ದಕ್ಷಿಣೇಶ್ವರದ ಕಾಳಿ ಮಂದಿರ
ಕೊಲ್ಕತ್ತಾದಿಂದ 12 ಕಿ.ಮೀ ದೂರದಲ್ಲಿರುವ ದಕ್ಷಿಣೇಶ್ವರದಲ್ಲಿ, ಪ್ರಸಿದ್ಧವಾದ ಕಾಳಿಕಾಮಾತೆಯ ಮಂದಿರವಿದೆ. ರಾಣಿ ರಾಸಮಣಿಯು, ತನಗೆ ಕನಸಿನಲ್ಲಿ ಕಾಳಿಕಾಮಾತೆಯ ಆದೇಶವಾದ ಮೇರೆಗೆ, ಹೂಗ್ಲಿ ನದಿ ದಂಡೆಯಲ್ಲಿ , 1847-1855 ರ ಅವಧಿಯಲ್ಲಿ ಮನೋಹರವಾದ ಈ ಮಂದಿರವನ್ನು ಕಟ್ಟಿಸಿದಳು. ಬಂಗಾಳಿ ವಾಸ್ತುವಿನ್ಯಾಸದ ಪ್ರಕಾರ ನವರತ್ನಗಳನ್ನು ಸೂಚಿಸುವ, ಒಂಭತ್ತು ಗೋಪುರಗಳಿರುವ ಮಂದಿರವು ಬಲು ಸೊಗಸಾಗಿದೆ. ಇಲ್ಲಿನ ಗರ್ಭಗುಡಿಯಲ್ಲಿ ಮುಖ್ಯದೇವತೆಯಾದ ಕಾಳಿಮಾತೆಯು ಆರಾಧಿಸಲ್ಪಡುತ್ತಾಳೆ .ಪಕ್ಕದಲ್ಲಿಯೇ ರಾಧಾ-ಕೃಷ್ಣನ ಮಂದಿರವಿದೆ. ವಿಶಾಲವಾದ ಪ್ರಾಕಾರದಲ್ಲಿ ಹನ್ನೆರಡು ಶಿವನ ಗುಡಿಗಳಿವೆ.
1855 ರಲ್ಲಿ ಮೂರ್ತಿಯ ಸ್ಥಾಪನೆ ಹಾಗೂ ಆರಾಧನೆ ಆರಂಭವಾದ ಒಂದೇ ವರ್ಷದಲ್ಲಿ ಆಗ ಪ್ರಧಾನ ಅರ್ಚಕರಾಗಿ ನಿಯೋಜಿತರಾಗಿದ್ದ ರಾಮಕುಮಾರ ಚಟ್ಟೋಪಾಧ್ಯಾಯ ಅವರು ಮರಣ ಹೊಂದಿದರು. ಅನಂತರ ಆ ಹುದ್ದೆಯಲ್ಲಿ ಅವರ ತಮ್ಮನಾದ ಗದಾಧರರನ್ನು ನೇಮಿಸಲಾಯಿತು. ಪತ್ನಿ ಶಾರದಾದೇವಿಯವರೊಂದಿಗೆ ದಕ್ಷಿಣೇಶ್ವರಕ್ಕೆ ಬಂದು ಕಾಳಿಯ ಉಪಾಸನೆ ಮಾಡುತ್ತಾ, ತಮ್ಮ ಪತ್ನಿಯನ್ನೂ ದೈವೀಸ್ವರೂಪಿ ಮಾತೆಯಾಗಿ ಪರಿಭಾವಿಸಿದರು. ಇವರೇ ಮುಂದೆ ಶ್ರೀ ರಾಮಕೃಷ್ಣ ಪರಮಹಂಸರೆಂದು ಖ್ಯಾತರಾದವರು ಹಾಗೂ ವಿಶ್ವವಿಜೇತ ವಿವೇಕಾನಂದರ ನೆಚ್ಚಿನ ಗುರು. ಶಾರದಾದೇವಿ ಅವರು ವಾಸಿಸುತ್ತಿದ್ದ ಜಾಗದಲ್ಲಿ ಈಗ ಶಾರದಾಮಾತಾ ಮಂದಿರವಿದೆ.
20 ಫೆಬ್ರವರಿ 2018 ರಂದು ಸಂಜೆ ದಕ್ಷಿಣೇಶ್ವರಕ್ಕೆ ಭೇಟಿ ಕೊಟ್ಟಿದ್ದೆವು. ಅಲ್ಲಿ ಆಗ ಕಾಳಿಮಾತೆಯ ಪೂಜೆ ಮುಗಿದು ಬಾಗಿಲು ಹಾಕಿದ್ದರು. ಆದರೂ, ಕಿಟಿಕಿಯ ಮೂಲಕ ದರ್ಶನ ಸಾಧ್ಯವಾಯಿತು. ರಾಧಾ-ಕೃಷ್ಣನ ಪೂಜೆ ಹಾಗೂ ಭಜನೆಯಲ್ಲಿ ಪಾಲ್ಗೊಂಡೆವು.
(ಚಿತ್ರ ಕೃಪೆ: ಅಂತರ್ಜಾಲ)
-ಹೇಮಮಾಲಾ.ಬಿ