ಮಹಡಿಯ ಮೇಲೆ ಒಗೆದ ಬಟ್ಟೆಗಳನ್ನು ಒಣಹಾಕುತ್ತಿದ್ದ ವಿಜಯಾ, ದೂರದಿಂದಲೇ ದಾಪುಗಾಲು ಹಾಕುತ್ತಾ ತಮ್ಮ ಮನೆಯೆಡೆಗೆ ನಡೆದು ಬರುತ್ತಿದ್ದ, ತಮ್ಮ ಭಜನಾ ಮಂಡಲಿಯ ಸದಸ್ಯೆ ಹಾಗೂ ಆತ್ಮೀಯ ಗೆಳತಿ ಆಶಾಳನ್ನು ಕಂಡು, ಕೊನೆಯ ಬಟ್ಟೆಯನ್ನು ಹರವಿ ಕೆಳಗೆ ಬಂದು ಮುಂಬಾಗಿಲನ್ನು ತೆರೆದು, ಫ್ರಿಡ್ಜಿನಲ್ಲಿ ಬೆಳಗ್ಗೆಯೇ ಮಾಡಿಟ್ಟಿದ್ದ ಉಪ್ಪು ಕರಿಬೇವು ಹಾಕಿಟ್ಟಿದ್ದ ಕಡೆದ ಮಜ್ಜಿಗೆಯನ್ನು ಒಂದು ಲೋಟದಲ್ಲಿ ಬಗ್ಗಿಸಿ ಹೊರಬರುವುದಕ್ಕೂ, ಆಶಾ ಒಳಬರುವುದಕ್ಕೂ ಸರಿಹೋಯಿತು. ಅವಳ ಕೈಗೆ ಮಜ್ಜಿಗೆಯ ಲೋಟವನ್ನು ನೀಡುತ್ತಲೇ – ಏನು, ಈ ಬಿಸಿಲಿನಲ್ಲಿ ಗೆಳತಿಯನ್ನು ಜ್ಞಾಪಿಸಿಕೊಂಡಿದ್ದೀಯಾ? – ಎಂದು ಕೇಳಿದಳು.
ಒಂದೇ ಏಟಿಗೆ ಗಟಗಟಾಂತ ಕುಡಿದು – ಹೊರಡು ವಿಜಯಾ ಹೋಗೋಣ – ಎಂದಳು. ಮೊಗ ನಿಸ್ತೇಜಗೊಂಡಿತ್ತು.
ಅದನ್ನು ಗಮನಿಸಿದ ವಿಜಯಾ – ವಿಷಯ ಹೇಳು ಆಶಾ – ಎನ್ನಲು,
ಗಣಪತಿಭಟ್ಟರು ಇದೀಗ ತಾನೇ ಹೋಗಿಬಿಟ್ಟರಂತೆ, ಸುಂದರಮ್ಮನವರ ಬಳಿ, ಯಾರಿರುತ್ತಾರೋ, ಯಾರಿಲ್ಲವೋ ತಿಳಿಯದು, ಅದಕ್ಕೆ ನಾವೇ ಹೋಗೋಣ, ಎಂದುಕೊಂಡು ಇಲ್ಲಿ ಬಂದೆ – ಎಂದಳು ಆಶಾ.
ಆಂ . . . – ಎಂದು ವಿಜಯಾ ಬಾಯಿ ತೆರೆಯಲು,
ಹೌದು, ನನಗೂ ಏನೂ ವಿವರಗಳು ತಿಳಿದಿಲ್ಲ, ಅವರ ಪಕ್ಕದ ಮನೆಯವರು ಕರೆಮಾಡಿ ʼತಕ್ಷಣ ಬನ್ನಿʼ ಎಂದರು.
ಮನೆಯಲ್ಲಿದ್ದ ಹಣವೊಂದಿಷ್ಟನ್ನು ಪರ್ಸಿಗೆ ತುರುಕಿಕೊಂಡು ಗಂಡ ರಂಗನಾಥರಿಗೆ ಮೆಸೇಜ್ ಕಳುಹಿಸಿ ಕೀ ತೆಗೆದುಕೊಂಡು ಆಚೆ ಬಂದು ಮನೆಗೆ ಬೀಗ ಹಾಕಿದಳು ವಿಜಯಾ. ಅಷ್ಟರಲ್ಲಿ ಆಗಲೇ ಆಶಾ ಬುಕ್ ಮಾಡಿದ್ದ ಆಟೋ ಮನೆಯ ಮುಂದೆ ಬಂದು ನಿಂತಿತ್ತು.
ಇಬ್ಬರಿಗೂ ಮಾತು ಬೇಕಿರಲಿಲ್ಲ. ಮೌನವೇ ಹೆಚ್ಚು ಸಮಂಜಸವೆನಿಸಿತ್ತು. ಹದಿನೈದು ನಿಮಿಷಗಳಲ್ಲೇ ಸುಂದರಮ್ಮನವರ ಮನೆ ಬಂತು.
ಮನೆಯೊಳಗೆ ಅಡಿ ಇಟ್ಟಾಗ ಮಂಕು ಬಡಿದವರಂತೆ ಸುಂದರಮ್ಮನವರು ಕುಳಿತಿದ್ದರು. ಜೊತೆಯಲ್ಲಿ ಫೋನ್ ಮಾಡಿದ ಪಕ್ಕದ ಮನೆಯ ಹರಿಣಿಯೊಬ್ಬರೇ ಇದ್ದರು.
ಅವರೇ ಹೇಳಿದರು – ಬೆಳಗ್ಗೆ ತಿಂಡಿ ತಿಂದು ಫೋಸ್ಟ್ ಆಫೀಸಿಗೆ ಹೋಗಿ ಬರುತ್ತೇನೆಂದು ಹೋದರಂತೆ. ಹದಿನೈದು ನಿಮಿಷಗಳಲ್ಲೇ ಯಾರೋ ಅಪರಿಚಿತರು ಕರೆ ಮಾಡಿದರಂತೆ. ನಮ್ಮ ಮನೆಯವರು ಮತ್ತು ಎದುರು ಮನೆಯ ರಾಜೇಶ್ ಇಬ್ಬರೂ ಹೋಗಿದ್ದಾರೆ, ಫೋನ್ ಮಾಡಿದ್ದರು, ಇನ್ನೂ ಫೋಸ್ಟ್ ಆಫೀಸ್ ಒಂದು ಮಾರು ದೂರ ಇದೆ ಎನ್ನುವಾಗಲೇ ಕುಸಿದು ಬಿದ್ದು ಬಿಟ್ಟರಂತೆ, ಅಕ್ಕಪಕ್ಕದ ಜನ ಅಲ್ಲೇ ಪಕ್ಕದಲ್ಲಿರುವ ಡಾ. ನಾಯಕ್ ಅವರನ್ನು ಕರೆಸಿದರಂತೆ. ಬಂದು ನೋಡಿದವರೇ – ಮ್ಯಾಸಿವ್ ಹಾರ್ಟ್ ಅಟ್ಯಾಕ್ ಆಗಿದೆ, ಹೋಗಿಬಿಟ್ಟಿದ್ದಾರೆ – ಎಂದರಂತೆ. ಇನ್ನೇನು ಯಾವುದೇ ಘಳಿಗೆಯಲ್ಲಿ ಅವರುಗಳು ಬರಬಹುದು – ಎಂದರು.
ಅಷ್ಟರಲ್ಲಿ ಮನೆಯ ಮುಂದೆ ವ್ಯಾನ್ ಬಂದು ನಿಂತಿತು. ಅದರೊಳಗಿನಿಂದ ಬೆಳಗ್ಗೆಯಷ್ಟೇ ದೇವರ ಪೂಜೆ ಮುಂತಾದ ಪ್ರಾತಃವಿಧಿಗಳನ್ನು ಪೂರೈಸಿ, ತಿಂಡಿ ತಿಂದು, ಕಾಫಿ ಕುಡಿದು ಹೊರಟ ಗಣಪತಿ ಭಟ್ಟರು ಶವವಾಗಿ ಹಿಂದಿರುಗಿದ್ದರು.
ಎಪ್ಪತ್ತೆಂಟು ವರ್ಷದ ಭಟ್ಟರದು ಮತ್ತು ಎಪ್ಪತ್ಮೂರು ವರ್ಷದ ಸುಂದರಮ್ಮನವರದು ಅನ್ಯೋನ್ಯ ದಾಂಪತ್ಯ. ಬ್ಯಾಂಕಿನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ರಿಟೈರ್ ಹೊಂದಿದ್ದ ಗಣಪತಿ ಭಟ್ಟರಿಗೆ ಕೈತುಂಬಾ ಪೆನ್ಷನ್ ಬರುತಿತ್ತು. ಜೆ ಪಿ ನಗರದಲ್ಲಿ ಸ್ವಂತ ಮನೆಯಿತ್ತು. ಇರುವ ಒಬ್ಬ ಮಗ ಲವ್ ಮ್ಯಾರೇಜ್ ಮಾಡಿಕೊಂಡು ಬೆಂಗಳೂರಿನಲ್ಲಿ ನೌಕರಿಯಲ್ಲಿದ್ದನು. ಮೂರು ವರ್ಷದ ಒಬ್ಬ ಮೊಮ್ಮಗಳೂ ಇದ್ದಳು. ಸೊಸೆಯೂ ಕೆಲಸ ಮಾಡುತ್ತಿದ್ದಳು. ಇಬ್ಬರೂ ಬೇರೆ ಬೇರೆ ಖಾಸಗೀ ಕಂಪನಿಗಳಲ್ಲಿದ್ದರು. ಮಗ ನಿತ್ಯ ಆಫೀಸಿಗೆ ಹೋಗಿ ಬರುತ್ತಿದ್ದರೆ, ಸೊಸೆ ವಾರಕ್ಕೆ ಒಂದು ಅಥವಾ ಎರಡು ದಿನಗಳು ಹೋಗುತ್ತಿದ್ದಳು. ಮಿಕ್ಕ ದಿನಗಳಲ್ಲಿ ವರ್ಕ್ ಫ್ರಂ ಹೋಂ ಮಾಡುತ್ತಿದ್ದಳು.
ಮಗ ತನ್ನಿಷ್ಟದ ಹುಡುಗಿಯನ್ನು ಮದುವೆಯಾದ ಕೆಲದಿನಗಳು ಸುಂದರಮ್ಮನವರು ಕೊರಗು ಹಚ್ಚಿಕೊಂಡಿದ್ದರು, ಮಗನ ಸಂಸಾರ ಹೆಚ್ಚಾಗಿ ಬಂದು ಹೋಗಿ ಮಾಡುತ್ತಿರಲಿಲ್ಲ. ಬಂದರೂ ಅರ್ಧ, ಒಂದು ದಿನವಿದ್ದು ಹೊರಟು ಬಿಡುತ್ತಿದ್ದರು.
ಗಣಪತಿ ಭಟ್ಟರೇ ಸಮಾಧಾನ ಮಾಡುತ್ತಿದ್ದರು – ವ್ಯಾಮೋಹ ಬಿಟ್ಟು ಬಿಡು ಸುಂದರಿ, ನಮ್ಮ ಕರ್ತವ್ಯ ನಾವು ಮಾಡಿದ್ದೇವೆ, ಎಲ್ಲಾದರೂ ಸುಖವಾಗಿರಲಿ. ನಮಗೇನು, ಸ್ವಂತ ಮನೆಯಿದೆ, ನಾವಿಬ್ಬರೂ ಸಾಯುವ ತನಕ ಪೆನ್ಷನ್ ಬರುತ್ತೆ, ಯಾರೂ ಮನಗೆ ಮಾಡಬೇಕಿಲ್ಲ, ದೇವರು ಆಯಸ್ಸು ನೀಡಿರುವ ತನಕ ಆರೋಗ್ಯ ಒಂದು ಕೊಟ್ಟು ಬಿಡಲಿ ಸಾಕು – ಎನ್ನುತ್ತಿದ್ದರು. ಅವರಂತೂ ಹಾಗೆಯೇ, ಕೊನೇ ಘಳಿಗೆಯವರೆಗೂ ಲವಲವಿಕೆಯಿಂದಿದ್ದು ಬಾರದ ಲೋಕಕ್ಕೆ ನಡೆದುಬಿಟ್ಟಿದ್ದರು.
ಇಬ್ಬರೂ ಕೆಳ ಮಧ್ಯಮ ವರ್ಗದಿಂದ ಬಂದವರು, ಜೀವನದುದ್ದಕ್ಕೂ ನ್ಯಾಯ, ನಿಷ್ಟೆಯಿಂದ ಬಾಳಿದವರು. ಎರಡೂ ಕುಟುಂಬಗಳ ಬಂಧು ಬಾಂಧವರಿಗೆ ಅಗತ್ಯವಿದ್ದಾಗ, ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ಸಾತ್ವಿಕ ಬಾಳು ಸಾಗಿಸಿದ್ದರು.
ಭಟ್ಟರದು ಪ್ರಖಾಂಡ ಬುದ್ಧಿಮತ್ತೆ. ತಾವು ದುಡಿದ ಒಂದು ಪೈಸೆಯೂ ಅಪವ್ಯಯವಾಗದಂತೆ ಕಾಪಿಟ್ಟುಕೊಂಡವರು. ದೇವರೀಗ ಕೊಟ್ಟಿದ್ದಾನೆ, ದುಂದುವೆಚ್ಚ ಮಾಡದೆ ನಮಗೇನು ಬೇಕೋ ಅದನ್ನು ಪಡೆಯೋಣ, ದಂಡ ಮಾತ್ರ ಕೂಡದು ಎನ್ನುತ್ತಿದ್ದರು. ಸುಂದರಮ್ಮ ಹಣಕಾಸಿನ, ಹೊರಗಿನ ಯಾವ ವ್ಯವಹಾರಕ್ಕೂ ತಲೆಹಾಕುತ್ತಿರಲಿಲ್ಲ, ಅವರ ತಲೆಗೆ ಹೋಗುತ್ತಲೂ ಇರಲಿಲ್ಲ. ಹಾಗಂತ ಅವರೇನೂ ಮೂಢರು ಅಂತಲ್ಲ, ರುಚಿಕಟ್ಟಾಗಿ ಅಡುಗೆ ಮಾಡುವುದು, ಕರಕುಶಲ ಕಲೆಗಳ ಪರಿಣಿತಿ, ಸುಶ್ರಾವ್ಯವಾಗಿ ಹಾಡುವುದು . . . . ಹೀಗೆ ಅವರ ಆಸಕ್ತಿ.
ಹಾಗೆಯೇ ವಿಜಯಾ, ಆಶಾರನ್ನೊಳಗೊಂಡ ಎಂಟು-ಹತ್ತು ಹಿರಿಕಿರಿಯರನ್ನೊಳಗೊಂಡ ಸಮಾನ ಮನಸ್ಕ ಹೆಂಗಸರುಗಳು ಸೇರಿ ಭಜನಾಮಂಡಳಿಯೊಂದನ್ನು ಕಟ್ಟಿಕೊಂಡಿದ್ದರು. ಕಳೆದ ಏಳೆಂಟು ವರುಷಗಳಿಂದ ಸತತವಾಗಿ ಹತ್ತು ಹದಿನೈದು ದಿನಗಳಿಗೊಮ್ಮೆ ಯಾರದ್ದಾದರೊಬ್ಬರ ಮನೆಯಲ್ಲಿ ಸೇರಿ ದೇವರ ಗೀತೆಗಳನ್ನು ಸುಶ್ರಾವ್ಯವಾಗಿ, ಭಕ್ತಿಪೂರ್ವಕವಾಗಿ ಹಾಡುತ್ತಾ ಒಂದೇ ಕುಟುಂಬದವರಂತಾಗಿ ಬಿಟ್ಟಿದ್ದರು. ಇಡೀ ತಂಡಕ್ಕೆ ಸುಂದರಮ್ಮನವರೇ ಹಿರಿಯರು. ಹೊಸ ಹೊಸ ಗೀತೆಗಳಿಗೆ ರಾಗ, ಭಾವ ತುಂಬಿ ಹಾಡುತ್ತಿದ್ದರು. ಎಲ್ಲರನ್ನೂ ಮುನ್ನಡೆಸುತ್ತಿದ್ದವರು ಇಂದು ಸಂಗಾತಿಯನ್ನು ಕಳೆದುಕೊಂಡು ಮಂಕಾಗಿ ಕುಳಿತು ಬಿಟ್ಟಿದ್ದರು. ಎರಡು ದಿನಗಳ ಹಿಂದಷ್ಟೇ ಎಲ್ಲರೂ ಸೇರಿ ಹಾಡಿ ನಲಿದಿದ್ದರು.
ಬೆಂಗಳೂರಿನಿಂದ ಮಗ ಮತ್ತು ಕುಟುಂಬ ಬಂದಾಯಿತು. ಭಟ್ಟರ ಹುಟ್ಟೂರಾದ ಪುತ್ತೂರಿನಿಂದ ಅವರ ತಮ್ಮ, ಸತೀಶ ಭಟ್ಟರ ಕುಟುಂಬ ಬರುವುದು ಬಾಕಿಯಿತ್ತು. ಮತ್ತೆ ಒಬೊಬ್ಬರಾಗಿ ಭಟ್ಟರ ಬ್ಯಾಂಕಿನ ಗೆಳೆಯರುಗಳು, ನೆಂಟರುಗಳು, ಇಷ್ಟರುಗಳು ಸುಂದರಮ್ಮನವರ ಆತ್ಮೀಯರು ಬಂದು ಸೇರತೊಡಗಿದರು.
ಮಗ ಅಮ್ಮನ ಬಳಿ ಬಂದು ಕೇಳಿದ – ಅಮ್ಮಾ ಬೇಜಾರು ಮಾಡಿಕೊಳ್ಳಬೇಡ, ಫೋನ್ ಬಂದ ಕೂಡಲೇ ನಿಂತ ನಿಲುವಿನಲ್ಲೇ ಹೊರಟು ಬಂದದ್ದಾಯಿತು, ಮನೆಯಲ್ಲಿ ಹಣಕಾಸು ಏನಾದರೂ ಇದೆಯೇ?
ಸುಂದರಮಮ್ಮನವರು ಮೌನವಾಗಿ ಬೇರುವಿನೆಡೆಗೆ ಕೈದೋರಿದರು. ನಾಲ್ಕು ಗಂಟೆಯ ವೇಳೆಗೆ ಎಲ್ಲಾ ಮುಗಿದೇ ಹೋಯಿತು.
ನಾಲ್ಕೈದನೇ ದಿನ ಮಗ ಬಂದು ಒಂದಷ್ಟು ಪೇಪರುಗಳಿಗೆ ಸೈನ್ ಮಾಡಲು ಅಮ್ಮನಿಗೆ ಹೇಳಿದ. ಸುಂದರಮ್ಮನವರು ಸುಮ್ಮನೇ ಮಾಡಿಕೊಟ್ಟರು. ದಿನ ಕಾರ್ಯಗಳು ಮುಗಿದವು, ಬಂದಿದ್ದವರೆಲ್ಲಾ ಹೋಗಿ ಆಯಿತು, ಮಗಮ ಅನಿರುದ್ಧ ಹೇಳಿದ –
ಅಮ್ಮಾ ಇಲ್ಲಿ ನೀನು ಒಬ್ಬಳೇ ಇರುವುದು ತರವಲ್ಲ, ಇನ್ನು ಮೂರು ನಾಲ್ಕು ದಿನಗಳಲ್ಲಿ ಬೆಂಗಳೂರಿಗೆ ಹೊರಟು ಬಿಡೋಣ.
ಆಯ್ತಪ್ಪ – ಎಂದರು ಸುಂದರಮ್ಮನವರು.
ವಿಜಯಾ, ಆಶಾರೊಗಳನ್ನೊಳಗೊಂಡಂತೆ ಭಜನಾ ಮಂಡಳಿಯ ಇತರೆ ಸದಸ್ಯೆಯರುಗಳು, ಪರಿಚಯದವರುಗಳು ಎಲ್ಲರೂ ಬಂದು ಕಣ್ಣೀರಾಗಿ ಹೊರನಡೆದರು.
ವಿಜಯಾ ಹೇಳಿದಳು – ಎಲ್ಲಾ ಅನಿರೀಕ್ಷಿತವಾಗಿ ನಡೆದು ಹೋಯಿತು, ನಿಮಗೆ ಸಾಂತ್ವನ ಹೇಳಲು ತೋಚುತ್ತಿಲ್ಲ, ನಾವುಗಳೇ ಇನ್ನೂ ಶಾಕ್ ನಲ್ಲಿ ಇದ್ದೀವಿ. ದಯವಿಟ್ಟು ಸಾಧ್ಯವಾದಾಗಲೆಲ್ಲಾ ಫೋನ್ ಮಾಡುತ್ತಿರಿ, ಆಗಾಗ್ಗೆ ಬಂದು ಹೋಗಿ ಮಾಡುತ್ತಿರಿ.
ಮಿಕ್ಕವರೂ ʼಹೌದು, ಹೌದುʼ ಎನ್ನುವಂತೆ ತಲೆಕುಣಿಸಿದರು.
ನಿಸ್ತೇಜವಾದ ಶುಷ್ಕ ನಗೆ ನಕ್ಕ ಸುಂದರಮ್ಮನವರು ಮಗನೊಡನೆ ಕಾರ್ ಹತ್ತಿದರು.
ಹತ್ತು ಹದಿನೈದು ದಿನಗಳ ನಂತರ ಹಿಂದಿರುಗಿ ಬಂದ ಅನಿರುದ್ಧ ಎಲ್ಲಾ ಸಾಮಾನುಗಳನ್ನೂ ವಿಲೇವಾರಿ ಮಾಡತೊಡಗಿದ. ಅವನು ಬಂದುದನ್ನು ತಿಳಿದು ಆಶಾ ಓಡಿ ಬಂದಳು.
ಸುಂರದರಮ್ಮನವರು ಹೇಗಿದ್ದಾರೆ?
ಹಾಗೇ ಮಂಕಾಗಿಯೇ ಇದ್ದಾರೆ. ಮನಸ್ಸು ಸಾಮಾಧಾನಗೊಳ್ಳಲು ಕೆಲ ದಿನಗಳು ಬೇಕಲ್ಲವಾ?
ಮನೆಯ ಸಾಮಾನುಗಳ ವಿಲೇವಾರಿ . . .ಹೌದು ಈ ಮನೆಯನ್ನು ಮಾರಾಟಮಾಡಿದ್ದಾಗಿದೆ, ಇಲ್ಲಿ, ಈ ಮನೆಯಲ್ಲಿ ಯಾರಿರುತ್ತಾರೆ? ನಾವೀಗ ಬೆಂಗಳೂರಿನಲ್ಲಿ ಎರಡು ಬಿಹೆಚ್ಕೆಯ ಚಿಕ್ಕದೊಂದು ಬಾಡಿಗೆಯ ಫ್ಲಾಟಿನಲ್ಲಿದ್ದೇವೆ, ಈ ಹಣವನ್ನು ಹಾಕಿ ಮೂರು ಬಿಹೆಚ್ಕೆಯ ಫ್ಲಾಟ್ ಖರೀದಿ ಮಾಡುತ್ತೇನೆ, ಅಮ್ಮನಿಗೂ ಒಂದು ಪ್ರತ್ಯೇಕ ಕೊಠಡಿ ಬೇಕಲ್ಲವಾ?
ಅಂದ್ರೆ ಸುಂದರಮ್ಮನವರು ಮತ್ತೆ ಮೈಸೂರಿಗೆ ಬರುವುದೇ ಇಲ್ಲವಾ?
ನಮ್ಮ, ಮೈಸೂರಿನ ಋಣ ತೀರಿತು.
ಎರಡೇ ದಿನದಲ್ಲಿ ಎಲ್ಲಾ ಖಾಲಿ ಮಾಡಿ ಊರಿಗೆ ಹಿಂದಿರುಗಿದ ಅನಿರುದ್ಧ.
ಮನೆ ಕೊಂಡುಕೊಂಡವರು ಸುಣ್ಣ ಬಣ್ಣ ಮಾಡಿಸಲು ಪ್ರಾರಂಭಿಸಿದರು.
ನಾಲ್ಕರು ದಿನಗಳಾಯಿತು, ವಿಜಯಾ, ಆಶಾ ಮಾತನಾಡಿಕೊಂಡು ಸುಂದರಮ್ಮನವರಿಗೆ ಫೋನ್ ಮಾಡಲು – ಈ ನಂಬರ್ ಅಸ್ತಿತ್ವದಲ್ಲಿಲ್ಲ – ಎಂಬ ಸಂದೇಶ ಬರತೊಡಗಿತು. ಎಷ್ಟು ಸಲ ಮಾಡಿದರೂ ಅದೇ ಸಂದೇಶ . .
ಬೆಂಗಳೂರಿಗೆ ಬಂದ ಕೆಲ ದಿನಗಳ ನಂತರ ಅನಿರುದ್ಧ ಹೇಳಿದ –
ಅಮ್ಮಾ, ಈ ಮನೆ ಚಿಕ್ಕದೆನಿಸುತ್ತಿದೆ, ನಿನಗೂ ಒಂದು ಪ್ರತ್ರೈಕ ಕೊಠಡಿ ಬೇಕು, ಹಾಗಾಗಿ ಮೂರು ಬಿಹೆಚ್ಕೆಯ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದೇವೆ. ನಿನ್ನ ಸೊಸೆ ಸುಶೀಲಾಳೂ ಅವರ ಆಫೀಸಿನಿಂದ ಗೃಹಸಾಲ ತೆಗೆದಿಕೊಂಡಿದ್ದಾಳೆ. ಹಾಗಾಗಿ ಹೊಸ ಫ್ಲಾಟು ನನ್ನ ಮತ್ತು ಅವಳ ಜಂಟೀ ಹೆಸರಿನಲ್ಲಿ ಇದೆ. ಮುಂದಿನ ವಾರ ಹೊಸ ಮನೆಗೆ ಹೊರಟು ಬಿಡೋಣ.
ಸರಿಯಪ್ಪ – ಎಂದವರು, ಮುಂದುವರೆದು – ಒಮ್ಮೆ ಮೈಸೂರಿಗೆ ಹೋಗಿ ಬರೋಣ, ಆಗ ನಿಂತ ನಿಲುವಿನಲ್ಲೇ ಬಂದದ್ದಾಯಿತು, ಅಲ್ಲಿಯ ಮನೆಗೆ ಒಂದು ವ್ಯವಸ್ಥೆ ಮಾಡಬೇಕು, ಬ್ಯಾಂಕ್ ಪೋಸ್ಟ್ ಆಫೀಸಿನ ವ್ಯವಹಾರಗಳಿಗೊಂದು ದಾರಿ ಕಾಣಿಸಬೇಕು.
ಇಲ್ಲಾ ಅಮ್ಮಾ, ನಿನ್ನ ಮನಸ್ಸಿಗೆ ನೋವಾಗುತ್ತೆ ಅಂತ ಹೇಳಲಿಲ್ಲ, ಸುಶೀಲಳ ಆಫೀಸಿನಲ್ಲಿ ಕೊಡುವ ಸಾಲ ಹೊಸ ಮನೆ ಕೊಳ್ಳಲು ಎಲ್ಲಿ ಸಾಲುತ್ತೆ, ಮೈಸೂರಿನ ಮನೆ ಮಾರಿಯಾಯಿತು, ಅಂದು ನಿನ್ನ ಹತ್ತಿರ ರುಜು ಹಾಕಿಸಿಕೊಂಡದ್ದು ʼಪವರ್ ಆಫ್ ಅಟಾರ್ನಿʼ ಪತ್ರಕ್ಕೆ. ಬ್ಯಾಂಕ್ ಮತ್ತು ಪೋಸ್ಟ್ ಆಫೋಸಿನಲ್ಲಿದ್ದ ಎಲ್ಲಾ ಹಣವನ್ನೂ ತೆಗೆದಾಯಿತು. ಆ ಎಲ್ಲಾ ಹಣವನ್ನೂ ಸೇರಿಸಿಯೇ ಈ ಹೊಸ ಮನೆ ಕೊಂಡುಕೊಳ್ಳುತ್ತಿರುವುದು. ನಿನ್ನ ಪೆನ್ಷನ್ ಖಾತೆಗೂ ನಿರ್ದೇಶನ ನೀಡಿಯಾಗಿದೆ, ಪ್ರತೀ ತಿಂಗಳೂ ಹಣ ನಿನ್ನ ಖಾತೆಯಿಂದ ನನ್ನ ಖಾತೆಗೆ ವರ್ಗಾವಣೆಯಾಗುತ್ತದೆ. ಇನ್ನು ನಿನ್ನ ಕಷ್ಟ ಸುಖವನ್ನೆಲ್ಲಾ ನಾನೇ ನೋಡಿಕೊಳ್ಳಬೇಕಿರುವುದರಿಂದ ಎಲ್ಲದರ ಸುಪರ್ದಿ ನಾನೇ ತೆಗೆದುಕೊಂಡಿದ್ದೇನೆ. ನೀನು ನಿರ್ಯೋಚನೆಯಿಂದಿರು. ನಿನ್ನ ಹಳೆಯ ಫೋನ್ ಕೆಟ್ಟು ಹೋಗಿತ್ತು, ಅದಕ್ಕಾಗಿ ಹೊಸಾ ಫೋನ್ ಖರೀದಿಸಿದ್ದೇನೆ, ತೆಗೆದುಕೋ, ಆದರೆ ಹಳೆಯ ನಂಬರುಗಳೆಲ್ಲಾ ಅಳಿಸಿ ಹೋಗಿದೆ, ನಿನಗೂ ಹೊಸಾ ನಂಬರ್ ಬಂದಿದೆ, ಹಳೇ ನಂಬರ್ ಇನ್ನು ಮುಂದೆ ಇರುವುದಿಲ್ಲ.
ದಿಗ್ಭಾಂತರಾಗಿಬಿಟ್ಟರು ಸುಂದರಮ್ಮನವರು. ಬಾಳ ಸಂಜೆಯಲ್ಲಿ ಕೈಕೊಟ್ಟು ಹೇಳದೇ ಕೇಳದೇ ಹೊರಟುಬಿಟ್ಟ ಯಜಮಾನರನ್ನು ನೆನೆದು ಹನಿಗಣ್ಣಾದರು. ಕೊಂಚವೂ ಲೋಕದ ವ್ಯವಹಾರ ಜ್ಞಾನ ಬೆಳೆಸಿಕೊಳ್ಳದಿದ್ದ ತಮ್ಮನ್ನು ತಾವೇ ಹಳಿದುಕೊಂಡರು. ನನ್ನದು ಮುಗ್ಧತೆಯಲ್ಲ, ಪೆದ್ದುತನ ಎಂದು ಪೇಚಾಡಿಕೊಂಡರು.
ಹೊಸ ಮನೆಯಲ್ಲಿ ಅಡುಗೆಯವಳನ್ನು, ಪುಟ್ಟಿಯನ್ನು ನೋಡಿಕೊಳ್ಳಲು ಬರುತ್ತಿದ್ದ ಕೇರ್ ಟೇಕರ್ ಅನ್ನು ಬಿಡಿಸಿಬಿಟ್ಟಿದ್ದರು. ಕೆಲಸಗಳ ಹೊರೆ, ಮನೆಯ ಜವಾಬ್ದಾರಿ ಒಂದೊಂದಾಗಿ ಸುಂದರಮ್ಮನವರ ಹೆಗಲಿಗೆ ಬೀಳಗೊಡಗಿತು. ಯಜಮಾನಿಕೆಯನ್ನು ಮಾತ್ರ ಸೊಸೆ ತನ್ನಲ್ಲೇ ಇಟ್ಟುಕೊಂಡಿದ್ದಳು.
ಸಂಜೆ ಒಂದು ಗಂಟೆ ಮಾತ್ರ ಕೆಳಗೆ ವಾಕಿಂಗ್ ಹೋಗಲು ಅನುಮತಿ ಸಿಕ್ಕಿತ್ತು. ಅದೂ ಪುಟ್ಟಿಯ ಜೊತೆ ಮಾತ್ರ. ಹಿಂದಿರುಗಿ ಬಂದ ನಂತರ ಹಿಂದಿನಿಂದ ಪುಟ್ಟಿಯಲ್ಲಿ ವಿಚಾರಣೆ ನಡೆಯುತಿತ್ತು – ಅಜ್ಜಿ ಯಾರಿಗಾದರೂ ಫೋನ್ ಮಾಡಿದರಾ?, ಯಾರೊಂದಿಗಾದರೂ ಮಾತನಾಡಿದರಾ? – ಮನೆಯ ಯಜಮಾನಿ ವಿಚಾರಿಸಿಕೊಳ್ಳುತ್ತಿದ್ದಳು.
ಬೆಳಗ್ಗೆಯಿಂದ ಮಾತಿಲ್ಲ, ಕತೆಯಿಲ್ಲ, ಕತ್ತೆಯ ದುಡಿತ, ಹಣ್ಣುಗಾಯಿಯಾಗಿಬಿಟ್ಟರು ಸುಂದರಮ್ಮನವರು. ಅವರ ದೊಡಮ್ಮ ಹೇಳುತ್ತಿದ್ದ ಗಾದೆಯ ಮಾತು – ಗಂಡನ ರಾಜ್ಯ ರಾಮರಾಜ್ಯ, ಮಗನ ರಾಜ್ಯ ಯಮರಾಜ್ಯ – ಆಗಾಗ್ಗೆ ನೆನಪಿಗೆ ಬರುತಿತ್ತು.
ನಾಲ್ಕಾರು ತಿಂಗಳುಗಳಲ್ಲೇ ಮನೆಯಲ್ಲಿ ಮತ್ತೊಂದು ಬಾಂಬ್ ಸ್ಪೋಟಿಸಿತು – ಗಂಡ ಹೆಂಡತಿ ವಿಚ್ಛೇದನ ತೆಗೆದುಕೊಳ್ಳುತ್ತಿದ್ದಾರೆ – ವಿಚಾರಿಸುವ ಧೈರ್ಯವೂ ಬರದಂತೆ ಮನೆಯ ವಾತಾವರಣ ಬಿಗುವಾಯಿತು.
ಒಂದು ದಿನ ಮನೆಗೆ ಬಂದ ಮಗ – ಅಮ್ಮಾ, ನಾನು ಮತ್ತು ನೀನು ನಾಳೆ ಬೇರೊಂದು ಚಿಕ್ಕ ಫ್ಲಾಟಿಗೆ ಹೋಗುತ್ತಿದ್ದೇವೆ.
ಸರಿಯಪ್ಪ – ಎಂದಷ್ಟೇ ಹೇಳಿದರು.
ಅಲ್ಲಿಷ್ಟು, ಇಲ್ಲಿಷ್ಟು ಕಿವಿಗೆ ಬಿದ್ದ ವಿಷಯದಿಂದ ಸುಂದರಮ್ಮನವರಿಗೆ ಇಷ್ಟು ಮಾತ್ರ ತಿಳಿದು ಬಂತು –
ಮಗುವಿನ ಸುಪರ್ದೂ ಸೊಸೆಗೆ ಸಿಕ್ಕಿತಲ್ಲದೆ ಮಗುವಿನ ಪಾಲನೆ, ಪೋಷಣೆ, ಬೆಳೆಸುವ ಜವಾಬ್ದಾರಿ ಎಲ್ಲದರ ಖರ್ಚುವೆಚ್ಛಗಳನ್ನು ತೂಗಿಸುವ ಸಲುವಾಗಿ ಇಬ್ಬರ ಹೆಸರಿನಲ್ಲಿದ್ದ ಮನೆ ಸೊಸೆಗೆ ವರ್ಗಾಯಿಸಲ್ಪಟ್ಟಿತ್ತು. ಇದ್ದ ಬದ್ದ ಹಣಕಾಸನ್ನೂ ನೀಡಿಯಾಗಿತ್ತು. ಅನಿರುದ್ಧನ ಕೈ ಖಾಲಿಯಾಗಿತ್ತು, ಮನಸ್ಸು ಮಂಕು ಬಡಿದಿತ್ತು.
ಕೆಲದಿನಗಳಾಗಿತ್ತು. ಒಂದು ಬೆಳಿಗ್ಗೆ ಎಂದಿನಂತೆ ಬೇಗ ಎದ್ದ ಸುಂದರಮ್ಮನವರು ಬಾಯ್ಲರ್ ಸ್ವಿಚ್ ಹಾಕಿ, ಡಿಕಾಕ್ಷನ್ನ ಹಾಕಿ, ಹಲ್ಲುಜ್ಜಿ ಮುಖ ತೊಳೆದು ಬಂದು ಕಾಫಿ ಕುಡಿದು, ಉಪ್ಪಿಟ್ಟಿಗೆ ಎಲ್ಲವನ್ನೂ ಅಣಿಗೊಳಿಸಿ ಸ್ನಾನಕ್ಕೆ ಹೋಗಿ ಪೂರೈಸಿಕೊಂಡು ಬಂದು ದೇವರಿಗೆ ದೀಪ ಹಚ್ಚಿ ಉಪ್ಪಿಟ್ಟು ಮಾಡಿ ಮುಗಿಸಿದರೂ ಅನಿರುದ್ಧ ಎದ್ದು ಬರಲಿಲ್ಲ. ಕೋಣೆಯ ಬಾಗಿಲ ಮೇಲೆ ಸಣ್ಣಗೆ ಬಡಿದರು. ಏನೂ ಶಬ್ಧವಿಲ್ಲ, ಜೋರಾಗಿ ಬಡಿದರು, ಶಬ್ಧವಿಲ್ಲ, ನೂಕಿದರೆ ಬಾಗಿಲು ಹಿಂದಕ್ಕೆ ತೆರೆಯಿತು.
ಒಳಗಿನ ದೃಶ್ಯ ಹೃದಯವಿದ್ರಾವಕವಾಗಿತ್ತು. ಮಗ ಕೈಲಿ ಹಿಡಿದಿದ್ದ ಮಾತ್ರಗಳ ಶೀಶೆ ಹಾಗೇ ಇತ್ತು, ಕೈಕಾಲುಗಳು ಚಾಚಿದ್ದವು, ಕಟಬಾಯಿಯಲ್ಲಿ ಬಂದಿದ್ದ ನೊರೆನೊರೆಯಾದ ಜೊಲ್ಲು ಹಾಗೇ ಒಣಗಿತ್ತು, ಪ್ರಾಣಪಕ್ಷಿ ಹಾರಿಹೋಗಿತ್ತು.
ಮನೆಯಿಂದ ಆಚೆ ಬಂದು ದಿಗ್ಭಾಂತರಾಗಿ ನಿಂತುಬಿಟ್ಟರು, ಸುಂದರಮ್ಮ. ಕಣ್ಣಿನಿಂದ ನೀರಕೋಡಿ ಹರಿಯುತಿತ್ತು. ಇದನ್ನು ಕಂಡ ಎದುರು ಮನೆಯ ದಂಪತಿ ಬಳಿ ಬಂದರು. ಅವರ ಕೈ ಹಿಡಿದು ಒಳಗೆ ಕರೆತಂದು ಕುಳ್ಳಿರಿಸಿದರು. ಅವರ ಕಣ್ಣುಗಳಲ್ಲಿ, ಮೊಗದಲ್ಲಿದ್ದ ಹಲವಾರು ಪ್ರಶ್ನೆಗಳಿಗೆ ಸುಂದರಮ್ಮ ಕೋಣೆಯೆಡೆಗೆ ಕೈದೋರಿ, ದೊಪ್ಪೆಂದು ಸೋಫಾದಲ್ಲಿಯೇ ಬಿದ್ದುಬಿಟ್ಟರು. ಪ್ರಜ್ಞೆ ತಪ್ಪಿಹೋಯಿತು. ಆ ದಂಪತಿಯೇ ಮತ್ತೆ ನಾಲ್ಕಾರು ನೆರೆಹೊರೆಯವರುಗಳೊಂದಿಗೆ ಸೇರಿ ಮುಂದಿನ ಕೆಲಸಗಳನ್ನು ನಿಭಾಯಿಸಿದರು.
ಜೀಪಿನಲ್ಲಿ ಬಂದ ಪೋಲೀಸರು ಕೋಣೆಯೊಳಗೆ ಹೊಕ್ಕು ಮಹಜರು ನಡೆಸಿ ಹೊರಬಂದರು. ಅವರ ಕೈಯಲ್ಲಿ ಎರಡು ಪತ್ರಗಳಿದ್ದವು. ಒಂದರಲ್ಲಿ ಅನಿರುದ್ಧ ಬರೆದಿದ್ದ ಒಂದೇ ಸಾಲು, ʼಅಮ್ಮಾ ನಾನು ಸೋತೆ, ನನ್ನನ್ನು ಕ್ಷಮಿಸಿಬಿಡುʼ. ಮತ್ತೊಂದು ಪತ್ರ ಹಿಂದಿನ ದಿನ ಅನಿರುದ್ಧನ ಕಛೇರಿಯಿಂದ ನೀಡಿದ್ದಾಗಿತ್ತು. ಅದರಲ್ಲಿ, ಅವನ ಕೆಲಸದಲ್ಲಿನ ಅನಾದರದಿಂದ, ವಿಪರೀತವಾಗಿ ಕಡಿಮೆಯಾಗಿರುವ ಕಾರ್ಯಕ್ಷಮತೆಯಿಂದಾಗಿ ಕಂಪನಿಗೆ ಹೆಚ್ಚಿನ ನಷ್ಟ ಉಂಟಾದ ಕಾರಣದಿಂದ ಕೆಲಸದಿಂದ ವಜಾ ಮಾಡಿದ ಪತ್ರ ಅದಾಗಿತ್ತು.
ಅನಿರುದ್ಧ ಆತ್ಮಹತ್ಯೆ ಮಾಡಿಕೊಂಡ ಸುದ್ಧಿ ಬಿರುಗಾಳಿಯ ವೇಗದಲ್ಲಿ ಹರಡಿತು. ಪಕ್ಕದ ಬಡಾವಣೆಯಲ್ಲಿದ್ದ ಭಟ್ಟರ ಸೋದರ ಸಂಬಂಧಿಯ ಮಗ ಮತ್ತು ಸೊಸೆ ವಿಷಯ ತಿಳಿದು ಓಡಿಬಂದರು. ಅವರೇ ನೆಂಟರಿಷ್ಟರಿಗೆಲ್ಲಾ ವಿಷಯ ತಿಳಿಸಿದರು. ಪುತ್ತೂರಿನಿಂದ ಗಣಪತಿ ಭಟ್ಟರ ತಮ್ಮ ಸತೀಶ ಭಟ್ಟರಿಗೂ ಸುದ್ದಿ ಹೋಯಿತು. ಅವರು ಹೇಳಿದರು – ನಾನು ಕುಟುಂಬ ಸಮೇತನಾಗಿ ಈಗಲೇ ಹೊರಡುತ್ತಿದ್ದೇನೆ.
ಸತೀಶ ಭಟ್ಟರ ಕುಟುಂಬ ಟ್ಯಾಕ್ಸಿ ಮಾಡಿಕೊಂಡು ಬೆಂಗಳೂರಿನೆಡೆಗೆ ಹೊರಟಿತ್ತು. ಯಾರಿಗೂ ಮಾತು ಬೇಕಿರಲಿಲ್ಲ. ಮೌನವೇ ಮಾತಾಗಿತ್ತು. ಕಣ್ಣೆವೆಗಳನ್ನು ಮುಚ್ಚಿಕೊಂಡ ಸತೀಶ ಭಟ್ಟರ ಒಳಕಣ್ಣಿಗೆ ಅಣ್ಣನೊಡಗಿನ ಬಾಲ್ಯ, ಅನುಬಂಧಗಳು ರಾಶಿ ರಾಶಿಯಾಗಿ ನುಗ್ಗಿ ಬರತೊಡಗಿದವು. ಅಣ್ಣ ತಮ್ಮಂದಿರಲ್ಲಿ ಅನ್ಯೋನ್ಯ ಪ್ರೀತಿ. ಅಣ್ಣ ಬ್ಯಾಂಕ್ ಕೆಲಸಕ್ಕೆ ಸೇರಿ ವರ್ಗಾವಣೆಯಿಂದಾಗಿ ಹಲವಾರು ಊರುಗಳಲ್ಲಿದ್ದರೂ ವರ್ಷಕ್ಕೊಮ್ಮೆಯೋ ಎರಡು ಬಾರಿಯೋ ಊರಿಗೆ ಬರುವುದನ್ನು ಹಲವಾರು ವರುಷಗಳ ತನಕ ತಪ್ಪಿಸುತ್ತಿರಲಿಲ್ಲ. ಇವರುಗಳೂ ಅಣ್ಣ ವರ್ಗಾವಣೆಯಾಗಿ ಹೋದ ಪ್ರತಿ ಊರಿಗೂ ಕುಟುಂಬ ಸಮೇತರಾಗಿ ಹೋಗಿ ಎಲ್ಲರೂ ಒಟ್ಟಾಗಿ ಸುತ್ತ ಮುತ್ತಲಿನ ಪ್ರವಾಸೀ ತಾಣಗಳಿಗೆ ಭೇಟಿ ನೀಡಿ ಬರುತ್ತಿದ್ದರು. ಅವರು ಇವರಲ್ಲಿಗೆ ಬರಲಿ, ಇವರು ಅವರಲ್ಲಿಗೆ ಹೋಗಲಿ, ಪ್ರತೀ ಸಲ ಬೆಳೆದ ದವಸ ಧಾನ್ಯಗಳು, ಬೇಳೆ ಕಾಳುಗಳು, ಗೋಡಂಬಿ ಮುಂತಾದವುಗಳೊಂದಿಗೆ ಹಲಸಿನ ಹಪ್ಪಳ, ಮಿಡಿ ಉಪ್ಪಿನಕಾರಿ ಮುಂತಾದ ಖಾದ್ಯಗಳೂ ರವಾನೆಯಾಗುತ್ತಿದ್ದವು. ಅಣ್ಣನೂ ಅಷ್ಟೆ, ಯಾವ ಊರಿಗೇ ತಮ್ಮನ ಕುಟುಂಬ ಬರಲಿ, ಆ ಊರಿನ ವಿಶೇಷ ವಸ್ತುಗಳು, ಬಟ್ಟೆಬರೆಗಳುನ್ನು ತೆಗೆಸಿ ಕೊಡುತ್ತಿದ್ದರು.
ಅನಿರುದ್ಧ ಪದವಿಯನ್ನು ಮುಗಿಸುವುದರಲ್ಲಿದ್ದ. ಭಟ್ಟರು ಮೈಸೂರಿನಲ್ಲಿ ಮನೆ ಕಟ್ಟಿಸುತ್ತಿದ್ದರು. ಹಣಕಾಸಿನ ಅಡಚಣೆ ಉಂಟಾಯಿತು. ಆಗ ಅಣ್ಣ ತಮ್ಮ ಕುಳಿತು ಮಾತನಾಡಿದರು. ಗಣಪತಿ ಭಟ್ಟರು ಹೇಳಿದರು –
ಅನಿರುದ್ಧನೂ ಈ ಕಡೆಯೇ ಹುಟ್ಟಿ ಬೆಳೆದಿರುವುದರಿಂದಲೂ, ಓದಿಗೆ ತಕ್ಕ ನೌಕರಿ ಸಿಗುವ ಅವಕಾಶಗಳು ಹತ್ತಿರಲ್ಲೇ ಇರುವ ಬೆಂಗಳೂರಿನ್ಲೇ ಹೆಚ್ಚಾಗಿರುವುದರಿಂದ ನಾವು ಮೈಸೂರಿನಲ್ಲೇ ನಿವೃತ್ತಿಯ ನಂತರವೂ ಇರುವುದೆಂದು ತೀರ್ಮಾನಿಸಿದ್ದೇವೆ.
ಮತ್ತೆ ನಿನ್ನ ಅಲ್ಲಿ ಜಮೀನನ್ನೆಲ್ಲಾ ಏನು ಮಾಡುವುದು?
ನಾನಂತೂ ಆ ಜಮೀನಿನಲ್ಲಿ ಎಂದೂ ದುಡಿಮೆಯನ್ನು ಮಾಡಿಯೇ ಇಲ್ಲ
ಹಾಗೆಂದು ಹಿರಿಯರ ಆಸ್ತಿ ಬಿಡಲು ಸಾಧ್ಯವೇ? ನೀನು ಊರ ಕಡೆ ಬರುವ ಯೋಚನೆ ಇಲ್ಲವೇ ಇಲ್ಲ ಎಂದಾದರೆ ನಿನ್ನ ಪಾಲಿನ ಆಸ್ತಿಯನ್ನು ಮಾರಿಬಿಡೋಣ, ಹೇಗೂ ನಿನಗೂ ಈಗ ದುಡ್ಡಿನ ಅವಶ್ಯಕತೆ ಇದೆ.
ಪಾಲಿನ ವಿಚಾರ ಮಾತನಾಡಲು ಗಂಟಲು ಹಿಡಿಯುತ್ತದೆ ಸತೀಶಾ. . .
ಇಲ್ಲಾ ಅಣ್ಣಾ ಹಾಗೆಲ್ಲಾ ಯೋಚಿಸಬೇಡ, ಒಮ್ಮೆ ನೀನು, ಅತ್ತಿಗೆ, ಅನಿರುದ್ಧ ಊರಿಗೆ ಬನ್ನಿ ಎಲ್ಲವನ್ನೂ ವಿಲೇವಾರಿ ಮಾಡಿ ಬಿಡೋಣ.
ಹಾಗೇ ಆಗಲಿ.
ಅದರಂತೆ ಕೆಲದಿನಗಳಲ್ಲೇ ಗಣಪತಿ ಭಟ್ಟರು, ಸುಂದರಮ್ಮ, ಅನಿರುದ್ಧ ಪುತ್ತೂರಿಗೆ ಹೋಗಿ ನಾಲ್ಕಾರು ದಿನಗಳು ಇದ್ದು ತಮ್ಮ ಪಾಲಿನ ಜಮೀನನ್ನು ಮಾರಿ ಬಿಟ್ಟರು. ಸತೀಶ ಭಟ್ಟರ ಮಧ್ಯಸ್ಥಿಕೆಯಲ್ಲಿ ಒಳ್ಳೆಯ ಬೆಲೆಯೇ ಬಂತು.
ನಂತರ, ಸತೀಶ ಭಟ್ಟರು ಹೇಳಿದರು – ಅಣ್ಣಾ, ಈಗ ಹಿರಿಯರಿಂದ ಬಂದ ಒಡವೆ, ವಸ್ತುಗಳು, ಪಾತ್ರೆ ಪಡಗಗಳು, ಮತ್ತು ಈ ಮನೆಯ ವಿಲೇವಾರಿಯಾಗಬೇಕು.
ಕುಳಿತಿದ್ದ ಗಣಪತಿ ಭಟ್ಟರು ಎದ್ದು ಬಂದು ತಮ್ಮ ಬಲಗೈಯಿಂದ ತಮ್ಮನ ಬಾಯನ್ನು ಮುಚ್ಚಿ ಹೇಳಿದರು –
ಹಿರಿಯರ ಜಮೀನನ್ನು ಮಾರಿ ಆಗಲೇ ನಾನು ಪಾಪಪ್ರಜ್ಞೆಯಲ್ಲಿ ನರಳುತ್ತಿದ್ದೇನೆ. ಇರುವುದೊಬ್ಬ ಮಗ, ಅವನನ್ನು ಬಿಟ್ಟು ದೂರ ಇರಲು ಮನಸ್ಸಾಗುವುದಿಲ್ಲ, ಹಾಗಾಗಿ ಈ ಕಾರ್ಯದಲ್ಲಿ ತೊಡಗಬೇಕಾಯಿತು. ಮನೆ, ಮನೆಯ ಸಾಮಾನುಗಳು ಒಡವೆಗಳು ಪೂರ್ತಿಯಾಗಿ ನಿನ್ನವು, ನೀನಿನ್ನೂ ಮಗಳ ಮದುವೆ ಬೇರೆ ಮಾಡಬೇಕು, ನನಗಿಷ್ಟು ಸಾಕು.
ಮನೆಯ ಹೆಂಗಸರುಗಳೂ ಸದ್ಗೃಹಿಣಿಯರಾದುದರಿಂದ ಯಾವ ಮನಸ್ತಾಪವಿಲ್ಲದೇ ವ್ಯವಹಾರ ಮುಗಿದಿತ್ತು, ಬಾಂಧವ್ಯ ಉಳಿದಿತ್ತು.
ಮುಂದಿನ ದಿನಗಳಲ್ಲಿ ಸತೀಶ ಭಟ್ಟರು ಹಳೆಯದಾಗಿದ್ದ ಮನೆಯನ್ನು ಕೆಡವಿ ನವನವೀನ ಸೌಲಭ್ಯಗಳನ್ನೊಳಗೊಂಡ ಹೊಸ ಮನೆಯನ್ನು ಕಟ್ಟಿದ್ದರು. ಸುಂದರಮ್ಮನವರಿಗೆ ವಿಪರೀತ ಮಂಡಿನೋವಾದ್ದರಿಂದ ಆ ಸಮಯದಲ್ಲಿ ಹೋಗಲಾಗಿರಲಿಲ್ಲ. ಮನದೊಳಗೆ ಪ್ರೀತಿ ವಾತ್ಸಲ್ಯಗಳಿದ್ದರೂ ಹೋಗಿ ಬಂದು ಮಾಡುವುದು ಕ್ರಮೇಣ ಕಮ್ಮಿಯಾಗಿತ್ತು.
ಎಲ್ಲ ವಿಚಾರಗಳೂ ಕಣ್ಣ ಮುಂದೆ ಬಂದು ಹೋಯಿತು. ಟ್ಯಾಕ್ಸಿ ಬೆಂಗಳೂರು ತಲುಪಿತ್ತು. ಮುಂದಿನ ಕಾರ್ಯಗಳ ಉಸ್ತುವಾರಿಯನ್ನು ಭಟ್ಟರೇ ವಹಿಸಿಕೊಂಡಿದ್ದರು. ಮೈಸೂರಿಗೂ ಸುದ್ದಿ ಹೋಗಿತ್ತು. ವಿಜಯಾ, ಆಶಾರಾದಿಯಾಗಿ ಅನೇಕರು ಸುಂದರಮ್ಮನವರನ್ನು ಮಾತನಾಡಿಸಲು ಬಂದಿದ್ದರು. ಅವರುಗಳೊಂದಿಗೆ ಮಾತನಾಡುತ್ತಾ ಸುಂದರಮ್ಮ ಮತ್ತೊಮ್ಮೆ ಕಣ್ಣೀರಾದಾರು. –
ನೋಡಿದ್ರಾ, ಕಡೆಗಾಲದಲ್ಲಿ ನನ್ನ ಅವಸ್ಥೆ ಹೇಗಾಯಿತು, ಇನ್ನು ನನ್ನ ಮುಂದಿನ ಜೀವನಕ್ಕೆ ಏನು ಅರ್ಥವಿದೆ, ಬಂದಿರುವ ನೆಂಟರಿಷ್ಟರೆಲ್ಲಾ ಹೋದ ಮೇಲೆ, ಅನಿರುದ್ಧನ ಕರ್ಮಾಂತರಗಳೆಲ್ಲ ಮುಗಿದ ಮೇಲೆ, ನಾನೂ ಯಾವುದಾದರೂ ಕೆರೆನೋ ಬಾವಿಯನ್ನೋ ನೋಡಿಕೊಳ್ಳುವುದಷ್ಟೇ ಉಳಿದಿರುವುದು . . .
ಈ ಮಾತುಗಳು ಕಿವಿಗೆ ಬೀಳುತ್ತಲೇ ಪಕ್ಕದ ಕೋಣೆಯಲ್ಲಿ ಏನೋ ಕೆಲಸದಲ್ಲಿ ತೊಡಗಿದ್ದ ಸತೀಶ ಭಟ್ಟರು ಮಾಡುತ್ತಿದ್ದ ಕೆಲಸವನ್ನು ಅಷ್ಟಕ್ಕೇ ಬಿಟ್ಟು ಈ ಕಡೆ ಬಂದವರೇ ಹೇಳಿದರು –
ಅತ್ತಿಗೆ ಎಂತಹ ಮಾತನಾಡುತ್ತೀರಿ, ನಿಮಗೆ ಅತೀಯಾದ ದುಃಖವಾಗಿದೆ, ನಿಜ, ಆದರೆ ಅನಿರುದ್ಧ ಮಾಡಿರುವ ಕೆಲಸದಿಂದ ನೀವೂ ಸೇರಿ ನಾವೆಲ್ಲರೂ ಎಷ್ಟು ನೋವು ಅನುಭವಿಸುತ್ತಿದ್ದೇವೆ, ನೀವೂ ಅದೇ ರೀತಿ ಯೋಚಿಸುವುದಾ? ಅಣ್ಣ ಬೇಡ ಎಂದಿದ್ದರೂ ನಾನು ಮನೆ ಕಟ್ಟಿಸುವಾಗ ಅಕ್ಕ ಪಕ್ಕದಲ್ಲೇ ಎರಡು ಮನೆಗಳನ್ನು ಕಟ್ಟಿಸಿದ್ದೇನೆ, ಅಲ್ಲಿ ಸಾಕಷ್ಟು ಪಾತ್ರೆ ಪಡಗಗಳೂ, ಇನ್ನಿತರ ಮನೆಗೆ ಉಪಯೋಗಿಸುವ ಸಾಮಾನುಗಳೂ ಇವೆ. ನೀವೀಗ ನಮ್ಮ ಜೊತೆ ಬರುತ್ತಿದ್ದೀರಿ, ಬಂದು ನಮ್ಮ ಕುಟುಂಬದ ಹಿರಿಯರಾಗಿ ಮಾರ್ಗದರ್ಶನ ನೀಡುತ್ತಾ ನೀವು ಇರುತ್ತೀರಿ. ನಿಮ್ಮ ಸ್ವಾಭಿಮಾನಕ್ಕೆ, ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ನೀವು ಅಲ್ಲಿ ಇರುತ್ತೀರಿ. ನಿಮ್ಮ ಕಷ್ಟ ಸುಖಗಳಿಗಾಗಲು ಪಕ್ಕದಲ್ಲೇ ನಾವುಗಳಿರುತ್ತೀವಿ. ನಮ್ಮ ಹಿರಿಯರು ಮಾಡಿಟ್ಟಿರುವ ಆಸ್ತಿಯನ್ನು ಅನುಭವಿಸುವ ಹಕ್ಕು ನಿಮಗೂ ಸಂಪೂರ್ಣವಾಗಿ ಇದೆ.
ನಿಮ್ಮಣ್ಣ ಅದನ್ನು ನಿಮಗೇ ಕೊಟ್ಟು ಬಿಟ್ಟದ್ದರಲ್ಲವಾ? – ಸುಂದರಮ್ಮ ಕೇಳಿದರು.
ಅವನು ಹಾಗೆ ಹೇಳಿದ್ದು ಅವನ ದೊಡ್ಡತನ, ನಾನು ಹೀಗೆ ನಡೆದುಕೊಳ್ಳ ಬೇಕಿರುವುದು ನನ್ನ ಕರ್ತವ್ಯ, ನೀವು ನಮ್ಮೊಂದಿಗೆ ಬರುತ್ತೀರಾ ಅಷ್ಟೇ.
ಸುಂದರಮ್ಮನವರ ಉಳಿದ ದಿನಗಳು ನೆಮ್ಮದಿಯಾಗಿ ಕಳೆಯಲು ದಾರಿಯಾದದ್ದು, ವಿಜಯಾ ಆಶಾರಿಗೂ ಸಮಾಧಾನವನ್ನು ತಂದಿತ್ತು.

–ಪದ್ಮಾ ಆನಂದ್ ,ಮೈಸೂರು

