ಸಿಂಗರಿಸಿ ಕೋರುತಿಹುದು ಬಣ್ಣದ ಹೂಗಳು ಸ್ವಾಗತ,
ಉದುರಿದರೂ ಮತ್ತೆ ಹುಟ್ಟುವ ಹೂಗಳಲ್ಲಿಹುದು ನೋಡು ಜೀವನ ಪ್ರೀತಿಯು ಅನವರತ.
ಎಲ್ಲೋ ಗೂಡು, ಎಲ್ಲೋ ಹೊಟ್ಟೆ ಪಾಡು, ಇದೇ ತಾನೇ ಚಿಲಿಪಿಲಿ ಹಕ್ಕಿಗಳ ಬದುಕು?
ಕತ್ತಲು ಸರಿದು, ಮಸುಕು ಹರಿದು, ಮೂಡುವುದು ಬಾಳಲ್ಲೂ ಬೆಳಕು.
ಕಟ್ಟಿದಂತಿದೆ ರವಿಯ ಆಗಮಕೆ ಪ್ರಕೃತಿಯು ತೋರಣ,
ಭೂಮಿ ಆಕಾಶದ ತುಂಬಾ ಬಳಿದವರಾರೋ ಈ ಸುಂದರ ಬಣ್ಣ?
ಹಕ್ಕಿಗಳ ಚಿಲಿಪಿಲಿ, ಹರಿವ ಬೆಳಕು, ತಂಪು ತಂಗಾಳಿಯ ತಿಲ್ಲಾನ,
ಬಾಳಲ್ಲೂ ಮೂಡುವುದು ಹೊಳಪು, ಸರಿದು ಕತ್ತಲ ಛಾಪು,
ಪ್ರಕೃತಿಯಂತೆಯೇ ರಂಗು ರಂಗು ಈ ಬದುಕಿನ ಬಣ್ಣ.

– ನಯನ ಬಜಕೂಡ್ಲು

