ಪರಾಗ

ನೀಳ್ಗತೆ : ವಿಚ್ಛೇದನ – ಭಾಗ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಅಶ್ವಿನಿ ಬೆಳಿಗ್ಗೆ ತಿಂಡಿ ಮಾಡಿಟ್ಟು ಹೊರಗೆ ಬಂದಾಗ ಶಾಲಿನಿ ದೇವರ ಮನೆ ಶುಚಿ ಮಾಡಿ, ದೀಪಗಳಿಗೆ ಎಣ್ಣೆ ಬತ್ತಿ ಹಾಕಿ ತೋಟದಿಂದ ಹೂವು ಕಿತ್ತುಕೊಂಡು ಬಂದಿಟ್ಟು ತಂದೆಯನ್ನು ಕೂಗಿದಳು. “ಅಪ್ಪ ದೇವರ ಮನೆ ಕ್ಲೀನ್ ಮಾಡಿದ್ದೀನಿ. ಬನ್ನಿ.”
ಬಾಲಚಂದ್ರ ಬಂದು ಪೂಜೆ ಮಾಡಿ ತಂಗಿಗೆ, ಸಂಜೂಗೆ, ಮಗಳಿಗೆ ಮಂಗಳಾರತಿ, ತೀರ್ಥಕೊಟ್ಟರು.

ಶಾಲಿನಿ ಹೋಗಿ ನಾಲ್ಕು ತಟ್ಟೆಗಳಿಗೆ ತಿಂಡಿ ಹಾಕಿ ತಂದಳು.
“ಅಮ್ಮನ ತಿಂಡಿ ಆಯ್ತಾ?”
“ಅತ್ತಿಗೆ ರಾಡ್ರಿಗಸ್ ಬಂದು ಹೋದಮೇಲೆ ತಿಂಡಿ ತಿನ್ನುತ್ತಾರೆ. ಹಾರ್ಲಿಕ್ಸ್ ಕುಡಿದಿದ್ದಾರೆ.”
“ಅಶ್ವಿನಿ ಫಿಸಿಯೋ ಥೆರಪಿಸ್ಟ್ ನ ಗೊತ್ತು ಮಾಡಿದ್ದೀಯ. ದಿನಕ್ಕೆ 500 ರೂಪಾಯಿ. ಶಾಲಿನೀನ್ನ ಬಿ.ಎಡ್‌ಗೆ ಸೇರಿಸ್ತಿದ್ದೀಯ. ಇದಕ್ಕೆಲ್ಲಾ ಅಭಯ್ ಒಪ್ತಾರಾ?”
“ಅವರು ನಾನು ಏನು ಮಾಡಿದರೂ ಏನೂ ಹೇಳಲ್ಲ ಅಣ್ಣ.”
“ತುಂಬಾ ಪುಣ್ಯ ಮಾಡಿದ್ದೆ ನೀನು. ಅಭಯ್‌ನಂತಹ ಗಂಡ ಸಿಗಲು.”
“ನರ್ಸ್ ಒಳ್ಳೆಯವರು. ಅವರ ಸ್ಪಂಜ್‌ಬಾತ್ ಕೊಟ್ಟು ಮೈಗೆಲ್ಲಾ ಪೌಡರ್ ಹಾಕಿ, ಮಲಗಿಸ್ತಾರೆ. ಕೆಂಪಮ್ಮಂಗೆ ಬಟ್ಟೆ ಬದಲಾಯಿಸೋದು ಹೇಳಿಕೊಟ್ಟಿದ್ದಾರೆ. ತಾವೇ ಎರಡು ನೈಟಿ ತಂದಿದ್ದಾರೆ. ಅತ್ತಿಗೇನೂ ಗೆಲುವಾಗಿದ್ದಾರೆ.”
“ನನಗೂ ಹಾಗೆ ಅನ್ನಿಸ್ತು.”
“ನೆನ್ನೆ ವಾಕರ್ ಹಿಡಿದುಕೊಂಡು ರೂಮ್‌ನಲ್ಲೇ ನಡೆದರು. ಅತ್ತಿಗೆ ಖಂಡಿತಾ ಚೇತರಿಸಿಕೊಳ್ತಾರೆ.”

ರಾಡ್ರಿಗಸ್ ಬಂದರು. ಸಂಜೂ, ಶಾಲಿನಿ ಅಲ್ಲೇ ಮಾತನಾಡುತ್ತಾ ಕುಳಿತರು. ಅಶ್ವಿನಿ ಅಡಿಗೆ ಮನೆಗೆ ಹೋಗಿ ಅಡಿಗೆ ಶುರುಮಾಡಿದಳು.
ಗಂಟೆ ಹತ್ತಾಯಿತು. ಶಾಲಿನಿ ಹಾರ್ಲಿಕ್ಸ್ ಮಾಡಿ ರಾಡ್ರಿಗಸ್‌ಗೆ ಕೊಟ್ಟು, ತಾಯಿಗೆ ತಿಂಡಿ ತೆಗೆದುಕೊಂಡು ಹೋದಳು.
ಹತ್ತೂವರೆಯ ಹೊತ್ತಿಗೆ ಸಂಜೂ ಒಳಗೆ ಬಂದು ಹೇಳಿದ.
“ಅಮ್ಮಾ ಅಪ್ಪ ಬಂದರು.”
“ಹಾಲ್‌ನಲ್ಲಿ ಕೂಡಿಸು.. ಕಾಫಿ ಬೆರೆಸ್ತೇನೆ. ಹಾಗೆ ಅಣ್ಣನಿಗೆ ವಿಷಯ ಹೇಳು.”
ಸಂಜಯ್ ತಂದೆಯನ್ನು ಸ್ವಾಗತಿಸಿ ಹಾಲ್‌ನಲ್ಲಿ ಕೂಡಿಸಿದ.
“ಸಂಜೂ ಹೇಗಿದ್ದೀಯಾ?”
“ಅಯಾಮ್ ಫೈನ್. ನೀವು ಹೇಗಿದ್ದೀರಾ?”
ಅವನು ಮಾತಾಡಲಿಲ್ಲ. ಅಷ್ಟರಲ್ಲಿ ಅಶ್ವಿನಿ ಕಾಫಿ ತಂದುಕೊಟ್ಟಳು.
“ಹೇಗಿದ್ದೀಯ?”

ಅವಳು ನಕ್ಕಳು. ಮುಖ ಪ್ರಶಾಂತವಾಗಿತ್ತು. ನೀಲಿ ಕಾಟನ್ ಸೀರೆಯನ್ನು ನೀಟಾಗಿ ಉಟ್ಟಿದ್ದಳು. ತನ್ನ ಕೂದಲನ್ನು ಸೇರಿಸಿ ಗಂಟು ಹಾಕಿ, ಒಂದು ಚೂರು ಹೂವು ಮುಡಿದಿದ್ದಳು. ಮೇಕಪ್‌ಯಿಲ್ಲದ ಮುಖದಲ್ಲಿ ಬಿಂದಿ ಮಿನುಗುತ್ತಿತ್ತು. ಅಷ್ಟರಲ್ಲಿ ಅಶ್ವಿನಿಯ ಅಣ್ಣ ಬಂದರು. ಅಶ್ವಿನಿ ಒಳಗೆ ಹೋಗಿ ಅಡಿಗೆ ಪೂರ್ತಿಮಾಡಿದಳು.
ಅವಳು ಅನ್ನ, ಹುಳಿ, ತಿಳಿಸಾರು, ಮೊಸರುಬಜ್ಜಿ ಮಾಡಿ, ಹುರುಳಿ ಹಪ್ಪಳ ಸುಟ್ಟು ಒಂದು ಕಡೆ ಇಟ್ಟಳು.
“ಬೇಡಾಂತ ಹೇಳಿದರೂ ಕೇಳದೆ ಅಶ್ವಿನಿ ಫಿಸಿಯೋಥೆರಪಿಸ್ಟ್ ನ ಗೊತ್ತು ಮಾಡಿದ್ದಾಳೆ. ಶಾಲಿನೀನ್ನ ಬಿ.ಎಡ್‌ಗೆ ಸೇರಿಸ್ತಿದ್ದಾಳೆ. ನಿಮ್ಮ ಸಹಕಾರವಿಲ್ಲದೆ ಅವಳು ಇದೆಲ್ಲಾ ಮಾಡಲು ಸಾಧ್ಯವಿಲ್ಲ. ನೀವು ನಮ್ಮ ಪಾಲಿನ ದೇವರು.”
ಅಭಯ್‌ಗೆ ಒಂದು ತರಹವಾಯಿತು.
“ಹಾಗೆಲ್ಲಾ ಹೇಳಬೇಡಿ. ಈಗ ನಿಮ್ಮ ಮಿಸೆಸ್ ಹೇಗಿದ್ದಾರೆ?”
“ಬನ್ನಿ ನೀವೇ ನೋಡಿ.”
ಅವನು ಒಳಗೆ ಹೋಗಿ ಮಾತನಾಡಿಸಿದ. ಆಕೆ ಗೆಲುವಾಗಿದ್ದರು. ರೂಮು ಕೂಡ ಸ್ವಚ್ಛವಾಗಿತ್ತು.”
“ಹೇಗಿದ್ದೀರಾ?”
“ಚೆನ್ನಾಗಿದ್ದೀನಪ್ಪ. ನೀವು ದಂಪತಿಗಳು ನನಗೆ ಪುನರ್ಜನ್ಮ ಕೊಟ್ಟುಬಿಟ್ರಿ. ಅಶ್ವಿನಿ ತುಂಬಾ ಚೆನ್ನಾಗಿ ನೋಡಿಕೊಳ್ತಿದ್ದಾಳೆ. ಅವಳಿಲ್ಲಿದ್ದರೆ ನಾನು ಬೇಗ ಚೇತರಿಸಿಕೊಳ್ತೀನಿ.”
ಅಭಯ್ ಮಾತನಾಡದೆ ಹೊರಗೆ ಬಂದ.

ಅಶ್ವಿನಿ ಕಾಣೀಸಿದಳು.
“ಅಶ್ವಿನಿ, ನಾನು ಇಲ್ಲಿಗೆ ಬರುವಾಗ ಏನೂ ತರದೆ ಬಂದುಬಿಟ್ಟೆ. ನನ್ನ ಜೊತೆ ಬರ‍್ತೀಯಾ? ಹಣ್ಣು-ಹಾರ್ಲಿಕ್ಸ್ ತರೋಣ…”
“ನನಗೆ ಕೆಲಸವಿದೆ. ಸಂಜೂ, ಶಾಲಿನಿ ರ‍್ತಾರೆ. ಹೋಗಿ ಬನ್ನಿ.”
“ನಾನು ನಿನ್ನ ಜೊತೆ ಮಾತನಾಡಬೇಕು” ಅವನು ಪಿಸುಗುಟ್ಟಿದ.
“ಊಟವಾದ ನಂತರ ನಮ್ಮ ಮನೆಯಲ್ಲಿ ಮಾತಾಡೋಣ.”
“ನಮ್ಮನೇಂದ್ರೆ?”
“ಪಕ್ಕದ ಮನೆ…….”

ಅವನು ಮರುಮಾತನಾಡದೆ ಸಂಜೂ, ಶಾಲಿನಿ ಜೊತೆ ಹೊರಟ. ಅವರು ವಾಪಸ್ಸು ಬಂದಾಗ ಒಂದು ಗಂಟೆಯಾಗಿತ್ತು.
ಕಿತ್ತಳೆ, ಬಾಳೆ, ಸೇಬು, ಡ್ರೈಫ್ರೂಟ್ಸ್, ಒಂದು ದೊಡ್ಡ ಬಾಟಲ್ ಹಾರ್ಲಿಕ್ಸ್ ತಂದಿದ್ದ ಅಭಯ್.
“ಅತ್ತೆ ನಾನು, ಸಂಜೂ ಐಸ್‌ಕ್ರೀಂ ತಿಂದೆವು. ಮಾವ ಸಂಜು ಚಿಕ್ಕವನಿದ್ದಾಗ ಐಸ್‌ಕ್ರೀಂಗೆ ಹಠ ಮಾಡ್ತಿದ್ದ ಕಥೆ ಹೇಳಿದರು. ಅಷ್ಟರಲ್ಲಿ ಬಾಲಚಂದ್ರ ಶುಭ್ರವಾಗಿದ್ದ ಟವಲು, ಪಂಚೆ ತಂದುಕೊಟ್ಟ.
ಕೈ, ಕಾಲು ತೊಳೆಯಿರಿ. ಊಟ ಮಾಡೋಣ.
ಸಂಜು ತಂದೆಯನ್ನು ಪಕ್ಕದ ಮನೆಗೆ ಕರೆದೊಯ್ದ. ಮನೆ ಚೆನ್ನಾಗಿತ್ತು.
“ಊರಿಗೆ ಯಾವಾಗ ಬರ‍್ತೀರಿ ಸಂಜು?”
“ಅಮ್ಮ ಬಹುಶಃ ಬರಲ್ಲ. ನಾನು ಬಂದರೂ ಫ್ರೆಂಡ್ಸ್ ಜೊತೆ ಬರ‍್ತೀನಿ.”

ಅಭಯ್ ಮಾತನಾಡದೆ ಊಟಕ್ಕೆ ಬಂದು ಕುಳಿತ. ಅಂತಹ ಊಟ ಮಾಡಿ ಬಹಳ ದಿನಗಳಾಗಿದ್ದವು. ಊಟ ಮಾಡಿದ ಕೂಡಲೆ ಶಾಲಿನಿ ಬಣ್ಣಕಟ್ಟಿದ್ದ ಅಡಿಕೆ ತಂದು ಕೈಗೆ ಹಾಕಿದಳು.
“ಸಂಜೂ ನಾನು ಊಟ ಮಾಡಿ ಬರ‍್ತೀನಿ. ನೀನು ಅಪ್ಪನ್ನ ಕರೆದುಕೊಂಡು ಹೋಗು.”
ಅಭಯ್ ಹಾಲ್‌ನಲ್ಲಿದ್ದ ಮಂಚದ ಮೇಲೆ ಉರುಳಿಕೊಂಡ. ಪಕ್ಕದಮನೆಗೂ, ಬಾಲಚಂದ್ರನ ಮನೆಗೂ ನಡುವೆ ಹಾಲ್‌ನಲ್ಲಿ ಒಂದು ಬಾಗಿಲಿತ್ತು. ಅಶ್ವಿನಿ ಒಳಗೆ ಬಂದು ಬಾಗಿಲು ಹಾಕಿ, ಕುರ್ಚಿ ಎಳೆದುಕೊಂಡು ಕುಳಿತಳು. ಅಭಯ್ ಎದ್ದು ಕುಳಿತು ಕೇಳಿದ.

“ಅಶ್ವಿನಿ ಯಾಕೆ ಹೀಗೆ ಮಾಡಿದೆ?”
“ನಿಮ್ಮ ಫ್ರೆಂಡ್ ಎಲ್ಲಾ ಹೇಳಿರಬೇಕಲ್ವಾ? ನಾನು ಮಾಡ್ತಿರುವ ಕೆಲಸ ಮಾಡಲು ನಿಮಗೆ ಕೆಲಸದವರು ಸಿಗ್ತಾರಲ್ವಾ?”
“ಅಶ್ವಿನಿ.”
“ನಿಮಗೆ ದುಡ್ಡಿಗೆ ಕೊರತೆಯಿಲ್ಲ. ನನ್ನ ಅವಶ್ಯಕತೆಯೂ ನಿಮಗಿಲ್ಲ. ಆದ್ದರಿಂದ ನಾನು ಈ ನಿರ್ಧಾರ ತೆಗೆದುಕೊಂಡೆ. ನನಗೂ ನನ್ನ ಅಸ್ತಿತ್ವ ಉಳಿಸಿಕೊಳ್ಳಬೇಕು ಅನ್ನಿಸಿತು.”
“ನೀನೂ, ಮಕ್ಕಳೂ ದೂರವಾದರೆ ನಾನು ಹೇಗಿರಲಿ? ನೀನು ವಾಪಸ್ಸು ಬಾ. ನಾನು ನನ್ನ ತಪ್ಪು ಒಪ್ಪಿಕೊಂಡು ಬದಲಾಗ್ತೇನೆ.”
“ನನಗೆ ನಂಬಿಕೆಯಿಲ್ಲ.”
“ನಾನು ಹೇಗೆ ಬದಲಾಗಬೇಕು ಹೇಳು.”
“ನೀವು ಹಣಕ್ಕೆ ಬೆಲೆ ಕೊಡುವುದನ್ನು ನಿಲ್ಲಿಸಿ. ಹಣದಿಂದ ಎಲ್ಲಾ ಕೊಳ್ಳಬಹುದೂಂತ ತಿಳಿದಿದ್ದೀರ. ಅದು ತಪ್ಪು ನನ್ನ ಭಾವನೆಗಳಿಗೂ, ನಿಮ್ಮ ಭಾವನೆಗಳಿಗೂ ಹೊಂದಾಣಿಕೆ ಇಲ್ಲ. ನನಗೆ ಸಂಸಾರ, ಮಕ್ಕಳು, ಗಂಡನ ಯೋಗಕ್ಷೇಮ ಮುಖ್ಯ. ನಿಮಗೆ ಆಡಂಬರ, ಸ್ಟೇಟಸ್, ಹಣ ಮುಖ್ಯ. ಹಣದ ಕಾರಣದಿಂದ ಮಕ್ಕಳನ್ನೂ ದೂರಮಾಡಿಕೊಂಡ್ರಿ.”
“ನಾನು ಇಷ್ಟೆಲ್ಲಾ ಸಂಪಾದಿಸ್ತಿರೋದು ಯಾರಿಗೋಸ್ಕರ ಅಶ್ವಿನಿ? ನಿಮಗೋಸ್ಕರ ಅಲ್ವಾ?”
“ನಮಗೆ ಬೇಕಾಗಿರೋದು ನಿಮ್ಮ ಪ್ರೀತಿ, ವಿಶ್ವಾಸ. ನಿಮ್ಮ ಹಣ ಅಲ್ಲ. ಗಂಜಿ ಕುಡಿದರೂ ಸಂತೋಷ ಇರಬೇಕು. ನಾನು ದಡ್ಡಿ, ಚೆನ್ನಾಗಿಲ್ಲ. ಮಾರ್ಡನ್ ಆಗಿಲ್ಲ. ಆದರೆ ಮಕ್ಕಳನ್ನು ನಿಮ್ಮ ರೀತಿ ಬೆಳೆಸಬಹುದಿತ್ತಲ್ವಾ? ಅವರ‍್ಯಾಕೆ ನಿಮ್ಮನ್ನು ಕಂಡರೆ ಹೆದರ‍್ತಾರೆ?”
ನನಗೆ ಒಂದು ಅವಕಾಶಕೊಡು. ದಯವಿಟ್ಟು ನೀನು ಸಂಜೂನ್ನ ನನ್ನ ಜೊತೆ ಕಳುಹಿಸು.”
“ಅವನು ಬಂದರೆ ಕರೆದುಕೊಂಡು ಹೋಗಿ ಯಾರು ಬೇಡಾಂತಾರೆ?”
ಸಾಯಂಕಾಲ ಕಾಫಿ ಕುಡಿದು ಅಭಯ್ ಮಗನ ಜೊತೆ ಹೊರಟ.
ದಿನಗಳು ಉರುಳಿದವು.


ಆಸ್ಪತ್ರೆಯಿಂದ ಬಂದು ಕೈ, ಕಾಲು ತೊಳೆದು ಅಭಯ್ ಕೂಗಿದ. “ಅಶ್ವಿನಿ ಕಾಫಿಕೊಡು. ಹಾಗೇ ಏನಾದರೂ ತಿಂಡಿ…. ಅಶ್ವಿನಿ ನಗುತ್ತಾ ಕಾಫಿ ಜೊತೆಯಲ್ಲಿ ಪಕೋಡ ತಂದಳು.
“ಸಂಜೂ ಎಲ್ಲಿ?”
“ಅವನಿಗೆ ನಾಡಿದ್ದು ಒಂದು ಪೇಪರ್ ಇದೆ. ಅದಕ್ಕೆ ಓದಿಕೊಳ್ಳಕ್ಕೆ ಫ್ರೆಂಡ್ ಮನೆಗೆ ಹೋಗಿದ್ದಾನೆ.”
“ಮತ್ತೇನು ವಿಶೇಷ?”
“ಅಣ್ಣ ಫೋನ್ ಮಾಡಿದ್ರು. ಶಾಲಿನಿಯದು ಪರೀಕ್ಷೆ ಮುಗಿಯಿತಂತೆ. ಅತ್ತಿಗೆ ಈಗ ಅವರೇ ಅಡಿಗೆ ಮಾಡ್ತಿದ್ದಾರಂತೆ.”
“ಶಾಲಿನಿಯದು ಬಿ.ಇಡಿ. ಮುಗೀತಾ?”
“ಪರೀಕ್ಷೆ ಮುಗಿದಿದೆ. ರಿಸಲ್ಟ್ ಬರಬೇಕು.”
“ಆ ಹುಡುಗಿ ಮದುವೆಗೆ ನಾವು ಸಹಾಯ ಮಾಡಬೇಕು.”
“ಮೊದಲು ಅವಳು ತನ್ನ ಕಾಲಮೇಲೆ ನಿಲ್ಲಲಿ.”

“ಈ ಶನಿವಾರ ಸಾಯಂಕಾಲದ ಫ್ಲೈಟ್‌ಗೆ ನಾನು, ನೀನು, ಸಂಜು ಬಾಂಬೆಗೆ ಹೋಗ್ತಿದ್ದೇವೆ. ಸಂತೋಷ್ ಬೇರೆ ಮನೆಗೆ ಶಿಫ್ಟ್ ಆಗಿದ್ದಾನಂತೆ.”
“ವೆರಿಗುಡ್. ನಾವು ಅವನ ಮನೆಯಲ್ಲೇ ಇರಬಹುದು. ಹಾಗೇ ಅವನು ಮೆಚ್ಚಿರುವ ನಂದಾನ ಮನೆಯವರನ್ನು ಭೇಟಿ ಮಾಡಿ ಮದುವೆ ಫಿಕ್ಸ್ ಮಾಡಿಬಿಡೋಣ.”
“ಬಹುಶಃ ಮದುವೆ ಬಾಂಬೆಯಲ್ಲಿ ಆಗಬಹುದು.”
“ನಾವು ಬೆಂಗಳೂರಿನಲ್ಲಿ ರಿಸೆಪ್ಷನ್ ಕೊಡೋಣ.”
“ಇರು. ಸಂಜೂಗೆ ಫೋನ್ ಮಾಡಿ ಬಾಂಬೆಗೆ ಹೋಗುವ ವಿಚಾರ ಹೇಳ್ತೀನಿ.”
“ಟಿಕೆಟ್ಸ್ ಬುಕ್ ಮಾಡಿಲ್ವಾ?”
“ಬುಕ್ ಮಾಡಿ 15 ದಿನ ಆಯ್ತು. ಸಂಜೂ ಬೇರೆ ಪ್ರೋಗ್ರಾಂ ಹಾಕಿಕೊಂಡಿದ್ದರೆ ಕಷ್ಟ.”
ಅಶ್ವಿನಿ ನಕ್ಕಳು. ಅಭಯ್ ಬದಲಾಗಿದ್ದ. ಮುಖ್ಯವಾಗಿ ಪ್ರಾಕ್ಟೀಸ್ ಮಾಡುವುದನ್ನು ನಿಲ್ಲಿಸಿ, ಆಸ್ಪತ್ರೆಯಿಂದ ಬಂದಮೇಲೆ ಮನೆಯಲ್ಲೇ ಇರುತ್ತಿದ್ದ. ಇಬ್ಬರೂ ಒಟ್ಟಿಗೆ ದೇವಸ್ಥಾನಕ್ಕೋ, ಸಿನಿಮಾಗೋ, ಶಾಪಿಂಗ್ ಮಾಡಲೋ ಹೋಗುತ್ತಿದ್ದರು. ದೂರ ಸಿಡಿದಿದ್ದ ಮನಸ್ಸುಗಳು ಹತ್ತಿರವಾಗಿದ್ದವು.
“ಅಶ್ವಿನಿ….”
“ಏನು?”
“ನನಗೆ ಬದುಕಿನ ಅರ್ಥ ಮಾಡಿಸಿದೆ. ಈಗ ನಾನು ಎಷ್ಟು ನೆಮ್ಮದಿಯಿಂದ ಇದ್ದೀನೀಂತ ಹೇಳಕ್ಕಾಗಲ್ಲ.”
ಅವನು ಅವಳನ್ನು ಎಡಗೈನಲ್ಲಿ ಬಳಸಿ ಹೇಳಿದ. ಅವಳು ನಗುತ್ತಾ ಅವನ ಭುಜಕ್ಕೆ ಒರಗಿದಳು.

(ಮುಗಿಯಿತು)
ಈ ಕತೆಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=45490

ಸಿ.ಎನ್. ಮುಕ್ತಾ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *