ಪ್ರವಾಸ

ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ -3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಇ೦ಗ್ಲೆ೦ಡ್- ಲೌಲಿ ಲ೦ಡನ್

ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್ ಫಾಲಿಂಗ್ ಡೌನ್ ‘ಪದ್ಯ ಗುನುಗುನಿಸುತ್ತಾ ವಿಮಾನದಿ೦ದ ಹೊರ ಬರತೊಡಗಿದೆವು. ಲ೦ಡನ್ ನ ಹೀಥ್ರೂ ಪ್ರಪಂಚದ ಅತ್ಯಂತ ಜನ ನಿಬಿಡ ವಿಮಾನ ನಿಲ್ದಾಣ ಎಂದು ನಾವು ಕೇಳಲ್ಪಟ್ಟಿದ್ದೆವು. ವಿಮಾನ ನಿಲ್ದಾಣ ನೋಡಿ ನಮಗೆ ತುಂಬಾ ನಿರಾಸೆ ಆಯಿತು. ಏಕೆಂದರೆ ಅದಕ್ಕಿಂತಲೂ ವೈಭವೋಪೇತವಾಗಿ ನಮ್ಮ ಬೆಂಗಳೂರು ವಿಮಾನ ನಿಲ್ದಾಣ ಇದೆ. ನಾವು ತಲುಪಿರೋದು ಟರ್ಮಿನಲ್ 2. ಇ೦ತಹ ಇನ್ನೂ 5 ಟರ್ಮಿನಲ್ ಗಳಿರುವುದಾಗಿ ತಿಳಿಸಿದಾಗ , ಸ್ವಲ್ಪ ಸಮಾಧಾನ ಪಟ್ಟುಕೊಂಡೆವು. ವಿಮಾನದಿಂದ ಹೊರ ಬಂದು ಟರ್ಬೋ ಬ್ರಿಡ್ಜ್ ಮುಖಾಂತರ ವಿಮಾನ ನಿಲ್ದಾಣ ಪ್ರವೇಶಿಸಿದೆವು. ಸುಮಾರು ಏಳು ಗಂಟೆಗಳ ಪ್ರಯಾಣದ ಆಯಾಸ ಪರಿಹಾರಕ್ಕಾಗಿ ಹತ್ತಿರವೇ ಇದ್ದ ಶೌಚಾಲಯಕ್ಕೆ ಎಲ್ಲರೂ ಒಮ್ಮೆ ಭೇಟಿ ಕೊಟ್ಟು, ನಂತರ ನಮ್ಮ ಕ್ಯಾಬಿನ್ ಬ್ಯಾಗೇಜ್ ಗಳನ್ನು ಹಿಡಿದು ಹೊರಟೆವು. ಇಮ್ಮಿಗ್ರೇಷನ್ ಪ್ರಕ್ರಿಯೆ ಮುಗಿಸಿ (ಭಾರತೀಯ ಪಾಸ್ಪೋರ್ಟ್ ನವರಿಗೆ ಬೇರೆ ಕೌಂಟರ್ ಗಳಿದ್ದರಿಂದ ಆದಷ್ಟು ಬೇಗ ಪ್ರಕ್ರಿಯೆ ಮುಗಿಸಿ ಹೊರಬಂದೆವು). ನಮ್ಮ ಲಗೇಜ್ ಗಳು ಯಾವ ಕನ್ವೇಯರ್ ಬೆಲ್ಟ್ನಲ್ಲಿ ಬರುತ್ತವೆ ಎ೦ದು ತಿಳಿದು, ಬಳಿಕ ಆ ಕನ್ವೆಯರ್ ಬೆಲ್ಟ್ ಬಳಿ ನಿಂತೆವು. ಆ ಸಮಯದಲ್ಲಿ ಹೆಚ್ಚಿನ ವಿಮಾನಗಳು ಇಲ್ಲದೆ ಇದ್ದಿದ್ದರಿಂದ ಹೆಚ್ಚಿನ ಶ್ರಮ ಪಡದೆ ನಮ್ಮ ನಮ್ಮ ಲಗೇಜ್ ಗಳನ್ನು ಎಳೆದುಕೊಂಡು ಸ್ವಲ್ಪ ಮುಂದೆ ಹೋದಾಗ ನಮ್ಮ ಟೂರ್ ಗೈಡ್ ನಿಶಾದ್ ಬಹುಲ್ಕರ್ ನಮಗಾಗಿ ಕಾಯುತ್ತಿದ್ದರು. ಅವರ ಪಟ್ಟಿಯಲ್ಲಿರುವ ಎಲ್ಲಾ ಪ್ರಯಾಣಿಕರು ಬಂದಿದ್ದಾರೆ ಎಂದು ಖಾತ್ರಿ ಆದ ಮೇಲೆ ನಿಲ್ದಾಣದ ಹೊರಗೆ ಹೊರಡಲು ಪ್ರಾರಂಭಿಸಿದೆವು. ಎಲ್ಲರೂ ಅವರನ್ನು ಹಿಂಬಾಲಿಸುತ್ತಾ ಸುಮಾರು 15- 20 ನಿಮಿಷ ಹೋದ ನಂತರ ಒಂದು ಜಾಗದಲ್ಲಿ ನಮ್ಮ ಬಸ್ಸಿಗಾಗಿ ಕಾಯುತ್ತಾ ನಿಂತೆವು. ಅಲ್ಲೇ ವೆಲ್ಕಮ್ ಟು ಟರ್ಮಿನಲ್ 2 ಹೀಥ್ರೂ ಎಂದು ಇದ್ದ ಸೈನ್ಬೋರ್ಡ್ ಮುಂದೆ, ಲಂಡನ್ ನಲ್ಲಿ ನಮ್ಮ ಮೊಟ್ಟಮೊದಲ ಸೆಲ್ಫಿ ತೆಗೆದುಕೊಂಡು, ಬಸ್ ಬಂದ ನಂತರ ಲಗೇಜ್ ತುಂಬಿ ಹೋಟೆಲ್ ಗೆ ಹೊರಟೆವು.. ದಾರಿಯಲ್ಲಿ ನಾವು ಅತ್ಯಂತ ಕುತೂಹಲದಿಂದ ಹೊರಗಿನ ಲಂಡನ್ ನಗರವನ್ನು ನೋಡುತ್ತಿದ್ದೆವು. ಸುಮಾರು ಅರ್ಧ ಗಂಟೆಯ ನಂತರ ನಮ್ಮ ಬಸ್ಸು ರಾಡಿಸನ್ ರೆಡ್ ಹೋಟೆಲ್ ಮುಂದೆ ನಿಂತಿತ್ತು. ಬೆ೦ಗಳೂರು ಮತ್ತು ಹುಬ್ಬಳ್ಳಿಯಲ್ಲಿ ರಾಡಿಸನ್ ಬ್ಲ್ಯು ಹೋಟೆಲ್ ಹೆಸರು ಕೇಳಿದ್ದೆವು, ಇಲ್ಲಿ ರಾಡಿಸನ್ ರೆಡ್ ನೋಡಿ ಇವರದು ಇನ್ನೂ ಎಷ್ಟು ಬಣ್ಣಗಳಿದ್ದಾವೆಯೋ ಅ೦ತ ಯೋಚಿಸುತ್ತಾ ಒಳಗೆ ಹೋದೆವು.

ಅಲ್ಲಿ ಕಾಣುತ್ತಿದ್ದ ಲ೦ಡನ್ ನಗರದಲ್ಲಿ ಏನೂ ಅಂತಹ ವಿಶೇಷ ಇರಲಿಲ್ಲ. ಆಗ ನಮ್ಮ ಗೈಡ್ ನಿಶಾದ್, ಇದು ಲಂಡನ್ನಿನ ಹೊರಭಾಗ, ವಿಮಾನ ನಿಲ್ದಾಣದ ಹತ್ತಿರ. ನೋಡತಕ್ಕ ಲ೦ಡನ್ ಅಲ್ಲಿ೦ದ ಸುಮಾರು 40 – 50 ಕಿ.ಮೀ ದೂರ ಇರುವುದಾಗಿ ತಿಳಿಸಿದರು. ಎಲ್ಲಾ ಲಗ್ಗೇಜ್ಗಳನ್ನು ತೆಗೆದುಕೊಂಡು ಹೋಟೆಲ್ ಪ್ರವೇಶಿಸಿದೆವು. ನಮ್ಮ ಗೈಡ್ 10 – 15 ನಿಮಿಷ ಕಾಯಲು ತಿಳಿಸಿ ರಿಸೆಪ್ಷನ್ಗೆ ಹೋಗಿ ಮೊದಲೇ ಕಾಯ್ಡಿರಿಸಿದ್ದ ಮತ್ತು ಆಗಲೇ ಹ೦ಚಿಕೆ ಮಾಡಿದ್ದ ಕೊಠಡಿಗಳ ಕೀಲಿ ಕಾರ್ಡುಗಳನ್ನು ಕೊಟ್ಟರು.. ನಮಗೆಲ್ಲ ಊಟದ ಪ್ಯಾಕೆಟ್ ಗಳನ್ನು ಕೂಡ ಹಂಚಿದರು. ಆದರೆ ಬೆಳಗ್ಗೆಯಿಂದ ನಾವು ಮನೆಯಿಂದ ತಂದಿದ್ದು, ವಿಮಾನದಲ್ಲಿ ಕೊಟ್ಟಿದ್ದು, ಎಲ್ಲಾ ತಿಂದು, ಕುಡಿದು ಹೊಟ್ಟೆಯೆಲ್ಲಾ ಒಂಥರ ಗೊಬ್ಬರದ ಗು೦ಡಿಯ೦ತಾಗಿತ್ತು. ಹಸಿವೆ ಇರಲಿಲ್ಲ. ಆದಷ್ಟು ಬೇಗ ಅನ್ಲೋಡ್ ಮಾಡುವ ಧಾವಂತ. . ರೂ೦ ಕೀ ಸಿಕ್ಕ ನಂತರ ಎಲ್ಲರೂ ಲಿಫ್ಟ್ ಕಡೆಗೆ ಹೊರಟೆವು. . ಆಗಿನಿಂದ ಪ್ರಾರಂಭವಾಯಿತು ನಮ್ಮ “ಗುಂಪು ಪ್ರವಾಸ” ದ ಇನ್ನೊಂದು ಮುಖದ ದರ್ಶನ. ಪ್ರವಾಸದುದ್ದಕ್ಕೂ ಗುಂಪು ಗುಂಪಾಗಿ ಸರತಿಯ ಸಾಲಿನಲ್ಲಿ ನಿಲ್ಲುವುದು, ಅನಿವಾರ್ಯವಾಗಿತ್ತು. ಅದು ಹೋಟೆಲ್ನಲ್ಲಿ ಲಿಫ್ಟ್ಗೆ ಇರಬಹುದು, ಅಥವಾ ಹೋಟೆಲ್ಗಳಲ್ಲಿ ಮಧ್ಯಾಹ್ನದ ಮತ್ತು ರಾತ್ರಿ ಊಟಕ್ಕಾಗಿರಬಹುದು, ಊಟ ಮಾಡಿದ ಮೇಲೆ ಕೈ ತೊಳೆಯಲು, ಪ್ರವಾಸದ ಮಧ್ಯದಲ್ಲಿ ವಾಶ್ರೂಮ್ ಗಳಿಗಿರಬಹುದು, ಎಲ್ಲಾದಕ್ಕೂ ಕ್ಯೂ. (ಸದ್ಯ ಬೆಳಗಿನ ಉಪಹಾರಕ್ಕೆ ಈ ಪರಿಸ್ಥಿತಿ ಇರಲಿಲ್ಲ). ಏಕೆಂದರೆ ಆ ಹೋಟೆಲ್ಗಳಲ್ಲಿ ಒಂದು ಅಥವಾ ಎರಡು ಮಾತ್ರ ವಾಷ್ ಬೇಸಿನ್ಗಳಿರುತ್ತಿದ್ದವು. ಮತ್ತು ಪುರುಷರಿಗೆ ಒಂದು, ಮಹಿಳೆಯರಿಗೆ ಒಂದು ಮಾತ್ರ, ಕೆಲವು ಕಡೆ ಇಬ್ಬರಿಗೂ ಸೇರಿ ಒಂದೇ ಶೌಚಾಲಯ ಇರುತ್ತಿತ್ತು. ಈ ಪರಿಸ್ಥಿತಿ ಊಟ ಮಾಡುವ ಹೋಟೆಲ್ಗಳಲ್ಲಿ ಮಾತ್ರ.

ಎಲ್ಲರೂ ತಮ್ಮ ತಮ್ಮ ರೂ೦ ಗಳಿಗೆ ಆಹಾರದ ಪೊಟ್ಟಣಗಳೊ೦ದಿಗೆ ಲಗೇಜ್ ಸಮೇತ ಹೋದೆವು. ಬೆಳಗ್ಗೆ 4:00 ಗ೦ಟೆಯಿಂದ ರಾತ್ರಿ 8:00 ಗ೦ಟೆವರೆಗೆ ಅ೦ದರೆ ಸುಮಾರು 16 ಗಂಟೆಗಳ ಕಾಲದ ಪ್ರಯಾಣದಿಂದಾಗಿ ದೇಹ ದಣಿದಿತ್ತು. ಹೊಟ್ಟೆಯ ಹಸಿವೆಯೇನೂ ಇರಲಿಲ್ಲ. (ನಾವು ಮನೆಯಿ೦ದ ತ೦ದಿದ್ದು, ವಿಮಾನದಲ್ಲಿ ಕೊಟ್ಟಿದ್ದು ಎಲ್ಲಾ ಹಗಲೆಲ್ಲಾ ತಿ೦ದಿದ್ದರಿ೦ದ) ಊಟದ ಅವಶ್ಯಕತೆ ಇರಲಿಲ್ಲ. ಆದರೆ ಅನ್ ಲೋಡ್ ಮಾಡುವ ಅವಶ್ಯಕತೆ ತೀವ್ರವಾಗಿತ್ತು. ಬಾತ್ರೂ೦ ಗೆ ಹೋದರೆ ಅಲ್ಲೊಂದು ಆಘಾತ ಕಾದಿತ್ತು. ಶೌಚಾಲಯದಲ್ಲಿ ಬಕೆಟ್ ಇಲ್ಲ. ಟಬ್ ಇಲ್ಲ. ಕಡೆ ಪಕ್ಷ ಹ್ಯಾಂಡ್ ಫಾಸಿಟ್ ಇಲ್ಲ. ಆದರೆ ದೊಡ್ಡ ದೊಡ್ಡ ಟಿಶ್ಯೂ ಪೇಪರ್ ರೋಲ್ಗಳು ಇದ್ದವು. ಆಗ ನೆನಪಾಯಿತು. ಈಗ ನಾವಿರೋದು ಪರದೇಶದಲ್ಲಿ ಅಂತ. ಹಿಂದೆ ಇತರರಿಂದ ಕೇಳಿದ್ದ ವಿಷಯ ನೆನಪಿಗೆ ಬಂತು. ಫಾರಿನ್ ನಲ್ಲಿ ತೊಳೆದುಕೊಳ್ಳುವ ಪದ್ಧತಿ ಇಲ್ಲ. ಬರೀ ಒರೆಸಿಕೊಳ್ಳುವ ಪದ್ಧತಿ ಇರುತ್ತದೆ ಎಂದು. ನಾವು ಈ ಮೊದಲು ಕೈಗೊಂಡ ವಿದೇಶಿ ಪ್ರವಾಸದಲ್ಲಿ ನಮ್ಮ ಭಾರತೀಯ ಶೈಲಿಯ ಪದ್ಧತಿ ಇದ್ದ ಹಾಗೆ ನೆನಪು. ಆದರೆ ಈಗ ಈ ಲಂಡನ್ ನ ಶೌಚಾಲಯದ ಸ್ಥಿತಿ ನೋಡಿ ನಮಗೆ ದಿಕ್ಕೇ ತೋಚದ೦ತಾಯಿತು. ಅ೦ತೂ ಇ೦ತೂ ಹೇಗೋ ಹೊರ ಬಂದಾಗ ಶೌಚಾಲಯದಲ್ಲಿ ನೀರು ನಿ೦ತಿದ್ದು, ನೀರು ಹೊರಗೆ ಹೋಗಲು ದಾರಿ ಇರಲಿಲ್ಲದಿರುವುದು ಗೊತ್ತಾಗಿ ಸಮಸ್ಯೆಯ ಗಾಢತೆ ಅರಿವಾಯಿತು. ಅಷ್ಟರಲ್ಲಿ ಲ೦ಡನ್ನಲ್ಲಿ ವಾಸವಿರುವ, ನಮ್ಮನ್ನು ಭೇಟಿ ಮಾಡಲು ಬಂದ ನಮ್ಮ ಶ್ರೀಮತಿಯವರ ಅಕ್ಕನ ಮಗಳು, ಅವಳ ಗಂಡ ಮತ್ತು ಮಕ್ಕಳಿಗೆ ನಮ್ಮ ಸಮಸ್ಯೆಯನ್ನು ಹೇಳಿದೆವು, ನಂತರ ಅವರು ಅಲ್ಲಿದ್ದ ದೊಡ್ಡ ಟವಲ್ಗಳನ್ನು (ನಾವಿಲ್ಲಿ ಮುಖ ಒರೆಸಿಕೊಳ್ಳಲು ಉಪಯೋಗಿಸುವಂತಹ) ನೆಲದ ಮೇಲೆ ಹಾಕಿ ನೀರು ಹೀರಿಕೊಳ್ಳುವಂತೆ ಮಾಡಿದರು. ನಂತರ ಇಲ್ಲೆಲ್ಲ ಡ್ರೈ ಬಾತ್ರೂಮ್ ಸಿಸ್ಟಮ್ ಗಳು. ಆದ್ದರಿಂದ ಸ್ನಾನ ಮಾಡುವ ಜಾಗದಲ್ಲಿ ಮಾತ್ರ ನೀರು ಹೋಗುವ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು. ಆಗ ಬೆ೦ಗಳೂರಿನಲ್ಲಿ ನಮ್ಮ ಮನೆಗೆ ಅಮೆರಿಕದಿಂದ ಬಂದ ನಮ್ಮ ಅಣ್ಣನ ಮಗಳ ಮಕ್ಕಳು ನಮ್ಮ ಬಾತ್ರೂಮ್ ನೋಡಿ ಅವರಮ್ಮನಿಗೆ ಅಮ್ಮ ಬಾತ್ರೂಮ್ ವೆಟ್ ಆಗಿದೆ ಎಂದು ವಾಪಸ್ ಬಂದಿದ್ದು ನೆನಪಾಯ್ತು. ಆಗ ನಾನು ಬಾತ್ರೂಮ್ ಇರೋದೇ ವೆಟ್ ಆಗೋಕೆ, ಅದು ಡ್ರೈ ಇರಲು ಹೇಗೆ ಸಾಧ್ಯ ಅಂತ ಕೇಳಿ, ನಂತರ ಅವರು ಯಾವಾಗ ಬಂದರೂ ಅವರು ಬರುವ ದಿನ ಒಂದು ಬಾತ್ರೂಮ್ ಅನ್ನು ಬೆಳಗಿನಿಂದಲೂ ಉಪಯೋಗಿಸದೆ ಡ್ರೈ ಇಟ್ಟಿರುತ್ತಿದ್ದೆವು. ಈಗ ಗೊತ್ತಾಯಿತು ಡ್ರೈ ಬಾತ್ರೂ೦ ಗಳ ಮರ್ಮ. ಅಂತೂ ಇಂತೂ ಲಂಡನ್ ನಲ್ಲಿ ಇದ್ದ ಮೂರು ದಿನ ಅಲ್ಲಿಯ ಡ್ರೈ ಬಾತ್ರೂಮ್ಗಳಿಗೆ ಕಷ್ಟಪಟ್ಟು ಅಡ್ಜಸ್ಟ್ ಆದೆವು. ಆಗ ಮೊದಲ ಒ೦ದೆರಡು ದಿನ ಯಾಕಾದರೂ ಬೆಳಕಾಗುತ್ತೋ ಎಂದು ಅನಿಸುತ್ತಿತ್ತು. ಈ ಬಾತ್ರೂಮ್ ಕಥೆ ಲಂಡನ್ ನಲ್ಲಿ ಪ್ರಾರಂಭವಾಗಿ ಮುಂದೆ ಪ್ಯಾರಿಸ್, ಅಮ್ಸ್ಟರ್ಡಾ೦,, ಕೊಲೊಗ್ನೆ ಜೂರಿಚ್, ಇನ್ನ್ಸ್ಬ್ರಕ್ಕ್, ಪಡೋವಾ, ಅರಿಜೋ ಗಳಲ್ಲಿಯ ಹೋಟೆಲ್ಗಳಲ್ಲಿ ಇನ್ನೂ ತೀವ್ರವಾಯಿತು.

ಮೊದಲನೇ ದಿನವೇ ನಮ್ಮ ಗೈಡ್ ಸೂಚನೆ ಕೊಟ್ಟಿದ್ದರು, ಯೂರೊಪ್ನ ಹೋಟೆಲ್ಗಳನ್ನು ಸಿಂಗಪುರ್, ಲಂಡನ್, ಹೋಟೆಲ್ ಗಳಿಗೆ ಹೋಲಿಸಿಕೊಳ್ಳಬೇಡಿ. ಒಂದೊಂದು ದೇಶದಲ್ಲಿ, ಒಂದೊಂದು ಊರಿನಲ್ಲಿ, ಒಂದೊಂದು ತರಹ ಹೋಟೆಲ್ ಗಳಿರುತ್ತವೆ. ಆಹಾರ ಪದ್ಧತಿಗಳೂ ಸಹ ಎಲ್ಲಾ ಕಡೆಯೂ ಒಂದೇ ತರಹ ಇರುವುದಿಲ್ಲ. ಎಲ್ಲಾ ಕಡೆ ಕಾಂಟಿನೆಂಟಲ್ ಬ್ರೇಕ್ಫಾಸ್ಟ್ ಅಂದರೂ, ಒಂದು ಕಡೆ ಇದ್ದ ಹಾಗೆ ಇನ್ನೊಂದು ಕಡೆ ಇರುವುದಿಲ್ಲ. ಅದೇ ರೀತಿ ಆಯಿತು . ಹೊಸ ಜಾಗಕ್ಕೆ ಹೋದ ತಕ್ಷಣ ಮೊದಲು ನೋಡುತ್ತಿದ್ದುದು ಬಾತ್ರೂಮ್ ಟಾಯ್ಲೆಟ್ ಗಳನ್ನು. ಬರ್ತಾ ಬರ್ತಾ ಇನ್ನೂ ದುಃಸ್ಥಿತಿಯೇ ಎದುರಾಯಿತು. ಕೆಲವು ಕಡೆ ನಲ್ಲಿಗಳೇ ಇರುತ್ತಿರಲಿಲ್ಲ, ಬರೀ ಹಾ೦ಡ್ಶವರ್ ಇರುತ್ತಿತ್ತು. (ಸ್ನಾನ ಮಾಡಲು) ಅಥವ ಬರೀ ಶವರ್ ಇರುತ್ತಿತ್ತು. ಒ೦ದು ಕಡೆಯ೦ತೂ ಎರಡೆರಡು ಕಮೋಡ್ಗಳಿದ್ದವು. ನಮಗ೦ತೂ ಅದರ ಮರ್ಮವೇ ಗೊತ್ತಾಗಲಿಲ್ಲ. ಕೆಲವು ಕಡೆ ಶವರ್ಗಳೇ ಇರುತ್ತಿರಲಿಲ್ಲ. ಬರಿ ಹ್ಯಾಂಡ್ ಶವರ್ ಇರುತ್ತಿತ್ತು. ಅಂತೂ ಕಷ್ಟ ಪಟ್ಟು ಒರೆಸಿಕೊಳ್ಳುವ ಪದ್ಧತಿಗೆ ನಿಧಾನವಾಗಿ ಒಗ್ಗಿಕೊಂಡೆವು. ಈ ಸಮಸ್ಯೆ ಬೇರೆಯವರಿಗೆ ಇತ್ತೋ ಇರಲಿಲ್ಲವೋ ಗೊತ್ತಿಲ್ಲ. ಆದರೆ ಯಾರೂ ಇದರ ಬಗ್ಗೆ ಚರ್ಚೆ ಕೂಡ ಮಾಡುತ್ತಿರಲಿಲ್ಲ. ಇದೆಲ್ಲ ಸಹಜ ಎಂಬಂತೆ ಇರುತ್ತಿದ್ದರು. ನಮಗಿದ್ದ ದೊಡ್ಡ ಸಮಸ್ಯೆ, ಅವರಿಗೆ ಸಮಸ್ಯೆಯೇ ಅಲ್ಲವೇನೋ ಎ೦ಬ೦ತೆ ಇರುತ್ತಿದ್ದರು. ಸಂಕೋಚದಿಂದ ನಾವೂ ಯಾರ ಜೊತೆಯೂ ಚರ್ಚಿಸಲು ಹೋಗಲಿಲ್ಲ. ಆದರೆ ನಮ್ಮ ತ೦ಗಿ ಮತ್ತು ಭಾವನವರ ಜೊತೆ ಸಮಸ್ಯೆಯನ್ನು ಚರ್ಚಿಸಿ ಪರಿಹಾರವನ್ನು ಕ೦ಡುಕೊ೦ಡೆವು. ಇದು ನಮ್ಮ ಬಾತ್ರೂ೦ ಟಾಯ್ಲೆಟ್ಪುರಾಣ.

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44277

ಟಿ.ವಿ.ಬಿ.ರಾಜನ್ , ಬೆಂಗಳೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *