ಟ್ರಿಣ್ ಟ್ರಿಣ್ ಅಲಾರಾಂ ಗಂಟೆ ನಸುಕಿನಲ್ಲಿ ನನ್ನನ್ನು ಎಚ್ಚರಿಸಿತ್ತು. ಐದು ಗಂಟೆಗೆ ಎದ್ದು ಬಿಳಿಯ ಉಡುಪು ತೊಟ್ಟು ಯೋಗ ತರಗತಿಗೆ ಹೋಗಲು ಸಿದ್ದಳಾದೆ.
ಟಣ್, ಟಣ್ ಎಂಬ ಘಂಟೆಯ ಸದ್ದು ದನಗಳ ಕುತ್ತಿಗೆಗೆ ಕಟ್ಟಿದ್ದ ಗಂಟೆಗಳಿಂದ ಕೇಳಿ ಬರುತ್ತಿತ್ತು, ಗೋಪಾಲಕನು ದನಗಳನ್ನು ಮೇಯಿಸಲು ಕಾಡಿಗೆ ತೆರಳುತ್ತಿದ್ದ. ಆ ಗಂಟೆಗಳ ಕಿಣಿ ಕಿಣಿ ನಾದವೇ, ದನಗಳ ಠಾವು ತೋರುವ ದಿಕ್ಸೂಚಿಯಾಗಿತ್ತು, ಗೋಧೂಳಿ ಸಮಯವಾಗುತ್ತಿದ್ದಂತೆ ದನದ ಮಂದೆಯನ್ನು ಹೊಡೆದುಕೊಂಡು ಹಳ್ಳಿಯತ್ತ ಸಾಗುತ್ತಿದ್ದ.
ಢಣ ಢಣ ಗಂಟೆ ಬಾರಿಸಿತು, ಮಕ್ಕಳೆಲ್ಲಾ ಶಾಲೆಗೆ ಓಡಿದರು, ಶಾಲೆಯ ಅಂಗಳದಲ್ಲಿ ನಿಂತು ಪ್ರಾರ್ಥನೆ ಸಲ್ಲಿಸಿದರು, ರಾಷ್ಟ್ರಗೀತೆ ಹಾಡಿದರು. ತಮ್ಮ ತಮ್ಮ ತರಗತಿಗಳಲ್ಲಿ ಕುಳಿತು ಅಂದಿನ ಪಾಠ ಕಲಿತರು. ಸಂಜೆಯ ಗಂಟೆ ಮೊಳಗುತ್ತಲೇ ಮನೆಯತ್ತ ಧಾವಿಸಿದರು. ಹಾದಿಯಲ್ಲಿ ಮಕ್ಕಳನ್ನು ತಿಂಡಿ ತಿನಿಸಿನ ಗಂಟೆ, ಕುಲ್ಫಿ ಐಸ್ ಕ್ರೀಮ್, ಕಾಟನ್ ಕ್ಯಾಂಡಿ ಎಂದು ಕೂಗಿ ಕರೆಯುವ ಗಂಟೆ ಆಕರ್ಷಿಸಿತ್ತು.
ಢಣ ಢಣ ಎಂದು ಅರಮನೆಯ ಮುಂದೆ ಕಟ್ಟಿದ್ದ ನ್ಯಾಯದ ಗಂಟೆಯು ಮೂರು ಬಾರಿ ಮೊಳಗಿತ್ತು. ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತ ಅರಸನು ಹಾಗೂ ಆ ಊರಿನ ಪ್ರಮುಖರು ತಕ್ಷಣವೇ ಅಲ್ಲಿಗೆ ಬಂದರು. ಗಂಟೆ ಬಾರಿಸಿದವನು ತನಗೆ ಆದ ಅನ್ಯಾಯವನ್ನು ಅರಸನ ಮುಂದೆ ತೊಡಿಕೊಂಡನು. ಅರಸನು ತನ್ನ ಮಂತ್ರಿಗಳೊಡನೆ ಸಮಾಲೋಚನೆ ಮಾಡಿ, ಅವನಿಗೆ ನ್ಯಾಯ ಕೊಡಿಸಿದರು. ಹೀಗಿತ್ತು, ಜಾನಪದ ಕಥೆಯೊಂದರಲ್ಲಿ ಅರಮನೆಯ ಮುಂದೆ ಕಟ್ಟಿದ್ದ ಗಂಟೆ ಜನರ ಪಾಲಿಗೆ ನ್ಯಾಯದೇವತೆಯಾದ ಕಥೆ.
ಢಣ್, ಢಣ್ ಎಂದು ಮೊಳಗಿತ್ತು ಚರ್ಚ್ ಮುಂದಿದ್ದ ದೊಡ್ಡದಾದ ಗಂಟೆ, ಕ್ರೈಸ್ತರೆಲ್ಲಾ ಏಸುವಿಗೆ ಪ್ರಾರ್ಥನೆ ಸಲ್ಲಿಸಲು ಚರ್ಚಿನೊಳಗೆ ನಡೆದರು. ತಮ್ಮ ಪಾಪಗಳನ್ನೆಲ್ಲಾ ಮನ್ನಿಸು ತಂದೆ ಎಂದು ಮಂಡಿಯೂರಿ ನಿಶ್ಯಬ್ಧವಾಗಿ ಪ್ರಾರ್ಥನೆ ಸಲ್ಲಿಸಿದರು.
ಹೀಗೆ ಗಂಟೆಯ ಬೃಹತ್ ಗ್ರಂಥವನ್ನೇ ಬರೆಯಬಹುದು. ನಾನು ಅಮೆರಿಕಾಕ್ಕೆ ಭೇಟಿ ನೀಡಿದಾಗ ನೋಡಿದ ಫಿಲಡೆಲ್ಫಿಯಾದಲ್ಲಿರುವ ‘ಲಿಬರ್ಟಿ ಬೆಲ್’ ಅಂದರೆ ಸ್ವಾತಂತ್ರ್ಯದ ಗಂಟೆಯ ಬಗ್ಗೆ ತಿಳಿಯೋಣ ಬನ್ನಿ – ಇದು ಅಮೇರಿಕಾದ ಸ್ವಾತಂತ್ರ್ಯ ಮತ್ತು ದಾಸ್ಯದಿಂದ ಬಿಡುಗಡೆಯ ಸಂಕೇತವಾಗಿ ನಿಲ್ಲುತ್ತದೆ. ಈ ಗಂಟೆಯ ಮೇಲ್ಭಾಗದಲ್ಲಿ ಬೈಬಲ್ ನಿಂದ ಆಯ್ದ ಸಾಲನ್ನು ಕೆತ್ತಲಾಗಿದೆ ‘ದೇಶದಾದ್ಯಂತ ಹಾಗು ಅಲ್ಲಿ ನೆಲಸಿರುವ ಎಲ್ಲಾ ನಿವಾಸಿಗಳಿಗೆ ಸ್ವಾತಂತ್ರ್ಯವನ್ನು ಸಾರಿರಿ’. ಇದರ ತೂಕ ಎಷ್ಟು ಗೊತ್ತೆ? ಸುಮಾರು 943 ಕೆ.ಜಿ. ಇದನ್ನು ತಾಮ್ರ, ತವರ, ಸೀಸ, ಚಿನ್ನ ಹಾಗೂ ಬೆಳ್ಳಿಯ ಮಿಶ್ರಣದಿಂದ ತಯಾರಿಸಲಾಗಿದೆ. ಜುಲೈ 8, 1776 ರಂದು ಅಮೇರಿಕಾದಲ್ಲಿ ಸ್ವಾತಂತ್ರ್ಯ ಘೋಷಣೆ ಮಾಡಲು ಈ ಘಂಟೆಯನ್ನು ಬಾರಿಸಲಾಯಿತು. ಹಾಗಾಗಿ ಇದಕ್ಕೆ ಸ್ವಾತಂತ್ರ್ಯದ ಗಂಟೆ ಎಂದು ಹೆಸರಿಸಲಾಯಿತು. ಅಮೆರಿಕಾದ ಅಂತರ್ಯುದ್ಧದ ನಂತರ ದೇಶವನ್ನು ಮತ್ತೆ ಒಗ್ಗೂಡಿಸಲು ಮತ್ತು ಜನರ ಮನಸ್ಸಿನಲ್ಲಿ ದೇಶಪ್ರೇಮ ಮೂಡಿಸಲು ಈ ಗಂಟೆಯನ್ನು ರೈಲಿನಲ್ಲಿ ದೇಶದಾದ್ಯಂತ ಪ್ರದರ್ಶನಕ್ಕೆ ಕೊಂಡೊಯ್ಯಲಾಯಿತು. ಇದರ ಮೇಲೆ ದೊಡ್ಡದಾದ ಬಿರುಕು ಮೂಡಿದ್ದುದರಿಂದ ಈ ಘಂಟೆಯನ್ನು ಈಗ ಬಾರಿಸುವುದಿಲ್ಲ. ಬದಲಿಗೆ ಪ್ರತಿ ವರ್ಷ ಅಮೆರಿಕಾದ ಸ್ವಾತಂತ್ರ್ಯ ದಿನಾಚರಣೆಯಂದು ಸ್ವಾತಂತ್ರ್ಯ ಹೋರಾಟಗಾರರು ಬಂದು ಈ ಘಂಟೆಯನ್ನು 13 ಬಾರಿ ಅತ್ಯಂತ ಹಗುರಾಗಿ ತಟ್ಟುತ್ತಾರೆ. ಇದು ಅಮೆರಿಕಾದ 13 ರಾಜ್ಯಗಳನ್ನು ಸಂಕೇತಿಸುತ್ತದೆ.
‘ಗಂಟೆಯ ನೆಂಟನೆ ಓ ಗಡಿಯಾರ / ಬೆಳ್ಳಿಯ ಬಣ್ಣದ ಗೋಲಾಕಾರ, ವೇಳೆಯ ತಿಳಿಯಲು ನೀನಾಧಾರ/ ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್’ ದಿನಕರ ದೇಸಾಯಿಯವರ ಈ ಶಿಶುಗೀತೆಯನ್ನು ಕೇಳದವರಾರು? ಈಗ ನಾನು ನಿಂತಿರುವುದು ‘ಸೂರ್ಯ ಮುಳುಗದ ನಾಡು’ ಎಂದೇ ಹೆಸರಾಗಿದ್ದ ಬ್ರಿಟಿಷರ ನಾಡಿನಲ್ಲಿರುವ ಲಂಡನ್ನಿನ ಸಾಂಸ್ಕೃತಿಕ ಹೆಮ್ಮೆಯಾದ ‘ಬಿಗ್ ಬೆನ್’ ಮುಂದೆ. ಈ ಗಂಟೆಯ ನಿರ್ಮಾಣ ಕಾರ್ಯದ ಉಸ್ತುವಾರಿ ಹೊತ್ತಿದ್ದ ಕಮಿಷನರ್ ‘ಬೆಂಜಮಿನ್ ಹಾಲ್’ ಸಾಕಷ್ಟು ಎತ್ತರ ಹಾಗೂ ದಪ್ಪ ಇದ್ದುದ್ದರಿಂದ ಕಾರ್ಮಿಕರು ಅವನನ್ನು ಪ್ರೀತಿಯಂದ ‘ಬಿಗ್ ಬೆನ್’ ಎಂದು ಕರೆಯುತ್ತಿದ್ದರು. ಹಾಗಾಗಿ ಈ ಗಡಿಯಾರ ‘ಬಿಗ್ ಬೆನ್’ ಎಂಬ ಹೆಸರಿನಿಂದಲೇ ಕರೆಯಲಾಯಿತು. ಲಂಡನ್ನಿನ ಬ್ರಿಟಿಷ್ ಪಾರ್ಲಿಮೆಂಟಿನ ಮುಂಭಾಗದಲ್ಲಿರುವ ಎಲಿಝಬೆತ್ ಗೋಪುರದ ಮಧ್ಯೆ ಇರುವುದೇ ಈ ಗಡಿಯಾರ. ಈ ಗೋಪುರವು 316 ಅಡಿ ಎತ್ತರವಿದ್ದು, ಈ ಗೋಪುರದ ಮಧ್ಯೆ ಇರುವ ಗಡಿಯಾರದ ತೂಕ 13.7 ಕೆ.ಜಿ.ಇದೆ. ಗಡಿಯಾರದ ನಿಮಿಷದ ಮುಳ್ಳು 14 ಅಡಿ ಇದ್ದು, ಘಂಟೆಯ ಮುಳ್ಳು 9 ಅಡಿ ಇದೆ. ಗಡಿಯಾರದ ಸುತ್ತಲೂ ಯುನೈಟೆಡ್ ಕಿಂಗ್‌ಡಮ್‌ನ ನಾಲ್ಕು ರಾಷ್ಟ್ರಗಳ ರಾಷ್ಟ್ರೀಯ ಲಾಂಛಗಳಾದ ರೋಸ್ (ಇಂಗ್ಲೆಂಡ್) ಥಿಸಲ್ (ಸ್ಕಾಟ್ ಲ್ಯಾಂಡ್) ಶ್ಯಾಮ್ರಾಕ್ (ಐರ್ಲೆಂಡ್) ಮತ್ತು ಲೀಕ್ (ವೇಲ್ಸ್) ಇವುಗಳನನು ಕೆತ್ತಲಾಗಿದೆ. ಈ ಗಡಿಯಾರವು ಮೊದಲ ಬಾರಿಗೆ ಟಿಕ್ ಟಿಕ್ ಎಂದು ಉಲಿಯುತ್ತಾ ಮೇ 31, 1856 ರಂದು ತನ್ನ ಕಾರ್ಯಾರಂಭ ಮಾಡಿತು. ಇಂದಿಗೂ ಇದು ಟಿಕ್ ಟಿಕ್ ಎನ್ನುತ್ತಾ ಸಮಯದ ಮೌಲ್ಯವನ್ನು ತಿಳಿಸುತ್ತಾ ಓಡುತ್ತಲೇ ಇದೆ. ಲಂಡನ್ ಪ್ರವಾಸಕ್ಕೆ ಬಂದವರು ಈ ಬಿಗ್ ಬೆನ್ ನೋಡದೆ ಹೋಗಲಾರರು. ಇದು ಬ್ರಿಟಿಷ್ ಇತಿಹಾಸ ಮತ್ತು ಸಂಸ್ಕೃತಿಯ ಹೆಮ್ಮೆಯ ಸಂಕೇತವಾಗಿ ನಿಂತಿದೆ.
ಇನ್ನು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಗಂಟೆಯಾಗಿರುವ ರಷ್ಯಾದ ರಾಜಧಾನಿ ಮಾಸ್ಕೋದ ಕ್ರೆಮ್ಲಿನ್ ಅರಮನೆಯ ಆವರಣದಲ್ಲಿರುವ ‘ಮಹಾಗಂಟೆಯ’ ವಿವರಗಳನ್ನು ತಿಳಿಯೋಣ ಬನ್ನಿ – ಇದು ಸುಮಾರು ೨೦೦ ಟನ್ ತೂಕವಿದ್ದು, ಈ ಗಂಟೆಯನ್ನು ಬಾರಿಸಲು ಒಂದು ಗಟ್ಟಿಯಾದ ಹಗ್ಗವನ್ನು ಕಟ್ಟಿ ಎಳೆಯಲಾಗುತ್ತದೆ. ಹೀಗೆ ಚರ್ಚ್ ಗಳ ಮುಂಭಾಗದಲ್ಲಿ ನಿರ್ಮಿಸಲಾದ ಗಂಟೆಗಳ ಹುಟ್ಟು ಹಾಗೂ ಅದರ ಮಹತ್ವವಾದರೂ ಏನು? ಕ್ರಿ.ಶ. ೪೦೦ ರಲ್ಲಿ ಜನರನ್ನು ಪ್ರಾರ್ಥನೆಗೆ ಕರೆಯಲು ಮೊಟ್ಟಮೊದಲಿಗೆ ಈ ಗಂಟೆಗಳನ್ನು ಬಳಕೆಗೆ ತಂದವರು ಇಟಲಿಯ ಬಿಷಪ್‌ವೊಬ್ಬರು. ನಂತರದಲ್ಲಿ ನಿಧಾನವಾಗಿ ಫ್ರಾನ್ಸ್, ಐರ್‌ಲ್ಯಾಂಡ್, ಹಾಗೂ ಸ್ಕಾಟ್‌ಲ್ಯಾಂಡಿನ ಚರ್ಚ ಗಳಲ್ಲೂ ಗಂಟೆಗಳ ಸದ್ದು ಕೇಳಿಸಲಾರಂಭಿಸಿತು. ಎತ್ತರವಾದ ಗೋಪುರಗಳ ಮೇಲೆ ನಿರ್ಮಿಸಲಾಗುತ್ತಿದ್ದ ಈ ಗಂಟೆಗಳು ಸಿಡಿಲು, ಮಿಂಚು, ಬಿರುಗಾಳಿ ಮುಂತಾದ ಪ್ರಾಕೃತಿಕ ವಿಕೋಪಗಳಿಂದ ರಕ್ಷಿಸುವುದು ಎಂಬ ವೈಜ್ಞಾನಿಕ ಚಿಂತನೆಯೂ ಜನರಲ್ಲಿ ಮೂಡಿತ್ತು. ಈ ಪವಿತ್ರವಾದ ಗಂಟೆಯ ನಾದವು ಭಕ್ತರನ್ನು ದುಷ್ಟಶಕ್ತಿಗಳಿಂದ ರಕ್ಷಿಸುವುದು ಎಂಬ ನಂಬಿಕೆಯೂ ಅವರಲ್ಲಿ ಮನೆ ಮಾಡಿತ್ತು.
ಹಿಂದೆ ಸಮಯವನ್ನು ತಿಳಿಯಲು ಜನ ಸಾಮಾನ್ಯರ ಮನೆಗಳಲ್ಲಿ ಗಡಿಯಾರ ಇರುತ್ತಿರಲಿಲ್ಲ. ಗಂಟೆಗೊಮ್ಮೆ ಅಥವಾ ಅರ್ಧ ಗಂಟೆಗೊಮ್ಮೆ ಕೇಳುವ ಈ ಗಡಿಯಾರದ ಸದ್ದಿನಿಂದಲೇ ಜನರು ತಮ್ಮ ದಿನಚರಿಯನ್ನು ಆರಂಭಿಸುತ್ತಿದ್ದರು. ವಿಶೇಷ ದಿನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಕ್ರೈಸ್ತ ಸಮುದಾಯಕ್ಕೆ ಸಂದೇಶ ರವಾನೆ ಮಾಡಲು ಗಂಟೆಯನ್ನು ಮೊಳಗಿಸಲಾಗುತ್ತಿತ್ತು. ಅಷ್ಟೇ ಅಲ್ಲ, ಬೇರೆ ಬೇರೆ ಸಂದರ್ಭಗಳಲ್ಲಿ ವಿಭಿನ್ನ ರೀತಿಯಲ್ಲಿ ಗಂಟೆಗಳನ್ನು ಮೊಳಗಿಸಲಾಗುತ್ತಿತ್ತು. ಈಸ್ಟರ್, ಕ್ರಿಸ್‌ಮಸ್, ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಗಂಟೆಯ ಲಯ ವೇಗವಾಗಿದ್ದು ಹರುಷದ ಹೊನಲನ್ನು ಹರಿಸಿದರೆ, ಪ್ರಮುಖರು ನಿಧನ ಹೊಂದಿದಾಗ ಶೋಕ ಸಂದೇಶವನ್ನು ಜನರಿಗೆ ರವಾನಿಸಲು ಗಂಟೆಯನ್ನು ನಿಧಾನಗತಿಯಲ್ಲಿ ಬಾರಿಸುತ್ತಿದ್ದರು.
ಢಂ ಢಂ ಎಂಬ ಜೋರಾದ ಗಂಭೀರವಾದ ಬೆಟ್ಟದ ನೆತ್ತಿಯ ಮೇಲಿದ್ದ ಬೌದ್ಧರ ದೇಗುಲದಿಂದ ಕೇಳಿ ಬಂತು ಗಂಟೆಯ ಗಂಭೀರವಾದ ನಾದ. ಪ್ರೀತಿ, ಕರುಣೆ, ದಯೆಯನ್ನು ಸಾರಿದ ಬುದ್ಧನ ಸಂದೇಶವನ್ನು ಲೋಕಕ್ಕೆಲ್ಲಾ ಸಾರಿತ್ತು. ಈಗ ನಾನು ನಿಂತಿರುವುದು ಭೂತಾನಿನ ‘ಟೈಗರ್ ನೆಸ್ಟ್’ ಎಂಬ ಬೆಟ್ಟದ ನೆತ್ತಿಯ ಮೇಲಿರುವ ಬೌದ್ಧ ದೇಗುಲದ ಮುಂದೆ. ಇಲ್ಲಿರುವ ಗಂಟೆಯನ್ನು ಬಾರಿಸಿದಾಗ ಆ ಗಂಭೀರವಾದ ಗಂಟಾನಾದವು ಸುತ್ತಮುತ್ತಲೂ ಹರಡಿ ಸದ್ಗುಣಗಳನ್ನು ಎಲ್ಲೆಡೆ ಹರಡುತ್ತದೆಂದು ನಂಬುತ್ತಾರೆ. ನಾನು ದೇಗುಲಗಳ ಹೊರಭಾಗದಲ್ಲಿರುವ ಪ್ರಾರ್ಥನಾ ಚಕ್ರಗಳನ್ನು ತಿರುಗಿಸುತ್ತಾ ಹೊರಟಾಗ ಅವುಗಳ ಮೇಲ್ಭಾಗದಲ್ಲಿದ್ದ ಸಣ್ಣ ಸಣ್ಣ ಗಂಟೆಗಳು ಇಂಪಾದ ನಾದವನ್ನು ಹೊಮ್ಮಿತ್ತು. ಈ ನಾದವು ಧನಾತ್ಮಕ ಶಕ್ತಿಯನ್ನು ಹರಡುವುದೆಂಬ ನಂಬಿಕೆ ಇವರದು. ಇಲ್ಲಿ ಮತ್ತೊಂದು ವಿಶೇಷವನ್ನು ಗಮನಿಸಿದೆ. ಬೌದ್ಧ ಸನ್ಯಾಸಿಗಳು ಪ್ರಾರ್ಥನೆಯ ಸಮಯದಲ್ಲಿ ಎಡಗೈಲಿ ಗಂಟೆ ಹಿಡಿದು, ಬಲಗೈಲಿ ದರ‍್ಜೆಯನ್ನು ಹಿಡಿದು ಪೂಜೆ ಸಲ್ಲಿಸುವರು. ಅಲ್ಲಿ ಭಗವಾನ್ ಬುದ್ಧನಿಗೆ ಪೂಜೆ ಸಲ್ಲಿಸುತ್ತಿದ್ದ ಲಾಮಾ, ‘ಎಡಗೈಲಿ ಹಿಡಿದ ಗಂಟೆಯು ಸ್ತ್ರೀ ತತ್ವದ ಪ್ರತೀಕವಾಗಿದ್ದು ಪ್ರಜ್ಞೆ ಮತ್ತು ಶೂನ್ಯದ ರೂಪಕವಾಗಿ ನಿಲ್ಲುವುದು. ಬಲಗೈಲಿ ಹಿಡಿದ ದರ‍್ಜೆಯು ಪುರುಷ ತತ್ವದ ಪ್ರತೀಕವಾಗಿದ್ದು ಕರುಣೆ ಮತ್ತು ಕ್ರಿಯಾಶೀಲತೆಯ ರೂಪಕವಾಗಿ ನಿಲ್ಲುವುದು. ಬೃಹತ್ತಾದ ಗಂಟೆಗಳನ್ನು ಬಾರಿಸಿದಾಗ ಅದರಿಂದ ಹೊರಡುವ ತೀಕ್ಷವಾದ ಶಬ್ದ ನಿಧಾನವಾಗಿ ಕ್ಷೀಣಿಸುತ್ತಾ ಗಾಳಿಯಲ್ಲಿ ಲೀನವಾಗುವ ಹಾಗೆ ಈ ಪ್ರಪಂಚದಲ್ಲಿ ಜನಿಸುವ ಜೀವಿಗಳೆಲ್ಲರೂ ಬಾಳಿ ಬದುಕಿ, ಒಂದು ದಿನ ಸಾವನ್ನಪ್ಪಿ ಪ್ರಕೃತಿಯೊಡನೆ ಒಂದಾಗುವರು’ ಎಂದು ಅವರು ನಮಗೆ ತಿಳಿಸಿದರು.
ಜಪಾನ್‌ದೇಶದ ಬೋನ್ಶೋ ಎಂಬ ನಗರದಲ್ಲಿರುವ ಬೃಹತ್ ಕಂಚಿನ ಗಂಟೆಯನ್ನು ಮರದ ದಿಮ್ಮಿಗಳಿಮದ ಬಾರಿಸಿದಾಗ ಅದರ ಸದ್ದು ಹಲವು ಕಿ.ಮೀ.ಗಳವರೆಗೆ ಕೇಳಿಸುವುದಂತೆ. ಜಪಾನೀಯರು ಹೊಸ ವರ್ಷ ಆರಂಭವಾಗುವ ಮೊದಲು ಅಂದರೆ ಡಿಸೆಂಬರ್ 31 ರ ರಾತ್ರಿ 12 ಗಂಟೆಗೆ ಸರಿಯಾಗಿ 108 ಬಾರಿ ಗಂಟೆಯನ್ನು ಬಾರಿಸುವರು. ಮನುಷ್ಯನಲ್ಲಿರುವ 108 ಕ್ಲೇಶಗಳನ್ನು ದೂರಮಾಡುವ ಆಶಯದಿಂದ ಹೀಗೆ ಗಂಟೆಯನ್ನು 108 ಬಾರಿ ಬಾರಿಸುತ್ತಾರೆ.
‘ದೂರದ ಗುಡಿಯಲಿ ಪೂಜೆಯ ವೇಳೆಗೆ ಗಂಟೆಯು ಮೊಳಗಿತ್ತು / ಟಣ್ ಡಣ್ ಟಣ್ ಡಣ್ ಎನ್ನುತ ಸೇವೆಗೆ ಎಲ್ಲರ ಕರೆದಿತ್ತು / ಅದ ಕೇಳಿ ನಾ ಮೈಮರೆತೆ, ಸ್ವರವೊಂದ ಹಾಡಲು ಕಲಿತೆ’ – ಉಪಾಸನೆ ಸಿನೆಮಾದ ಈ ಹಾಡನ್ನು ಕೇಳದವರಾರು? ದೇಗುಲದಲ್ಲಿರುವ ಘಂಟೆಯ ಸದ್ದನ್ನು ಕೇಳಿದೊಡೆ ಭಕ್ತರೆಲ್ಲಾ ದೇವರ ಮುಂದೆ ಕೈ ಜೋಡಿಸಿ ಕಣ್ಣುಮುಚ್ಚಿ ನಿಲ್ಲುವರು. ತಮ್ಮ ಕಷ್ಟ ಸುಖಗಳನ್ನೆಲ್ಲಾ ದೇವರ ಮುಂದೆ ನಿವೇದಿಸಿಕೊಳ್ಳುವರು. ಬದುಕಿನಲ್ಲಿ ಎದುರಾಗುವ ಅಡೆ ತಡೆಗಳನ್ನು ನಿವಾರಿಸಿಕೊಳ್ಳಲು ಧೈರ್ಯ ಕೊಡು ತಂದೆ ಎಂದು ಬೇಡುವರು. ಈಗ ನಾನು ನಿಂತಿರುವುದು ಶಿವಮೊಗ್ಗಾ ಜಿಲ್ಲೆಯಲ್ಲಿರುವ ಶೃಂಗೇರಿಯ ಶಂಕರಗಿರಿಯಲ್ಲಿ. ಭಕ್ತರು ಅಲ್ಲಿ ಕಟ್ಟಿದ್ದ ದೊಡ್ಡದಾದ ಗಂಟೆಯನ್ನು ಬಾರಿಸುತ್ತಿದ್ದರು. ಸುತ್ತಲಿನ ಪರ್ವತ ಶ್ರೇಣಿಗಳಲ್ಲೆಲ್ಲಾ ಗಂಟೆಯ ನಾದ ಮಾರ್ದನಿಸುತ್ತಿತ್ತು. ನಾನು ತದೇಕಚಿತ್ತಳಾಗಿ ಆದಿಗುರು ಶಂಕರರ ಮೂರ್ತಿಯನ್ನು ನೋಡುತ್ತಾ ನಿಂತೆ. ಶಂಕರರ ಅದ್ಭುತ ಸಾಧನೆಯ ಹಂತಗಳು ನನ್ನ ಕಣ್ಣಿನ ಮುಂದೆ ತೇಲಿ ಬಂದವು – ‘ಶಂಕರರು ಜಗತ್ತಿಗೆ ಅದ್ವೈತ ವೇದಾಂತ ದರ್ಶನವನ್ನು ಸಾರಿದ ಮಹಾನ್ ದಾರ್ಶನಿಕರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಂಚರಿಸಿ ಸನಾತನ ಧರ್ಮವನ್ನು ಪುನರುತ್ಥಾಪಿಸಿದವರು. ಜ್ಞಾನಮಾರ್ಗದ ಮೂಲಕವೇ ಮನುಷ್ಯ ಮೋಕ್ಷ ಹೊಂದಲು ಸಾಧ್ಯ ಎಂದು ಪ್ರತಿಪಾದಿಸಿದವರು. ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ನಾಲ್ಕು ಪೀಠಗಳನ್ನು ಸ್ಥಾಪಿಸಿದರು – ಶೃಂಗೇರಿಯ ಶಾರದಾ ಪೀಠ, ದ್ವಾರಕಾದ ಕಾಳಿಕಾ ಪೀಠ, ಪುರಿಯ ಗೋವರ್ಧನ ಪೀಠ ಮತ್ತು ಬದರಿಯ ಜ್ಯೋತಿರ್ಮಠ’.
ಗಂಟೆಗಳು ಕೇವಲ ಶಬ್ದ ಮಾಡುವ ಸಾಧನಗಳಲ್ಲ. ಬದಲಿಗೆ ಗಂಟೆಯ ನಾದವು ನಮ್ಮ ಪಂಚೇಂದ್ರಿಯಗಳನ್ನು ಜಾಗೃತಗೊಳಿಸಿ ದೇವರ ಸನ್ನಿಧಿಯಲ್ಲಿ ನಮ್ಮನ್ನು ಸಂಪೂರ್ಣ ಭಕ್ತಿಪರವಶರನ್ನಾಗಿ ಮಾಡುವ ಪವಿತ್ರ ಸಾಧನಗಳು. ಗಂಟೆ ಬಾರಿಸಿದಾಗ ಹೊರಡುವ ತೀಕ್ಷವಾದ ಶಬ್ದವು ಕ್ರಮೇಣ ಕ್ಷೀಣಿಸಿ ಕೊನೆಯಲ್ಲಿ ಕೇಳುವ ನಾದ ‘ಪ್ರಣವ ಮಂತ್ರ. ಇದುವೇ ಓಂಕಾರ ನಾದ’. ಇಡೀ ಬ್ರಹ್ಮಾಂಡದಲ್ಲಿ ಹೊಮ್ಮುತ್ತಿರುವ ಓಂಕಾರವು ನಮ್ಮನ್ನು ಆ ದಿವ್ಯ ಚೈತನ್ಯದೊಂದಿಗೆ ಜೋಡಿಸುತ್ತವೆ.. ಏಳು ಕ್ಷಣಗಳ ಕಾಲ ವಾತಾವರಣದಲ್ಲಿ ಅನುರಣಿಸುವ ಗಂಟಾನಾದವು ನಮ್ಮ ಶರೀರದಲ್ಲಿರುವ ಏಳು ಚಕ್ರಗಳನ್ನು ಸ್ಪರ್ಶಿಸಿ ಮನಸ್ಸಿನಲ್ಲಿ ಉಂಟಾಗುವ ಒತ್ತಡಗಳನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತಗೊಳಿಸುವುದು.
ಗಂಟೆಗಳನ್ನು ಬಾರಿಸುವುದರ ಹಿಂದೆ ವೈಜ್ಞಾನಿಕ ಮಹತ್ವವೂ ಅಡಗಿದೆ – ಹಿತ್ತಾಳೆ, ಕಂಚು, ತಾಮ್ರ, ಸತು, ಬೆಳ್ಳಿ, ಚಿನ್ನ ಮುಂತಾದ ಲೋಹಗಳ ಮಿಶ್ರಣದಿಂದ ತಯಾರಾದ ಗಂಟೆಗಳಿಂದ ಹೊರಹೊಮ್ಮುವ ಶಬ್ದವು ನಮ್ಮ ಮೆದುಳಿನ ಜೀವಕೋಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತಾ, ಎಡ ಮತ್ತು ಬಲ ಮೆದುಳನ್ನು ಸಮತೋಲನಗೊಳಿಸುವುದು. ದೇಗುಲದ ಮುಂದೆ ನಿಂತು ಗಂಟೆಯನ್ನು ಬಾರಿಸಿದಾಗ ನಮ್ಮ ಮನಸ್ಸಿನಲ್ಲಿ ಓಡುತ್ತಿರುವ ಲೌಕಿಕ ಅಲೋಚನೆಗಳನ್ನು ದೂರ ಸರಿಸಿ ದೇವರ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯ.
ಕೊನೆಯಲ್ಲಿ ನಾವು ದೇವರ ಮುಂದೆ ನಿಂತು ದಿನನಿತ್ಯ ಪಠಿಸುವ ಮಂತ್ರವನ್ನು ಹೇಳೋಣ ಬನ್ನಿ –
“ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಮ್
ಕುರ್ವೇ ಗಂಟಾರವಂ ತತ್ರ ದೇವತಾಹ್ವಾನ ಲಾಂಛನಮ್’
ದೇವತೆಗಳ ಆಗಮನಕ್ಕಾಗಿ ಹಾಗೂ ದುಷ್ಟಶಕ್ತಿಗಳ ವಿನಾಶಕ್ಕಾಗಿ ನಾನು ಈ ಗಂಟೆಯನ್ನು ಬಾರಿಸುತ್ತಿದ್ದೇನೆ. ಇದು ದೇವತೆಗಳನ್ನು ಆಹ್ವಾನಿಸುವ ಕ್ರಿಯೆ.

–ಡಾ.ಗಾಯತ್ರಿದೇವಿ ಸಜ್ಜನ್

