ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟು ಸಾವಿನ ಮಧ್ಯೆ ಇರುವ ಬದುಕು ನಮ್ಮ ಕೈಲಿ. ಬಂದದ್ದೆಲ್ಲಾ ಬರಲಿ, ಗೋವಿಂದನ ದಯೆ ಇರಲಿ ಎಂದು ಹಾಡುತ್ತಾ ಬದುಕು ಸಾಗಿಸಿದವಳು ನಾನು. ಬದುಕು ನನ್ನ ಪಾಲಿಗೆ ನೋವು ನಲಿವು, ದುಃಖ ಸುಖ ಎಲ್ಲವನ್ನೂ ಸಮನಾಗಿ ನೀಡಿತ್ತು. ಬದುಕಿನಲ್ಲಿ ಎದುರಾದ ಅಡೆತಡೆಗಳನ್ನು ಧೈರ್ಯವಾಗಿ ಎದುರಿಸಿದೆ, ಬೀಸಿದ ಬಿರುಗಾಳಿಯ ಎದುರು ಅಚಲವಾಗಿ ನಿಂತೆ. ವಿದ್ಯೆ ನೀಡಿತ್ತು ಮನೋಬಲ, ಉದ್ಯೋಗ ನೀಡಿತ್ತು ಆತ್ಮವಿಶ್ವಾಸ. ಹೀಗೆ ಸಾಗಿತ್ತು ಜೊತೆಗಾರನೊಂದಿಗೆ ಬಾಳಬಂಡಿ. ನಾನು ಭಾವಜೀವಿಯಾದರೆ ನನ್ನವರದು ವ್ಯಾವಹಾರಿಕ ಮನೋಭಾವ. ಮಕ್ಕಳಿಬ್ಬರು ಸುಂದರವಾದ ಬದುಕು ಕಟ್ಟಿಕೊಂಡದ್ದನ್ನು ಕಂಡು ಸಂಭ್ರಮಿಸಿದೆವು. ಬದುಕಿನಲ್ಲಿ ಎದುರಾದ ಎಲ್ಲಾ ಸವಾಲುಗಳನ್ನೂ ಎದುರಿಸಿ, ಜೀವನ ಸಂಜೆಯನ್ನು ತಲುಪಿದ್ದೆವು. ಆಗಾಗ್ಗೆ ನಮ್ಮ ಅನುಭವಗಳನ್ನೂ ಮೆಲುಕು ಹಾಕುತ್ತಿದ್ದೆವು. ಹಲವು ಬಾರಿ ಅನುಭವಗಳು ಬದುಕಿನ ದಾರಿಯನ್ನು ತೋರುತ್ತಿದ್ದವು. ನೆನಪುಗಳು ಮನಸ್ಸಿಗೆ ಸಾಂತ್ವನ ನೀಡುತ್ತಿದ್ದವು. ಇದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯವೂ ಆಗಿತ್ತು.
ಒಮ್ಮೆ ನನ್ನೂರಿಗೆ ಒಂದು ಸಮಾರಂಭಕ್ಕೆ ಹೋಗಿ ಬಂದೆ. ಅದು ಚಿಕ್ಕಮ್ಮನ ಮಗಳ ‘ನುಡಿ ನಮನ’ ಕಾರ್ಯಕ್ರಮವಾಗಿತ್ತು. ಹಾಗೆಯೇ ಒಂದು ಸುತ್ತು ಬಂಧುಗಳ ಮನೆಗೆ ಹೋಗಿ ಬಂದೆವು. ಮೊದಲಿಗೆ 84 ವರ್ಷ ಹರಯದ ಗೌರಕ್ಕನವರ ಮನೆಗೆ ಭೇಟಿ. ಕೆಳ ಮಧ್ಯಮವರ್ಗದ ಕುಟುಂಬ. ಚಿಕ್ಕದಾದ ಚೊಕ್ಕದಾದ ಮನೆ, ಮನೆತುಂಬಾ ಗೌಜು ಗದ್ದಲ, ಮಗ ಸೊಸೆ, ಮೊಮ್ಮಕ್ಕಳು ಅಜ್ಜಿಯ ಸುತ್ತಮುತ್ತಲೂ ಇದ್ದರೆ, ಅವರ ತಮ್ಮ ತಂಗಿಯರೂ ಆವರ ಜೊತೆಯಲ್ಲಿ ವಾಸ. ಗೌರಕ್ಕನವರ ಮುಖದ ಮೆಲೆ ಸಂತೃಪ್ತ ಮನೋಭಾವ. ಬೆಳಗಾಗುತ್ತಿದ್ದ ಹಾಗೆ ತಮ್ಮನ ಜೊತೆ ಮನೆಯ ಮುಂದೆ ಒಂದು ಸಣ್ಣ ಸುತ್ತು, ಎಳೆ ಬಿಸಿಲಿನಲ್ಲಿ ಕುರ್ಚಿ ಹಾಕಿ ಕೂರಿಸುವ ತಮ್ಮ. ಸೊಸೆ ಅಡುಗೆ ಮಾಡಲು ಹೊರಟರೆ, ಸೊಪ್ಪು ತರಕಾರಿ ಬಿಡಿಸಿ ಕೊಡುವ ಕೆಲಸ. ಬೇಸರವಾದಾಗ ಟಿ.ವಿ. ನೋಡಜ್ಜಿ ಎಂದು ಹೇಳುವ ಮೊಮ್ಮಗಳು. ಕುರ್ಚಿಯ ಬಳಿ ಆಸರೆಯಾಗಿ ನಿಂತಿದ್ದ ಮೊಮ್ಮಗ, ಅವರಿಗೆ ನೀರು ಕೊಡುವ ಮೊಮ್ಮಗಳು, ಬಿಸಿ ಬಿಸಿ ತಿಂಡಿ ಕೊಡುವ ಸೊಸೆ ಎಲ್ಲವನ್ನೂ ಕಂಡು, ಎಷ್ಟು ಸಮಧುರವಾದ ವೃದ್ಧಾಪ್ಯ ಎಂದೆನಿಸಿತ್ತು. ಜೀವನ ನಡೆಸಲು ತೊಂದರೆಯಾಗದ ಹಾಗೆ ಮಗನ ಸಂಪಾದನೆ ಇದೆ. ಊರುಗೋಲಾಗಿ ಜೊತೆಯಲ್ಲಿ ಮೊಮ್ಮಕ್ಕಳು ಇದ್ದಾರೆ. ಜೀವನದ ಸಂಜೆ ಅಂದರೆ ಹೀಗಿರಬೇಕು ಎಂಬ ಭಾವ ಮೂಡಿತ್ತು. ಈ ಹಂತದಲ್ಲಿ ಹಣಕ್ಕಿಂತ ಕುಟುಂಬದವರ ಪ್ರೀತಿ, ಗೌರವ, ವಿಶ್ವಾಸವೇ ಹೆಚ್ಚು ಮುಖ್ಯ ಅಲ್ಲವೇ?
ಗೌರಕ್ಕನವರ ಮನೆಯಲ್ಲಿ ತಿಂಡಿ ತಿಂದು ನಮ್ಮ ಓರಗಿತ್ತಿಯ ಮನೆಗೆ ತೆರಳಿದೆವು. ಮಧ್ಯಮವರ್ಗದ ಕುಟುಂಬ. ನಮ್ಮ ಭಾವನವರು ತೀರಿಕೊಂಡ ಮೇಲೆ ಅವರೊಬ್ಬರೇ ದಾವಣಗೆರೆಯಲ್ಲಿ ಇರುತ್ತಿದ್ದರು. ಮಗಳು, ‘ಬಾಮ್ಮಾ ನಮ್ಮ ಜೊತೆ ಇರು’ ಎಂದು ಒತ್ತಾಯಿಸಿದರೆ, ಅವರು, ‘ಇದು ನಾನು ಬದುಕು ಕಟ್ಟಿಕೊಂಡ ಮನೆ. ನಾನು ನಿನ್ನ ಮನೆಗೆ ಬಂದರೆ, ಮನೆಯಲ್ಲಿ ದೀಪ ಹಚ್ಚುವವರು ಯಾರು?’ ಎಂದು ಸಬೂಬು ಹೇಳುತ್ತಿದ್ದರು. ಅಂದು ನಾವು ಅವರ ಮನೆಗೆ ಹೋದಾಗ, ಮನೆ ತುಂಬಾ ಜನ ಇದ್ದರು. ಮಾದೇವಕ್ಕನವರು ಸಂಭ್ರಮದಿಂದ ಹಿಂದಿನ ದಿನ ನಡೆದ ಘಟನೆಯನ್ನು ಹೇಳಿದರು. ನಾವು ಟೀ ಕುಡಿಯುತ್ತಾ ಅವರ ಮಾತುಗಳನ್ನು ಕೇಳಿದೆವು. ‘ನೆನ್ನೆ ಬೆಳಿಗ್ಗೆ ದೋಸೆಗೆ ಪಲ್ಯ ಮಾಡಲು ಗ್ಯಾಸ್ ಸ್ಟೌ ಮೇಲೆ ಆಲೂಗೆಡ್ಡೆ ಬೇಯಲು ಕುಕ್ಕರ್ ಇಟ್ಟು, ಹೊರಗೆ ಬಂದೆ. ಬಟ್ಟೆ ಮಡಿಚಿಡುವಾಗ ತಲೆ ಸುತ್ತು ಬಂದು ಹಾಗೆಯೇ ಕುಸಿದು ಬಿದ್ದು ಬಿಟ್ಟೆ. ಮೇಲೇಳಲು ಆಗಲೇ ಇಲ್ಲ. ಹಾಗೆಯೇ ತೆವಳುತ್ತಾ ಟೇಬಲ್ಲಿನ ಬಳಿ ಬಂದು ಮೊಬೈಲಿನಿಂದ ತಮ್ಮನಿಗೆ ಫೋನ್ ಮಾಡಿದೆ. ಸ್ಟೌ ಮೇಲೆ ಅಲೂಗೆಡ್ಡೆ ಬೇಯಲು ಇಟ್ಟಿದ್ದ ಕುಕ್ಕರ್ ಬ್ಲಾಸ್ಟ್ ಆದರೆ ಎಂಬ ಭಯ ಬೇರೆ. ಅರ್ಧ ಗಂಟೆಯಲ್ಲಿ ಅವರು ಬಂದು ನನ್ನ ಮೇಲೆತ್ತಿ ಕುರ್ಚಿ ಮೇಲೆ ಕೂರಿಸಿದರು. ನನ್ನದು ಧಡೂತಿ ದೇಹ ಬೇರೆ, ಅಕ್ಕಪಕ್ಕದವರು ಬಂದು ನನ್ನನ್ನು ಎತ್ತಲು ಹೋಗಿ, ಸೊಂಟ ಉಳುಕಿಸಿಕೊಂಡರೆ ಎಂಬ ಆತಂಕ. ಸಧ್ಯ, ನಾನು ಮನೆಯ ಹೊರಬಾಗಿಲ ಬಳಿ ಗುಡಿಸಿ ರಂಗೋಲಿ ಹಾಕಿದವಳು ಮರೆತು ಬಾಗಿಲನ್ನು ಹಾಕಿರಲಿಲ್ಲ, ಇಲ್ಲವಾದರೆ ಬಾಗಿಲನ್ನು ಒಡೆದು ತೆಗೆಯಬೇಕಾಗುತ್ತಿತ್ತು. ಅವರು ಸ್ಟೌ ಆರಿಸುವ ಹೊತ್ತಿಗೆ ಕುಕ್ಕರ್ ಕಪ್ಪಾಗಿತ್ತು, ಆಲೂಗೆಡ್ಡೆ ಸುಟ್ಟು ಹೋಗಿದ್ದವು. ಮಗಳಿಗೆ ಫೋನ್ ಮಾಡಿದ ಮೇಲೆ, ಅವಳು ಗಾಬರಿಯಿಂದ ಕಾರಿನಲ್ಲಿ ಬಂದಳು. ತಕ್ಷಣವೇ ವೈದ್ಯರ ಬಳಿ ಕರೆದುಕೊಂಡು ಹೋದಳು. ಅವರು ಎಲ್ಲಾ ಟೆಸ್ಟ್ ಗಳನ್ನೂ ಮಾಡಿ ಶುಗರ್ ಕಡಿಮೆಯಾದಾಗ ಹೀಗಾಗುತ್ತೆ. ನೀವು ಹೀಗಾದಾಗ ಒಂದು ಚಾಕಲೇಟ್ ಬಾಯಿಗೆ ಹಾಕಿಕೊಂಡು ಬಿಡಿ ಎಂದು ಸಲಹೆ ನೀಡಿದರು. ನಾನು, ‘ಒಬ್ಬರೇ ಯಾಕೆ ಇರುತ್ತೀರಿ. ಮಗಳ ಮನೆಗೆ ಹೋಗಿ ಇರಬಾರದೆ?’ ಎಂದರೆ, ಅವರ ಉತ್ತರ ರೆಡಿ, ‘ಅಲ್ಲಿ ನನಗೆ ತುಂಬಾ ಬೇಜಾರು. ಕಾಲ ಕಳೆಯುವುದೇ ಕಷ್ಟ. ಇಲ್ಲಿ ನನಗೆ ಸ್ನೇಹಿತರು, ಬಂಧುಗಳು ಇದ್ದಾರೆ. ಮನೆಗೆಲಸ ಮಾಡುತ್ತೇನೆ, ಮನೆಯ ಮುಂದೆ ವಾಕ್ ಮಾಡುತ್ತೇನೆ.’ ಒಂದು ವರ್ಷದ ಹಿಂದೆ ಅಪ್ಪನನ್ನು ಕಳೆದುಕೊಂಡ ಮಗಳು, 82 ವರ್ಷ ದಾಟಿದ್ದ ಅಮ್ಮನಿಗೆ ಏನು ಹೇಳಲು ಸಾಧ್ಯ? ಅವರು ಶಾಂತಿ ನೆಮ್ಮದಿಯಿಂದ ಇದ್ದರೆ ಸಾಕು ಎನ್ನುವ ಭಾವ ಅವಳದು. ಅವರು ಕರೆದಾಗೆಲ್ಲಾ, ಓಡಿ ಬರುತ್ತಿದ್ದಳು, ವೈದ್ಯರ ಬಳಿ ತಪಾಸಣೆ ಮಾಡಿಸಿ, ಮಾತ್ರೆಗಳನ್ನು ತಂದು ಕೊಟ್ಟು ಹೋಗುತ್ತಿದ್ದಳು. ಹದಿನೈದು ದಿನಕ್ಕೊಮ್ಮೆಯಾದರೂ ಬಂದು ಅಮ್ಮನನ್ನು ನೋಡಿಕೊಂಡು ಹೋಗುತ್ತಿದ್ದಳು. ‘ನೋಡಿ ಚಿಕ್ಕಮ್ಮ ಇವರು ಹೀಗೆ ಬೀಳುತ್ತಿರುವುದು ಮೊದಲನೆಯ ಬಾರಿ ಅಲ್ಲ, ಹಲವು ಬಾರಿ ಹೀಗಾಗಿದೆ. ಆಗೆಲ್ಲಾ ಜೊತೆಗೆ ಪಪ್ಪ ಇರುತ್ತಿದ್ದರು. ನನ್ನ ಮಗ ಇವರಿಗೆ ‘ಫಾಲಿಂಗ್ ಬ್ಯೂಟಿ’ ಅಂತ ಹೆಸರಿಟ್ಟಿದ್ದಾನೆ. ನಮ್ಮ ಜೊತೆಗೇ ಬಂದು ಇರಿ ಎಂದರೆ ಕೇಳುವುದೇ ಇಲ್ಲ,’ ಇದು ಮಗಳ ಅನಿಸಿಕೆ.
ನಾವು ಅಲ್ಲಿಂದ ಹೊರಟಾಗ ಹಲವು ಗೊಂದಲುಗಳು ಮನದಲ್ಲಿ ಮೂಡಿದ್ದವು. ಇದು ಮಧ್ಯಮ ವರ್ಗದವರ ಮನಸ್ಥಿತಿ – ಹೇಗೂ ಗಂಡನ ಪಿಂಚಣಿ ಹಣ ಬರುತ್ತೆ, ಸ್ವಂತ ಮನೆಯಿದೆ, ಅಕ್ಕ ಪಕ್ಕದಲ್ಲಿ ಸ್ನೇಹಿತರು ಇದ್ದಾರೆ. ಸ್ವತಂತ್ರವಾಗಿ ಇರಬಹುದಲ್ಲಾ ಎಂಬ ಮನೋಭಾವ. ಆರೋಗ್ಯ ಚೆನ್ನಾಗಿದ್ದಾಗ, ಈ ಮನೋಭಾವ ಸರಿ, ಆದರೆ ಆರೋಗ್ಯ ಹದಗೆಟ್ಟಾಗ !
ಮುಂದೆ ನಾವು 85 ವರ್ಷ ದಾಟಿದ್ದ ನಿರ್ಮಲತ್ತೆಯನ್ನು ನೋಡಲು ಹೊರಟೆವು. ಇವರದು ದೊಡ್ಡ ಬಂಗಲೆ, ಮೇಲ್ವರ್ಗದವರ ಗುಂಪಿಗೆ ಸೇರಿಸಬಹುದು. ಮಾವ ಎಕ್ಸಿಕ್ಯುಟಿವ್ ಎಂಜಿನಿಯರ್ ಆಗಿದ್ದವರು, ಮಕ್ಕಳು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದರು. ಎಲ್ಲರೂ ಅವರವರ ವೃತ್ತಿಯನ್ನರಸಿ ಬೇರೆ ಬೇರೆ ಪಟ್ಟಣದಲ್ಲಿ ವಾಸ. ಮಾವ ತೀರಿಕೊಂಡಮೇಲೆ, ಮನೆಯಲ್ಲಿ ನಿರ್ಮಲತ್ತೆ ಒಬ್ಬರೇ ಆದರು. ಹಬ್ಬ ಹರಿದಿನಗಳಲ್ಲಿ ಬರುವ ಮಕ್ಕಳು, ಮೊಮ್ಮಕ್ಕಳು. ಮೊಮ್ಮಕ್ಕಳ ಮದುವೆಯೂ ಆಗಿ ಅವರು ಹೊರದೇಶಗಳತ್ತ ಮುಖ ಮಾಡಿದರು. ಆಗಾಗ್ಗೆ ಬರುವ ಬಂಧುಗಳು. ಮನೆಯಲ್ಲಿ ಕೆಲಸದವಳ ಜೊತೆ ಇವರ ಠಿಕಾಣಿ. ವರ್ಷದ ಹಿಂದೆ ಮನೆಯ ಹೆಬ್ಬಾಗಿಲ ಹೊಸ್ತಿಲು ಎಡವಿ ಬಿದ್ದ ಮೇಲೆ ಅವರ ಆರೋಗ್ಯ ಹದಗೆಟ್ಟಿತ್ತು. ಆಗಾಗ್ಗೆ ಬೆಂಗಳೂರಿನಲ್ಲಿದ್ದ ಮಗನ ಮನೆಗೆ ಹೋಗಬೇಕಾಗುತ್ತಿತ್ತು. ಆದರೆ ಅವರ ಮನಸ್ಸೆಲ್ಲಾ ದಾವಣಗೆರೆಯ ಮನೆಯಲ್ಲೇ. ಕೊನೆಗೆ ದೂರದೂರಿನಲ್ಲಿದ್ದ ಮಗ, ಸೊಸೆ ತಮ್ಮ ವೃತ್ತಿಗೆ ರಾಜೀನಾಮೆ ನೀಡಿ ಅಮ್ಮನ ಜೊತೆ ಇರಲು ಬಂದರು. ನಿರ್ಮಲತ್ತೆಯ ಸಂತೋಷಕ್ಕೆ ಪಾರವೇ ಇಲ್ಲ. ಹಿಡಿಯಷ್ಟಾಗಿರುವ ನಿರ್ಮಲತ್ತೆ ಸಂಭ್ರಮದಿಂದ ಮಾತಾಡಿಸಿದರು, ‘ನಾನು ಕೋಲು ಹಿಡಿದು ಓಡಾಡುತ್ತಿದ್ದೆ, ಈಗ ಮಗ ಬಂದ ಮೇಲೆ ಇವನೇ ನನ್ನ ಊರುಗೋಲು.’ ಎಂದರು. ನಾವು ಹೊರಟಾಗ, ‘ಇನ್ನೂ ಸ್ವಲ್ಪ ಹೊತ್ತು ಇರು ಎಂದು ಒತ್ತಾಯಿಸಿದರು.’ ಒಂದು ಗಂಟೆ ಮಾತಾಡಿದೆವು, ಹಿಂದಿನ ನೆನಪುಗಳನ್ನೆಲ್ಲಾ ಮೆಲುಕು ಹಾಕಿದೆವು. ಅವರ ಮುಖ ಹೂವಿನಂತೆ ಅರಳಿತ್ತು.
ಸಂಜೆಯಾಗಿತ್ತು. ನಾವು ನಮ್ಮೂರಿಗೆ ಹೊರಟೆವು. ದಾರಿಯುದ್ದಕ್ಕೂ ಈ ಮೂರು ಜನರ ‘ಜೀವನ ಸಂಜೆಯ’ ಬಗ್ಗೆ ಹಲವು ಭಾವನೆಗಳು ಮೂಡುತ್ತಿದ್ದವು. ಕುಟುಂಬದವರೊಂದಿಗೆ, ತಮ್ಮ ಮನೆಯಲ್ಲಿಯೇ ಬಾಳುವ ಅದೃಷ್ಟವಂತರು ಗೌರಕ್ಕ, ಸ್ವತಂತ್ರವಾಗಿ ಬದುಕುವ ಹಂಬಲ ಹೊತ್ತ ಮಾದೇವಕ್ಕನವರು ಹಾಗೆಯೇ ತಮ್ಮ ಇಳಿವಯಸ್ಸಿನಲ್ಲಿ ಜೊತೆಯಾದ ಮಗ ಸೊಸೆಯೊಂದಿಗೆ ಖುಷಿಯಿಂದ ಕಾಲಕಳೆಯುತ್ತಿರುವ ನಿರ್ಮಲಕ್ಕ. ಆಗ ನೆನಪಾಗಿದ್ದು ಡಿ.ವಿ.ಜಿ.ಯವರ ಕಗ್ಗದ ಸಾಲುಗಳು,
“ಮುಪ್ಪು ಬರುತಿಹುದೊಬ್ಬೊಬ್ಬರಿಗೂ ತಡೆಯಲಳವೆ?
ಒಪ್ಪಿಕೋ ಸಡಗರದಿ ಜೀವನದ ಸಂಜೆಯನು”
ಮುಪ್ಪು ಎಲ್ಲರಿಗೂ ಬರುವಂತಹದೇ, ಅದನ್ನು ಶಾಂತ ಮನಸ್ಸಿನಿಂದ ಸ್ವೀಕರಿಸುವುದು ಒಳಿತು. ವಯಸ್ಸಾದಂತೆ ಶಕ್ತಿ ಕುಂದುತ್ತದೆ, ಕಣ್ಣಿನ ದೃಷ್ಟಿ ಮಂದವಾಗುತ್ತದೆ, ಕಿವಿ ಕೇಳುವುದಿಲ್ಲ, ಹಸಿವಾಗುವುದಿಲ್ಲ, ನಿದ್ರೆ ಬರುವುದಿಲ್ಲ ಅನಾರೋಗ್ಯದ ಸಮಸ್ಯೆಗಳು ಕಾಡುತ್ತವೆ. ನಮ್ಮ ಬಳಿ ಹಣವಿದ್ದರೂ ಕುಟುಂಬದ ಸದಸ್ಯರೊಬ್ಬರು ನಮ್ಮ ಬಳಿ ಇದ್ದರೆ ಚೆಂದ ಎನ್ನಿಸುವುದು ಸಹಜ. ಆದರೆ ವೃತ್ತಿಯನ್ನು ಅರಸಿ ದೂರದೂರಿಗೆ ತೆರಳುವ ಮಕ್ಕಳು ಹೇಗೆ ಬರಲು ಸಾಧ್ಯ? ನಿಜ, ಮಕ್ಕಳು ಅಪ್ಪ ಅಮ್ಮನನ್ನು ಪ್ರೀತಿ, ಗೌರವದಿಂದ ಕಾಣುವುದು, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದೂ ಹಾಗೂ ಅವರೊಂದಿಗೆ ಸಮಯ ಕಳೆಯುವುದೂ ಉತ್ತಮ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಹಲವು ಹಿರಿಯರು ಏಕಾಂಗಿ ಜೀವನ ನಡೆಸುವುದು ಅನಿವಾರ್ಯವಾಗಿದೆ.
ವಯಸ್ಸಾದಂತೆ ದೇಹ ಮುಪ್ಪಾದರೂ, ಮನಸ್ಸು ಜೀವನದ ಏಳು ಬೀಳುಗಳನ್ನು ಕಂಡು ಪ್ರಬುದ್ಧವಾಗುತ್ತದೆ. ತಾಳ್ಮೆ, ವಿವೇಕ ಮೂಡುತ್ತದೆ. ಜೀವನದ ಸಂಜೆಯಲ್ಲಿ ಸೂರ್ಯನು ಅಸ್ತಮಿಸಿದರೂ ಬೆಳಕು ಸಂಪೂರ್ಣ ಕಣ್ಮರೆಯಾಗಿರುವುದಿಲ್ಲ. ಪ್ರೀತಿ, ಗೌರವ, ಸೌಜನ್ಯದ ನಿರೀಕ್ಷೆಯಲ್ಲಿರುವುದು ಹಿರಿಯ ಜೀವ. ಹಾಗೆಯೇ ತಮ್ಮ ಮಕ್ಕಳ ಬದಲಾಗುತ್ತಿರುವ ಜೀವನ ಶೈಲಿಯನ್ನು ಅರಿತು, ಹಿರಿಯರು ತಮ್ಮ ಜೀವನ ಸಂಜೆಯಲ್ಲಿ ಶಾಂತಿ ನೆಮ್ಮದಿಯಿಂದ ಬಾಳುವುದನ್ನು ಕಲಿತರೆ ಸೊಗಸು ಅಲ್ಲವೇ?

–ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

