ಪ್ರವಾಸ – ಪ್ರಾರ೦ಭ
ದಿನ – 1
ಕೊನೆಗೂ ನಾವು ಹೊರಡುವ ದಿನ ಅಂದರೆ ಏಪ್ರಿಲ್ 27 ಬಂದೇ ಬಿಟ್ಟಿತು. ನಮ್ಮ ವಿಮಾನ ಹೊರಡುವುದು ಬೆಳಗ್ಗೆ 8.30 ಕ್ಕೆ ಇದ್ದಿದ್ದರಿ೦ದ, ನಾವು 5.30 ಕ್ಕೆ ವಿಮಾನ ನಿಲ್ದಾಣದಲ್ಲಿರಬೇಕಾಗಿತ್ತು. ನಮ್ಮ ಮಾಮೂಲಿ ಟ್ಯಾಕ್ಸಿ ಡ್ರೈವರ್ ಅರುಣ್ ಅವರಿಗೆ ಒಂದು ವಾರ ಮುಂಚೆ ಫೋನಾಯಿಸಿ , 27 ರಂದು ಬೆಳಗ್ಗೆ 4 ಗಂಟೆಗೆ ಹೊರಡುವುದೆಂದು ತಿಳಿಸಿದೆವು.. ನಿಗದಿತ ಕಾರ್ಯಕ್ರಮದಂತೆ ರಾತ್ರಿ ಎರಡು ಗಂಟೆಗೆ ಎದ್ದು, ಸ್ನಾನ ಇತ್ಯಾದಿಗಳನ್ನು ಮುಗಿಸಿ 3:30 ಗಂಟೆಗೆ ರೆಡಿಯಾದೆವು. ನಮ್ಮ ಅರುಣ್ ಆಗಲೇ ಬಂದು ಕಾಯುತ್ತಿದ್ದರು. ಬೆಳಗ್ಗೆ 4.15 ಕ್ಕೆ ಮನೆಯಿ೦ದ ಹೊರಟು 5.15 ಕ್ಕೆ ಸರಿಯಾಗಿ ಬೆ೦ಗಳೂರು ಕೆ೦ಪೇಗೌಡ ಅ೦ತರ್ರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2 ಮುಟ್ಟಿದೆವು, ಅಲ್ಲಿ ಒಮನ್ ಏರ್ ವೇಸ್ ಕೌ೦ಟರ್ ಹತ್ತಿರ ಹೋದಾಗ ನಮ್ಮನ್ನು ಅತ್ಯಂತ ಅಭಿಮಾನದಿಂದ ಆತ್ಮೀಯವಾಗಿ (ಎಲ್ಲಾ ಕೃತಕ, ಬೂಟಾಟಿಕೆ) ಬರಮಾಡಿಕೊಂಡು, ನಮ್ಮ ಟಿಕೆಟ್ ಗಳನ್ನು ಪರಿಶೀಲಿಸಿ (ಕೇವಲ ಪಾಸ್ ಪೋರ್ಟ್ ಕೊಟ್ಟರೆ ಸಾಕು, ಅವರ ಕಂಪ್ಯೂಟರ್ನಲ್ಲಿ ಎಲ್ಲಾ ವಿವರಗಳು ಬರುತ್ತವೆ). ನಮ್ಮ ದೊಡ್ಡ ಲಗೇಜ್ ಸೂಟ್ ಕೇಸ್ ಗಳನ್ನು ತೆಗೆದುಕೊಂಡು, ಮಸ್ಕಟ್ ಮೂಲಕ ಲ೦ಡನ್ ವರೆಗಿನ ಬೋರ್ಡಿಂಗ್ ಪಾಸ್ ಗಳನ್ನು ಕೊಟ್ಟರು. ಅದನ್ನು ತೆಗೆದುಕೊಂಡು ಒಳಗೆ ಹೋದರೆ ನಮ್ಮ ಗುರುಪ್ರಸಾದ್ ತಮ್ಮ ಪತ್ನಿಯೊಂದಿಗೆ ಅಲ್ಲಿದ್ದು, ಇತರೆ ಸ್ನೇಹಿತರ ಬರುವಿಕೆಯನ್ನು ಕಾಯುತ್ತಿದ್ದರು. ಅವರಲ್ಲದೆ ಇನ್ನೂ ನಾಲ್ಕು ಜನ ಸ್ನೇಹಿತರು ತಮ್ಮ ಪತ್ನಿಯರೊಂದಿಗೆ ಬರುವವರಿದ್ದರು. ಒಟ್ಟು 7 + 7 ಜನ ಪರಿಚಿತರು ಇದ್ದಿದ್ದರಿಂದ ಧೈರ್ಯವಾಗಿ ಮತ್ತು ಸಂತೋಷವಾಗಿ ನಮ್ಮ ಪ್ರವಾಸ ಕೈಗೊಳ್ಳುವ ವಿಶ್ವಾಸದೊಂದಿಗೆ ಬಹಳ ಉತ್ಸಾಹದಿಂದ ಫೋಟೋಗಳನ್ನು ತೆಗೆದುಕೊಂಡು, ನಂತರ ಅಲ್ಲಿಂದ ಒಳಗೆ ಇಮಿಗ್ರೇಷನ್ ಕೌಂಟರ್ ನಲ್ಲಿ ಪಾಸ್ ಪೋರ್ಟ್, ಬೋರ್ಡಿಂಗ್ ಪಾಸ್ ಎಲ್ಲ ತೋರಿಸಿ, ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ (ಎಲ್ಲಿಗೆ ಹೋಗುತ್ತಿದ್ದೀರಿ, ಯಾಕೆ ಹೋಗುತ್ತಿದ್ದೀರಿ, ಎಷ್ಟು ದಿನ ಯೂ ಕೆ ಯಲ್ಲಿ ಇರುತ್ತೀರಿ ಹೀಗೆ). ಉತ್ತರ ಕೊಟ್ಟ ನಂತರ ನಮ್ಮ ಪಾಸ್ ಪೋರ್ಟ್ ನಲ್ಲಿ ಸೀಲ್ ಹೊಡೆದು ಕೊಟ್ಟರು. ಡ್ಯೂಟಿ ಫ್ರೀ ಅಂಗಡಿಯ ಮುಖಾಂತರ ಒಳಗಡೆ ಪ್ರಾಂಗಣಕ್ಕೆ ಹೋಗಿ ಇನ್ನೂ ಸಮಯ ಇದ್ದುದರಿಂದ ಸುಂದರವಾದ ಕಲಾಕೃತಿಗಳಿಂದ ಅಲಂಕೃತಗೊಂಡ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ ಎರಡರಲ್ಲಿ ಕುಳಿತೆವು. ಇದು ನಮ್ಮ ಎರಡನೇ ಅಂತರಾಷ್ಟ್ರೀಯ ಪ್ರವಾಸ ಆಗಿದ್ದರಿಂದ, ಟರ್ಮಿನಲ್ 2 ನ್ನು ಮೊದಲೊಮ್ಮೆ ನೋಡಿದ್ದರಿ೦ದ, ಹೆಚ್ಚಿನ ಆಸ್ಥೆ ವಹಿಸದೇ, ನಾವು ಮನೆಯಿಂದ ತಂದ ಉಪ್ಪಿಟ್ಟು ತಿನ್ನತೊಡಗಿದೆವು. ನಿಗದಿತ ಸಮಯಕ್ಕೆ ನಿಗದಿತ ಗೇಟ್ ಬಳಿ ಹೋಗಿ ಕುಳಿತೆವು. ಸ್ವಲ್ಪ ಹೊತ್ತಿನಲ್ಲಿ ಸೆಕ್ಯೂರಿಟಿ ಚೆಕ್ ಮುಗಿಸಿ, ಏರೋ ಬ್ರಿಡ್ಜ್ ಮುಖಾಂತರ ಒಮನ್ ಏರ್ ವೇಸ್ ವಿಮಾನ ಪ್ರವೇಶಿಸಿದಾಗ ಕೃತಕ ನಗೆಯ ಗಗನಸಖಿ /ಸಖರು ನಮ್ಮನ್ನು ಸ್ವಾಗತಿಸಿದರು. ನಾವು ನಮ್ಮ ಆಸನಗಳನ್ನು ಹುಡುಕಿ ಕುಳಿತೆವು.
ಸಮಯಕ್ಕೆ ಸರಿಯಾಗಿ 8.30 ಕ್ಕೆ ಹೊರಟ ವಿಮಾನ ಸುಮಾರು 2400 ಕಿ ಮಿ ದೂರವಿರುವ ಮಸ್ಕಟ್ ಅನ್ನು ಸುಮಾರು ನಾಲ್ಕು ಗಂಟೆಗಳಲ್ಲಿ ಅಂದರೆ ಸುಮಾರು 12:30 ಗಂಟೆ ಸುಮಾರಿಗೆ ತಲುಪುವುದಾಗಿ ವಿಮಾನದ ಕ್ಯಾಪ್ಟನ್ ತಿಳಿಸಿದರು. ನಮ್ಮ ಲಗೇಜ್ ಅನ್ನು ನಮ್ಮ ತಲೆಯ ಮೇಲಿನ ಖಾನೆಯಲ್ಲಿ ಇಡಲು ಸ್ಥಳ ಇಲ್ಲದಿದ್ದಾಗ ಅದೇ ಕೃತಕ ನಗೆಯ ಗಗನಸಖಿ /ಸಖರು ಅದನ್ನು ಇಡಲು ದೂರದಲ್ಲಿ ಜಾಗ ತೋರಿಸಿದರೇ ವಿನಹ ಸಹಾಯ ಮಾಡದಿದ್ದನ್ನು ಕಂಡು ಸಿಟ್ಟು ಬಂತು. ಎಲ್ಲೂ ಯಾವ ದೇಶದಲ್ಲೂ, ಯಾರ ಜೊತೆಯಲ್ಲೂ ಜಗಳವಾಡಬಾರದು ಎನ್ನುವ ಬುದ್ಧಿವಾದದ ಸಂದೇಶದ ನೆನಪನ್ನು ನಮ್ಮ ಶ್ರೀಮತಿ ಅವರು ನನಗೆ ಮಾಡಿಕೊಟ್ಟಾಗ, ಸಿಟ್ಟು ನು೦ಗಿಕೊ೦ಡು, ತೋರಿಸಿದ ಜಾಗದಲ್ಲಿ ಲಗೇಜ್ ಅನ್ನು ಇಟ್ಟು ಬಂದು ಎದುರಿಗಿರುವ ಟ್ಯಾಬ್ ನಲ್ಲಿ ಏನೇನಿದೆ, ಯಾವ ಸಿನಿಮಾ ಇದೆ, ಯಾವ ಯಾವ ಚಾನೆಲ್ ಇದೆ, ಮ್ಯಾಪ್ ನೋಡೋದು ಹೇಗೆ, ಎಂದು ನೋಡುತ್ತಾ ಕುಳಿತೆವು. ವಿಮಾನ ಹೊರಡುವ ಸೂಚನೆ ಬಂದು, ಸೀಟ್ ಬೆಲ್ಟ್ ಹಾಕಿಕೊಂಡು, ನೇರವಾಗಿ ಕುಳಿತುಕೊಳ್ಳುವ ಸೂಚನೆಗೆ ಅನುಗುಣವಾಗಿ ಕುಳಿತೆವು. ವಿಮಾನ ಆಕಾಶದಲ್ಲಿ ಹೋದ ಸ್ವಲ್ಪ ಸಮಯದ ನಂತರ ನಮ್ಮ ಸ್ನೇಹಿತರು ಕುಳಿತಿರುವ ಜಾಗಗಳಿಗೆ ಹೋಗಿ ಅವರ ಅನುಕೂಲ, ಅನಾನುಕೂಲಗಳನ್ನು, ವಿಚಾರಿಸಿಕೊಳ್ಳತೊಡಗಿದೆವು. , ಪಾನೀಯಗಳು, ಉಪಹಾರದ ಸರಬರಾಜು ಪ್ರಾರಂಭವಾಯಿತು, ಆಗಲೇ ನಮ್ಮ ಉಪಹಾರ ಮುಗಿದಿದ್ದರೂ ಸಹ, ಗಗನ ಸಖಿಯರು ಕೊಟ್ಟ ಜ್ಯೂಸು, ಸಸ್ಯಹಾರ /ಶಾಖಾಹಾರದ ಉಪಹಾರಗಳನ್ನು, ಅವರವರ ಇಚ್ಚಾನುಸಾರ ತೆಗೆದುಕೊ೦ಡು ಕುಳಿತೆವು.
ನಮ್ಮ ವಿಮಾನ ಪಶ್ಚಿಮಾಭಿಮುಖವಾಗಿ ತುಮಕೂರು ಮಾರ್ಗವಾಗಿ ಚಿತ್ರದುರ್ಗದ ಮೇಲೆ ಹೋಗುತ್ತಿದ್ದಾಗ ನನ್ನ ತಂಗಿ ಖುಷಿಯಿ೦ದ ನಮ್ಮ ಊರಿನ ಮೇಲೆ ಹೋಗುತ್ತಿದ್ದೇವೆ ಎ೦ದು ತಿಳಿಸಿದರು. , ನಾನೂ ಕುತೂಹಲದಿಂದ ಮ್ಯಾಪ್ ನೋಡತೊಡಗಿದೆ. ನಮ್ಮ ವಿಮಾನ ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮುಖಾಂತರ ಗೋವಾದಿಂದ ನಮ್ಮ ದೇಶದ ಗಡಿ ದಾಟಿ ಅರೇಬಿಯನ್ ದೇಶಗಳ ಕಡೆ ಹೊರಟಿತ್ತು. ನಮ್ಮ ದೇಶದ ಭೂಭಾಗ ಮುಗಿದು ಸಮುದ್ರದ ಭಾಗ ಪ್ರಾರಂಭವಾಗುವ ಕರಾವಳಿಯ ದೃಶ್ಯ ತುಂಬಾ ಸುಂದರವಾಗಿ ಅಪ್ಯಾಯಮಾನವಾಗಿ, ಮನಮೋಹಕವಾಗಿ ಕಾಣುತ್ತಿತ್ತು. ಸ್ವಲ್ಪ ಹೊತ್ತಾದ ಮೇಲೆ ಬರಿ ಸಮುದ್ರ ಪ್ರದೇಶ ಕಾಣಲು ಪ್ರಾರಂಭವಾಯಿತು. ವಿಮಾನ ಹಾರುವಾಗ ನಮ್ಮ ಮೊಬೈಲ್ ಗಳು, ಸ್ಮಾರ್ಟ್ ವಾಚ್ ಗಳು, ನಮ್ಮ ಭಾರತೀಯ ವೇಳೆಯನ್ನೇ ತೋರಿಸುತ್ತಿದ್ದವು. . ಸೌದಿ ಅರೇಬಿಯಾ ದೇಶಗಳ ಗಡಿ ಭಾಗ ಗೋಚರಿಸುವಾಗ ಸಮುದ್ರದ ಭಾಗ ಮುಗಿದು ಮತ್ತೆ ಭೂಭಾಗ ಕಾಣಿಸಿಕೊಂಡಿತು. ಅದೇ ನಮ್ಮ ದೇಶದಿಂದ ಹೊರ ಹೋಗುತ್ತಿದ್ದಾಗಿನ ದೃಶ್ಯ ಇಲ್ಲಿ ತಿರುವು ಮುರುವಾಗಿ ಅಂದರೆ ಸಮುದ್ರದಿಂದ ಭೂಭಾಗ ಪ್ರವೇಶ. ಅದೇ ರೀತಿ ಆನಂದವನ್ನು ತಂದು ಕೊಟ್ಟಿತ್ತು. ಆಮೇಲೆ ಸ್ವಲ್ಪ ಹೊತ್ತಿನ ನಂತರ ವಿಮಾನ ಇಳಿಯಲು ಪ್ರಾರಂಭವಾಯಿತು. ನಮ್ಮ ವಿಮಾನ ಭೂಮಿಯಿಂದ ನೆಗೆದು ಆಕಾಶದಲ್ಲಿದ್ದಾಗ ಜೀವ ಕಳೆದುಕೊಂಡ ನಮ್ಮ ಮೊಬೈಲ್ ಫೋನ್ ಗಳು ಮತ್ತು ಸ್ಮಾರ್ಟ್ ವಾಚ್ ಗಳು ವಿಮಾನ ಭೂಮಿಯ ಹತ್ತಿರ ಬಂದಂತೆ ಜೀವ ತಳೆಯಲು ಪ್ರಾರಂಭಿಸಿದವು. ಆಗ ನಮ್ಮ ಮೊಬೈಲ್ ನಲ್ಲಿ ಎರಡೆರಡು ಸಮಯ ಕಾಣಿಸುತ್ತಿದ್ದವು. ಒಂದು ಸಮಯ 1.00 ಗಂಟೆ ತೋರಿಸಿದರೆ, ಜೊತೆ ಜೊತೆಯಲ್ಲಿ 11 ಗಂಟೆ ಎಂದು ತೋರಿಸುತ್ತಿತ್ತು. ಸ್ವಲ್ಪ ಸರಿಯಾಗಿ ಗಮನಿಸಿದಾಗ ಒಂದು ಗಂಟೆ ನಮ್ಮ ಭಾರತೀಯ ಕಾಲಮಾನವಾದರೆ, 11:00 ಸ್ಥಳೀಯ ಅಂದರೆ ಮಸ್ಕಟ್ ನಲ್ಲಿಯ ಸಮಯ ಎಂದು ಗೊತ್ತಾಯಿತು. ಅಂದರೆ ಎರಡು ಗಂಟೆಗಳ ವ್ಯತ್ಯಾಸ. ನಾವು ಪೂರ್ವದಿಂದ ಪಶ್ಚಿಮದ ಕಡೆಗೆ ಪ್ರಯಾಣಿಸಿದ್ದರಿಂದ ನಾವು ಸಮಯವನ್ನು ಹೆಚ್ಚಿಸಿಕೊಂಡಿದ್ದೆವು. ನಾಲ್ಕು ಗಂಟೆ ಪ್ರಯಾಣಿಸಿದರೂ ಕೇವಲ ಎರಡು ಗಂಟೆ ಮಾತ್ರ ಸಮಯ ಮುಂದೆ ಹೋಗಿ, (ಎರಡು ಗ೦ಟೆ ಸಮಯದ ಜೊತೆ ನಾವೂ ಪ್ರಯಾಣಿಸಿದ್ದೆವು). ನಮಗೆ ಎರಡು ಗಂಟೆ ಹೆಚ್ಚು ಸಮಯ ಸಿಕ್ಕಂತಾಯ್ತು. ಆದರೆ ನಮ್ಮ ಸ್ಮಾರ್ಟ್ ವಾಚ್ ಭಾರತೀಯ ಸಮಯವನ್ನು ತೋರಿಸುತ್ತಿತ್ತು. ಮೊಬೈಲ್ ನಲ್ಲಿ ಬ್ಲ್ಯು ಟೂತ್ ಆನ್ ಮಾಡಿ ನಮ್ಮ ವಾಚ್ ನೋಡುತ್ತಿದ್ದಾಗ ಇದ್ದಕ್ಕಿದ್ದಂತೆ 1.00 ಗಂಟೆ ಹೋಗಿ, 11:00 ಗ೦ಟೆ ಆಯಿತು.. ಅದನ್ನು ನೋಡಲು ತುಂಬಾ ತಮಾಷೆಯಾಗಿ ಕಾಣಿಸಿತು. ಹೊರಗಡೆ ನೋಡಿದರೆ ಮಸ್ಕಟ್ ನಗರ ಕಾಣಿಸುತ್ತಿತ್ತು. ಸೌದಿಯ ಗಡಿಭಾಗದಿಂದ ನೋಡುತ್ತಾ ಬಂದಾಗ ಮರಳುಗಾಡಿನಂತೆ ಕಾಣುತ್ತಿತ್ತು. ಗಿಡಮರಗಳು ಬಹಳ ವಿರಳವಾಗಿದ್ದವು. ನಂತರ ಮಸ್ಕಟ್ ನಗರ ಸಾಮಾನ್ಯ ಊರಿನಂತೆ ಕಾಣುತ್ತಿತ್ತು. ಯಾವ ದೊಡ್ಡ ದೊಡ್ಡ ಕಟ್ಟಡಗಳೂ ಇರಲಿಲ್ಲ. ನಮ್ಮ ಕಡೆಯ ಯಾವುದೇ ಸಾಮಾನ್ಯ ಊರಿನಂತೆ ಕಂಡಿದ್ದು, ಸ್ವಲ್ಪ ನಿರಾಶೆಯಾಯಿತು. ಈ ವಿಷಯವನ್ನು ವಾಪಸ್ ಬಂದ ಮೇಲೆ ಸುಮಾರು 25 ವರ್ಷ ಮಸ್ಕಟ್ ನಲ್ಲಿದ್ದ ಸ್ನೇಹಿತ ಜನಮಟ್ಟಿ ಅವರಲ್ಲಿ ಪ್ರಸ್ತಾಪಿಸಿದಾಗ ಆ ದೇಶದ ಊರುಗಳು ದುಬೈ, ಬಾಂಬೆ, ಲಂಡನ್ ಗಳಂತೆ ಕಾಣುವುದಿಲ್ಲ. ಅಲ್ಲದೇ ಪೂರ್ವ ದಿಕ್ಕಿನಿಂದ ಪ್ರಯಾಣಿಸುವ ವಿಮಾನಗಳಿಂದ ಮಸ್ಕಟ್ ನಗರ ಕಾಣುವುದಿಲ್ಲ ವೆಂದು ತಿಳಿಸಿದರು.
ಅನೇಕ ವಿಮಾನ ನಿಲ್ದಾಣಗಳನ್ನು ನೋಡಿದ್ದ ನಮಗೆ ಮಸ್ಕಟ್ ವಿಮಾನ ನಿಲ್ದಾಣದಲ್ಲಿ ಏನೂ ವಿಶೇಷ ಕಾಣಿಸಲಿಲ್ಲ. ನಮ್ಮ ದೊಡ್ಡ ಲಗೇಜ್ ಗಳು ಸೀದಾ ಲಂಡನ್ ವರೆಗೆ ಬುಕ್ ಆಗಿದ್ದರಿಂದ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ನಮ್ಮ ತಲೆಯ ಮೇಲಿನ ಖಾನೆಗಳಲ್ಲಿರುವ ಲಗೇಜ್ ತೆಗೆದುಕೊಂಡು, ವಿಮಾನದ ಸಿಬ್ಬಂದಿಗೆ ವಿದಾಯ ಹೇಳುತ್ತಾ ವಿಮಾನದಿಂದ ಹೊರಗೆ ಬಂದು ಏರೋ ಬ್ರಿಡ್ಜ್ ಮೂಲಕ ವಿಮಾನ ನಿಲ್ದಾಣ ಪ್ರವೇಶ ಮಾಡಿದೆವು. , ಬಾಣದ ಜಾಡುಗಳನ್ನು ಹಿಡಿದು ಮುಖ್ಯ ಪ್ರಾಂಗಣಕ್ಕೆ ಹೊರಟೆವು. ಅಲ್ಲಿ ನಮ್ಮ ನಡೆಯುವ ಶ್ರಮವನ್ನು ಕಡಿಮೆ ಮಾಡಲು ಉದ್ದಕ್ಕೂ ನೆಲದ ಮೇಲೆ ಚಲಿಸುವ ಕಾಲು ದಾರಿ (ಮೂವಿ೦ಗ್ ವಾಕ್ ವೇ, ಅಥವಟ್ರಾವಲೇಟರ್) ವ್ಯವಸ್ಥೆ ಇತ್ತು. ದಾರಿಯಲ್ಲಿ ಶೌಚಾಲಯಗಳು ಇದ್ದಿದ್ದರಿಂದ ಮೊದಲು ನಮ್ಮ ದೇಹ ಬಾಧೆಗಳನ್ನು ತೀರಿಸಿಕೊಂಡು, ಸುಮಾರು 15ನಿಮಿಷ ಬಾಣದ ಗುರುತುಗಳು ತೋರಿಸಿದ ದಿಕ್ಕಿನಲ್ಲಿ ನಡೆದೆವು. ಇಂಡಿಯನ್ ಪಾಸ್ ಪೋರ್ಟ್ ಹೊಂದಿರುವವರಿಗೆ ಪ್ರತ್ಯೇಕ ಮಾರ್ಗ ಇತ್ತು. ಅದರಂತೆ ಹೋಗಿ ನಾವು ಮುಖ್ಯ ಪ್ರಾ೦ಗಣಕ್ಕೆ ಹೋದೆವು. ಅಲ್ಲಿ ನೋಡಿದರೆ ನಮ್ಮ ಹಳ್ಳಿ ಬಸ್ಟ್ಯಾಂಡ್ಗಳಲ್ಲಿ ಮಲಗಿದ್ದಂತೆ ಜನ ಕುಳಿತುಕೊಳ್ಳಲು ಮಾಡಿರುವ ಸೋಫಾ ಆಸನಗಳ ಮೇಲೆ ತಮ್ಮ ಲಗೇಜ್ ಗಳನ್ನು ಇಟ್ಟುಕೊಂಡು ಉದ್ಧಕ್ಕೆ ಮಲಗಿಬಿಟ್ಟಿದ್ದರು. ಅಷ್ಟೊಂದು ದೊಡ್ಡ ಜಾಗವಿದ್ದರೂ ಮುಂದೆ ಹೋಗುವ ಜನ ಕಾಯಲು ಬೇಕಾದ ಎಲ್ಲಾ ಅನುಕೂಲಗಳು ಇದ್ದರೂ, ಅದರ ಉಪಯೋಗ ಎಲ್ಲರಿಗೂ ಸಿಗದೇ ಕೆಲವೇ ಜನ ಅದರ ದುರುಪಯೋಗ ಮಾಡಿಕೊಳ್ಳುತ್ತಿದ್ದುದ್ದನ್ನು ನೋಡಿ, ದುಃಖ, ಸಿಟ್ಟು, ಬೇಸರ ಒಮ್ಮೆಗೆ ಬಂತು. . ಆದರೆ ಎಲ್ಲೂ ಜಗಳ ಆಡಬಾರದಲ್ಲ ಎನ್ನುವುದು ನೆನಪಾಗಿ ಬಾಯಿ ಮುಚ್ಚಿಕೊ೦ಡು ಇದ್ದುದರಲ್ಲೇ ಜಾಗ ಮಾಡಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿಕೊಂಡೆವು. ನಾವು ಸುಮಾರು 3 ಗಂಟೆಗಳ ಕಾಲ ಸಮಯ ಕಳೆಯಬೇಕಾಗಿತ್ತು. ಅಲ್ಲಿ ಎಲ್ಲಾ ತರಹದ ಅಂಗಡಿಗಳು ದೇಶೀಯ ಖಾದ್ಯಗಳ ರೆಸ್ಟೋರೆಂಟ್ಗಳು ಇದ್ದವು. ನಾವು ಆಗಲೇ ನಮ್ಮ ಉಪ್ಪಿಟ್ಟು ಮತ್ತು ವಿಮಾನದ ಉಪಹಾರ ಸೇವಿಸಿದ್ದರಿಂದ ಅಂತಹ ಹಸಿವೆ ಇಲ್ಲದಿದ್ದರೂ, ತಂದ ಚಪಾತಿ ರೋಲ್ ಗಳನ್ನು ತಲಾ ಮೂರರಂತೆ ತಿಂದು ನೀರು ಕುಡಿದೆವು. ಬೇರೆಯವರು ಪಾಪ ಏನೂ ತೆಗೆದುಕೊಂಡು ಹೋಗದವರು ಅಲ್ಲೇ ರೆಸ್ಟೋರೆಂಟ್ಗೆ ಹೋದರೆ ಅಲ್ಲಿ ಸ್ಥಳೀಯ ಚಲಾವಣೆಯ ಕರೆನ್ಸಿಯಲ್ಲಿ ಹಣ ಕೇಳಿದರು ಮತ್ತು ಯುಪಿಐ ಸರಿಯಾಗಿ ಕೆಲಸ ಮಾಡದೇ ತೊಂದರೆ ಅನುಭವಿಸಿದರು. ನಂತರ ಕೆಲವರಿಗೆ ನಮ್ಮಲ್ಲಿದ್ದ ಚಪಾತಿ ಮತ್ತು ಇತರ ಕುರುಕಲು ತಿಂಡಿಗಳನ್ನು ಕೊಟ್ಟೆವು. ಅದಕ್ಕೇ ಪ್ರಯಾಣಕ್ಕೆ ಬುತ್ತಿ ಕಟ್ಟಿಕೊ೦ಡು ಹೋಗಬೇಕು ಅ೦ತ ಹಿ೦ದಿನ ಕಾಲದಲ್ಲಿ ಬುದ್ದಿ ಮಾತು ಹೇಳುತ್ತಿದ್ದರು.. ಅಲ್ಲಿಂದ ನಮಗೆ ಲಂಡನ್ ಗೆ ಹೋಗುವ ವಿಮಾನ ಅಲ್ಲಿಯ ಕಾಲಮಾನದ ಪ್ರಕಾರ ಎರಡು ಗಂಟೆಗೆ ಹೊರಡುವುದಿತ್ತು. ಅಲ್ಲಿಯವರೆಗೆ ಅಲ್ಲಿರುವ ಅಂಗಡಿಗಳಲ್ಲಿ ಅಡ್ಡಾಡಿ ಎಲ್ಲಿ ಬೇಕೋ ಅಲ್ಲಿ ಫೋಟೋಗಳನ್ನು ತೆಗೆದುಕೊಂಡೆವು. ಅಲ್ಲಿ ಅಂಗಡಿಗಳಲ್ಲಿ ಲಾಟರಿ ವ್ಯವಹಾರದ ಜಾಹೀರಾತು ಮತ್ತು ಪ್ರಚಾರ ನಡೆಯುತ್ತಿದ್ದನ್ನು ನೋಡಿ ಆಶ್ಚರ್ಯವಾಯಿತು. ನಮ್ಮ ಕಡೆ ಸುಮಾರು 30 – 40 ವರ್ಷಗಳಷ್ಟು ಹಿಂದೆ ಇದ್ದ ಈ ವ್ಯವಹಾರ ಅಲ್ಲಿ ಈಗಲೂ ಇದ್ದದ್ದು ನೋಡಿ ಆಶ್ಚರ್ಯವಾಯಿತು. ಸ್ವಲ್ಪ ಸಮಯ ಅಡ್ಡಾಡಿದ ನಂತರ ನಮ್ಮ ಲಂಡನ್ ವಿಮಾನ ಹೊರಡುವ ಸಮಯ, ಗೇಟು ಎಲ್ಲಾ ವಿವರಗಳು ಅಲ್ಲೇ ಎಲ್ ಇ ಡಿ ಬೋರ್ಡ್ ನಲ್ಲಿ ಮಾಹಿತಿ ಪಡೆದು, ಅದರ ಪ್ರಕಾರ ಸಂಬಂಧಪಟ್ಟ ಗೇಟ್ ಬಳಿ ಹೋಗಿ ಕುಳಿತೆವು.,
ಮಸ್ಕಟ್ ನಿಂದ ಸರಿಯಾದ ಸಮಯಕ್ಕೆ ಚೆಕಿಂಗ್ ಪ್ರಾರಂಭವಾಗಿ ಜೋನ್ ವೈಸ್ ಪ್ರಯಾಣಿಕರನ್ನು ಕರೆದರು. ಒಳಗೆ ಹೋಗಿ ನಮ್ಮ ನಮ್ಮ ಆಸನಗಳಲ್ಲಿ ಕುಳಿತುಕೊಂಡೆವು. ನಮ್ಮ ಆ ವಿಮಾನದಲ್ಲಿ ಒಂದು ಸಾಲಿಗೆ 9 ಆಸನಗಳಿದ್ದವು. ಎಡಬದಿಯಲ್ಲಿ ಮೂರು, ಬಲಬದಿಯಲ್ಲಿ ಮೂರು, ಮಧ್ಯದಲ್ಲಿ ಮೂರು, ಆಸನಗಳು. ಪ್ರಯಾಣದ ವೇಳೆ ನಮಗೆ ಮಧ್ಯದ ಮೂರು ಆಸನಗಳಲ್ಲಿ ಸೀಟ್ ಸಿಕ್ಕಿದ್ದರಿಂದ ಯಾವ ಕಿಟಿಕಿಯಿಂದಲೂ ಏನೂ ನೋಡಲಾಗಲಿಲ್ಲ. ವಿಮಾನ ಸಮಯಕ್ಕೆ ಸರಿಯಾಗಿ 2.00 ಗ೦ಟೆಗೆ ಹೊರಟಿತು. ಉತ್ತರಾಭಿಮುಖವಾಗಿ ಸುಮಾರು 6000 ಕಿ.ಮಿ. ದೂರವನ್ನು ಸುಮಾರು 7 ಗಂಟೆಗಳಲ್ಲಿ ಕ್ರಮಿಸುವ ಪ್ರಯಾಣ ಇದಾಗಿತ್ತು. ಲಂಡನ್ ನಲ್ಲಿ ನಾವು ಸಂಜೆ 7 (ಲ೦ಡನ್ ಸಮಯ) ಗಂಟೆಗೆ ತಲುಪುವ ನಿರೀಕ್ಷೆ ಇತ್ತು, ಆರಂಭದ ಕೆಲ ಕಾಲ ವಿಮಾನ ಸಿಬ್ಬಂದಿ ತಮ್ಮ ತಮ್ಮ ಕರ್ತವ್ಯವನ್ನು ಪೂರೈಸಿ ವಿಮಾನ ಅಂತರಿಕ್ಷದಲ್ಲಿ ಒಂದೇ ಸಮನೆ ಹಾರಲು ಪ್ರಾರಂಭವಾದಾಗ, ಪಾನೀಯ ಹಾಗೂ ಊಟದ ಸರಬರಾಜು ಪ್ರಾರಂಭ ಮಾಡಿದರು. ಮಸ್ಕಟ್ ಸಮಯಕ್ಕೂ ಇಂಗ್ಲೆಂಡ್ ಸಮಯಕ್ಕೂ ಎರಡು ಗಂಟೆ ವ್ಯತ್ಯಾಸ. ಹಗಲಿನ ಪ್ರಯಾಣ, ಜೊತೆಯಲ್ಲಿ ಪ್ರವಾಸದ ಪ್ರಾರಂಭದ ಹಂತವಾಗಿದ್ದರಿಂದ, ಎಲ್ಲರಲ್ಲೂ ಉತ್ಸಾಹ ತುಂಬಿ ತುಳುಕುತ್ತಿತ್ತು, ಅಲ್ಲದೆ ಮಸ್ಕಟ್ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಸರಿಯಾಗಿ ಆಗದೆ ಇದ್ದಿದ್ದರಿಂದ ಎಲ್ಲರೂ ಪಾನೀಯ, ಆಹಾರದ ನಿರೀಕ್ಷೆಯಲ್ಲಿದ್ದರು, ಅದು ಅಂತರಾಷ್ಟ್ರೀಯ ವಿಮಾನ ಪ್ರಯಾಣವಾಗಿದ್ದರಿಂದ ತಂಪು ಪಾನೀಯಗಳ ಜೊತೆ ಜೊತೆಗೆ ಮದ್ಯದ ಸರಬರಾಜು ಸಹ ಆಗುತ್ತಿತ್ತು. ಸಾಮಾನ್ಯವಾಗಿ ಮದ್ಯದ ಸೇವನೆಯನ್ನು ಅಪರಾಧಿ ಮನೋಭಾವದಲ್ಲಿ ಸೇವಿಸುವುದನ್ನು ನೋಡಿದ್ದ ನಮಗೆ, ನಮ್ಮ ಸ್ನೇಹಿತರುಗಳು ಅವರವರ ಪತ್ನಿಯರ ಸಮ್ಮುಖದಲ್ಲಿ ಮದ್ಯ ಸೇವಿಸುವುದು ಮತ್ತು ಅದನ್ನು ಅವರವರ ಪತ್ನಿಯರು ಹೆಮ್ಮೆಯಿಂದ ತಮ್ಮ ಮನೆಯವರು ವಿಸ್ಕಿ ತೆಗೆದುಕೊಂಡರು ಎಂದು ಹೇಳುತ್ತಿದ್ದನ್ನು ನೋಡಿ ಆಶ್ಚರ್ಯವಾಯಿತು.. ನಮ್ಮ ಸ್ನೇಹಿತರು ಸಹ ವಿಸ್ಕಿ ಒಳ್ಳೆ ರುಚಿಯಾಗಿದೆ ಎಂದು ಕುಡಿಯುತ್ತಿದ್ದರು. ನಾವು ಸಭ್ಯಸ್ಥರಂತೆ ತಂಪು ಪಾನೀಯ ಕುಡಿದು ಕುಳಿತೆವು. ನಂತರ ಶಾಖಾಹಾರಿ / ಮಾಂಸಾಹಾರಿ ಊಟದ ಸರಬರಾಜು ಮಾಡಿದರು. ಎಲ್ಲರೂ ತಮ್ಮ ತಮ್ಮ ಇಚ್ಛಾನುಸಾರ ಆಹಾರವನ್ನು ಸೇವಿಸಿ ಜೊ೦ಪು ಹತ್ತಿದಂತೆ ನಿದ್ದೆ ಮಾಡುತ್ತಿದ್ದರು., ಎದುರಿಗಿರುವ ಟ್ಯಾಬ್ ನಲ್ಲಿ ಗೂಗಲ್ ಮ್ಯಾಪ್ ನೋಡುತ್ತಿದ್ದೆವು. ಆಗಲೇ ಕೆಲವರು ವಿಮಾನದಲ್ಲೇ ವಾಕಿಂಗ್ ಮಾಡುತ್ತಿದ್ದರು. ಇನ್ನೂ ಕೆಲವರು ಕಾಫಿ ಟೀ ಕೇಳಿ ಸವಿಯುತ್ತಿದ್ದರು..
ಅಂತೂ ಎಲ್ಲರೂ ತಮ್ಮ ತಮ್ಮ ಇಚ್ಛಾನುಸಾರ ಕಾಲಹರಣ ಮಾಡುತ್ತಿದ್ದರು. ನಾವು ಕಂಡು ಕೇಳರಿಯದ ಪ್ರದೇಶಗಳ ಮೇಲೆ ನಮ್ಮ ವಿಮಾನ ಹಾರುತ್ತಿತ್ತು. ಮಧ್ಯ ಪ್ರಾಚ್ಯ ರಾಷ್ಟ್ರ ಗಳಾದ ಇರಾನ್,ಇಸ್ರೇಲ್,ಟರ್ಕಿ, ಐರೋಪ್ಯ ರಾಷ್ಟ್ರ ಗಳು, ತಜಕಿಸ್ಥಾನ, ಅಜರ್ಬೈಜನ್, ಹೀಗೆ ಇಂತಹ ದೇಶಗಳೇ. ನಂತರ ಎಷ್ಟೋ ಸಮಯದ ನಂತರ ಭೂಪ್ರದೇಶ ಮುಗಿದು ಸಮುದ್ರದ ಮೇಲೆ ನಮ್ಮ ಪ್ರಯಾಣ ಪ್ರಾರಂಭವಾಯಿತು. ಇದೇನು ಹೆಚ್ಚು ಸಮಯ ಇರಲಿಲ್ಲ. ಮತ್ತೆ ಭೂಪ್ರದೇಶ ಪ್ರಾರಂಭವಾದಾಗ ನಮ್ಮ ವಿಮಾನ ಇಂಗ್ಲೆಂಡ್ ದೇಶವನ್ನು ಪ್ರವೇಶಿಸಿತ್ತು. ಸ್ವಲ್ಪ ಹೊತ್ತಿನ ನಂತರ ನಮ್ಮ ವಿಮಾನ ಲಂಡನ್ ನ ಹೀಥ್ರು ವಿಮಾನ ನಿಲ್ದಾಣದಲ್ಲಿ ಇಳಿಯುವುದಾಗಿ ವಿಮಾನದ ಪೈಲೆಟ್ ಅನೌನ್ಸ್ ಮಾಡಿದರು. ಆಗ ನಾವು ಸುಮಾರು 7 ಗ೦ಟೆಗಳ ಪ್ರಯಾಣ ಮಾಡಿದರೂ ಸಮಯ ಕೇವಲ 5 ಗ೦ಟೆ ಮು೦ದೆ ಹೋಗಿತ್ತು. ಅ೦ದರೆ ಮಸ್ಕಟ್ಗೂ ಲ೦ಡನ್ಗೂ 2 ಗ೦ಟೆಗಳ ವ್ಯತ್ಯಾಸ. (ಅ೦ದರೆ ಭಾರತಕ್ಕೂ ಲ೦ಡನ್ಗೂ ಒಟ್ಟು ಸುಮಾರು 4 ಗ೦ಟೆಗಳ ವ್ಯತ್ಯಾಸ.) ನಮ್ಮ ವಿಮಾನ ಇಳಿಯಲು ಪ್ರಾರಂಭ ಮಾಡಿತ್ತು. ಕಿಟಕಿಯಿಂದ ಹೊರಗೆ ನೋಡುವ ಅನುಕೂಲ ಇಲ್ಲದಿದ್ದರಿಂದ ಹಾಗೆಯೆ ಕತ್ತು ಉದ್ದ ಮಾಡಿ ಕಂಡಷ್ಟನ್ನು ನೋಡುತ್ತಿದ್ದೆವು. ವಿಮಾನ ಭೂಸ್ಪರ್ಶ ಮಾಡಿದಾಗ ಒಂದು ಕಡೆ ವಿಮಾನ ನಿಲ್ದಾಣ ಕಾಣುತ್ತಿತ್ತು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44222
ಟಿ.ವಿ.ಬಿ.ರಾಜನ್ , ಬೆಂಗಳೂರು



ಪ್ರವಾಸದ ಮುಂದುವರೆದ ಭಾಗ ನಿಜವಾಗಲೂ ಅದ್ಭುತವಾಗಿದೆ ಹಾಗೂ ಅಂತರಾಷ್ಟ್ರೀಯ ಪ್ರವಾಸ ಕೈಗೊಳ್ಳಲು ಸೂಕ್ತ ಮಾಹಿತಿಯನ್ನು ನಿಖರವಾಗಿ ನೀಡಿರುತ್ತಾರೆ. ಇದರಿಂದ ಪ್ರವಾಸ ಕೈಗೊಳ್ಳಲು ಉತ್ಸುಕರಾಗಿರುವವರಿಗೆ ಒಳ್ಳೆಯ ಮಾಹಿತಿ ಮುಂದಿನ ಲೇಖನವನ್ನು ಎದುರು ನೋಡುತ್ತೇವೆ
Beautiful
We are feeling as if we are also traveling with you and enjoying the tour, beautifully narrated and look forward for the next chapter of the travel. ✌️
ಪ್ರವಾಸ ಕಥನ ಓದಿಸಿಕೊಂಡುಹೋಯಿತು… ಮುಂದಿನ ಕಂತಿಗೆ ಕಾಯುವಂತಿದೆ..ಸಾರ್..