ಪುಸ್ತಕ:ಪ್ರಹರಿ
ಲೇಖಕರು: ಸೂರ್ಯಸಖ ಪ್ರಸಾದ್ ಕುಲಕರ್ಣಿ
ಬೆಲೆ : 120
ಪುಟ : 112+4
ಪ್ರಕಾಶನ: ಹೆಚ್.ಎಸ್.ಆರ್.ಎ.ಪ್ರಕಾಶನ
ರವಿ ಕಾಣದ್ದನ್ನು ಕವಿ ಕಂಡನಂತೆ ಎಂದು ಕೇಳಿದ್ದೇವೆ,’ಪ್ರಹರಿ’ ಕವಿತಾ ಸಂಕಲನದ ಮೂಲಕ ಅನೇಕ ಕವಿತೆಗಳನ್ನು ನಮ್ಮ ಮುಂದೆ ಇಟ್ಟಿರುವಸೂರ್ಯಸಖ ಪ್ರಸಾದ್ ಕುಲಕರ್ಣಿ ಇವರು ಅವರೊಳಗಿನ ಅನೇಕ ಅನುಭವದ ಪದರುಗಳನ್ನು ಬಳಸಿ ಕವಿತೆಯನ್ನು ಹೆಣೆದರುವ ಪರಿ ಅದ್ಭುತ. ಗದ್ಯ ಸಾಹಿತ್ಯದಲ್ಲಿ ಕೃಷಿ ಮಾಡಿರುವ ಲೇಖಕರು ಈ ಕವನ ಸಂಕಲನದ ಮೂಲಕ ಕವಿತಾ ಲೋಕಕ್ಕೆ ಕಾಲಿಟ್ಟಿದ್ದಾರೆ. ತಾಯಿಯನ್ನು, ಸ್ತ್ರೀಯನ್ನು ಪೂಜಿಸುತ್ತಾ ಅವಳ ಬಗ್ಗೆ ಗೌರವ ಭಾವದಿಂದ ಹೆಣೆದಿರುವ ಅನೇಕ ಕವಿತೆಗಳು ನಮ್ಮನ್ನು ಸೆಳೆಯುತ್ತವೆ. ಊರ್ಮಿಳೆ , ಶರ್ಮಿಷ್ಟೆ, ಪದ್ಮಾವತಿ, ಬೃಂದಾ, ರಾಧಾ, ಚಂದ್ರಮತಿ ಹೀಗೆ ಅನೇಕ ಮಹಿಳಾ ಪಾತ್ರಗಳ ಸ್ವಗತದಂತೆ ಬರೆದಿರುವ ಕವಿತೆಗಳು ನಮ್ಮನ್ನು ಕಾಡುತ್ತವೆ. ಅಮ್ಮನ ಬಗ್ಗೆ ಏನು ಬರೆಯಲಿ, ಶಬ್ದಕೋಶದಲ್ಲಿ ಪದಗಳೇ ಇಲ್ಲ ಎಂದು ಪದ ಕಟ್ಟುತ್ತಾ ಮಂದಿರ, ದವಾಖಾನೆ ಕಟ್ಟಿದರೂ ವೃದ್ದಾಶ್ರಮ ಕಟ್ಟಬೇಡಿ, ತಾಯಿಯನ್ನು ಪೂಜಿಸಿ ಎಂದು ಕರೆ ನೀಡುತ್ತಾ, ನಮಗೆ ಭಾರತೀಯ ನೆಲದಲ್ಲಿ ಪ್ರತಿದಿನ ಅಮ್ಮಂದಿರ ದಿನ ಎಂದು ಹೇಳುತ್ತಾ ತಾಯಿಯ ಮಹತ್ವವನ್ನು ನಮಗೆ ನೆನಪಿಸುತ್ತ ಅವಳನ್ನು ಬಣ್ಣಿಸಿ ಬರೆದಿದ್ದಾರೆ.
ಇನ್ನು ಅಮ್ಮನ ಬಗ್ಗೆ ಹೇಳಿದವರು ಅಪ್ಪನ ಕುರಿತು ಹೇಳುತ್ತಾ ಎಷ್ಟು ಜವಾಬ್ದಾರಿ ಇದ್ದರೂ ಎಷ್ಟೇ ದಣಿದಿದ್ದರೂ ಅಮ್ಮನಂತೆ ನೀನೇಕೆ ಸಿಡಿಮಿಡಿ ಗುಟ್ಟಲ್ಲ? ಎಂದು ಅಪ್ಪನನ್ನು ಕುರಿತು ಹೇಳುತ್ತಾ ನಿಮ್ಮಂತೆ ಆಗದಿದ್ದರೂ,ನಿಮ್ಮವನೇ ಆಗಿರುವೆ ಅಪ್ಪ ಎಂದು ಹೇಳುವ ಕವಿನುಡಿಗಳು ಮನದಲ್ಲಿ ಅಚ್ಚಾಗಿ ಉಳಿಯುವಂತೆ ಮಾಡುತ್ತವೆ. ಇನ್ನು ಅಡುಗೆ ಮನೆ ಎಂಬುದು ಸಾಮಾನ್ಯವಲ್ಲ ಅಲ್ಲಿ ಮಾಡಿ ಬಡಿಸುವ ಅಡುಗೆ, ನಮಗೆ ನೈವೇದ್ಯ. ಅರಮನೆಯಾಗಲಿ ಗುಡಿಸಲೆ ಆದರೂ ಅಡುಗೆ ಮನೆ ಎಂಬುದು ಎಲ್ಲೆಲ್ಲೂ ಇರುತ್ತದೆ ಎಂದು ಹೇಳುತ್ತಾರೆ.ಒಂದು ಪಾತ್ರೆ ಇಟ್ಟರೆ ಅಡುಗೆ ಆಗಿಬಿಡುತ್ತದೆ ಅದೇನು ಮಹಾನ್ ಕಾರ್ಯ ಎಂದು ಎಣಿಸುವವರಿಗೆ ಅದೊಂದು ಮಹಾ ಕಲೆ, ಬೇಯುವಿಕೆ , ತಾಳುವಿಕೆ ಎಂಬಂತ ಗುಣಗಳು ಸಮ್ಮಿಳಿತವಾಗಿ ಸಿಹಿ ,ಹುಳಿ , ಉಪ್ಪು, ಖಾರ ರುಚಿಗಳು ಸಮಪಾಲಾಗಿರುವಂತೆ ನೋಡಿಕೊಳ್ಳುವ ಕಲಾ ಶಾಲೆ ಅಡುಗೆಮನೆ ಎಂದು ಹೇಳುತ್ತಾರೆ.
ಹೆಣ್ಣು ಗಂಡು ಎಂಬ ಭೇದ ಭಾವ ಮಾಡುವವರಿಗೆ ಅವರಿಬ್ಬರೂ ಸಮಾನರು ಇಬ್ಬರಿಗೂ ಸಮಭಾವದಲ್ಲಿ ಬೆಳೆಸಿ, ಅವರಿಗೆ ಶಿಕ್ಷಣ ನೀಡಿ ಅವರ ಬದುಕಲ್ಲಿ ಚಿಕ್ಕಮಂದಹಾಸ ಮೂಡುವಂತೆ ಮಾಡಬೇಕು ಎಂದು ಕರೆ ನೀಡುತ್ತಾ, ಹೆಣ್ಣು ಕೂಡ ಸಾಧನೆಯ ಜೋಳಿಗೆ ತುಂಬುತ್ತಾಳೆ ಎಂಬುದನ್ನು ತಿಳಿಸುತ್ತಾರೆ. ಹೀಗೆ ದೈನಂದಿನ ಬದುಕಿನಲ್ಲಿ ಸಾಮಾಜಿಕವಾಗಿ ನಾವು ಉನ್ನತಿ ಹೊಂದಲು ಅನುಸರಿಸಬೇಕಾದ ಕ್ರಮಗಳು ಸಮಾಜದಲ್ಲಿ ಆಗಬೇಕಾದ ಬದಲಾವಣೆ ಹೀಗೆ ಇವುಗಳನ್ನು ಹೇಳುತ್ತಾ ತಮ್ಮ ಮನೋಲಹರಿಯನ್ನು ನಮ್ಮ ಮುಂದೆ ಇಡುತ್ತಾ ಸಾಗುತ್ತಾರೆ ಕವಿಗಳು.
ಆರಕ್ಷಕ,ಅಮರ ಜವಾನ ಹೀಗೆ ದೇಶಕ್ಕಾಗಿ, ಜನಸೇವೆಗಾಗಿ ದುಡಿಯುವ ಕೈಗಳಿಗೆ ಜೈಕಾರ ಹಾಕುತ್ತಾ ಹಬ್ಬ ಹರಿದಿನಗಳಲ್ಲೂ ದುಡಿದು ಅವರು ಮಾಡಿದ ಕಾರ್ಯಕ್ಕೆ ರಜೆಯೇ ಇರದ ಶಿಕ್ಷೆ ಎಂದು ಅವರ
ಕರ್ತವ್ಯಪಾಲನೆಯನ್ನು ಬಣ್ಣಿಸುತ್ತಾ ಕವಿ ಕಾವಲು ಕಾಯುವ ಕಲಿಗಳು ಎಂದು ಹೆಮ್ಮೆಯಿಂದ ಹೇಳುವರು.
ಹೀಗೆ ಅವರ 67 ಕವಿತೆಗಳಲ್ಲಿ ವೈವಿಧ್ಯಮಯ ಸಾರಯುಕ್ತ ವಸ್ತುಗಳು ಅಡಗಿರುವುದು ವಿಶೇಷ. ಇವನ್ನೆಲ್ಲ ಓದಿ ನಾವು ಬಾಳಿನಲ್ಲಿ ಅಳವಡಿಸಿಕೊಂಡರೆ ಸುಂದರ ಸಮಾಜ ನಮ್ಮದಾಗಲಿದೆ.

–ಸಾವಿತ್ರಿ ಶ್ಯಾನುಭಾಗ, ಕುಂದಾಪುರ
