ಗೀಜಗ ಕಟ್ಟಿದ ಈ ಗೂಡು
ಈಚಲು ಮರಕ್ಕೆ ಜೋತುಬಿದ್ದ ಗೀಜಗ ಕಟ್ಟಿದ ಗೂಡನ್ನು ಬಹುಶಃ ಎಲ್ಲರೂ ಕಂಡಿರಬಹುದು, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಬೆಳೆದವರಿಗೆ ಇದರ ಪರಿಚಯ ಹೊಸದೇನಲ್ಲ.
ಗುಬ್ಬಿ ಗಾತ್ರದ ಗೀಜಗ ಪಕ್ಷಿ ಪ್ರಪಂಚದ ಪ್ರಮುಖ ವಾಸ್ತುಶಿಲ್ಪಿಗಳಲ್ಲೊಂದು. ಕೆರೆ, ನಾಲೆ, ನದಿ ತೀರದಲ್ಲಿ ಗೂಡುಗಳನ್ನು ಕಟ್ಟುವುದುಂಟು. ಒಟ್ಟೊಟ್ಟಿಗೆ ಹತ್ತಾರು, ನೂರಾರು ಗೂಡುಗಳನ್ನು ಸಂಜೆ ವಾಯುವಿಹಾರದ ಸಮಯದಲ್ಲಿ ಗಮನಿಸಿಯೇ ಇರುತ್ತೀರಿ!
ಮನುಷ್ಯ ಗೀಜಗ ಪಕ್ಷಿ ಗೂಡು ನೇಯುವ ಪರಿ ನೋಡಿ ತಾನು ಬಟ್ಟೆ ನೇಯುವ ಕಲೆಯನ್ನು ಕಲಿತಿರಬಹುದೆಂದು ಎಲ್ಲೋ ಓದಿದ ನೆನಪು. ಸುಮಾರು ಕಷ್ಟಪಟ್ಟು ಹುಲ್ಲನ್ನು ಆಯ್ದುತಂದು ಗೂಡುಕಟ್ಟಿದ ಗಂಡು ಗೀಜಗ, ಹೆಣ್ಣುಪಕ್ಷಿಯನ್ನು ಕರೆದು ತೋರಿಸುತ್ತದೆ. ಆ ತಪಾಸಣೆಯ ನಂತರ ಹೆಣ್ಣು ಗೀಜಗಕ್ಕೆ ಗೂಡು ಒಪ್ಪಿಗೆಯಾದಲ್ಲಿ ಮುಂದೆ ಮೊಟ್ಟೆ ಮರಿ ಮಾತು.
ಇನ್ನೊಂದು ವಿಶೇಷ ಇದೆ – ಗೂಡಿನೊಳಗಿನ ಮರಿಗೆ ಹಾಗು ಗೂಡನ್ನು ರಾತ್ರಿ ಸಮಯ ಬೆಳಕಿನಿಂದ ಬೆಳಗುವುದಕ್ಕೆ ಮಿಂಚುಹುಳುವನ್ನು ಹಿಡಿದು ತನ್ನ ಗೂಡಿನಲ್ಲಿ ಬಂಧಿಸುವುದುಂಟಂತೆ, ಹಾಗೇ ಹುಳುವಿನ ಜೀವನ ಮುಗಿದಂತೆ ಮರಿಗಳಿಗೆ ಗುಟುಕಾಗುವುದಂತೆ… ಸಂತಾನೋತ್ಪತ್ತಿ ಮುಗಿದ ನಂತರ ಹಾಗೆ ಬಿಟ್ಟ ಗೂಡು ಬೇರೆ ಹಕ್ಕಿಯ ಮನೆಯಾಗುವುದು – ಪಕ್ಷಿಗಳು ಎಂದಿಗೂ ವಿಸ್ಮಯ…
– ಸ್ವರೂಪ್ ಭಾರದ್ವಾಜ್
(ಚಿತ್ರಕೃಪೆ: ಅಂತರ್ಜಾಲ)
.
Very nice 🙂
ಧನ್ಯವಾದಗಳು