ವಿಜ್ಞಾನ

ವಿಭಿನ್ನ ಸಂಶೋಧನೆಯ ಕಣಜ ಡಾ.ರಾಘವೇಂದ್ರ ಗಡಗ್ಕರ್

Share Button

ಪ್ರಕೃತಿಯು ಆಶ್ಚರ್ಯಗಳ, ವಿಸ್ಮಯಗಳ ಮತ್ತು ಕುತೂಹಲ ಹುಟ್ಟಿಸುವ ವಿಷಯಗಳ ಆಗರ. ಪ್ರಕೃತಿಯನ್ನು ತಿಳಿಯುವುದು ಅಷ್ಟು ಸುಲಭವಲ್ಲ. ಅದೂ ಒಬ್ಬ ಜೀವ ವಿಜ್ಞಾನದ ವಿದ್ಯಾರ್ಥಿಯಾಗಿ, ಶಿಕ್ಷಕರಾಗಿ ಮತ್ತು ವಿಜ್ಞಾನಿಯಾಗಿ ಅಭ್ಯಾಸ ಮಾಡಿದಾಗ, ಇದಕ್ಕೆ ಕೊನೆಯೆಂಬುದೇ ಇಲ್ಲ ಎನ್ನುವ ಸತ್ಯದ ಅರಿವಾಗುತ್ತದೆ. ಸಂಶೋಧನೆಗಳು ಈ ನಿಟ್ಟಿನಲ್ಲಿ ಅತ್ಯಂತ ಸಹಾಯಕವಾಗಿವೆ. ಜೀವವಿಜ್ಞಾನದಲ್ಲಿಯೇ ನೂರಾರು ವಿಭಾಗಗಳಿವೆ. ವಿಭಿನ್ನ ರೀತಿಯ ಸಂಶೋಧನೆಗಳು ನಡೆದಿವೆ ಮತ್ತು ನಡೆಯುತ್ತಿವೆ. ಇಂತಹ ವಿಭಿನ್ನ ರೀತಿಯ ಸಂಶೋಧನೆಯಲ್ಲಿ ತೊಡಗಿಕೊಂಡವರು ಡಾ.ರಾಘವೇಂದ್ರ ಗಡಗ್ಕರ್.

ಡಾ.ರಾಘವೇಂದ್ರ ಗಡಗ್ಕರ್‌ರವರ ಜನನ 28 ನೇ ಜೂನ್ 1953 ರಲ್ಲಿ ಕಾನ್ಪುರದಲ್ಲಾಯಿತು. ಇವರ ತಂದೆ ವಾಯುಪಡೆಯಲ್ಲಿ ಪೈಲಟ್ ಆಗಿದ್ದರು. ಹಾಗಾಗಿ ಅನೇಕ ಸ್ಥಳಗಳಲ್ಲಿ ಸೇವೆ ಸಲ್ಲಿಸಿದರು. ಬಾಲಕ ರಾಘವೇಂದ್ರನಿಗೆ ಕೂಡ ಅನೇಕ ಸ್ಥಳಗಳನ್ನು ನೋಡುವ, ವಿಶೇಷವಾಗಿ ಪ್ರಕೃತಿಯನ್ನು ಅವಲೋಕಿಸುವ ಅವಕಾಶ ದೊರೆಯಿತು. ಇದೊಂದು ರೀತಿಯಲ್ಲಿ ಪ್ರಕೃತಿ ಪ್ರೇಮ ಬೆಳೆಸಿಕೊಳ್ಳಲು ಅನುಕೂಲವಾಯಿತು. ಇವರ ಕಾಲೇಜು ಶಿಕ್ಷಣ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಆಯಿತು. ಪ್ರಾಣಿವಿಜ್ಞಾನದಲ್ಲಿ ಬಿ.ಎಸ್ಸಿ.) ಮತ್ತು ಎಂ.ಎಸ್ಸಿ. ಶಿಕ್ಷಣವನ್ನು ಪೂರೈಸಿದ ಗಡಗ್ಕರ್‌ರವರು ಸಂಶೋಧನೆಗೆ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರಿದರು. ಅಣು ಜೀವವಿಜ್ಞಾನದಲ್ಲಿ (ಮಾಲಿಕ್ಯುಲರ್ ಬಯಾಲಜಿ) ಪಿಎಚ್.ಡಿ. ಪಡೆದುಕೊಂಡರು.

ಓದುವಾಗಿನಿಂದಲೂ ಪ್ರಾಣಿವರ್ತನೆ (ಬಿಹೇವಿಯರ್) ಬಗ್ಗೆ ವಿಶೇಷವಾದ ಆಸಕ್ತಿಯನ್ನು ಡಾ.ಗಡಗ್ಕರ್ ಬೆಳೆಸಿಕೊಂಡಿದ್ದರು. ಪಿಎಚ್.ಡಿ. ನಂತರದ ಸಂಶೋಧನೆಗೆ ಇದೇ ವಿಷಯವನ್ನು ಆರಿಸಿಕೊಂಡರು. ಮನುಷ್ಯರ ಹಾಗೆಯೇ ಪ್ರಾಣಿಗಳೂ, ಒಂದು ಚಿಕ್ಕ ಇರುವೆಯೂ ಸಹ ತನ್ನದೇ ಆದ ವರ್ತನೆ ಮತ್ತು ನಡಾವಳಿಗಳನ್ನು ಹೊಂದಿರುತ್ತದೆ. ದೈನಂದಿನ ಜೀವನದಲ್ಲಿ ನಾವು ಕೆಲವು ಪ್ರಾಣಿ, ಪಕ್ಷಿ ಮತ್ತು ಕೀಟಗಳ ನಡಾವಳಿಯನ್ನು ಗಮನಿಸಿರುತ್ತೇವೆ. ಉದಾಹರಣೆಗೆ ನಾಯಿ, ಬೆಕ್ಕು, ಕಾಗೆ, ಪಾರಿವಾಳ ಮತ್ತು ಹಾವು ಮುಂತಾದವು. ಪ್ರಾಣಿ ಪ್ರಪಂಚದ ಎಲ್ಲಾ ಜೀವಿಗಳ ನಡೆಯು ಬಹಳ ಕೌತುಕ ಹುಟ್ಟಿಸುವ ವಿಷಯ. ಇದು ಜೀವವಿಜ್ಞಾನದ ಒಂದು ದೊಡ್ಡ ವಿಭಾಗವಾಗಿ ಬೆಳೆದಿದೆ. ಕೆಲವು ಕೀಟಗಳು ಸಂಘಜೀವಿಗಳು. ಅಂದರೆ ದೊಡ್ಡ ಗುಂಪುಗಳಲ್ಲಿ ವಾಸಿಸುತ್ತವೆ. ಜೇನುಹುಳುಗಳು, ಕಣಜಗಳು ಮತ್ತು ಇರುವೆಗಳು ಮುಖ್ಯ ಉದಾಹರಣೆಗಳು. ಇವು ಗುಂಪು ವರ್ತನೆಯನ್ನು ತೋರಿಸುತ್ತವೆ. ಇವುಗಳಲ್ಲಿ ಡಾ. ಗಡಗ್ಕರ್ ಅವರು ಕಣಜಗಳ ಮೇಲೆ ಮೂರು ದಶಕಗಳಿಗೂ ಹೆಚ್ಚಾಗಿ ಸಂಶೋಧನೆ ನಡೆಸಿ ಅದ್ಭುತ ವಿಷಯಗಳನ್ನು ದಾಖಲಿಸಿದ್ದಾರೆ. ತಮ್ಮದೇ ಆದ ಪ್ರತಿಭಾನ್ವಿತ ಸಂಶೋಧನಾ ಪಡೆಯನ್ನು ಹೊಂದಿದ್ದಾರೆ. ಈ ಸಂಶೋಧನೆಗಳಲ್ಲಿ ಪರಿಸರ ಮತ್ತು ವಿಕಾಸವೂ ಸೇರಿದೆ.

ತಮ್ಮ ಸಂಶೋಧನೆಗೆ ಇವರು ಸಾಮಾನ್ಯವಾಗಿ ಕಾಣಸಿಗುವ ಕಣಜವನ್ನು ಮಾದರಿಯಾಗಿ ಆರಿಸಿಕೊಂಡರು. ಇದರ ಹೆಸರು ರೊಪಾಲಿಡಿಯ ಮಾರ್ಜಿನೇಟ. ಇವರ ಮುಖ್ಯ ಸಂಶೋಧನೆಯು ವಿಕಾಸದ ಕ್ಷೇತ್ರದಲ್ಲಿ ನೈಜಸಾಮಾಜಿಕತೆ, ಇದರಿಂದ ಪ್ರತಿಪಾದಿಸಿದ ‘ತತ್ವ-ನಿಶ್ಚಿತ ಅಥವಾ ಭರವಸೆಯುಳ್ಳ ಅರ್ಹತೆ ಪುನಃ ಬರುತ್ತದೆ.’ ಡಾ. ಗಡಗ್ಕರ್‌ರವರ ಸಂಶೋಧನಾ ತಂಡವು ಈ ನಿಟ್ಟಿನಲ್ಲಿ ಮೂರು ದಶಕಗಳಿಂದ ಕಾರ್ಯ ನಿರತರಾಗಿದ್ದಾರೆ. ಕಣಜಗಳಲ್ಲಿ ಸಾಮಾಜಿಕ ವಿಕಾಸ ನಡೆಯುವ ಬಗ್ಗೆ ಸಂಶೋಧನೆ ನಡೆಸಿದ್ದಾರೆ.

ಡಾ. ರಾಘವೇಂದ್ರ ಗಡಗ್ಕರ್‍ರವರು ಇನ್ನೂರ ಎಪ್ಪತ್ತೈದಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಇವು ಪ್ರಕಟಗೊಂಡಿವೆ.

ಇಂತಹ ಮೇಧಾವಿ ವಿಜ್ಞಾನಿಯು ಪಡೆದಿರುವ ಪ್ರಶಸ್ತಿಗಳ ಪಟ್ಟಿ ದೊಡ್ಡದಾಗಿಯೇ ಇದೆ. ಜೈವಿಕ ವಿಜ್ಞಾನದಲ್ಲಿ ಶಾಂತಿಸ್ವರೂಪ್ ಭಟ್ನಾಗರ್ ಪ್ರಶಸ್ತಿ 1993 ರಲ್ಲಿ ಇವರಿಗೆ ಸಂದಿದೆ. ಜರ್ಮನಿಯ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮೆರಿಟ್ 2015 ರಲ್ಲಿ ಇವರ ಮುಡಿಗೇರಿದೆ. ಟಿಡಬ್ಲೂಯ ಎಎಸ್ ಪ್ರಶಸ್ತಿಯನ್ನು 1999 ರಲ್ಲಿ ನೀಡಲಾಗಿದೆ. ಇದಲ್ಲದೆ ಬಿ.ಎಂ. ಬಿರ್ಲಾ ವಿಜ್ಞಾನ ಪ್ರಶಸ್ತಿ ಮತ್ತು ಹೋಮಿ ಭಾಭಾ ಫೆಲೋಶಿಪ್ ಪಡೆದಿದ್ದಾರೆ. ಬರ್ದ್ವಾನ್ ವಿಶ್ವವಿದ್ಯಾಲಯ ಡಿ.ಎಸ್ಸಿ. ಪದವಿಯನ್ನು ನೀಡಿದೆ. ವಿಸ್ಸೆನ್ಸ್ ಶಾಫ್ಟ್ ಕಾಲೇಜು ಸಂಸ್ಥೆ ಬರ್ಲಿನ್ (ಜರ್ಮನಿ), ಇಲ್ಲಿಯ ಅನಿವಾಸಿ ಶಾಶ್ವತ ಫೆಲೋ ಆಗಿದ್ದಾರೆ. ಅಮೆರಿಕದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ಸ್‌ನಲ್ಲಿ ವಿದೇಶಿ ಫೆಲೋ ಆಗಿ ೨೦೦೬ರಲ್ಲಿ ಚುನಾಯಿತರಾಗಿದ್ದಾರೆ. ಈ ಗೌರವಕ್ಕೆ ಪಾತ್ರಗಿರುವ ಭಾರತೀಯ ವಿಜ್ಞಾನಿಗಳು ಕೆಲವರು ಮಾತ್ರ.

ಡಾ. ಗಡಗ್ಕರ್ ಅನೇಕ ಶೈಕ್ಷಣಿಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಂಟೆಂಪ್ರರಿ ಸ್ಟಡೀಸ್ ವಿಭಾಗದ ಮುಖ್ಯಸ್ಥರು, ಜೆ.ಎನ್.ಸಿ. ಮುಂದುವರಿದ ಸಂಶೋಧನಾ ಸಂಸ್ಥೆಯ ಗೌರವ ಪ್ರಾಧ್ಯಾಪಕ, ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಯ ಸಂಸ್ಥೆ, ಕೊಲ್ಕೊತ್ತ ಮತ್ತು ವಿಜ್ಞಾನದ ಇತಿಹಾಸದ ಸಂಶೋಧನಾ ಸಮಿತಿ ದೆಹಲಿಯಲ್ಲಿ ಸದಸ್ಯತ್ವ. ಇದಲ್ಲದೆ ಜರ್ಮನಿಯ ಲಿಯೋಪೋಲ್ಡಿನ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ನಲ್ಲಿ ಸದಸ್ಯರು. ಇವರಿಗೆ ಮಾರ್ಚ್‍ 2023ರಲ್ಲಿ ಫರೀದಾಬಾದ್‍ನ ‘ರೀಜಿನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ’ ವತಿಯಿಂದ ಗೌರವ ಸಂದಿದೆ.

ಇವರು ಒಳ್ಳೆಯ ಬರೆಹಗಾರರು ಕೂಡ. ಇವರ ಮೊದಲ ಪುಸ್ತಕ ‘ಸರ್ವೈವಲ್ ಸ್ಟ್ರಾಟಜೀಸ್’ ಚೀನೀ ಮತ್ತು ಕೊರಿಯನ್ ಭಾಷೆಗಳಿಗೆ ಅನುವಾದಗೊಂಡಿದೆ. ಈ ಪುಸ್ತಕದಲ್ಲಿ ಡಾ. ಗಡಗ್ಕರ್‌ರವರು ಸಾಮಾನ್ಯರಿಗೂ ಅರ್ಥವಾಗುವಂತೆ ವರ್ತನೆಯ ಜೀವವಿಜ್ಞಾನ ಮತ್ತು ಸಾಮಾಜಿಕ ಜೀವ ವಿಜ್ಞಾನಗಳನ್ನು ವಿವರಿಸಿದ್ದಾರೆ. ಇನ್ನೊಂದು ಪುಸ್ತಕ ‘ದಿ ಸೋಷಿಯಲ್ ಬಯಾಲಜಿ ಆಫ್ ರೊಪಾಲಿಡಿಯ ಮಾರ್ಜಿನೇಟ’. ಇದರಲ್ಲಿ ತಮ್ಮ ಎರಡು ದಶಕಕ್ಕೂ ಮೀರಿದ ಸಂಶೋಧನೆಯ ಅನುಭವವನ್ನು ವಿವರಿಸಿದ್ದಾರೆ. ಈ ಕಣಜದ ನೈಜ ಸಾಮಾಜಿಕತೆ (ಯೂಸೋಷಿಯಾಲಿಟಿ) ಯ ವಿಕಾಸವನ್ನು ವಿವರಿಸಿದ್ದಾರೆ.

ಡಾ. ಗಡಗ್ಕರ್‌ರವರು ಒಂದು ಹೊಸ ಪ್ರಯೋಗವನ್ನು ಮಾಡಿದ್ದಾರೆ. ವಿವಿಧ ವಿಭಾಗಗಳಾದ ತತ್ವಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಕಾನೂನು, ಸಾಹಿತ್ಯ, ಕಲೆಗಳು, ಸಿನೆಮಾ ಇವುಗಳು ಮತ್ತು ಪ್ರಾಕೃತಿಕ ಮತ್ತು ಮಾನವ ವಿಜ್ಞಾನಗಳ ಸಮ್ಮಿಶ್ರ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಹೊಸ ರೀತಿಯ ಸಂಶೋಧನಾ ರೀತಿಗಳನ್ನು ರೂಪಿಸುವುದೇ ಆಗಿದೆ.

ಇಂತಹ ವಿಭಿನ್ನ ಯೋಜನೆಗಳ ಆವಿಷ್ಕಾರ ಮಾಡುವ ಈ ವಿಜ್ಞಾನಿ ಜ್ಞಾನದ ಕಣಜವೇ ಎನ್ನಿಸುತ್ತದೆ. ತಮ್ಮ ಕಾಲೇಜಿನ ದಿನಗಳಿಂದಲೇ ಕಣಜವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಡಾ.ರಾಘವೇಂದ್ರ ಗಡಗ್ಕರ್, ಅದರ ಬಗ್ಗೆಯೇ ಸಂಶೋಧನೆ ನಡೆಸಿದ್ದು ಆಶ್ಚರ್ಯ! ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಹೆಮ್ಮೆಯ ಸಂಶೋಧಕ.

ಡಾ. ಎಸ್. ಸುಧಾ, ಮೈಸೂರು

    Leave a Reply

     Click this button or press Ctrl+G to toggle between Kannada and English

    Your email address will not be published. Required fields are marked *