ಪರಾಗ

ಶ್ರೀಲಲಿತಾ ಮಕ್ಕಳಮನೆ.

Share Button

ವರ್ಷದಾದಿಯ ಹಬ್ಬ ಯುಗಾದಿ, ಊರಿಗೆ ಊರೇ ಸಡಗರ ಸಂಭ್ರಮದಿಂದ ಅದರ ಆಚರಣೆಯಲ್ಲಿ ಮುಳುಗಿದೆ. ಆದರೆ ಊರಿನ ಜಮೀನುದಾರರಾದ ಸಂಗಪ್ಪನವರ ಮನೆಯಲ್ಲಿ ಮಾತ್ರ ಸೂತಕದ ಛಾಯೆ. ನೀರವ ಮೌನ ಕವಿದಿತ್ತು. ಮನೆಯ ಯಜಮಾನಿ ರುದ್ರಮ್ಮನವರು ಅಭ್ಯಾಸ ಬಲದಿಂದ ಹಬ್ಬದ ಕೆಲಸಗಳಲ್ಲಿ ತೊಡಗಿದ್ದರೂ ಅಲ್ಲಿ ಸಂತಸದ ಸೆಲೆ ಕಾಣಿಸದೆ ದುಃಖದ ಮಬ್ಬು ಆವರಿಸಿತ್ತು. ಮನಸ್ಸಿನಲ್ಲಿ ಹೋದವರ್ಷ ನಡೆದ ದುರಂತದ ಸುತ್ತ ಗಿರಕಿ ಹೊಡೆಯುತ್ತಿತ್ತು. ಹಾಗೆಯೇ ಅವರ ಅಂತರಂಗದಲ್ಲಿ ಅಡಗಿದ್ದ ನೆನಪಿನ ಸುರುಳಿ ಬಿಚ್ಚಿತು.

ಬೆಂಗಳೂರು ಸಮೀಪದ ತಾವರೇಕೆರೆ ಗ್ರಾಮದಲ್ಲಿ ದೊಡ್ಡ ಜಮೀನುದಾರರಾಗಿದ್ದ ಸಂಗಪ್ಪ ಮತ್ತವರ ಧರ್ಮಪತ್ನಿ ರುದ್ರಮ್ಮನವರಿಗೆ ಗಿರಿಧರ ಎಂಬ ಮಗ, ಲಲಿತಾ ಎಂಬ ಮಗಳೂ ಆರತಿಗೊಬ್ಬಳು ಕೀರುತಿಗೊಬ್ಬ ಎಂಬಂತ್ತಿದ್ದರು. ಇಬ್ಬರು ಮಕ್ಕಳೂ ಅಂಚಂದಗಳಲ್ಲಿ, ಗುಣನಡತೆಗಳಲ್ಲಿ ಮತ್ತೊಬ್ಬರಿಗೆ ಮಾದರಿಯೆಂಬಂತೆ ಇದ್ದು. ಅಣ್ಣತಂಗಿಯರ ನಡುವೆ ಪ್ರೀತಿ, ಅನ್ಯೋನ್ಯತೆಗಳು ಅನುಪಮವಾಗಿದ್ದವು. ಅದರಲ್ಲೂ ಅಣ್ಣ ಗಿರಿಧರನಿಗಿಂತಲೂ ಹೆಚ್ಚು ಶಾಂತಸ್ವಭಾವ ಲಲಿತಾಳಲ್ಲಿ ಇತ್ತೆಂದರೆ ಅದು ಅತಿಶಯೋಕ್ತಿಯೇನಲ್ಲ.

ಈಗಿನ ಕಾಲಕ್ಕೆ ತಕ್ಕಂತೆ ಇಬ್ಬರು ಮಕ್ಕಳನ್ನೂ ಪದವೀಧರರನ್ನಗಿ ಮಾಡಿದ್ದರು. ಮಗ ಗಿರಿಧರ ತಂದೆಯ ಅಪಾರ ಜಮೀನುಗಳ ಉತ್ತರಾಧಿಕಾರಿಯಾಗಿ ಕೃಷಿಯಲ್ಲಿಯೇ ಆಸಕ್ತಿ ವಹಿಸಿ ಊರಿನಲ್ಲಿಯೇ ನೆಲೆಗೊಂಡಿದ್ದನು. ಮಗಳಿಗೆ ವಿವಾಹ ಮಾಡಲು ಸಂಗಪ್ಪನವರು ಸೂಕ್ತ ವರಾನ್ವೇಷಣೆಯಲ್ಲಿ ತೊಡಗಿದ್ದರು. ಯಜಮಾನಿ ರುದ್ರಮ್ಮನವರಿಗೆ ಮಗಳನ್ನು ಯಾರಾದರೂ ಸರ್ಕಾರಿ ಕೆಲಸದಲ್ಲಿರುವ ವರನಿಗೆ ಕೊಡಬೇಕೆಂಬ ಹಂಬಲ. ಹೀಗಾಗಿ ಗುರುತು ಪರಿಚಯವಿರುವ ಆಪ್ತರೆಲ್ಲರಿಗೆ ಅಂತಹ ವರನಿದ್ದರೆ ತಿಳಿಸಬೇಕೆಂದು ಕೋರಿದ್ದರು. ಸಾಕಷ್ಟು ಕುಟುಂಬಗಳಿಂದ ವಿವರಗಳು, ಭಾವಚಿತ್ರಗಳು ಬಂದಿದ್ದವು. ಯಾವುದೂ ಕುದುರಲಿಲ್ಲ. ಏಕೆಂದರೆ ಗಂಡನ ಮನೆಯಲ್ಲಿ ಹೆಚ್ಚು ಜನರಿರಬಾರದು, ಮಗಳಿಗೆ ಅಲ್ಲಿ ಹೆಚ್ಚಿನ ಜವಾಬ್ದಾರಿಯ ಹೊಣೆ ಹೆಗಲಿಗೆ ಬೀಳಬಾರದು. ಮಗಳು ಇಷ್ಟಪಟ್ಟರೆ ಕೆಲಸಕ್ಕೆ ಹೋಗಲು ಅನುಮತಿಸಬೇಕು. ಮಾತಾಪಿತರ ಈ ಶರತ್ತುಗಳಿಗೆ ಬದ್ಧರಾದವರಾರೂ ಸರಿಹೊಂದಲಿಲ್ಲ. ಪ್ರಯತ್ನಗಳು ಮುಂದುವರಿದಿದ್ದವು. ಅಂತೂ ಇಂತೂ ಜಮೀನುದಾರ ದಂಪತಿಗಳ ಶರತ್ತಿಗೆ ಪೂರಕವಾಗಿದ್ದ ಕುಟುಂಬವೊಂದರ ವರನ ಪ್ರಸ್ತಾಪ ಮಧ್ಯಸ್ಥಿಕೆದಾರರಿಂದ ಬಂದಿತು.

ಬೆಂಗಳೂರಿನಲ್ಲಿ ರೈಲ್ವೇ ಇಲಾಖೆಯಲ್ಲಿ ಗಾರ್ಡ್ ಆಗಿ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತರಾಗಿದ್ದ ಶ್ರೀಪತಿ ಮತ್ತವರ ಧರ್ಮಪತ್ನಿ ಜಾನಕಿಯವರೇ ಈ ಅದೃಷ್ಟವಂತರು. ಅವರಿಗೂ ಇಬ್ಬರು ಮಕ್ಕಳು. ಮಗಳು ಮಂದಾರ ಹಿರಿಯವಳು ಮದುವೆಯಾಗಿತ್ತು. ಅವಳು ಪೋಸ್ಟಲ್ ಡಿಪಾರ್ಟ್ಮೆಂಟಿನಲ್ಲಿ ಕೆಲಸದಲ್ಲಿದ್ದಳು. ಅವಳ ಪತಿ ಸ್ವಂತ ಇಂಟೀರಿಯರ್ ಡೆಕೋರೇಷನ್ ಕಂಪನಿ ತೆರೆದು ಸ್ವಂತ ಉದ್ಯೋಗಿಯಾಗಿದ್ದ. ಅವರಿಗೊಬ್ಬ ಮಗನಿದ್ದ ಗೌತಮ. ಮಗ ಮೋಹನ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಉದ್ಯೋಗಸ್ಥನಾಗಿದ್ದ. ಅವನಿಗಾಗಿಯೇ ಈಗ ಪ್ರಸ್ತಾಪ ಬಂದಿತ್ತು.

ಶ್ರೀಪತಿಯವರು ತಾವು ಉದ್ಯೋಗದಲ್ಲಿರುವಾಗಲೆ ಇಲಾಖೆಯಿಂದ ಸಾಲ ಪಡೆದು ಬೆಂಗಳೂರಿನ ಬಸವನಗುಡಿಯಲ್ಲಿ ಮೂರು ಬೆಡ್‌ರೂಮುಗಳುಳ್ಳ ಒಳ್ಳೆಯ ಮನೆಯನ್ನು ಕಟ್ಟಿಸಿದ್ದರು. ಜೊತೆಗೆ ಅವರ ಸ್ವಂತ ಊರಾದ ಬಿಡದಿಯಲ್ಲಿ ಪಿತ್ರಾರ್ಜಿತವಾಗಿ ಬಂದಿದ್ದ ಸ್ವಲ್ಪ ಜಮೀನು ಮತ್ತು ಸಣ್ಣದೊಂದು ಮನೆಯಿತ್ತು. ಅವರು ನೌಕರಿಗಷ್ಟೇ ಅಂಟಿಕೊಳ್ಳದೆ ಲೇವಾದೇವಿ ಮಾಡುವುದರಲ್ಲಿ ಪಳಗಿಕೊಂಡಿದ್ದರು. ಹೀಗಾಗಿ ತಕ್ಕಮಟ್ಟಿಗೆ ಅನುಕೂಲಸ್ಥರ ಗುಂಪಿಗೆ ಸೇರಿದವರಾಗಿದ್ದರು. ಎಲ್ಲ ವಿವರಗಳನ್ನು ತಿಳಿದ ಸಂಗಪ್ಪ ದಂಪತಿಗಳು ಸಂತೋಷವಾಯಿತು. ಮಗಳ ಜಾತಕ ಕಳುಹಿಸಿದರು. ವರನ ಜಾತಕ ವಧುವಿನ ಜಾತಕದೊಂದಿಗೆ ಚೆನ್ನಾಗಿ ಹೊಂದಿಕೆಯಗುತ್ತವೆಂದು ಖಾತರಿ ಪಡಿಸಿಕೊಂಡರು. ಶ್ರೀಪತಿಯವರು ಸಕುಟುಂಬ ಸಮೇತರಾಗಿ ತಾವರೇಕೆರೆಗೆ ಆಗಮಿಸಿ ವಧುಪರೀಕ್ಷೆ ನಡೆಸಿದರು. ಮೋಹನ ಮಾತ್ರ ತನಗೆ ಹೆಂಡತಿಯಾಗಿ ಬರುವವಳು ಹೊರಗಡೆ ಉದ್ಯೋಗಕ್ಕೆ ಹೋಗುವುದು ತನಗಿಷ್ಟವಿಲ್ಲ ಎಂದು ಸ್ಪಷ್ಟವಾಗಿ ಹೇಳಿದನು.

ಸಂಗಪ್ಪ ಕುಟುಂಬದವರು ತಮ್ಮತಮ್ಮಲ್ಲಿ ಮಾತುಕತೆಯಾಡಿ “ನಗರ ಪ್ರದೇಶದಲ್ಲಿ ಓದಿದವರು ಸಾಮಾನ್ಯವಾಗಿ ಉದ್ಯೋಗ ಮಾಡಲು ಬಯಸುತ್ತಾರೆ. ಅದಕ್ಕೆ ನಾವೂ ಹಾಗೆ ಅವಕಾಶವಿದ್ದರೆ ಹೋಗಲಿ ಎಂದುಕೊಂಡಿದ್ದೆವು. ನಮ್ಮ ಮಗಳಿಗೂ ಅದು ಬೇಕೇಬೇಕೆಂಬ ಹಠವಿಲ್ಲ. ನಿಮ್ಮಿಷ್ಟದಂತೆಯೇ ಆಗಲೆಂದು ಒಪ್ಪಿಗೆ ಸೂಚಿಸಿದರು. ವರನ ಕಡೆಯಿಂದಲೂ ಸಕರಾತ್ಮಕವಾಗಿ ಉತ್ತರ ದೊರಕಿತು. ಮಾತುಕತೆಯಾಗಿ ಒಪ್ಪಂದವೂ ಆಯಿತು. ಇನ್ನು ಕೊಟ್ಟು ತೆಗೆದುಕೊಳ್ಳುವ ಬಾಬ್ತುಗಳು. ವರನ ಕಡೆಯವರಿಂದ “ಯಾವುದೇ ವಿಶೇಷ ಬೇಡಿಕೆಯಿಲ್ಲ, ನೀವೇನು ಕೊಡುತ್ತೀರೋ ನೀವುಕೊಡಿ, ನಮಗೇನು ಇಷ್ಟವಾಗುತ್ತದೋ ಅದನ್ನು ನಾವು ಕೊಡುತ್ತೇವೆ.” ಎಂದು ಮಾತು ಮುಗಿಸಿದರು. ಈ ಮಾತುಗಳನ್ನು ಕೇಳಿ ಸಂಗಪ್ಪ ದಂಪತಿಗಳಿಗೆ ಹಿಗ್ಗೋ ಹಿಗ್ಗಾಯಿತು. ರುದ್ರಮ್ಮನವರಿಗೆ ಸರ್ಕಾರಿ ಉದ್ಯೋಗ ಮಾಡುವ ಅಳಿಯ ದೊರಕಿದ ಎಂದು ಸಂತಸವಾಯಿತು. ಶಕ್ತಿಮೀರಿ ಕೊಟ್ಟುಬಿಟ್ಟು ಭರ್ಜರಿಯಾಗಿ ವಿವಾಹ ಮಾಡಿಕೊಟ್ಟರು.

ಮಗನ ವಿವಾಹವಾಗಿ ಸೊಸೆಯನ್ನು ಮನೆ ತುಂಬಿಸಿಕೊಂಡ ಮೇಲೆ ಶ್ರೀಪತಿ ದಂಪತಿಗಳು ತಮ್ಮೂರು ಬಿಡದಿಗೆ ಹೊರಟುಹೋದರು. ಆಗಾಗ್ಗೆ ಬಂದು ಹೋಗುತ್ತಿದ್ದರು. ಲಲಿತಾಳಿಗೆ ವಿಶಾಲವಾದ ಮನೆ, ಅದೂ ನಗರದ ಮುಖ್ಯಭಾಗದಲ್ಲಿ, ಬೆಳಗ್ಗೆ ಹೋದರೆ ಸಂಜೆಗೆ ಹಿಂದಿರುಗುವ ಪ್ರೀತಿಯ ಗಂಡ, ಸಾಕಷ್ಟು ವಿರಾಮದ ಸಮಯ. ಜೊತೆಯಾಗಿ ಬೇಕೆಂದ ಕಡೆ ಅಲೆದಾಟ. ಹೀಗಾಗಿ ಸಂಸಾರ ಜೀವನ ಅದೆಷ್ಟು ಸುಖಮಯ ಅನ್ನಿಸಿತು. ಅತ್ತೆ ಮಾವ ಬಂದರೆ ಒಂದೆರಡು ದಿವಸಗಳ ಮಟ್ಟಿಗೆ ಇರುತ್ತಿದ್ದರು. ಅವರಿಗೆ ಸೊಸೆ ಅಚ್ಚುಕಟ್ಟಾಗಿ ಮನೆಯನ್ನು ನಡೆಸಿಕೊಂಡು ಹೋಗುತ್ತಿರುವುದನ್ನು ಕಂಡು ಮೆಚ್ಚಿಕೆಯಾಯಿತು.

ತಾವರೆಕೆರೆಯಲ್ಲಿ ಲಲಿತಾಳ ಅಣ್ಣ ಗಿರಿಧರನಿಗೂ ವಿವಾಹವಾಗಿ ಅತ್ತಿಗೆಯೂ ಬಂದಳು. ಎರಡೂ ಮನೆಗಳಿಗೆ ಓಡಾಡಿಕೊಂಡು ಸಂತೋಷದಿಂದ ಕಾಲಕಳೆಯುತ್ತಿದ್ದ ಲಲಿತಾಳಿಗೆ ಪತಿ ಮೋಹನನ ಅಕ್ಕನಿಗೆ ಬೆಂಗಳೂರಿಗೆ ವರ್ಗಾವಣೆಯಾಗಿದೆಯೆಂಬ ಸುದ್ಧಿ ಕಸಿವಿಸಿ ಉಂಟುಮಾಡಿತು. ಮದುವೆಯಾಗಿ ಕಳೆದ ಎರಡು ವರ್ಷಗಳಲ್ಲಿ ಮೋಹನನ ಅಕ್ಕ ಭಾವನವರು ಹಲವು ಬಾರಿ ಬಂದು ಹೋಗಿದ್ದರು. ಅವರ ಗುಣಸ್ವಭಾವಗಳ ಪರಿಚಯವಾಗಿತ್ತು. ಅಕ್ಕ ಮನೆಗೆ ಬಂದರೆ ಅತಿಥಿಯಾಗಿರುವುದರ ಬದಲು ತಾನೇ ಯಜಮಾನಿಯೆಂಬಂತೆ ನಡೆದುಕೊಳ್ಳುತ್ತಿದ್ದಳು. ತಮ್ಮ ಮೋಹನ ಅವಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ. ಇವಳನ್ನು ಯಾವುದೇ ಲೆಕ್ಕಕ್ಕೆ ಪರಿಗಣಿಸುತ್ತಿರಲಿಲ್ಲ. ಇದರಿಂದ ಲಲಿತಾಳಿಗೆ ತುಂಬ ಬೇಸರವಾಗುತ್ತಿತ್ತು. ಇನ್ನು ಅಕ್ಕನ ಮಗನೋ ಬಾಲವಿಲ್ಲದ ಕೋತಿಯಂತಿದ್ದ. ಅವನ ಉಪಟಳಕ್ಕೆ ಮಿತಿಯೇ ಇರಲಿಲ್ಲ. ಇನ್ನು ಆಕೆಯ ಪತಿಯಂತೂ ಅದೇನು ಕಂಪನಿ ನಡೆಸುತ್ತಿದ್ದನೋ ತಿಳಿಯದು. ಯಾವಾಗಲೂ ಹೆಂಡತಿಯ ಬಾಲದಂತೆ ಇರುತ್ತಾ ‘ಯೆಸ್‌ಮೇಡಂ’ ಎಂಬ ಆಜ್ಞಾಧಾರಕನಂತೆ ನಡೆದುಕೊಳ್ಳುತ್ತಿದ್ದ. ಗಂಡನಿಗೆ ಇದನ್ನು ಹೇಳಿದರೆ ಅವನು “ಮೊದಲಿನಿಂದಲೂ ನಾವು ಅಕ್ಕ ತಮ್ಮನ ಮಧ್ಯೆ ಇಷ್ಟೇ ಸಲುಗೆ ಕಣೇ. ಅವಳು ಮಾತನಾಡುವುದೇ ಹೆಚ್ಚು. ನಮ್ಮ ಭಾವನ ಕೈಕೆಳಗೆ ಹಲವಾರು ಕೆಲಸಗಾರರು ಕೆಲಸ ಮಾಡುತ್ತಿರುತ್ತಾರೆ. ಇವರೊಮ್ಮೆ ಹೋಗಿ ಕೆಲಸ ನಡೆಯುವ ಕಡೆ ಅವರೆಲ್ಲರಿಗೂ ಕೆಲಸವನ್ನು ಹಂಚಿಕೆಮಾಡಿ ಬರುತ್ತಾರೆ. ಇಲ್ಲಿಂದಲೇ ಅವರೆಲ್ಲರ ಮೇಲುಸ್ತುವಾರಿ ಮಾಡುತ್ತಾರೆ. ಅದಕ್ಕೇ ಅಕ್ಕನಿಗೆ ಯಾವ ಊರಿಗೆ ವರ್ಗವಾದರೂ ಅವರು ಅಕ್ಕನ ಜೊತೆಯಲ್ಲೇ ಇರುತ್ತಾರೆ. ಇನ್ನು ಅವರ ಮಗ ಗೌತಮನಿನ್ನೂ ಹುಡುಗು ಬುದ್ಧಿಯವನು. ಅವನನ್ನು ಅಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಳ್ಳುವುದು ಬೇಡ. ಈ ಮನೆಗೆ ಯಜಮಾನಿ ನೀನೇ ಅಲ್ಲವೇ”. ಎಂದು ಸಮಯೋಚಿತವಾಗಿ ಲಲಿತಾಳಿಗೆ ಸಮಾಧಾನ ಹೇಳಿ ಸುಮ್ಮನಾಗಿಸುತ್ತಿದ್ದ. ಇನ್ನು ಅವರಕ್ಕ ಬೆಂಗಳೂರಿಗೇ ಬಂದುಬಿಟ್ಟರೆ ಏನುಗತಿ? ಎಂದು ಮನಸ್ಸಿನಲ್ಲೇ ಆತಂಕಪಟ್ಟುಕೊಂಡಳು ಲಲಿತಾ.

ಗಂಡ ಹೇಳಿದಂತೆ ಅತ್ತೆ ಮಾವ ಊರಿನಲ್ಲೇ ಇರುತ್ತಿದ್ದುದರಿಂದ ಮನೆಯ ಯಜಮಾನಿ ತಾನೇ, ಆದರೂ ಬಂದು ಹೋಗುವ ಗಂಡನ ಅಕ್ಕ ಮಂದಾರಳ ಡಾಮಿನೇಟಿಂಗ್ ನಡವಳಿಕೆಯ ಬಗ್ಗೆ ತನ್ನಮ್ಮನಿಗೂ ಹೇಳಿದಳು. ಅವರೂ ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಮಗಳಿಗೆ ಹೇಗಾದರೂ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ಬುದ್ಧಿವಾದವನ್ನೇ ಹೇಳಿದ್ದರು. ಆದ್ದರಿಂದ ಲಲಿತಾ ಮಂದಾರಳಿಗೆ ವರ್ಗಾವಣೆಯಾದರೆ ಬೇರೆಲ್ಲಿಗಾದರೂ ಆಗಲಿ ಬೆಂಗಳೂರಿಗೆ ಮಾತ್ರ ಬೇಡಪ್ಪಾ ಎಂದು ಭಗವಂತನಲ್ಲಿ ಮೊರೆಯಿಟ್ಟಿದ್ದಳು. ಆದರೆ ಭಗವಂತ ಇವಳ ಕೋರಿಕೆಯನ್ನು ಮನ್ನಿಸದೆ ಮಂದಾರಳಿಗೆ ಬೆಂಗಳೂರಿಗೇ ವರ್ಗ ಮಾಡಿಸಿದ್ದ.

ರಿಪೋರ್ಟ್ ಮಾಡಿಕೊಳ್ಳಲು ಬಂದ ಅಕ್ಕನನ್ನು ಪ್ರೀತಿಯಿಂದ ಎದುರುಗೊಂಡ ಮೋಹನ “ಏ ಮಂದಾರ ಬಾಡಿಗೆ ಮನೆಯನ್ನೇಕೆ ಮಾಡಬೇಕು ನೀನು, ನಮ್ಮೊಡನೆಯೇ ಇರಬಹುದಲ್ಲಾ. ಊರಿನಿಂದ ಅಪ್ಪ ಅಮ್ಮ ಯಾವಾಗಲಾದರೊಮ್ಮ ಬರುತ್ತಾರೆ. ಮೂರು ಬೆಡ್‌ರೂಮಿನ ವಿಶಾಲವಾದ ಮನೆಯಲ್ಲಿ ಇರುವುದು ನಾವಿಬ್ಬರೇ ತಾನೇ. ನೀವು ಮೂರೂ ಜನ ಆರಾಮವಾಗಿರಬಹುದು” ಎಂದು ಸಲಹೆ ನೀಡಿದ. ಈ ಆಹ್ವಾನ ಕೇಳಿ ಲಲಿತಾಳಿಗೆ ಭಯವೇ ಆಯಿತು. ಮಂದಾರಳಿಗಂತೂ ಒಳಗೊಳಗೇ ತಮ್ಮನ ಪ್ರೀತಿ ಕಂಡು ಖುಷಿಯಾಯಿತು. ಮೇಲೆ ಬಿಗುಮಾನಕ್ಕೆ ಮಾತ್ರ “ಬೇಡಪ್ಪಾ ನಿಮ್ಮಿಬ್ಬರ ಮಧ್ಯೆ ನಾನೇಕೆ” ಎಂದು ನುಡಿದಳು.

“ಅದರಲ್ಲೇನಿದೆ, ಲಲಿತಾಳಿಗೆ ಸೋದರ ಸೋದರಿಯರ ಸಂಬಂಧದ ಬಗ್ಗೆ ಹೇಳಿಕೊಡಬೇಕೇ. ಅವರ ಮನೆಯಲ್ಲಿ ಅಣ್ಣ ತಂಗಿಯರನ್ನು ನೋಡಿದರೆ ಗೊತ್ತಾಗುವುದಿಲ್ಲವೇ. ಹಾಗೇ ನಾವೂ” ಎಂದ ಮೋಹನ.
ಅದೇಕೋ ತಮ್ಮನ ಆಹ್ವಾನವನ್ನು ನಯವಾಗಿ ನಿರಾಕರಿಸತ್ತಾ ಅವರ ಮನೆಯ ಸಮೀಪದಲ್ಲಿಯೇ ಬೇರೊಂದು ಮನೆಯನ್ನು ಬಾಡಿಗೆಗೆ ಹಿಡಿದು ವಾಸಕ್ಕೆ ಬಂದರು.

ಲಲಿತಾಳು ಸದ್ಯ ಇಷ್ಟಾದರೂ ಬುದ್ಧಿ ತಲೆಗೆ ಹೋಯಿತಲ್ಲ. ಅದೇ ಪುಣ್ಯ ಎಂದುಕೊಂಡಳು. ಆದರೆ ಆ ಪುಣ್ಯ ಬೇರೆ ರೀತಿಯಲ್ಲಿ ಕಾಟ ಕೊಡಲು ಪ್ರಾರಂಭವಾಯಿತು. ಬೇರೆ ಮನೆಯಲ್ಲಿದ್ದರೂ ಅವರಿಗೆ ತಿಂಡಿ, ಊಟದಿಂದ ಸಕಲವೂ ಇಲ್ಲಿಂದಲೇ ಸರಬರಾಜಾಗಲು ಶುರುವಾಯಿತು. “ಅಕ್ಕ ಕೆಲಸಕ್ಕೆ ಹೋಗುತ್ತಾಳಲ್ಲವಾ, ಅದಕ್ಕೆ ಸಮಯ ಸಿಗುವುದಿಲ್ಲ. ಹೇಗಿದ್ದರೂ ನೀನು ಮನೆಯಲ್ಲಿರುವವಳು. ಇಬ್ಬರ ಬದಲು ಇನ್ನೂ ಮೂವರಿಗೆ ಒಟ್ಟಿಗೆ ಮಾಡುವುದು ಸುಲಭ.” ಎಂದ ಮೋಹನ. ಜೊತೆಗೆ ಅವಳ ಮಗನ ಜವಾಬ್ದಾರಿಯೂ ಇವರಿಗೇ ವಕ್ರಿಸಿಕೊಂಡಿತು. ಇದರಿಂದ ಸುಖವಾಗಿದ್ದ ಲಲಿತಾಳು ಈಗ ಗೃಹಬಂದಿಯಾಗಿಬಿಟ್ಟಳು. ಹೆಚ್ಚಿನ ಹೊಣೆಗಾರಿಕೆ ಮತ್ತು ಆಗೀಗ ಕೊಂಕು ಮಾತುಗಳು. ತನ್ನ ಗಂಡ ಅವರಕ್ಕನ ಮಾತುಗಳಿಗೆ ಕೋಲೆ ಬಸವನಂತೆ ತಲೆಯಾಡಿಸುವುದು ಪ್ರಾರಂಭವಾಗಿ ಲಲಿತಾಳಿಗೆ ವೈಯಕ್ತಿಕ ಬದುಕೇ ನಷ್ಟವಾಯಿತು. ಗಂಡಹೆಂಡತಿ ಇಬ್ಬರೇ ಹೊರಗಡೆ ಎಲ್ಲಿಗೂ ಹೋಗಿಬರುವುದೂ ನಿಂತುಹೋಯಿತು. ಅತ್ತೆ ಮಾವನವರು ಬಂದು ಹೋಗುವುದು ನಡೆದೇ ಇದ್ದರೂ ಅವರುಗಳೂ ತಮ್ಮ ಮಗಳ ಪರವಾಗಿಯೇ ಮಾತನಾಡುತ್ತಿದ್ದರು. ಹೆಸರಿಗಷ್ಟೇ ಮನೆಯ ಯಜಮಾನಿ ಲಲಿತಾ, ಆದರೆ ಎಲ್ಲ ಅಡಳಿತವೂ ಮಂದಾರಳ ಅದೇಶದಂತೆ ನಡೆಯುತ್ತಿದ್ದವು. ಇದರಿಂದ ಬೇಸರದ ಜೊತೆಗೆ ಮೂಕವೇದನೆ ಹೆಚ್ಚಾಗಿ ಲಲಿತಾ ಹೆಚ್ಚು ಹೆಚ್ಚು ಅಂತರ್ಮುಖಿಯಾದಳು. ಅವಳ ಮಾತುಕತೆ ಕಡಿಮೆಯಾದವು. ಇದನ್ನು ಗಮನಿಸುವ ವ್ಯವಧಾನ ಅವರಾರಿಗೂ ಇರಲಿಲ್ಲ. ಮೋಹನನಿಗೆ ತನ್ನ ಹೆಂಡತಿಯ ವ್ಯತ್ಯಾಸದ ಕಡೆಗೆ ಗಮನ ಹೋದರೂ ಅವನದನ್ನು ನಿರ್ಲಕ್ಷಿಸಿದ.

ಇದೇ ಸಮಯದಲ್ಲಿ ಲಲಿತಾಳಲ್ಲಿ ತಾಯಿಯಾಗುವ ಲಕ್ಷಣಗಳು ಕಂಡುಬಂದವು. ಮದುವೆಯಾದ ಮೂರುವರ್ಷಗಳ ನಂತರ ಸಿಹಿಸುದ್ಧಿಯನ್ನು ಕೊಟ್ಟ ಸೊಸೆಯನ್ನು ನೋಡಲು ಅವಳತ್ತೆ ಮಾವನವರು ಊರಿನಿಂದ ಆಗಮಿಸಿದರು. ಆಕೆಯನ್ನು ಕಂಡಾಗ ಹೌಹಾರಿದರು. ಗುಂಡಗುಂಡಗೆ ಚಟುವಟಿಕೆಯ ಚಿಲುಮೆಯಂತಿದ್ದ ಆ ಲಲಿತಾ ಎಲ್ಲಿ? ಉಣಲು, ಉಡಲು ಬೇಕಾದಂಗಿದ್ದರೂ ಇತ್ತೀಚೆಗೆ ಒಣಗಿದ ಕಡ್ಡಿಯಂತಾಗಿತುವ ಈ ಲಲಿತಾ ಎಲ್ಲಿ? ತಡೆಯಲಾರದೆ ಮಗನನ್ನು ಕೇಳಿ ಆಕೆಯನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋಗಬೇಕೆಂದು ಆಲೋಚಿಸಿದರು. ಅವರ ಮಾತನ್ನು ಕೇಳಿ ಮೋಹನನ ಅಕ್ಕ ಮಂದಾರ “ಅಯ್ಯೋ ಅಮ್ಮಾ ಅವಳನ್ನು ಮೋಹನ ಡಾಕ್ಟರ್ ಹತ್ತಿರ ಚೆಕಪ್ ಮಾಡಿಸಿಕೊಂಡು ಬಂದಿದ್ದಾನೆ. ಏನೂ ತೊಂದರೆಯಿಲ್ಲವಂತೆ. ಅವಳಿಗೆ ತವರಿನ ಗೀಳು ಬಹಳವಾಗಿದೆ. ಅದರಿಂದ ಅವಳು ಹೀಗಾಗಿದ್ದಾಳೆ. ಇಲ್ಲಿ ಏನು ಕೊರತೆಯಿದೆ. ನಾನು ಇಲ್ಲಿಗೆ ಬಂದಾಗಿನಿಂದ ಹೆಚ್ಚು ಹೋಗಲಾಗಲಿಲ್ಲವಲ್ಲ. ಅದಕ್ಕೆ ಈ ನಾಟಕ ಮಾಡುತ್ತಿದ್ದಾಳೆ. ನೀನು ಬರುವುದಕ್ಕಿಂತ ಮೊದಲು ಅವಳಣ್ಣ ನೋಡಲು ಬಂದಿದ್ದ. ಅವನೂ ಈಕೆಯನ್ನು ನೋಡಿ ನಿನ್ನಂತೆಯೇ ಗಾಬರಿಯಾದ. ಅವಳನ್ನು ಊರಿಗೆ ಕಳುಹಿಸಿಕೊಡಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದ. ಅಲ್ಲಿಂದಲೇ ಡಾಕ್ಟರ್ ಚೆಕಪ್ ಮಾಡಿಸಿದರಾಯಿತು ಎಂದಿದ್ದ. ಅದಕ್ಕೆ ಮೋಹನ ಒಪ್ಪಲಿಲ್ಲ. ಈಗಿನ್ನೂ ಮೂರು ತಿಂಗಳು, ಇಷ್ಟುಬೇಗ ಏಕೆ? ಬಾಣಂತನಕ್ಕೆ ಹೇಗೂ ಅಲ್ಲಿಗೆ ಬರಬೇಕಲ್ಲಾ ಆಗ ಕರೆದುಕೊಂಡು ಹೋಗಿ ಎಂದುಬಿಟ್ಟ. ಅದಾದ ಮೇಲೆ ನಿನ್ನ ಸೊಸೆ ಹೊಸ ವರಸೆ ಪ್ರಾರಂಭಿಸಿದ್ದಾಳೆ. ಯಾವಾಗಲೂ ಏನೋ ಯೋಚನೆಯಲ್ಲಿರುತ್ತಾಳೆ. ಸುಮ್ಮನೆ ಕುಳಿತುಬಿಡುತ್ತಾಳೆ. ಕೂಗಿದರೂ ಉತ್ತರಿಸುವುದಿಲ್ಲ. ಮಾಡಿದ್ದೇ ಕೆಲಸ ಮಾಡುತ್ತಿರುತ್ತಾಳೆ. ಯಾವುದರಲ್ಲೂ ಗಮನವಿರುವುದಿಲ್ಲ.” ಇನ್ನೂ ಏನೇನು ಹೇಳುತ್ತಿದ್ದಳೋ ಅಷ್ಟರಲ್ಲಿ ಅಲ್ಲಿಗೆ ಲಲಿತಾ ಬಂದದ್ದರಿಂದ ಮಾತುಕತೆ ಅಲ್ಲಿಗೇ ಮುಕ್ತಾಯವಾಯ್ತು. ಒಂದುವಾರದ ವರೆಗೆ ಜಾನಕಮ್ಮನವರಿದ್ದು ತಮ್ಮ ಸೊಸೆಯ ಚಲನವಲನಗಳನ್ನು ಗಮನಿಸುತ್ತಲೇ ಇದ್ದರು. ಮಗಳ ಮಾತುಗಳು ತಲೆಯಲ್ಲಿದ್ದವು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಲಕ್ಷಣಗಳು ಕಾಣಿಸಿದ್ದರಿಂದ ಜಾಗ ಖಾಲಿಮಾಡುವುದೇ ಒಳ್ಳೆಯದು ಎಂದುಕೊಂಡರು. ಸೊಸೆಗೆ ಏನಾದರೂ ತೊಂದರೆಯಾದರೆ ತಮ್ಮ ತಲೆಗೆ ಬಂದೀತೆಂಬ ವಿಷಯವನ್ನು ಮಗನ ಕಿವಿಗೆ ಹಾಕಿದರು. ಮಗಳು ಮಂದಾರಳೂ ಇದಕ್ಕೆ ದನಿಗೂಡಿಸಿದಳು. ಆದರೆ ಶ್ರೀಪತಿಯವರು ಮಾತ್ರ ತಮ್ಮ ಸೊಸೆ ಲವಲವಿಕೆಯಿಂದ ಇದ್ದವಳು ಹೀಗೇಕೆ ಬದಲಾದಳು. ಆಕೆಗೆ ಮನಸ್ಸಿಗೊಪ್ಪದ, ಘಾಸಿಯಾಗುವಂತಹದ್ದು ಏನೋ ನಡೆದಿರಬೇಕು. ಕೂಡಿಸಿಕೊಂಡು ಅನುನಯದಿಂದ ವಿಚಾರಿಸಿ ತಜ್ಞ ವೈದ್ಯರಿಂದ ಪರೀಕ್ಷೆ ಮಾಡಿಸೋಣ ಎಂದು ಸಲಹೆ ನೀಡಿದರು. ಆದರೆ ಅವರ ಮಾತಿಗೆ ತಾಯಿ ಮಗಳು ಎಳ್ಳಷ್ಟೂ ಬೆಲೆ ಕೊಡಲಿಲ್ಲದ್ದರಿಂದ ಅವರು ಮೌನಕ್ಕೆ ಶರಣಾದರು.

ಮೋಹನ, ಜಾನಕಮ್ಮ, ಮುಖ್ಯವಾಗಿ ಮಂದಾರ ಮೂರೂಜನ ಲಲಿತಾಳಿಗೆ ಹಿಡಿದಿರುವುದು ತವರುಮನೆಯ ಗೀಳೇ ಎಂದು ತೀರ್ಮಾನಿಸಿ ಅವಳನ್ನು ತಾಯಿಯ ಮನೆಗೆ ಬಿಟ್ಟುಬರಲು ತೀರ್ಮಾನಿಸಿದರು. ಲಲಿತಾ ಬಾಯಿಬಿಡದಂತೆ ಪತಿಯನ್ನು ಬಸವನ ಹಿಂದೆ ಬಾಲದಂತೆ ಹಿಂಬಾಲಿಸಿದಳು.

ಮಗ ಗಿರಿಧರನಿಂದ ಮೊದಲೇ ವಿಷಯ ತಿಳಿದಿದ್ದ ಸಂಗಪ್ಪ ದಂಪತಿಗಳು ಅಳಿಯ ಕರೆದುಕೊಂಡು ಬಂದ ಮಗಳನ್ನು, ಅವಳಾಗಿದ್ದ ಸ್ಥಿತಿಯನ್ನು ನೋಡಿ ಮಮ್ಮಲ ಮರುಗಿದರು. ರುದ್ರಮ್ಮನವರಂತೂ ಮಗಳು ಈ ಹಿಂದೆ ತನ್ನ ಅಸಹಾಯಕತೆಯನ್ನು ಹೇಳಿಕೊಂಡಿದ್ದನ್ನು ಕೇಳಿದರೂ ಅವಳಿಗೇ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವಂತೆ ಬುದ್ಧಿ ಹೇಳಿದ್ದನ್ನು ಜ್ಞಾಪಿಸಿಕೊಂಡು ದುಃಖಿಸಿದರು. ಇತ್ತೀಚೆಗೆ ಫೋನ್ ಮಾಡಿದಾಗಲೆಲ್ಲ ಊ..ಉಹುಂ..ಇಷ್ಟರಲ್ಲೇ ಮಗಳು ಉತ್ತರಿಸುತ್ತಿದ್ದುದನ್ನು ತಾವು ಗಮನಿಸಲಿಲ್ಲವೆಂದು ತಮ್ಮನ್ನು ತಾವೇ ಹಳಿದುಕೊಂಡರು. ಮಗಳ ದುಸ್ಥಿತಿಗೆ ತಾನೂ ಪರೋಕ್ಷವಾಗಿ ಕಾರಣಳಾದಳೇನೋ ಎಂಬ ಕೊರಗು ಅವರಿಗಾಯ್ತು. ಹೇಗೋ ಮಗಳ ಮಡಿಲು ತುಂಬಿ ಕೂಸು ಕೈಗೆ ಸುರಕ್ಷಿತವಾಗಿ ಬರುವಂತಾಗಲಿ ದೇವರೇ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು. ಅವಳು ಮೊದಲಿನಂತಾದ ಮೇಲೇ ಹಿಂದಕ್ಕೆ ಕಳುಹಿಸುವುದು ಎಂದು ನಿರ್ಧರಿಸಿದರು. ಊಟ ಉಪಚಾರಗಳಾದ ಮೇಲೆ ಅಳಿಯನಿಗೆ ತಮ್ಮ ಇರಾದೆಯನ್ನು ತಿಳಿಸಿದರು. ಮೋಹನ ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಸುಮ್ಮನಿದ್ದ. ಇದು ಒಂದು ರೀತಿಯಲ್ಲಿ ಸಮಾಧಾನ ತಂದಿತು. ಆದರೂ ಗಂಡನ ಮನೆಯಲ್ಲಿ ಏನೇನು ನಡೆದಿರಬಹುದೆಂಬ ಅನುಮಾನದ ಸುಳುಹು ಮನೆಯವರೆಲ್ಲರ ಮನದಲ್ಲಿ ಆವರಿಸಿತು.

ನಂತರದ ತಿಂಗಳುಗಳಲ್ಲಿ ಲಲಿತಾಳಿಗೆ ತಜ್ಞ ವೈದ್ಯರಿಂದ ಪರೀಕ್ಷೆ, ಔಷಧೊಪಚಾರಗಳು ನಡೆದವು. ಇದರಿಂದ ಆಕೆ ಸ್ವಲ್ಪ ಮೈಕೈ ತುಂಬಿಕೊಂಡರೂ ಆಕೆಯ ಅನ್ಯ ಮನಸ್ಥಿತಿಯಂತೂ ಮುಂದುವರೆದದ್ದು ಚಿಂತೆಗೆ ಕಾರಣವಾಗಿತ್ತು. ಗಿರಿಧರ ಇದರ ಬಗ್ಗೆ ತನ್ನ ಪತ್ನಿ ಹೇಮಾಳೊಂದಿಗೆ ಆಪ್ತ ಸಮಾಲೋಚಿಸಿ ತಂಗಿಯನ್ನು ಯಾರಾದರೂ ಮಾನಸಿಕ ವೈದ್ಯರಿಂದ ಕೌನ್ಸೆಲಿಂಗ್ ಮಾಡಿಸಲು ನಿರ್ಧರಿಸಿದನು. ಮಗನ ಮಾತನ್ನು ಕೇಳಿದ ಸಂಗಪ್ಪ ದಂಪತಿಗಳು ಭಯದಿಂದ “ಬೇಡ ಮಗಾ, ಅಲ್ಲಿಗೆ ನೀನು ಅವಳನ್ನು ಕರೆದುಕೊಂಡು ಹೋಗಿದ್ದು ಬೀಗರ ಕಿವಿಗೆ ಬಿದ್ದರೆ ಪರಿಣಾಮ ಕೆಟ್ಟದ್ದಾಗಬಹುದು” ಎಂದು ಸಲಹೆ ಮಾಡಿದರು.

ಹೆತ್ತವರ ಮಾತಿಗೆ ಗಿರಿಧರ “ಮನೋ ವೈದ್ಯರು ಮನಸ್ಸಿಗೆ ಆಗಿರುವ ತೊಂದರೆಯನ್ನು ಕಂಡುಹಿಡಿದು ಅದನ್ನು ಪರಿಹಾರ ಮಾಡುತ್ತಾರೆ ಅಷ್ಟೇ. ಬೀಗರ ಮನೆಯವರೂ ವಿದ್ಯಾವಂತರು. ಅರ್ಥಮಾಡಿಕೊಳ್ಳುತ್ತಾರೆ. ನಿಮಗೆ ಅಪಾರ್ಥದ ಆತಂಕವೇಕೆ?” ಎಂದು ಸಮಾಧಾನ ಹೇಳಿ ಬೆಂಗಳೂರಿನ ಒಂದು ಪ್ರಸಿದ್ಧ ಮಾನಸಿಕ ತಜ್ಞರಾದ ಡಾ. ವಿದ್ಯಾರವರ ಮಾನಸ ಕ್ಲಿನಿಕ್ಕಿಗೆ ತಂಗಿಯನ್ನು ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದ. ಒಂದೆರಡು ಭೇಟಿಯ ನಂತರ ಲಲಿತಾ ಸ್ವಲ್ಪ ಗೆಲುವಾಗಿ ಕಂಡುಬಂದಳು. ಅಣ್ಣನ ಮಗಳು ಪ್ರಾರ್ಥನಾ, ಮಗ ಪ್ರಣವ್‌ನ ಜೊತೆ ಒಡನಾಟ ಬೆಳೆಸಿಕೊಂಡು ಲವಲವಿಕೆಯಿಂದ ಮಾತುಕತೆ ಆಡತೊಡಗಿದಳು. ಲಲಿತಾ ಮನಸಿಕ ತಜ್ಞರ ಕ್ಲಿನಿಕ್ಕಿಗೆ ಹೋಗಿ ಬರುವ ವಿಷಯ ಯಾರಿಂದಲೋ ತಿಳಿದ ಮಂದಾರ ಅದನ್ನು ತಮ್ಮನ ಕಿವಿಗೆ ರಸವತ್ತಾಗಿ ಹಾಕಿದಳು. ವಿದ್ಯಾವಂತನಾಗಿದ್ದರೂ ಮೋಹನ ಪೂರ್ವಾಪರ ಆಲೋಚಿಸದೆ ಅದೇ ಬಿರುಸಿನಲ್ಲಿ ಮಾವನ ಮನೆಗೆ ಬಂದು “ನಿಮ್ಮ ಮಗಳಿಗೆ ಮದುವೆಗೆ ಮೊದಲಿನಿಂದಲೂ ಮಾನಸಿಕ ತೊಂದರೆಯಿತ್ತೆಂದು ಕಾಣುತ್ತದೆ. ಅದನ್ನು ಮುಚ್ಚಿಟ್ಟು ನನಗೆ ಮೋಸಮಾಡಿ ಮದುವೆ ಮಾಡಿದಿರಿ.” ಎಂದು ಹೀನಾಮಾನಾ ಜಗಳವಾಡಿ ಹೆಂಡತಿಯ ಕಡೆಗೆ ತಿರುಗಿ ಕೂಡ ನೋಡದೆ ದುರ್ದಾನ ತೆಗೆದಕೊಂಡವನಂತೆ ಹಿಂದಿರುಗಿ ಹೋದ.

ಈ ಪ್ರಕರಣದ ನಂತರ ಆಗತಾನೇ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದ ಲಲಿತಾ ಮತ್ತೆ ಮಾನಸಿಕ ತೊಂದರೆಗೆ ಸಿಲುಕಿದಳು. ಏನನ್ನೂ ಹೇಳಲಾಗದೆ, ಅನುಭವಿಸಲೂ ಆಗದೆ ಒಳಗೊಳಗೇ ಕೊರಗತೊಡಗಿದಳು. ಇದರ ಪರಿಣಾಮವಾಗಿ ಅವಳಿಗೆ ಏಳನೇ ತಿಂಗಳಿಗೇ ಪ್ರಸವವಾಗಿ ಗಂಡುಮಗುವಿಗೆ ಜನ್ಮವಿತ್ತಳು. ಆದರೆ ಅತೀವವಾಗಿ ಕೃಶವಾಗಿದ್ದ ಅವಳ ದೇಹ ಮಗುವನ್ನು ಕಾಣದೇ ಬಾರದ ಲೋಕಕ್ಕೆ ಹೊರಟುಹೋಯಿತು. ಅವಳ ಅಗಲಿಕೆ, ಅನಾಥವಾದ ಕೂಸು ಮನೆಯವರೆಲ್ಲರನ್ನೂ ದುಃಖಸಾಗರದಲ್ಲಿ ಮುಳುಗಿಸಿತು. ಬೀಗರಿಗೆ, ಅಳಿಯನಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಆದರೆ ಅವರ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬರಲೇ ಇಲ್ಲ. ಮನುಷ್ಯತ್ವವೇ ಇಲ್ಲದ ಜನ ಎಂದು ಹಳಿದುಕೊಂಡು ಸಂಗಪ್ಪನವರ ಕುಟುಂಬದವರೇ ಮುಂದಿನ ಕಾರ್ಯವೆಲ್ಲವನ್ನೂ ನೆರವೇರಿಸಿ ಬೀಗರ ಸಂಬಂಧವನ್ನು ಕಡಿದುಕೊಂಡರು. ಎಳೆಯ ಕೂಸನ್ನು ಮನೆಗೆ ತಂದು ಅದರ ಪೋಷಣೆಗೆ ಹೆಚ್ಚು ಗಮನ ಕೊಟ್ಟರು.

ಇದ್ಯಾವುದರ ಅರಿವೇ ಇಲ್ಲದ ಪುಟ್ಟ ಮಗು ನಿರಂಜನ ತಾತ, ಅಜ್ಜಿ, ಮಾವ, ಅತ್ತೆ, ಇವರೆಲ್ಲರ ಪ್ರೀತಿಯ ಕೂಸಾಗಿ ಬೆಳೆದನು. ಮಾವನ ಮಕ್ಕಳೊಡನೆ ಆಟವಾಡುತ್ತಾ ತನ್ನ ಬಾಲ್ಯದ ಲೀಲೆಗಳೊಂದಿಗೆ ಎಲ್ಲರಿಗೂ ಸಂತಸವನ್ನುಂಟುಮಾಡುತ್ತಾ ಎಲ್ಲರ ಕಣ್ಮಣಿಯಾದನು. ಅವನ ಸಂಗಾತದಲ್ಲಿ ರುದ್ರಮ್ಮನವರು ಲಲಿತಾಳ ಅಗಲುವಿಕೆಯನ್ನು ಮರೆತರು. ಅವನೂ ಬೆಳೆದು ಸುಂದರ ಬಾಲಕನಾಗಿ ನಾಲ್ಕು ವರ್ಷದವನಾದ. ಹೋದವರ್ಷ ಇದೇ ರೀತಿಯಲ್ಲಿ ಹಬ್ಬದ ಜೊತೆಗೆ ಹಬ್ಬ ಮತ್ತು ಊರಿನ ರಥೋತ್ಸವದ ಸಂಭ್ರಮದ ತಯಾರಿಯಲ್ಲಿದ್ದಾಗ ದೊಡ್ಡ ಅವಘಡವೊಂದು ನಡೆದು ಕುಟುಂಬದ ಎಲ್ಲರನ್ನೂ ಕಣ್ಣೀರಿನಲ್ಲಿ ಮುಳುಗಿಸಿತ್ತು. ಯಾವಾಗಲೂ ತಾತನನ್ನು ಬೆಂಬಿಡದಂತೆ ಹಿಂಬಾಲಿಸುತ್ತಿದ್ದ ನಿರಂಜನನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದರು. ಹೀಗೇ ಜಮೀನಿನ ಬಳಿ ಹೋಗಿದ್ದರು ಸಂಗಪ್ಪನವರು. ಅಲ್ಲಿದ್ದ ಹುಡುಗರ ಜೊತೆಯಲ್ಲಿ ಜೂಟಾಟ ಆಡಿಕೊಳ್ಳುತ್ತಿದ್ದ ಮಗು ಯಾವಾಗ ನೀರಿನ ಹೊಂಡದ ದಂಡೆಯಲ್ಲೇ ಇದ್ದ ಸೀಬೇ ಮರದ ಬಳಿಗೆ ಹೋದನೋ ತಿಳಿಯದು. ಅದರ ಕಾಯಿಯ ಆಸೆಯಿಂದ ಮರದಿಂದ ಕಾಯಿಕೀಳಲು ಕೊಕ್ಕೆಯೊಂದನ್ನು ಹಿಡಿದು ಪ್ರಯತ್ನಿಸುತ್ತಿದ್ದ ನಿರಂಜನ ಆಯ ತಪ್ಪಿ ಹೊಂಡದೊಳಕ್ಕೆ ಬಿದ್ದುಬಿಟ್ಟ. ಹತ್ತಿರದಲ್ಲಿದ್ದ ಮಕ್ಕಳು ಕೂಗಿಕೊಂಡರೇ ಹೊರತು ಅವನ್ನು ಮೇಲಕ್ಕೆತ್ತುವ ಸಾಹಸ ಮಾಡುವಷ್ಟು ದೊಡ್ಡವರಲ್ಲ. ದೂರದಲ್ಲಿ ಏನೋ ಕೆಲಸದಲ್ಲಿ ತೊಡಗಿದ್ದ ಕೆಲಸಗಾರರು ಮತ್ತು ಸಂಗಪ್ಪನವರು ಓಡಿ ಬಂದರು. ಅಷ್ಟರಲ್ಲಿ ಕೆಸರು ತುಂಬಿದ್ದ ಹೊಂಡದೊಳಗೆ ಮಗು ಪೂರ್ತಿ ಮುಳುಗಿತ್ತು. ತರಾತುರಿಯಿಂದ ಒಳಗಿಳಿದ ಕೆಲವರು ಕೆಸರಿನಿಂದ ಮಗುವನ್ನು ಮೇಲಕ್ಕೆತ್ತಿದರೂ ಉಸಿರು ನಿಂತುಹೋಗಿ ಮಣ್ಣಿನ ಮುದ್ದೆಯಾಗಿಬಿಟ್ಟಿದ್ದ. ತಮ್ಮ ಮುದ್ದಿನ ಮೊಮ್ಮಗ ಕಣ್ಮುಂದೆಯೇ ಕಣ್ಮರೆಯಾಗಿದ್ದಕ್ಕೆ ತಮ್ಮ ಅಜಾಗರೂಕತೆಯೇ ಕಾರಣವಾಯಿತೆಂದು ಸಂಗಪ್ಪನವರು ಕುಸಿದುಬಿಟ್ಟರು . ಆಳುಮಕ್ಕಳು ಮಗು ನಿರಂಜನನ ದೇಹದೊಂದಿಗೆ ಪ್ರಜ್ಞಾಹೀನರಾಗಿದ್ದ ತಾತ ಸಂಗಪ್ಪನವರನ್ನೂ ಮನೆಗೆ ತಂದಾಗ ಇಡೀ ಮನೆಯ ಹಬ್ಬದ ವಾತಾವರಣ ಒಮ್ಮೆಲೇ ಸ್ತಬ್ಧವಾಯಿತು. ಶೋಕ ಮಡುಗಟ್ಟಿತು. ಶುಶ್ರೂಷೆಯನಂತರ ಸಂಗಪ್ಪನವರು ಎಚ್ಚರಾದರೂ ಭ್ರಮಾಧೀನರಂತೆ “ಪಾಪೂ ನಿರಂಜನಾ” ಎಂದು ಕೂಗುತ್ತಾ ಅಳುತ್ತಿದ್ದರು. ರುದ್ರಮ್ಮನವರು ಪತಿಯ ಸ್ಥಿತಿ ಮತ್ತು ಮೊಮ್ಮಗನ ದುರಂತದಿಂದ ನಾನೇಕೆ ಇನ್ನೂ ಬದುಕಿದ್ದೇನೆ ಎಂದೆನ್ನುತ್ತಾ ಶೋಕಿಸುತ್ತಿದ್ದರು. ಅವರನ್ನು ಸಮಾಧಾನ ಮಾಡಲು ಗಿರಿಧರ, ಹೇಮಾ ಎಲ್ಲ ಪ್ರಯತ್ನ ಮಾಡುತ್ತಿದ್ದರು. ಮುಖ್ಯಸ್ಥರಾದ್ದರಿಂದ ಊರಿನ ಜನರೂ ಬಂದು ಸೇರಿದರು. ಕರ್ತವ್ಯದ ಕಡೆಗೆ ಓಗೊಟ್ಟು ಮಗುವಿನ ಅಂತ್ಯಕ್ರಿಯೆ ಮಾಡಿ ಮುಗಿಸಿದರು. ಹಲವಾರು ತಿಂಗಳುಗಳ ನಂತರ ಸಂಗಪ್ಪ ಮತ್ತು ರುದ್ರಮ್ಮನವರು ಸುಧಾರಿಸಿಕೊಂಡು ಸಾಧಾರಣ ಸ್ಥಿತಿಗೆ ಬಂದರು. ಆದರೆ ಮನೆಯಲ್ಲಿ ನಗುವಿನ ಸೆಲೆಯೇ ಬತ್ತಿಹೋಗಿತ್ತು.

ಇಷ್ಟೆಲ್ಲ ರುದ್ರಮ್ಮನವರ ಕಣ್ಮುಂದೆ ಸುಳಿದು ಕಣ್ಮರೆಯಾಗಿ ವಾಸ್ತವಕ್ಕೆ ಮರಳಿದ್ದು ಸಂಗಪ್ಪನವರ ಕರೆಯಿಂದ “ಏಳು ರುದ್ರೀ ಊರಿನ ಜನ ದೇವರ ಪೂಜೆಗೆ ಕಾಯುತ್ತಿದ್ದಾರೆ. ಆದದ್ದು ಆಗಿಹೋಯಿತು. ಸಮಾಜದ ಕರೆಯಂತೆ ನಾವು ನಡೆದುಕೊಳ್ಳಬೇಕು. ನಾವೂ ಹೋಗಿ ಸಾಂಪ್ರದಾಯಕವಾಗಿ ಪೂಜೆ ಮುಗಿಸಿ ಸ್ವಾಮಿಗೆ ಕೈಮುಗಿದು ಮುಂದಿನ ಕೆಲಸಗಳನ್ನು ಮಾಡೋಣ.” ಎಂದು ಪತ್ನಿಯನ್ನು ಬಲವಂತವಾಗಿ ಹೊರಡಿಸಿ ದೇವಾಲಯದತ್ತ ಹೆಜ್ಜೆ ಹಾಕಿದರು. ಪೂಜೆ ಆರತಿ ಮುಗಿದ ನಂತರ ಮುಂದಿನ ಕೆಲಸ ಕಾರ್ಯಗಳನ್ನು ಬೇರೆಯವರಿಗೆ ವಹಿಸಿ ಹೆಂಡತಿಯೊಡನೆ ತಾವು ಕುಟುಂಬದವರೊಡನೆ ತಮ್ಮದೇ ಜಮೀನಿನ ವಿಶಾಲವಾದ ಬಯಲಿಗೆ ಬಂದರು. ಅಲ್ಲಿ ಭೂಮಿಪೂಜೆಗೆ ಅಣಿಯಾಗುತ್ತಿತ್ತು. ರುದ್ರಮ್ಮನವರು “ಇಲ್ಲೇನು ಕಟ್ಟಿಸುತ್ತೀರಿ?” ಎಂದು ಕೇಳಿದರು.

ಸಂಗಪ್ಪನವರು “ನಮ್ಮ ಮಗ ಗಿರಿಧರ ತನ್ನ ಸೋದರಿ ಲಲಿತಾ ಮತ್ತು ಅವಳ ಮಗು ನಿರಂಜನನ ಹೆಸರಿನಲ್ಲಿ ಒಂದು ಮಕ್ಕಳ ಮನೆಯನ್ನು ಕಟ್ಟಲು ತಯಾರಿ ನಡೆಸಿದ್ದಾನೆ. ಇದು ಪೂರ್ತಿಯಾದಾಗ ಹಲವಾರು ಅಶ್ರಯವಿಲ್ಲದ ಮಕ್ಕಳು ಇಲ್ಲಿದ್ದು ಬೆಳೆಯುತ್ತಾರೆ. ಅವರಿಗೆ ವಿದ್ಯಾಭ್ಯಾಸಕ್ಕೂ ವ್ಯವಸ್ಥೆ ಮಾಡುತ್ತಾನೆ. ನಮ್ಮ ಶೇಷಾಯುಷ್ಯದಲ್ಲಿ ಇಲ್ಲಿ ಆಟವಾಡಿ ನಲಿಯುವ ಮಕ್ಕಳಲ್ಲಿ ನಮ್ಮ ಮಗಳು ಮತ್ತು ಮೊಮ್ಮಗನನ್ನು ಕಂಡುಕೊಳ್ಳುವ ಉದ್ದೇಶದಿಂದ ಅವನ ಕಾರ್ಯಕ್ಕೆ ನಾನೂ ಅಸ್ತು ಅಂದಿದ್ದೇನೆ. ಇದಕ್ಕಿಂತ ಉತ್ತಮವಾದ ಕೆಲಸ ನಮಗಿನ್ನೇನಿದೆ ಹೇಳು” ಎಂದರು.

ಗಂಡನ ಮಾತನ್ನು ಕೇಳಿದ ರುದ್ರಮ್ಮನವರಿಗೆ ಅದೂ ಸರಿ ಎನ್ನಿಸಿತು. ಸೋದರಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಗಿರಿಧರ ಉತ್ತಮವಾದ ಕೆಲಸವನ್ನೇ ಮಾಡುತ್ತಿದ್ದಾನೆ ಎಂದು ಸಂತೋಷಪಟ್ಟರು.
ಒಂದು ವರ್ಷದೊಳಗೆ ಮಕ್ಕಳ ಮನೆ ಸಿದ್ಧವಾಯಿತು. ಪ್ರಥಮದಲ್ಲಿ ಹತ್ತು ಹುಡುಗರು ಅಲ್ಲಿ ಆಶ್ರಯ ಪಡೆದರು. ಅವರಿಗೆಲ್ಲ ಹೊಸಬಟ್ಟೆ, ಅಲ್ಲಿರಲು ಬೇಕಾದ ಎಲ್ಲ ವಸ್ತುಗಳು, ಆಟಿಕೆಗಳು ಬಂದುವು. ಉದ್ಘಾಟನೆಯನ್ನು ಸಂಗಪ್ಪನವರು ಮತ್ತು ರುದ್ರಮ್ಮನವರೇ ಸ್ವಹಸ್ತದಿಂದ ಮಾಡಿ ಸಿಹಿ ಹಂಚಿದರು ಜನರೆಲ್ಲ “ಇದಲ್ಲವೇ ಸ್ಮಾರಕವೆಂದರೆ !” ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಮನೆಯ ಮುಂದೆ ಢಾಳಾಗಿ ಬರೆಸಿ ತೂಗು ಹಾಕಿದ ಫಲಕ “ಶ್ರೀ ಲಲಿತಾ ಮಕ್ಕಳಮನೆ” ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಸಂಗಪ್ಪ ಮತ್ತು ರುದ್ರಮ್ಮನವರು ಕುಟುಂಬದವರೆಲ್ಲರೊಡನೆ ಸ್ವಲ್ಪ ಹೊತ್ತು ಮಕ್ಕಳೊಡನೆ ಕಾಲಕಳೆದು ಭೋಜನದಲ್ಲಿ ಪಾಲ್ಗೊಂಡು ಮನೆಯತ್ತ ನಡೆದರು.

ಬಿ.ಆರ್.ನಾಗರತ್ನ, ಮೈಸೂರು

4 Comments on “ಶ್ರೀಲಲಿತಾ ಮಕ್ಕಳಮನೆ.

  1. ಶೋಕಭರಿತ ಮನಕರಗಿಸುವ ಕಥೆಯಾದರೂ ಮನಸ್ಸಿಗೆ ಸಮಾಧಾನ ನೀಡಿದ ಅಂತ್ಯದಿಂದ ಕಥೆ ವಿಭಿನ್ನವೆನಿಸಿತು. ಎಂದಿನಂತೆ ಚಂದದ ಕಥೆ ಹೆಣೆದ ಗೆಳತಿ ನಾಗರತ್ನಾ ಅವರಿಗೆ ಅಭಿನಂದನೆಗಳು.

    1. ನಿಮ್ಮ ಓದಿನ ಪ್ರತಿ ಕ್ರಿಯೆಗೆ ಧನ್ಯವಾದಗಳು ಪದ್ಮಾ ಮೇಡಂ

  2. ಬಹಳ ನೋವು ತುಂಬಿದ ಕಥೆ. ಅಂತ್ಯ ಮಾತ್ರ ಚೆನ್ನಾಗಿದೆ. ಆದರೂ ತಪ್ಪು ಮಾಡಿದವರಿಗೆ ಶಿಕ್ಷೆ ಆಗ್ಬೇಕಿತ್ತು.

  3. ಪ್ರಕಟಣೆಗಾಗಿ ಸುರಹೊನ್ನೆಯ ಸಂಪಾದಕರಿಗೆ ಹೃತ್ಪೂರ್ವಕವಾದ ಧನ್ಯವಾದಗಳು ಹಾಗೇ ಸೂಕ್ತ ವಾದ ಚಿತ್ರ ಹಾಕಿ ದಕ್ಕೂ..ಮತ್ತೊಂದು ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *