ದಶಮಸ್ಕಂದ – ಅಧ್ಯಾಯ – ೧೧ – ಉತ್ತರಾರ್ಧ
ದುರ್ಯೋಧನಾವಮಾನ
ಅಜಾತ ಶತ್ರು ಧರ್ಮರಾಜನು ನಡೆಸಿದ
ರಾಜಸೂಯಯಾಗದಿ
ದುರಹಂಕಾರಿ ದುರ್ಯೋಧನನೊಬ್ಬನ ಬಿಟ್ಟು
ಸಕಲರೂ ಯೋಗ್ಯತಾನುಸಾರ ಗೌರವಿಸಲ್ಪಟ್ಟು
ನಂತರದಿ ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗಿದರೂ
ಆಪ್ತ ಬಂಧುವೂ ಸೋದರಸದೃಶನೂ ಆದ
ದುರ್ಯೋಧನನಿಗೆ ಆದ ಅವಮಾನ
ಮುಂದೆ ಭೂ ಭಾರಹರಣ ಕಾರ್ಯಕೆ
ಮೂಲಪೀಠಿಕೆ ಎಂಬುದು
ಪ್ರಭು ಶ್ರೀಕೃಷ್ಣ ಸಂಕಲ್ಪ
ಇದ ಅರಿತವರ್ಯಾರೆಂಬುದು ನಿಗೂಢ
ದುರ್ಯೋಧನ ರಾಜಸೂಯಯಾಗದಿ
ಮೆರೆದ ಪಾಂಡವರ ವೈಭವವ ನೋಡಿ
ಅಸೂಯೆಗೊಂಡು ಮನದಿ ಕಳವಳವ ಪಡುತ್ತಿರೆ
ದೇವಲೋಕದ ಸಭಾ ಭವನವನ್ನೂ ಮೀರಿಸುವ
ಮಯನಿರ್ಮಿತ ಸಭಾ ಭವನದ ಸೌಂದರ್ಯ, ವೈಭವ
ಮಹಾರಾಣಿ ದ್ರೌಪದಿಯ ಸೌಕುಮಾರ್ಯಗಳು ಅವನ
ಮನೋವ್ಯಾಕುಲವ ಹೆಚ್ಚಿಸಿದವು
ಸುಯೋಧನ ಒಮ್ಮೆ ಸಭಾ ಭವನದಿ ನಡೆದು ಬರುತ್ತಿರೆ
ಚಂದ್ರಕಾಂತ ಶಿಲಾ ನಿರ್ಮಿತ ಸಭಾಂಗಣ ಶಿಲ್ಪ ಚಾತುರ್ಯದಿ
ಜಲಪೂರ್ಣವಾದ ಸರೋವರವೋ ಎಂಬಂತೆ
ಅವನಿಗೆ ಗೋಚರವಾಗೆ ತನ್ನ ಬಟ್ಟೆಗಳು
ತೋಯದಿರಲೆಂದು ಮೇಲಕ್ಕೆತ್ತಿಕೊಂಡದು
ನಂತರದಿ ಸಹಜವಾದ ನೆಲದಂತೆ
ಗೋಚರಿಸುತಿರ್ಪ ಸ್ಥಳದಿ ನಡೆದು ಅಲ್ಲಿ ನೀರಲ್ಲಿ
ಬಿದ್ದು ವಸ್ತ್ರಗಳು ಒದ್ದೆಯಾಗೆ
ಸಭಾ ಭವನದಿ ಉಪ್ಪರಿಗೆಯಲಿದ್ದ ಭೀಮ ಹಾಗೂ
ದ್ರೌಪದಿ ಮತ್ತಿತರ ಸ್ತ್ರೀಯರು
ಗೊಳ್ಳೆಂದು ನಗಲು
ಮಹಾ ದುರಭಿಮಾನಿ ದುರ್ಯೋಧನಗೆ
ಪ್ರಾಣಹೋದಂತೆ ವ್ಯಥೆಯಾಗಲು
ಇದ ತಿಳಿದ ಧರ್ಮರಾಜ
ಅಪಹಾಸ್ಯ ಮಾಡುವುದ ನಿವಾರಿಸಿದನಾದರೂ
ದುರ್ಯೋಧನ ಕಾಲಗತಿಯನನುಸರಿಸಿ
ತನಗೆ ತಾನೇ ಅವಮಾನ ಪಟ್ಟು
ದ್ರೌಪದಿ ಭೀಮಸೇನರಲಿ
ಅಗಾಧ ದ್ವೇಷಭಾವ ತಾಳಿ ಯಾರಿಗೂ ಹೇಳದೆ
ಹಸ್ತಿನಾವತಿಗೆ ತೆರಳಿದನು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45555

-ಎಂ. ಆರ್. ಆನಂದ, ಮೈಸೂರು

