ಬೇಂದ್ರೆಯವರು ಒಂದೆಡೆ ಹೇಳುತ್ತಾರೆ,
ನನ್ನ ಪಾಡೆನಗಿರಲಿ ಅದರ ಹಾಡನಷ್ಟೇ
ನೀಡುವೆನು ರಸಿಕ! ನಿನಗೆ
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ
ನನ್ನ ಕಷ್ಟಗಳೆಲ್ಲ ನನಗೆ ಇರಲಿ ಬರೀ ಸುಖವನ್ನೇ ಸುಖ ಸಂತೋಷದ ಸಾಲುಗಳನ್ನೇ ಅದರ ಹಾಡನ್ನೇ ನಿನಗೆ ಕೊಡುವೆ. ಆ ರಸಾಸ್ವಾದದಿಂದ ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸಕ್ಕರೆಯ
ಸವಿಯನ್ನು ನನಗೆ ಹಣಿಸು ಎಂದು.
ಮಲ್ಲಿಗೆಯ ಕವಿ ಎಂದೇ ಪ್ರಖ್ಯಾತರಾದ ಸೊಗಸಾದ ಮಲ್ಲಿಗೆಯ ಕಂಪಿನಂತೆ ಕವನಗಳನ್ನು ನಮಗೆ ನೀಡಿದ ಕವಿ ಕೆ ಎಸ್ ನರಸಿಂಹಸ್ವಾಮಿ . ಸರಳ ಕೋಮಲ ಭಾವಗಳ ನವಿರನ್ನು ಮಲ್ಲಿಗೆಯ ನರುಗಂಪಿನಂತೆ ಕನ್ನಡ ಸಾಹಿತ್ಯ ರಸಿಕರಿಗೆ ಪಸರಿಸಿದ ಕೀರ್ತಿ ಅವರದು .ಅಷ್ಟೆಲ್ಲಾ ಸೊಗಸಾದ ಭಾವಗೀತೆಗಳನ್ನು ಕವನಗಳನ್ನು ಬರೆದ ಕವಿಯ ದೃಷ್ಟಿಯಲ್ಲಿ ಕವಿಯೆಂದರೇನು ಕವಿತೆ ಎಂದರೇನು ಎಂಬುದನ್ನು ಅವರ ಕವನಗಳ ಮೂಲಕವೇ ಅರ್ಥ ಮಾಡಿಕೊಳ್ಳುವ ಪ್ರಯತ್ನ ಈ ಲೇಖನದಲ್ಲಿ .
ಕವಿ ತಮ್ಮ ”ಶಿಲಾಲತೆ’‘ ಕವನಸಂಕಲನದ ಶರದ್ ಶಾರದೆ ಕವನದಲ್ಲಿ ತಮ್ಮ ಕವಿತೆಯ ಬಗ್ಗೆ ಹೀಗೆ ಹೇಳುತ್ತಾರೆ,
ಋತುಗತಿಯಲ್ಲ ಶೈಲಿಮತಿಯಲ್ಲ ಶಬ್ದ ರತಿಯಲ್ಲ ನನ್ನ ಕವಿತೆ
ಪದ ಪದಕವಿಲ್ಲ ತಲೆ ಭಾರವಿಲ್ಲ ನಿಮ್ಮುಸಿರು ನನ್ನ ಕವಿತೆ
ಅಹಂಕಾರವಿಲ್ಲ ಅಲಂಕಾರವಿಲ್ಲ ನಿಜಾಕಾರ ನನ್ನ ಕವಿತೆ
ನನ್ನಾಸೆ ಕಣ್ಣ ಬಂದರಿಗೆ ಬಂದ ಶರನ್ನೌಕೆ ಈ ಕವಿತೆ
ಎಂತಹ ಸೊಗಸಾದ ಭಾವಲಹರಿ ಪದಪುಂಜಗಳ ಮೋಡಿ ನೋಡಿ . ಓದುಗರ ಉಸಿರು ನನ್ನ ಕವಿತೆ ಎನ್ನುವಲ್ಲಿ ಕವಿಯ ವಿನೀತ ಭಾವ ವ್ಯಕ್ತವಾಗಿದೆ . ಬಹುಮಾನ ಪದಕಗಳ ತಲೆ ಭಾರವಿಲ್ಲ ಎನ್ನುವಲ್ಲಿ ನಿರಪೇಕ್ಷ ಭಾವ ತುಂಬಿ ತುಳುಕುತ್ತಿದೆ .ಋತು ಗತಿ ಶೈಲಿ ಮತಿ ಅಥವಾ ಶಬ್ದರತಿಗಳ ಆಡಂಬರ ಇಲ್ಲ ಅಹಂಕಾರವೂ ಇಲ್ಲ ಅಲಂಕಾರವಿಲ್ಲ ಆದರೆ ನಿಜಕಾರವಾಗಿ ನನ್ನ ಬಯಕೆಯ ಕಣ್ಣಮುಂದೆ ಬಂದು ನಿಂತಿರುವ ನೌಕೆ ಎನ್ನುವಾಗ ಕವಿಯ ಕಲ್ಪನೆಯ ಸಾಕಾರ ಭರವಸೆಯ ಆಧಾರವಾಗಿ ಕವಿತೆ ಕಣ್ಣಿಗೆ ಕಟ್ಟುತ್ತದೆ . ಅವರ ಸಮಗ್ರ ಕವನ ಸಂಗ್ರಹಗಳ ಸಂಕಲನ ಮಲ್ಲಿಗೆಯ ಮಾಲೆ ಯ ಮುನ್ನುಡಿಯಲ್ಲಿ ಕವಿವರ್ಯರೇ ನುಡಿದಂತೆ “ಕವಿತೆ ಎಂದರೇನು ನನಗೆ ತಿಳಿಯದು ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ ನೋಟ ಸಮುದ್ರದಂಥ ಪ್ರಾಣಿ ಬರೆಯುತ್ತ ಬರೆಯುತ್ತ ಉತ್ತರ ಹುಡುಕಬೇಕಾಗಿದೆ”.
ಕವಿತೆ ಎಂದರೇನು ಎಂಬುದಕ್ಕೆ ಕವಿಗಳು ಕಾಲಕಾಲಕ್ಕೆ ಕೊಟ್ಟ ಉತ್ತರಗಳೇ ಅವರ ಕಾವ್ಯದ ವಿಕಸನದ ಮೀಟುಗೋಲುಗಳಾದಂತೆ ತೋರುತ್ತದೆ ಹಾಗೆಯೇ ಜೀವನ ಅನುಭವವು ವಿಸ್ತಾರವಾದಂತೆ ಹೊಸ ಹೊಸ ಅನುಭಾವದ ಹೊಳಹುಗಳು ಕವಿತೆ ಎಂಬುದರ ವ್ಯಾಖ್ಯಾನದ ರೂಪಗಳಾಗಿ ಹೊಸ ಆಯಾಮಗಳಲ್ಲಿ ತೋರಲ್ಪಡುತ್ತವೆ.
ಮುಂದೆ ತಮ್ಮ “ದೀಪದ ಮಲ್ಲಿ” ಕವನ ಸಂಕಲನದ “ಕವಿ ಮತ್ತು ಕಾವ್ಯ” ಕವನದಲ್ಲಿ ಕವಿತೆಯ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಹೀಗೆ ಸೂಚಿಸುತ್ತಾ ಹೋಗುತ್ತಾರೆ .
ಬದುಕಿನ ಅಲಕ್ಷ್ಮಿಯನು ಕಾವ್ಯದಲಿ ಎಳೆತಂದು
ತೊಡೆದು ತೊಲಗಿಸಲೊಬ್ಬ ಕಬ್ಬಿಗನೆ ಬೇಕು
ಸುಖಶಾಂತಿ ಲಕ್ಷ್ಮಿಯನು ಕಾವ್ಯದಲಿ ಕರೆತಂದು
ಹಾಡಿ ಹಾಡಿಸಲೊಬ್ಬ ಕಬ್ಬಿಗನೆ ಬೇಕು
ಬದುಕಿಗೆ ಕವಿ ಏಕೆ ಬೇಕು ಎನ್ನುವುದಕ್ಕೆ ಸ್ಪಷ್ಟ ಉತ್ತರ. ಬದುಕೆಂದರೆ ಚಿಂತೆ ಕಷ್ಟ ನೋವುಗಳು ಇದ್ದೇ ಇದ್ದದ್ದೇ. ಅದು ದಾರಿದ್ರದ ಅಲಕ್ಷ್ಮಿ ಅಥವಾ ಜೇಷ್ಠಾ ಲಕ್ಷ್ಮಿಯ ಪ್ರತಿರೂಪ. ಜೀವನದಲ್ಲಿ ಅದು ಇದ್ದದ್ದೇ ಕಾವ್ಯದಲ್ಲೂ ಬೇಕಾ ಎನ್ನುವುದಕ್ಕೆ ಹೀಗೆ ಹೇಳುತ್ತಾರೆ ಅದನ್ನು ಕಾವ್ಯದಲ್ಲಿ ಕರೆತಂದು ಕಾವ್ಯದಿಂದ ಹೊಡೆದೋಡಿಸಿದರೆ ಪ್ರತಿಮಾತ್ಮಕವಾಗಿ ಜೀವನದಿಂದಲೂ ಕಷ್ಟನಷ್ಟಗಳು ತೊಲಗಬಹುದು . ಹಾಗೆಯೇ ಶಾಂತಿ ಸುಖದ ಲಕ್ಷ್ಮಿಯನ್ನು ಕಾವ್ಯದಲ್ಲಿ ಗೌರವದಿಂದ ಕರೆತಂದು ಅವಳ ಬಗ್ಗೆ ಹಾಡಿ ಹೊಗಳಿ ಅವಳಿಂದ ಹಾಡಿಸಲು ಸಹಾ ಕಬ್ಬಿಗನೇ ಬೇಕು . ಅಂದರೆ ದುಃಖ ಸಂಕಷ್ಟಗಳನ್ನು ನಿವಾರಿಸಲು ನಲಿವು ಸಂತಸಗಳನ್ನು ತುಂಬಿಕೊಡಲು ಕಾವ್ಯವೇ ಸೂಕ್ತ ಸಶಕ್ತ ಸಮರ್ಥ ಮಾಧ್ಯಮ ಎಂದು ತೋರಿಸಿದ್ದಾರೆ .
ಹಾಗಾದರೆ ಎಂಥ ಹಾಡು ಹಾಡಬೇಕು?
ಚೆಲುವು ಒಲವು ನಿಲುವು ಗೆಲುವು ಶಕ್ತಿ ಎಲ್ಲವೂ ಇರುವಂತಹ ಹಾಡು .ಆದರೆ ಅದು ತಾನಾಗಿ ಹೊರಹೊಮ್ಮಬೇಕು . ಇಂತಹುದೇ ಬೇಕು ಹೀಗೆ ಬೇಕು ಎನ್ನುವ ಜನತೆಯ ಆದೇಶಕ್ಕೆ ಅನುಗುಣವಾಗಿ ಅದು ಬರದು . ಸ್ವಾತಂತ್ರ್ಯ ಪ್ರೇಮಿಯಾದ ಕವಿ ತನ್ನ ಮನದ ಮಾತುಗಳನ್ನು ಗಟ್ಟಿಯಾಗಿ ಸ್ಪಷ್ಟವಾಗಿ ನಿರೂಪಿಸುವುದು ಹೀಗೆ .
ಅದನಿದನು ಹಾಡೆಂಬ ಕಡ್ಡಾಯವೇಕೆ?
ವೇದಿಕೆಯ ಮೇಲಿನಿಂದುಪದೇಶವೇಕೆ?
ಕಬ್ಬಿಗನು ಬೆದರುವನೆ ಸ್ವಾತಂತ್ರ್ಯಪ್ರೇಮಿ?
ತಾರೆಗಳನಾಳುವನು, ಸಾಲದೀ ಭೂಮಿ.
ವಿಮರ್ಶಕರು ಇದನ್ನೇ ಮಾಡು ಅದನ್ನೇ ಹಾಡು ಎಂಬ ಕಡ್ಡಾಯ ಮಾಡಬಾರದು. ಇಂತಹ ರೀತಿಯ ಕವಿತೆಗಳನ್ನೇ ಬರೆಯಬೇಕು ಎಂದು ನಿರ್ದಿಷ್ಟ ಪಡಿಸಲೂ ಬಾರದು . ಒಂದು ವೇಳೆ ಹಾಗೆ ಮಾಡಿದರೂ ಕಬ್ಬಿಗನು ಹೆದರಿ ಅವರು ಹೇಳಿದಂತೆ ಕೇಳುವುದಿಲ್ಲ . ಅವನು ಈ ಭೂಮಿ ಸಾಲದೆಂದು ತಾರಾ ಲೋಕವನ್ನೇ ಆಳ ಹೊರಟಂತಹ ಸಾರ್ವಭೌಮ . ಕವಿತೆ ಹೀಗಿರಬೇಕು ಎಂದು ಯಾರೂ ಹೇಳುವುದಿಲ್ಲ ಅದು ಕವಿಯ ಕಲ್ಪನೆಗೆ ಸ್ವೇಚ್ಛೆಗೆ ಬಿಟ್ಟಿದ್ದು ಎಂದು ಹೇಳುವ ಈ ಸಾಲುಗಳು ಅರ್ಥಪೂರ್ಣ .ಕವಿಯ ಸ್ವಾಯತ್ತತೆಯನ್ನು ಸಂಪೂರ್ಣ ಸ್ವಂತಿಕೆಯಿಂದ ವರ್ತಿಸುವ ವ್ಯಕ್ತಿತ್ವದ ಘೋಷಣೆಯಂತೆ ಕಾಣುತ್ತದೆ .
ಸತ್ಯವೇ ಬೇಡೆಂದು ಕಲ್ಪನೆಯೇ ಬೇಕೆಂದು ಹೇಳಿಲ್ಲ ನಾವು ಹೇಳಿಲ್ಲ
ಕಬ್ಬಿಗನು ಅದುನಿದನು ಹಾಡಬೇಕೆಂದವರು ನಾವಲ್ಲ ಅಲ್ಲ ನಾವಲ್ಲ
ಹಾಗಾದರೆ ಕವಿ ಏನು ಮಾಡಬಹುದು?
ಏನೋ ದೇವರ ಸೃಷ್ಟಿ ಇರುವಷ್ಟು ಇಲ್ಲಿಹುದು;
ಇಲ್ಲದುದು ನಿನ್ನಲ್ಲಿಹುದು
ನಿನ್ನ ಮನಬಂದಂತೆ ಹಾಡಿ ಬರೆದಿಡಬಹುದು
ಕವಿಯೆ, ಅದು ನಿನ್ನ ಪಾಡು.
ಪ್ರಶಸ್ತಿ ಪುರಸ್ಕಾರ ಮನ್ನಣೆಗಳ ಬಯಕೆಯಿಲ್ಲದೆ ರಸಿಕನ ಎದೆಯ ಹಾಡಾಗುವ ಬಯಕೆಯೊಂದೇ ಕವಿಗೆ. ಹಾಗಾಗಿಯೇ ಜನಮನ ಬಯಸುವ ಕವಿತೆ ಕಟ್ಟ ಬಲ್ಲ ಮನಸ್ಸು ಜನತೆಗೆ ಹತ್ತಿರವಾಗುವ ಕನಸು ಎರಡೂ ಹೊಂದಿದ್ದ ತನ್ನ ತಾತ್ವಿಕ ನಿಲುವಿನ ಸಮರ್ಥನೆಯೂ ಇಲ್ಲಿದೆ. ಹಾಗಾಗಿಯೇ ಈ ಕವಿ ನಮ್ಮೆಲ್ಲರ ಬದುಕಿಗೆ ಭರವಸೆಯ ಬೆಳಕು ತುಂಬಿದವರು ಚೆಲುವನ್ನು ಬಯಸುವವರಿಗೆ ಚೆಲುವಿನ ಕವಿತೆಯಾಗಿ ಒಲವನ್ನು ಬಲ್ಲವರಿಗೆ ಒಲ್ಮೆಯ ಪಾಡುಗಳಾಗಿ ಬದುಕ ಬವಣೆಯ ನಡುವಿನ ಚೆಲು ಮೆಲು ತಂಗಾಳಿಗಳಾಗಿ ಬೀಸುವಂತಹ ಸೊಗಸಾದ ಭಾವಗೀತೆಗಳನ್ನು ಕೊಟ್ಟವರು .
(ಮುಂದುವರಿಯುವುದು….)

–ಸುಜಾತಾ ರವೀಶ್

