(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಸುಮನಾಳ ತಾತ ಶ್ರೀಕಂಠಶಾಸ್ತ್ರಿಗಳು ತಮ್ಮ ಪಾಲಿಗೆ ಬಂದಿದ್ದ ಪಿತ್ರಾರ್ಜಿತ ಅಂಗಡಿ ಮಳಿಗೆಗಳನ್ನು ತಮ್ಮ ಸೋದರರ ಮಕ್ಕಳೇ ನೋಡಿಕೊಳ್ಳುತ್ತಿದ್ದುದರಿಂದ ಅವುಗಳು ಸುಸ್ಥಿತಿಯಲ್ಲಿದ್ದವು. ಮೊಮ್ಮಗಳು ನಮಿತಾಳ ಮಾವನವರು ಹೋಟೆಲಿನ ವ್ಯವಹಾರ ನಡೆಸುತ್ತಿದ್ದರು. ಅದರಲ್ಲೇ ಅವರ ಕೈಹಿಡಿದಿದ್ದರಿಂದ ಅದನ್ನೇ ಕಸುಬಾಗಿ ಮುಂದುವರೆಸಿದ್ದರು. ಆದರೆ ಅವರಿಗೆ ಶಾಸ್ತ್ರಿಗಳ ಮಳಿಗೆಗಳನ್ನು ಪಡೆದು ಉದ್ಯೋಗ ನಡೆಸುವ ಉಮೇದಿರಲಿಲ್ಲ. ಸುಮನಾಳ ತಾತನವರಿಗೆ ತಾವಿರುವಾಗಲೇ ಆ ಮಳಿಗೆಗಳನ್ನು ಇತ್ಯರ್ಥ ಮಾಡಬೇಕೆಂದು ಅಲೋಚಿಸಿದರು. ಅವುಗಳನ್ನು ಬೇರೆಯವರಿಗೆ ಮಾರಿದರೆ ಒಳ್ಳೆಯ ಬೆಲೆ ಸಿಗುತ್ತಿತ್ತು. ಮೊದಲು ಪ್ರಸ್ಥಾವನೆಯನ್ನು ಅವುಗಳನ್ನು ನೋಡಿಕೊಳ್ಳುತ್ತಿದ್ದ ಅವರ ತಮ್ಮನ ಮಕ್ಕಳೊಡನೆ ಇಟ್ಟರು. ಅವರು ಕೊಳ್ಳುವ ಉತ್ಸಾಹ ತೋರಿದ್ದರಿಂದ ಅವರಿಗೇ ಮರಾಟ ಮಾಡಿ ಬಂದ ಹಣವನ್ನು ತಮ್ಮ ಹೆಣ್ಣು ಮಕ್ಕಳು, ಮೊಮ್ಮಕ್ಕಳಿಗೆ ಹಂಚಿಬಿಟ್ಟರು. ಅಲ್ಲಿಗೆ ಶ್ರೀರಂಗಪಟ್ಟಣದಲ್ಲಿದ್ದ ಪೂರ್ವಜರ ಆಸ್ತಿ ವಿಲೇವಾರಿ ಅಗಿಹೋಯಿತು. ನಮಿತಾಳಿಗೆ ಎರಡು ಮಕ್ಕಳಾಗಿದ್ದನ್ನೂ ತಾತನವರು ಕಂಡರು. ಮೊಮ್ಮಕ್ಕಳು ವಿದ್ಯಾಭ್ಯಾಸದಲ್ಲಿ ತಾಮುಂದು ನಾಮುಂದು ಎಂಬಂತೆ ಪ್ಯಪೋಟಿಯಲ್ಲಿ ಓದುತ್ತಿದ್ದರು. ಎಲ್ಲ ಸಂತೋಷವನ್ನು ಸ್ವತಃ ನೋಡಿ ಅಜ್ಜಿ ತಾತನವರಿಬ್ಬರೂ ದೈವಾಧೀನರಾದರು.
ನಂತರ ಸುಮನಾಳ ತಂದೆ ತಾಯಿಗಳೇ ಮನೆಗೆ ಹಿರಿಯರಾದರು. ಯಜಮಾನಿಕೆ ವಹಿಸಿಕೊಂಡರು. ಮನೆಯಲ್ಲಿ ಹೆಸರಿಗೆ ತಂದೆ ಯಜಮಾನರಾದರೂ ಅವರು ಮಾತು ಕಡಿಮೆ, ಅಮ್ಮನದ್ದೇ ದರಬಾರು ನಡೆಯುತ್ತಿತ್ತು. ಸುಮನಾ ಮತ್ತು ರಜನಿ ಇಬ್ಬರೂ ಪದವೀಧರರಾದರು. ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೆ ಬಿ.ಎಡ್. ಮಾಡಿದರು. ಬಿ.ಎಸ್.ಸಿ, ಬಿ.ಎಡ್. ಮಾಡಿದ ಸುಮನಾ ಮತ್ತು ಬಿ.ಕಾಂ. ಬಿ.ಎಡ್. ಮಾಡಿದ ರಜನಿ ಇಬ್ಬರಿಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೆಲಸ ಸಿಕ್ಕಿತು. ಅನಿವಾರ್ಯವಾಗಿ ಈ ಕಾರಣದಿಂದ ಅವರು ಮೈಸೂರಿನಿಂದ ಹೊರಹೋಗಬೇಕಾಯಿತು. ಊರಿನಿಂದ ಪ್ರಯಾಣ ಮಾಡಿಕೊಂಡು ಕೆಲಸ ಮಾಡುವುದು ಸಾಧ್ಯವಿರದ್ದರಿಂದ ಅಲ್ಲಿಯೇ ಇರಲು ವ್ಯವಸ್ಥೆ ಮಾಡಿಕೊಂಡು ನೌಕರಿ ಮಾಡಿಕೊಂಡಿದ್ದರು. ತಮಗೆ ಬಿಡುವಾದಾಗ ರಜೆ ದೊರಕಿದಾಗ ಮೈಸೂರಿಗೆ ಬಂದು ಹೋಗುತ್ತಿದ್ದರು. ಕಿರಿಯವಳು ಕ್ಷಮಾಳ ವಿದ್ಯಾಭ್ಯಾಸ ಮುಂದುವರೆದಿತ್ತು.
ಹೀಗೆ ಎಲ್ಲವೂ ಒಂದು ರೀತಿಯಲ್ಲಿ ಸುಗಮವಾಗಿ ಸಾಗುತ್ತಿತ್ತು ಎನ್ನುತ್ತಿರುವಾಗಲೆ ಅವರ ಬದುಕಿನಲ್ಲೂ ಯಾರೂ ಊಹಿಸಲಾರದಂಥಹ ಬಿರುಗಾಳಿ ಬೀಸಿತು. ಸುಮನಾಳ ತಂದೆ ಚಲುವರಾಯರಿಗೆ ಸ್ವಲ್ಪ ರಾಜಕೀಯದಲ್ಲಿದ್ದ ಕೆಲವು ಪುಢಾರಿಗಳ ಸಂಪರ್ಕವಿತ್ತು.್ದ ಅವರು ಅದನ್ನು ಉಪಯೋಗಿಸಿಕೊಂಡು ತಮ್ಮ ಹೆಣ್ಣುಮಕ್ಕಳಿಗೆ ಮೈಸೂರಿಗೆ ಅಥವಾ ಮೈಸೂರಿನ ಸಮೀಪದಲ್ಲಿರುವ ಯಾವುದಾದರೂ ಶಾಲೆಗಳಿಗೆ ವರ್ಗಾವಣೆ ಮಾಡಿಸಿಕೊಂಡರೆ ಅನುಕೂಲವಾಗುತ್ತದೆ ಎಂದು ಅನ್ನಿಸಿತು. ಅವರು ಹಾಗೆ ಮಾಡಿಸಿಕೊಡುತ್ತೇವೆಂದು ಭರವಸೆ ನೀಡಿದರು. ಅವರ ಮಾತನ್ನು ನಂಬಿಕೊಂಡು ಚಲುವರಾಯರು ತಮ್ಮ ಹೆಣ್ಣು ಮಕ್ಕಳಿಂದ ಹಣ ಪಡೆದುಕೊಂಡು ಆ ರಾಜಕೀಯ ನಾಯಕರುಗಳಿಗೆ ಕೊಟ್ಟರು. ಇಂತಹ ಪ್ರಯತ್ನ ಹಲವಾರು ಬಾರಿಯಾಯಿತು. ಫಲಿತಾಂಶ ಮಾತ್ರ ಸೊನ್ನೆ. ಭರವಸೆಯಾಗಿಯೇ ಉಳಿಯಿತು, ಹಣ ಮಾತ್ರ ಪೋಲಾಯಿತು. ಮಕ್ಕಳು ತಾವು ಕಷ್ಟಪಟ್ಟು ದುಡಿದ ಹಣ ಈ ರೀತಿ ಅನ್ಯವ್ಯಕ್ತಿಗಳಿಗೆ ಕೊಟ್ಟು ಪೋಲಾಗುವುದು ತಮಗಿಷ್ಟವಿಲ್ಲ ಎಂದು ಹೇಳಿಬಿಟ್ಟರು. ಆಗುವಾಗ ವರ್ಗಾವಣೆ ಸರ್ಕಾರದಿಂದಲೇ ಆಗುತ್ತದೆ. ಈ ಪ್ರಯತ್ನದ ಅಗತ್ಯವಿಲ್ಲ ಎಂದು ತೀರ್ಮಾನಿಸಿದರು. ಹಾಗೆ ಹೇಳಿದ ಮಕ್ಕಳ ಮಾತನ್ನು ಕೇಳಿದ ತಂದೆ ಚಲುವರಾಯರು ತಮ್ಮ ಪ್ರಯತ್ನವನ್ನು ಕೈಬಿಟ್ಟರು. ಮತ್ಯಾವುದೇ ಪ್ರಯತ್ನ ಮಾಡಲಿಲ್ಲ. ಆದರೆ ಆ ದಿನ ಮನೆಯನ್ನು ಬಿಟ್ಟು ಹೊರಟವರು ವರ್ಷಗಳು ಕಳೆದರೂ ಹಿಂದಿರುಗಿ ಬರಲೇ ಇಲ್ಲ. ಹೊಸದರಲ್ಲಿ ಅವರನ್ನು ಹುಡುಕಿಸಲು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡಿದರು. ಮನೆಗೊಂದು ಗಂಡುದಿಕ್ಕಿಲ್ಲದ್ದರಿಂದ ನಮಿತಾಳ ಗಂಡ ಗೋಪಾಲನೇ ಮುಂದಾಳತ್ವ ವಹಿಸಿ ಮಾವನವರನ್ನು ಹುಡುಕಿಸುವ ಪ್ರಯತ್ನ ಮಾಡಿದನು. ನೆಂಟರಿಷ್ಟರ, ಸ್ನೇಹಿತರ, ಪರಿಚಯದವರ ಮನೆಗಳಿಗೆ ಎಡತಾಕಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಪೋಲೀಸ್ ಕಂಪ್ಲೇಂಟ್ ಕೂಡ ಕೊಟ್ಟರು. ಊಹುಂ.. ಒಂದು ಚಿಕ್ಕ ಸುಳಿವು ಕೂಡ ಸಿಗಲಿಲ್ಲ. ಇದರಿಂದ ಪೋಲೀಸಿನವರಿಗೆ ಯಾವುದೇ ಅಜ್ಞಾತ ಹೆಣ ದೊರೆತರೂ ಇವರ ಮನೆಗೆ ಬುಲಾವ್ ಬರುತ್ತಿತ್ತು. ಹೋಗಿನೋಡಿ ಅವರು ನಮ್ಮವರಲ್ಲ ಎಂದು ಹೇಳಿ ಹೇಳಿ ಸಾಕಾಯಿತು. ಕೊನೆಗೆ ಸುಮ್ಮನೆ ಮೌನ ತಾಳಿದರು.
ವರ್ಷಗಳುರುಳಿದಂತೆ ಮನೆಯ ಯಜಮಾನನ ಹುಡುಕಾಟದ ಪ್ರಯತ್ನ ಮೂಲೆ ಸೇರಿತು. ಅಚ್ಚರಿಯ ಸಂಗತಿಯೆಂರೆ ಅಷ್ಟರಲ್ಲಿ ಸುಮನಾ ಮತ್ತು ರಜನಿ ಇಬ್ಬರಿಗೂ ಮೈಸೂರಿನ ಸಮೀಪದಲ್ಲಿರುವ ಊರುಗಳಿಗೆ ವರ್ಗಾವಣೆಯಾಗಿತ್ತು. ಅವರಮ್ಮ ಗಿರಿಜಾ ಅದನ್ನು ನೋಡಿ ಇವೆಲ್ಲ ನಿಮ್ಮಪ್ಪ ಮಾಡಿದ ಪ್ರಯತ್ನದ ಫಲವೇ ಇರಬೇಕು. ನೀವು ಆತುರಪಟ್ಟಿರಿ. ಅವರನ್ನು ಅವಮಾನಿಸಿದಿರಿ, ಅವರು ಬೇಸರದಿಂದ ಮನೆಬಿಟ್ಟು ಹೋಗುವಂತೆ ಮಾಡಿದಿರಿ. ನಿಮ್ಮಿಂದಲೇ ಅವರು ಮನೆಬಿಟ್ಟು ಹೋದರು. ಇದಕ್ಕೆ ನೀವೇ ಕಾರಣ ಎಂದು ಅಕ್ಕ ತಂಗಿಯರನ್ನು ಆಕ್ಷೇಪಿಸಿದರು. ತಾಯಿಯ ಮಾತಿನಿಂದ ಸೋದರಿಯರಿಗೆ ಮರ್ಮಾಘಾತವಾಯಿತು. ಅವರ ಬಳಿ ವಾದ ಮಾಡಿದರೆ ಪ್ರಯೋಜನವಿಲ್ಲವೆಂದು ಇಬ್ಬರೂ ಮೌನ ತಾಳಿದರು. ಪ್ರತಿಯೊಂದಕ್ಕೂ ಅಕ್ಕ ಭಾವನವರನ್ನೇ ಅಶ್ರಯಿಸುವುದು ಸರಿಯಲ್ಲ ಎಂದು ಮನೆಯ ಎಲ್ಲ ಜವಾಬ್ದಾರಿಗಳನ್ನು ಒಂದೊಂದಾಗಿ ತಾವೇ ಕೈಗೆತ್ತಿಕೊಂಡರು. ಅಷ್ಟುಹೊತ್ತಿಗೆ ತಂಗಿ ಕ್ಷಮಾ ಪಿ.ಯು.ಸಿ.ಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡು ಉತ್ತೀರ್ಣಳಾದಳು. ಅವಳು ವೈದ್ಯಕೀಯ ಕೋರ್ಸಿಗೆ ಸೇರಬೇಕೆಂಬ ಹಂಬಲ ವ್ಯಕ್ತಪಡಿಸಿದ್ದರಿಂದ ಸರ್ಕಾರಿ ಕೋಟಾದಲ್ಲಿ ಸೀಟು ದೊರಕಿದರೆ ತಾವಿಬ್ಬರೂ ನೆರವು ನೀಡುವುದಾಗಿ ಭರವಸೆ ನೀಡಿದರು. ಅಂದುಕೊಂಡಂತೆ ಅವಳಿಗೆ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಿ ಮೈಸೂರು ಕಾಲೇಜಿನಲ್ಲಿಯೇ ಮೆಡಿಕಲ್‌ನಲ್ಲಿ ಸೀಟು ಸಿಕ್ಕಿತು. ಎಲ್ಲರೂ ಖುಷಿಯಿಂದ ಹಿಗ್ಗಿದರು. ಅಕೆಯ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ಚಾಚಿ ಮನೆಯನ್ನೂ ನಿಭಾಯಿಸಿಕೊಳ್ಳುತ್ತಾ ಮುಂದುವರೆದಂತೆ ಇವರಿಗೇ ದಾಷ್ಟಿಕತನ ಮೈಗೂಡಿಕೊಂಡಿತು.
ಇದೇ ಸಮಯದ ಅಂತರದಲ್ಲಿ ಸೋದರಿಯರಿಬ್ಬರಿಗೂ ಹಲವಾರು ಕಡೆಯಿಂದ ವಿವಾಹಕ್ಕಾಗಿ ಸಂಬಂಧ ಕೋರಿ ಪ್ರಸ್ತಾವನೆಗಳು ಬರತೊಡಗಿದವು. ಸುವiನಾಳ ತಾಯಿ ಗಿರಿಜಾ ಯಾವುದಕ್ಕೂ ಬೇಕೂ ಅನ್ನಲಿಲ್ಲ, ಬೇಡ ಎಂದೂ ಅನ್ನಲಿಲ್ಲ. ಆದರೆ ತುಟಿಬಿಚ್ಚಲಿಲ್ಲ. ತನ್ನ ಗಂಡ ಮನೆಬಿಟ್ಟು ಹೋದಾಗಿನಿಂದ ಅವರು ಯಾರನ್ನೂ ನಂಬದ ಹಂತಕ್ಕೆ ಬಂದುಬಿಟ್ಟಿದ್ದರು. ಅವರನ್ನು ಬಿಟ್ಟರೆ ತೀರ್ಮಾನ ತೆಗೆದುಕೊಳ್ಳುವ ಹಿರಿಯರು ಯಾರೂ ಇರಲಿಲ್ಲ. ಸುಮನಾಳ ಅಕ್ಕ ಭಾವ ತಾವಾಗಿ ಮುಂದಾಗಿ ಅವಳ ತಾಯಿಯನ್ನು ಒಪ್ಪಿಸಿ ಮದುವೆ ಸಂಬಂಧ ಕುದುರಿಸಲು ಬರಲಿಲ್ಲ ಎನ್ನುವುದಕ್ಕಿಂತ ಧೈರ್ಯ ವಹಿಸಲಿಲ್ಲ. ಗಿರಿಜಾಳನ್ನು ಎದುರಿಸಿ ನಿಲ್ಲುವ ಎದೆಗಾರಿಕೆ ತೋರಲಿಲ್ಲ. ಸುಮನಾ ಮತ್ತು ರಜನಿ ತಾವೇ ಮುಂದಾಗಿ ಯಾರನ್ನಾದರೂ ಇಷ್ಟಪಟ್ಟವರನ್ನು ಪ್ರೀತಿಸುವ ಅಥವಾ ತಾವೇ ಮುಂದುವರೆದು ತಾಯಿಯನ್ನು ಒಪ್ಪಿಸಲು ಪ್ರಯತ್ನ ಮಾಡಲಿಲ್ಲ. ಹೀಗಾಗಿ ಬೆಕ್ಕಿಗೆ ಗಂಟೆ ಕಟ್ಟುವರಾರು ಎಂಬಂತೆ ಸಮಸ್ಯೆ ಬಗೆಹರಿಯದೆ ವರ್ಷಗಳು ಉರುಳತೊಡಗಿದವು. ಕಿರಿಯ ತಂಗಿ ಕ್ಷಮಾ ಮೆಡಿಕಲ್ ಕೋರ್ಸ್ ಮುಗಿಸಿದಳು. ಪೂರ್ಣಾವಧಿ ಕೆಲಸಕ್ಕೆ ಅರ್ಹಳಾಗಲು ಇಂಟರ್ನ್ಷಿಪ್ ಮುಗಿಸಿ ಸರ್ಕಾರಿ ನೌಕರಿಗೆ ಪ್ರಯತ್ನ ನಡೆಸಿದ್ದಳು. ಅದು ತಕ್ಷಣ ಸಾಧ್ಯವಾಗದೆ ಕೆಲವು ಸಮಾನ ಮನಸ್ಕ ವೈದ್ಯರುಗಳು ಸೇರಿ ಒಂದು ಡಯಾಗ್ನಾಸ್ಟಿಕ್ ಸೆಂಟರ್ ತೆಗೆದು ಮೈಸೂರಿನಲ್ಲಿಯೇ ಪ್ರಾಕ್ಟೀಸ್ ಪ್ರಾರಂಭಿಸಿದಳು. ನಮ್ಮ ಗತಿಯಂತೂ ಹೀಗಾಯಿತು ಆಕೆಗಾದರೂ ಒಬ್ಬೊಳ್ಳೆಯ ಸಂಗಾತಿಯನ್ನು ತರಬೇಕೆಂದು ಸೋದರಿಯರಿಬ್ಬರೂ ಪ್ರಯತ್ನ ಮಾಡಿದರು. ಏಕೋ ಏನೋ ಅದು ಫಲಕಾರಿಯಾಗದೆ ಹಾಗೇ ವಿಫಲವಾಯಿತು.
ಎಲ್ಲ ವಿದ್ಯಮಾನಗಳಿಂದ ರೋಸಿಹೋಗಿ ಬೇಸತ್ತ ಮನಸ್ಸುಗಳಿಗೆ ಮುಂದೆ ತಮ್ಮ ತಾಯಿಯಿಂದ ಊಹಿಸಲಾಗದಂತಹ ಕೃತ್ಯಗಳು ನಡೆಯಲಾರಂಭವಾದವು. ದಿನೇ ದಿನೇ ಅವರ ನಡವಳಿಕೆಗಳು ಪ್ರಶ್ನಾರ್ಥಕವಾಗತೊಡಗಿದವು. ಬೆಳೆದು ವಯಸ್ಸು ಮೀರುತ್ತಿರುವ ಹೆಣ್ಣುಮಕ್ಕಳ ಮದುವೆಗಂತೂ ಮುಖ ಮಾಡಲಿಲ್ಲ. ಬೇರೆಯವರ ಕಡೆಯಿಂದ ಅವರಿಗೆ ಹೇಳಿಸಿದರೂ ಯಾರ ಮಾತಿಗೂ ಸ್ಪಂದಿಸಲಿಲ್ಲ. ಕಿರಿಯವಳ ಬಗ್ಗೆಯೂ ಇದೆ ರೀತಿಯ ಧೋರಣೆಯೇ. ಈಗ ಎಲ್ಲರೂ ಕೈತುಂಬ ಸಂಪಾದಿಸುತ್ತಿದ್ದರೂ ತಮಗೊಬ್ಬರು ಜೊತೆಗಾರನನ್ನು ಪಡೆದುಕೊಳ್ಳಲಾಗಲಿಲ್ಲ. ಹೋಗಲಿ ನಮ್ಮ ಕರ್ಮವೆಂದು ಮನೆಗೆಲಸಕ್ಕೆ ಒಬ್ಬ ಕೆಲಸದವಳನ್ನು ಗೊತ್ತುಮಾಡಿಕೊಂಡು ಅದರಲ್ಲಾದರು ಸ್ವಲ್ಪ ಬಿಡುವು ಕಾಣೋಣವೆಂದರೆ ಅದಕ್ಕೂ ಸುಮನಾಳ ತಾಯಿಯ ನಿರಾಕರಣೆ. ಕೂತಕಡೆಯಿಂದಲೇ ದರ್ಬಾರ್ ನಡೆಸುತ್ತ ಕೆಲಸದಲ್ಲಿ ಪ್ರತಿಯೊಂದಕ್ಕೂ ಕೊಂಕು ತೆಗೆಯುತ್ತಿದ್ದರು. ಅದರಿಂದ ಯಾರೂ ಕೆಲಸದವರು ಒಪ್ಪುತ್ತಿರಲಿಲ್ಲ. ಅವರಿಗೆ ದೈಹಿಕವಾಗಿ ಯಾವ ನ್ಯೂನತೆಯೂ ಇಲ್ಲದಿದ್ದರೂ ನನಗೇನೋ ಆಗಿದೆಯೆಂದು ಕಲ್ಪಿಸಿಕೊಂಡು ಅದಕ್ಕಾಗಿ ಮೇಲಿಂದಮೇಲೆ ನರ್ಸಿಂಗ್‌ಹೋಮಿಗೆ ಸೇರಿಕೊಳ್ಳುವುದು. ಅಲ್ಲಿಯೂ ನೋಡಿಕೊಳ್ಳುವ ನರ್ಸ್ ಗಳಿದ್ದರೂ ಎದುರಿಗೆ ಒಬ್ಬರು ಮಗಳು ಅವರ ಸೇವೆಗೆ ಯಾವಾಗಲೂ ಇರಲೇಬೇಕಿತ್ತು. ಏನಾದರೂ ತಪ್ಪಿದರೆ ರಾಣಾರಂಪ ಮಾಡುತ್ತ ಕೂಗಾಡುತ್ತಿದ್ದರು. ಈಗಲೂ ಅಂತಹದ್ದೇ ಒಂದು ನಾಟಕ ನಡೆದಿತ್ತು. ಅವರ ಮನಸ್ಸಿನಲ್ಲಿ ಏನಿರುತ್ತದೆಯೋ ತಿಳಿಯದು, ಇದೆಲ್ಲಿಗೆ ಕೊನೆ ಮುಟ್ಟುತ್ತದೆಯೋ ಕಾಣೆ ಎಂದಂದುಕೊಳ್ಳುವಷ್ಟರಲ್ಲಿ “ಏ..ಸುಮನಾ.. ಯಾವ ಲೋಕದಲ್ಲಿದ್ದೀ, ನೀರು ಕೊಡು , ನನಗೆ ನೀರು ಬಗ್ಗಿಸಿ ಕೊಡು” ಎಂಬ ಗಟ್ಟಿಯಾದ ಗದರುವಿಕೆಯ ಸದ್ದು ಅವಳನ್ನೆಚ್ಚರಿಸಿತು.
ತಕ್ಷಣ “ಯಾಕಮ್ಮಾ ಅಷ್ಟೊಂದು ಜೋರಾಗಿ ಕೂಗಿಕೊಂಡೆ, ನನಗೂ ಕಿವಿ ಕೇಳಿಸುತ್ತದೆ. ಸ್ವಲ್ಪ ಮೆತ್ತಗೆ ಹೇಳಬಾರದೇ.” ಎಂದು ಹೇಳುತ್ತಾ ಅಲ್ಲಿಯೇ ಬಳಿಯಲ್ಲಿದ್ದ ನೀರನ್ನು ಲೋಟಕ್ಕೆ ಬಗ್ಗಿಸಿ ಕೊಟ್ಟಳು ಸುಮನಾ.
“ಹೂಂ.. ಮೆತ್ತಗಂತೆ ಮೆತ್ತಗೆ, ನಾನು ಎರಡು ಸಾರಿ ನಿನ್ನ ಹೆಸರು ಜಪಮಾಡಿದೆ. ನೀನೋ ತೆರೆದ ಕಣ್ಣು ತೆರೆದಂತೆ ಬಿಟ್ಟುಕೊಂಡು ಎತ್ತಲೋ ನೋಡಿಕೊಂಡು ಯಾರದ್ದೋ ಧ್ಯಾನದಲ್ಲಿ ಇದ್ದಂತೆ ಕಾಣಿಸಿತು. ಅದಕ್ಕೇ ಅಷ್ಟು ಜೊರಾಗಿ ಕೂಗಬೇಕಾಯ್ತು. ತಾ ಇಲ್ಲಿ ಗಂಟಲು ಒಣಗಿಹೋಗಿದೆ.” ಎಂದು ಲೋಟವನ್ನು ಕಿತ್ತುಕೊಂಡು ಗಟಗಟನೆ ಬಾಯಿಗೆ ಸುರಿದು ಕುಡಿದರು ಗಿರಿಜಮ್ಮ.
ಅದನ್ನು ಕೇಳಿ ಸುಮನಾ ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆ, ಆದರೆ ಕೆಟ್ಟ ತಾಯಿ ಇರುವುದಿಲ್ಲ ಎಂದು ಕೇಳಿದ್ದೆ. ಆದರೆ ಇಲ್ಲಿ ಎಲ್ಲವೂ ತಿರುವುಮುರುವು. ಊಹುಂ ಮೊದಲು ಇವರು ಹೀಗಿರಲಿಲ್ಲ. ನನ್ನ ಮಾತೇ ನಡೆಯಬೇಕೆಂಬ ಹಠವೊಂದನ್ನು ಬಿಟ್ಟರೆ ಮಿಕ್ಕೆಲ್ಲದರಲ್ಲೂ ಪ್ರೀತಿಯಿಂದಲೇ ನಡೆದುಕೊಳ್ಳುತ್ತಿದ್ದರು. ಆದರೆ ಆ ಘಟನೆ, ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ, ಅವರೇ ನನ್ನ ಸರ್ವಸ್ವವೆಂದು ತಿಳಿದಿದ್ದ, ತನ್ನ ಬದುಕನ ಕೊನೆವರೆಗೆ ಕೈಹಿಡಿದು ಜೊತೆಯಾಗಿ ನಡೆಯುತ್ತಾರೆಂದು ನಂಬಿದ್ದ ನನ್ನ ತಂದೆ ಇದ್ದಕ್ಕಿದ್ದಂತೆ ಏನು ಕಾರಣವೋ ಅದೃಶ್ಯರಾಗಿ ಬಿಟ್ಟ ದಿನದಿಂದ, ಅದರಲ್ಲೂ ಅವರು ಹೋಗಲು ಮಕ್ಕಳೇ ಕಾರಣವೆಂದು ಕಲ್ಪಿಸಿಕೊಂಡ ಭಾವನೆಯಿಂದ ಅವರ ಮನಸ್ಸಲ್ಲಿ ತಾನು ಹೆತ್ತ ಮಕ್ಕಳ ವಿರುದ್ಧವೇ ಎಂಬಂತೆ ಅವರ ನಡವಳಿಕೆ ವಿಚಿತ್ರವಾಗಿದೆ. ಹೆಜ್ಜೆಹೆಜ್ಜೆಗೂ ನಮ್ಮ ಬಗ್ಗೆ ಚುಚ್ಚುಮಾತುಗಳು, ನಮಗೂ ವಯಸ್ಸಾಗುತ್ತಿದೆ ಎಂಬ ಪರಿವೇ ಇಲ್ಲದೆ ಇಲ್ಲದ ದೋಷಾರೊಪಣೆ ಮಾಡುತ್ತ ನಮ್ಮ ಬದುಕನ್ನೂ ಚಿತ್ರಹಿಂಸೆಯಿಂದ ನೆಮ್ಮದಿಯಿಲ್ಲದೆ ನೋಯುವಂತೆ ಮಾಡುತ್ತಿದ್ದಾರೆ. ಇವರು ನಮ್ಮ ಅಮ್ಮನಾ ಎಂದು ಅನುಮಾನ ಬರುವಂತಾಗಿದೆ. ಅಷ್ಟು ಯೋಚನೆಯಿಂದ ಕಣ್ತುಂಬಿದಂತಾಯಿತು. ಇದನ್ನೇನಾದರೂ ನನ್ನಮ್ಮ ನೋಡಿದರೆ ಮುಂದಕ್ಕೆ ಏನಾಗಬಹುದೆಂದು ಊಹಿಸಿಕೊಳ್ಳಲೂ ಆಗದೆ ಅದನ್ನು ಮರೆಮಾಚಲು ಬಾತ್‌ರೂಮಿಗೆ ಹೋಗಿ ಮುಖ ತೊಳೆದುಕೊಂಡಳು ಸುಮನಾ.
ಅತ್ತ ಅವಳು ಬಾತ್‌ರೂಮಿಗೆ ಹೋಗುತ್ತಿದ್ದಂತೆ ಇತ್ತ ಬಾಗಿಲು ತೆಗೆದುಕೊಂಡು ಒಳಬಂದಳು ರಜನಿ. ಆ ಸದ್ದಿಗೆ ಕುಳಿತಲ್ಲಿಂದಲೇ ತಿರುಗಿ ನೋಡಿದರು ಗಿರಿಜಮ್ಮ. “ಅರೆ ರಜನಿ, ಬಾಗಿಲು ಬೋಲ್ಟ್ ಹಾಕಿರಲಿಲ್ಲವೇ?” ಎಂದು ಕೇಳಿದರು.
ಇಲ್ಲವೆಂದರೆ ಅಕ್ಕ ಸುಮನಾಳಿಗೆ ಮಂಗಳಾರತಿ ಎಂದರಿತವಳೇ “ಇಲ್ಲಮ್ಮಾ ನರ್ಸಿಂಗ್ ಹೋಂ ಗಳಲ್ಲಿ ಹೊರಗಡೆಯಿಂದ ಲಾಕ್ ಇರುತ್ತದೆ, ತಿರುಗಿಸಿದರೆ ಬಾಗಿಲು ತೆರೆದುಕೊಳ್ಳುತ್ತದೆ. ಸೇಫ್ಟಿಗೆ ಬೇಕೆಂದಾಗ ಒಳಗಿಒಂದ ಬೋಲ್ಠ್ ಹಾಕಿಕೊಳ್ಳಬಹುದು. ಸುಮನಾ ಇಲ್ಲೇ ಇದ್ದಳಲ್ಲಾ ಹಾಗೇ ಮುಂದಕ್ಕೆ ಹಾಕಿದ್ದಳೆಂದು ಕಾಣಿಸುತ್ತೆ. ಒಳಗಿನಿಂದ ಬೋಲ್ಟ್ ಹಾಕಿರಲಿಲ್ಲವಲ್ಲಾ, ಹಾಗೇ ನಾನೇ ತಿರುಗಿಸಿ ಬಾಗಿಲು ತೆರೆದುಕೊಂಡು ಬಂದೆ” ಎಂದಳು.
“ಹಾ..ಅದಿರಲಿ ನೀನು ನಿನ್ನ ಗೆಳತಿಯ ಮಗಳ ಮದುವೆಗೆ ಹೋಗಿ ಬರುತ್ತೇನೆಂದವಳು ಇಷ್ಟು ಬೇಗ ಬಂದಿದ್ದೀ. ಸುಳ್ಳು ಹೇಳಿ ಎಲ್ಲಿಗೋ ಹೋಗಿಬಂದೆಯಾ?” ಎಂದು ಅನುಮಾನಿಸಿದರು ಗಿರಿಜಮ್ಮ.
“ ಎಲ್ಲಿಯೂ ಹೋಗಿಲ್ಲಮ್ಮ, ಸುಳ್ಳೂ ಹೇಳಿಲ್ಲ. ನನ್ನ ಗೆಳತಿಯ ಮನೆಗೇ ಹೋಗಿದ್ದಂತೂ ನಿಜ. ಅದರೆ ನಿಮಗೆ ಸ್ವಸ್ಥವಿಲ್ಲವೆಂದು ಕ್ಷಮಾ ಫೋನ್ ಮಾಡಿ ಹೇಳಿದಳು. ಅದನ್ನು ಕೇಳಿ ಮನಸ್ಸು ತಡೆಯದೆ ಬಂದುಬಿಟ್ಟೆ. ಎಲ್ಲಿ ಸುಮನಾ ಹೊರಗೆ ಹೋಗಿದ್ದಾಳಾ?” ಎಂದು ಕೇಳಿದಳು ರಜನಿ.
“ಹ್ಹೆ..ಹ್ಹೆ ಎಲ್ಲೂ ಹೋಗಿಲ್ಲ, ಕೂಗಿದರೂ ಕೇಳಿಸದಂತೆ ಗರಬಡಿದವಳಂತೆ ಇಲ್ಲೇ ಕುಕ್ಕರಬಡಿದಿದ್ದಳು. ನಾನು ರೇಗಿದೆ, ಅದಕ್ಕೆಲ್ಲೋ ಬಾತ್‌ರೂಮಿಗೆ ಹೋಗಿದ್ದಾಳೆ. ರ‍್ತಾಳೆ ಬಿಡು. ನೀನು ವಾಪಸ್ಸು ಬಂದ್ಯಲ್ಲಾ ನೆಮ್ಮದಿಯಾಯ್ತು ಬಿಡು. ರಾತ್ರಿಗೆ ಏನು ಮಾಡಿಕೊಡ್ತಾರೋ ಅಂದುಕೊಂಡಿದ್ದೆ. ಈ ಅಕ್ಕತಂಗಿಯರು ಬೆಳಗ್ಗೆ ಅದೇ ಇಡ್ಲಿ ಚಟ್ಣಿ, ಮಧ್ಯಾನ್ಹಕ್ಕೆ ಪಿಂಟೆಯಂತಹ ಅನ್ನ ಮೇಲೆ ಕೊಳ್ನೀರಿನಂಥ ಸಾರು, ಮಜ್ಜಿಗೆಯೇನೋ ಅನ್ನುವಂತಿರುವ ಮೊಸರು ಕೊಡ್ತಾರೆ. ನಾಲಿಗೆ ಜಡ್ಡಾದಂತೆ ಆಗಿಬಿಟ್ಟಿದೆ. ನೀನೇನು ತಂದಿದ್ದೀ?” ಎಂದು ಕೇಳಿದರು ಗಿರಿಜಮ್ಮ.
(ಮುಂದುವರಿಯುವುದು)

-ಬಿ.ಆರ್.ನಾಗರತ್ನ, ಮೈಸೂರು
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=45486

