ದಶಮ ಸ್ಕಂದ – ಅಧ್ಯಾಯ – 12 – ಉತ್ತರಾರ್ಧ
ಸಾಲ್ವ, ದಂತವಕ್ತ್ರಾದಿ ವಧಾ
ಸಾಲ್ವ ರಾಜ ಯಾದವ ವಿರೋಧಿ
ಯಾದವರ ನಿರ್ಮೂಲ ಮಾಡಲು
ಪ್ರತಿಜ್ಞೆ ಮಾಡಿ ಘೋರ ತಪವನ್ನಾಚರಿಸಿ
ರುದ್ರದೇವನಿಂದ
ಸೌಭ ನಾಮಾಂಕಿತ ವಿಮಾನವ ಪಡೆದ
ಮಹಾವೈಚಿತ್ರಗಳ ಹೊಂದಿರ್ಪ
ವಿಮಾನವೇರಿ ದ್ವಾರಕಾನಗರಿಯ ಮೇಲೆ
ದಂಡೆತ್ತಿ ಬಂದು ನಗರ ನಿವಾಸಿಗಳ ಮೇಲೆ
ಕಲ್ಲುಗುಂಡುಗಳ ಮರಗಿಡಗಳ ಭಯಂಕರ
ವಿಷಸರ್ಪಗಳ ಸುರಿಸುತ್ತ ಹಿಂಸಿಸತೊಡಗಿರೆ
ಕುಪಿತರಾದ ಸಾತ್ಯಕಿ ಸಾಂಬ ಅಕ್ರೂರರೆಂಬಿತ್ಯಾದಿ
ಯಾದವರು ಪ್ರದ್ಯುಮ್ನನ ನೇತೃತ್ವದಲಿ
ಸಾಲ್ವನ್ನೆದುರಿಸಿ ಯುದ್ಧ ಮಾಡೆ
ಎದುರಿಸಲಾರದೆ ಸಾಲ್ವನು
ಮಾಯಾ ಯುದ್ಧವನಾರಂಭಿಸೆ
ಪ್ರದ್ಯುಮ್ನ ತಾ ಹಿಂದೆ ಕಲಿತಿದ್ದ ಮಾಯಾಯುದ್ಧದಿಂ
ಸಾಲ್ವನ ಭಂಗಿಸತೊಡಗೆ
ವಿಷಯವರಿತ ಶ್ರೀಕೃಷ್ಣ ರಣರಂಗಕೆ ಧುಮುಕಿ
ತೀಕ್ಷ್ಣ ಶರಜಾಲದಿ ಸಾಲ್ವನ ಸೊಕ್ಕಡಗಿಸೆ
ಮಾಯಾವಿ ಸಾಲ್ವ ವಾಸುದೇವನಂತೆ
ಒಂದಾಕೃತಿಯ ನಿರ್ಮಿಸಿ
ಕೃಷ್ಣನೆದುರಿಗೆ ಶಿರಚ್ಛೇದನ ಮಾಡೆ
ಅದು ಮಾಯಾ ನಿರ್ಮಿತವೆಂದು ತಿಳಿದಿದ್ದರೂ
ವಿಚಲಿತನಾದಂತೆ ನಟಿಸಿ
ನಂತರದಿ ಒಡನೆ ವಿಜೃಂಭಿಸಿ
ಗಧೆಯನು ಪ್ರಯೋಗಿಸಿ ಸೌಭ ವಿಮಾನವ
ಛಿದ್ರಗೊಳಿಸಿ ಸಾಲ್ವನ ಭುಜಗಳ ಕತ್ತರಿಸೆ
ಅವನ ವಿಮಾನದೊಂದಿಗೆ ಸಾಲ್ವನು ಹತನಾದನು
ಸಾಲ್ವ ಮಿತ್ರ ದಂತವಕ್ತ್ರ ಕೋಪಾವಿಷ್ಠನಾಗಿ
ತನ್ನ ಗಧೆಯಿಂದ ಪ್ರಹರಿಸೆ
ಕೃಷ್ಣ ಅದ ಲಕ್ಷಿಸದೆ ತನ್ನ ಮಹಾ ಗಧೆಯಿಂದ
ಒಂದೇ ಪ್ರಹಾರದಿ ದಂತವಕ್ತ್ರನ ವಧಿಸಿದನು
ಜಯವಿಜಯರ ಮೂರನೆಯ ಜನ್ಮದವನಾಗಿದ್ದ
ಅವನೂ ಶಾಪ ಪರಿಹಾರ ಹೊಂದಿದನು
ಕೃಷ್ಣ ಸಕಲರಿಂದ ಸ್ತುತ್ಯನಾಗಿ
ದ್ವಾರಕಾನಗರಿಯ ಹೊಕ್ಕನು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45594

-ಎಂ. ಆರ್. ಆನಂದ, ಮೈಸೂರು

