ಕಾದಂಬರಿ

ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 41

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
12.30-ಒಂದು ಗಂಟೆಯ ಹೊತ್ತಿಗೆ ಶರು-ದೇವಕಿ ಹಿಂದಿರುಗಿದರು. ಶರು ತಾನಾಗಿ ಹತ್ತಿರ ಬಂದು ಅಕ್ಕನನ್ನು ಅಪ್ಪಿಕೊಂಡು ಕೇಳಿದಳು. “ಹೇಗಿದ್ದೀಯಕ್ಕಾ?”
“ಚೆನ್ನಾಗಿದ್ದೀನಿ…….”
“ನನಗೆ ಅಲ್ಲಿ ಹೊತ್ತು ಹೋಗೋದೇ ಕಷ್ಟ. ನಾಲ್ಕು ದಿನ ಇದ್ದು ಹೋಗೋಣಾಂತ ಬಂದೆ.”

ವರು ಏನೂ ಮಾತಾಡಲಿಲ್ಲ. ದೇವಕಿ ಮಾತ್ರ ವರು ಪರೀಕ್ಷೆ ಕೆಲಸದ ಬಗ್ಗೆ ಕೇಳಿದಳು.
“ಹಾಗಾದ್ರೆ ಕೆಲಸ ಗ್ಯಾರಂಟಿ ಅನ್ನು. ಮನೆ ನೋಡಿದ್ದೀಯಾ?”
“ಕೆಲಸ ಸಿಕ್ಕ ಮೇಲೆ ಕಾಲೇಜಿಗೆ ಹತ್ತಿರವಿರುವ ಹಾಗೆ ಮನೆ ನೋಡೋಣಾಂತಿದ್ದೇನೆ.”
“ಎರಡು ರೂಮ್ ಆದರೂ ಬೇಕಲ್ವಾ?”
“ಹೌದು ಆಂಟಿ…..”
“ಆರ್.ಜಿ ಏನ್ಮಾಡ್ತಾನೆ?”
“ಸಧ್ಯಕ್ಕೆ ಊರಿಗೆ ಹೋಗಿದ್ದಾನೆ. ನೋಡಬೇಕು ಏನು ಮಾಡ್ತಾರೋ?”
ಬೇಕೆಂದೇ ಅವಳು ಆರ್.ಜಿ. ಕೆಲಸ ಮಾಡಬೇಕೆಂದಿರುವ ವಿಚಾರ ಹೇಳಲಿಲ್ಲ.
ಅಷ್ಟರಲ್ಲಿ ಶಕುಂತಲ ಊಟಕ್ಕೆ ಕರೆದರು.
ವರು ಊಟ ಮಾಡಿ ಮಲಗಿಬಿಟ್ಟಳು. ಅವಳಿಗೆ ತಂಗಿಯ ಜೊತೆ ಎಂದಿನ ಹಾಗೆ ಮಾತನಾಡಲು ಆಗಲಿಲ್ಲ.

ಅವಳು ನಾಲ್ಕು ಗಂಟೆಗೆ ಎದ್ದು ಮುಖ ತೊಳೆದಳು.
“ಮಾನಸಾನ್ನ ನೋಡಕ್ಕೆ ಹೋಗ್ತೀಯಾ?”
“ಇಲ್ಲಮ್ಮ. ಇವತ್ತು ಆರಾಮವಾಗಿ ಮನೆಯಲ್ಲರ‍್ತೀನಿ.”
ಸಾಯಂಕಾಲ ಆರುಗಂಟೆಯ ಹೊತ್ತಿಗೆ ಶಿವಶಂಕರ, ಸುಧಾಕರ, ಜಾನಕಿ ಬಂದರು.
“ಏನೇ ವರು ಕೆಲಸ ಸಿಗುವ ಹಾಗಿದೆಯಂತೆ?”
“ಹೌದು. ಆದರೆ ಒಳ್ಳೆಯ ಮಾರ್ಕ್ಸ್ ಬರಬೇಕು ಅಷ್ಟೆ.”
“ಆಮೇಲೆ ನಿಮ್ಮ ಫ್ಯಾಮಿಲಿ ಮೈಸೂರಿಗೆ ಶಿಫ್ಟಾ?”
“ಹೌದು ಚಿಕ್ಕಮ್ಮ.”
“ಮೈಸೂರು ನನಗೂ ಇಷ್ಟ. ಅಲ್ಲಿಗೆ ವರ್ಗಮಾಡಿಸಿಕೊಳ್ಳುವ ಆಸೆ ಇತ್ತು. ಆದರೆ ಈಗಲೇಬೇಡ. ರಿಟೈರ್ ಆದಮೇಲೆ ಮೈಸೂರಲ್ಲಿ ಸೆಟ್ಲ್ ಆಗೋಣ ಅನ್ನಿಸಿತು.”
“ಆ ವೇಳೆಗೆ ಮೈಸೂರು ಇನ್ನೊಂದು ಬೆಂಗಳೂರು ಆಗಿರತ್ತೆ” ಶಿವಶಂಕರ ಹೇಳಿದ.

ರಾವ್ ಎಂದಿನಂತಿದ್ದರು. ಆದರೆ ಚಿಕ್ಕ ಮಗಳ ಜೊತೆ ಮಾತನಾಡುವುದನ್ನು ಅವಾಯ್ಡ್ ಮಾಡುತ್ತಿದ್ದರು. ಶರು ಮಾತ್ರ ಎಲ್ಲರ ಜೊತೆ ಮಾತನಾಡಲು ತುಂಬಾ ಉತ್ಸಾಹ ತೋರುತ್ತಿದ್ದಳು. ತಾಯಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಳು. ಹಳ್ಳಿಯ ಬಗ್ಗೆ, ಅಲ್ಲಿಯ ಜನರ ಜೀವನದ ಬಗ್ಗೆ, ತಮ್ಮ ಮನೆ ಬಗ್ಗೆ ಎಡಬಿಡದೆ ಹೇಳುತ್ತಲೇ ಇರುತ್ತಿದ್ದಳು.
ಒಂದು ಭಾನುವಾರ ದೇವಕಿ, ಅವಳ ಗಂಡ ಮಡಿಕೇರಿಗೆ ಹೋಗಿದ್ದರು. ಜಾನಕಿ ಸುಧಾಕರ ಯಾರಿಗೊ ಹುಷಾರಿಲ್ಲವೆಂದು ನೋಡಲು ಹೋಗಿದ್ದರು. ಶೋಭಾ-ಶಿವು ಬ್ರೋಕರ್ ಮನೆಗಳನ್ನು ತೋರಿಸುವುದಾಗಿ ಹೇಳಿದ್ದ. ಅಲ್ಲಿಗೆ ಹೋಗಿದ್ದರು. ರಾವ್ ಫ್ಯಾಮಿಲಿ ಮಾತ್ರ ಮನೆಯಲ್ಲಿತ್ತು.
ಶರು ತಂದೆಯ ಮುಂದೆ ನಿಂತು ಹೇಳಿದಳು. “ಅಪ್ಪ, ನಾನು ನಿಮ್ಮ ಹತ್ತಿರ ಮಾತಾಡಬೇಕು.”
“ಏನು ವಿಷಯ?”
“ಅಮ್ಮ ವರೂನ್ನ ಕರೆಯಿರಿ ಹೇಳ್ತೀನಿ.”
ಶಕುಂತಲ, ವಾರುಣಿ ಬಂದು ಕುಳಿತರು.

“ದಯವಿಟ್ಟು ನೀವು ನಾನು ಹೇಳುವುದನ್ನು ಗಮನವಿಟ್ಟು ಕೇಳಿ. ಮಧ್ಯೆ ಮಧ್ಯೆ ಪ್ರಶ್ನಿಸಬೇಡಿ.”
“ಹೇಳು.”
“ಗೋಪಿ ಗುರುಕುಲ ಮಾದರಿಯ ಶಾಲೆ ಆರಂಭಿಸಲು ನೀವು ಸಲಹೆ ಕೊಟ್ಟಿದ್ದೀರಾಂತ ನನಗೆ ಗೊತ್ತು. ಆ ಶಾಲೆಯಲ್ಲೇ ನಿಮ್ಮಿಬ್ಬರಿಗೂ ಕೆಲಸ ಕೊಟ್ಟು ಒಳ್ಳೆಯ ಸಂಬಳ ಫಿಕ್ಸ್ ಮಾಡ್ತಾರೆ. ಒಳ್ಳೆಯ ಸಂಬಳ ಬರುವುದರಿಂದ ಶಂಕರನ್ನ ಒಳ್ಳೆಯ ಬೋರ್ಡಿಂಗ್ ಶಾಲೆಯಲ್ಲಿ ಬಿಡ್ತೀರ ಅಲ್ವಾ?”
“ಹೌದು” ಎಂದರು ರಾವ್.
“ಗುರುಕುಲದಲ್ಲಿ ಫ್ರೀ ಎಜುಕೇಷನ್ ಕೊಡ್ತಾನಂತೆ. ಸ್ಟಾಫ್‌ಗೆಲ್ಲಾ ಸಂಬಳ ಕೊಡಲು ಅವನ ಹತ್ತಿರ ಕೋಟ್ಯಾಂತರ ರೂಪಾಯಿ ಇದೆಯಾ? ಅವನು ದೊಡ್ಡಪ್ಪಂದಿರನ್ನು ಕೇಳಬೇಕು. ಗೋಪಿ ಗುರುಕುಲ ಮಾದರಿ ಶಾಲೆ ತೆಗೆಯೋದು ನೀವುಗಳು ಅಲ್ಲಿ ಬಂದಿರೋದು ಅರ‍್ಯಾರಿಗೂ ಇಷ್ಟವಿಲ್ಲ. ಅವರು ಸತ್ಯ ಹೇಳಕ್ಕಾಗದೆ ಒದ್ದಾಡ್ತಾ ಇದ್ದಾರೆ.”
“ಈ ವಿಚಾರ ಹೇಳೂಂತ ನಿನ್ನನ್ನು ಕಳಿಸಿದ್ರಾ?”
ಅವಳು ಉತ್ತರಿಸಲಿಲ್ಲ.
“ಶರು ಒಂದು ಮಾತು ಹೇಳಲಾ? ಮದುವೆಯಾದ ಮೇಲೆ ನೀನು ಸುಳ್ಳು ಹೇಳುವುದು ಜಾಸ್ತಿಯಾಗಿದೆ. ಆದರೆ ಹೀಗೆ ಸುಳ್ಳು ಹೇಳುವುದರಿಂದ ನಿನಗೇನು ಲಾಭವಾಗತ್ತೇಂತ ನನಗೆ ಅರ್ಥವಾಗ್ತಿಲ್ಲ” ಶಕುಂತಲಾ ಹೇಳಿದರು.
“ಅವಳ ಮಾತು ಕೇಳಿದರೆ ನಿನಗೆ ತಿಳಿಯುತ್ತಿಲ್ಲವಾ? ಅವಳಿನ್ನೂ ಆ ಮನೆ ಸೊಸೆಯಾಗಿಲ್ಲ. ತನ್ನ ಮನೆಯ ಬಗ್ಗೆ ಏನೂ ತಿಳಿಯದ ಇವಳು ಸುಳ್ಳು ಹೇಳಿ ನಮ್ಮನ್ನು ಏಮಾರಿಸ್ತಿದ್ದಾಳೆ.”
“ಅಪ್ಪ.”
“ನಾನು ಹೇಳ್ತಿರೋದು ನಿಜ. ನಿಮ್ಮನೆಯವರೆಲ್ಲಾ ನಿನ್ನನ್ನು ಸೊಸೆ ಅಂತ ಪರಿಗಣಿಸೇ ಇಲ್ಲ. ಅದಕ್ಕೆ ಅವರು ನಿನಗೇನೂ ಹೇಳಿಲ್ಲ. ನಾನೂ ಏನೂ ಹೇಳಲ್ಲ. ನಿಮ್ಮ ಕುಟುಂಬದಲ್ಲಿ ಏನೇನು ಬದಲಾವಣೆಯಾಗಿದೇಂತ ನೀನೇ ನಿನ್ನ ಗಂಡನನ್ನು ಕೇಳು.”
ಶರು ಒಂದು ರೀತಿಯ ಗೊಂದಕ್ಕೊಳಗಾದಳು.

ವಾರುಣಿ ಆರಾಮವಾಗಿ ಕಾಲಕಳೆಯುತ್ತಿದ್ದಳು. ಮಾನಸ ಮನೆಗೆ ಹೋಗಿ ಬಂದಳು. ರಾಗಿಣಿ, ಚಂದ್ರಾವತಿ, ರೇಖಾ ಆಗಾಗ್ಗೆ ಫೋನ್ ಮಾಡುತ್ತಿದ್ದರು. ವಾರದಲ್ಲಿ ಆರ್.ಜಿ. ಎರಡು ಸಲ ಬಂದು ಹೋಗಿದ್ದ.
“ಮೈಸೂರಿಗೆ ಹೋಗಿ ಬಂದೆ. ಚಂದ್ರಾವತಿ ಆಂಟಿ ಮನೆ ಕ್ಲೀನ್ ಮಾಡಿಸ್ತಿದ್ದಾರೆ. ಅವರ ಹಳೆಯ ಟೆನೆಂಟ್ ನಾಳೆ ನಾಡಿದ್ದರಲ್ಲಿ ರ‍್ತಾರಂತೆ.”
“ಆಂಟಿ ನನಗೂ ಫೋನ್ ಮಾಡಿದ್ರು. ಕಾಲೇಜ್ ಕಡೆ ಹೋಗಿದ್ರಾ? ಯಾವಾಗ ರಿಸಲ್ಟ್?”
“ಹೋಗಿದ್ದೆ. ಈ ತಿಂಗಳ ಕೊನೆಯಲ್ಲಿ ರಿಸಲ್ಟ್ ಬರಬಹುದು.”
“ಇನ್ನೂ ಹದಿನೈದು ದಿನಗಳು!”
“ಯಾಕೆ ಮೈಸೂರು ಬಿಟ್ಟಿರಕ್ಕೆ ಆಗ್ತಿಲ್ವಾ?”
“ಮೈಸೂರು ನನಗಿಷ್ಟವಾದ ಜಾಗ. ನಾನೆಲ್ಲಿ ಅದನ್ನು ಬಿಡ್ತೇನೆ.”
ಒಂದು ವಾರ ಕಳೆಯಿತು. ಶಕುಂತಲಾ ತಮ್ಮ ಕುಟುಂಬದ ವಸ್ತುಗಳನ್ನು ಪ್ಯಾಕ್ ಮಾಡುತ್ತಿದ್ದರು. ಅಡಿಗೆ ಮನೆ ಸಾಮಾನುಗಳ ತಂಟೆಗೆ ಹೋಗಿರಲಿಲ್ಲ.

ಒಂದು ಬೆಳಿಗ್ಗೆ ರೇಖಾ ಫೋನ್ ಮಾಡಿದಳು.
“ಬಿಡುವಾಗಿದ್ದೀಯಾ?”
“ಬಿಡುವಾಗಿದ್ದೀನಿ ಹೇಳು.”
“ಮನೆಯಿಂದ ಹೊರಗೆ ಬಾ.”
“ಬರ‍್ತೀನಿ” ಎನ್ನುತ್ತಾ ಅವಳು ಹೊರನಡೆದು ಕಟ್ಟೆಯ ಮೇಲೆ ಕುಳಿತಳು.

“ನಿನ್ನದು, ಆರ್.ಜಿ. ಮದುವೆ ವಿಚಾರ ಎಲ್ಲಿಗೆ ಬಂತು?”
“ಆ ವಿಚಾರ ಯಾರೂ ಮಾತಾಡ್ತಿಲ್ಲ ರೇಖಾ?”
“ಆರ್.ಜಿ. ಬಂದಿದ್ರಾ?”
“ಬಂದಿದ್ರು. ಆದರೆ ಈ ವಿಚಾರ ಮಾತಾಡಲಿಲ್ಲ.”
“ನಿಮಗೆ ತಿಳಿಯದ ಹಾಗೆ ದೊಡ್ಡವರು ಈ ವಿಚಾರ ಮಾತಾಡಿದ್ದಾರಾ?”
“ಇಲ್ಲ ರೇಖಾ – ಯಾಕೆ?”
“ನೆನ್ನೆ ರಾತ್ರಿ ನಮ್ಮತ್ತೆ ಯಾರ ಹತ್ತಿರಾನೋ ಮಾತಾಡ್ತಿದ್ರು. `ಒಂದೇ ಮನೆಯ ಅಕ್ಕ-ತಂಗಿಯರು ಒಂದೇ ಮನೆಯ ಸೊಸೆಯರಾದರೆ ಆ ಮನೆ ಸರ್ವನಾಶವಾಗತ್ತೆ. ಯೋಚನೆ ಮಾಡಿ ನಿರ್ಧಾರಕ್ಕೆ ಬನ್ನೀಂತ.’ ನನಗೆ ಗಾಬರಿಯಾಯ್ತು.”
“ಹೌದಾ?”
“ನೀವು ಹುಷಾರಾಗಿರಿ. ಬೇಗ ನಿಮ್ಮ ಸಂಬಂಧಗಳಿಗೆ ಒಂದು ಅರ್ಥ ಕೊಡಿ.”

ಅವಳು ಉತ್ತರಿಸದೆ ಕಾಲ್ ಕಟ್ ಮಾಡಿದಳು. ನಂತರ ಮನೆ ಒಳಗೆ ಹೋಗಿ ಹಾಸಿಗೆಯ ಮೇಲೆ ಉರುಳಿದಳು. ಮನಸ್ಸು ಆರ್.ಜಿ. ಬಗ್ಗೆ ಯೋಚಿಸಿತು. ತನ್ನ ಮನಸ್ಸು ಅವನಿಗೆ ಸೋತು ಹೋಗಿದೆಯೆಂದು ಅವಳಿಗೆ ಅರಿವಾಗಿತ್ತು. ಅವನೂ ತನ್ನನ್ನು ತುಂಬಾ ಪ್ರೀತಿಸುತ್ತಾನೆಂದು ಅವಳ ಹೃದಯ ಒಪ್ಪಿಕೊಂಡಿತ್ತು. ಅವಳು ನರ್ಸಿಂಗ್ ಹೋಂನಲ್ಲಿದ್ದಾಗ ಅವನು ತೋರಿದ ಕಾಳಜಿ, ತನ್ನನ್ನು ಹಚ್ಚಿಕೊಂಡಿದ್ದ ರೀತಿ, ತನಗಾಗಿ ಅಣ್ಣನ ಮದುವೆಗೆ ತಡವಾಗಿ ಹೋಗಿದ್ದು, ತನಗಾಗಿ ಹರಕೆ ಹೊತ್ತಿದ್ದು ಅವಳ ನೆನಪಿನಲ್ಲಿತ್ತು. ಚಂದ್ರಾ ಆಂಟಿ ಆಗಾಗ್ಗೆ “ಆರ್.ಜಿ.ಯನ್ನು ನಿರಾಶೆಗೊಳಿಸಬೇಡ. ಅವನು ನಿನ್ನನ್ನು ತುಂಬಾ ಪ್ರೀತಿಸ್ತಾನೆ. ನೀನೂ ಅವನನ್ನು ಇಷ್ಟಪಡ್ತೀಯಾಂತ ನನಗೆ ಗೊತ್ತು” ಎನ್ನುತ್ತಿದ್ದರು.
ತಿರುಪತಿಗೆ ಹೋಗಿದ್ದಾಗ ಬಕುಳಾ, ಅಮೃತಾ ಅವನ ಹೆಸರು ಹೇಳಿ ರೇಗಿಸುತ್ತಿದ್ದರು.

“ನಿನಗೋಸ್ಕರಾನೇ ಅವನು ಲವ್ ಪೊಯೆಮ್ಸ್ ಪ್ರೆಸೆಂಟ್ ಮಾಡಿದ್ದು ಕಣೆ. ಅವನು ಪ್ರೆಸೆಂಟ್ ಮಾಡುವಾಗ ತಾನು ಎಲ್ಲಿದ್ದೀನಿ ಅನ್ನುವುದನ್ನು ಮರೆತಂತಿತ್ತು. ಆರ್.ಜಿ.ಗಿಂತ ನಿನಗೆ ಒಳ್ಳೆಯ ಹುಡುಗ ಸಿಗ್ತಾನಾ?” ಎಂದು ಕೇಳಿದ್ದರು. ಅವನ ಪ್ರೆಸೆಂಟೇಷನ್ ಮುಗಿದಾಗ ಚಲಪತಿರಾವ್ ಅವನನ್ನು ಅಭಿನಂದಿಸಿ ಹತ್ತಿರ ಕರೆದು ಪ್ರಶ್ನಿಸಿದಾಗ ಅವನು ನಾಚಿ ನೀರಾಗಿ ತಲೆ ಅಲ್ಲಾಡಿಸಿದ್ದನ್ನು ಅವಳು ಗಮನಿಸಿದ್ದಳು.
ನಂತರ ತಿರುಪತಿಯಿಂದ ಹೈದರಾಬಾದ್‌ಗೆ ಹೋಗುವ ಬಸ್‌ನಲ್ಲಿ ಅವನ ಗೆಳೆಯರು ಅವನನ್ನು ರೇಗಿಸುತ್ತಿದ್ದುದನ್ನು ಅವಳು ಗಮನಿಸಿದ್ದಳು. ಅವನ ಕ್ಲೋಸ್‌ಫ್ರೆಂಡ್ ಕಿಟ್ಟಿ “ಆರ್.ಜಿ. ವೇರ್ ಈಸ್ ಯುವರ್ ಲವ್?” ಎಂದು ಕೇಳಿದಾಗ ನಿನ್ನ ಪ್ರೀತಿಯನ್ನು ಅವರ ಮುಂದೆ ನಿಲ್ಲಿಸಬೇಕಾಗಿತ್ತು ಕಣೋ. ಯಾಕೋ ಸುಮ್ಮನಿದ್ದೆ?” ಎಂದು ತಮಾಷೆ ಮಾಡುತ್ತಿದ್ದುದು ಅವಳ ಕಿವಿಗೂ ಬಿದ್ದಿತ್ತು. ಆರ್.ಜಿ.ಗೆ ಮಾತ್ರವಲ್ಲ ಅವನ ತಾಯಿ-ತಂದೆಗೂ ತಾನು ಇಷ್ಟವೆಂದು ಅವಳಿಗೆ ಗೊತ್ತಿತ್ತು. ಅವನ ಅಕ್ಕ, ಅವನ ದೊಡ್ಡಮ್ಮಂದಿರು, ಅವಳ ಬಗ್ಗೆ ವಿಪರೀತ ಪ್ರೀತಿ ತೋರಿದ್ದರು. ತನ್ನ ತಂದೆ-ತಾಯಿಯರಿಗೂ ಅವನೆಂದರೆ ಪ್ರೀತಿ ಗೌರವ. ಅವನು ನನ್ನಿಂದ ದೂರವಾಗಲು ಸಾಧ್ಯವೆ?” ಎಂದುಕೊಂಡು ನಕ್ಕಳು.

ಪುನಃ ಹತ್ತು ದಿನಗಳು ಕಳೆಯುವಷ್ಟರಲ್ಲಿ ರಿಸಲ್ಟ್ ಬಂತು. ಆರ್.ಜಿ. ಫಸ್ಟ್ ರ‍್ಯಾಂಕ್ ಬಂದಿದ್ದ. ವಾರುಣಿ ಸೆಕೆಂಡ್ ರ‍್ಯಾಂಕ್ ಬಂದಿದ್ದಳು. ವಾರುಣಿ ತಕ್ಷಣ ಮೈಸೂರಿಗೆ ಧಾವಿಸಿದಳು. ಚಂದ್ರಾವತಿ ಅವಳಿಗಾಗಿ ಕಾದಿದ್ದರು.
“ನೀನು ಸೆಕೆಂಡ್ ರ‍್ಯಾಂಕ್ ಬಂದಿದ್ದು ತುಂಬಾ ಖುಷಿಯಾಗಿದೆ. ಆದರೆ ಆರ್.ಜಿ. ನಿನ್ನನ್ನು ಸೋಲಿಸಿದನಲ್ಲಾ………?”
“ಅವರು ನನಗಿಂತ ಹೆಚ್ಚು ಕಷ್ಟಪಟ್ಟಿದ್ದರು. ಅವರ ಇಂಗ್ಲೀಷ್ ಆಕ್ಸೆಂಟ್ ತುಂಬಾ ಚೆನ್ನಾಗಿದೆ. ವೈವಾದಲ್ಲಿ ಅವರು ತುಂಬಾ ಚೆನ್ನಾಗಿ ಉತ್ತರಕೊಟ್ಟರಂತೆ. ಆರ್.ಜಿ. ಬಂದಿಲ್ವಾ?”
“ಇನ್ನು ಅರ್ಧಗಂಟೆಯಲ್ಲಿ ಇಲ್ಲಿರ‍್ತಾನೆ.”
“ಊರಿಂದ ಬರ‍್ತಿದ್ದಾರಾ?”
“ಹುಂ. ನೆನ್ನೇನೇ ನಮ್ಮ ಮಲ್ಲಿ ಅವಳ ಗಂಡ, ಮಲ್ಲಿ ತಂಗಿ ಅವಳ ಗಂಡ ಎಲ್ಲರೂ ಹೋಗಿ ಮನೆ ಕ್ಲೀನ್ ಮಾಡಿಬಂದರು. ಆರ್.ಜಿ. ಇವತ್ತು ಬರ‍್ತಿದ್ದಾನೆ. ಆಮೇಲೆ ಅವನ ತಾಯಿ-ತಂದೆ ಬರ‍್ತಾರೆ.”

ಅರ್ಧಗಂಟೆಯಲ್ಲಿ ಆರ್.ಜಿ. ಬಂದ. ಇಬ್ಬರೂ ಒಬ್ಬರಿಗೊಬ್ಬರು ಅಭಿನಂದನೆ ಹೇಳಿಕೊಂಡರು.
“ವಾರುಣಿ, ನಾಳೆ-ಆರಾಧ್ಯ ಸರ್. ಬರಲು ಹೇಳಿದ್ದಾರೆ. ನಿಮಗೂ ಹೇಳಿದ್ದಾರಾ?”
“ಹುಂ…. ಬೆಳಿಗ್ಗೆ 12 ಗಂಟೆಗೆ ಬಂದು ಮೀಟ್ ಮಾಡಿ” ಅಂದ್ರು.
“ನನಗೆ ಮಧ್ಯಾಹ್ನ ಬರಲು ಹೇಳಿದ್ದಾರೆ.”
“ಹೌದಾ?”
“ನಾನು ಬೆಳಿಗ್ಗೆ ನಿಮ್ಮನ್ನು ಡ್ರಾಪ್ ಮಾಡ್ತೀನಿ.”
ಅವಳು ಒಪ್ಪಿದಳು.

ಊಟ ಮಾಡುವಾಗ ಚಂದ್ರಾವತಿ ಹೇಳಿದರು. “ಒಂದು ಗುಡ್‌ನ್ಯೂಸ್. ನಮ್ಮ ಟೆನೆಂಟ್ ಪರ‍್ಮನೆಂಟಾಗಿ ಯು.ಎಸ್.ಗೆ ಹೊರಟುಹೋದರು. ಅವರು ಅಲ್ಲೇ ಸೆಟ್ಲ್ ಆಗ್ತಾರಂತೆ. ಸಾಮಾನು ಸರಂಜಾಮು ಎಲ್ಲಾ ಬಿಟ್ಟು ಹೋದರು.”
“ಬೇರೆಯವರು ಬಂದ್ರಾ?”
“ಬೇರೆಯವರಿಗೆ ಕೊಡುವ ಮೊದಲು ಕೆಲವು ಬದಲಾವಣೆ ಮಾಡ್ತಿದ್ದೇನೆ……”
“ಬದಲಾವಣೇನಾ?”
“ಒಂದು ಲಿಫ್ಟ್ ಹಾಕಿಸೋಣಾಂತ ಇದ್ದೇನೆ. ಕಾಂಪೌಂಡ್ ಫೇಸ್ ಮಾಡುತ್ತದಲ್ಲಾ ರೂಮು. ಅದಕ್ಕೆ ಇನ್ನೊಂದು ಬಾಗಿಲು ಇಡಿಸಿ ಮೆಟ್ಟಲುಗಳಿಂದ ಆ ರೂಮ್‌ಗೆ ಹೋಗುವಂತೆ ಮಾಡಬೇಕು.”
“ಲಿಫ್ಟ್ ಯಾಕೆ ಆಂಟಿ?”
“ವಯಸ್ಸಾದವರಿಗೆ ಹತ್ತಿ ಇಳಿಯುವುದು ಕಷ್ಟ ಅಲ್ವಾ ಅದಕ್ಕೋಸ್ಕರ.”
“ಅದಕ್ಕೆ ಯಾಕೆ ಲಿಫ್ಟ್ ಹಾಕಿಸ್ತೀರಾ? ಚಿಕ್ಕ ವಯಸ್ಸಿನವರಿಗೇ ಬಾಡಿಗೆಗೆ ಕೊಡಿ” ವಾರುಣಿ ಹೇಳಿದಳು.
“ಹಾಗಾಗಲ್ಲ ವರು……” ಎಂದರು ಆಂಟಿ.
“ಅವರು ಯಾರು ಬರಬೇಕೂಂತ ನಿರ್ಧಾರ ಮಾಡಿ ಮನೆ ರಿಪೇರಿ ಮಾಡಿಸ್ತಿದ್ದಾರೆ. ನೀವು ಮಾತನಾಡಿ ಪ್ರಯೋಜನವಿಲ್ಲ” ಎಂದ ಆರ್.ಜಿ. ನಗುತ್ತಾ.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45055
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

3 Comments on “ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 41

  1. ಧಾರಾವಾಹಿ…ಓದಿಸಿಕೊಂಡು ಹೋಗುತ್ತಿದೆ… ಕುತೂಹಲ ವನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲೂ ಸಾಗುತ್ತಿದೆ ಮೇಡಂ…

  2. ಮನಕ್ಕೆ ಮುದ ನೀಡುವಂತೆ ಮುಂದೆ ಸಾಗಿದ ಕಾದಂಬರಿಯ ಈ ಕಂತೂ ಸಹ ಇಷ್ಟವಾಯಿತು.

  3. ಪ್ರತಿ ಹಂತದಲ್ಲೂ ಕುತೂಹಲವನ್ನು ಉಳಿಸಿಕೊಂಡು ಹೋಗುತ್ತಿರುವ ಧಾರಾವಾಹಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *