(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಭಾರ್ಗವಿಯ ಈ ಆಸೆ ಆಕಾಂಕ್ಷೆಗಳು ಸಿದ್ಧಾರ್ಥನಿಗೆ ಆಲೋಚನೆ ಸಮರ್ಪಕವಾಗಿದೆ ಅನ್ನಿಸಿತು. ಆಕೆ ಹೇಳಿದಂತೆ ಮಾಡೋಣ. ನನಗೆ ಆಪ್ತವಲ್ಲದ ಈ ನೇಗಿಲಯೋಗಿ ಕೆಲಸಕ್ಕೆ ಬಿಡುಗಡೆ ಕೊಟ್ಟು ಅವಳ ಜೊತೆ ಸಿಟಿಯಲ್ಲೆ ಇದ್ದು ಏನಾದರೂ ವ್ಯಾಪಾರ ಸಾಪಾರ ಮಾಡುತ್ತ ಬದುಕಬಹುದು. ಈಗಲೇ ಇವೆಲ್ಲ ಗುಟ್ಟುಗಳನ್ನು ಬಿಟ್ಟುಕೊಡಕೂಡದೆಂದು ಮನದಲ್ಲೇ ನಿಶ್ಚಯಿಸಿ ಸುಮ್ಮನಿದ್ದನು.
ಗಂಡ ಸಿದ್ಧಾರ್ಥನ ಮೌನ ಕಂಡು ಭಾರ್ಗವಿ ಅವನ ಅಭಿಪ್ರಾಯ ತಿಳಿಸಲು ಒತ್ತಾಯಿಸಿದಳು.
“ಹೌದು ಹಾಗೇ ಮಾಡೋಣ, ನಾಳೆ ಮನೆಯವರನ್ನೆಲ್ಲ ಒಪ್ಪಿಸುವ ಭಾರ ನನ್ನದು ಸರಿಯಾ” ಎಂದಾಗ ನಿಶ್ಚಿಂತೆಯಿಂದ ನೆಮ್ಮದಿ ಹೊಂದಿದಳು ಭಾರ್ಗವಿ.
ಮಾರೆನೆಯ ದಿನ ವಿಷಯ ತಿಳಿದ ಸಿದ್ಧಾರ್ಥನ ತಂದೆ “ಏ ಈ ಹುಡುಗಿ ಹೇಳಿದ್ದಕ್ಕೆಲ್ಲಾ ತಾಳಹಾಕುತ್ತ ಹೋದರೆ ಎಲ್ಲ್ಲಿಗೆ ಮುಟ್ಟೀತು. ನನಗೂ ವಯಸ್ಸಾಗುತ್ತಿದೆ. ಈ ಹೈದ ಮದುವೆ ಆದರೆ ಜವಾಬ್ದಾರಿ ವಹಿಸಿಕೊಳ್ಳುತ್ತಾನೆ ಎಂದು ನಾನಿದ್ದರೆ ಅವನು ಹೆಂಡತಿಯ ಹಿಂದೆಮುಂದೆ ತಿರುಗುವುದೇ ಆಯ್ತು. ಅಂತೂ ಎಲ್ಲ ಮುಗೀತು ಅಂದರೆ ಈಗ ಮತ್ತೆ ಶುರೂ..” ಎಂದು ಅಸಮಾಧಾನಗೊಂಡರು. ಅದಕ್ಕೆ ಸಿದ್ಧಾರ್ಥನ ತಾಯಿ “ಅದ್ಯಾಕೆ ಅಷ್ಟೊಂದು ಬೇಸರ ಮಾಡಿಕೊಳ್ಳುತ್ತೀರಾ. ನಮ್ಮ ಹೈದನಿಗಂತೂ ಓದು ಕಂಡರೆ ಅಷ್ಟಕ್ಕಷ್ಟೇ. ಆ ಮಗು ಅದಕ್ಕೇ ಮುಗಿಬಿದ್ದದೆ. ಒಂದೆರಡು ಪಿಳ್ಳೆಗಳು ಅಕ್ಕಪಕ್ಕ ಬಂದರೆ ಅಗ ಬಿಮ್ಮನೆ ಒಂದೆಡೆ ಕೂರುತ್ತಾಳೆ.” ಎಂದು ಗಂಡನಿಗೆ ಸಮಾಧಾನ ಹೇಳಿದರು.
ಇತ್ತ ಭಾರ್ಗವಿಯ ಮನೆಯಲ್ಲಿ ಅವಳ ತಾಯಿ “ಏ..ಮಗಳೇ ನಿನ್ನ ಓದಿನ ಬಂಡಿ ಇಲ್ಲಿಗೆ ನಿಲ್ಲಲಿ. ಮನೆವಾಳ್ತನಕ್ಕೆ ಗಮನ ಕೊಡು. ಇಲ್ಲೇ ಮಕ್ಕಳಿಗೆ ಪಾಠ ಹೇಳಿಕೊಡು. ಇಲ್ಲಂದ್ರೆ ಇದರ ಪರಿಣಾಮ ನೆಟ್ಟಗಾಗಲ್ಲ ಜ್ಞಪ್ತಿ ಮಡಿಕೋ” ಎಂದು ತಮ್ಮ ಅನುಭವದ ಉಪದೇಶ ಮಾಡಿದರು.
ಇವೆಲ್ಲವನ್ನು ಗಮನಿಸುತ್ತಿದ್ದ ಭಾರ್ಗವಿಯ ಅಣ್ಣ ಮಾತ್ರ “ಅದೇನು ಹಿರಿಯರೋ, ಕಟ್ಟಿಕೊಂಡ ಗಂಡನೇ ಸುಮ್ಮನಿದ್ದಾನೆ. ಸಾಧನೆಗೆ ಹೊರಟವರನ್ನು ಹಿಮ್ಮೆಟ್ಟಿಸಬೇಡಿ. ನೀನೇನು ಬೇಕೋ ತಯಾರಿ ಮಾಡಿಕೋ ಭಾರ್ಗವಿ” ಎಂದ ಬಾಲಕೃಷ್ಣ. ಆನಂತರ ಪ್ರತ್ಯೇಕವಾಗಿ ಭಾರ್ಗವಿಯನ್ನು ಕರೆದು “ನಾನು ಹೀಗೆ ಹೇಳುತ್ತೇನೆಂದು ತಪ್ಪಾಗಿ ಭಾವಿಸಬೇಡಮ್ಮ. ನಿನ್ನ ಓದಿನ ಓಟದಲ್ಲಿ ಸ್ವಲ್ಪ ಹಿಂತಿರುಗಿ ನೋಡು. ನಿನ್ನನ್ನೇ ಕಾರಣವಾಗಿಟ್ಟುಕೊಂಡು ಸಿದ್ಧಾರ್ಥ ಮೈಸೂರಿಗೆ ಎಡತಾಕುವುದು ಹೆಚ್ಚಾಗಿದೆ. ಇನ್ನು ಅಲ್ಲೇ ಮನೆಮಾಡಿದರೆ ಮುಗಿದೇ ಹೋಯ್ತು. ಅವರಪ್ಪ ಅರ್ಥಾತ್ ನಿಮ್ಮ ಮಾವ ಹೂಂ..ಈ ಸಾಗುವಳಿ ಕೆಲಸ ನಾನು ಮಣ್ಣಿನಲ್ಲಿ ಮಲಗುವವರೆಗೆ ಮಾತ್ರ. ನನ್ನ ತಲೆಗೇ ಕೊನೆ ಎಂಬುದು ಕಟ್ಟಿಟ್ಟ ಬುತ್ತಿಯೇನೋ ಅನ್ನಿಸುವಂತಾಗಿದೆ. ಬಾಲು ನೀನಾದರೂ ನಿನ್ನ ಗೆಳೆಯನಿಗೆ ಒಸಿ ಹೇಳು ಮಗಾ, ನೊಗದ ಕಡೆಗೆ ಮೊಗ ಮಾಡುವುದಕ್ಕೆ. ಮೊದಲಿನಿಂದಲೂ ಅವನಿಗೆ ಅದರ ಬಗ್ಗೆ ಅಸಡ್ಡೆ, ಮುಂದಕ್ಕೆ ಓದುತ್ತಿರುವವಳು ನನ್ನ ಸೊಸೆ. ಇವನೇನು ಅಲ್ಲಿ ಕಿಸಿಯುತ್ತಾನೋ ಕಾಣೆ ಎಂದು ಬೇಸರಪಟ್ಟುಕೊಂಡು ಮನಸ್ಸಿನಲ್ಲಿ ನೊಂದು ಹೇಳುತ್ತಿರುತ್ತಾರೆ. ಸಿದ್ದಾರ್ಥ ಒಳ್ಳೆಯ ಮೂಡಿನಲ್ಲಿದ್ದಾಗ ಅನುನಯದಿಂದ ಜಮೀನಿನ ಕೆಲಸದ ಕಡೆಗೆ ಗಮನ ಕೊಡೆಂದು ಹೇಳು. ಹಿರಿಯರ ಮುಂದೆ ಇದನ್ನು ಹೇಳಿದರೆ ಅವರು ನಿನ್ನ ಓದನ್ನು ಬಲವಾಗಿ ವಿರೋಧಿಸಿ ತಡೆಯುತ್ತಾರೆಂದು ಹೇಳಲಿಲ್ಲ.” ಎಂದ ಬಾಲಕೃಷ್ಣ.
ಒಂದೆಡೆ ನನ್ನ ಓದಿನ ಬಗ್ಗೆ ಕಾಳಜಿ, ಮತ್ತೊಂದು ಕಡೆ ನಾನು ಸೇರಿದ ಮನೆವಾರ್ತೆಯ ಕಡೆ ಮುತುವರ್ಜಿ, ಮಗದೊಂದೆಡೆ ಬಾಲ್ಯಕಾಲದ ಗೆಳೆಯ ಅದೇ ನನ್ನ ಗಂಡನೊಡನೆ ನಿಷ್ಠುರವಾಗಿ ಹೇಳಲಾಗದ ಅಸಹಾಯಕತನ, ಎಲ್ಲವೂ ಅಣ್ಣನ ಮಾತಿನಲ್ಲಿ ಅಡಕವಾಗಿರುವುದನ್ನು ಅರಿತಳು ಭಾರ್ಗವಿ. ಅದೆಲ್ಲ ಸರಿ ಇವನು ಹೇಳಿದಷ್ಟು ಸಾರಿ ಸಿದ್ಧಾರ್ಥ ಮೈಸೂರಿಗೆ ಬಂದಿಲ್ಲ. ಹಾಗಾದರೆ ನನ್ನ ನೆಪ ಮಾಡಿಕೊಂಡು ಗೆಳೆಯರೊಡಗೂಡಿ ತಿರುಗುವ ಚಟಕ್ಕೇನಾದರೂ ಬಿದ್ದರೇ? ಮೊದಲು ನಾನು ಕಂಡುಹಿಡಿಯಬೇಕು. ಜಾಣತನದಿಂದ ಅವರ ಬಾಯಿ ಬಿಡಿಸಬೇಕು. ಹಾಗೆಯೇ ಅಣ್ಣ ಹೇಳಿದಂತೆ ಅವರನ್ನು ಜಮೀನಿನ ಕೆಲಸದತ್ತ ಜವಾಬ್ದಾರಿ ವಹಿಸುವಂತೆ ಮಾಡಬೇಕು. ಒಳ್ಳೆಯ ಮಾತಿನಲ್ಲಿ ಬಗ್ಗದಿದ್ದರೆ ನಿಷ್ಠುರ ಕಟ್ಟಿಕೊಂಡಾದರೂ ಸರಿಯೇ ನೇರವಾಗಿಯೇ ಎಚ್ಚರಿಸಬೇಕೆಂದು ಮನದಲ್ಲಿ ಅಂದುಕೊAಡಳು.
“ಏನು ಭಾರ್ಗವಿ, ಏಕೆ ಸುಮ್ಮನಾದೆ, ನಾನು ಹೇಳಿದ್ದು ತಪ್ಪಾಯಿತೇ?”
“ಛೇ..ಛೇ..ಅದಕ್ಕಲ್ಲಣ್ಣ ಅವರಿಗೆ ಇದನ್ನು ಹೇಗೆ ಹೇಳುವುದು ಎಂದು ಆಲೋಚಿಸುತ್ತಿದ್ದೆ. ಖಂಡಿತ ಸಮಯ ಸಂದರ್ಭ ನೋಡಿಕೊಂಡು ಹೇಳುತ್ತೇನೆ. ನೀನೇನೂ ಚಿಂತಿಸಬೇಡ” ಎಂದುತ್ತರಿಸಿದಳು ಭಾರ್ಗವಿ.
“ಅಷ್ಟು ಮಾಡಮ್ಮಾ, ಆ ಹಿರಿಯ ಜೀವಗಳ ಒದ್ದಾಟ ನೋಡಲಾಗುತ್ತಿಲ್ಲ. ಇವೆಲ್ಲವನ್ನು ಯಾರ ಕಿವಿಯಮೇಲು ಹಾಕಬೇಡ. ಎಚ್ಚರಿಕೆಯಿಂದ ಮುಂದುವರಿ” ಎಂದು ತಾಕೀತು ಮಾಡಿ ತನ್ನ ರೂಮಿಗೆ ನಡೆದ ಬಾಲಕೃಷ್ಣ.
ಡ್ಯೂಟಿಗೆ ಜಾಯಿನ್ ಆಗಲು ಇನ್ನೂ ಸಮಯವಿತ್ತು. ಅಷ್ಟರಲ್ಲಿ ಒಂದು ಬಾಡಿಗೆಯ ಮನೆ ಗೊತ್ತು ಮಾಡಿಬಿಡಬೇಕೆಂದು ಮನದಲ್ಲಿ ನಿಶ್ಚಯಿಸಿದಳು ಭಾರ್ಗವಿ. ಮೈಸೂರಿನಲ್ಲಿದ್ದ ಕೆಲವು ಗೆಳತಿಯರಿಗೆ ತನ್ನ ವಿಚಾರವನ್ನು ವಿಸ್ತಾರವಾಗಿ ತಿಳಿಸುತ್ತ ಒಬ್ಬಳೇ ವಾಸವಿರಲು ಭಯಭೀತಿಯಲ್ಲದ ಸುರಕ್ಷಿತ ನೆಲೆಯಲ್ಲಿ ಮನೆಯಿರಬೇಕೆಂದು ಮರೆಯದೆ ಹೇಳಿದಳು. ಜೊತೆಗೆ ಬಾಡಿಗೆಯ ಬಗ್ಗೆಯೂ ಎಚ್ಚರಿಕೆಯ ಅಂಶವನ್ನು ಸೇರಿಸಿದ್ದಳು. ಅವಳ ಅದೃಷ್ಟಕ್ಕೆ ಒಂದು ಔಟ್ಹೌಸ್ ಬಾಡಿಗೆಗೆ ಇದೆ, ಬೇಗ ಬಂದು ನೋಡೆಂದು ಆಕೆಯ ಗೆಳತಿಯರಲ್ಲಿ ಒಬ್ಬಳಾದ ಗೀತಾಳಿಂದ ಸುದ್ಧಿ ಬಂದಿತು. ತಡಮಾಡದೆ ವಿಷಯವನ್ನು ಸಿದ್ಧಾರ್ಥನ ಕಿವಿಗೆ ಹಾಕಿದಳು. ಅವಳ ಮಾತುಕೇಳಿ ಸಿದ್ಧಾರ್ಥನಿಗೆ ಆಶ್ಚರ್ಯವಾಯಿತು. “ಇಷ್ಟು ಬೇಗ ಮನೆ ಸಿಕ್ಕಿತೆ? ಬಾಡಿಗೆ ಎಷ್ಟಂತೆ?” ಎಂದು ಕೇಳಿದ.
ಮನೆ ಓನರ್ಗೆ ಬಾಡಿಗೆಗಿಂತ ಒಳ್ಳೆಯ ಟೆನೆಂಟ್ ಬೇಕಂತೆ. ನಮಗೆ ಕೈಗೆಟಕುವ ಮಿತಿಯಲ್ಲಿದೆ. ಹೋಗಿ ನೋಡಿ ಬರೋಣ. ನೀವು ಯಾವಾಗಲಾದರೊಮ್ಮೆ ಬರುವುದು, ನಾನೊಬ್ಬಳೇ ಇರುವುದಲ್ಲವಾ? ಓನರ್ ದಂಪತಿಗಳಿಬ್ಬರೂ ಕೆಲಸದಲ್ಲಿರುವವರಂತೆ. ಅವರ ಹಿರಿಯರು, ಮಕ್ಕಳು ಒಟ್ಟಿಗೆ ಇದ್ದಾರಂತೆ. ಪಾಠ ಪ್ರವಚನ ಮಾಡಬೇಕೆಂದರೂ ಅನುಕೂಲವಾಗುತ್ತದೆ ಪ್ಲೀಸ್ ಹೋಗೋಣ” ಎಂದು ಕೇಳಿದಳು ಭಾರ್ಗವಿ.
ನೀವೂ ಯಾವಾಗಲಾದರೊಮ್ಮೆ ಬರುವವರು ಎಂಬ ಮಾತು ಸಿದ್ಧಾರ್ಥನ ಮನಸ್ಸಿನಲ್ಲಿ ನಗೆ ಉಕ್ಕಿಸಿತು. ಹೂಂ..ಒಳ್ಳೆಯದೇ ಆಯಿತು. ಅವಳ ನಂಬಿಕೆ ಹಾಗೆಯೇ ಇರಲಿ, ನನ್ನ ಅಡ್ಡೆಯಾಗಿ ಗೆಳೆಯ ರಾಮುವಿನ ಮನೆ ಇದ್ದೇ ಇದೆ. ಭಾರ್ಗವಿಯ ಕನಸು ನನಸಾಗುವ ಹೊತ್ತಿಗೆ ನನ್ನ ಯೋಜನೆಯೂ ತಯಾರಾಗುತ್ತದೆ. ಅಷ್ಟೊತ್ತಿಗೆ ಒಂದೆರಡು ಚಿಳ್ಳೆಪಿಳ್ಳೆಗಳು ಹುಟ್ಟಿದ್ದರೆ ಅವುಗಳ ಓದುಗೀದಿಗೆಲ್ಲ ನಗರದ ವಾಸವೇ ಸೂಕ್ತವಾದುದು. ನಾನಿಲ್ಲೇ ಠಿಕಾಣಿ ಹೂಡಬಹುದು ಎಂದುಕೊಂಡನು. ಹೊರಗೆ ಮಾತ್ರ “ಆಯಿತು ಭಾರ್ಗವಿ ನಿನಗೆ ಸರಿ ಎನಿಸಿದರೆ ಸಾಕು, ನಾಳೆಯೇ ಮೈಸೂರಿಗೆ ಬರುತ್ತೇನೆ. ನಿನ್ನ ಗೆಳತಿಗೂ ತಿಳಿಸಿಬಿಡು. ಅಡ್ವಾನ್ಸ್ ಕೊಟ್ಟು ಗೊತ್ತು ಮಾಡಿಬಿಡೋಣ. ಬಿಡುವಾದಾಗ ಒಂದೊಳ್ಳೆಯ ದಿನ ನೋಡಿ ಹಾಲುಕ್ಕಿಸಿ ಸಾಮಾನು ಸರಂಜಾಮು ಸಾಗಿಸಿ ಹೊಂದಿಸಿಬಿಟ್ಟರೆ ನೀನು ಶಾಲೆಯ ಕೆಲಸಕ್ಕೆ ನಿರಾತಂಕವಾಗಿ ಹೋಗಿಬರಬಹುದು” ಎಂದು ಹೇಳಿದ.
ಮೈಸೂರಿಗೆ ಹೋಗಲು ಒಂದು ವಾರವಿದೆ ಎನ್ನುವಾಗಲೇ ಭಾರ್ಗವಿ ಮನೆಗೆ ಅಗತ್ಯವಾದ ವಸ್ತುಗಳ ಜೋಡಣೆ ಮಾಡಿಕೊಳ್ಳಲಾರಂಭಿಸಿದಳು. ಎರಡೂ ಮನೆಯ ಹಿರಿಯರಿಗೆ ಸಂಪೂರ್ಣವಾಗಿ ಒಪ್ಪಿಗೆಯಿಲ್ಲದಿದ್ದರೂ ತೀವ್ರವಾಗಿ ಪ್ರತಿಭಟಿಸಲಾಗದೆ ಅವಳ ತಯಾರಿಗೆ ತಾವೂ ಕೈಜೋಡಿಸತೊಡಗಿದರು.
ದಿನಸಿ ಪದಾರ್ಥಗಳಾದ ಅಕ್ಕಿ, ಬೇಳೆ, ರಾಗಿ, ಒಣಮೆಣಸಿನಕಾಯಿ, ಹುಣಸೆಹಣ್ಣು, ಬೆಲ್ಲ, ಕಾಳುಕಡಿಗಳು, ಚೀಲದಲ್ಲಿ ಅಡಗಿ ಕುಳಿತವು. ಜೊತೆಗೆ ಒಂದರೆಡು ತರದ ಉಪ್ಪಿನಕಾಯಿಗಳು, ಹಪ್ಪಳ, ಬಾಳಕ, ಖಾರದಪುಡಿ, ಚಟ್ನಿಪುಡಿ, ಡಬ್ಬಗಳಲ್ಲಿ ಇದ್ದು ಸೇರ್ಪಡೆಯಾದವು. ಅಟ್ಟದ ಮೇಲಿಟ್ಟಿದ್ದ ಸ್ಟೋವ್ ರಿಪೇರಿಯಾಗಿ ಸಿದ್ಧವಾಯಿತು. ತಟ್ಟೆಬಟ್ಟಲುಗಳು, ಲೋಟ, ಬಕೀಟು, ಸೌಟು, ಹಾಸಲು ಹೊದೆಯಲು ಬೇಕಾದದ್ದು ಇತ್ಯಾದಿ ಇತ್ಯಾದಿಗಳು ಸಣ್ಣ ಮನೆಯಲ್ಲಿರಲು ಅನುಕೂಲವಾದಂಥವು, ಪುಸ್ತಕಗಳು, ಪುಟ್ಟದೊಂದು ಟ್ರಾನ್ಸಿಸ್ಟರ್ ರೇಡಿಯೋ. ಕೂಡ ಜಾಗ ಪಡೆದವು.
ಸಿದ್ಧಾರ್ಥನ ಗೆಳೆಯ ಅರುಣನ ಲಗೇಜ್ ಆಟೋದಲ್ಲಿ ಎಲ್ಲವನ್ನು ಹಾಕಿಕೊಂಡು ತಾವುಗಳೂ ಅದರಲ್ಲೇ ಕುಳಿತು ಮೈಸೂರನ್ನು ತಲುಪಿದರು. ಮನೆಯ ಹಿರಿಯರು ಬಂದು ಎಲ್ಲವನ್ನೂ ಹೊಂದಿಸಿಕೊಟ್ಟು ಆಶೀರ್ವದಿಸಿದರೆ ಒಳಿತೆಂಬ ಆಲೋಚನೆ ಭಾರ್ಗವಿಯ ಮನದಲ್ಲಿ ಬಂದರೂ ಅದು ಅಸಾಧ್ಯವೆಂದು ತಿಳಿದಿತ್ತು. ಸುಮ್ಮನಾದಳು. ಆದರೆ ತನ್ನ ಅಣ್ಣ ತಮ್ಮೊಡನೆ ಬಂದದ್ದು ಸಂತಸ ತಂದಿತ್ತು.
ಬಾಲುವಿಗೆ ತನ್ನ ಸೋದರಿ ಗೊತ್ತುಮಾಡಿದ್ದ ಮನೆಯ ಸುತ್ತಲಿನ ಪರಿಸರ, ಮನೆಯ ಮಾಲೀಕರು, ಎಲ್ಲವೂ ಮನಸ್ಸಿಗೆ ಮುದತಂದಿತ್ತು. ಸಮಾಧಾನವಾಯಿತು. ತಂಗಿಯು ಆಕೆಯ ಗುರಿಯನ್ನು ಸಾಧಿಸಿಕೊಳ್ಳಲು ಇದು ಸುರಕ್ಷಿತವಾದ ಸ್ಥಳವೆಂದು ನೆಮ್ಮದಿಯಾಯಿತು. ಅದಕ್ಕೆ ಯಾವುದೇ ರೀತಿಯ ಚ್ಯುತಿ ಬರಬಾರದೆಂದು ಭಗವಂತನಲ್ಲಿ ಒಮ್ಮೆ ಪ್ರಾರ್ಥಿಸಿಕೊಂಡನು. ಮನೆಯ ಮಾಲೀಕರನ್ನು ಪರಿಚಯ ಮಾಡಿಕೊಂಡ. ತನ್ನ ಹಾಗೂ ಅವರ ಮೊಬೈಲ್ ನಂಬರ್ಗಳನ್ನು ಪರಸ್ಪರ ಪಡೆದುಕೊಂಡರು. ಸಿದ್ಧಾರ್ಥ ಭಾರ್ಗವಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ ಒಂದೆರಡು ದಿನಗಳ ನಂತರ ಊರಿಗೆ ಹಿಂದಿರುಗುತ್ತೇನೆAದು ತಿಳಿಸಿದ. ಸರಿ ತಂಗಿಗೆ ಏನಾದರೂ ಅಗತ್ಯವಿದ್ದರೆ ಫೋನ್ ಮಾಡಿ ತಿಳಿಸಲು ಹೇಳಿ ಊರಿಗೆ ಹಿಂದಿರುಗಿದ ಬಾಲಕೃಷ್ಣ.
ಮೊಬೈಲ್ ಸದ್ದು ಕಣ್ಮುಚ್ಚಿ ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದ ಭಾರ್ಗವಿಯನ್ನು ಎಚ್ಚರಿಸಿತು. ಕಣ್ಣುಬಿಟ್ಟು ಮೊಬೈಲ್ ಕೈಗೆತ್ತಿಕೊಂಡಳು. ಕಂಡಿದ್ದು ಕೆಲಸದವಳ ಕರೆ. ಇದೇನು ಇವಳು ಮೊಬೈಲಿಗೆ ಕಾಲ್ ಮಾಡಿದ್ದಾಳೆ. ಎಲ್ಲಿಗೆ ಹೊರಟಿದೆಯೋ ಸವಾರಿ ಅಂದುಕೊಂಡು ಹಲೋ ಎಂದಳು.
“ ಏ ಅವ್ವಾ ಗೇಟಿನ ಬೀಗ ತೆಗಿಯೇ, ಇವತ್ತು ಏಳುಗಂಟೆಯ ಮೇಲಾದರೂ ಬೆಳಗಾಗಿಲ್ಲವಾ?” ಎಂದಳು. ಅವಳ ಮಾತಿಗೆ ಬೆಚ್ಚುತ್ತಾ ಕಿಟಕಿಯ ಕಡೆಗೆ ಕಣ್ಣು ಹಾಯಿಸಿದಳು. ಬೆಳಗಾಗಿತ್ತು. ನಂಬಿಕೆ ಬರದೆ ಗಡಿಯಾರದ ಕಡೆ ನೋಡಿದಳು. ಕೆಲಸದವಳ ಮಾತನ್ನು ಎಲ್ಲವೂ ಪುಷ್ಠೀಕರಿಸಿದವು. ಲಗುಬಗೆಯಿಂದ ಮೇಲೆದ್ದು ಹಾಲಿನ ಲೈಟಾರಿಸಿದಳು. ಗೇಟಿನ ಬೀಗ ತೆಗೆದುಕೊಂಡು ಹೊರಬಂದಳು ಭಾರ್ಗವಿ. ಅಂಗಳಕ್ಕೆ ಕಾಲಿಡುತ್ತಿದ್ದಂತೆ “ಅವ್ವಾ ..ಅಪ್ಪ ಬಂದಿದ್ದನೇನೋ? ಅದಕ್ಕೇ ಈಟೊತ್ತಿನ ತನಕ ಎದ್ದಿಲ್ಲ.” ಎಂದು ಕಿಸಕ್ಕನೆ ನಕ್ಕಳು ಗಿರಿಜಾ.
ಅವಳ ಮಾತನ್ನು ಕೇಳಿ ಭಾರ್ಗವಿಗೆ ಮೈಮೇಲೆ ಮುಳ್ಳೆದ್ದಂತಾಯಿತು. “ನಿನಗ್ಯಾರು ಹೇಳಿದರೇ?” ಎಂದಳು.
ಅತ್ತಕಡೆ ನೋಡಿದವಳಿಗೆ ಸಿದ್ಧಾರ್ಥನ ಚಪ್ಪಲಿಗಳು ಕಾಣಿಸಿದವು. ಹಾಗಾದರೆ ಈ ಅವಸರದ ಆಂಜನೇಯ ಕಾಲಿಗೆ ಏನು ಹಾಕಿಕೊಂಡು ಹೋದರು? ಎಂದುಕೊಳ್ಳುತ್ತ ಹೊರಗೊಂದು ಜೊತೆ ಹವಾಯಿ ಚಪ್ಪಲಿಯನ್ನಿಟ್ಟಿರುತ್ತಿದ್ದಳು. ಅವನ್ನು ಹಾಕಿಕೊಂಡು ಮುಂದುಗಡೆ ಬೆಳೆಸಿರುವ ಗಿಡಗಳಿಗೆ ನೀರು ಹಾಕುವಾಗ, ಅಲ್ಲಿನ ಕಸಕಡ್ಡಿಗಳನ್ನು ತೆಗೆಯುವಾಗ, ಕೆಲವು ಸಾರಿ ಮನೆಯ ಮುಂದೆ ಅಡ್ಡಾಡುವಾಗ ಅವುಗಳನ್ನು ಉಪಯೋಗಿಸುತ್ತಿದ್ದಳು. ಅದು ತನ್ನ ಜಾಗದಲ್ಲಿರಲಿಲ್ಲ. ಈಗ ಗೊತ್ತಾಯಿತು. ಗೆಳೆಯರೆಂದರೆ ಅದೇನು ಸಾಯುತ್ತಾರೋ, ಅವರುಗಳೂ ಇವರ ವೀಕ್ನೆಸ್ಸನ್ನು ತಿಳಿದೇ ಆಟವಾಡಿಸುತ್ತಾ ತಮಗೆ ಬೇಕಾದ್ದನ್ನು ಇವರಿಂದ ಪಡೆದುಕೊಳ್ಳುತ್ತಾರೆ. ಯಾರನ್ನೋ ಅಂದು ಪ್ರಯೋಜನವೇನು, ನಮ್ಮ ವಸ್ತುವೇ ಖೋಟಾ ಆದಮೇಲೆ ಎಂದುಕೊಂಡಳು.
ಹಾಗೇ “ಹೂ ಕಣೇ ಗಿರಿಜಾ, ನೆನ್ನೆ ರಾತ್ರಿ ಬಂದಿದ್ದರು, ಊರಿನಿಂದ ಅದ್ಯಾರೋ ಗೆಳೆಯ ಬಂದಿದ್ದಾನೆಂದು ಫೋನ್ ಬಂತು. ಹೋಗುವ ಗಡಿಬಿಡಿಯಲ್ಲಿ ಹೊರಗಡೆ ಇದ್ದ ಹವಾಯಿ ಚಪ್ಪಲಿಯನ್ನೇ ಹಾಕಿಕೊಂಡು ಹೋಗಿಬಿಟ್ಟಿದ್ದಾರೆ. ಅದು ಅವರದ್ದೇ ಆಗಿತ್ತಲ್ಲ ಅಳತೆ ವ್ಯತ್ಯಾಸವಿಲ್ಲ. ಜೊತೆಗೆ ನಿನಗೇ ಗೊತ್ತಲ್ಲವಾ ಎಷ್ಟು ಗಡಿಬಿಡಿ ಅಂತ. ಸರಿ ಬಾ ಕೆಲಸ ನೋಡು” ಎಂದು ಒಳ ನಡೆದಳು.
ಹ್ಹ..ಹ್ಹ..ನಿಂತ ಹೆಜ್ಜೆಯಲ್ಲೇ ಹೋದರೆಂದು ಹೇಳುತ್ತಿದ್ದಾಳೆ ನನ್ನಮ್ಮ. ಆಹಾ..ಚೆನ್ನಾಗಿ ಮಂಕುಬೂದಿ ಎರಚಿದ್ದಾನೆ ಆವಯ್ಯ. ಎಷ್ಟೋ ಸಾರಿ ಅವರನ್ನು ಅವರ ಗೆಳೆಯರ ಗುಂಪಿನೊಂದಿಗೆ ಅಡ್ಡಾಡುತ್ತಿದ್ದುದನ್ನು ನಾನೇ ನೋಡಿದ್ದೇನೆ. ಅದನ್ನು ಹೇಳಿದ್ರೆ ಇವರು ನಂಬ್ತಾನೇ ಇಲ್ಲ. ಏ..ಇಲ್ಲದ ಸುದ್ಧಿಗೊಂದು ಗುದ್ದು ಕೊಡಬೇಡ. ಸುಮ್ಮನೆ ನಿನ್ನ ಕೆಲಸ ನೋಡಿಕೊಂಡು ಹೋಗು ಅಂತ ಬಾಯ್ಮುಚ್ಚಿಸ್ತಾರೆ. ದೊಡ್ಡವರ ಸಮಾಚಾರ ನಮಗೇಕೆ ಬೇಕು. ಈವಮ್ಮನ್ನ ನೋಡಿದ್ರೆ ಅಯ್ಯೋ ಅನ್ನಿಸುತ್ತೆ. ಯಾಪಾಟಿ ಓದಿಕೊಂಡವ್ರಂತೆ, ದೊಡ್ಡ ಕೆಲಸವಂತೆ, ಇವಾ ಎಲ್ಲ ಗಂಟುಬಿದ್ನೋ ಕಾಣೆ. ಏನು ಊರಿಗೇ ಹೋದನೋ ಅಥವಾ ಅವನ ಗೆಳೆಯರ ಮನೇಲಿ ಇದ್ದಾನೋ ಯಾರಿಗ್ಗೊತ್ತು ಎಂದುಕೊಂಡು ತನ್ನ ಪಾಲಿನ ಕೆಲಸ ಮುಗಿಸಿದಳು. ಭಾರ್ಗವಿ ಕೊಟ್ಟ ತಿಂಡಿ, ಕಾಫಿ ಮುಗಿಸಿದಳು. ಹೊರಡುವಾಗ ಮನಸ್ಸು ನಿಲ್ಲದೇ “ಅವ್ವಾ ನಾನಿಂಗೆ ಹೇಳ್ತೀನಿ ಅಂತ ಬೇಜಾರು ಮಾಡ್ಕೋಬೇಡಿ, ರಾತ್ರಿ ನೀವು ಮಲಗಿ ನಿದ್ರೆ ಮಾಡಿದ ಹಂಗಿಲ್ಲ. ಹಿಂಗೆ ಮಾಡಿದರೆ ನಿಮ್ಮ ಆರೋಗ್ಯದ ಗತಿ ಏನು? ಇನ್ನೂ ಮಕ್ಕಳ ಜವಾಬ್ದಾರಿ ಮುಗಿದಿಲ್ಲ. ಜ್ಞಪ್ತಿ ಇರಲಿ, ಚಿಕ್ಕ ಬಾಯಲ್ಲಿ ದೊಡ್ಡ ಮಾತು ಅಂತ ಉದಾಸೀನ ಮಾಡಬೇಡಿ. ನಿಮ್ಮನೆ ಅನ್ನ ತಿಂದಿವ್ನಿ ಅದಕ್ಕೇ ಹೇಳಿದೆ ನಾನಿನ್ನು ಬತ್ತೀನಿ” ಎಂದು ಹೊರಟಳು ಗಿರಿಜಾ.
(ಮುಂದುವರಿಯುವುದು)

-ಬಿ.ಆರ್.ನಾಗರತ್ನ, ಮೈಸೂರು
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=45576

