ಕಾಲನ ಪ್ರವಾಹಕ್ಕೆ ಸಿಕ್ಕ ತರಗೆಲೆ ನಾನು
ಬಿಡದ ಸೆಳೆತಕ್ಕೆ ಸಿಕ್ಕು ತೇಲಿ ಸಾಗುತಿಹೆನು
ಎಷ್ಟೊಂದು ತಿರುವುಗಳು ಈ ಹಾದಿಯಲ್ಲಿ
ಗಳಿಗೆಗೊಂದು ಏರಿಳಿತಗಳು ಈ ತೊರೆಯಲ್ಲಿ
ಭೋರ್ಗರೆಯುವ ಹರಿವಿನಲ್ಲಿ ಹುಟ್ಟಿದ ಗುಳ್ಳೆಗಳು
ಸ್ವಲ್ಪ ದೂರ ಹೋಗಿ ಒಡೆದು ಹೋಗುತಿಹವು
ಅಡ್ಡ ಬಂದ ಮರದ ಕೊಂಬೆಗೆ ಸಿಲುಕಿ ತುಸು ಹೊತ್ತು ನಿಂತೆ
ತಿರುಗುವ ಸುಳಿಗೆ ಸಿಕ್ಕು ಮತ್ತೆ ಸುತ್ತ ತೊಡಗಿದೆ
ಚಲನೆಯ ಗತಿಯಲ್ಲಿ ಪಸರಿಸುತ್ತಿವೆ ಬಗೆ ಬಗೆಯ ಚಿಂತೆಗಳು
ಮುಗಿದು ಹೋಯಿತೇನೋ ಈ ಬದುಕು ಎಂಬ ಭಾವನೆಗಳು
ದಡ ಸೇರಬೇಕೆಂದು ಪ್ರವಾಹಕ್ಕೆ ಒಗ್ಗಿಕೊಂಡಿರುವೆ
ಜೊತೆಗಿದ್ದ ಎಲೆಗಳ ಬಿಟ್ಟು ಮುಂದೆ ಮುಂದೆ ಹೊರಟಿರುವೆ
ಎಂದೂ ಮುಗಿಯದ ಪಯಣವಿದು ಎಂದೆನಿಸತೊಡಗಿದೆ
ಆಸರೆಗೆ ಸಿಕ್ಕ ಅಡೆ ತಡೆಯ ಆವರಿಸುವುದ ಬಿಟ್ಟು ಬೇರೆ ದಾರಿಯಿಲ್ಲವಾಗಿದೆ
ಅನ್ವೇಷಣೆಯ ಈ ಪ್ರವಾಸ ಹೊಸತನವ ತರಲಿ
ಕಾತುರತೆಯ ಈ ಬದುಕು ಏಕತಾನತೆಯ ಮರೆಸಲಿ
ಸೇರುವ ತಾಣ ಹಾಗೂ ತಲುಪುವ ಗುರಿ ಬಗ್ಗೆ ನನಗಿಲ್ಲ ಯಾವ ಧಾವಂತ
ಮುಂದೆ ಚಲಿಸುವುದೊಂದೇ ಎನಗಿರುವ ಆಯ್ಕೆಯ ಹಂತ

-ಶರಣಬಸವೇಶ ಕೆ. ಎಂ

