ಲಹರಿ

ಶರಣೆಯರ ಮೌಲ್ವಿಕ ಚಿಂತನೆಗಳು

Share Button

ಹನ್ನೆರಡನೆಯ ಶತಮಾನವನ್ನು ಕರ್ನಾಟಕದ ಸುವರ್ಣಯುಗ ಎಂದೇ ಕರೆಯಬಹುದು. ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣದಲ್ಲಿ ನಡೆದ ಸಾಮಾಜಿ ಸಾಂಸ್ಕೃತಿಕ ಧಾರ್ಮಿಕ ಕ್ರಾಂತಿಯು ನೂರಾರು ಶರಣರನ್ನು ತನ್ನತ್ತ ಸೆಳೆದಿತ್ತು. ಹೆಸರಿಗೆ ಅನುರೂಪವಾದ ಕಲ್ಯಾಣ ನಗರವು ಶೋಷಿತ ವರ್ಗದವರೆಲ್ಲರ ಕಲ್ಯಾಣಕ್ಕೆ ನಾಂದಿ ಹಾಡಿತ್ತು. ಕಾಯಕ, ಸಮಾನತೆ, ಆಧ್ಯಾತ್ಮಿಕ ಚಿಂತನೆಗಳ ಮಹಾಪೂರವೇ ಕಲ್ಯಾಣದತ್ತ ಸಾಗಿತ್ತು. ತಮ್ಮ ಬದುಕಿನ ಅನುಭವದಿಂದಲೇ ಹೊರಬಂದ ಹಾಡುಗಳನ್ನು ವಚನಗಳ ರೂಪದಲ್ಲಿ ಅನುಭವ ಮಂಟಪದ ಶರಣರ ಮುಂದೆ ಹಾಡಿದರು, ಚರ್ಚಿಸಿದರು, ತಮ್ಮ ವಾದಗಳನ್ನು ಮಂಡಿಸಿದರು. ಸುಮಾರು ಒಂಭತ್ತು ಶತಮಾನಗಳ ಹಿಂದೆಯೇ ಸುಮಾರು ಮೂವತ್ತೈದು ಶರಣೆಯರು ಕಲ್ಯಾಣದಲ್ಲಿ ತಮ್ಮ ವಚನಗಳ ಮೂಲಕ ಜಾತಿ, ವರ್ಣ, ಲಿಂಗಭೇಧಗಳಿಂದ ಶೋಷಿತರಾಗಿದ್ದ ಜನರ ನೋವಿಗೆ ಧ್ವನಿಯಾದರು. ಇವರಲ್ಲಿ ಪ್ರಮುಖರಾದವರು – ಅಕ್ಕಮಹಾದೇವಿ, ಅಕ್ಕನಾಗಮ್ಮ, ಗಂಗಾಂಬಿಕೆ, ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ, ಕದಿರೆ ರೆಮ್ಮವ್ವೆ, ಆಮುಗೆ ರಾಯಮ್ಮ, ದುಗ್ಗಳೆ, ಸತ್ಯಕ್ಕ, ಸೂಳೆ ಸಂಕವ್ವೆ, ಬೊಂತಾದೇವಿ ಮುಂತಾದವರು.

ನಾನಿಂದು ಗೌಪ್ಯವಚನಕಾರ್ತಿಯರ ಕೆಲವು ವಚನಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ –

ಆಯ್ದಕ್ಕಿ ಲಕ್ಕಮ್ಮ ತನ್ನ ಪತಿ ಆಯ್ದಕ್ಕಿ ಮಾರಯ್ಯನಿಗೆ ನೀಡಿದ ಎಚ್ಚರಿಕೆಯನ್ನು ನೋಡಿ- ‘ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ / ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ / ಈಸಕ್ಕಿ ಆಸೆ ನಿಮಗೇಕೆ ? ಈಶ್ವರನೊಪ್ಪ / ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯಾ’ ಆಯ್ದಕ್ಕಿ ಮಾರಯ್ಯ ಕಲ್ಯಾಣದ ಬೀದಿಗಳಲ್ಲಿ ಚೆಲ್ಲಿದ ಅಕ್ಕಿಯನ್ನು ಆಯುವ ಕಾಯಕ ಮಾಡುತ್ತಿರುತ್ತಾನೆ. ಒಮ್ಮೆ ಅಗತ್ಯಕ್ಕಿಂತ ಹೆಚ್ಚು ಅಕ್ಕಿಯನ್ನು ತಂದಾಗ ಅವನ ಮಡದಿಯಾದ ಲಕ್ಕಮ್ಮ ಹೇಳುವ ಮಾತುಗಳಿವು. ಸರಳವಾದ ಭಾಷೆ, ಅವಳ ಕಾಯಕನಿಷ್ಠೆ ಮತ್ತು ಭಕ್ತಿಯನ್ನು ಬಿಂಬಿಸುತ್ತದೆ. ಪುರುಷಪ್ರಧಾನ ಸಮಾಜದಲ್ಲಿ ಗಂಡಿನದೇ ಯಜಮಾನಿಕೆ, ಅವನು ಮಾಡಿದ ಕೆಲಸದಲ್ಲಿ ತಪ್ಪುಗಳನ್ನು ಎತ್ತಿ ತೋರಿಸುವಂತಿಲ್ಲ. ಆದರೆ ಅವನ ಮಡದಿ ಲಕ್ಕಮ್ಮ ಅವನನ್ನು ಜಾಗೃತಗೊಳಿಸುವಳು, ಆಸೆಯೆಂಬುದು ವಿನಾಶಕ್ಕೆ ದಾರಿ ಎಂದು ಎಚ್ಚರಿಸುವಳು. ಹಾಗೆಯೇ ಪ್ರಭುತ್ವದ ಭ್ರಷ್ಟತನವನ್ನೂ ತೋರುವ ಧೈರ್ಯವೂ ಅವಳಲ್ಲಿ ಕಾಣುವುದು. ಕಾಯಕ ಮತ್ತು ದಾಸೋಹಗಳನ್ನು ನಿಷ್ಠೆಯಿಂದ ಮಾಡುವ ಶರಣರಲ್ಲಿ ಆಸೆ ಮತ್ತು ರೋಷ ಇರಲೇಬಾರದು ಎಂದು ತಿಳಿ ಹೇಳುತ್ತಾಳೆ.

ಲಕ್ಕಮ್ಮನ ಮತ್ತೊಂದು ವಚನವನ್ನು ನೋಡೋನ ಬನ್ನಿ – ‘ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ / ಚಿತ್ತಶುದ್ಧದಲ್ಲಿ ಕಾಯಕ ಮಾಡಿದರೆ / ಎತ್ತ ನೋಡಿದರತ್ತ ಲಕ್ಷ್ಮಿ ಇರುತ್ತಾಳೆ / ಮಾರಯ್ಯಪ್ರಿಯ ಅಮರೇಶ್ವರ ಲಿಂಗ’ ಇಲ್ಲಿ ಕಾಯಕದ ಮಹತ್ವ ಹಾಗೂ ಮನದ ಶುದ್ಧತೆ ಬಗ್ಗೆ ತಿಳಿಸುತ್ತಿರುವಳು. ಶುದ್ಧ ಮನಸ್ಸಿನಿಂದ ಪ್ರಾಮಾಣಿಕವಾಗಿ ಕಾಯಕ ಮಾಡಿದಲ್ಲಿ ಸಮೃದ್ಧಿ ತಾನಾಗಿ ಬರುವುದು ಎಂಬ ಸಂದೇಶ ನೀಡುತ್ತಿದ್ದಾಳೆ.

ಬೊಂತಾದೇವಿ – ಈಕೆ ಕಾಶ್ಮೀರದ ಮಾಂಡವ್ಯ ರಾಜಕುವರಿ, ಮೋಳಿಗೆ ಮಾರಯ್ಯನವರ ಸಹೋದರಿ. ಇವಳ ಮೂಲನಾಮ ನಿಜದೇವಿ. ಕಲ್ಯಾಣಕ್ಕೆ ಬಂದವಳು ಬಡಬಗ್ಗರಿಗಾಗಿ ಕೌದಿ ಹೊಲೆಯುತ್ತಾ, ರೋಗಗ್ರಸ್ತ ಬಡವರಿಗೆ ಔಷಧೋಪಚಾರವನ್ನು ಮಾಡುತ್ತಿದ್ದಳು. ಬೊಂತಾ ಎಂದರೆ ‘ಕೌದಿ’, ಹಾಗಾಗಿ ಇವಳ ಹೆಸರು ಬೊಂತಾದೇವಿ ಎಂದಾಯಿತು. ಎಲೆಮರೆಯ ಕಾಯಂತೆ ಇವಳು ದೀನ ದಲಿತರ ಸೇವೆಯಲ್ಲಿ ತೊಡಗಿಸಿಕೊಂಡಳು. ಅವಳ ಒಂದು ವಚನವನ್ನು ಕೇಳೋಣ ಬನ್ನಿ – ‘ಊರ ಒಳಗಣ ಬಯಲು, ಊರ ಹೊರಗೆ ಬಯಲೊಂದುಂಟೆ / ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆ ಬಯಲೊಂದುಂಟೆ’ ಬೊಂತಾದೇವಿಯು ‘ಮೇಲು ಜಾತಿ, ಕೀಳು ಜಾತಿ ಎಂದು ಹೊಡೆದಾಡುತ್ತಿರುವವರಿಗೆ ಸವಾಲು ಹಾಕುತ್ತಿದ್ದಾಳೆ, ‘ಮಾನವ ಕುಲವೊಂದೆ, ಭಗವಂತನೊಬ್ಬನೇ ಇರುವಾಗ ಈ ಉಚ್ಛ ಕುಲ, ನೀಚ ಕುಲ ಎಲ್ಲಿಯದು. ಇವಳ ಕಾವ್ಯನಾಮ ‘ಬಿಡಾಡಿ’ ಶಿವನು ಸರ್ವತಂತ್ರಸ್ವತಓತ್ರನು ಎನ್ನುವುದರ ಸಂಕೇತವೇ ಈ ಕಾವ್ಯನಾಮ. ಮಾನವೀಯತೆಯ ಹರಿಕಾರಳಾದ ಬೊಂತವ್ವೆಯಲ್ಲಿ ಪರೋಪಕಾರ ಭಾವ, ನೈತಿಕ ಜೀವನ ಮಾರ್ಗದ ಸೂತ್ರಗಳನ್ನು ಕಾಣಬಹುದು.

ಈಗ ಸತ್ಯಕ್ಕನ ವಚನವೊಂದನ್ನು ಕೇಳೋಣ ಬನ್ನಿ -‘ಲಂಚವಂಚನಕ್ಕೆ ಕೈಯಾನದ ಭಾಷೆ / ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ / ನಾನು ಕೈ ಮುಟ್ಟಿ ಎತ್ತಿದೆನಾದರೆ / ನಿಮ್ಮಾಣೆ ನಿಮ್ಮ ಪ್ರಮಥರಾಣೆ / ಅದೇನು ಕಾರಣವೆಂದರೆ ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ / ಇಂತಲ್ಲದೆ ನಾನು ಅಳೀಮನವಮಾಡಿ / ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ / ನೀನಾಗಲೇ ಎನ್ನ ನರಕದಲ್ಲಿ ಅದ್ದಿ / ನೀನೆದ್ದು ಹೋಗಾ ಶಂಭುಜಕೇಶ್ವರಾ.’ ಈ ವಚನದಲ್ಲಿ ಸತ್ಯಕ್ಕನು ಬ್ರಷ್ಠಾಚಾರ, ಮೋಸ, ವಂಚನೆಗಳ ವಿರುದ್ಧ ಧ್ವನಿ ಎತ್ತುತ್ತಾಳೆ. ಸತ್ಯಕ್ಕನ ಮತ್ತೊಂದು ವಚನವನ್ನು ಕೇಳೋಣ ಬನ್ನಿ, ‘ಅರ್ಚನೆ ಪೂಜೆ ನೇಮವಲ್ಲ / ಮಂತ್ರ ತಂತ್ರ ನೇಮವಲ್ಲ / ಧೂಪ ದೀಪಾರತಿ ನೇಮವಲ್ಲ / ಪರಧನ ಪರಸ್ತ್ರೀ ಪರದೂಳಿಗೆರಗೆಪ್ಪುದೇ ನೇಮ / ಶಂಭುಜಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯ ನೇಮ’ – ಅಂತರಂಗದಲ್ಲಿ ಮೋಸ, ದುರಾಸೆ, ದುರಾಲೋಚನೆಗಳ ಸುಳಿಗೆ ಸಿಕ್ಕು ಬಹಿರಂಗದಲ್ಲಿ ಪೂಜೆ, ಅರ್ಚನೆ, ಮಂತ್ರಗಳ ಜಪಿಸಿದರೆ ಏನು ಲಾಭ? ಸತ್ಯಕ್ಕ ತಮ್ಮ ಆದರ್ಶಗಳನ್ನು ಪಠಿಸುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ವಚನಗಳ ಮೂಲಕ ತಿದ್ದಲು ಯತ್ನಿಸುತ್ತಾಳೆ. ಜನಸಾಮಾನ್ಯರಲ್ಲಿ ಬೇರು ಬಿಟ್ಟಿರುವ ಮೂಢನಂಬಿಕೆಗಳು, ಅನಾಚಾರ, ಅನೀತಿಗಳ ವಿಡಂಬನೆ ಮಾಡುತ್ತಾಳೆ.

ಸೂಳೆ ಸಂಕವ್ವನ ವಚನವನ್ನು ಕೇಳೋಣ ಬನ್ನಿ – ‘ಒತ್ತೆಯ ಹಿಡಿದು, ಮತ್ತೊತ್ತೆಯ ಹಿಡಿಯೆ / ಹಿಡಿದೆಡೆ ಬತ್ತಲೆ ನಿಲಿಸಿ ಕೊಲುವರಯ್ಯಾ / ವ್ರತಹೀನನರಿದು ಬೆರೆದೆಡೆ ಕಾದ ಕತ್ತಿಯಲ್ಲಿ / ಕೈ ಕಿವಿ ಮೂಗ ಕೊಯ್ವರಯ್ಯಾ / ಒಲ್ಲನೊಲ್ಲೆ ಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ’ ಸಮಾಜದಿಂದ ಬಹಿಷ್ಕೃತರಾದ ಪಂಗಡದಿಂದ ಬಂದ ಸಂಕವ್ವನ ವಚನವಿದು. ವೇಶ್ಯೆಯರ ನೋವು ನರಳಾಟದ ಚಿತ್ರಣ ಇಲ್ಲಿದೆ. ಒಬ್ಬರ ಒತ್ತೆಯಾಳಾಗಿ ಮತ್ತೊಬ್ಬರ ಜೊತೆ ಸಖ್ಯ ಬೆಳೆಸಿದರೆ ಸಮಾಜ ನೀಡುವ ಶಿಕ್ಷೆಯ ಕರಾಳತೆಯನ್ನು ನಮ್ಮ ಮುಂದಿಡುತ್ತಾಳೆ.

ಅಕ್ಕಮ್ಮ – ‘ಚಿನ್ನ ಒಡೆದೆಡೆ ಕರಗಿದರೆ ರೂಪಪ್ಪುದಲ್ಲದೆ /ಮುತ್ತು ಒಡೆದು ಕರಗಿದೆಡೆ ರೂಪಪ್ಪುದೇ? / ಮರ್ತ್ಯದ ಮನುಜ ತಪ್ಪಿದರೊಪ್ಪಬೇಕಲ್ಲವೆ / ಸದ್ಭಕ್ತ ಸದೈವ ತಪ್ಪಿದೊಡೆ ಒಪ್ಪಬಹುದೇ?’ ಈ ವಚನದಲ್ಲಿ ಅಕ್ಕಮ್ಮ ಸಮಾಜದ ಮುಖಂಡರು ದಾರಿ ತಪ್ಪಿದರೆ ಇಡೀ ಮಾನವಕುಲಕ್ಕೆ ಅವರು ಶಾಪಗ್ರಸ್ತರಾಗುವರು ಎಂಬ ಸಂದೇಶವನ್ನು ಚಿತ್ರಿಸುತ್ತಾಳೆ. ಇವಳ ಅಂಕಿತನಾಮ ವಿಶೇಷವಾಗಿದೆ, ‘ಆಚಾರವೇ ಪ್ರಾಣವಾದ ರಾಮೇಶ್ವರಲಿಂಗ’.

ಕದಿರೆ ರೆಮ್ಮವ್ವೆ –‘ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ / ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು / ನಿಂದ ಬೊಂಬೆ ವiಹಾರುದ್ರ’ ಈ ವಚನದಲ್ಲಿ ರೆಮ್ಮವ್ವೆ ಜಾತಿಯನ್ನು ಧಿಕ್ಕರಿಸುವ ದಿಟ್ಟತನವನ್ನು ತೋರುತ್ತಾ, ತಾ ಮಾಡುವ ಕಾಯಕದಲ್ಲಿ ದೇವರನ್ನು ಕಾಣುತ್ತಾಳೆ. ಈ ವಚನದ ಮುಂದಿನ ಸಾಲುಗಳನ್ನು ನೋಡಿ, ‘ಕದಿರು ಮುರಿಯೆ ಏನೂ ಇಲ್ಲ / ವ್ರತಹೀನನ ನೆರೆಯಲಿಲ್ಲ, ಗುಮ್ಮೇಶ್ವರಾ’ ಬಟ್ಟೆ ನೇಯಲು ಕದಿರು ಹೇಗೆ ಅಗತ್ಯವೋ ಹಾಗೆಯೇ ಬದುಕಿನಲ್ಲಿ ವ್ರತಾಚರಣೆಗಳೂ ಮುಖ್ಯ. ಕದಿರು ಮುರಿಯಲು ಹೇಗೆ ನೇಯ್ಗೆ ನಿಲ್ಲುವದೂ ಹಾಗೆ ವ್ರತಹೀನರಾಧರೆ ಜೀವನ ವ್ಯರ್ಥ.

ದುಗ್ಗಳೆ – ದಾಂಪತ್ಯ ಜೀವನವನ್ನು ನಡೆಸುತ್ತಲೇ ಮೋಕ್ಷಸಂಪಾದನೆ ಮಾರ್ಗವನ್ನು ತೋರುವಳು ದೇವರ ದಾಸಿಮಯ್ಯನವರ ಪತ್ನಿ ದುಗ್ಗಳೆ, ‘ಭಕ್ತವಾದೊಡೆ ಬಸವಣ್ಣ್ನನಂತಾಗಬೇಕು / ಜಂಗಮನಾದೊಡೆ ಪ್ರಭುದೇವರಂತಾಗಬೇಕು / ತತ್ವದ ಮಾತು ಎನಗೇತಕಯ್ಯಾ ದಾಸಯ್ಯ ಪ್ರಿಯ ರಾಮನಾಥ’. ಇವಳು ಭಕ್ತಿಯೋಗದ ಪಥದಲ್ಲಿ ನಡೆದಳು.

ಅಮುಗೆ ರಾಯಮ್ಮ –‘ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿವವರನಾರನೂ ಕಾಣೆ / ಎನ್ನ ಕಾಲೊಳಗಣ ಮುಳ್ಳ ತೆಗೆಯುವವರಾರನೂ ಕಾಣೆ .. ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು / ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾವೆ ಸುಡಬೇಕು’ ನಮ್ಮ ನಮ್ಮ ತನು ಮನದ ಶುದ್ಧಿಯನ್ನು ಸ್ವತಃ ನಾವೇ ಮಾಡಿಕೊಳ್ಳಬೇಕೇ ವಿನಃ ಬೇರೆಯವರು ಮಾಡಲು ಸಾಧ್ಯವಿಲ್ಲ. ನಮ್ಮ ಬದುಕಿನ ಹಾದಿಯಲ್ಲಿ ಎದುರಾಗುವ ಸಂಕಷ್ಟಗಳನ್ನು ನಾವೇ ದಿಟ್ಟತನದಿಂದ ಎದುರಿಸಬೇಕು. ನಮ್ಮಲ್ಲಿ ಧೈರ್ಯ, ಕೆಚ್ಚು, ಆತ್ಮವಿಶ್ವಾಸ ಇದ್ದಲ್ಲಿ ಮಾತ್ರ ಸಾಧನೆ ಮಾಡಬಹುದು ಎಂದು ಕಿವಿಮಾತು ಹೇಳುತ್ತಾಳೆ.

ರಾಯಮ್ಮನ ಮತ್ತೊಂದು ವಚನದಲ್ಲಿ ಡಾಂಭಿಕ ಸನ್ಯಾಸಿಗಳನ್ನು ಖಂಡಿಸುತ್ತಾಳೆ. ‘ಕಾವಿ ಕಾಷಾಂಬರದ ಹೊದ್ದು ಕಾಮವಿಕಾರಕ್ಕೆ ತಿರುಗುವ / ಕರ್ಮಿಗಳ ಮುಖವ ನೋಡಲಾಗದು / ಮಂಡೆಯ ಬೋಳಿಸಿಕೊಂಡು ತುಂಡುಗಂಬಳಿಯ ಹೊದ್ದೊಡೆ ನಂಬಲಾರೆ ನೆಚ್ಚಲಾರೆ..’

ಈ ಶರಣೆಯರ ವಚನಗಳಲ್ಲಿ ನಾವು ಕಾಣುವ ಮೌಲ್ಯ, ‘ಕ್ರಿಯೆಯನ್ನು ಮರೆತ ಅರಿವು, ಅರಿವನ್ನು ಮರೆತ ಕ್ರಿಯೆ’ ಎರಡೂ ವ್ಯರ್ಥವೇ. ತಮ್ಮ ಅನುಭವದ ಆಧಾರದ ಮೇಲೆ ವಚನಗಳನ್ನು ರಚಿಸುತ್ತಾ, ಅವುಗಳನ್ನು ಅನುಭವ ಮಂಟಪದಲ್ಲಿ ಓದಿ ಚರ್ಚಿಸುವ ಇವರ ಚೈತನ್ಯದ ಕುರುಹಾಗಿದೆ. ತಮ್ಮ ವಚನಗಳಲ್ಲಿ ಜೀವವಿರೋಧಿ ಮೌಲ್ಯಗಳನ್ನು ವಿರೋಧಿಸುತ್ತಾ ಜೀವಪರಮೌಲ್ಯಗಳನ್ನು ಆರಾಧಿಸುವರು. ಸ್ತ್ರೀಪರ ಕಾಳಜಿ ಇವರ ವಚನಗಳಲ್ಲಿ ಕಂಡುಬರುತ್ತದೆ. ಮೌಢ್ಯ ಚಿಂತನೆಗಳ ಖಂಡನೆ, ಢಾಂಭಿಕ ಭಕ್ತಿಯ ವಿಡಂಬನೆ ಹಾಗೂ ಅಸ್ಪೃಶ್ಯತೆಯ ವಿರುದ್ದದ ಧ್ವನಿ ಕೇಳಿ ಬರುತ್ತದೆ. ಇಲ್ಲಿ ನಮಗೆ ಕಂಡು ಬರುವ ಚಿತ್ರಣಗಳು, ‘ನೈತಿಕ ಜೀವನಮಾರ್ಗ, ಪರೋಪಕಾರ ಮನಸ್ಥಿತಿ ಹಾಗೂ ಸಮರ್ಪಣಾಭಾವ’.

ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

2 Comments on “ಶರಣೆಯರ ಮೌಲ್ವಿಕ ಚಿಂತನೆಗಳು

  1. ಬಹಳಷ್ಟು ಮಾಹಿತಿಯನ್ನು ಒಳಗೊಂಡ ಲೇಖನವನ್ನು ಕೊಟ್ಟ ನಿಮಗೆ ಧನ್ಯವಾದಗಳು ಗಾಯತ್ರಿ ಮೇಡಂ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *