ಪರಾಗ

ಅತ್ತೆ ಮನೆ ಸೊಸೆ

Share Button

ಒಂದು ಮೂವತ್ತು ನಲವತ್ತು ವರುಷಗಳಷ್ಟು ಹಿಂದಕ್ಕೆ ಹೋಗೋಣ. ಏಕೆಂದರೆ ನಾನೀಗ ಹೇಳ ಹೊರಟಿರುವ ವಿಷಯಗಳು ಖಂಡಿತಾ ಸಮಕಾಲೀನವಲ್ಲ. ವೇಗವಾಗಿ ಬೆಳೆಯುತ್ತಿರುವ ಕಾಲಮಾನದಲ್ಲಿ ಪದ್ಧತಿಗಳೂ, ರೀತಿ ರಿವಾಜುಗಳೂ ತಂತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡು ಹೊಸ ಹೊಸ ರೂಪ, ಲಾವಣ್ಯ, ಫೋಟೋಗಳು, ರೀಲುಗಳುಗೆ ಫೋಸ಼್ ಕೊಡುವಂತಹ ಕಾಲ ಇದಾಗಿದೆ.

ಇರಲಿ, ಗಾಡಿ ಹಳಿ ಬಿಟ್ಟು ಹೋಗುವುದು ಬೇಡ. ನಾಲ್ಕೈದು ದಶಕಗಳ ಹಿಂದೆ ನಾನೂ, ನನ್ನ ಗೆಳತಿಯರೂ, ಪರಿಚಯಸ್ಥರುಗಳೂ ಅನುಭವಿಸಿದ, ಕಿವಿಯಿಂದ ಕಿವಿಗೆ ಹರಡಿ ಬಂದ ʼಅತ್ತೆ ಮನೆ ಸೊಸೆʼಯಂದಿರುಗಳ ಪರದಾಟ, ಪರಪಾಟಲುಗಳನ್ನು ನಿಮ್ಮೊಂದಿಗೆ ಹಂಚಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳುವಾಸೆ . . .

ಏಕಾದಶಿ ಎಂದು ಅಂದ್ರೆ. . . ಆಚಾರ್ರ ಹೆಂಡ್ತಿ ಸೀರೆ ನೋಡಿ ತಿಳಿಯುತ್ತೆ ಅಂತಿದ್ರಂತೆ. .

ಆಂ .. ಎಂದವರಿಗೆ, ಹೂಂ ಗಾಭರಿಯಾಗಬೇಡಿ, ಏಕಾದಶಿಯ ಫಳಾರಕ್ಕೆಂದು ಹಿಂದಿನ ದಿನ ಆಚಾರ್ರ ಹೆಂಡ್ತಿ ದೋಸೆ ಹಿಟ್ಟು, ಇಡ್ಲಿ ಹಿಟ್ಟು ರುಬ್ಬುತ್ತಿದ್ದರಂತೆ, ರುಬ್ಬುವಾಗ ಒರಳಿನಿಂದ ಹಾರಿದ ಹಿಟ್ಟಿನ ಕಲೆಗಳು ಆಚಾರ್ರ ಹೆಂಡತಿಯ ಸೀರೆಗಳ ಮೇಲೆ ಇದ್ದರೆ, ಅದರ ಮಾರನೆಯ ದಿನವೇ ಏಕಾದಶಿ ಅಂತ ಖಾತ್ರಿಯಾಗುತ್ತಿತ್ತಂತೆ. . . ಆಗ ಮಿಕ್ಸರ್‌, ಗ್ರೈಂಡರುಗಳು ಇರುತ್ತಿರಲಿಲ್ಲವಲ್ಲಾ. . . ಸರಿ, ಆಚಾರ್ರ ಮನೆಗೆ ಸೊಸೆ ಬಂದ ಕೂಡಲೇ ವಾರಕ್ಕೆಡು ದಿನ ಬೆಳಗ್ಗೆ ಎದ್ದ ಕೂಡಲೇ ಆಚಾರ್ರ ಹೆಂಡತಿ ಅಂದ್ರೆ ಹೊಸಾ ಅತ್ತೆಮ್ಮನವರು ಇಡ್ಲಿ, ದೋಸೆಗಾಗಿ ಅಕ್ಕಿ,ಉದ್ದಿನಬೇಳೆ ನೆನೆಸಿಟ್ಟು ಬಿಡುತ್ತಿದ್ದರಂತೆ, ಹೇಗಿದ್ರೂ ರುಬ್ಬಕ್ಕೆ ಹೊಸಾ ಸೊಸೆ ಸಿಕ್ಕಿದ್ದಾಳಲ್ಲಾ. . .

ಹೊಸಾ ಸೊಸೆ ಎಷ್ಟು ರುಬ್ಬಿದ್ರೂ ರುಬ್ಬುವ ಗುಂಡು ಒರಳಿಗೆ ಕಚ್ಚಿಕೊಳ್ಳುತಿತ್ತು, ಹಳೇ ಅನುಭವೀ ಸೊಸೆ, ಅಂದ್ರ ಅತ್ತೆಮ್ಮನವರು ಟಿಪ್ಸ್‌ ಕೊಟ್ಟರಂತೆ – ನೆತ್ತಿ ಮೇಲೆ ತಣ್ಣಿರು ತಟ್ಕೊಂಡು ರುಬ್ಬು, ಕಲ್ಲು ಒರಳನ್ನು ಬಿಡುತ್ತೇ – ಅಂದು ಆಚೆ ನಡೆದರಂತೆ.

ನಾನು ಈ ವಿಚಾರವನ್ನು ನನ್ನ ಮತ್ತೊಂದು ಲೇಖನದಲ್ಲೂ ಬರೆದಿದ್ದೇನೆ, ಆದರೆ ಅದು ರುಬ್ಬವ ಗುಂಡಿನ ಕಥೆಯಲ್ಲಿ, ಇದು ಹೊಸ ಸೊಸೆಯ ಪರಿಪಾಟಲಾದ್ದರಿಂದ ಅಪ್ರಸ್ತುತ ಅಲ್ಲ ಎಂದು ಭಾವಿಸುತ್ತಾ ಮುಂದುವರೆಯುತ್ತೇನೆ.

ಸುಮಾರು ಸಮಯದ ನಂತರ ಹಿಂದಿರುಗಿ ಬಂದು ನೋಡಿದ್ರೆ, ಹೊಸ ಸೊಸೆಯ ನೆತ್ತಿಯಿಂದ ತಣ್ಣಿರು ಧಾರಾಕಾರವಾಗಿ ಸುರಿಯುತಿತ್ತು. ಕಲ್ಲು ಒರಳನ್ನು ಮಾತ್ರ ಬಿಟ್ಟಿರಲಿಲ್ಲ!
ಅತ್ತೆ ಹೇಳಿದ್ದು, ರುಬ್ಬುವ ಗುಂಡಿನ ನೆತ್ತಿಗೆ ನೀರು ತಟ್ಟು ಅಂತ, ಸೊಸೆ ತನ್ನ ನೆತ್ತಿಗೇ ನೀರು ತಟ್ಟಿಕೊಂಡು ರುಬ್ಬು ಕಲ್ಲು ಒರಳು ಬಿಟ್ಟು ಮೇಲೇಳುವ ಮ್ಯಾಜಿಕ್ಕಿಗಾಗಿ ಕಾದಿದ್ದಳಂತೆ! ಹೇಗಿದೆ ಅತ್ತೆ ಮನೆ ಸೊಸೆಯ ಪರಿಪಾಟಲು?

ಮಧ್ಯಾಹ್ನ ಉಂಡು ಕೈ ತೊಳೆಯುತ್ತಿರುವಾಗಲೇ ಅತ್ತೆ ಕೇಳುತ್ತಿದ್ದರಂತೆ – ರಾತ್ರಿಗೆ ಹೇಗಿರುತ್ತೆ ಸೊಸೆ ಮುದ್ದೇ ನಿನ್ನ ಹಸಿವು? ಎಷ್ಟು ಅಕ್ಕಿ ಹಾಕಲಿ?

ಹೊಟ್ಟೆ ಭಾರವಾಗಿದ್ದ ಸೊಸೆ ಹಿಂದೆ ಮುಂದಿನ ಪರಿವೆಯೇ ಇಲ್ಲದೆ ಉತ್ತರಿಸುತ್ತಿದ್ದಳಂತೆ – ಅಯ್ಯೊಪ್ಪಾ, ಈಗಲೇ ಹೊಟ್ಟೆ ಭಾರ, ನನಗಂತೂ ರಾತ್ರಿ ಊಟ ಬೇಡವೇ ಬೇಡ, ಒಂದು ಲೋಟ ಮಜ್ಜಿಗೆ ಸಾಕು ..
ಸಂಜೆಯ ವೇಳೆಗೆ ಹೊಟ್ಟೆ ಚುರುಗುಟ್ಟಿಕೊಂಡು ಹಸಿಯತೊಡಗಿದರೂ ರಾತ್ರಿ ಎಲ್ಲರೂ ಊಟ ಮಾಡುತ್ತಿದ್ದಾಗ ಒಂದು ಲೋಟ ನೀರು ಮಜ್ಜಿಗೆಗೆ ಉಪ್ಪು ಹಾಕಿಕೊಂಡು ಪರಿತಪಿಸುತ್ತಾ ಕುಡಿಯುವ ಸೊಸೆಯ ಹುಂಬತನಕ್ಕೂ, ಅತ್ತೆಯ ಚಾಲಾಕಿತನಕ್ಕೂ ನಗುವುದೋ ಅಳುವುದೋ ನೀವೇ ಹೇಳಿ.

ಮುದ್ದಾಗಿ ಬೆಳೆದಿದ್ದ ಮಗಳನ್ನು – ಒಬ್ಬಾಳೆ ಮಗಳಿವಳೂ, ಎಮ್ಮ ಮನೆ ಅರಗಿಳಿಯೂ ಅಬ್ಬರದಾ ನುಡಿಗಳಿಗೆ ಹೆದರುವಳೂ, ಸಜ್ಜನರೇ ಒಪ್ಪಿಸುವೆ ನೀ ಹೂವಾ ಪ್ರೇಮದಲಿ ಸಲಹಿಯಿರಿ – ಎಂದು ಕಣ್ಣೀರ್ಗರೆದು ಹಾಡುತ್ತಾ ಮನೆ ತುಂಬಿಸಿದ್ದಾಯಿತು.

ಮಗಳು ಮದುವೆಯಾಗಿ ಹೋದಾಗಿನಿಂದ ಸುತ್ತುಗೆಲಸಕ್ಕೆ ಯಾರಿಲ್ಲದೆ ಬಸವಳಿದಿದ್ದ ಅತ್ತೆಮ್ಮ, ನವನವೀನ ಸೊಸೆಗೆ, ನೀರೊಲೆಗೆ ಹೊಟ್ಟು ತುಂಬಿಸುವ ಕೆಲಸವನ್ನು ವಹಿಸಿಬಿಟ್ಟರು.
ಮಧ್ಯಾನ್ಹದ ಕಾಫಿಯ ನಂತರ ಮುಖ ತೊಳೆಯಲು ಬಚ್ಚಲ ಮನೆಗೆ ಹೋದಾಗ ನೀರೊಲೆಯಿಂದ ಮೇಲೆ ಮೇಲೆ ಮಾತ್ರ ಸ್ವಲ್ಪ ಬೂದಿ ತೆಗೆದು, ಒಲೆಯೊಳಗೆ ಮರದ ಹೊಟ್ಟನ್ನು ತುಂಬಿಸಿ, ಒಂದು ರೊಟ್ಟು ಅಥವಾ ಕರಟದ ತುಂಡಿನ ಮೇಲೂ ಸ್ವಲ್ಪ ಹೊಟ್ಟನಿಟ್ಟು ಸೀಮೆ ಎಣ್ಣೆ ಸುರಿದು ಒಲೆಯೊಳಗಿಟ್ಟು ಬರುತ್ತಿದ್ದರು ಅತ್ತೆಮ್ಮನವರು. ಮಲಗುವ ಮುಂಚೆ ಒಂದು ಬೆಂಕಿ ಕಟ್ಟಿ ಗೀರಿ ನೀರೊಲೆಯೊಳಗಿಟ್ಟು ಮಲಗಿದರೆ, ಬೆಳಗೆದ್ದು ಬಚ್ಚಲ ಮನೆಗೆ ಹೋಗುವ ವೇಳೆಗೆ ಯಾವ ಸೋಲಾರ್‌, ಬಾಯ್ಲರ್‌ ಸ್ವಿಚ್ ಗಳನ್ನು ಹಾಕುವ ತಂಟೆಯಿಲ್ಲದಂತೆ ಹೂತಿಟ್ಟಿದ್ದ ಹಂಡೆಯ ತುಂಬಾ ಬಿಸಿ ಬಿಸಿ ನೀರು ತಯಾರಾಗಿರುತಿತ್ತು. ಶಾಖ ದಂಡವಾಗಬಾರದೆಂದು ಹಂಡೆಯ ಬಾಯಿಯ ಮೇಲೊಂದು ಬಿಂದಿಗೆ, ಬಿಂದಿಗೆಯ ಮೇಲೊಂದು ತಂಬಿಗೆ ಕೂಡಾ ತಣ್ಣೀರು ತುಂಬಿಕೊಂಡು ಮೇಲೊಂದು ಪುಟ್ಟ ಮರದ ತುಂಡೊಂದನ್ನು ಮುಚ್ಚಿಕೊಂಡು ರಾತ್ರಿಯಿಂದಲೇ ಕುಳಿತಿರುತ್ತಿದ್ದವಲ್ಲಾ ಅದರ ನೀರೂ ಸಹ ಬಿಸಿಯಾಗಿ ಮುಖ ತೊಳೆಯಲೂ ಬಿಸಿ ನೀರು ತಯಾರಾಗಿರುತಿತ್ತು.

ಸರಿ, ಹೊಟ್ಟು ತುಂಬುವ, ರಾತ್ರಿ ಬೆಂಕಿಕಡ್ಡಿ ಗೀರಿ ಇಡುವ ಕೆಲಸ ಸೊಸೆಗೆ ವಹಿಸಿದ್ದಾಯಿತು.
ಯಾವ ಕೆಲಸ ಮಾಡಿಗೊತ್ತಿಲ್ಲದ ತವರುಮನೆಯ ಅರಗಿಳಿಗೆ ಇದೇ ಒಂದು ಕೆಲಸದ ದೊಡ್ಡ ಟೆನ್ಷನ್‌ ಆಗುತಿತ್ತು. ಅಲ್ಲದೆ ನಾಲ್ಕು ಗಂಟೆಗೆ ಕಾಫಿಯಾದ ನಂತರ, ಐದು ಗಂಟೆಗೆ ಆಫೀಸಿನಿಂದ ಗಂಡ ಬರುವ ವೇಳೆಗೆ ಅಚುಕಟ್ಟಾಗಿ ಅಲಂಕರಿಸಿಕೊಂಡು ತಾನು ಓದಿದ ಕಾದಂಬರಿಗಳ ನಾಯಕಿಯರಂತೆ ಕುಡಿನೋಟ ಬೀರುತ್ತಾ ಬಾಗಿಲಲ್ಲಿ ಕಾದಿರಬೇಕಿತ್ತಲ್ಲಾ ಅದಕ್ಕೆ ಒಂದು ಗಂಟೆ ಸಾಕೆ? ಅದಕ್ಕಾಗಿಯೇ ಹೊಸ ಸೊಸೆ ಒಂದು ಪ್ಲಾನ್‌ ತಯಾರಿಸಿದಳು. ಬೆಳಗ್ಗೆ ತಿಂಡಿಯ ಸಂಭ್ರಮವೆಲ್ಲಾ ಮುಗಿದು ಅಡುಗೆಗೆಂದು ಅತ್ತೆಮ್ಮನವರಿಗೆ ಎಲ್ಲ ರೀತಿಯ ಸಹಾಯ ಮಾಡಿ ಬಟ್ಟೆ ಒಗೆಯಲು ಇತ್ತ ಬಂದವಳೇ ಬಟ್ಟೆ ಒಗೆದು ಒಣಗಲು ಹಾಕಿ, ಕೆಲಸ ಮುಗಿಸಿಯೇ ಬಿಡೋಣ ಎಂದು ಕೊಳ್ಳುತ್ತಾ ಒಲೆಗೆ ಹೊಟ್ಟು ತುಂಬಿ, ಕರಟದ ತುಂಡಿಗೂ ಇಷ್ಟು ಹೊಟ್ಟು ತುಂಬಿ ಸೀಮೆ ಎಣ್ಣೆ ಸುರಿದು ಒಲೆಯೊಳಗಿಟ್ಟು ಈ ಕಡೆ ಬಂದಳು. ಊಟ ಮತ್ತು ವಿಶ್ರಾಂತಿಯೆಲ್ಲಾ ಮುಗಿಯಿತು, ಕಾಫಿಯೂ ಆಯಿತು.

ಸೊಸೆ ಅಲಂಕರಿಸಿಕೊಳ್ಳಲು ರೂಮಿನೆಡೆಗೆ ನಡೆದರೆ ಅತ್ತೆ ಮುಖ ತೊಳೆಯಲು ಬಚ್ಚಲ ಮನೆಯೆಡೆಗೆ ಹೋದವರು – ಹಂಡೆಯ ಮೇಲಿಟ್ಟ ಬಿಂದಿಗೆಯ ಮೇಲಿನ ತಂಬಿಗೆಗೆ ಕೈ ಹಾಕಿದರೆ, ಸುಡು ಸುಡು ಬಿಸಿನೀರು! ಏನಿದು ಮ್ಯಾಜಿಕ್‌ ಎಂದು ನೋಡಿ ವಿಚಾರಿಸಿದಾಗ ಸೊಸೆಗೆ ಆದ, ಒಲೆಗೆ ಹೊಟ್ಟು ತುಂಬುವ ಗುರುತರವಾದ, ಜವಾಬ್ದಾರಿಯುತವಾದ ಕೆಲಸದ ಟೆನ್ಷನ್‌ ತಿಳಿದು ಬಂತು. ಇನ್ನೂ ಬಿಸಿ ಆರಿರದ ಒಲೆಗೆ ತುಂಬಿದ ಹೊಟ್ಟೆಲ್ಲಾ ಶಾಖಕ್ಕೆ ಹೊತ್ತಿಕೊಂಡು ಕಡ್ಡಿ ಗೀರಿ ಹಚ್ಚದೇನೇ ನೀರೆಲ್ಲಾ ಬಿಸಿಯಾಗಿಬಿಟ್ಟಿತ್ತು! ನಗುವುದೋ ಅಳುವುದೋ ನೀವೇ ಹೇಳಬೇಕು.

ಈ ಅನಾಹುತದ ನಂತರವೂ ಪೂರ್ತಿಯಾಗಿ ಬುದ್ಧಿ ಕಲಿಯದ ಸೊಸೆ ಮುದ್ದು, ಹೊಟ್ಟು ಹಾಕುವುದು ಬೇಡ ಕೊನೇ ಪಕ್ಷ ಮೇಲ್ಮೈ ಬೂದಿಯನ್ನಾದರೂ ಬಟ್ಟೆಯ ಕೆಲಸ ಮುಗಿದ ಕೂಡಲೇ ತೆಗೆದಿಟ್ಟಿರೋಣ, ಸಂಜೆಯ ವೇಳೆಗೆ ಅಷ್ಟಾದರೂ ಕೆಲಸ ಕಮ್ಮಿಯಾಗುವುದಲ್ಲಾ ಎಂದು ಯೋಚಿಸಿ ಬೂದಿ ತೆಗೆದು ಅಲ್ಲೇ ಮಾರು ದೂರದಲ್ಲಿದ್ದ ಮಾವು, ಸೀಬೇ ಮರಗಳ ಬುಡಕ್ಕೆ ಹಾಕಿ ಒಳಗೆ ಬಂದಳು. ಅತ್ತೆ ಅಡುಗೆಯ ಕೆಲಸ ಪೂರೈಸಿ ಒಗ್ಗರಣೆ ಕೊಟ್ಟು ಹೊರ ಬಂದರು. ಸೊಸೆ ರೂಮಿನಲ್ಲಿ ಕಾದಂಬರಿ ಹಿಡಿದು ಕಲ್ಪನಾ ಲೋಕದಲ್ಲಿ ತೇಲುತ್ತಿದ್ದಳು.

ಹೊರಬಂದ ಅತ್ತೆ ಕಿಟಾರ್‌ ಎಂದು ಕಿರುಚಿದರು, ಸೊಸೆ ಓಡಿ ಬಂದಳು, ನೋಡಿದರೆ ಸೀಬೆ ಮತ್ತು ಮಾವಿನ ಕೆಳಗಿನಿಂದ ದೊಡ್ಡದಾದ ಅಗ್ನಿಯ ಜ್ವಾಲೆಯೊಂದು ತನ್ನ ಕೆನ್ನಾಲಿಗೆಯನ್ನು ಚಾಚಿಕೊಂಡು ಕಾಮನ ಹಬ್ಬದ ಅಗ್ನಿಯಂತೆ ಧಗಧಗನೆ ಉರಿಯುತ್ತಿದೆ! ಸಮಯ ಪ್ರಜ್ಞೆಯಿಂದ ಅತ್ತೆಯವರೇನೋ ಬಕೀಟಿನಲ್ಲಿ ತುಂಬಿ ತುಂಬಿ ತಣ್ಣಿರನ್ನು ಎರೆಚಿ ಬೆಂಕಿಯನ್ನು ನಂದಿಸಿದರಾದರೂ ಸೊಸೆಯೆಡೆಗೆ ಬೀರಿದ ಬಿರುನೋಟದ ಬಿಸಿ ಆ ಜ್ವಾಲಾಗ್ನಿಯನ್ನು ಮೀರಿಸಿತ್ತು.

ಆದಿದ್ದಿಷ್ಟು – ಸೊಸೆ ಮುದ್ದು ಒಲೆಯಿಂದ ತೆಗೆದು ಗಿಡದ ಕೆಳಗೆ ಹಾಕಿದ ಬಿಸಿ ಬೂದಿಯಲ್ಲಿನ್ನೂ ಬೆಂಕಿಯ ಕಿಡಿಗಳಿದ್ದವು. ಮರದ ಕೆಳಗೆ ಬಿದಿದ್ದ ತರಗೆಲೆಗಳ ಮೇಲೆ ಬಿದ್ದ ಬಿಸಿಬೂದಿ ಮತ್ತದರಲ್ಲಿನ ಬೆಂಕಿಯ ಕಿಡಿಗಳಿಂದಾಗಿ ಹಾಗೂ ಬೇಸಿಗೆಯ ಬಿಸಿಲು ಮತ್ತು ಬಿಸಿಗಾಳಿಯಿಂದಾಗಿ ಬೆಂಕಿ ಹೊತ್ತೊಕೊಂಡು ಬಿಟ್ಟಿತ್ತು.

ಸೊಸೆ ಮುದ್ದಿನ ಮಂಡೆಗೆ ಹೊಳೆಯಲೇ ಇಲ್ಲ, ಯಾಕೆ ತಾನು ಪ್ಲಾನ್‌ ಮಾಡಿ ಎಲ್ಲ ಕೆಲಸಗಳನ್ನೂ ಬೇಗ ಬೇಗ ಮಾಡಿ ಮುಗಿಸಿ ಅತ್ತೆಯ ಮೆಚ್ಚಿನ ಸೊಸೆಯಾಗಬೇಕೆಂದುಕೊಂಡರೆ, ಹೀಗಾಗುತ್ತದಲ್ಲಾ … ಎಂದು ಚಿಂತಾಕ್ರಾಂತಳಾಗಿ ಕುಳಿತುಬಿಟ್ಟಳು ನಮ್ಮ ಸೊಸೆ ಮುದ್ದು.

ಒಂದು ದಿನ ಕೆಲಸದ ನಿಂಗಮ್ಮ ಬಂದಿರಲಿಲ್ಲ, ಮನೆಯೆಲ್ಲಾ ಗುಡಿಸಿ ಸಾರಿಸಿ, ಹೊಸ ಸೊಸೆ ಸುಸ್ತಾಗಿಬಿಟ್ಟಿದ್ದಳು. ತಿಂಡಿ ಕಾಫಿಗಳೆಲ್ಲಾ ಮುಗಿದ ನಂತರ ಅತ್ತೆ ಹೇಳಿದರು – ನಾನು ಮಾರ್ಕೆಟ್ಟಿಗೆ ಹೋಗಿ ತರಕಾರಿ ತರುತ್ತೇನೆ, ಬರುವಷ್ಟರಲ್ಲಿ ಪಾತ್ರೆಗಳನ್ನು ತೊಳೆದಿಟ್ಟು ಬಿಡು.

ಅತ್ತೆ ಹೊರಟರು, ಸೊಸೆ ತನ್ನ ಕರ್ಮಕ್ಕೆ ತಾನೇ ಹಳಿದುಕೊಳ್ಳುತ್ತಾ ಬೆಳಗ್ಗೆ ತಿಂಡಿಯ, ನಿನ್ನೆಯ ಪಾತ್ರೆಗಳನ್ನೆಲ್ಲಾ, ಬಚ್ಚಲು ಮನೆಯಿಂದ ಸ್ವಲ್ಪ ದೂರದಲ್ಲಿದ್ದ ದಾಳಿಂಬೆ ಗಿಡದ ಬುಡಕ್ಕೆ ತೆಗೆದುಕೊಂಡು ಹೋಗಿ ರಾಶಿ ಹಾಕಿಕೊಂಡು ಕುಕ್ಕರಗಾಲಲ್ಲಿ ಕುಳಿತು ತೊಳೆಯತೊಡಗಿದಳು. ನೆತ್ತಿಯ ಮೇಲೆ ಸುಡುವ ಬಿಸಿಲು, ಉರಿಯುತ್ತಿರುವ ಕೈಗಳು, ಕೋಮಲೆ ಸೊಸೆ ಬಸವಳಿದು ಬೆಂಡಾದಳು. ಕೈ ತೊಳೆದು ಸೆರಗನ್ನು ತೆಗೆದು ತಲೆಯ ಮೇಲೆ ಹಾಕಿಕೊಂಡು ಉಜ್ಜಿ ಉಜ್ಜಿ ಪಾತ್ರೆಗಳನ್ನು ತೊಳೆಯಿತ್ತಿದ್ದಳು. ಗಂಟಲಲ್ಲಿ ಹಾಡು ಗುನುಗುಟ್ಟುತ್ತಿತ್ತು – ಇದು ಯಾರು ಬರೆದ ಕಥೆಯೋ. . . ನನಗಾಗಿ ಬಂದ ವ್ಯಥೆಯೋ .

ತರಕಾರಿ ತರಲು ಹೋಗಿದ್ದ ಅತ್ತೆ ಬಂದವರೇ, ಮರದ ಬುಡದಲ್ಲಿ ಕುಳಿತು ರಣರಣ ಬಿಸಿಲಲ್ಲಿ ತಲೆಯ ಮೇಲೆ ಸೆರಗ ಹೊದ್ದು ವಿಷಾದಪೂರಿತ ಹಾಡು ಗುನುಗುತ್ತಾ ಮುಸುರೆ ತಿಕ್ಕುತ್ತಿದ್ದ ಸೊಸೆಯನ್ನು ಕಂಡವರೇ – ಅಯ್ಯೋ ನೀನ್ಯಾಕೆ ಅಲ್ಲಿಗೆ ಪಾತ್ರೆ ತೆಗೆದುಕೊಂಡು ಹೋಗಿ ಹಾಕಿಕೊಂಡು ತೊಳೆಯಲು ಕುಳಿತಿದ್ದೀಯಾ? ಅಲ್ಲೇ ಅಡುಗೇ ಮನೆಯಲ್ಲೇ ತೊಳೆಯಬಾರದಿತ್ತಾ . . .

ನೀವು ಹೇಳಿ ಹೋಗಬೇಕಿತ್ತಲ್ಲವಾ . . . .ಎಂದು ಗಂಟಲವರೆಗೆ ಬಂದ ಮಾತನ್ನು ಹಾಗೆಯೇ ನುಂಗಿಕೊಂಡು – ಇರಲಿ ಬಿಡಿ ಅತ್ತೆ – ಎಂದಳು. ತಾನು ಅಮ್ಮನ ಮನೆಯಲ್ಲಿ ಕೆಲಸ ಕದಿಯಲು ಮಾಡುತ್ತಿದ್ದ ನಖರಾಗಳನ್ನೆಲ್ಲಾ ಜ್ಞಾಪಿಸಿಕೊಂಡು ಖಿನ್ನನಾದಳು.

ಇದೀಗ ದಶಕಗಳೇ ಕಳೆದಿವೆ. ಹಿಂದಿನದೆಲ್ಲಾ ಜ್ಞಾಪಿಸಿಕೊಂಡರೆ ತುಟಿಯಂಚಿನಲ್ಲಿ ಕಿರುನಗೆ ಮೂಡುತ್ತದಾದರೂ, ಬದಲಾದ ಪರಿಸ್ಥಿತಿಯನ್ನು ಅವಲೋಕಿಸುವಾಗ ಯಾವುದು ಸರಿ, ಯಾವುದು ತಪ್ಪು ಅರ್ಥೈಸಲಾರದೆ ಮನಸ್ಸು ಗೊಂದಲದ ಗೂಡಾಗುತ್ತದೆ.

ಸೊಸೆಯ ಗೆಳತಿಯದು ಇನ್ನೊಂದು ಕಥೆ. ತುಂಬಿದ ಮನೆಯಲ್ಲಿ ಹುಟ್ಟಿದ ರುಕ್ಮಿಣಿ ಅತೀ ಜಾಣೆ. ಓದುವುದರಲ್ಲಿ ಮೊದಲಿಗಳು, ಮನೆಗೆಲಸದಲ್ಲೂ ಅತ್ಯಂತ ಅಚ್ಚುಕಟ್ಟು. ತುಂಬಿದ ಮನೆಗೇ ಸೊಸೆಯಾಗಿ ಹೋದವಳೇ ಅಲ್ಲಿಯ ಎಲ್ಲ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಿಸತೊಡಗಿದಳು. ಆರ್ಥಿಕವಾಗಿಯೂ ಸಬಲಳಾಗಬೇಕೆಂದು ಯೋಚಿಸಿ ಕೆಲಸಗಳಿಗೆ ಅರ್ಜಿ ಗುಜರಾಯಿಸಲು ಸರ್ಕಾರೀ ಕೆಲಸವೇ ದೊರಕಿಬಿಟ್ಟಿತು. ಬೆಳಿಗ್ಗೆ ಬೇಗ ಎದ್ದು ಮನೆಯ ಎಲ್ಲಾ ಕೆಲಸಗಳನ್ನೂ ಮುಗಿಸಿ ಎರಡೆರಡು ಬಸ್ಸುಗಳನ್ನು ಹಿಡಿದು ಕಛೇರಿಗೆ ಹೋಗಿಬರುತ್ತಿದ್ದಳಾದರೂ ಮುಖದ ಮೇಲಿನ ನಗು ಮಾಸುತ್ತಿರಲಿಲ್ಲ. ಜಾಣೆ ರುಕ್ಮಿಣಿ ಕಛೇರಿಯ ಪರೀಕ್ಷೆಗಳನ್ನೆಲ್ಲಾ ಪಾಸ್‌ ಮಾಡಿಕೊಂಡು ಅಧಿಕಾರಿಣಿಯಾದರೂ ಮನೆಕೆಲಸದಲ್ಲಿ ಒಂದು ಚೂರೂ ವಿನಾಯಿತಿಯಿಲ್ಲ. ಹಾಸಿಗೆ ಹಿಡಿದಿರುವ ಅತ್ತೆ, ಅಜ್ಜಿ ತಾತನ ಮಡಿಲಲ್ಲಿ ಮುದ್ದಾಗಿ ಬೆಳೆದ ಮಗ ಮತ್ತು ಮಗಳು ಇಬ್ಬರಿಗೂ ಒಂದೇ ಗುರಿ, ಚೆನ್ನಾಗಿ ಓದಿ ಹೆಚ್ಚಿನ ಅಂಕಗಳನ್ನು ಗಳಿಸಿ ಉನ್ನತ ಹುದ್ದೆಗೇರಬೇಕು. ಪತಿ ದೇವರಂತೂ ತಮ್ಮ ಕಛೇರಿಯ ಕೆಲಸದ ನಂತರ ಸ್ನೇಹಿತರುಗಳು, ಸಿನಿಮಾ, ನಾಟಕ ಎನ್ನುತ್ತಾ ಗೃಹಕೃತ್ಯದ ಯಾವುದೇ ವಿಚಾರಕ್ಕೂ ತಲೆಹಾಕದಿರುವುದೇ ತಾವು ಹೆಂಡತಿಗೆ ಮಾಡಬಹುದಾದ ಮಹದುಪಕಾರ ಎಂಬ ಅಭಿಪ್ರಾಯ ಹೊಂದಿರುವ ಮನುಷ್ಯ. ನಿವೃತ್ತಿ ನಂತರೂ ಅವರ ಓಡಾಟ ಇನ್ನಷ್ಟು ಹೆಚ್ಚಾಯಿತೇ ಹೊರತು ಹೆಂಡತಿಗೇನೂ ಸಹಾಯವಾಗಲಿಲ್ಲ.

ಮಕ್ಕಳಿಬ್ಬರದೂ ಮದುವೆಯಾಯಿತು, ರುಕ್ಮಿಣಿಗೂ ಸಾಕಾಯಿತು, ಇನ್ನೂ ಎರಡು ವರುಷಗಳ ಸೇವೆ ಬಾಕಿ ಇದೆ ಎನ್ನುವಾಗಲೇ ಸ್ವಯಂ ನಿವೃತ್ತಿ ತೆಗೆದುಕೊಂಡಳು, ಹಾಯಾಗಿ ಕಾಲುಚಾಚಿ ಕುಳಿತುಕೊಳ್ಳಬಹುದು ಎಂಬ ಕನಸಿನಿಂದ.

ಒಮ್ಮೆ ಬೆಳಗ್ಗೆ ವಾಕಿಂಗ್‌ ಹೋದಾಗ ಕಂಡದ್ದು ರುಕ್ಕುವಿನ ಸೊಸೆ ಮುದ್ದು ಅತ್ತಿಂದಿತ್ತ ಓಡಾಡುತ್ತಾ ಫೊನಿನಲ್ಲಿ ಯಾರೊಂದಿಗೋ ಹರಟುತ್ತಿದ್ದಾಳೆ. ರುಕ್ಕು ಬಾಗಿಲಿಗೆ ನೀರು ಹಾಕಿ ಬಗ್ಗಲಾರದೆ ಬಗ್ಗಿ ರಂಗೋಲೆ ಬಿಡುತ್ತಿದ್ದಾಳೆ. ಕೆದರಿದ ತಲೆ ಬಾಡಿದ ಮುಖ, ಸೋತುಹೋದಂತಿದ್ದ ರುಕ್ಕುವನ್ನು ಕಂಡಾಗ ಅನ್ನಿಸಿದ್ದು, ಅತ್ತೆಗೊಂದು ಕಾಲ, ಸೊಸೆಗೊಂದು ಕಾಲವಲ್ಲ, ಅವರವರು ಪಡೆದದ್ದು ಅವರಿಗೆ ಎಂದು. ನೀವೇನಂತೀರಿ?

ಪದ್ಮಾ ಆನಂದ್, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *