ಮೆಹ್ರಾನ್ ಕರಿಮಿ ನಾಸ್ಸೆರಿ ಅಥವಾ ಸರ್ ಆಲ್ಫ್ರೆಡ್ ಮೆಹ್ರಾನ್, 1945 ರಲ್ಲಿ ಇರಾನಿನ ಮಸ್ಜಿದ್ ಸೊಲೇಮಾನ್ ಎಂಬ ನಗರದಲ್ಲಿ ಹುಟ್ಟುತ್ತಾನೆ. ಈತನ ತಂದೆ ಇರಾನಿನ ಒಬ್ಬ ವೈದ್ಯ ಮತ್ತು ತಾಯಿ ಒಬ್ಬ ಗೃಹಿಣಿ. ಇರಾನಿನ ಕೊನೆಯ ರಾಜ ಮೊಹಮ್ಮದ್ ರೆಜಾ ಪಹ್ಲವಿಯ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದ ನಾಸ್ಸೆರಿಯನ್ನು ದೇಶದಿಂದ ಉಚ್ಚಾಟಿಸಲಾಗುತ್ತದೆ. ಒಂದು ಮೂಲದ ಪ್ರಕಾರ ಇವನನ್ನು ಇರಾನಿನಿಂದ ಹೊರ ಹಾಕಿರುವುದಕ್ಕೆ ಯಾವುದೇ ದಾಖಲೆಗಳು ಪುಷ್ಟೀಕರಿಸಿರುವುದಿಲ್ಲ. ಆತನನ್ನು ಉಚ್ಚಾಟಿಸಿರುವ ವಿಚಾರ ವಿವಾದಾತ್ಮಕವಾಗಿಯೇ ಉಳಿದಿದೆ. ಇನ್ನೊಂದು ಮೂಲದ ಪ್ರಕಾರ ಇವನು ತನ್ನ ತಾಯಿಯನ್ನು ಐರೋಪ್ಯ ದೇಶಗಳಲ್ಲಿ ಹುಡುಕಲು ತನ್ನ ದೇಶವನ್ನು ಬಿಟ್ಟನೆಂದೂ ಹೇಳುತ್ತದೆ.
ತನ್ನ ದೇಶದಿಂದ ಸೆಪ್ಟೆಂಬರ್ 1973 ರಂದು ಹೊರ ಬಂದ ಮೇಲೆ ಅನೇಕ ಐರೋಪ್ಯ ದೇಶಗಳಲ್ಲಿ ವಾಸ ಮಾಡಲು ಅನುಮತಿಯನ್ನು ಕೋರಿ, ಅರ್ಜಿಯನ್ನು ಸಲ್ಲಿಸುತ್ತಾನೆ. ಆದರೆ ಇದಕ್ಕಾಗಿ ಆತ ಸುದೀರ್ಘ ಹೋರಾಟವನ್ನೇ ಮಾಡಬೇಕಾಗುತ್ತದೆ. ಇವನ ಹೋರಾಟದ ಫಲವಾಗಿ ಸಂಯುಕ್ತ ರಾಷ್ಟ್ರಗಳ ಶರಣಾರ್ಥಿಗಳ ಉನ್ನತ ಆಯುಕ್ತರು ಅವನಿಗೆ ಬೆಲ್ಜಿಯಂ ದೇಶದ ಶರಣಾರ್ಥಿಯ ಸ್ಥಾನಮಾನವನ್ನು ಕೊಡುತ್ತಾರೆ. ಆ ಮೂಲಕ ಅವನು ಐರೋಪ್ಯ ಒಕ್ಕೂಟದ ಯಾವುದೇ ಒಂದು ದೇಶದಲ್ಲಿ ನೆಲೆಸಲು ಅರ್ಹನಾಗುತ್ತಾನೆ.
ಇದರ ಪರಿಣಾಮವಾಗಿ ಅವನು ಕೆಲವು ಕಾಲ ಬೆಲ್ಜಿಯಂನಲ್ಲಿ ಉಳಿಯುತ್ತಾನೆ. ಇದರ ಜೊತೆಗೆ ಅವನು ಫ್ರಾನ್ಸ್ ಹಾಗು ಲಂಡನ್ ನಡುವೆ ಪ್ರಯಾಣಿಸಲೂ ಬಹುದಾಗಿರುತ್ತದೆ. ಆದರೆ 1988 ರಲ್ಲಿ ಅವನು ಫ್ರಾನ್ಸ್ ಮೂಲಕ ಲಂಡನ್ ನ್ನಿಗೆ ಹೋಗುವ ಮಾರ್ಗಮಧ್ಯದಲ್ಲಿ, ಬ್ರೀಫ್ಕೇಸ್ ನಲ್ಲಿ ಇಟ್ಟಿದ್ದ ವಲಸೆಗೆ ಸಂಬಂಧಿಸಿದ್ದ ಆತನ ಕಾಗದ ಪತ್ರಗಳು ಕಳುವಾಗುತ್ತವೆ.
ಲಂಡನ್ ತಲುಪಿದ ನಂತರ, ಅಲ್ಲಿ ಬ್ರಿಟಿಷ್ ವಲಸೆ ಅಧಿಕಾರಿಗಳಿಗೆ ವಲಸೆಗೆ ಸಂಬಂಧಿಸಿದ್ದ ದಾಖಲೆಗಳನ್ನು ತೋರಿಸಲು ವಿಫಲನಾದಾಗ ಆತನನ್ನು ಫ್ರಾನ್ಸ್ ಗೆ ವಾಪಸ್ಸು ಕಳಿಸಲಾಗುತ್ತದೆ. ಫ್ರಾನ್ಸಿನ ಚಾರ್ಲ್ಸ್ ಡಿ ಗಾಲ್ ನ ವಿಮಾನ ನಿಲ್ದಾಣದಲ್ಲಿ, ಅವನು ತನ್ನ ಗುರುತು ಅಥವಾ ಶರಣಾರ್ಥಿಯ ಸ್ಥಾನದ ಬಗ್ಗೆ ಯಾವುದೇ ಪುರಾವೆಗಳನ್ನು ತೋರಿಸಲು ಸಾಧ್ಯವಾಗದೇ ಇದ್ದಾಗ, ಆತನನ್ನು ಕಾಗದ ಪತ್ರಗಳಿಲ್ಲದೆ ಪ್ರಯಾಣಿಸುವ ಪ್ರಯಾಣಿಕರ ಕಾಯುವ ಕೋಣೆಯಲ್ಲಿ ಇರಿಸುತ್ತಾರೆ.
ನಂತರ ಕ್ರಿಶ್ಚಿಯನ್ ಬೌರ್ಗೆಟ್ ಎಂಬ ಫ್ರಾನ್ಸ್ ನ ಮಾನವ ಹಕ್ಕುಗಳ ವಕೀಲ ನಾಸ್ಸೆರಿಯ ಪ್ರಕರಣವನ್ನು ತೆಗೆದುಕೊಳ್ಳುತ್ತಾನೆ. ಬೆಲ್ಜಿಯಂನಿಂದ ಹೊಸ ದಾಖಲೆಗಳನ್ನು ಪಡೆಯುವ ಪ್ರಯತ್ನ ನಡೆಸುತ್ತಾನೆ. ಆದರೆ ಅಲ್ಲಿನ ಅಧಿಕಾರಿಗಳು, ನಾಸ್ಸೆರಿ ಖುದ್ದು ಭೇಟಿ ಯಾದಲ್ಲಿ ಮಾತ್ರ ದಾಖಲೆಗಳನ್ನು ಕೊಡುವುದಾಗಿ ತಿಳಿಸುತ್ತಾರೆ. ನಂತರ 1995 ರಲ್ಲಿ ಬೆಲ್ಜಿಯಂನ ಅಧಿಕಾರಿಗಳು ಆತ ಬೆಲ್ಜಿಯಂನಲ್ಲಿ ಓರ್ವ ಸಾಮಾಜಿಕ ಕಾರ್ಯಕರ್ತನ ಮೇಲ್ವಿಚಾರಣೆಯಲ್ಲಿ ವಾಸ ಮಾಡುವುದಾದರೆ ಮಾತ್ರ ಆತನಿಗೆ ಬೆಲ್ಜಿಯಂಗೆ ಪ್ರಯಾಣಿಸಲು ಅನುಮತಿ ಕೊಡುವುದಾಗಿ ತಿಳಿಸುತ್ತಾರೆ. ಆದರೆ ನಾಸ್ಸೆರಿ, ತಾನು ಹಿಂದೆ ನಿರ್ಧರಿಸಿದಂತೆ ಬ್ರಿಟನ್ನಿಗೆ ಹೋಗುವುದಾಗಿ ತಿಳಿಸಿ ಬೆಲ್ಜಿಯಂನ ಅಧಿಕಾರಿಗಳು ಕೊಟ್ಟ ಆಯ್ಕೆಯನ್ನು ತಿರಸ್ಕರಿಸುತ್ತಾನೆ. 1999 ರಲ್ಲಿ ಫ್ರಾನ್ಸ್ ತನ್ನ ದೇಶದಲ್ಲಿ ಇರಲು ಅನುಮತಿಸುತ್ತದೆ. ಹೀಗೆ ಫ್ರಾನ್ಸ್ ಮತ್ತು ಬೆಲ್ಜಿಯಂ ಎರಡೂ ದೇಶಗಳು ಅವನನ್ನು ತಮ್ಮ ದೇಶದಲ್ಲಿ ಇರಲು ಆಹ್ವಾನಿಸುತ್ತವೆ.
ಆದರೆ, ಕಾಗದ ಪತ್ರಗಳಲ್ಲಿ ತನ್ನನ್ನು ಇರಾನಿನ ಪ್ರಜೆಯೆಂದು ತೋರಿಸಿದ್ದು ಹಾಗು ತನ್ನ ಹೆಸರನ್ನು ತಪ್ಪಾಗಿ ನಮೂದಿಸಿರುವುದನ್ನು ನೆಪ ಮಾಡಿಕೊಂಡು, ಆ ಎರಡೂ ದೇಶಗಳ ಆಹ್ವಾನವನ್ನು ಅವನು ಒಪ್ಪಿ ಕೊಳ್ಳುವುದಿಲ್ಲ. ಅವನ ಇಂತಹ ವಿಚಿತ್ರ ನಡೆಗಳಿಂದ ಅವನ ವಕೀಲನಿಗೆ ಇರುಸುಮುರುಸಾಗಿ, ನಾಸ್ಸೆರಿಯ ಪರಿವಾರದವರನ್ನು ಸಂಪರ್ಕಿಸಿದಾಗ, ಅವರೆಲ್ಲಾ ‘ಆತ ತನ್ನ ಇಷ್ಟದಂತೆ ಬದುಕಲಿ’ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ.
ಚಾರ್ಲ್ಸ್ ಡಿ ಗಾಲ್ ನ ವಿಮಾನ ನಿಲ್ದಾಣದ ಟರ್ಮಿನಲ್ -1 ರಲ್ಲಿ ಸುಮಾರು 18 ವರ್ಷಗಳ ಕಾಲ (26 ಆಗಸ್ಟ್ 1988 ರಿಂದ ಜುಲೈ2006) ನಾಸ್ಸೆರಿ ತನ್ನ ಜೀವನವನ್ನು ಕಳೆಯುತ್ತಾನೆ. ಅಲ್ಲಿನ ಪ್ಯಾರಿಸ್ ಬೈ ಬೈ ಬಾರ್ ನಲ್ಲಿ ಕುಳಿತು ಪತ್ರಿಕೆಗಳಲ್ಲಿ ಬರೆಯುತ್ತಾ, ರೇಡಿಯೋದಲ್ಲಿ ಹಾಡಗಳನ್ನು ಕೇಳುತ್ತಾ, ಮ್ಯಾಕ್ ಡೊನಾಲ್ಡ್ಸ ನಲ್ಲಿ ಆಹಾರ ಸೇವಿಸುತ್ತಾ, ತನ್ನ ಬಹಳಷ್ಟು ಸಮಯವನ್ನು ಅಲ್ಲಿಯೇ ಕಳೆಯುತ್ತಾನೆ. ಅವನು ತನ್ನ ದಿನನಿತ್ಯದ ಆಗು ಹೋಗುಗಳ ಬಗ್ಗೆ ಒಂದು ಪುಸ್ತಕದಲ್ಲಿ ಬರೆಯುತ್ತಾ, ಸದಾ ತನ್ನ ವಸ್ತುಗಳಿಂದ ತುಂಬಿದ್ದ ಚೀಲವನ್ನು ತನ್ನ ಪಕ್ಕದಲ್ಲಿಯೇ ಇಟ್ಟುಕೊಂಡು ದಿನ ದೂಡುತ್ತಿರುತ್ತಾನೆ. ವಿಮಾನ ನಿಲ್ದಾಣವನ್ನೇ ತನ್ನ ಮನೆಯನ್ನಾಗಿ ಮಾಡಿ ಕೊಂಡ ಕೆಲವು ಜನರಲ್ಲಿ ನಾಸ್ಸೆರಿ ಒಂದು ಉದಾಹರಣೆಯಾಗಿ ನಿಲ್ಲುತ್ತಾನೆ.
ಹದಿನೆಂಟು ವರ್ಷಗಳ ಕಾಲ ವಿಮಾನ ನಿಲ್ದಾಣದಲ್ಲಿ ಜೀವನ ಸಾಗಿಸಿದ ನಂತರ, ಜುಲೈ 2006 ರಲ್ಲಿ ಅವನು ಅನಾರೋಗ್ಯದಿಂದ ಆಸ್ಪತ್ರೆ ಸೇರಬೇಕಾಗುತ್ತದೆ. 2007 ರ ಜನವರಿ ಕೊನೆಯ ಭಾಗದಲ್ಲಿ, ವಿಮಾನ ನಿಲ್ದಾಣದ ಹತ್ತಿರವಿರುವ ಹೋಟೆಲ್ ವೊಂದರಲ್ಲಿ ಅವನನ್ನು ಇರಿಸಲಾಗುತ್ತದೆ. ಅವನ ಯೋಗಕ್ಷೇಮದ ಜವಾಬ್ದಾರಿಯನ್ನು, ಫ್ರೆಂಚ್ ರೆಡ್ ಕ್ರಾಸ್ ನ ವಿಮಾನ ನಿಲ್ದಾಣದ ಶಾಖೆಯು ವಹಿಸಿಕೊಳ್ಳುತ್ತದೆ . ಮಾರ್ಚ್ 6, 2007 ರಂದು, ಅವನನ್ನು ಪ್ಯಾರಿಸ್ ನ ನಿರಾಶ್ರಿತರ ಕೇಂದ್ರವಾದ ‘ಎಮ್ಮಾಸ್ ಚಾರಿಟಿ ‘ ಗೆ ಹಸ್ತಾಂತರಿಸಲಾಗುತ್ತದೆ. ಅವನು 2008 ರಿಂದ ತನ್ನ ಜೀವನವನ್ನು ಪ್ಯಾರಿಸ್ ನ ನಿರಾಶ್ರಿತರ ಕೇಂದ್ರದಲ್ಲಿ ಕಳೆಯುತ್ತಾನೆ.
ನಾಸ್ಸೆರಿ 2022 ರಲ್ಲಿ ಹೃದಯಾಘಾತದಿಂದ ಅಸುನೀಗುತ್ತಾನೆ. ಅಸೋಸಿಯೇಟೆಡ್ ಪ್ರೆಸ್, ಅವನು ತನ್ನ ಸಾವಿಗೂ ಕೆಲವು ದಿನಗಳ ಹಿಂದೆ ಮತ್ತೆ ಅದೇ ಚಾರ್ಲ್ಸ್ ಡಿ ಗಾಲ್ ನ ವಿಮಾನ ನಿಲ್ದಾಣದ ಟರ್ಮಿನಲ್ – 1 ಕ್ಕೆ ಹಿಂದಿರುಗಿದ್ದನೆಂದು ವರದಿ ಮಾಡುತ್ತದೆ.
ನಾಸ್ಸೆರಿ, ಬ್ರಿಟಿಷ್ ಲೇಖಕ ಆಂಡ್ರ್ಯೂ ಡೊಂಕಿನ್ ನ ಜೊತೆಗೂಡಿ ತನ್ನ ಆತ್ಮ ಚರಿತ್ರೆ ‘ ದ ಟರ್ಮಿನಲ್ ಮ್ಯಾನ್ ‘ ಪುಸ್ತಕವನ್ನು ಪ್ರಕಟಿಸುತ್ತಾನೆ. ಇವನ ಜೀವನದಿಂದ ಸ್ಪೂರ್ತಿಗೊಂಡ ಕೆಲವರು ಅದನ್ನು ಮರುಸೃಷ್ಟಿ ಮಾಡಲು ಹಾಗು ಅಕ್ಷರ ರೂಪವನ್ನು ಕೊಡಲು ಮುಂದಾಗುತ್ತಾರೆ.
ಸ್ಟೀವನ್ ಆಲಾನ್ ಸ್ಪೀಲ್ಬರ್ಗ್ ನ ಚಲನಚಿತ್ರ ‘ದ ಟರ್ಮಿನಲ್ ‘ ನಲ್ಲಿ ಟಾಮ್ ಹ್ಯಾಂಕ್ಸ್ ನಿರ್ವಹಿಸಿದ ವಿಕ್ಟೋರ್ ನಾವೋರ್ಸ್ಕಿ ಪಾತ್ರವು ನಾಸ್ಸೆರಿಯ ಜೀವನದಿಂದ ಸ್ಪೂರ್ತಿ ಪಡೆದು ರಚಿಸಿದ್ದೆಂದು ಹೇಳಲಾಗುತ್ತದೆ. ಅದಕ್ಕಾಗಿ ನಾಸ್ಸೆರಿಗೆ ೨೫೦,೦೦೦ ಅಮೆರಿಕನ್ ಡಾಲರ್ ಸಂದಾಯವಾಗಿತ್ತೆಂದು ಅಮೆರಿಕಾದ ಅನೇಕ ಪತ್ರಿಕೆಗಳು ಬರೆದು ಕೊಂಡಿವೆ. ಆದರೆ ಸ್ಪೀಲ್ಬರ್ಗ್ ಅಥವಾ ಆತನ ತಂಡ ಈ ವಿಚಾರಗಳ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ.
ಫ್ರೆಂಚ್ ಸಿನಿಮಾ ‘ ಲಾಸ್ಟ್ ಇನ್ ಟ್ರಾನ್ಸಿಟ್ ‘ , ಇಂಗ್ಲಿಷ್ ಗೀತ ರೂಪಕ ‘ ಫ್ಲೈಟ್ ‘ , ಇಂಗ್ಲಿಷ್ ಹಾಗು ಪರ್ಷಿಯನ್ ಭಾಷೆಯಲ್ಲಿ ಚಿತ್ರೀಕರಿಸಲಾದ ‘ಸರ್ ಆಲ್ಡ್ರೆಡ್ ಆಫ್ ಚಾರ್ಲ್ಸ್ ಡಿ ಗಾಲ್ ಏರ್ಪೋರ್ಟ್ ‘ ಎನ್ನುವ ಸಾಕ್ಷ್ಯ ಚಿತ್ರ, ‘ದ ಫಿಫ್ಟೀನ್ ಇಯರ್ ಲೇಓವರ್ ‘ ಸೇರಿದಂತೆ ಅಕ್ಷರ ಮತ್ತು ದೃಶ್ಯ ರೂಪದ ಮೂಲಕ ಅನೇಕರು ಈತನ ವಿಚಿತ್ರ ಹಾಗು ಬಹು ಚರ್ಚಿತ ಜೀವನವನ್ನು ಜಗತ್ತಿಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ.
ಸ್ವಂತ ದೇಶದಲ್ಲಿ ನೆಲೆಯಿಲ್ಲದ, ನೆಲೆ ಕೊಡಲು ಮುಂದೆ ಬಂದ ದೇಶಗಳ ಆಹ್ವಾನವನ್ನು ತಿರಸ್ಕರಿಸಿದ, ತನ್ನ ಹಠವನ್ನು ಸಾಧಿಸುತ್ತಾ ವಿಮಾನ ನಿಲ್ದಾಣದಲ್ಲಿ ತ್ರಿಶಂಕುವಿನ ರೀತಿ ಜೀವನ ಸವೆಸಿ ಕೊನೆಗೆ ಪರದೇಶದಲ್ಲಿ ಪರದೇಶಿಯಾಗಿ ಅಂತ್ಯ ಕಂಡ ನಾಸ್ಸೆರಿ, ಭವಿಷ್ಯದಲ್ಲಿಯೂ ಸಹ ನೆನಪಿನಲ್ಲಿ ಉಳಿಯುವ ವ್ಯಕ್ತಿತ್ವದವನಾಗಿದ್ದಾನೆ. ಜಗತ್ತಿನಲ್ಲಿ ವಿಚಿತ್ರ ಮನಸ್ಥಿತಿಯ, ವಿಭಿನ್ನ ನಡೆನುಡಿಯ ನಾಸ್ಸೆರಿಯಂತಹ ಜನರು, ಜಗತ್ತಿನ ವಿಸ್ಮಯಕ್ಕೆ ಹಿಡಿದ ಕನ್ನಡಿಯಾಗಿದ್ದಾರೆ.

–ಮಾಲಿನಿ ವಾದಿರಾಜ್

