ಪ್ರಯಾಣವೆಂದರೆ ನನಗೆ ಮೊದಲಿನಿಂದಲೇ ಬಲು ಇಷ್ಟ. ಪ್ರವಾಸಕ್ಕೆ ಅವಕಾಶ ಸಿಕ್ಕಗಾಲೆಲ್ಲಾ ತಪ್ಪಿಸಿಕೊಂಡವಳೇ ಅಲ್ಲ. ನನ್ನ ಮಟ್ಟಿಗೆ ಹೇಳುವುದಾದರೆ ಪ್ರವಾಸವು ನಮ್ಮ ದೈನಂದಿನ ಬದುಕಿನಿಂದ ಒಂದು ರೀತಿಯ ವಿರಾಮ ಕೊಡುವುದಲ್ಲದೇ, ಮನಸ್ಸು ಹಾಗೂ ದೇಹಕ್ಕೆ ನವೋಲ್ಲಾಸವನ್ನು ನೀಡುತ್ತದೆ. ಮುಖ್ಯವಾಗಿ ಪ್ರವಾಸವು ಹಲವಾರು ಪ್ರದೇಶಗಳನ್ನು ಪರಿಚಯಿಸುವುದಲ್ಲದೆ, ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ , ಇತಿಹಾಸ, ಜನರ ಜೀವನ ಶೈಲಿ ಮುಂತಾದ ಅನೇಕ ಮಾಹಿತಿಗಳನ್ನು ತಿಳಿಯಲು ಅನುವು ಮಾಡಿಕೊಡುತ್ತದೆ. ಬಾಲ್ಯದಲ್ಲಿ ಪ್ರತೀ ಬೇಸಗೆ ರಜೆಯಲ್ಲಿ ನಮ್ಮೆಲ್ಲರನ್ನು ಕಾಸರಗೋಡಿನಲ್ಲಿರುವ ಅಜ್ಜಿ ಮನೆಗೆ ಅಮ್ಮ ತಪ್ಪದೇ ಕರೆದುಕೊಂಡು ಹೋಗುತ್ತಿದ್ದರು. ಬೆಳಿಗ್ಗೆ ಎದ್ದು ರೆಡಿಯಾಗಿ ರೈಲು ನಿಲ್ದಾಣಕ್ಕೆ ಹೊರಟು ಬಿಡುತ್ತಿದ್ದೆವು. ಕಿಟಕಿ ಪಕ್ಕ ಕುಳಿತು ಕೊಳ್ಳಲು ನಾವೆಲ್ಲರೂ ಪೈಪೋಟಿ ಮಾಡುತ್ತಿದ್ದೆವು. ಅಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಇರದ ಕಾರಣ, ರೈಲು ಚಾಲನೆಗೆ ಉಗಿಬಂಡಿ ಅಥವಾ ಕಲ್ಲಿದ್ದಲ್ಲನ್ನು ಬಳಸುತ್ತಿದ್ದರು. ಎಷ್ಟೋ ಬಾರಿ ರೈಲಿನ ಕಿಟಕಿಯ ಹೊರಗೆ ತಲೆಯನ್ನು ಹಾಕಿದಾಗ ಕಲ್ಲಿದ್ದಲ್ಲಿನ ಕಣಗಳು ಕಣ್ಣಿಗೆ ಬಿದ್ದು ಪ್ರಯಾಣದ ಮಜವನ್ನೇ ಕಸಿದುಕೊಂಡ ಪ್ರಸಂಗಗಳನ್ನು ಇಂದಿಗೂ ನೆನಪಿಸಿ ನಗು ಬರುತ್ತದೆ.
ತಂದೆಯವರು ಪ್ರತೀ ಸಲ ವರ್ಗಾವಣೆಯಾದಾಗಲೆಲ್ಲಾ ಮೈಸೂರು, ಬೆಂಗಳೂರು, ಕಾರವಾರ, ಮಡಿಕೇರಿ, ಬೆಳಗಾಮ್ ಮುಂತಾದ ಕಡೆಗಳಿಗೆಲ್ಲಾ ನಮ್ಮನ್ನೂ ಕರೆದುಕೊಂಡು ಹೋಗುತ್ತಿದ್ದರು. ಶಾಲಾ, ಕಾಲೇಜು ಹಾಗೂ ವಿಶ್ವ ವಿದ್ಯಾನಿಲಯದಲ್ಲಿರುವಾಗ ವರ್ಷಂಪ್ರತಿ ಶೈಕ್ಷಣಿಕ ಪ್ರವಾಸಕ್ಕೂ ಹೆತ್ತವರು ಕಳುಹಿಸುತ್ತಿದ್ದರು. ಆಗೆಲ್ಲಾ ಬಸ್ಸು, ರೈಲುಗಾಡಿಯನ್ನು ಬಿಟ್ಟರೆ, ಬೇರೆ ಸಾರಿಗೆ ವಿಧಾನ ನಮಗಿರಲ್ಲಿಲ್ಲ. ವಿಮಾನ ಯಾನವಂತೂ ಕನಸಿನ ಮಾತೇ ಸರಿ. ಹಣವಂತರಿಗೆ ಸೀಮಿತವಾಗಿದ್ದ ವಿಮಾನದಲ್ಲಿ ಪ್ರಯಾಣಿಸಲು ನನಗೆ ಫಲಿಸಿದ್ದು ಮದುವೆಯಾದ ಬಳಿಕವೇ. ಆದರೆ ಪ್ರತೀ ಪ್ರವಾಸದ ಮಜವೂ ವಿಭಿನ್ನವಾಗಿತ್ತು. ಪ್ರಯಾಣದ ಪ್ರತಿಯೊಂದು ಕ್ಷಣವನ್ನು ನಾನು ಅನುಭವಿಸುತ್ತಿದ್ದೆ.
ನನ್ನ ಸೇವಾವಧಿಯಲ್ಲಿ ವಿದ್ಯಾರ್ಥಿಗಳೊಡನೆ ಪ್ರವಾಸ, ಪಿಕ್ನಿಕ್, ಟ್ರೆಕ್ಕಿಂಗ್ ಎಂದೆಲ್ಲಾ ಸುತ್ತಾಡಿದ್ದೆ. ದೇಶದೊಳಗೆ ಹೆಚ್ಚಿನ ರಾಜ್ಯಗಳಿಗೆ ಪ್ರವಾಸ ಮಾಡಿದ್ದೆ. ನನ್ನ ಎಲ್ಲಾ ಸುತ್ತಾಟಗಳು ಬಹುಮಟ್ಟಿಗೆ ದೇಶದೊಳಗಿನ ಕೆಲವು ರಾಜ್ಯಗಳಿಗೆ ಸೀಮಿತವಾಗಿತ್ತು. ಸರ್ಕಾರಿ ಉದ್ಯೋಗಸ್ಥೆಯಾದ ಕಾರಣ ವಿದೇಶಕ್ಕೆ ತೆರಳುವುದು ಸುಲಭದ ವಿಚಾರವಾಗಿರಲ್ಲಿಲ್ಲ. ಕೇಂದ್ರ ಕಛೇರಿಯಿಂದ ಅನುಮತಿ ಪಡೆಯಲು ಹಲವಾರು ಮಾನದಂಡಗಳಿದ್ದವು. ಅದನ್ನು ಪೂರೈಸಿದ ಬಳಿಕವೇ ರಜೆ ಮಂಜೂರಾಗುತ್ತಿತ್ತು. ಆದ್ದರಿಂದ ಸೇವೆಯಲ್ಲಿರುವಾಗ ಒಂದೇ ಒಂದು ಸಲ ಮಧ್ಯ ಪ್ರಾಚೀನ ದೇಶಗಳಿಗೆ ಸಂದರ್ಶಿಸಿದ್ದೆ. ನಿವೃತ್ತಿಯ ಬಳಿಕ ಏನೊಂದೂ ಜಂಜಾಟವಿಲ್ಲದೆ ಪ್ರಪಂಚದ ಯಾವ ಮೂಲೆಗಾದರೂ ಪ್ರಯಾಣಿಸುವ ಸ್ವಾತಂತ್ರ್ಯ ದೊರಕಿತ್ತು. ಹೀಗಾಗಿ ಕಳೆದ ವರ್ಷ ಅಮೇರಿಕಾ ಮತ್ತು ಬಾಲಿ ದೇಶಗಳಿಗೆ ಪ್ರಯಾಣಿಸಿದ್ದೆ. ಈ ಅಕ್ಟೋಬರ್ನಲ್ಲಿ ದುಬೈಗೆ ಭೇಟಿ ನೀಡಿದ್ದೆ. ನನ್ನ ತಂಗಿ ಹಲವಾರು ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದ ಕಾರಣ ೧೫ ವರ್ಷಗಳ ಹಿಂದೆ ಒಮ್ಮೆ ಹೋಗಿದ್ದೆ. ಆದರೆ ನನ್ನ ಈ ಬಾರಿಯ ಪ್ರವಾಸದಲ್ಲಿ ಕೆಲವೊಂದು ಬದಲಾವಣೆಗಳನ್ನು ನಾನು ಗಮನಿಸಿದ್ದೆ. ಬಹುಶ: ಮಿರಾಕಲ್ ಗಾರ್ಡನ್, ಮ್ಯೂಸಿಯಂ ಆಫ್ ದ ಫ್ಯೂಚರ್ , ಮೊದಲಾದವುಗಳು ಹೊಸತೆಂದು ಅನಿಸಿತ್ತು. ಅಬುದಾಬಿಯಲ್ಲಿ ಶೇಖ್ರವರ ಅರಮನೆಯನ್ನು ಕಂಡು ದಂಗಾಗಿದ್ದೆ. ಈ ಅರಮನೆಯು ಅತ್ಯದ್ಭುತ ವಾಸ್ತು ವಿನ್ಯಾಸವನ್ನು ಹೊಂದಿದ್ದು, ನಮ್ಮ ಕಲ್ಪನೆಗಳನ್ನು ಮುಗಿಲೆತ್ತರಕ್ಕೆ ಅರಳಿಸುವ ಪ್ರಬಲ ಶಕ್ತಿಯನ್ನು ಹೊಂದಿದೆ. ಹೊಸದಾಗಿ ನಿರ್ಮಾಣವಾದ ಬಾಪ್ಸ್ ಹಿಂದೂ ಮಂದಿರಕ್ಕೂ ಭೇಟಿ ನೀಡಿದಾಗ ಅಲ್ಲಿನ ಹೆಚ್ಚಿನ ಭದ್ರತಾ ಕ್ರಮಗಳು ಮೆಚ್ಚುಗೆಯಾಯಿತು. ಒಟ್ಟಿನಲ್ಲಿ ಈ ಮರುಭೂಮಿಯ ಅಚ್ಚರಿಯ ನಗರ ದುಬಾಯ್ ಒಂದು ಸುಂದರ ಪ್ರವಾಸಿ ತಾಣವೆಂಬುದರಲ್ಲಿ ಎರಡು ಮಾತಿಲ್ಲ. ಅಲ್ಲಿನ ಸ್ವಚ್ಚತೆ, ಶಿಸ್ತುಬದ್ಧ ಡ್ರೈವಿಂಗ್, ಎಲ್ಲೆಡೆ ಸುರಕ್ಷತೆ, ಅದರಲ್ಲೂ ಮಹಿಳೆಯರ ಭದ್ರತೆಯ ಬಗ್ಗೆ ಇರುವ ವಿಶೇಷ ಕಾಳಜಿ ಕಂಡು ಹೆಮ್ಮೆಯೆನಿಸಿತು. ಸಾಯಂಕಾಲವಂತೂ ದುಬೈನ ಸೌಂದರ್ಯಕ್ಕೆ ಬೆರಗಾಗದವರೇ ಇಲ್ಲ. ಅಂತೂ ಎರಡು ವಾರಗಳ ಬಳಿಕ ವಿಶಿಷ್ಟ ನೆನೆಪುಗಳ ಜೊತೆಗೆ ಊರಿಗೆ ಮರಳಿದ್ದೆ. ಇನ್ನೂ ಕೆಲವೊಂದು ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸುವುದು ನನ್ನ ಬಕೆಟ್ ಲಿಸ್ಟ್ ನಲ್ಲಿ ಉಳಿದಿದೆ.
ಪ್ರಯಾಣದಲ್ಲಿ ದೊರಕುವ ಪ್ರತೀ ಒಂದು ಅನುಭವಗಳು, ಸಂತೋಷದ ಕ್ಷಣಗಳು ಜೀವನದುದ್ದಕ್ಕೂ ನಮ್ಮಲ್ಲಿ ಜೀವಂತವಾಗಿರುವುದಲ್ಲದೆ, ಬದುಕಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ಇಂದಿನ ವೇಗದ ಜಗತ್ತಿನಲ್ಲಿ, ಒತ್ತಡವೇ ಬದುಕಿನಲ್ಲಿ ಅನಿವಾರ್ಯವಾಗಿರುವಾಗ, ಪ್ರವಾಸವು ಮನಸ್ಸಿಗೆ ವಿಶ್ರಾಂತಿ ಹಾಗೂ ದೇಹಕ್ಕೆ ಆರಾಮ ನೀಡುತ್ತದೆ. ದೈನಂದಿನ ಬದುಕಿನಿಂದ ವಿರಾಮ ಸಿಗುವುದರ ಜೊತೆಗೆ, ವಿಭಿನ್ನ ಭಾಷೆ, ಜೀವನ ಶೈಲಿ, ಜನರ ಬಗ್ಗೆ ಮಾಹಿತಿ ಇನ್ನೂ ಹಲವಾರು ವಿಷಯಗಳನ್ನು ತಿಳಿಸಿ ಕೊಡುತ್ತದೆ. ಆದರೆ ನನ್ನ ಪ್ರಕಾರ ಪ್ರವಾಸವನ್ನು ಆದಷ್ಟೂ ದೈಹಿಕವಾಗಿ ಸಮರ್ಥರಿರುವಾಗಲೇ ಕೈಗೊಳ್ಳುವುದು ಒಳಿತು. ಯಾಕೆಂದರೆ ನನ್ನ ಪ್ರವಾಸಾವಧಿಯಲ್ಲಿ ಒಂದೆರಡು ಬಾರಿ ಕಾಲು ನೋವಿನಿಂದಾಗಿ ಸೋತು ಹೋಗಿದ್ದೆ. ಕೆಲವೊಂದು ಸ್ಥಳಗಳನ್ನು ಭೇಟಿ ನೀಡಲು ಹೆಚ್ಚಾಗಿ ಕಾಲ್ನಡಿಗೆಯಲ್ಲೇ ತೆರಳಬೇಕಾಗುತ್ತದೆ.
ನನಗೆ ಬಾಲಿಯಲ್ಲಿ ಈ ಅನುಭವವಾಗಿತ್ತು. ನಡೆಯುವ ಸಾಮರ್ಥ್ಯ ಕುಸಿದು, ಬೇಗನೇ ಆಯಾಸವಾಗಿ ಬಿಡುತ್ತಿತ್ತು. ಅದೇ ರೀತಿ ದುಬೈಯಲ್ಲಿಯೂ ಯಾವುದೇ ಸ್ಥಳಗಳನ್ನು ಸಂದರ್ಶಿಸಲು ಎಲ್ಲಾ ಕಡೆಗಳಲ್ಲಿಯೂ ದೀರ್ಘ ಸಾಲು ಇರುತ್ತಿತ್ತು. ಒಂದೆಡೆ ಮೂರು-ನಾಲ್ಕು ಗಂಟೆ ಸರತಿಯಲ್ಲಿ ನಿಂತಾಗ ನನ್ನ ಚೈತನ್ಯವೆಲ್ಲಾ ಮಾಯವಾಗಿ ಪ್ರವಾಸದ ಮಜವನ್ನೇ ಕಸಿದು ಬಿಡುವ ಪರಿಸ್ಥಿತಿ ಉಂಟಾಗಿತ್ತು. ಆಗಲೇ ನನಗನಿಸಿತ್ತು, ಪ್ರವಾಸಕ್ಕೆ ತೆರಳಲು ಅದಮ್ಯ ಉತ್ಸಾಹವೇನೋ ಇದೆ ಆದರೆ ದೇಹ ಕೇಳುತ್ತಿರಲ್ಲಿಲ್ಲ. ಅಮೇರಿಕ ಪ್ರಯಾಣದ ವೇಳೆಯೂ ಸುದೀರ್ಘ ಹಾರಾಟದ ಸಮಯದಿಂದ ಬೆನ್ನು ನೋವು ಉಂಟಾಗಿತ್ತು. ಹವಾಮಾನದ ಏರಿಳಿತವೂ ದೇಹಕ್ಕೆ ಹೆಚ್ಚುವರಿ ಒತ್ತಡ ಉಂಟು ಮಾಡುತ್ತದೆ. ಒಮ್ಮೊಮ್ಮೆ ನನ್ನ ಪ್ರಪಂಚ ಸುತ್ತುವ ಬಯಕೆಯೂ ಕೊಂಚ ಬತ್ತಿ ಹೋದಂತೆ ಅನಿಸುತ್ತದೆ. ಹಾಗಾಗಿ ಚಿಕ್ಕ ಚಿಕ್ಕ ಪ್ರಯಾಣವೇ ಇಳಿ ವಯಸ್ಸಿನಲ್ಲಿ ಸೂಕ್ತವೆಂದು ನನ್ನ ಅನಿಸಿಕೆ. ಕೆಲಸದಿಂದ ನಿವೃತ್ತಿಯಾದ ಬಳಿಕ ಪ್ರವಾಸದ ಪಟ್ಟಿಯೇನೋ ದೊಡ್ಡದಿದೆ. ಆದರೆ ನಮ್ಮ ದೈಹಿಕ ಹಾಗೂ ಸಹನಾ ಶಕ್ತಿ ಕುಂದಿರುವ ಕಾರಣ ಆಲೋಚನೆ ಮಾಡಿ ಪ್ರವಾಸಕ್ಕೆ ಯೋಜನೆ ರೂಪಿಸಬೇಕು ಹಾಗೂ ಪ್ರಯಾಣದ ಮೊದಲು ಆರೋಗ್ಯ, ದೈಹಿಕ ಕ್ಷಮತೆ, ಸುರಕ್ಷೆಯನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವೆಂದು ಅನಿಸಿತು. ಜೀವನದ ಈ ನಿಧಾನಗತಿಯ ಪಯಣದಲ್ಲಿ ಸುದೀರ್ಘ ಪ್ರಯಾಣವು ಒಂದು ಸವಾಲೇ ಸರಿ ಎಂಬ ಸತ್ಯವನ್ನು ಅರಿತುಕೊಂಡೆ.

–ಶೈಲಾರಾಣಿ ಬಿ, ಮಂಗಳೂರು

