ಹೊರಗೆ ಕರೆಗಂಟೆ ಸದ್ದಾಯಿತು. ನಂದಿನಿ ಲಗುಬಗೆಯಿಂದ ಬಂದು ಬಾಗಿಲನ್ನು ತೆರೆದವಳು ಒಮ್ಮೆಲೇ ಅವಕ್ಕಾದಳು. ಮನಸ್ಸು ಕಳೆದ ಒಂದು ವರ್ಷದ ಹಿಂದೆ ಓಡಿತು. ಆ ದಿನ ಅವಳು ಎಂದೂ ಮರೆಯಲು ಸಾಧ್ಯವಿಲ್ಲ. “ನಾನು ಈ ಮನೆಯಲ್ಲಿ ಇಂದೇ ಕೊನೆ. ಎಂದಿಗೂ ಈ ದಿಕ್ಕಿಗೆ ತಲೆ ಹಾಕಲಾರೆ. ಈ ಮನೆಗೂ ನನ್ನ ಋಣ ಮುಗಿಯಿತು” ಸುಷ್ಮಾ ತನ್ನ ಎಲ್ಲಾ ಬಟ್ಟೆ ಬರೆಗಳನ್ನು ಎತ್ತಿಕೊಂಡು ಗೇಟಿನಾಚೆ ನಡೆದಿದ್ದಳು. ನಂತರ ಅವಳಿಂದ ಏನೂ ಸುದ್ಧಿ, ಸಮಾಚಾರ ಇರಲಿಲ್ಲ. ಈಗ ಒಮ್ಮಿಂದೊಮ್ಮೆ ಮನೆಗೆ ಆಗಮಿಸಿದವಳನ್ನು ಕಂಡು ಆ ಕ್ಷಣಕ್ಕೆ ಬೆಚ್ಚಿ ಬಿದ್ದಳು ನಂದಿನಿ. ತಲೆ ತಗ್ಗಿಸಿ ನಿಂತಿದ್ದವಳನ್ನು ಒಮ್ಮೆ ದಿಟ್ಟಿಸಿ ನೋಡಿದಳು. ಕಣ್ಣ ಕೆಳಗೆ ಕಪ್ಪು ವರ್ತುಲಗಳು, ಕೆನ್ನೆಯ ಮೇಲೆ ಬಂಗಿನ ಕುರುಹುಗಳು, ಮುಖದ ಮೇಲೆ ದು:ಖ ಮಡುಗಟ್ಟಿತ್ತು. ಕಣ್ಣಲ್ಲೊಂದು ತಪ್ಪಿತಸ್ಥ ಭಾವ ಇದ್ದಂತೆನಿಸಿತು. ಆ ಕ್ಷಣ ಏನೂ ಮಾತು ಬಾರದೆ, ಸೋಫಾದಲ್ಲಿ ಕುಳಿತ್ತಿದ್ದ ಸಂಜಯನ ಮುಖ ನೋಡಿದಳು.
ಅಂದು ಸುಷ್ಮಾಳ ಮದುವೆಯ ಪ್ರಸ್ತಾಪವಾಗಿತ್ತು. ಆದರೆ ಸುಷ್ಮಾ ಮದುವೆಯನ್ನು ಒಪ್ಪು`ವ ಮನಸ್ಥಿತಿಯಲ್ಲಿ ಇರಲಿಲ್ಲ. ತಾನು ಏನಾದರೂ ಸಾಧಿಸಬೇಕೆಂದು ಅವಳ ಕನಸಾಗಿತ್ತು. ಕಾಲೇಜಿನಲ್ಲಿ ಗೆಳತಿಯರೆಲ್ಲಾ “ನಿನಗೇನಮ್ಮಾ, ಒಳ್ಳೆ ಸಿನೆಮಾ ನಟಿ ಹಾಗೆ ಇದ್ದೀಯಾ” ಅಂತ ಹೊಗಳಿದಾಗ ಸುಷ್ಮಾಳ ಮನಸ್ಸು ಪುಳಕಗೊಳ್ಳುತ್ತಿತ್ತು. ಆ ಸಮಯದಲ್ಲಿ ನಿಖಿಲ್ ನ ಪರಿಚಯವಾಗಿ, ಸ್ನೇಹ ಪ್ರೀತಿಗೆ ತಿರುಗಿ, ತಾನು ಅಂದುಕೊಂಡದ್ದನ್ನು ಸಾಧಿಸುವ ಬದಲು ಪ್ರೇಮ ಪಾಶಕ್ಕೆ ಸಿಲುಕಿ, ದುಡುಕಿ ನಿರ್ಧಾರ ತೆಗೆದುಕೊಂಡು ಮನೆಯವರೆನ್ನೆಲ್ಲಾ ಧಿಕ್ಕರಿಸಿ ಹೊರಟು ಹೋಗಿದ್ದಳು.
ಮನೆಯ ಬಾಗಿಲಲ್ಲಿ ನಿಂತಿದ್ದ ಸುಷ್ಮಾಳ ಹೃದಯ ಬಡಿದುಕೊಳ್ಳುತ್ತಿತ್ತು. ಅಂದು ಇದೇ ಬಾಗಿಲನ್ನು ಕೋಪ, ಪ್ರೀತಿ ಮತ್ತು ಹಠದೊಂದಿಗೆ ಬಿಟ್ಟು ಹೋಗಿದ್ದಳು. ಅಮ್ಮನಂತಿದ್ದ ಅತ್ತಿಗೆ. ಮುದ್ದು ಮಾಡುವ ಅಣ್ಣ. ಎಲ್ಲವನ್ನೂ ಬಿಟ್ಟು ತಾನು ಬಯಸಿ, ಹಂಬಲಿಸಿದ ಹುಡುಗನ ಹಿಂದೆ ಬಿದ್ದಿದ್ದಳು. ಆದರೆ ಈಗ ತನ್ನ ಬಾಳು ಅಂಧಕಾರದಲ್ಲಿ ಮುಳುಗಿದ್ದು, ತಾನು ಪ್ರೀತಿಸಿದ ವ್ಯಕ್ತಿಯಿಂದ ಮೋಸ ಹೋಗಿ ಜೀವನದಲ್ಲಿ ಸೋತು, ಹೈರಾಣಾಗಿ ತನ್ನ ಮನೆಯ ಹಾದಿ ಹಿಡಿದಿದ್ದಳು. ಮದುವೆಯಾದ ಹೊಸತರಲ್ಲಿ ಎಲ್ಲವೂ ಸುಂದರವಾಗಿತ್ತು. ಪ್ರೀತಿಸಿ ಮದುವೆಯಾದವನ ಜೊತೆ ಹೊಸ ಬದುಕು ಆರಂಭಿಸಿದ್ದ ಖುಷಿ ಅವಳ ಬದುಕನ್ನು ಹಸನಾಗಿತ್ತು. ಆದರೆ ಈ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ಮೊದ ಮೊದಲು ಅವಳೊಂದಿಗೆ ಸಮಾಧಾನವಾಗಿ ಇರುತ್ತಿದ್ದ ನಿಖಿಲ್ ದಿನ ಕಳೆದಂತೆ ಬದಲಾಯಿಸಿದ್ದ. ಅವಳ ಭಾವನೆಗಳಿಗೆ ಬೆಲೆಕೊಡದೆ, ಸಣ್ಣ ಪುಟ್ಟ ವಿಷಯಗಳಿಗೂ ದುಡುಕುತ್ತಿದ್ದ. ಸುಷ್ಮಾಳ ಯಾವ ಆಸೆ, ಆಕಾಂಕ್ಷೆಗಳಿಗೂ ಕಿವಿಕೊಡದೆ, ಸ್ನೇಹಿತರ ಜೊತೆ ಸಮಯ ಕಳೆಯುತ್ತಿದ್ದ. ದುರಾಭ್ಯಾಸಗಳೂ ಅವನ ಸಂಗಾತಿಯಾಗಿತ್ತು. ಕೆಲಸಕ್ಕೂ ಹೋಗದೆ ಮನೆಯಲ್ಲಿ ದರ್ಪ ತೋರುತ್ತಿದ್ದ. ವಾರಗಟ್ಟಲೆ ಮನೆಗೂ ಬರುತ್ತಿರಲಿಲ್ಲ. ಸುಷ್ಮಾಗೆ ಬದುಕು ನರಕವಾಗಿತ್ತು. ದಿನಗಳು ಕಳೆದಂತೆ ಸಮಸ್ಯೆಗಳು ಹೆಚ್ಚುತ್ತಾ ಹೋದವು. ಅನೇಕ ಬಾರಿ ಅಣ್ಣ, ಅತ್ತಿಗೆಯ ನೆನಪಾಗಿ ದು:ಖಿಸುತ್ತಿದ್ದಳು. ಒಂದು ದಿನ ಮನೆಯಲ್ಲಿ ಜೋರು ರಂಪಾಟವೇ ನಡೆಯಿತು. “ನಾನು ಕನಸು ಕಂಡ ಬದುಕು ಇದೇನಾ?”. ಸುಷ್ಮಾ ತನಗೆ ತಾನೇ ಪ್ರಶ್ನಿಸಿದಳು. ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೆಣಗಾಡಿದಳು. ಆ ರಾತ್ರಿಯೆಲ್ಲಾ ನಿದ್ರೆ ಮಾಡದೆ ಮರುದಿನ ತನ್ನ ಬದುಕನ್ನು ತಾನೇ ನಿರ್ಧರಿಸುವ ಕಾಲ ಬಂತೆಂದು ಅರಿತು, ಬದುಕಿನ ಹೊಸ ಅಧ್ಯಾಯ ಆರಂಭಿಸಲು ತನ್ನ ಸಂಸಾರವನ್ನು ತೊರೆದು ಬಂದಿದ್ದಳು.
“ಈಗ್ಯಾಕೆ ಇಲ್ಲಿ ಬಂದೆ?” ತಂಗಿಯನ್ನು ಕಂಡು ಕೋಪದಿಂದ ಸಂಜಯ ಪ್ರಶ್ನಿಸಿದ. ಅಣ್ಣನ ಖಾರವಾದ ನುಡಿಗೆ ಮುಖ:ತ ಎದುರಿಸಲಾಗದೆ ತಲೆ ತಗ್ಗಿಸಿದಳು. ಸುಷ್ಮಾಳಿಗೆ ಅಳು ಉಮ್ಮಳಿಸಿ ಬರುತ್ತಿತ್ತು. ತಾಯಿ ಇಲ್ಲದ ಕೊರತೆಯನ್ನು ನೀಗಿಸಿದ ಅಣ್ಣ, ಅತ್ತಿಗೆಯ ಪ್ರೀತಿಯೂ ನೆನಪಾಗದೆ, ಯೌವನದ ಹೊಸಿಲಲ್ಲಿ ಎಲ್ಲವನ್ನೂ ಮರೆತು ನಿಖಿಲನ ಹಿಂದೆ ನಡೆದಿದ್ದಳು. ಸುಷ್ಮಾಳ ಕಣ್ಣಿನಿಂದ ಧಾರಾಕಾರವಾಗಿ ನೀರು ಹರಿಯುತ್ತಿತ್ತು. “ಏನಾಯಿತು? ಎಲ್ಲಿ ನಿನ್ನ ಗಂಡ?”. ಅಣ್ಣನ ಪ್ರಶ್ನೆಗೆ ಉತ್ತರವಿರಲ್ಲಿಲ್ಲ. “ನನ್ನನ್ನು ಕ್ಷಮಿಸಿ ಬಿಡು ಅಣ್ಣಾ. ನಾನು ಬದುಕಿನಲ್ಲಿ ಸೋತು ಬಿಟ್ಟೆ. ಅಣ್ಣ, ಅತ್ತಿಗೆಯ ಕಾಲು ಮುಟ್ಟಿ ಬಗ್ಗಿ ಬಿಕ್ಕಿ ಬಿಕ್ಕಿ ಅತ್ತಾಗ, ನಂದಿನಿಗೂ ಅಳು ಬಂತು. ಮದುವೆಯಾದ ವರುಷದೊಳಗೆ ಪಶ್ಚಾತಾಪ ಪಟ್ಟು ಹಿಂತಿರುಗಿ ಬಂದವಳನ್ನು ಹೇಗೆ ಸ್ವೀಕರಿಸಬೇಕೆಂಬ ಗೊಂದಲದಿಂದ, ಅವಳನ್ನು ಎಬ್ಬಿಸಿ ಪಕ್ಕದಲ್ಲಿ ಕೂರಿಸಿದಳು.
“ಸುಷ್ಮಾ, ನಾವು ನಿನ್ನನ್ನು ಸ್ವಂತ ಮಗಳಂತೆಯೇ ಬೆಳೆಸಿದೆವು. ನಿನ್ನ ಅಣ್ಣ, ತನ್ನ ಆಸೆಗಳನ್ನು ಬದಿಗಿಟ್ಟು ನಿನ್ನ ಓದಿಗೆ, ನಿನ್ನ ಭವಿಷ್ಯವನ್ನೇ ಗುರಿಯಾಗಿಸಿ ದುಡಿದರು. ಆದರೆ ನೀನು ಏನು ಮಾಡಿದೆ?. ಇಂದು ನೀನು ಬದುಕಿನಲ್ಲಿ ಎಲ್ಲವನ್ನೂ ಕಳಕೊಂಡಾಗ ಮನೆಯ ನೆನಪಾಯಿತೇ?” ನಂದಿನಿ ಕೇಳಿದಳು. “ಅತ್ತಿಗೆ ನಾನು ತಪ್ಪು ಮಾಡಿದೆ. ನನಗೆ ಎಲ್ಲವೂ ಈಗ ಅರ್ಥವಾಗಿದೆ. ನನ್ನನ್ನು ನಿಸ್ವಾರ್ಥವಾಗಿ ಪ್ರೀತಿಸಿದವರು ನೀವಿಬ್ಬರೇ. ನನಗೆ ತಡವಾಗಿ ಅರ್ಥವಾಯಿತು. ಅಣ್ಣಾ, ದಯವಿಟ್ಟು ನನ್ನನ್ನು ಕ್ಷಮಿಸು”. ಸುಷ್ಮಾ ಅಳುತ್ತಾ ಹೇಳಿದಳು. ಸಂಜಯ ಕಲ್ಲಿನಂತೆ ನಿಂತು ಬಿಟ್ಟಿದ್ದ. ಪಾಪದ ಪಶ್ಚಾತ್ತಾಪದಲ್ಲಿ ಬೆಂದು, ಅಪರಾಧ ಭಾವನೆಯಿಂದ ಕುಳಿತಿದ್ದ ತಂಗಿಯನ್ನು ಎಬ್ಬಿಸಿ, “ಸುಷ್ಮಾ, ನೀನು ನಮ್ಮ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಗೆ ದ್ರೋಹ ಮಾಡಿದೆ. ನಮ್ಮನ್ನು ಒಂದು ಮಾತು ಕೇಳದೆ ನಿನ್ನ ಮನಸ್ಸಿಗೆ ಬಂದಂತೆ ಮಾಡಿ ಈಗ ನೀನು ತಪ್ಪಾಯ್ತು ಅಂತ ಬಂದಿದ್ದೀಯಾ. ತಾಯಿ ಇಲ್ಲದ ಮಗುವನ್ನು ತನ್ನ ಸ್ವಂತ ಮಗಳಂತೆಯೇ ನೋಡಿಕೊಂಡ ನಮ್ಮ ತ್ಯಾಗದ ಬೆಲೆಯನ್ನು ನೀನು ಅರಿಯದೇ ಹೋದೆ. ನಮ್ಮ ಪರಿಸ್ಥಿತಿಯನ್ನು ನೀನು ಅರ್ಥ ಮಾಡಿಕೊಳ್ಳಲಿಲ್ಲ.” ಸಂಜಯನ ಮುಖ: ಸಿಟ್ಟಿನಿಂದ ಕೆಂಪಾಗಿತ್ತು. ಆ ಕ್ಷಣ ಅಲ್ಲಿ ನೀರವ ಮೌನ ಆವರಿಸಿತ್ತು. ಪತಿಯ ದೇಹ ಕಂಪಿಸುತ್ತಿರುವುದನ್ನು ಕಂಡ ನಂದಿನಿ ಬಳಿಯಲ್ಲೇ ನಿಂತು ಸಮಾಧಾನ ಮಾಡಿದಳು. ಸುಷ್ಮಾಳ ಸ್ಥಿತಿಯನ್ನು ಕಂಡು ಅವಳ ಮನಸ್ಸು ಕರಗಿತು. “ಜೀವನ ನಿನಗೆ ಒಂದು ಪಾಠ ಕಲಿಸಿದೆ. ಈಗ ಆ ಪಾಠದ ಜೊತೆಗೆ ಹೊಸ ಜೀವನ ಆರಂಭಿಸು. ಕಳೆದದ್ದನ್ನು ಒಂದು ಕೆಟ್ಟ ಕನಸು ಎಂದು ಮರೆತು ಬಿಡು. ಮುಂದಿನ ಬದುಕಿನ ಬಗ್ಗೆ ಆಲೋಚಿಸು” ನಂದಿನಿ ಸುಷ್ಮಾಳ ಕೈ ಹಿಡಿದು ನುಡಿದಳು. ಇತ್ತ ಸಂಜಯನ ಕೋಪವೂ ನಿಧಾನವಾಗಿ ಕರಗಿತು. “ನೀನು ದೊಡ್ಡ ತಪ್ಪನ್ನೇ ಮಾಡಿದ್ದಿ. ತಪ್ಪು ಮಾಡುವುದು ಮನಷ್ಯನ ಸಹಜ ಗುಣ. ಆದರೆ ತಪ್ಪನ್ನು ಒಪ್ಪಿಕೊಂಡು ಧೈರ್ಯದಿಂದ ನಿನ್ನ ಮನೆಯತ್ತ ಬಂದೆ. ದುಡುಕಿ ಏನಾದರೂ ಮಾಡಿಕೊಂಡಿದ್ದರೆ ನಿನ್ನ ಗತಿ ಏನಾಗುತ್ತಿತ್ತು? ಈ ಮನೆಯ ಬಾಗಿಲು ನಿನಗೆ ಯಾವತ್ತೂ ಮುಚ್ಚುವುದಿಲ್ಲ. ಹೊಸ ಬದುಕು ಆರಂಭಿಸು” ಸಂಜಯನ ಮನಸ್ಸು ಭಾರವಾಗಿತ್ತು. ತಂಗಿಯನ್ನು ಕಂಡು ನಿಜಕ್ಕೂ ಮರುಕವಾಯಿತು.
ಅಣ್ಣ ಮತ್ತು ಅತ್ತಿಗೆಯ ಮಾತುಗಳನ್ನು ಕೇಳಿದ ಸುಷ್ಮಾಳಿಗೆ ಕಣ್ಣೀರನ್ನು ತಡೆಯಲಾಗಲಿಲ್ಲ. ನಾಚಿಕೆಯಿಂದಲೂ, ಪಶ್ಚಾತ್ತಾಪದಿಂದಲೂ, ಹೃದಯ ಭಾರವಾಯಿತು. ತಾನು ಮಾಡಿದ ತಪ್ಪಿನ ಅರಿವು ಅವಳನ್ನು ಒಳಗೊಳಗೆ ಸುಡುತ್ತಿತ್ತು. ಕ್ಷಣಿಕ ಭಾವನೆಗಳಿಗೆ ಮರುಳಾಗಿ, ತನ್ನನ್ನು ಪ್ರೀತಿಯಿಂದ ಬೆಳೆಸಿದವರ ಮನ ನೋಯಿಸಿದ್ದೆನೆ ಎಂಬ ಪಾಪ ಪ್ರಜ್ಞೆಯಿಂದ ಸುಷ್ಮಾಳಿಗೆ ಮಾತೇ ಬರಲಿಲ್ಲ. ಮೌನವೇ ಅವಳ ಪಶ್ಚಾತ್ತಾಪದ ಭಾಷೆಯಾಗಿತ್ತು. ಸ್ವಲ್ಪ ಹೊತ್ತಿನ ನಂತರ ನಡುಗುವ ಧ್ವನಿಯಲ್ಲಿ ಅವಳು ಹೇಳಿದಳು, “ಅಣ್ಣಾ, ಅತ್ತಿಗೆ ನಿಜಕ್ಕೂ ನಾನು ಕ್ಷಮೆಗೆ ಅರ್ಹಳಲ್ಲ. ನಿಮ್ಮ ಪ್ರೀತಿ, ಕಾಳಜಿ, ತ್ಯಾಗದ ಮೌಲ್ಯವನ್ನು ತಿಳಿಯದೇ ಹೋದೆ. ನೀವು ನನಗೆ ಮಾಡಿದ ಉಪಕಾರವನ್ನು ಎಂದಿಗೂ ತೀರಿಸಲಾರೆ. ಇಂದು ನಾನು ಅಪರಾಧಿಯಂತೆ ನಿಮ್ಮ ಮುಂದೆ ನಿಂತಿದ್ದೇನೆ. ನನ್ನ ಅಹಂಕಾರ ಮತ್ತು ಅವಿವೇಕದ ಬೆಲೆ ತುಂಬಾ ದುಬಾರಿಯಾಗಿ ತೆತ್ತಿದ್ದೇನೆ. ನಾನು ಜೀವನದಲ್ಲಿ ಅತೀ ದೊಡ್ಡ ತಪ್ಪನ್ನೇ ಮಾಡಿದರೂ ನೀವು ನನ್ನನ್ನು ಕ್ಷಮಿಸಿದ್ದೀರಿ. ಸಂಬಂಧಗಳ ಬೆಲೆಯನ್ನು ಅರ್ಥಮಾಡದೆ, ನಿಮಗೆ ಗೌರವವನ್ನು ನೀಡದಕ್ಕೆ ಇಂದು ಬಹಳ ದೊಡ್ದ ಶಿಕ್ಷೆ ನನಗೆ ದೊರಕಿತು. ನಾನು ದುಡುಕಿದ ಪರಿಣಾಮ ನನ್ನ ಬಾಳೇ ಸರ್ವನಾಶವಾಯಿತು.” ಒಂದೇ ಸಮನೇ ಅಳುತ್ತಿದ್ದವಳನ್ನು, ನಂದಿನಿ ತನ್ನ ಎದೆಗೆ ಒತ್ತಿಕೊಂಡು, ಅವಳ ತಲೆ ಮೇಲೆ ಕೈಯಿಟ್ಟು, “ನೋಡು ಸುಷ್ಮಾ, ನಿನ್ನ ತಪ್ಪಿನ ಅರಿವು ನಿನಗಿದೆ. ಮುಂದೆ ಧೈರ್ಯವಾಗಿ ಬದುಕಬೇಕು. ತಪ್ಪಿನಿಂದ ಪಾಠ ಕಲಿಯುವುದು ಮುಖ್ಯ. ನಿನಗೆ ನಾವಲ್ಲದೆ ಬೇರೆ ಯಾರಿದ್ದಾರೆ. ಇನ್ನು ಮುಂದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಂಬಂಧಗಳ ಬೆಲೆ ಅರ್ಥ ಮಾಡಿಕೋ. ಸಾಕು, ಇನ್ನು ಒಳಗೆ ಹೋಗಿ, ಸ್ವಲ್ಪ ರೆಸ್ಟ್ ಮಾಡು” ಎಂದಳು.
ತನ್ನ ಕೋಣೆಯ ಮಂಚದಲ್ಲಿ ಕುಳಿತ ಸುಷ್ಮಾ, ಕಿಟಕಿಯಿಂದ ಆಕಾಶ ನೋಡುತ್ತಿದ್ದಳು. ಆ ದಿನ ಒಂದು ಸತ್ಯದ ಅರಿವಾಗಿತ್ತು. ಜೀವನದಲ್ಲಿ ಪ್ರೀತಿ ಕೈ ಕೊಡಬಹುದು. ಕನಸುಗಳು ಒಡೆಯಬಹುದು. ಆದರೆ ಸಂಕಷ್ಟದ ಸಮಯದಲ್ಲಿ ನಮ್ಮ ಜೊತೆ ನಿಲ್ಲುವ ಕುಟುಂಬದ ಪ್ರೀತಿ ಎಲ್ಲಕ್ಕಿಂತಲೂ ಅಮೂಲ್ಯ. ನಮ್ಮವರು, ನಮ್ಮ ಕುಟುಂಬ ಎಂದಿಗೂ ನಮ್ಮನ್ನು ಸಂಪೂರ್ಣವಾಗಿ ತೊರೆಯುವುದಿಲ್ಲ. ಕೆಲವೊಂದು ತಪ್ಪುಗಳು ಕ್ಷಮೆ ಪಡೆಯಬಹುದು. ಆದರೆ ಅವು ಕಲಿಸುವ ಪಾಠಗಳು ಜೀವನ ಪೂರ್ತಿ ನಮ್ಮೊಂದಿಗೇ ಇರುತ್ತದೆ. ಇನ್ನು ಮುಂದೆ ನಾನು ಮಾಡಿದ ತಪ್ಪಿನ ನೆರಳಲ್ಲಿ ಬದುಕದೆ, ಆ ತಪ್ಪಿನಿಂದ ಪಾಠ ಕಲಿತು ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸುವ ದೃಢ ಸಂಕಲ್ಪ ಮಾಡುತ್ತಾ, ಕಣ್ಣ ಕೊನೆಯಲ್ಲಿ ತುಳುಕುವ ಕಂಬನಿಯನ್ನು ಹತ್ತಿಕ್ಕಲು ಯತ್ನಿಸುತ್ತಾ, ಒಂದು ಬಗೆಯ ನಿಶ್ಚಿಂತತೆಯ ಭಾವದಿಂದ ಹಾಸಿಗೆಯ ಮೇಲೆ ಒರಗಿದಳು.

ಶೈಲಾರಾಣಿ ಬೋಳಾರ್ , ಮಂಗಳೂರು

