ಬಸವನೊಡನೆ ಬಸವ..
ನೀ ಮೂಗ ಬಸವಣ್ಣ
ನಾ ಸಜೀವ ಹಸುವಣ್ಣ
ನಿನಗೊ ನಿತ್ಯ ದಸರಾ ವೈಭವ
ನನಗೊ ಬೀದಿ ಹುಲ್ಲು ಸಿಕ್ಕರೆ ಪುಣ್ಯ! ||
ನೋಡು ಕುತ್ತಿಗೆಗೆ ಹಾರ
ಮಿರಮಿರ ಮಿಂಚುವ ಸಾರ
ಕಪ್ಪಿದ್ದರು ನೆತ್ತಿಗೆ ಹೂವು ದವನ
ಅಚ್ಚ ಬಿಳುಪಿದ್ದರು ಯಾರೂ ನೋಡರಲ್ಲ ? ||
ನಿನಗೊ ಮಂಗಳಾರತಿ ಪೂಜೆ
ನಮಿಸುವರಡ್ಡಬಿದ್ದು ಬಿಡದೆ ಗೆಜ್ಜೆ
ಕತ್ತ ಸರಪಳಿ ಗಂಟೆ ಸಿಂಗಾರಕೊಡವೆ
ಬತ್ತಲೆ ಮೈಲಿ ಸುತ್ತುವೆ ಯಾರಿಗಿಲ್ಲ ಪರಿವೆ ||
ಕೂತಲ್ಲೆ ಸುಖಾಸನ ನಿನದು
ಸುಖಾಸೀನಕೆಲ್ಲಿ ಹೊಟ್ಟೆಪಾಡು?
ದುಡಿಯದೆ ಪಡೆಯುವೆ ನೀನೆಲ್ಲ ಬಿಟ್ಟಿ
ದಣಿಸಿ ಮಣಿಸಿದರು ನನಗಿಲ್ಲ ದೊರೆ ಖಾತರಿ! ||
ಆದರು ಬಿಡು ನೀ ಮಹಾತ್ಮ
ಮುಗಿಯೆ ಕಾಲಿಗೆ ಮುತ್ತೀವೆ ಹಣೆಗೆ
ನಿಜದಲಿ ಬಂದೆರಗುವೆ ನಿನಗೆ ದಿನನಿತ್ಯ
ಹಾಳು ಹಣೆ ಕೆರೆತಕೆ ಬೇರೆ ದಾರಿ ಮತ್ತಿಲ್ಲಾ ! ||
ನೀ ಪುಣ್ಯಕೋಟಿ ಪುಣ್ಯವಂತ
ಚಿರಂಜೀವಿ ಯುಗಾಂತರ ಮೂರ್ತ
ಕಟುಕನು ಬಂದು ಕೈ ಮುಗಿವನಲ್ಲಾ ನಿನಗೆ
ಅವನ ಕೈಗೆ ಬಂದಾಗ ಕತ್ತಿ ಗುರಿ ನನ್ನ ಕುತ್ತಿಗೆಗೆ! ||
– ನಾಗೇಶ ಮೈಸೂರು