ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 4

Share Button


ದಿಲ್ಲಿಯಿಂದ ‘ಕಟ್ರಾ’ ನಗರದತ್ತ

ನಮ್ಮ ಮುಂದಿನ ಪಯಣ ದಿಲ್ಲಿಯಿಂದ  ಜಮ್ಮು ಕಾಶ್ಮೀರದ ‘ಕಟ್ರಾ’ನಗರಕ್ಕೆ. ಸಂಜೆ 0530 ಗಂಟೆಗೆ ದಿಲ್ಲಿಯಿಂದ ಹೊರಡುವ  ಶ್ರೀ ಶಕ್ತಿ ಎ‍ಕ್ಸ್ ಪ್ರೆಸ್ ರೈಲು ಗಾಡಿಯನ್ನು ಹತ್ತಿ ಪ್ರಯಾಣಿಸಿದೆವು. ಸುಮಾರು 70  ಕಿ.ಮೀ ಚಲಿಸಿದ ರೈಲು ಇದ್ದಕ್ಕಿದ್ದಂತೆ   ಒಂದು ಗಂಟೆಗೂ ಹೆಚ್ಚು ಕಾಲ ತಟಸ್ಥವಾಯಿತು.   ಆಮೇಲೆ ಸ್ವಲ್ಪ ಮುಂದೆ ಹೋಗಿ ಪುನ: ನಿಂತಿತು. ಕತ್ತಲಾಗಿದ್ದುದರಿಂದ  ಎಲ್ಲಿ, ಯಾಕೆ ನಿಲ್ಲುತ್ತಿದ್ದೆ ಎಂದು ಅರ್ಥವಾಗಲಿಲ್ಲ. ಬೆಳಕಾದಾಗ ಗೊತ್ತಾದುದೇನೆಂದರೆ, ನಾವು ಇನ್ನೂ ಅರ್ಧ ದಾರಿಯನ್ನೂ ಕ್ರಮಿಸಿರಲಿಲ್ಲ.  ಪಾಣಿಪತ್  ಸಮೀಪ ಹಳಿ ದುರಸ್ತಿ ಇದ್ದುದರಿಂದ  ತಡವಾಗಿತ್ತಂತೆ.

ನಾವು ಪ್ರಯಾಣಿಸುತ್ತಿದ್ದ ಶ್ರೀ ಶಕ್ತಿ ಎಕ್ಸ್ ಪ್ರೆಸ್ಸ್ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಸೂಪರ್ ಫಾಸ್ಟ್ ಎಂಬ ವರ್ಗಕ್ಕೆ ಸೇರುತ್ತದೆ. 2014 ರಲ್ಲಿ ಚಾಲನೆಗೊಂಡ ದಿಲ್ಲಿ-ಕಟ್ರಾ  ಈ ಮಾರ್ಗವು ರೈಲ್ವೇ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದು. ಶ್ರೀ ಶಕ್ತಿ ಎ಼ಕ್ಸ್ ಪ್ರೆಸ್ಸ್  ಒಟ್ಟು 654 ಕಿ.ಮೀ ದೂರವನ್ನು ಸುಮಾರು 12 ಗಂಟೆಯ ಪ್ರಯಾಣದ ಅವಧಿಯಲ್ಲಿ ಕ್ರಮಿಸುತ್ತದೆ. ಈ ರೈಲ್ವೇ ಮಾರ್ಗವು ದಿಲ್ಲಿಯಿಂದ ಕಟ್ರಾದ ನಡುವೆ ಒಟ್ಟು 29  ಸುರಂಗಗಳ ಮೂಲಕ ಹಾದು ಹೋಗುತ್ತದೆ. ಈ ಮಧ್ಯೆ, ಅಲ್ಲಲ್ಲಿ ಕಾಣಸಿಕ್ಕುವ  ಹಿಮಾಲಯದ ಪ್ರಾಕೃತಿಕ ಸೌಂದರ್ಯ ಅನುಪಮ.

ನಿಗದಿತ ಸಮಯದ ಪ್ರಕಾರ, ನಾವು ಮರುದಿನ (09/10/2017)  ಮುಂಜಾನೆ 0530  ಗಂಟೆಗೆ ಕಟ್ರಾ ತಲಪಬಹುದಾಗಿತ್ತು. ಹಾಗಾಗಿ 1200 ಗಂಟೆಗೆ ವೈಷ್ಣೋದೇವಿಗೆ ಹೋಗಲು  ಹೆಲಿಕಾಪ್ಟರ್ ಬುಕ್ ಮಾಡಿದ್ದೆವು.” ಸದ್ಯದ ಪರಿಸ್ಥಿತಿಯಲ್ಲಿ ನಮಗೆ  ಮಧ್ಯಾಹ್ನ ಒಂದು ಗಂಟೆಯ ಮೊದಲು ಕಟ್ರಾ ತಲಪಲು ಸಾಧ್ಯವಿಲ್ಲ..ಅವರ ನಿಯಮಾವಳಿಯಂತೆ ಮುಂಗಡ ಹಣವೂ ಸಿಗಲಾರದು.. ನಮಗೆ ನಡೆಯಲು ಸಾಧ್ಯ ಇಲ್ಲ…, ಕುದುರೆಯಲ್ಲಿ ಕುಳಿತರೂ ಬೆನ್ನು ನೋವು ಬರುತ್ತದೆಯಂತೆ…”  ಇತ್ಯಾದಿ  ಹೆಲಿಕಾಪ್ಟರ್ ಟಿಕೆಟ್ ಬುಕ್ ಮಾಡಿದ್ದ  15 ಮಂದಿ  ಆತಂಕಪಟ್ಟೆವು.

ಸಮಯ ಕಳೆಯಲು ಬಹಳಷ್ಟು ಹಾಸ್ಯ ಪ್ರಸಂಗಗಳು ಸೃಷ್ಟಿಯಾದುವು.  ಹಿಂದೊಮ್ಮೆ ರಮೇಶ್ ಅವರು ಯಾವುದೋ ಸ್ಟೇಷನ್ ನಲ್ಲಿ ಚಹಾ ಕುಡಿಯಲೆಂದು ಇಳಿದಿದ್ದರಂತೆ. ಇದ್ದಕ್ಕಿದ್ದಂತೆ ರೈಲು ಚಲಿಸಲಾರಂಭಿಸಿ, ಇವರು ಯಾವುದೋ ಬೋಗಿಗೆ ಸೇರಿ, ಎ.ಸಿ. ಕೋಚ್ ನ ಬಾಗಿಲು ಹಾಕಿದ್ದರಿಂದ ಒಳಬರಲಾರದೆ ಇದ್ದದ್ದು,  ಮಿಕ್ಕವರು ಅವರಿಗಾಗಿ ಹುಡುಕಾಡಿ ತಳಮಳ ಪಟ್ಟಿದ್ದು ಇತ್ಯಾದಿ ‘ರಮೇಶ್ ಮಿಸ್ಸಿಂಗ್ ಕೇಸ್’  ಅನ್ನು ಮೆಲುಕು ಹಾಕಿದರು. ಈ ಬಾರಿ  ತಂಡದಲ್ಲಿದ್ದ ಜಯ, ಅಮೀನ್ ದಂಪತಿ ಇಬ್ಬರೂ ತಾವು ಉಳಕೊಂಡಿದ್ದ ಮಂದಿರದಲ್ಲಿ ಚಪ್ಪಲಿಯನ್ನು ಮರೆತು ಬಂದಿದ್ದರಂತೆ. ಇಬ್ಬರೂ ಮರೆತು ಬಂದ ಕಾರಣ ಪರಸ್ಪರ ಆರೋಪ ಸಮಾನವಾಗಿ ವಜಾ ಆಗಿತ್ತು ಹಾಗೂ  ಇತರರಿಗೆ ಹಾಸ್ಯ ಮಾಡಲು ಹೊಸ ವಿಷಯ ಸಿಕ್ಕಿತ್ತು!

….ಮುಂದುವರಿಯುವುದು..

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 3  :  http://surahonne.com/?p=18471

– ಹೇಮಮಾಲಾ.ಬಿ, ಮೈಸೂರು

3 Responses

  1. Krishnaveni Kidoor says:

    ವಿವರವಾದ ಮಾಹಿತಿಯಿಂದಾಗಿ ನಾವೇ ಟೂರ್ ಮಾಡ್ತಿದ್ದೇವೆ ಅನ್ನುವ ಭಾವನೆ ಹುಟ್ಟಿಕೊಳ್ಳುತ್ತದೆ. ನಿರೂಪಣೆ ಎಕ್ಸಲೆಂಟ್

  2. Rama Mv says:

    Very nice write up.

  3. ರೈಲಿನ ಮಾಹಿತಿ ತುಂಬ ಉಪಯುಕ್ತ. ಓಹ್! ಮತ್ತೇನಾಯಿತು ಎಂಬ ಕಾತುರ ಕೂಡಾ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: