್ರಾವತಿ. ಅವಳು ತಿಂದು ಕೊಂಚ ಹೊತ್ತು ಬಿಟ್ಟು ಸ್ನಾನ ಮಾಡಿದಳು.
ಮಲ್ಲಿ ತಲೆ ಚೆನ್ನಾಗಿ ಒರೆಸಿ ಸಿಕ್ಕು ಬಿಡಿಸಿದಳು.
“ವರು, ಕೋಟೆ ಆಂಜನೇಯನ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರೋಣ ರೆಡಿಯಾಗು.”
“ರೆಡಿಯಾಗೋದು ಏನಿಲ್ಲಮ್ಮ. ತಲೆಗೆ ಬ್ಯಾಂಡ್ ಹಾಕಿಕೊಂಡು ರ‍್ತೀನಿ ಹೊರಡೋಣ.”
“ಹೋಗ್ತಿರೋದು ದೇವಸ್ಥಾನಕ್ಕೆ. ಸೀರೆ ಉಟ್ಟುಕೊಂಡು ಬಾ.”
ಶಕುಂತಲಾ ಬೂದಿಬಣ್ಣದ ಜರಿಯಂಚಿದ್ದ ಸೀರೆ ತೆಗೆದಿಟ್ಟಿದ್ದರು. ಅವಳು ಸೀರೆಯುಟ್ಟು ರೆಡಿಯಾದಳು.
ಅವಳು ಹೊರಗೆ ಬಂದಾಗ ರಘುಪತಿ-ರಮಾ ಒಳಗೆ ಬಂದರು.
“ಆಂಟಿ ಹೇಗಿದ್ದೀರಾ? ಯಾವಾಗ ಬಂದ್ರಿ?”
“ಎರಡು ದಿನ ಆಯಿತು. ಲೆಕ್ಚರರ್ ಮಗನ್ನ ನೋಡುವ ಆಸೆಯಾಯಿತು.”
“ಅಮ್ಮನ ಡೈಲಾಗೇ ಹೇಳ್ತಿದ್ದೀರಲ್ಲಾ? ಕೂತ್ಕೊಳ್ಳಿ.”
“ಹೊರಗೆ ಹೊರಟಿದ್ರಾ?”
“ಕೋಟೆ ಆಂಜನೇಯನ ದೇವಸ್ಥಾನಕ್ಕೆ ಹೊರಟಿದ್ವಿ………”
“ನಾವು ಬಂದು ತೊಂದರೆಯಾಯ್ತಾ?”
“ಛೆ ಎಂತಹ ಮಾತಾಡ್ತಿದ್ದೀರಾ?” ಎಂದರು ರಾವ್.
ಆರ್.ಜಿ. ಹಾಯ್ ಎಂದವನು ತುಟಿ ಬಿಗಿದುಕೊಂಡು ಕುಳಿತಿದ್ದ.
“ಗೋಪಾಲ ಕಾರ್‌ನಲ್ಲಿರುವ ತಟ್ಟೆ ತೊಗೊಂಡು ಬಾ.”
ಆರ್.ಜಿ. ಹೋಗಿ ತಟ್ಟೆ ತುಂಬಾ ಹಣ್ಣು, ಹೂವು, ಎಲೆ, ಅಡಿಕೆ ತಂದು ಟೀಪಾಯ್ ಮೇಲೆ ಇರಿಸಿದ.
ತಕ್ಷಣ ರಘುಪತಿ ದಂಪತಿಗಳು ಹೂವು, ಹಣ್ಣಿನ ತಟ್ಟೆಯನ್ನು ಶಕುಂತಲ-ರಾವ್ ದಂಪತಿಗಳ ಮುಂದಿಟ್ಟು ಕೈ ಮುಗಿದು ಹೇಳಿದರು.
“ದಯವಿಟ್ಟು ನಿಮ್ಮ ಮಗಳು ವಾರುಣಿಯನ್ನು ನಮ್ಮ ಗೋಪಿಗೆ ಕೊಟ್ಟು ನಮ್ಮ ಮನೆ ಬೆಳಗಿಸಿ. ನಮ್ಮ ಮನೆಗೆ ತಕ್ಕ ಸೊಸೆ ಅವಳು”
ವಾರುಣಿಗೆ ಶಾಕ್ ಆಯಿತು.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45155
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು
