ಒಮ್ಮೆ ಒಂದು ಕ್ಷಣ ಕುಳಿತು ನಮ್ಮ ಕಣ್ಣು, ಕಿವಿ ಮನಗಳನ್ನು ತೆರೆದಿಟ್ಟು, ಯೋಚಿಸಿದಾಗ ನನ್ನ ಮನದಲ್ಲಿ ಮಿಂಚಿದ ವಿಚಾರದ ಅಲೆಗಳನ್ನು ಈಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. 7ನೇ ವರ್ಷದಿಂದ 57 ವರ್ಷ, ಬಾನುಲಿ ಹಾಗೂ ರಂಗಭೂಮಿಗಳ ಕಲಾವಿದ, ನಿರ್ದೇಶಕ ಹಾಗೂ ನಾಟಕಕಾರನಾಗಿ, ನಾಟಕ, ಸಾಹಿತ್ಯ, ಕಲೆ ಹಾಗೂ ಜೀವನಗಳಲ್ಲಿ, ನವರಸಗಳನ್ನು ನಾನು ಬಹಳ ಇಷ್ಟಪಡುತ್ತೇನೆ. ನನ್ನ ಸತತ ಅನುಭವಗಳು, ಪ್ರಭಾವಗಳು, ಹಾಗೂ ಈ ಜಗತ್ತಿನಲ್ಲಿ ನಾನು ತೆರೆದುಕೊಂಡ ಹಲವಾರು ಸಂದರ್ಭಗಳು, ಇವೆಲ್ಲವುಗಳಿಂದ ನಾನು ಅರಿತಿರುವ ಸತ್ಯವೆಂದರೆ, ಮುಖದ ಮೇಲಿನ ಮಂದಹಾಸ ಹಾಗೂ ಜೀವನದಲ್ಲಿಯ ಹಾಸ್ಯ ಎಂಬ ಎರಡು ದೇವತೆಗಳೇ ನಮಗೆ ಸಂತಸ ಹಾಗೂ ಶಾಂತಿಗಳ ಅಮೃತ ಹನಿಸಬಲ್ಲವರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ, ಪ್ರಪಂಚದಲ್ಲಿ ಹಾಗೂ ನಮ್ಮ ದೇಶದಲ್ಲಿ ಜೀವನ ಹಾಗೂ ಆರೋಗ್ಯಗಳಿಗೆ ಸಂಬಂಧಿಸಿದಂತೆ ಕಾಣುವ ಹಲವಾರು ಚಟುವಟಿಕೆಗಳು ಹಾಗೂ ಚಿಂತನೆಗಳತ್ತ ಒಂದು ಸುತ್ತು ಹಾಕಿ ಬರೋಣ,
1963ರಲ್ಲಿ ವಾರ್ಸೆಸ್ಟರ್ ಮ್ಯಾಸಚ್ಯೂಸೆಟ್ಸ್ ಹಾರ್ವೆ ಬಾಲಾ ಎಂಬ ವಾಣಿಜ್ಯ ಕಲಾವಿದ ಸೃಷ್ಟಿಸಿದ ನಗುಮೊಗದಿಂದ, ವಿಶ್ವಮುಗುಳಗೆ ದಿನಾಚರಣೆ ಅಂಕುರವೊಡೆಯಿತು. 1999 ರಿಂದ ಹಾರ್ವೆ ಬಾಲ್ ಸೈಲ್ ಫೌಂಡೇಶನ್ ಆರಂಭವಾಯಿತು. ಇದರ ಧೈಯವಾಕ್ಯ ಒಮ್ಮೆ ಒಂದು ಕಿರುನಗೆಯಿಂದ ಪ್ರಪಂಚ ಸುಧಾರಿಸುವುದು 2010ರ ಸಂದೇಶ ಕರುಣೆಯ ಒಂದು ಕಾರ್ಯ ಮಾಡು ; ಒಬ್ಬ ಮನುಷ್ಯ ಮುಗಳ್ನಗಲು ನೆರವಾಗು. ನಾನು ದೃಢವಾಗಿ ನಂಬಿರು ವಂತೆ, ಶಾರೀರಿಕವಾಗಿ ಹಾಗೂ ಮಾನಸಿಕ ವಾಗಿ ಶಕ್ತ ಮತ್ತು ಆರೋಗ್ಯವಂತ ರಾಗಿರುವ ಈತ ಅಥವಾ ಈಕೆ ಮಾತ್ರ ನಗಬಲ್ಲರು. ಉಳಿದವರು ತಮ್ಮ ಆರೋಗ್ಯ ಸಂಪಾದಿಸಲು ಮೊದಲು ಹೆಣಗಬೇಕು. ನಂತರವೇ ಸಂತಸದಿಂದಿದ್ದು, ಮುಗುಳಗಲು ಸಾಧ್ಯ. ಒಂದು ಸುಂದರ ಮುಗ್ಗ ಮಂದಹಾಸ ಕಂಡಾಗ, ಮಂದಮಾರುತ ಬೀಸಿದಂತೆ, ಮೊಗ್ಗು ಅರಳಿ ಹೂವಾದಂತೆ ಭಾವನೆ ಆವರಿಸುತ್ತೆ. ನಮಗೆ ಲಭ್ಯವಾಗುವ ಎಲ್ಲ ಚಕ್ರ ಹಾಗೂ ಭಾವಚಿತ್ರಗಳಲ್ಲಿ ಗಾಂಧಿ, ಹಾಗೂ ಬುದ್ಧ ಮಾತ್ರ ಸದಾ ಮುಗುಳಗುತ್ತಿರುತ್ತಾರೆ. ಪ್ರಪಂಚದಲ್ಲಿ ಎಲ್ಲೆಡೆ ಲಭ್ಯವಿರುವ ನಗುವ ಬುದ್ಧ ಅಥವಾ ಬೊಕ್ಕ ತಲೆಯ ದಪ್ಪ ಹೊಟ್ಟೆಯ ವಿದೂಷಕ ಬೊಂಬೆ ಮಾತ್ರ ನಮಗೆ ಸದಾ ನಗಲು ಸ್ಫೂರ್ತಿ ಕೊಡುತ್ತದೆ.
ಅಕ್ಟೋಬರ್ 2 ರಂದು ಗಾಂಧೀಜಿಯವರ 150ನೇ ಜನ್ಮದಿನ ಆಚರಿಸುತ್ತಿರುವ ಸಂದರ್ಭದಲ್ಲಿ, 15-6-2007ರಂದು ವಿಶ್ವಸಂಸ್ಥೆ ತೆಗೆದುಕೊಂಡ ನಿರ್ಣಯದಂತೆ, ಅಕ್ಟೋಬರ್ 2ನ್ನು ಅಂತರ್ ರಾಷ್ಟ್ರೀಯ ಅಹಿಂಸಾ ದಿನಾಚರಣೆಯಂದು ಆಚರಿಸುತ್ತಿರುವುದು, ಭಾರತೀಯರಾದ ನಮಗೆ ಹೆಮ್ಮೆಯ ವಿಷಯ. ಈ ಸಂದರ್ಭದಲ್ಲಿ ಗಾಂಧೀಜಿಯವರು ನುಡಿದು, ನಡೆದು ತೋರಿಸಿದ ಹಲವಾರು ದಾಪು ಹೆಜ್ಜೆಗಳ ಪಥದಲ್ಲಿ ನಾವು ಒಂದೆರಡು ಹೆಜ್ಜೆಗಳನ್ನಾದರೂ ಅನುಸರಿಸೋಣ. ಸಸ್ಯಾಹಾರಿ ಯಾಗುವುದು, ಪ್ರಕೃತಿ ಚಿಕಿತ್ಸೆ ಅನುಸರಿಸುವುದು, ಔಷಧ, ಹಾಗೂ ಕುಡಿತಕ್ಕೆ ದಾಸನಾಗದಿರುವುದು, ನಾಲಿಗೆಯ ರುಚಿ ನಿಯಂತ್ರಣ, ದೇಹವನ್ನು ರೋಗ ಮುಕ್ತವಾಗಿರಿಸುವುದು, ದೇಹದ ಪಂಚಭೂತ ತತ್ವಗಳ ಸಾಮರಸ್ಯ ಚಟುವಟಿಕೆ, ಸಂಯಮ, ಸ್ವಚ್ಛತೆ, ನೈರ್ಮಲ್ಯ ಪಾಲನೆ ಮುಂತಾದವು. ಅಕ್ಟೋಬರ್ 1 ರಿಂದ ವಿಶ್ವ ಸಸ್ಯಾಹಾರ ದಿನವಾಗಿ ಆರಂಭವಾಗಿ, ಒಂದು ತಿಂಗಳು ಸಸ್ಯಾಹಾರ ಅರಿವು ಮಾಸದಾಚರಣೆ ಗಮನಿಸಿದಾಗ ಗಾಂಧೀಜಿಯವರ ಸಸ್ಯಾಹಾರಕ್ಕೆ ಸಿಕ್ಕಿರುವ ಅಂತರ್ ರಾಷ್ಟ್ರೀಯ ಮನ್ನಣೆ ಗೋಚರಿಸುತ್ತದೆ. ಉತ್ತರ ಅಮೇರಿಕಾದ ಸಸ್ಯಾಹಾರ ಸಮಾಜ 1977ರಲ್ಲಿ ಈ ತತ್ವ ಪ್ರತಿಪಾದಿಸಿ, ಈ ತತ್ವಕ್ಕೆ 1978ರಿಂದ ಅಂತರ್ ರಾಷ್ಟ್ರೀಯ ಸಸ್ಯಾಹಾರ ಸಮಾಜದ ಬೆಂಬಲ ಸಿಕ್ಕಿದೆ. ಈ ಆಚರಣೆಯ ಗುರಿ ಸಂತೋಷ, ಸಮಾಧಾನ ಪಡೆಯುವುದು ಹಾಗೂ ಸಸ್ಯಾಹಾರದಿಂದ ಆಯಸ್ಸು ಹೆಚ್ಚಿಸುವುದು. ಈ ನಿಟ್ಟಿನಲ್ಲಿ ಸಸ್ಯಾಹಾರ ಜೀವನ ಶೈಲಿಯಿಂದ, ನೈತಿಕ, ಪರಿಸರ, ಆರೋಗ್ಯ ಹಾಗೂ ಮಾನವೀಯ ಅನಕೂಲತೆಗಳ ಬಗ್ಗೆ, ಜನರಿಗೆ ಅರಿವು ನೀಡುವುದೇ ಆಗಿದೆ. ಅಮೇರಿಕಾದಲ್ಲಿ ನವೆಂಬರ್ 1 ರಂದು ವೇಗನ್ ದಿನಾಚರಣೆ, ಚೀನಾದಲ್ಲಿ ಚಂದ್ರಯಾನ ಮಾಸದ ಶುಕ್ಲ ಪಕ್ಷದ ಮೊದಲ ಹಾಗೂ ಕೊನೆಯ ದಿನ ಚೀನೀಯರು ಸಸ್ಯಾಹಾರಿಗಳಾಗುತ್ತಾರೆ.ಸಸ್ಯಾಹಾರ, ಹಿತಮಿತ ಊಟ, ಸಾಕಷ್ಟು ನಿದ್ರೆ ವಿಶ್ರಾಂತಿ, ನೆಮ್ಮದಿಯ ಜೀವನ ಇವನ್ನೆಲ್ಲಾ ಬಯಸುತ್ತದೆ ಹಿರಿಯ ನಾಗರಿಕ ಜೀವ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಕ್ಟೋಬರ್ ಮೊದಲ ವಾರದಲ್ಲಿ ಅಂತರರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆಯೆಂದು ಘೋಷಿಸಿದೆ. ವೃದ್ದರ ನಾನಾ ವಿಷಯಗಳು, ಅವರ ಶಾರೀರಿಕ ಆರೋಗ್ಯ, ಮಾನಸಿಕ, ಭಾವನಾತ್ಮಕ ಸಮಸ್ಯೆಗಳು, ಇವುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೇ, ಈ ಆಚರಣೆಯ ಉದ್ದೇಶ. ಕಿರಿಯರು ಮುಂದೊಮ್ಮೆ ತಮಗೂ ವಯಸ್ಸಾಗುತ್ತದೆ, ತಾವೂ ವೃದ್ಧಾಪ್ಯದತ್ತ ಕಾಲಿಡುತ್ತೇವೆ ಎಂದು ಅರಿಯುವುದೇ ಇಲ್ಲ. ಹಿರಿಯರ ಆರೋಗ್ಯ ಭಾವನೆಗಳು ಹಾಗೂ ಸುರಕ್ಷತೆ ಬಗ್ಗೆ, ಸಮಾಜ ಹೆಚ್ಚು ಕಾಳಜಿ ಕೊಡಬೇಕಾಗಿದೆ. ಹಿರಿಯ ನಾಗರೀಕರ ಜೀವ, ಕಾಳಜಿ, ಹಾಗೂ ಆಸ್ತಿಗೆ ಹೆಚ್ಚಿನ ಮಹತ್ವ ಕೊಟ್ಟು, ಅವರ ದುರ್ಬಳಕೆ ಹಾಗೂ ಶೋಷಣೆ ತಪ್ಪಿಸಬೇಕಾಗಿದೆ. ಕುಟುಂಬ, ಸಮಾಜ ಹಾಗೂ ದೇಶಕ್ಕೆ ಅವರ ಕೊಡುಗೆಯ ಬಗ್ಗೆ ಪ್ರಶಂಸೆ ಹಾಗೂ ಕೃತಜ್ಞತೆ ಸಲ್ಲಿಸಬೇಕಾಗಿದೆ.
ಹಿರಿಯರನ್ನು ಗೌರವಿಸುವಂತೆ, ಮುಂದಿನ ತಲೆಮಾರಿನವರನ್ನು ಸಿದ್ಧಪಡಿಸುತ್ತಿರುವ ಶಿಕ್ಷಕರನ್ನು, ನಾವು ಎಂದೂ ಮರೆಯಬಾರದು. 1994ರಿಂದ ವಿಶ್ವ ಶಿಕ್ಷಕರ ದಿನಾಚರಣೆಯನ್ನು ಪ್ರತೀವರ್ಷ ಅಕ್ಟೋಬರ್ 5 ರಂದು ಆಚರಿಸಲಾಗುತ್ತಿದೆ. ಯುನೆಸ್ಕೋ ಪ್ರಕಾರ ವಿಶ್ವ ಶಿಕ್ಷಕರ ಕೊಡುಗೆಯನ್ನು ಸ್ಮರಿಸಬೇಕಾಗಿದೆ. ಶಿಕ್ಷಕರ ಬಗ್ಗೆ ಅರಿವು ಮೂಡಿಸಲು, ಅವರನ್ನು ಅರ್ಥ ಮಾಡಿಕೊಳ್ಳಲು, ಶಿಕ್ಷಣ ಹಾಗೂ ಅಭಿವೃದ್ಧಿ ಕ್ಷೇತ್ರಗಳಲ್ಲಿ ಶಿಕ್ಷಕರ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ಸೂಚಿಸುವುದೇ, ಈ ದಿನದ ಉದ್ದೇಶ.
ಮುಂದಿನ ತಲೆಮಾರುಗಳ ಬೇಡಿಕೆಗಳತ್ತ ಕಾಳಜಿ ವಹಿಸುವ, ತಮ್ಮ ವಿದ್ಯಾರ್ಥಿಗಳ ಸಂಪೂರ್ಣ ಆರೋಗ್ಯ ಆಧರಿಸಿ, ಅವರ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣ ಮಾಡುವತ್ತ ಶಿಕ್ಷಕರ ಪ್ರಯತ್ನಗಳಿಗೆ, ಪ್ರಪಂಚದ ಬೆಂಬಲ ಕ್ರೋಢೀಕರಿಸುವುದೇ ಮುಖ್ಯ ಗುರಿ. ಲಿಂಗಸಮಾನತೆಗಾಗಿ ಶಿಕ್ಷಕರು ಒಟ್ಟಾಗಿ ಗಟ್ಟಿತನವಿರಲಿ. ಒಟ್ಟಿನಲ್ಲಿ ಹಿರಿಯ ನಾಗರಿಕರು, ಶಿಕ್ಷಕರು, ಮಹಿಳೆಯರು, ಕಿರಿಯರು ಯಾರ ಬಗ್ಗೆ ಯೋಚಿಸಬೇಕಾದರೂ ಅವರ ಒಟ್ಟೂ ಆರೋಗ್ಯದ ಬಗ್ಗೆ ಅಂದರೆ ಶಾರೀರಿಕ, ಮಾನಸಿಕ, ಭಾವನಾತ್ಮಕ ಹಾಗೂ ಆತ್ಮಿಕ ಆರೋಗ್ಯದ ಆಯಾಮಗಳ ಬಗ್ಗೆ ಯೋಚಿಸಬೇಕಾಗುತ್ತದೆ. ನಮ್ಮ ಶಾರೀರಿಕ ಆರೋಗ್ಯ ಕೆಟ್ಟಾಗ ವೈದ್ಯರನ್ನು ತಜ್ಞರನ್ನು ಹೋಗಿ ನೋಡುತ್ತೇವೆ. ರಕ್ತ ತಪಾಸಣಾ ಕೇಂದ್ರಗಳಿಗೆ ಭೇಟಿ ಕೊಡುತ್ತೇವೆ. ಇಲ್ಲೆಲ್ಲಾ ಅನೇಕ ಬಾರಿ ರಕ್ತ ಬೇಕು ಎಂಬ ಮಾತು ಕೇಳಿ ಬರುತ್ತದೆ. ನಿಮಗೆಲ್ಲಾ ತಿಳಿದಿರಬಹುದು, ಮಾನವ ರಕ್ತಕ್ಕೆ ಪರ್ಯಾಯವೆಂಬುದಿಲ್ಲ ಹಾಗೂ ಅದನ್ನು ಕೃತಕವಾಗಿ ಸೃಷ್ಟಿಸಲಾಗದು. ಈ ಮುಂಚೆ ವೃತ್ತಿಪರ ರಕ್ತದಾನಿಗಳು ತಮ್ಮ ರಕ್ತವನ್ನು ಹಣಕ್ಕಾಗಿ ಮಾರಿಕೊಳ್ಳುತ್ತಿದ್ದರು. ಈಗ ಸರಕಾರಿ ನಿಯಮಗಳಿಗನುಸಾರವಾಗಿ ರಕ್ತ ಮಾರುವಂತಿಲ್ಲ ಆದ್ದರಿಂದ ಸ್ವಯಂಪ್ರೇರಿತ ರಕ್ತ ದಾನದ ಮೂಲಕ ಮಾತ್ರ ರಕ್ತದಾನ ಆಗುತ್ತಿದೆ. ಮಾನವ ಜೀವನದ ಬಹುಮುಖ್ಯ ಭಾಗವಾದ ರಕ್ತ, ದೇಹದ ಪೋಷಣೆಗೆ ದೇಹದ ಅಂಗಗಳಿಗೆ ಹಾಗೂ ಜೀವಕೋಶಗಳಿಗೆ ಬೇಕೇ ಬೇಕು. ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯನ್ನು ನಿನ್ನೆ ಆಚರಿಸಿದ್ದೇವೆ. ಹಿಂಸೆ ಹಾಗೂ ಗಾಯಗಳಿಂದ ಉಂಟಾದ ಸ್ಥಿತಿ, ಶಿಶು ಜನನದ ಸಮಸ್ಯೆಗಳು, ರಸ್ತೆ ಸಂಚಾರಿ ಅಪಘಾತಗಳು, ಇಂಥಲೆಲ್ಲ ಜೀವ ಉಳಿಸುವ ಕ್ರಮಗಳಿಗಾಗಿ ರಕ್ತ ಬೇಕು. ಪ್ರತೀವರ್ಷ ಸುರಕ್ಷಿತ ರಕ್ತದಾನ, ಎಲ್ಲ ವಯಸ್ಸಿನ ಎಲ್ಲ ದೇಶಗಳ ಅನೇಕ ಜೀವಗಳನ್ನು ಉಳಿಸುತ್ತದೆ.
ರಕ್ತದಾನದ ಬಗ್ಗೆ ಸಾಮಾನ್ಯ ಜನರಲ್ಲಿ ಇನ್ನೂ ಇರುವ ಅಜ್ಞಾನ, ಹೆದರಿಕೆ, ತಪುö್ಪತಿಳುವಳಿಕೆಗಳನ್ನು ಓಡಿಸಬೇಕಾಗಿದೆ. ಹೀಗಾಗಿ ಅನೇಕ ಸ್ವಯಂ ಸೇವಾ ಸಂಸ್ಥೆಗಳು, ತಮ್ಮ ಸಮಯ, ಶಕ್ತಿ ಹಾಗೂ ಹಣವನ್ನು, ವಿದ್ಯಾರ್ಥಿಗಳು, ಯುವಜನರು, ಕಾಲೇಜುಗಳು, ಸಂಸ್ಥೆಗಳು, ಕ್ಲಬ್ಗಳು ಹಾಗೂ ಸರಕಾರೇತರ ಸಂಸ್ಥೆಗಳನ್ನು ಪ್ರೇರೇಪಿಸಲು ವೆಚ್ಚ ಮಾಡುತ್ತಿವೆ. ರಕ್ತ ವರ್ಗಾವಣೆ ಮೂಲಕ ಹರಡುವ ರೋಗಗಳನ್ನು ಸೋಂಕುಗಳನ್ನು ತಡೆಯಲು, ಅತ್ಯಾಧುನಿಕ ಪರೀಕ್ಷೆ ತಂತ್ರಜ್ಞಾನ ಬಳಸಲಾಗಿದೆ. ಗಾಬರಿಗೊಳಿಸುವ ಏಡ್ಸ್, ಸಿಫಲೀಸ್, ಹೆಪಟೈಟಿಸ್ ಬಿ, ಹೆಪಟಿಟಿಸ್ ಸಿ, ಚಳಿಜ್ವರ ಹಾಗೂ ಇನ್ನಿತರ ಸೋಂಕುಗಳನ್ನು ಈ ರೀತಿ ತಡೆಯಬಹುದು.ಅತ್ಯಾಧುನಿಕ ಕಾಲದಲ್ಲಿ ವೇಗದ ಜೀವನದಿಂದ ಶರೀರ ಮನಸ್ಸುಗಳೆರಡೂ ಸತತ ಕೆಲಸ ಮಾಡಿ ದಣಿದಾಗ, ವಿಶ್ರಾಂತಿ ಬೇಕೇ ಬೇಕು. ಹಣ ಸಂಪಾದನೆಯ ಮಾರ್ಗದಲ್ಲಿ ಹೊಟ್ಟೆಗೆ ಪೌಷ್ಟಿಕ ಆಹಾರ ಕಣ್ಣುಂಬ ನಿದ್ರೆ, ವಿಶ್ರಾಂತಿ ಪುನರ್ ಯೌವನೀಕರಣ, ಬಿಡುವಿಲ್ಲದ ಸಮಯಕ್ಕೆ ಮನರಂಜನೆ ಬೇಕೇ ಬೇಕು. ಉದ್ವೇಗ, ಆತಂಕ, ಮನಸಿನ ಭಾರ ಕಳೆಯಲು, ಹಿಂದಿನ ಕಾಲದಿಂದ ಸಂಗೀತವೇ ಉತ್ತಮ ಔಷಧ, ಸಂಗೀತ ಥೆರಪಿ ಬಗ್ಗೆ ಕೇಳಿದ್ದೀರಾ? ಒಳ್ಳೆಯ ಸುಮಧುರ, ನಿಧಾನಗತಿಯ, ಸಮಾಧಾನಕಾರಿ ಹಿತಕಾರಿ ಸಂಗೀತ ನಮ್ಮ ಜಾಗೃತ, ಸುಪ್ತ ಹಾಗೂ ಸುಶೂಪ್ತಿ ಹಂತದ ಮನಸ್ಸಿಗೆ ಶಾಂತಿ ಕೊಡುತ್ತದೆ. 1975ರಲ್ಲಿ ಸಂಗೀತಗಾರ ಯಹೂದಿ ಮೆನುಹಿನ್ ಅವರಿಂದ ಪ್ರತೀವರ್ಷ ಅಕ್ಟೋಬರ್ ಮೊದಲ ದಿನ ಆರಂಭವಾದ ಅಂತರ್ ರಾಷ್ಟ್ರೀಯ ಸಂಗೀತ ದಿನಾಚರಣೆಯ ಗುರಿ, ಯುನೆಸ್ಕೋದ ಗುರಿಗಳಾದ ಮಾನವತಾ ಶಾಂತಿ, ಗೆಳೆತನ, ಸಂಸ್ಕೃತಿ ಅನುಭವಗಳ ವಿನಿಮಯ ಮಾಡಿಕೊಳ್ಳುವುದು, ಇವುಗಳ ಸಾಧನೆಯಾಗಿದೆ. ಫ್ರಾನ್ಸ್ನಲ್ಲಿ ಈ ಸಂದರ್ಭ ನಡೆಯುವ ಫೆಟೆ ಡಿ ಲಾ ಮೂಸಿಗ್ ಉತ್ಸವದ ಉದ್ದೇಶ, ವೃತ್ತಿಪರ ಹಾಗೂ ಹವ್ಯಾಸಿ ಸಂಗೀತಗಾರರನ್ನು ಪ್ರೋತ್ಸಾಹಿಸಿ, ರಸ್ತೆಗಳಲ್ಲಿ ಜನರಿಗೆ ಎಲ್ಲಿ ರೀತಿಯ ಸಂಗೀತದ ರುಚಿ ತೋರಿಸುವುದೇ ಆಗಿದೆ.
ಇನ್ನೊಂದು ದಿಕ್ಕಿನಿಂದ ನೋಡಿದಾಗ ಈ ವಿಶ್ವದಲ್ಲಿ ಮನುಷ್ಯನೊಂದಿಗೆ ಪ್ರಾಣಿಗಳು, ಪಕ್ಷಿಗಳು ಸಸ್ಯಗಳೂ ಇವೆ. ಆದರೆ ಮನುಷ್ಯ ಮೊದಲು ತಾನೇ ಈ ವಿಶ್ವದ ಒಡೆಯ ಎಂದು, ಸತತ ಮರಗಳ ಹನನ ಮಾಡಿ,ಅರಣ್ಯಗಳ ನಾಶ ಮಾಡಿ, ವನ್ಯಪ್ರಾಣಿಗಳ ಬೇಟೆಯಾಡಿ, ಸಾಕುಪ್ರಾಣಿಗಳ ಶೋಷಣೆ ಮಾಡಿದ. ಉಚಿತ ಹಾಗೂ ಸಮೃದ್ಧಿ ಎಂದು ತಿಳಿದು, ನೀರಿನ ದುರ್ಬಳಕೆ ಮಾಡಿದ. ಇತ್ತೀಚೆಗೆ ಪರಿಸರ, ಸಮತೋಲನ ಹಾಗೂ ವಾತಾವರಣ ರಕ್ಷಣೆಗಳು ಮಹತ್ವದ ಆಯಾಮ ಪಡೆದಿವೆ. ಈ ಹಿನ್ನೆಲೆಯಲ್ಲಿ ಎರಡು ಚಟುವಟಿಕೆಗಳು ನನ್ನ ಗಮನ ಸೆಳೆದಿವೆ. ಒಂದು ವಿಶ್ವ ಪ್ರಾಣಿ ದಿನಾಚರಣೆ, ಪ್ರಾಣಿಗಳ ಹಕ್ಕುಗಳು ಹಾಗೂ ಕಲ್ಯಾಣಕ್ಕಾಗಿ ಅಕ್ಟೋಬರ್ 4 ರಂದು ಆಚರಿಸುವ ಉತ್ಸವ. ಪ್ರಾಣಿಗಳ ಪ್ರಿಯವಾಗಿದ್ದ ಅಸ್ಸಿಸಿಯ ಸಂತ ಫ್ರಾನ್ಸಿಸ್ ಅವರ ಪುಣ್ಯಸ್ಮರಣೆಯ ದಿನ. ಇದು ಈತ ಹೇಳುತ್ತಿದ್ದಂತೆ ಪ್ರತಿಯೊಂದು ಪುಟ್ಟ ಹುಳವನ್ನೂ ದೇವರ ಸೃಷ್ಟಿ ಎಂದು ನಂಬಿ, ಅವುಗಳನ್ನು ಗೌರವಿಸಿ ರಕ್ಷಿಸಬೇಕು. ಅವುಗಳನ್ನು ಕರುಣೆಯಿಂದ ಪೋಷಿಸಬೇಕು. ಎರಡನೇಯದಾಗಿ ಅಕ್ಟೋಬರ್ ಮೊದಲ ವಾರದಲ್ಲಿ ಆಚರಿಸುವ ವನ್ಯಜೀವಿ ಸಪ್ತಾಹ. ನಮ್ಮ ದೇಶದಲ್ಲಿ 1952ರಿಂದ ಆರಂಭವಾದ ಈ ಉತ್ಸವದ, ಈ ವರ್ಷದ ಧೈಯವಾಕ್ಯ, ಸಂಖ್ಯೆ ಮುಖ್ಯ ವನ್ಯಜೀವಿಗಳಿಗಾಗಿ ಒಟ್ಟಾಗಿ ದುಡಿಯೋಣ. ಈ ಸಪ್ತಾಹದ ಉದ್ದೇಶ ವನ್ಯಜೀವಿಗಳ ಬಗೆಗೆ ಸಾರ್ವಜನಿಕರಲ್ಲಿ ಅರಿವು, ಕಾಳಜಿ, ರಕ್ಷಣೆ ಮೂಡಿಸುವುದು, ವನ್ಯಜೀವಿಗಳ ಬಗೆಗೆ ಜನರ ಗಮನ ಸೆಳೆದು, ಭಾರತೀಯ ಪ್ರಾಣಿಗಳ ಜೀವರಕ್ಷಣೆ ಮಾಡುವುದು, ಭಾರತದ ಅಪರೂಪದ ಪ್ರಾಣಿಗಳ ಸಂತತಿ ರಕ್ಷಿಸುವುದು, ಈ ದೇಶದಲ್ಲಿ ಅಳಿವಿನ ಅಂಚಿಗೆ ಬರುತ್ತಿರುವ ವನ್ಯಜೀವಿಗಳ ಸಂತತಿಯನ್ನು ಕಾಪಾಡುವುದು. ಈ ಎಲ್ಲ ವಿಶೇಷ ದರ್ಶನ ಇಲ್ಲಿದೆ. ಪ್ರಕೃತಿಯ ಸಮತೋಲನದಲ್ಲಿ, ಮಾನವ, ಪ್ರಾಣಿ, ಪಕ್ಷಿ ಹಾಗೂ ಮರಗಳ ನಡುವೆ ಒಂದು ಅವಿಭಾಜ್ಯ ಕೊಂಡಿ ಇದೆ. ಈ ಜೀವಸರಪಳಿ ಅಲಕ್ಷಿಸಿದರೆ, ವೈಪರೀತ್ಯಗಳ ಸಂಭವ ಅನಿವಾರ್ಯವಾಗುತ್ತದೆ.

ಎನ್.ವ್ಹಿ. ರಮೇಶ್ ,ಮೈಸೂರು.

