ನಂಗಡ ಕುಂದ್ ಪತ್ತುವದ್ ದುಂಬಾ ಚಾಯಿ…

Share Button

Kunda betta- 09022015

 

“ಬ್ರೋಚೆವಾರೆವರುರಾ  ನಿನು ವಿನಾ ರಘುವರಾ ಬ್ರೋಚೆವಾರೆವರುರಾ…”          “ಎಂದುರೋ ಮಹಾನುಭಾವುಲು ಅಂದರಿಕಿ ವಂದನಮುಲು…”        “ನನುಮೊಮು ಗನಲೇನಿ ನಾಜಾಲಿ ತೆಲಿಸಿ…”

ಹೀಗೆ ಒಂದರ ನಂತರ ಇನ್ನೊಂದು ಸುಶ್ರಾವ್ಯವಾದ ಕರ್ನಾಟಕ ಶಾಸ್ತ್ರೀಯ  ಸಂಗೀತದ ಅನರ್ಘ್ಯ ಕೀರ್ತನೆಗಳನ್ನು,  ಹಾಸನದಿಂದ ಬಂದಿದ್ದ ಕಾರ್ತಿಕ್ ಅವರು, ಬಸ್ಸಿನಲ್ಲಿ  ಹಾಡುತ್ತಿದ್ದಾಗ ಚಾರಣಿಗರೆಲ್ಲರೂ ನಿಶ್ಶಬ್ದವಾಗಿ ಆಲಿಸುತ್ತಿದ್ದರು.ಕಾರ್ತಿಕ್ ಅವರ ಬಹುಮುಖ ಪ್ರತಿಭೆಯ ಅನಾವರಣವೂ ಆಯಿತು.  ಅಂತ್ಯಾಕ್ಷರಿಯೂ ಆರಂಭವಾಯಿತು. 

ಇದೆಲ್ಲಾ ನಡೆದದ್ದು 09 ಫೆಬ್ರವರಿಯಂದು.  24  ಜನರಿದ್ದ ನಾಮ್ಮ ತಂಡವು, ಕಾರ್ಯಕ್ರಮದ ಆಯೋಜಕರಾದ ಶ್ರೀ ರಾಮಪ್ರಸಾದ್ ಮತ್ತು ಶ್ರೀ ಸೂರ್ಯನಾರಾಯಣ ಅವರ ನೇತೃತ್ವದಲ್ಲಿ ಮೈಸೂರಿನಿಂದ ಮಡಿಕೇರಿ ಜಿಲ್ಲೆಯ ಕುಂದಬೆಟ್ಟ ಮತ್ತು ಇರ್ಪು ಫ಼ಾಲ್ಸ್ ಗೆ ಚಾರಣಕ್ಕೆಂದು ಹೊರಟಿದ್ದೆವು.  ಮಾರ್ಗ  ಮಧ್ಯೆ ಹುಣಸೂರಿನ ಪಕ್ಕದ ಶಾಲಾವಠಾರದಲ್ಲಿ ಬೆಳಗ್ಗಿನ ಉಪಾಹಾರವಾಗಿ ಇಡ್ಲಿ-ವಡೆ-ಕೇಸರಿಭಾತ್ ಸೇವಿಸಿ ಪ್ರಯಾಣ ಮುಂದುವರಿಸಿದೆವು. ವೀರಾಜಪೇಟೆ ಮಾರ್ಗವಾಗಿ ಕುಂದ ಬೆಟ್ಟ ತಲಪುವಷ್ಟರಲ್ಲಿ 10 ಗಂಟೆ ಆಗಿತ್ತು. ಕಾಫಿತೋಟದ ಮಡುವೆ ಸ್ವಲ್ಪ ನಡೆದು, ಕೆಲವು ಮೆಟ್ಟಿಲುಗಳನ್ನೇರಿ, ಸ್ವಲ್ಪ ಕಡಿದಾದ ಜಾರುತ್ತಿದ್ದ ಕಾಲುದಾರಿಯಲ್ಲಿ ಏರಿದಾಗ ಬೆಟ್ಟದ ತುದಿ ತಲಪಿಯೇ ಬಿಟ್ಟೆವು.

ಬೆಟ್ಟದ ತುದಿಯಲ್ಲಿ ಒಂದು ಸಣ್ಣ ಗುಡಿಯಿದೆ. ಸುತ್ತಲೂ ಕಾಣಿಸುವ ಪ್ರಕೃತಿ ದೃಶ್ಯ ಸುಮನೋಹರವಾಗಿತ್ತು. ಬಿಸಿಲಿದ್ದರೂ, ಬೀಸುತ್ತಿದ್ದ ತಂಗಾಳಿ ಅಹ್ಲಾದಕರವಾಗಿತ್ತು. ಅಲ್ಲಿ ಕೆಲವು ಚಿತ್ರಗಳನ್ನು ತೆಗೆದು ಕೆಳಗಿಳಿಯಲಾರಂಭಿಸಿದೆವು. 12;30 ಗಂಟೆಗೆ ಎಲ್ಲರೂ ಕೆಳಗಿಳಿದು ಕಾಫಿ ತೋಟದ ಪಕ್ಕದಲ್ಲಿ ವನಭೋಜನ  ಮಾಡಿದೆವು. ಬಿಸಿಬೇಳೆಭಾತ್, ಮೊಸರನ್ನ, ಸ್ವೀಟ್ ಮತ್ತು ಬಾಳೆಹಣ್ಣುಗಳನ್ನೊಳಗೊಂಡ ರುಚಿಯಾಗಿದ್ದ ಊಟವನ್ನು  ಉಂಡೆವು.

Kunda betta-Irpu falls-09022015

 

 

ಊಟದ ನಂತರ ನಮ್ಮ ಪಯಣ ಇರ್ಪು ಜಲಪಾತದೆಡೆಗೆ ಮುಂದುವರಿಯಿತು. ಸುಮಾರು  ಅರ್ಧ ಗಂಟೆ  ಪ್ರಯಾಣಿಸಿ  ‘ಕುರ್ಚಿ ಗ್ರಾಮ’ ತಲಪಿದೆವು. ಇಲ್ಲಿ  ಸುಂದರವಾದ  ರಾಮೇಶ್ವರ ದೇವಾಲಯವಿದೆ. ಇಲ್ಲಿಂದ ಸ್ವಲ್ಪ ಕಾಲುದಾರಿಯಲ್ಲಿ ನಡೆದು, 200-250 ಮೆಟ್ಟಿಲುಗಳನ್ನು ಇಳಿದರೆ  ಇರ್ಪು ಜಲಪಾತ ಸಿಗುತ್ತದೆ.  ಮಳೆಗಾಲದ ಅಬ್ಬರವಿಲ್ಲದಿದ್ದುದರಿಂದ ಜಲಪಾತಕ್ಕೆ ತಲೆಯೊಡ್ಡಿ ಸಂಭ್ರಮಿಸಲು ಸಾಧ್ಯವಾಯಿತು. ಅಲ್ಲಿ ಒಂದೆರಡು ತಾಸು ಕಳೆದು, ಹೊರಟೆವು . ಹುಣಸೂರಿನಲ್ಲಿ ಚಹಾ ಸೇವಿಸಿ ಮೈಸೂರಿಗೆ ತಲಪಿದಾಗ ಸಂಜೆ 7 ಗಂಟೆ ಆಗಿತ್ತು. ಇದೊಂದು ಸುಲಭವಾದ ಚಾರಣವಾಗಿತ್ತು.

ಒಟ್ಟಾರೆಯಾಗಿ ಕೊಡಗು ಶೈಲಿಯಲ್ಲಿ   “ನಂಗಡ ಕುಂದ್ ಪತ್ತುವದ್ ದುಂಬಾ ಚಾಯಿ” .

ಈ ಕಾರ್ಯಕ್ರಮವನ್ನುಅಚ್ಚುಕಟ್ಟಾಗಿ ಅಯೋಜಿಸಿ, ನಮ್ಮನ್ನು ಕುಂದ ಬೆಟ್ಟ ಹತ್ತಿಸಿ, ಇರ್ಪು  ಫಾಲ್ಸ್ ಗೆ ಇಳಿಸಿ ಮೈಸೂರಿಗೆ ಕ್ಷೇಮವಾಗಿ ಕರೆತಂದ, ಮೈಸೂರಿನ ಯೈ.ಎಚ್.ಎ.ಐ ಗಂಗೋತ್ರಿ ಘಟಕದ   ಶ್ರೀ ರಾಮಪ್ರಸಾದ್ ಮತ್ತು ಶ್ರೀ ಸೂರ್ಯನಾರಾಯಣ ಅವರಿಗೆ ಕೃತಜ್ಞತೆಗಳು.

 

– ಹೇಮಮಾಲಾ.ಬಿ

1 Response

  1. Shruthi Sharma says:

    ನಿಮ್ಮ ಬರವಣಿಗೆಯ ಶ್ಯಲಿಯಿಂದಾಗಿಯೋ ಏನೋ ಓದುತ್ತಾ ನನಗೇ ‘ಕುಂದ್ ಪತ್ತಿದ’ ಅನುಭವವಾಯಿತು. ಚೆಂದದ ಚಿತ್ರಗಳು, ಸುಂದರ ನಿರೂಪಣೆ. 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: