ದಶಮ ಸ್ಕಂದ – ಅಧ್ಯಾಯ 11 – ಉತ್ತರಾರ್ಧ
ಸುಭದ್ರಾ ಪರಿಣಯ
ವಸುದೇವ ದೇವಕಿಯರು ಸೆರೆಯಲ್ಲಿರ್ಪ
ಸಮಯದಿ ಜನಿಸಿದ ಕನ್ಯಾ ಶಿಶು ಸುಭದ್ರೆ
ಬಹುಕಾಲದಿ ಶಿಶು ಜನನವ ಗೌಪ್ಯವಾಗಿಟ್ಟು
ಕಂಸ ಸಂಹಾರ ನಂತರದಿ ಪ್ರಕಟಿಸಿದರು
ಕೃಷ್ಣನನುಜೆ ಸುಭದ್ರೆ ದಿನಗಳೆದಂತೆ
ಬಿದಿಗೆಯ ಚಂದ್ರ ಕಳೆಯಂತೆ
ಬೆಳೆದು ವಿವಾಹ ಯೋಗ್ಯ ವಯಸ್ಕಳಾಗೆ
ಕೃಷ್ಣ ವಸುದೇವ ದೇವಕಿಯರು
ಕುಂತೀಪುತ್ರ ಅರ್ಜುನನಿಗೆ
ಅನುರೂಪ ಭಾರ್ಯೆಯೆಂದು ನಿರ್ಧರಿಸೆ
ಬಲರಾಮ ಮಾತ್ರ ಕುರುಕುಲ ಶ್ರೇಷ್ಠ,ಶಿಷ್ಯ
ದುರ್ಯೋಧನನಿಗೆ ಸುಭದ್ರೆಯ ಕೊಡಬೇಕೆಂದಿರೆ
ಉಭಯರೂ ತಮ್ಮ ಮನದಿಂಗಿತವ ಗೋಪ್ಯವಾಗಿಟ್ಟು
ಸೂಕ್ತ ಸಮಯವ ನಿರೀಕ್ಷಿಸುತ್ತಿರಲು
ಪಾಂಡುಪುತ್ರ ಅರ್ಜುನನು ತನ್ನ
ತೀರ್ಥಯಾತ್ರೆಯ ವರ್ಷಕಾಲದ ಅಂತ್ಯದಲಿ
ದ್ವಾರಕಾನಗರದ ಸಮೀಪದಲಿ
ಪುರದ ಹೊರವಲಯದಿ
ಛಳಿ ಮಳೆ ಗಾಳಿಯ ಬಾಧೆಯಲಿ ನರಳುತ್ತಿರೆ
ಪುಂಡರೀಕಾಕ್ಷ ಅವನಿಗೆ ಪ್ರತ್ಯಕ್ಷನಾಗಿ
ತ್ರಿದಂಡ ಸಂನ್ಯಾಸಿಯ ವೇಷಧಾರಣೆ ಮಾಡಿಸಿ
ಅಣ್ಣ ಬಲರಾಮನಿಗೆ, ತೇಜಸಂಪನ್ನ
ಯತಿವರ್ಯನಾಗಮನದ ವಾರ್ತೆಯನರುಹೆ
ಯತಿವರ್ಯ ದ್ವಾರಕೆಯಲ್ಲೇ
ತಮ್ಮ ಚಾತುರ್ಮಾಸ ವ್ರತಾನುಷ್ಟಾನವ
ಮುಗಿಸಲು ಕೋರಿ ಅರಮನೆಯಲಿ
ರಾಜಪುತ್ರಿ ಸುಭದ್ರೆಯ ಯತಿಸೇವೆಗೆ ನೇಮಿಸಲು
ಕೃಷ್ಣನು ತರುಣ ಯತಿಯ ಸೇವೆಗೆ
ಸುಬಧ್ರೆಯ ನೇಮಿಸುವುದ ವಿರೋಧಿಸಿದರೂ
ಬಲರಾಮ ಲೆಕ್ಕಿಸದಿರಲು
ಯತಿ ಅರ್ಜುನ ಸುಭದ್ರೆಯ
ರೂಪ ಲಾವಣ್ಯಗಳಿಗೆ ಮನಸೋತರೆ
ಸುಭದ್ರೆಯೂ ಮನೋಹರ ರೂಪ, ಯೌವನ
ರಾಜತೇಜದ ಅರ್ಜುನನ ಮನಸಾ ಪ್ರೀತಿಸಿ
ತನ್ನ ನಗೆನೋಟ ಲಜ್ಜೆ ನಡೆನುಡಿಗಳಿಂದ
ಅದ ಪ್ರಕಟಿಸೆ ಕೃಷ್ಣನನುಮೋದನೆ ದೊರೆಯಿತು
ಬಲರಾಮ ಊರಿನಲ್ಲಿರದ ಸಮಯದಿ
ಅರ್ಜುನ ಗಾಂಧರ್ವ ವಿಧಿಯಲಿ
ಸುಭದ್ರೆಯ ಲಗ್ನವಾಗಿ
ದಂಡ ಕಮಂಡಲ ರುದ್ರಾಕ್ಷಿಗಳ ಕಿತ್ತೊಗೆದು
ಕವಚ ಕಿರೀಟಾದಿಗಳ ಧರಿಸಿ
ಸುಭದ್ರೆಯೊಡನೆ ರಥವೇರಿ
ಪಯಣಿಸಲು ಅನುವಾದನು
ನಂತರದಿ ವಿಷಯ ತಿಳಿದ ಬಲರಾಮ
ಕ್ಷುದ್ರನಾಗಿ ಹಲಾಯುಧವ ಧರಿಸಿ
ಅರ್ಜುನನ ವಧಿಸಹೊರಟಾಗ
ಕೃಷ್ಣ ವಸುದೇವಾದಿಗಳು
ಮಧ್ಯೆ ಪ್ರವೇಶಿಸಿ
ದೈವ ಸಂಕಲ್ಪದಿ ನಡೆದು ಹೋದ ಕಾರ್ಯಕೆ
ಅನ್ಯತಾ ಭಾವಿಸದೆ ವಿಚಾರ ಮಾಡಲು ತಿಳಿಸೆ
ಯತಿವೇಷದಿ ಬಂದಿರ್ಪ ಯುವಕನು
ಮಧ್ಯಮ ಪಾಂಡವ ಅರ್ಜುನೆನಂದು ತಿಳಿದು
ಕನ್ಯೆಯು ಸತ್ಕುಲವನ್ನೇ ಸೇರಿದಳೆಂದು
ಸಕಲರೂ ಸಂಭ್ರಮಿಸೆ
ಕೃಷ್ಣ ಧನಕನಕಾದಿ ಬಳುವಳಿಗಳೊಡನೆ
ಇಂದ್ರಪ್ರಸ್ಥ ರಾಜಧಾನಿಯೆಡೆಗೆ ನಡೆದು ಸಂಭ್ರಮದಿ
ಆರತಕ್ಷತೆ ಶೋಭನೆಗಳ ನಡೆಯಿಸಿದನು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45443

-ಎಂ. ಆರ್. ಆನಂದ, ಮೈಸೂರು

