ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 2
ಪ್ರಯಾಣಕ್ಕೆ ಪೂರ್ವ ತಯಾರಿ
ಆಗಾಗ್ಗೆ ಸಮಾನಾಸಕ್ತ ತಂಡದೊಂದಿಗೆ ಇದುವರೆಗೆ ನೋಡಿರದ ಯಾವುದೇ ಊರಿಗೆ ಪ್ರವಾಸ ಅಥವಾ ಚಾರಣ ಕೈಗೊಳ್ಳುವ ಹವ್ಯಾಸವುಳ್ಳ ನನಗೆ, ವೈಷ್ಣೋದೇವಿ ಯಾತ್ರೆಯ ಬಗ್ಗೆ ಕೇಳಿ ಸಂತಸವಾಯಿತು. ಸಾಮಾನ್ಯವಾಗಿ ಪ್ರಯಾಣವನ್ನು ಇಷ್ಟಪಡದ ನಮ್ಮ ಮನೆಯವರಿಗೂ ಈ ಬಾರಿ ವೈಷ್ಣೋದೇವಿ ಬರಲು ಪ್ರೇರಣೆ ಕೊಟ್ಟಿರಬೇಕು. ತಾನೂ ಬರುತ್ತೇನೆ ಎಂದರು! ಹಾಗಾಗಿ ನಾವಿಬ್ಬರೂ ಮಾರ್ತೇಶ್ ಪ್ರಭು ಅವರನ್ನು ಸಂಪರ್ಕಿಸಿ ನಮ್ಮ ಹೆಸರು ನೋಂದಾಯಿಸಿ, ಮುಂಗಡಹಣ ಪಾವತಿ ಮಾಡಿದೆವು. 06 ಅಕ್ಟೋಬರ್ 2017 ರಂದು ಬೆಂಗಳೂರಿನಿಂದ ರೈಲಿನಲ್ಲಿ ಹೊರಟು, ದಿಲ್ಲಿ ತಲಪಿ, ಅಲ್ಲಿಂದ ಜಮ್ಮುವಿಗೆ ಪ್ರಯಾಣಿಸಿ ಕಟ್ರಾ ರೈಲ್ವೇ ಸ್ಟೇಷನ್ ತಲಪುವುದು ತಂಡದ ಮೊದಲ ಗುರಿಯಾಗಿತ್ತು. ಕಟ್ರಾದಿಂದ ವೈಷ್ಣೋದೇವಿ ಬೆಟ್ಟವನ್ನು ಕಾಲ್ನಡಿಗೆ, ಕುದುರೆ ಅಥವಾ ಹೆಲಿಕಾಪ್ಟರ್ ಮೂಲಕ ತಲಪಬಹುದು. ಇದು ಅವರವರ ಆಯ್ಕೆಗೆ ಬಿಟ್ಟ ವಿಚಾರವೆಂದೂ ತಿಳಿಸಿದರು.
ಕಟ್ರಾದಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಬಯಸುವವರು ಮಾತಾ ವೈಷ್ಣೋದೇವಿ ದೇವಾಲಯದ ಅಧಿಕೃತ ಅಂತರ್ಜಾಲ ಪುಟವಾದ ‘ www.maavaishnodevi.org’ ನಲ್ಲಿ ಟಿಕೆಟ್ ಖರೀದಿಸಬೇಕೆಂದೂ, ಇದಕ್ಕೆ ಬಹಳಷ್ಟು ಬೇಡಿಕೆ ಇರುವುದರಿಂದ ಎರಡು ತಿಂಗಳ ಮೊದಲು ಕಾದಿರಿಸಬೇಕೆಂದೂ ಮುಂಚಿತವಾಗಿ ತಿಳಿಸಿದ್ದರು . ಎತ್ತರದ ಬೆಟ್ಟವನ್ನು ಹತ್ತುವಾಗ ಏರುಮುಖ ನಡಿಗೆಯಿಂದಾಗಿ ಸುಸ್ತಾಗುವುದರಿಂದ, ನಾವು ನಾವು ನಾಲ್ವರು (ರಮೇಶ್, ಪ್ರಸನ್ನ, ಗಣೇಶ್ ಮತ್ತು ನಾನು) ಕಟ್ರಾದಿಂದ ಹೆಲಿಕಾಪ್ಟರ್ ನಲ್ಲಿ ತ್ರಿಕೂಟ ಬೆಟ್ಟಕ್ಕೆ ಹೋಗಿ, ಹಿಂತಿರುಗಿ ಬರುವಾಗ ನಡೆದುಕೊಂಡು ಬರುವ ಆಯ್ಕೆ ಮಾಡಿದೆವು, ಯಾತ್ರಾ ದಿನದ ಎರಡು ತಿಂಗಳ ಹಿಂದೆ ಮುಂಗಡ ಬುಕ್ ಮಾಡಲು ಅವಕಾಶವಿರುತ್ತದೆ. ಆಮೇಳೆ ಟಿಕೆಟ್ ಸಿಗುವುದಿಲ್ಲ ಎಂದೂ ಅನುಭವಿಗಳು ತಿಳಿಸಿದ್ದರಿಂದ, 08 ಆಗಸ್ಟ್ 2017 ರಂದು ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದೆವು, ಆನ್ ಲೈನ್ ನಲ್ಲಿ ನೋಡನೋಡುತ್ತಿದ್ದಂತೆಯೇ ಟಿಕೆಟ್ ಗಳು ಖಾಲಿಯಾಗುತ್ತಿರುವುದು ನಮ್ಮ ಗಮನಕ್ಕೆ ಬಂತು. ಅಂತೂ ‘ಗ್ಲೋಬಲ್ ವೆಕ್ಟ್ರಾ’ ಸಂಸ್ಥೆಯವರ ಹೆಲೆಕಾಪ್ಟರ್ ನಲ್ಲಿ ಪ್ರಯಾಣಿಸುವುದಕ್ಕಾಗಿ ತಲಾ 1005/- ರೂ. ಪಾವತಿಸಿ ಆನ್ ಲೈನ್ ನಲ್ಲಿ ಮುಂಗಡ ಟಿಕೆಟ್ ಖರೀದಿಸಿಯೂ ಆಯಿತು.
ಅವಶ್ಯಕ ವಸ್ತುಗಳು, ಫೊಟೋ ಇರುವ ಗುರುತಿನ ಚೀಟಿ ಮತ್ತು ಚಳಿಗೆ ಬೇಕಾಗುವ ಉಡುಪುಗಳು…ಇತ್ಯಾದಿ ಪ್ಯಾಕ್ ಮಾಡಿದೆವು. ನಿಗದಿಯಾಗಿದ್ದಂತೆ 06 ಅಕ್ಟೋಬರ್ 2017 ರಂದು ಮೈಸೂರಿನಿಂದ ಹೊರಟು, ಮಂಗಳೂರಿನಿಂದ ಬಂದಿದ್ದ ತಂಡದೊಂದಿಗೆ ನಾವು ಜೊತೆಯಾಗಿ ಒಟ್ಟು 35 ಜನ ಬೆಂಗಳೂರಿನಿಂದ ಹೊರಡುವ ‘ಸಂಪರ್ಕ ಕ್ರಾಂತಿ’ ರೈಲಿನಲ್ಲಿ ದಿಲ್ಲಿಯೆಡೆಗೆ ಪ್ರಯಾಣಿಸಿದೆವು. ರೈಲಿನಲ್ಲಿ ಸಹಯಾತ್ರಿಗಳೊಡನ ಮಾತುಕತೆ, ಭಜನೆ, ಹರಟೆ, ಹಿಂದಿನ ಪ್ರಯಾಣಗಳ ಸ್ವಾರಸ್ಯಕರ ಘಟನೆಗಳ ಮೆಲುಕು, ಅಚ್ಚುಕಟ್ಟಾದ ಊಟೋಪಚಾರದ ವ್ಯವಸ್ಥೆಯೊಂದಿಗೆ ಪ್ರಯಾಣ ಮುಂದುವರಿಯಿತು. ಪ್ರಥಮ ಬಾರಿಯ ಭೇಟಿಯಾಗಿದ್ದರೂ, ನಮ್ಮ ಬೋಗಿಯಲ್ಲಿದ್ದ ಉಪೇಂದ್ರ ಕಾಮತ್ , ಗೋಕುಲ್ ದಾಸ್ , ರಾಧಾಕೃಷ್ಣ ಮತ್ತಿತರರು ಬಹಳ ರಸವತ್ತಾಗಿ ಮಾತನಾಡುತ್ತಾ ಎಲ್ಲರನ್ನೂ ರಂಜಿಸುತ್ತಿದ್ದರು.
……ಮುಂದುವರಿಯುವುದು
ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 1 : http://surahonne.com/?p=18413
– ಹೇಮಮಾಲಾ.ಬಿ, ಮೈಸೂರು
(ಚಿತ್ರಕೃಪೆ: ಅಂತರ್ಜಾಲ)
ಸೊಗಸಾದ ನಿರೂಪಣೆ. ಓದುತ್ತಾ ನಿಮ್ಮ ಗುಂಪಿನಲ್ಲೊಬ್ಬಳಾದೆ 🙂
ಮುಂದೇನೆಂಬ ಕುತೂಹಲ ಹೆಚ್ಚುತ್ತಿದೆ, ನಿಮ್ಮ ಹೆಲಿಕಾಪ್ಟರ್ ಯಾನದ ಅನುಭವ ತಿಳಿಯುವ ಆತುರವೂ.