ಚಂದಿರನೇತಕೆ ಓಡುವನಮ್ಮ…ಪುಷ್ಪಾ ನಾಗತಿಹಳ್ಳಿ

Share Button
Hema1

ಹೇಮಮಾಲಾ.ಬಿ

ಈ ವಾರಾಂತ್ಯದಂದು, ಶ್ರೀಮತಿ ಪುಷ್ಪಾ ನಾಗತಿಹಳ್ಳಿಯವರು ಬರೆದ ಚಂದಿರನೇತಕೆ ಓಡುವನಮ್ಮ ಎಂಬ ಬಾಲ್ಯಕಾಲದ ಕಥನವನ್ನು ಓದಲೆಂದು ಕೈಗೆತ್ತಿಕೊಂಡಿದ್ದೆ. ಈಗ ಒಂದು ಬಾರಿ ಓದಿ ಮುಗಿಸಿದೆ. ಈ ಪುಸ್ತಕವು  ಓದಿಸಿಕೊಂಡು ಹೋಯಿತು  ಎನ್ನುವ ಬದಲು ನಾನೂ ಪುಸ್ತಕದೊಂದಿಗೆ ‘ಓಡಿಕೊಂಡು ಹೋದೆ’ ಎಂದರೆ ಹೆಚ್ಚು ಸೂಕ್ತ ಎನಿಸುತ್ತದೆ.

ನಾಗತಿಹಳ್ಳಿಯ ಹಳೆಮನೆ, ಹೊಸಮನೆ, ತೊಟ್ಟಿಮನೆ, ದಬಾನು ಗುಡಿ, ಮಾರಮ್ಮನ ಗುಡಿ, ತುಳಸಮ್ಮ ಗುಡಿ ಸುತ್ತಿ, ತೋಟ-ಹೊಲ-ಶಾಲೆಗೆ ಹೋಗಿ, ಹಳ್ಳಿ-ಕೇರಿ ಸುತ್ತಿ, ಟೆಂಟ್ ಸಿನೆಮಾ ನೋಡಿ, ತಮ್ಮಂದಿರ ಬಗ್ಗೆ ಆಕ್ಕರೆ ತೋರಿಸಿ, ಚಾಡಿ ಹೇಳಿ, ಬಾಲ್ಯದ ತುಂಟಾಟಗಳಲ್ಲಿ ಭಾಗಿಯಾಗಿ, ಕೂಡು ಕುಟುಂಬದ ಸಿಹಿ-ಕಹಿಗಳನ್ನುಂಡು…ಬಡತನದಲ್ಲೂ ಸಂತೋಷದಿಂದಿದ್ದ ಪುಷ್ಪಾ ಅವರ ಬಾಲ್ಯ ಕಾಲದ ನಿರೂಪಣೆ ಬಹಳ ಸೊಗಸಾಗಿದೆ.

ಅವರನ್ನೂ ಸೇರಿಸಿ  ಒಟ್ಟು ಆರು ಜನ ಸಹೋದರ-ಸಹೋದರಿಯರಿದ್ದರೂ ಅವರಲ್ಲಿ ಹೆಚ್ಚು ನಿಕಟವರ್ತಿಯಾಗಿದ್ದ ತಮ್ಮ ‘ಚಂದ್ರು’ (ಶ್ರೀ ನಾಗತಿಹಳ್ಳಿ ಚಂದ್ರಶೇಖರ ಅವರು) . ಪುಸ್ತಕದುದ್ದಕ್ಕೂ ಈ ತಮ್ಮನ ಬಾಲ್ಯಲೀಲೆಗಳು ರಾರಾಜಿಸಿವೆ.  ಮುಂದಿನ ವೈವಾಹಿಕ ಜೀವನ, ಆಮೇಲೆ ಎದುರಾದ ಸಿಹಿ-ಕಹಿ ಘಟನೆಗಳು, ಪ್ರತಿ ಹಂತದಲ್ಲೂ ತನಗೆ ಬೆಂಬಲ ನೀಡಿದ/ನೀಡುತ್ತಿರುವ ತಮ್ಮನೊಂದಿಗೆ ಒಡನಾಟ.. ಹೀಗೆ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತದೆ.  ತನ್ನ  ಜೀವನ ಪಯಣದಲ್ಲಿ ಒದಗಿಬಂದ ಆಸ್ಟ್ರೇಲಿಯಾ ಮತ್ತು ಲಂಡನ್ ಪ್ರಯಾಣಗಳು ಮತ್ತು ಅಲ್ಲಿನ ವಿಶೇಷತೆಗಳ ಬಗ್ಗೆಯೂ ಲೇಖಕಿ ಸೊಗಸಾದ ವಿವರಣೆ ಕೊಟ್ಟಿದ್ದಾರೆ.

Chandiranetake Oduvanamma- Pushpa Nagatihalli

ಅತ್ಯಂತ ಸರಳವಾಗಿ ಮತ್ತು ಬಹಳ ಆಪ್ತವಾಗಿರುವ ಶೈಲಿಯಲ್ಲಿ ಬರೆದ ಈ ಬಾಲ್ಯಕಥನವನ್ನು  ಓದುವಾಗ ಇಲ್ಲಿ ಬರುವ ಕೆಲವು ಪಾತ್ರಗಳು ‘ನಮಗೂ ಚಿರಪರಿಚಿತ…ಆದರೆ ನಮ್ಮೂರಲ್ಲಿ ಅವರ ಹೆಸರು ಮಾತ್ರಬೇರೆಯಾಗಿತ್ತು‘ ಎನಿಸುತ್ತವೆ!  ಪುಷ್ಪಾ ಅವರು ಬರೆದಂತೆಕಾಲದೊಳಗೆ ಬದುಕೂ, ಬದುಕಿನೊಳಗೆ ಕಾಲವೂ ನುಸುಳುತ್ತಾ‘ ಸಾಗುವುದು ಎಷ್ಟು ನಿಜ! (ಪುಟ 86)

ಕನಸುಗಳಿಗೆ ಅದೆಷ್ಟು ಶಕ್ತಿ ಇದೆ! ಬಾಲ್ಯದಲ್ಲಿ ಕಂಡ ಕನಸುಗಳನ್ನೆಲ್ಲಾ ನನಸು ಮಾಡಿದ ಖ್ಯಾತಿ ಶ್ರೀ ನಾಗತಿಹಳ್ಳಿ ಚಂದ್ರಶೇಖರ ಅವರದು. ಜತೆಗೆ  ತಮ್ಮೂರಿನ ಬೇರನ್ನು ಮರೆಯದೆ ಅದನ್ನು ವಿವಿಧ ರೂಪದಲ್ಲಿ ಪೋಷಿಸುತ್ತಿದ್ದಾರೆ. ಸಹಜವಾಗಿಯೇ ಅಕ್ಕರೆಯ ಅಕ್ಕನಿಗೆ  “ಕುಟ್ನುದಯ್ಯನ ಹಿಂದೆ ಸುತ್ತುತ್ತಾ  ‘ನನಗೊಂದು ಪುಸ್ತಕ ಕೊಡಯ್ಯಾ’ ಎಂದು ಹಲುಬುತ್ತಿದ್ದ್ದ ಹುಡುಗ ಇಂದು ಅವನೇ ಕಟ್ಟಿಸಿದ ಲೈಬ್ರೆರಿಯ ಕೋಣೆಯಲ್ಲಿದ್ದ ಸಾವಿರಾರು ಪುಸ್ತಕಗಳ ಮಧ್ಯದಲ್ಲಿ  ಕುಳಿತು ಸಾಹಿತ್ಯ, ಕಥೆ , ನಾಟಕ, ಪ್ರವಾಸಗಳ ಬಗ್ಗೆ ಮಾತನಾಡುವಾಗ ಹೆಮ್ಮೆಯಾಗುತ್ತದೆ. (ಪುಟ 134)

ಪುಷ್ಪಾ ನಾಗತಿಹಳ್ಳಿ ಅವರು ತಮ್ಮ ಕುಟುಂಬದ  ಕೆಲವು ಚಿತ್ರಗಳನ್ನು  ಹಾಗೂ  ಮನೆಯ ಇತರ  ಸದಸ್ಯರ ಬಗ್ಗೆಯೂ ಸ್ವಲ್ಪ ವಿವರಣೆ ಕೊಟ್ಟಿದ್ದರೆ ಓದುಗರಿಗೆ  ಇನ್ನೂ ಸ್ಪಷ್ಟಚಿತ್ರಣ ಸಿಗುತಿತ್ತು ಎಂದು ನನ್ನ ಭಾವನೆ.  ಅವರ ಲೇಖನಿಯಿಂದ ಇನ್ನಷ್ಟು ಪುಸ್ತಕಗಳು ಮೂಡಿಬರಲಿ ಎಂದು ನಮ್ಮ ಆಶಯ.

 

-ಹೇಮಮಾಲಾ.ಬಿ

4 Responses

  1. Pushpa Nagathihalli says:

    ಹೇಮಮಾಲಾ ನೀವು ಚಂದಿರನೇತಕೆಓಡುವುನಮ್ಮ ಪುಸ್ತಕದಬಗ್ಗೆ ಬರೆದಿರುವ ಅನಿಸಿಕೆಗೆ ಧನ್ಯವಾದಗಳು ನೀವು ಬರೀ ಓದುಗಳಾಗದ ಅದರ ಒಳಹೊರಗನ್ನೆಲ್ಲಾ ಸವಿಸ್ತಾರವಾಗಿ ಅನುಭವಿಸಿ ಬರೆದಿದ್ದೀರಿ. ಇದನ್ನು ಓದಿದರೆ ತಿಳಿಯುತ್ತದೆ.ನಿಮ್ಮೊಳಗೆ ಅದ್ಭುತ. ಸಾಹಿತಿ ಮತ್ತು ವಿಮರ್ಶಕಿ ಇಬ್ಬರು ಇದ್ದಾರೆ ಎಂದರೆ ಖಂಡಿತಾ ತಪ್ಪಾಗಲಾರದು.ಇನ್ನೂ ಹೆಚ್ಚು ಹೆಚ್ಚು ನಿಮ್ಮ ಚಾರಣ ಮತ್ತು ಅನುಭವದ ಲೇಖನಗಳು ಬರುತ್ತಿರಲಿ.ಇನ್ನುನನ್ನ ಪುಸ್ತಕದ ಬಗ್ಗೆ ನಿಮ್ಮ ಅನಿಸಿಕೆ ಚೆನ್ನಾಗಿದೆ. ವಂದನೆಗಳು ನನ್ನಪುಸ್ತಕದಬಗ್ಗೆ ಹೇಳುವುದಾದರೆ ನಮ್ಮ ಬಾಲ್ಯ ಬರೀ ಆಟಪಾಠಗಳಿಗೆ ಬೇಕುಬೇಡಗಳಿಗೆ ಸೀಮಿತವಾಗಿರದೆ ಅನೇಕ ಗ್ರಾಮೀಣ. ರಂಜನೀಯ ಶ್ರೀಮಂತಿಕೆಯನ್ನು ತಂದುಕೊಟ್ಟಿತ್ತು.ಈಗಿನ ಟಿವಿ, ಪೋನ್ ಸಿನಿಮಾ ಧಾರಾವಾಹಿಗಳಲ್ಲಿ ಸಿಗಲಾರದ ಪ್ರಾಕೃತಿಕ ತ್ರಪ್ತಿ ಅಗಿನ ಬಾಲ್ಯದಲ್ಲಿತ್ತು. ಎಲ್ಲಕ್ಕಿಂತಲೂ ತುಂಟತಮ್ಮನಿಂದ ಪಡುತ್ತಿದ್ದ ಪಾಡು ಈಗಲೂ ನಗು ಬರಿಸುತ್ತದೆ.ಇದೇಒಂದು ಪುಸ್ತಕವಾಯಿತು. ೩೬ದೇಶಗಳ ನ್ನು ಸತ್ತಿ ಬಂದಿರುವ ಮತ್ತು ಇಪ್ಪತ್ತುಬಾರಿ ಅಮೆರಿಕಾಕೆ ಹೋಗಿಬಂದಿರುವ ಈಗಲೂ ಸುತ್ತುತ್ತಲೇ ಇರುವ ತಮ್ಮನಿಗೇ ಸಂಬಂಧ ಪಟ್ಟಂತೆ ಈ ಹೆಸರನ್ನು ಸೂಚಿಸಿದ್ದು ಶ್ರೀ ಮುಕುಂದ್ ರಾಜ್ ರವರು. ಈ ಬಾಲ್ಯಕಥನಕ್ಕೆ ನಮ್ಮ ಮುಂದಿನ ಜೀವನಗಾಥೆಯನ್ನು ಸೇರಿಸದೆ ಬರೀ ಬಾಲ್ಯ ಕಥೆ ಅದಾಗಬೇಕಿತ್ತು.ಅದರಿಂದ ಪ್ರವಾಸಕಥನ ವನ್ನು ಬೇರ್ಪಡಿಸಬೇಕೆಂಬ ವಿಚಾರನಡೆಯುತ್ತಿದೆ.ಇದನ್ನು ಬರೆದಿದ್ದು ಎಷ್ಟು ಅನಿರೀಕ್ಷಿತವೋ ಕನ್ನಡ ಸಾಹಿತ್ಯ ಪರಿಷತ್ ನಿಂದ ಪ್ರಶಸ್ತಿ ಬಂದಿರುವುದೂ ಅಷ್ಟೆ ಅನಿರೀಕ್ಷಿತ.ಇದರಿಂದ ಉತ್ಸಾಹಿತಳಾಗಿ ನನ್ನಿಂದಮತ್ತೊಂದು ಪುಸ್ತಕ. “ಪೂರ್ವಿಕರು ಬರೆಸಿಕೊಂಡಿತು.ಮತ್ತೆ ಒಂದು ಬರೆವಣಿಗೆ ಸಾಗಿದೆ.ಇದಕ್ಕೆಲ್ಲ ನಿಮ್ಮಂತಹ ಓದುಗರ ಪ್ರೋತ್ಸಾಹವೇ ಕಾರಣ.ಮತ್ತೊಮ್ಮೆ ವಂದನೆಗಳು

  2. Ravi Varma says:

    nagatihalli yavara baraha nanage tumbaa ista..adu manatattuvantiruttade…

  3. Shruthi Sharma says:

    ನಿಮ್ಮ ಸೊಗಸಾದ ಬರಹ ಓದಿ ನಾನೂ ‘ಚಂದಿರನೇತಕೆ ಓಡುವನಮ್ಮ’ ಓದಬೇಕೆನಿಸುತ್ತಿದೆ.. 🙂

  4. Sneha Prasanna says:

    ಹೌದು…ನಂಗು ಹಾಗೆ ಅನಿಸುತಿದೆ.. ಉತ್ತಮವಾದ ನಿರೂಪಣೆ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: