(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ನೆನ್ನೆದಿನ ಬೆಂಗಳೂರಿಗೆ ಹೋಗುವಾಗ ಚೆನ್ನಾಗಿಯೇ ಇದ್ದವರಿಗೆ ಏನಾಯಿತು? ಅಥವಾ ಎಂದಿನಂತೆ ನಾಟಕವೋ? ಈ ಮಹಾತಾಯಿ ಏಕೆ ಹೀಗೆ ಆಡುತ್ತಾರೆ? ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ರಜನಿ “ಹೊರಡುವಾಗ ಬೇಗ ತಯಾರಾಗುವುದು ಏನಮ್ಮಾ ಉಪ್ಪಿಟ್ಟು ತಾನೇ, ನಿಮಗಿಷ್ಟವಾದ ಅಕ್ಕಿತರಿ ಉಪ್ಪಿಟ್ಟು ಸ್ವಲ್ಪ ಬಟಾಣಿ ಹಾಕಿ ಮಾಡಿಕೊಂಡು ತಂದಿದ್ದೇನೆ. ಇಬ್ಬರಿಗಾಗುವಷ್ಟಿದೆ. ಈಗ ಸ್ವಲ್ಪ ಹಾಕಿಕೊಡಲೇನು?” ಎಂದು ಕೇಳಿದಳು.
ರಜನಿಯ ಮಾತು ಕೇಳಿದ ಗಿರಿಜಮ್ಮ “ಈಗೇನೂ ಬೇಡ, ಹಾಟ್‌ಕೇಸ್‌ನಲ್ಲಿ ಹಾಕಿಕೊಂಡು ಬಂದಿದ್ದೀಯಾ ತಾನೇ? ಹಾಗೇ ಇಟ್ಟುಬಿಡು. ಹಾ..ನೆಲದಮೇಲೆ ಇಡಬೇಡ. ಅಲ್ಲಿ ಸಣ್ಣ ಕಪಾಟಿದೆಯಲ್ಲ ಅದರೊಳಗೆ ಇಡು. ಬೆಳಗ್ಗೇನೇ ಕ್ಷಮಾ ಕೈಯಲ್ಲಿ ಬಟ್ಟೆಯಲ್ಲಿ ಅದನ್ನು ಒರೆಸಿಸಿದ್ದೇನೆ” ಎಂದರು. ಆ ಸುಮನಾ ಇಲ್ಲಿರುವುದು ಬೇಡ. ಅವಳನ್ನು ಮನೆಗೆ ಕಳಿಸು. ಅದ್ಯಾಕೋ ಅವಳು ಒಂದು ನಮೂನೆಯಾಗಿ ಆಡುತ್ತಿದ್ದಾಳೆ. ಚೆನ್ನಾಗಿ ನಿದ್ರೆ ಮಾಡಲಿ. ಕಾಫಿ ತಂದಿದ್ದರೆ ಕೊಡು. ಸುಮನಾಳು ಭಾರ್ಗವಿಯ ಮನೆಯಿಂದ ಮಾಡಿಸಿ ತಂದಿರಬಹುದು. ಅದನ್ನು ನೀನು ಅವಳು ಕುಡಿಯಿರಿ.” ಎಂದು ಕಾಫಿಗಾಗಿ ಕೈ ಚಾಚಿದರು.
ಮಾತಿನಲ್ಲಿ ಗತ್ತು ಮಾತ್ರ ಹಾಗೇ ಇದೆ. ಅವರಿಗೆ ಆಯಾಸ, ಸುಸ್ತು ಯಾವುದು ಕಾಣಿಸುತ್ತಿಲ್ಲ. ಮತ್ಯಾಕೆ ನರ್ಸಿಂಗ್ ಹೋಮಿಗೆ ಸೇರಿಕೊಂಡಿದ್ದಾರೆ? ಎಂದು ಮನಸ್ಸಿನಲ್ಲಿ ಅಂದುಕೊಂಡು ರಜನಿ ಹೊರಗೇನೂ ತೋರಿಸಿಕೊಳ್ಳದೆ ಕಾಫಿ ತುಂಬಿದ ಲೋಟವನ್ನು ತನ್ನಮ್ಮನ ಕೈಗಿತ್ತಳು.
ಬಾತ್‌ರೂಮಿನಲ್ಲಿದ್ದ ಸುಮನಾಳಿಗೆ ತಂಗಿ ಬಂದದ್ದು, ಅವರಿಬ್ಬರ ನಡುವೆ ನಡೆಯುತ್ತಿದ್ದ ಮಾತುಕತೆಗಳು ಕಿವಿಯಮೇಲೆ ಬಿದ್ದವು. ಪಾಪ ರಜನಿ ಎಷ್ಟೋ ಆಸೆಯಿಂದ ತನ್ನ ಗೆಳತಿಯ ಮಗಳ ಮದುವೆಗೆ ಹೋಗಿದ್ದಳು. ಅವಳಿಗೆ ಚಪ್ಪರದ ದಿನವೇ ಬಂದುಬಿಡು, ಮದುವೆ ಮುಗಿಸಿಕೊಂಡು ಒಂದೆರಡು ದಿವಸ ಇದ್ದು ಹೋಗುವಿಯಂತೆ ಎಂದು ಅವಳ ಸ್ನೇಹಿತೆ ಆಹ್ವಾನಿಸಿದ್ದಳು. ಅದಕ್ಕಾಗಿ ಹೋಗಿ ಗೋಡೆ ಮುಟ್ಟಿ ಹಿಂದಕ್ಕೆ ಬಂದಂತಾಯಿತು. ಛೇ,,ಛೇ..ನಾನೇಕೆ ಗೊತ್ತಿದ್ದೂ ಗೊತ್ತಿದ್ದೂ ಅಧೀರಳಾಗುತ್ತಿದ್ದೇನೆ ಎಂದುಕೊಂಡು ನಾಮಕಾವಸ್ತೆ ಫ್ಲಷ್ ಮಾಡಿ ಕೈಕಾಲು ತೊಳೆದುಕೊಂಡು ಹೊರಬಂದಳು.
“ಓ..ರಜನಿ,, ಬಂದೇಬಿಟ್ಟೆಯಾ, ಅಪರೂಪಕ್ಕೆ ಹೋಗಿದ್ದೆ, ಎಲ್ಲವನ್ನೂ ಮುಗಿಸಿಕೊಂಡೇ ಬರಬಹುದಾಗಿತ್ತು. ಹೇಗೂ ನಾವಿಬ್ಬರು ಇದ್ದೆವು. ಹೇಗೋ ಮ್ಯಾನೇಜ್ ಮಾಡುತ್ತಿದ್ದೋ. ಅದಕ್ಕೇ ನಾನು ನಿನಗೆ ಫೋನ್ ಮಾಡಲಿಲ್ಲ. ಆ ಕ್ಷಮಾ ಪುಸಕ್ಕಂತ ಮಾಡಿಬಿಟ್ಟಿದ್ದಾಳೆ” ಎಂದು ಆಕ್ಷೇಪಣೆ ವ್ಯಕ್ತಪಡಿಸಿದಳು.
“ಹೂ..ಮ್ಯಾನೇಜ್ ಮಾಡುತ್ತಿದ್ದರಂತೆ, ನೀವಿಬ್ಬರೇ ಇದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಆ ಕ್ಷಮಾಳಿಗೆ ಮೂರುಹೊತ್ತೂ ಕೆಲಸ ಕೆಲಸಾಂತ ಸಾಯುತ್ತಿರುತ್ತಾಳೆ. ಇನ್ನು ನೀನೋ ರಿಟೈರ್‌ಮೆಂಟಿಗೆ ಹತ್ತಿರ ಬಂದಿದ್ದರೂ ರಜಾ ಹಾಕಲಿಕ್ಕೆ ಪ್ರಾಣಹೋದಹಾಗೆ ಹಾರಾಡುತ್ತೀ. ಇವಳೇ ಸರಿ, ಹೇಗೋ ಹೊಂದಿಸಿಕೊಂಡು ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ರುಚಿರುಚಿಯಾಗಿ ಅಡುಗೆ ತಿಂಡೀನೂ ಮಾಡಿ ಹಾಕ್ತಾಳೆ. ಇನ್ನೇನು ರಜನಿ ಬಂದಾಯಿತಲ್ಲ, ನೀನು ಬೇಕಾದ್ರೆ ಹೊರಡು. ಬೆಳಗಿನಿಂದ ಕೂತು ತೂಕಡಿಸಿದ್ದು ಸಾಕು” ಎಂದು ತಮ್ಮ ತೀರ್ಮಾನವನ್ನು ಹೇಳಿ ಮತ್ತೆ ಬ್ಲಾಂಕೆಟ್ ಹೊದ್ದು ಮಲಗಿಬಿಟ್ಟರು ಗಿರಿಜಮ್ಮ.
ಮುಂದಕ್ಕೆ ಮಾತನಾಡದೆ ಗೆಳತಿ ಭಾರ್ಗವಿ ಮನೆಯಿಂದ ತಂದಿದ್ದ ಕಾಫಿಯಲ್ಲಿ ಕ್ಷಮಾಳಿಗೆ ಕೊಟ್ಟು ಮಿಕ್ಕಿದ್ದನ್ನು ಎರಡು ಲೋಟಗಳಿಗೆ ಹಾಕಿ ತಂಗಿ ರಜನಿಗೊಂದು ಕೊಟ್ಟು ತಾನೊಂದನ್ನು ತೆಗೆದುಕೊಂಡಳು. ಇಬ್ಬರೂ ಮೌನವಾಗಿ ಕಾಫಿ ಕುಡಿದು ಮುಗಿದಮೇಲೆ ಸುಮನಾ ಫ್ಲಾಸ್ಕ್ ಮತ್ತು ಲೋಟಗಳನ್ನು ತೊಳೆದಿಟ್ಟಳು. “ಓ ಕೇ ರಜನಿ ಮನೆಯ ಕೀ ಕೊಡು, ನಾನಿನ್ನು ಹೊರಡುತ್ತೇನೆ. ಬೆಳಗ್ಗೆ ಏನು ಮಾಡಿ ತರಬೇಕೆಂದು ಫೋನ್ ಮಾಡಿ ತಿಳಿಸು” ಎಂದು ಹೇಳಿ ಹೊರಟು ನಿಂತಳು.
“ಏ..ಸುಮನಾ ಅಮ್ಮನ ಸ್ವಭಾವ ನಿನಗೆ ಹೊಸದೇನಲ್ಲವಲ್ಲ, ಇನ್ನು ಸ್ವಲ್ಪ ಹೊತ್ತು ಇದ್ದು ಹೋಗು ಪ್ಲೀಸ್. ನೊಂದುಕೊಂಡು ಹೋಗಬೇಡ” ಎಂದು ಕೇಳಿಕೊಂಡಳು ರಜನಿ.
“ಹಾಗೇನಿಲ್ಲ, ಅವರೇ ಹೇಳಿದಂತೆ ನೆನ್ನೆ ರಾತ್ರಿ ನಿದ್ರೆಯಿಲ್ಲ. ತಲೆ ಧಿಂಎನ್ನುತ್ತಿದೆ. ಮನೆಗೆ ಹೋಗಿ ಸ್ವಲ್ಪ ಮಲಗಿ ಫ್ರೆಷ್ ಆಗಿ ಬರುತ್ತೇನೆ” ಎಂದಳು.
“ಅದು ಸರಿ, ಸಡನ್ನಾಗಿ ಅಮ್ಮನಿಗೇನಾಯ್ತು?” ಎಂದು ಪಿಸುಮಾತಿನಲ್ಲಿ ಕೇಳಿದಳು ರಜನಿ.
ಸುಮನಾ ತನ್ನ ವ್ಯಾನಿಟಿ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಸೋದರಿ ರಜನಿಯ ಕೈ ಹಿಡಿದುಕೊಂಡು ಬಾಗಿಲ ಹತ್ತಿರ ಬಂದಳು. ಸದ್ದಾಗದಂತೆ ಅದನ್ನು ತೆರೆದು ಹೊರಬಂದವಳೇ ಅತ್ತಿತ್ತ ನೋಡಿ “ರಾತ್ರಿಯೆಲ್ಲ ನನಗೆ ಉಸಿರಾಡಲು ಆಗುತ್ತಿಲ್ಲ, ನನ್ನ ಎದೆಮೇಲೆ ಯಾರೋ ಕುಂತವ್ರೆ, ಕತ್ತು ಹಿಸುಕಿದಂತೆ ಆಗುತ್ತಿದೆ, ನಾನು ಸತ್ತು ಹೋಗುತ್ತೇನೆ. ಎಂದು ಕೂಗಾಡುತ್ತ ಕಣ್ಣುಗಳನ್ನು ಮೇಲಕ್ಕೆ ತೇಲಿಸಿಬಿಟ್ಟು ಹೆದರಿಸಿದರು. ಕ್ಷಮಾ ನಾನು ನಮಗೆ ತಿಳಿದದ್ದನ್ನೆಲ್ಲ ಹೇಳಿ ಸಮಾಧಾನ ಮಾಡಲು ಪ್ರಯತ್ನಿಸಿದೆವು. ಗಾಭರಿಯಾಗಬೇಡಿ, ಏನೂ ಆಗಿಲ್ಲ ಎಂದು ಕ್ಷಮಾ ಹೇಳಿದಳು. ಆದರೂ ಅವರ ಒದರಾಟ ಹೆಚ್ಚಾಯಿತು. ತಕ್ಷಣ ಕಾರಿನಲ್ಲಿ ಇಲ್ಲಿಗೆ ತಂದು ಅಡ್ಮಿಟ್ ಮಾಡಿದೆವು. ಡ್ಯೂಟಿ ಡಾಕ್ಟರ್ ಬಂದು ಎಕ್ಸಾಮಿನ್ ಮಾಡಿ ಎಲ್ಲವೂ ನಾರ್ಮಲ್ ಇದೆ, ಆದರೂ ಒಂದೆರಡು ದಿನ ಅಬ್ಸರ‍್ವೇಷನ್ನಿನಲ್ಲಿ ಇರಲಿ ಎಂದರು. ಮತ್ತೇನಾದರೂ ಆದರೆ ನೋಡೋಣಾಂತ ಹೇಳಿ ಹೋದರು. ಇನ್ನು ಮಿಕ್ಕದ್ದನ್ನು ಅಮ್ಮನ ಬಾಯಿಂದಲೆ ಕೇಳಿದೆಯಲ್ಲ. ಇದಕ್ಕಿನ್ನೇನು ಹೇಳೋದು. ನೀನೂ ಬಂದೆಯಲ್ಲ, ಈಗ ಸರಿಹೋಗಬಹುದು” ಎಂದಳು ಸುಮನಾ.
“ಅದೇನದು ಸೋದರಿಯರಿಬ್ಬರು ಬಾಗಿಲ ಬಳಿಯಲ್ಲಿ ನಿಂತೇ ಗುಸುಗುಸು ನಡೆಸಿದ್ದೀರಿ? ಅಮ್ಮ ಹೇಗಿದ್ದಾರೆ? ಚಕಪ್ಪಿಗೆ ಡಾಕ್ಟರ್ ಬಂದುಹೋದರಾ?” ಎಂಬ ಮಾತುಗಳನ್ನು ಕೇಳಿದವರೇ ತಿರುಗಿ ನೋಡಿ ಬಂದವರಾರೆಂದು “ಓ ಭಾರ್ಗವಿ !” ಎಂದು ಇಬ್ಬರೂ ಉದ್ಗರಿಸಿದರು.
“ಹಾ ನಾನೇ, ನೀನಂತೂ ಫೋನ್ ಮಾಡಲಿಲ್ಲ. ನಾನೇ ಕ್ಷಮಾಳಿಗೆ ಫೋನ್ ಮಾಡಿ ವಿಷಯ ತಿಳಿದುಕೊಂಡೆ. ಮನಸ್ಸು ತಡೆಯಲಾಗಲಿಲ್ಲ ಬಂದುಬಿಟ್ಟೆ. ಏನು ನೀನಾಗಲೇ ಹೊರಟಿರುವ ಹಾಗಿದೆ’ ಎಂದು ಸುಮನಾಳನ್ನು ಕೇಳಿದಳು ಭಾರ್ಗವಿ.
“ಹೂಂ ರಜನಿ ಬಂದಳಲ್ಲ, ನನಗಿನ್ನೇನು ಕೆಲಸ. ಮನೆಗೆ ಹೋಗುತ್ತೇನೆ. ರಾತ್ರಿಗೂ ಎಲ್ಲವನ್ನೂ ರೆಡಿ ಮಾಡಿದ್ದಾಳೆ. ಅಡುಗೆ ಮನೆ ಕೆಲಸವಿಲ್ಲ. ಪುಣ್ಯಕ್ಕೆ ಅಮ್ಮ ಇಲ್ಲೇ ಇರುವುದರಿಂದ ಬಾಗಿಲು ತೊಳೆ, ಗಿಡಗಳಿಗೆ ನೀರುಹಾಕು, ಪೈಪುತಂದು ಸುತ್ತಿ ಒಳಗಿಟ್ಟೆಯಾ, ಗೇಟಿಗೆ ಬೀಗ ಹಾಕಿದೆಯಾ, ಕೀ ಎಲ್ಲಿಟ್ಟೆ, ಬಕೆಟ್ ಒಳಗಿದೆಯಾ, ಹಿಂದಿನ ಬಾಗಿಲಿಗೆ ಅಡ್ಡಪಟ್ಟಿ ಹಾಕಿದ ಸದ್ದೇ ಕೇಳಿಸಲಿಲ್ಲ ಇತ್ಯಾದಿ ಇತ್ಯಾದಿ ಪ್ರಶ್ನೆಗಳಿಗೆ ಒಂದು ದಿನವಾದರೂ ವಿರಾಮ. ಆರಾಮವಾಗಿದ್ದು ಬೆಳಗ್ಗೆ ಎದ್ದು ಸ್ನಾನ ಪೂಜೆಮಾಡಿ ರಜನಿ ಏನು ಹೇಳುತ್ತಾಳೋ ಅದನ್ನು ತಯಾರಿಸಿಕೊಂಡು ಇಲ್ಲಿಗೆ ಬರುತ್ತೇನೆ” ಎಂದಳು ಸುಮನಾ.
ಅವೆಲ್ಲವನ್ನು ತಿಳಿದುಕೊಂಡಿದ್ದ ಭಾರ್ಗವಿ ತುಟಿ ಎರಡು ಮಾಡಲಿಲ್ಲ. ಸ್ವಲ್ಪ ಹೊತ್ತು ಹಾಗೇ ನಿಂತಿದ್ದಳು. ಇದ್ದಕ್ಕಿದ್ದಂತೆ ಎಚ್ಚೆತ್ತ ಸುಮನಾ “ನಾನು ಬರುತ್ತೇನೆ ಭಾರ್ಗವಿ, ನೀನು ಅಮ್ಮನನ್ನು ಮಾತನಾಡಿಸಿಕೊಂಡು ಹೊರಟುಬಿಡು” ಎಂದಳು.
“ಏ..ಅವಸರ ಬೇಡ ಬಾರಮ್ಮ, ಇನ್ನೂ ಸ್ವಲ್ಪ ಹೊತ್ತಿದ್ದು ಇಬ್ಬರೂ ಒಟ್ಟಿಗೆ ಹೋಗೋಣ. ನೀನಿದ್ದರೆ ನನಗೆ ಸರಿ. ಇಲ್ಲವಾದರೆ ಸುಮ್ಮನೆ ಅನಗತ್ಯ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತೆ.” ಎಂದಳು ಭಾರ್ಗವಿ.
“ಹೂ..ಅದು ನಿಜಾನ್ನು, ಎಲ್ಲಿ ನಿನ್ನ ಗಂಡ? ಎರಡು ಮಕ್ಕಳನ್ನು ಕೈಗಿತ್ತು ಗುಂಡರಗೋವಿಯಂತೆ ಅಲೀತಿರುತ್ತಾನೆ. ಈ ಸಂಪತ್ತಿಗೆ ಮದುವೆ ಯಾಕಾಗಬೇಕಿತ್ತು? ಅದೂ ಕುಣೀತಾ ಕುಣೀತಾ ಹೋದೆ. ಈ ಗಂಡಸರೆಲ್ಲ ಒಂದೇ ತರಹ. ಇನ್ನು ಮಕ್ಕಳೋ ಪರದೇಶಕ್ಕೆ ಹಾರಿಬಿಡುತ್ತವೆ. ಒಬ್ಬಳು ಬಂದಿದ್ದಾಳೆಂದು ಸುಮನಾ ಎಲ್ಲಾ ಮಾತಾಡಿಕೊಳ್ಳುತ್ತಿದ್ದರು. ಅದರಿಂದ ತಿಳೀತು. ಹಾಗೇ ಹೀಗೇಂತ ಹೇಳಿಕೆಗಳು, ಎಷ್ಟೊತ್ತು ಮುಂದುವರೆಯುತ್ತವೋ ತಿಳಿಯದು.” ಅಷ್ಟರಲ್ಲಿ ಒಳಗಿನಿಂದ ಕೂಗು ಕೇಳಿಸಿತು. “ಎಲ್ಲಿ ಹಾಳಾಗಿ ಹೋದ್ರೇ ಎಲ್ಲರೂ” ಥಟ್ಟನೆ ಸದ್ದಡಗಿತು. ಮೂರೂಜನ ಒಟ್ಟಿಗೆ ರೂಮಿನೊಳಕ್ಕೆ ಕಾಲಿಟ್ಟರು.
“ಸುಮನ ನೀನಿನ್ನೂ ಮನೆಗೆ ಹೋಗಿಲ್ಲಾ. ವ್ಹಾ..ಭಾರ್ಗವಿ ಬಂದಿದ್ದಾಳೆ. ಅದಕ್ಕೇ ಇಷ್ಟೊಂದು ಮಾತುಕತೆ” ಎಂದರು ಗಿರಿಜಮ್ಮ.
ಅವರ ಮಾತಿಗೆ ಹೆಚ್ಚಿನ ಮಹತ್ವ ಕೊಡದೆ ಭಾರ್ಗವಿ “ಹೇಗಿದ್ದೀರಿ ಅಮ್ಮಾ? ಸಡನ್ನಾಗಿ ಏನಾಯ್ತು?” ಎಂದು ಕೇಳಿದಳು.
ಅವಳ ಮಾತಿನ್ನು ಪೂರ್ತಿಯಾಗಿರಲಿಲ್ಲ ಅಷ್ಟರೊಳಗಾಗಿ “ವಯಸ್ಸಾದವಳು ನಾನು ಒಂದು ಗಳಿಗೆ ಇದ್ದಂತೆ ಮತ್ತೊಂದು ಗಳಿಗೆ ಇರುತ್ತೇನಾ, ಸುಖಾಸುಮ್ಮನೆ ಬರಲಿಕ್ಕೆ ನನಗೇನು ತಿಕ್ಕಲೇ, ಇದನ್ನು ಕೇಳಕ್ಕೆ ನೀನು ಬಂದ್ಯಾ?” ಎಂದು ಮುಖಕ್ಕೆ ರಾಚುವಂತೆ ಉತ್ತರಿಸಿದರು ಗಿರಿಜಮ್ಮ.
“ಹಾಗಲ್ಲಮ್ಮಾ ಭಾರ್ಗವಿ ನೆನ್ನೆಯಷ್ಟೇ ನಮ್ಮ ಮನೆಗೆ ಬಂದು ಹೋಗಿದ್ದಳು. ಆಗೇನೂ ಇರಲಿಲ್ಲ. ಸ್ವಾಭಾವಿಕವಾಗಿ ಕೇಳಿದಳು ಅಷ್ಟೇ. ಈಗ ನೀವು ಹೇಳಿದಂತೆ ಆಗಬಹುದಲ್ಲವೇ. ಬಿಡಿ ಕೋಪ ಮಾಡಿಕೊಳ್ಳಬೇಡಿ” ಎಂದು ಹೇಳುತ್ತ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಿದಳು ಸುಮನಾ.
ಊಹುಂ ಗಿರಿಜಮ್ಮನಿಗೆ ಮಗಳ ಸಮಜಾಯಿಷಿ ಅಷ್ಟೇನು ಪಥ್ಯವಾಗಲಿಲ್ಲ. ಏನೋ ಈಗಿನ ಕಾಲದ ಮಕ್ಕಳಿಗೆ ವಯಸ್ಸಾದವರ ಬಗ್ಗೆ ಕಾಳಜಿಯೇ ಇಲ್ಲ. ತಮಗೆ ಹೇಗೆಬೇಕೊ ಹಾಗೆ ಹೇಳಿಬಿಡುತ್ತಾರೆ. ನನ್ನ ನಾಲ್ಕು ಜನ ಸುಪುತ್ರಿಯರಲ್ಲಿ ಹಿರಿಯವಳೊಬ್ಬಳನ್ನು ಬಿಟ್ಟು ಮಿಕ್ಕವರೆಲ್ಲರಿಗೂ ತಮ್ಮ ತಮ್ಮ ಕೆಲಸದ ಕಡೆಗೇ ಗಮನ. ಇದ್ದಿದ್ದರಲ್ಲಿ ರಜನಿ ಪರವಾಗಿಲ್ಲ. ಆದರೆ ಮೂರೂಜನ ಸೇರಿಬಿಟ್ಟರೆ ಏನೊ ಒಂದಿಷ್ಟು ಬೇಸಾಕಿ ಮುದುಕಿ ಮನೆಯಲ್ಲಿಯೇ ಬಿದ್ದಿರುತ್ತಾಳೆಂದು ಸೂರ್ಯ ಹುಟ್ಟುವ ವೇಳೆಗೆ ಪೇರಿ ಕಿತ್ತರೆ ಇನ್ನು ಸಂಜೆಗೆ ಅವನು ತನ್ನ ಮನೆ ಸೇರಿದಮೇಲೇ ಇವರುಗಳು ಹೊಸಲು ತುಳಿಯೋದು. ನೀನು ಉಂಡೆಯಾ ಬಿಟ್ಟೆಯಾ ಅಂತ ಕೇಳುವ ವ್ಯವಧಾನವೂ ಇರೋಲ್ಲ. ಎಲ್ಲ ಪಾತ್ರೆಗಳನ್ನೂ ಚೆಕ್ ಮಾಡಿಕೊಂಡು ಅಷ್ಟರಲ್ಲೇ ರಾತ್ರಿಗೇನು ಬೇಕು ಅಂತ ನನ್ನನ್ನು ಕೇಳಿದಂಗೆ ಮಾಡಿ ತಮಗೇನೆನ್ನಿಸುತ್ತದೆಯೋ ಅದನ್ನು ಮಾಡಿ ಬಡೀತಾರೆ. ಆಮೆಲೆ ರೂಮುಗಳಿಗೆ ಸೇರಿಕೊಂಡು ಗುಸುಗುಸು ಪಿಸುಪಿಸು ಕಿಲಕಿಲಾಂತ ಅವರಿಗವರೇ.. ಇರುತ್ತಾರೆ. ಹೀಗೆ ನರ್ಸಿಂಗ್ ಹೋಂ ಸೇರಿಕೊಂಡರೆ ಒಬ್ಬರಲ್ಲ ಒಬ್ಬರು ನನ್ನೆದಿರಿಗೆ ಕೂತಿರುತ್ತಾರೆ. ಬೇಕು ಬೇಡಗಳನ್ನು ವಿಚಾರಿಸುತ್ತಾರೆ. ತಯಾರು ಮಾಡಿಕೊಂಡು ಬರುತ್ತಾರೆ. ಅದಕ್ಕೇ ನಾನು ಉಸಿರುಕಟ್ಟಿದಂತೆ ಕಣ್ಣು ಮೇಲಕ್ಕೆ ಮಾಡಿ ಸಂಕಟ ತೋರಿ ಇಲ್ಲಿಗೆ ಸೇರಿಸುವಂತೆ ಮಾಡುತ್ತೇನೆ. ಇದರ ಗುಟ್ಟೇನಾದ್ರೂ ಇವರಿಗೆ ಗೊತ್ತಾಗಿಬಿಟ್ಟರೆ ನನ್ನ ಕಾಲಮೇಲೆ ನಾನೇ ಕಲ್ಲುಹಾಕಿಕೊಂಡಂತೆ ಎಂದೆಲ್ಲಾ ತಮ್ಮ ಮನಸ್ಸಿನಲ್ಲೇ ಅಂದುಕೊಂಡರು ಗಿರಿಜಮ್ಮ.
ಹೊರಗೆ ಮಾತ್ರ “ನೀವುಗಳು ನಿಮ್ಮ ಗೆಳತೀನ ಬಿಟ್ಟುಕೊಡ್ತೀರಾ? ಅದುಬಿಡಿ ಅದೇನೋ ಉಸಿರು ಸಿಕ್ಕಿಹಾಕಿಕೊಂಡಂಗೆ ಆಯಿತು. ಇಲ್ಲಿಗೆ ತಂದು ಸೇರಿಸಿದರು. ನಿನ್ನ ಲೇಟೆಸ್ಟ್ ಸಮಾಚಾರವೇನು? ನಿನ್ನ ಗಂಡ ಬಂದು ನಿನ್ನ ಬಳಿಯೇ ಇದ್ದಾನಾ? ಅಥವಾ ನನ್ನ ಗಂಡನ ಹಾಗೆ ಮಾಯವಾದನೋ. ಮಕ್ಕಳು ಪರದೇಶದಿಂದ ಬರುತ್ತಾರೋ ಅಥವಾ ಅವರೂ ಅಲ್ಲೇ ಠಿಕಾಣಿ ಹೂಡಿಬಿಟ್ಟರೋ? ಹಾಗೇನಾದರೂ ಆದರೆ ನಿನ್ನ ಪಾಡೂ ನಾಯಿಪಾಡೇ. ಎಲ್ಲರೂ ಇದ್ದರೂ ಇಲ್ಲದಂಗೆ.”
ಅವರ ಮೊನಚಾದ ಮಾತುಗಳು ಭಾರ್ಗವಿಯ ಮನಸ್ಸನ್ನು ಘಾಸಿಗೊಳಿಸಿದವು. ಕಣ್ಣಿಂದಲೇ ಕ್ಷಮೆ ಕೋರುತ್ತಾ ಅಕ್ಕಪಕ್ಕ ನಿಂತಿದ್ದ ಗೆಳತಿಯರತ್ತ ನೋಡಿದಳು ಅವರು ಅಸಹಾಯಕರೆಂಬುದನ್ನು ಅರ್ಥಮಾಡಿಕೊಂಡು “ಹಾಗೇನಿಲ್ಲಮ್ಮ ಹಿರಿಯ ಮಗಳು ಪರದೇಶದಿಂದ ಹಿಂತಿರುಗಿ ಬಂದು ಬೆಂಗಳೂರಿನಲ್ಲಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಚಿಕ್ಕಮಗಳ ವಿದ್ಯಾಭ್ಯಾಸ ಮುಗಿದಿದೆ. ಅಲ್ಲಿನ ಪದವಿಪ್ರದಾನ ಸಮಾರಂಭಕ್ಕೆ ನಾನು ಮತ್ತು ನನ್ನ ಗಂಡ ಇಬ್ಬರನ್ನೂ ಆಹ್ವಾನಿಸಿದ್ದಾಳೆ, ನಾವು ಹೋಗುತ್ತಿದ್ದೇವೆ. ಜಮೀನಿನ ಕೆಲಸ ಬೇಕಾದಷ್ಟಿರುತ್ತದೆ. ಅಲ್ಲಿಗೆ ಹೋಗಿ ಬರುತ್ತಿರುತ್ತಾರೆ. ನೀವು ಬೇಗನೆ ಹುಷಾರಾಗಿ, ನಾನಿನ್ನು ಬರುತ್ತೇನೆ” ಎಂದು ಉತ್ತರಿಸಿದಳು.
ಭಾರ್ಗವಿಯ ಉತ್ತರದಿಂದ ತೃಪ್ತರಾಗದ ಗಿರಿಜಮ್ಮ “ಏನೋಪ್ಪ.. ಏನೇ ಆದರೂ ಈ ಗಂಡಸರನ್ನು ನಂಬಲಿಕ್ಕಾಗದು. ಜೋಪಾನ. ನಾನು ಹೀಗೆ ಹೇಳ್ತೀನಿ ಅಂತ ಬೇಜಾರು ಮಾಡಿಕೊಳ್ಳಬೇಡ. ನೀನು ಮಕ್ಕಳನ್ನು ಚೆನ್ನಾಗಿ ಓದಿಸಿದ್ದೀಯೆ. ಅವರ ಕಾಲಮೇಲೆ ಅವರು ನಿಂತುಕೊಳ್ಳುವ ಹಂತಕ್ಕೆ ತಂದಿದ್ದೀಯೆ. ಯಾರಾದರೂ ಚಾಲಾಕಿ ಹುಡುಗರು ಯಾಮಾರಿಸಿಬಿಟ್ಟಾರು ಜೋಕೆ. ಎಷ್ಟೇ ನಿಯತ್ತಾದವರೆಂದರೂ ಮಧ್ಯಕಾಲದಲ್ಲಿ ಕೈಕೊಟ್ಟು ನಮ್ಮನ್ನು ಪರದೇಸಿಗಳನ್ನಗಿ ಮಾಡಿ ಹೋಗಿಬಿಡುತ್ತಾರೆ.” ಎಂದು ನಿಡಿದಾದ ಉಸಿರು ಬಿಟ್ಟರು.
(ಮುಂದುವರಿಯುವುದು)

-ಬಿ.ಆರ್.ನಾಗರತ್ನ, ಮೈಸೂರು
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=45517
