ದಶಮ ಸ್ಕಂದ – ಅಧ್ಯಾಯ 11 – ಉತ್ತರಾರ್ಧ
ಶಿಶುಪಾಲ ವಧಾ
ಜರಾಸಂಧ ಸಂಹಾರ ನಂತರದಿ
ಧರ್ಮರಾಜ ಕೃಷ್ಣನ ಉಪಾಯ ಕುಶಲತೆಗಳಿಗೆ
ಕೃತಜ್ಞತಾ ಭಾವ ಸೂಚಿಸುತ
ರಾಜಸೂಯಯಾಗ ಪ್ರಾರಂಭಕೆ
ಅನುಮತಿಗೆ ಪ್ರಾರ್ಥಿಸೆ, ಅನುಮತಿ ದೊರೆಯಲು
ಅನೇಕ ಮಂದಿ ಬ್ರಾಹ್ಮಣರನ್ನು ಋತ್ವಕ್ ಸ್ಥಾನಗಳಿಗೂ
ಪೌರೋಹಿತ್ಯಕ್ಕೂ ಆಹ್ವಾನಿಸಿ
ಕಣ್ವ ವಿಶ್ವಾಮಿತ್ರ ಕಶ್ಯಪ ಅಗಸ್ತ್ಯ ಪರಶುರಾಮಾದಿ
ಮಹರ್ಷಿಗಳ ಭಕ್ತಿಯಲಿ ಆಹ್ವಾನಿಸಿ
ಹಸ್ತಿನಾವತಿಯಿಂದ ಭೀಷ್ಮ ದ್ರೋಣ ದೃತರಾಷ್ಟ್ರ
ದುರ್ಯೋಧನಾದಿ ಮತ್ತವನ ನೂರು ತಮ್ಮಂದಿರನೂ
ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಪ್ರಮುಖರನ್ನೂ
ಗಾಂಧಾರಿ ಭಾನುಮತಿ ಮುಂತಾದ
ರಾಣಿವಾಸದ ಸ್ತ್ರೀಜನರನೂ
ಯಾಗಮಂಟಪಕೆ ಬರಮಾಡಿಕೊಂಡು
ರಾಜಸೂಯಯಾಗವ ಶಾಸ್ತ್ರೋಕ್ತ ವಿಧಾನದಿ
ವೈಭವದಿ ನಡೆಯಿಸಿ ಸಾಂಗಗೊಳಿಸಿದನು
ಧರ್ಮರಾಯ
ಕೊನೆಯಲಿ ಸೋಮಾಭಿಷವವೆಂಬ ದಿನ
ಧರ್ಮರಾಯ ಯಾಜಕರು ಋತ್ವಿಕ್ ಪುರೋಹಿತರು
ಮುಂತಾದವರೆಲ್ಲರಿಗೂ ಯುಕ್ತರೀತಿಯಲಿ
ದಾನ ದಕ್ಷಿಣೆಗಳಿಂದ ಗೌರವಿಸಿದನು
ಕುಶಲಮತಿ ಸಹದೇವ ಈ ಮಹಾಸಭೆಯಲಿ
ಅಗ್ರಪೂಜೆಯ ಯಾರಿಗೆ ಸಲ್ಲಿಸಬೇಕೆಂದು
ಚಿಂತಿಸುತ್ತಿರೆ, ಧರ್ಮರಾಯ
ಸರ್ವದೇವತಾ ವಂದಿತನೂ ಯಜ್ಞಸ್ವರೂಪಿಯೂ
ಆದ ಶ್ರೀಕೃಷ್ಣನಿಗಿಂತಲೂ ಈ ಮನುಜ ಲೋಕದಲಿ
ಅಗ್ರಪೂಜೆಗೆ ಯೋಗ್ಯರ್ಯಾರಿಹರು
ಧರ್ಮಾರ್ಥ ಪುರುಷಾರ್ಥ ಸಿದ್ಧಿಗೆ
ಮಾರ್ಗದರ್ಶನ ನೀಡಲು
ಮಾನುಷಾವತಾರವೆತ್ತಿ ಬಂದಿಹ
ಪುರುಷೋತ್ತಮ ಕೃಷ್ಣನಿಗೆ
ಅಗ್ರಪೂಜೆ ಸಲ್ಲಿಸುವುದು ಯುಕ್ತ
ಎಂದು ನುಡಿಯೆ ನೆರೆದಿದ್ದ ಸಕಲ ಬ್ರಾಹ್ಮಣರೂ
ಭೀಷ್ಮಾದಿ ವೃದ್ಧರೂ ಅನುಮೋದಿಸೆ
ಧರ್ಮರಾಜ ಸ್ವರ್ಣಮಯ ಹರಿವಾಣದಲಿ
ಶ್ರೀಕೃಷ್ಣಸ್ವಾಮಿಯ ಪಾದಗಳನ್ನಿರಿಸಿ
ಅಭಿಷೇಕವ ಮಾಡಿ ಒರೆಸಿ ಪಾದೋದಕವ
ತಲೆಯ ಮೇಲೆ ಪ್ರೋಕ್ಷಿಸಿಕೊಂಡು
ನೆರೆದಿರ್ಪ ಸಕಲರಿಗೂ ಪ್ರೋಕ್ಷಿಸಿ
ಆನಂದದಿಂದಲಿ ಕೃಷ್ಣಸ್ವಾಮಿಯ ಸ್ತುತಿಸುತ್ತಿರೆ
ಶಿಶುಪಾಲನೊಬ್ಬನು ಮಾತ್ರ
ಶ್ರೀ ಕೃಷ್ಣನ ಅಗ್ರಪೂಜೆಯ ಕಂಡು
ಸಂತಾಪದಿ ಕೆರಳಿ ಮನಬಂದಂತೆ ನುಡಿದನು
ಬಹಳಷ್ಟು ಮಂದಿ ಜ್ಞಾನವೃದ್ಧರೂ ವಯೋವೃದ್ಧರೂ
ಗಂಗಾಪುತ್ರ ಭೀಷ್ಮ, ಕುರುಪಿತಾಮಹ ದ್ರೋಣಾಚಾರ್ಯ
ಪರಶುರಾಮಾದಿ ಮಹರ್ಷಿಗಳು ಮುಂತಾದವರೆಲ್ಲರ
ಕಡೆಗಣಿಸಿ, ಅವಮಾನಿಸಿ ಗೊಲ್ಲನಿಗೆ ಅಗ್ರಪೂಜೆ ಸಂದಿಹುದು
ತರವಲ್ಲ, ಇದು ಹಿರಿಯರೆಲ್ಲರಿಗೂ ಮಾಡಿದ ಅವಮಾನ
ಸಕಲ ಧರ್ಮವ ಅರಿತಿರುವ ಧರ್ಮರಾಜನು
ಮಾಡಿಹ ಅಕ್ಷಮ್ಯ ಅಪರಾಧ ಎಂದಂದು
ನಂತರದಿ ಕೃಷ್ಣನೆಡೆ ತಿರುಗಿ
ಎಲವೋ ಪಶುಪಾಲಕನೆ
ಇಷೆಲ್ಲ ಹಿರಿಯ ಜ್ಞಾನಿಗಳು ತುಂಬಿಹ ಸಭೆಯಲಿ
ಹೇಗೆ ನೀ ಪೂಜೆಗೆ ಸಮ್ಮತಿಸಿದೆ,
ಕೃಷ್ಣಾ ನಿನಗೆ ಕುಲವಿಲ್ಲ, ಆಶ್ರಮಗಳಿಲ್ಲ,
ಕ್ಷತ್ರಿಯರ ಗುಂಪನ್ನು ಬಿಟ್ಟು
ಸಮುದ್ರದಂಡೆಯ ಮೇಲೊಂದು
ಊರ ಕಟ್ಟಿಕೊಂಡು ಹೆಂಡತಿ ಮಕ್ಕಳೊಂದಿಗೆ
ತಲೆಮರೆಸಿಕೊಂಡು ಜೀವಿಸುತ್ತಿರುವ ಹೇಡಿ
ಏಂದೆಲ್ಲ ಕೃಷ್ಣನ ನಿಂದಿಸೆ
ಭೀಮಾರ್ಜುನರು ಕೋಪದಿ
ಆಯುಧಗಳನ್ನೆತ್ತಿ ಶಿಶುಪಾಲನತ್ತ ನುಗ್ಗಲು
ಕೃಷ್ಣ ಅವರನ್ನೆಲ್ಲ ನಿವಾರಿಸಿ
ಚಕ್ರಾಯುಧವ ಪ್ರಯೋಗಿಸೆ
ಕವಚ ಕುಂಡಲ ಸಮೇತವಾದ
ಶಿಶುಪಾಲನ ಶಿರಸ್ಸು ಧರೆಗುರುಳಿತು
ಶಿಶುಪಾಲನ ಕಂಠಪ್ರದೇಶದಿಂ
ಹೊರಟ ದಿವ್ಯ ತೇಜ
ಕೃಷ್ಣ ದೇಹವ ಹೊಕ್ಕಿತು
ಮೂರು ಜನ್ಮದಿಂ ವಿಷ್ಣುವಿನ
ಪರಮದ್ವೇಷಿಯಾಗಿ ವೈರಬುದ್ಧಿಯಿಂ ಸದಾ
ವಿಷ್ಣು ಧ್ಯಾನವ ಮಾಡುತ ಜಯವಿಜಯರ
ಮೂರನೇ ಜನ್ಮ ಅಂತ್ಯವಾಯಿತು
ಹಿಂದೆ ಹಿರಣ್ಯಕಶಪು ರಾವಣ ಜನ್ಮವೆತ್ತಿದಾಗಲೂ
ಈ ದ್ವೇಷ ಭಾವದಿ ವಿಷ್ಣುವನು ಧ್ಯಾನಿಸಿ
ವಿಷ್ಣು ಸಾಯುಜ್ಯವ ಹೊಂದಿದ ಕಥೆ
ಜಯವಿಜಯ ಜನ್ಮಾಂತರದ ಕಥೆ
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45504

-ಎಂ. ಆರ್. ಆನಂದ, ಮೈಸೂರು

