ಊಟ ಮಾಡುವಾಗ ಮಾತನಾಡಬಾರದೇಕೆ?
ಮನೆಗಳಲ್ಲಿ, ನಮ್ಮ ಅನುಕೂಲತೆ, ಆಗಿನ ಸಂದರ್ಭ, ಅವರವರ ಅಭ್ಯಾಸ, ಶಿಸ್ತುಪಾಲನೆಗೆ ತಕ್ಕಂತೆ ಡೈನಿಂಗ್ ಟೇಬಲ್ ನಲ್ಲಿ, ಅಡುಗೆಕೋಣೆ ಕಟ್ಟೆಯ ಮೇಲೆ, ಟಿ.ವಿ ಯ ಮುಂದೆ, ಕಂಪೌಂಡ್ ಪಕ್ಕ ಇತ್ಯಾದಿ ಸರ್ವತ್ರ ‘ಊಟದ ಜಾಗ’ ಆಗುತ್ತದೆ. ಮಕ್ಕಳಿಗೆ ಉಣ್ಣುವಾಗ ‘ಚಂದಮಾಮ’ನ ಕಂಪೆನಿ ಬೇಕಾದರೆ, ತಾರಸಿಯಾದರೂ ಸರಿ, ಮನೆ ಮುಂದಿನ ರಸ್ತೆಯಲ್ಲಿ ಅತ್ತಿತ್ತ ವಾಕಿಂಗ್ ಮಾಡಿದರೂ ಸರಿ .
ಕುಳಿತುಕೊಂಡು, ನಿಂತುಕೊಂಡು, ಮಾತನಾಡಿಕೊಂಡು ಅತ್ತಿಂದಿತ್ತ ಓಡಾಡುತ್ತಾ ಅಥವಾ ಏನಾದರೂ ಹುಡುಕಾಡುವ ತರಾತುರಿಯಲ್ಲಿ ಊಟ ಮುಗಿಸುವುದೂ ಇದೆ. ಇನ್ನು ನೆಂಟರು ಬಂದಿದ್ದರೆ, ಊಟ ಮಾಡುವಾಗಲೇ ಮಾತಿಗೆ ಕಳೆ ಕಟ್ಟುವುದು. ಅಡಿಗೆಯ ವಿಶ್ಲೇಷಣೆಯಿಂದ, ನಾಸಾದ ರಾಕೆಟ್ ವರೆಗೆ…. ನಮ್ಮ ಪಂಚಾಯಿತಿಯಿಂದ ಪಾರ್ಲಿಮೆಂಟ್ ಭವನದ ವರೆಗೆ…..ತನ್ನ ಬ್ಲಾಗ್ ನಿಂದ ಹಿಡಿದು ಇತ್ತೀಚೆಗೆ ಬಿಡುಗಡೆಯಾದ ಪ್ರಸಿದ್ಧ ಕಾದಂಬರಿಯ ಬಗ್ಗೆ…..ನಮ್ಮ ಮನೆಯ ಪಾಪುವಿನಿಂದ ಹಿಡಿದು ಬ್ರಿಟನ್ ನ ರಾಜವಂಶದ ಕುಡಿಯ ಬಗ್ಗೆ…….ಮಾತಿನ ವಿಸ್ತಾರ ಇದ್ದೇ ಇರುತ್ತದೆ.ಉಂಡ ಕೈ ಒಣಗತೊಡಗಿದ್ದರೂ ಮಾತು ಮುಗಿಯುವುದಿಲ್ಲ.
ನಮ್ಮ ಹತ್ತಿರದ ಸಂಬಂಧಿ ಭಾವ ಒಬ್ಬರು ಊಟ ಮಾಡುವಾಗ ಮಾತನಾಡೆನೆಂಬ ಪದ್ಧತಿಯನ್ನು ಪಾಲಿಸುವವರು . ಅವರು ನಮ್ಮ ಮನೆಗೆ ಬಂದಾಗ ಊಟದ ಸಮಯದಲ್ಲಿ ಬೇಕೆಂದೇ ಅವರನ್ನು ಮಾತಿಗೆಳೆದು, ಜೋಕ್ಸ್ ಹೇಳಿ, ಕಾಲೆಳೆಯುವಂತ ಮಾತುಗಳನ್ನಾಡಿ, ಒಟ್ಟಾರೆಯಾಗಿ ಅವರ ವ್ರತಭಂಗ ಮಾಡಬೇಕೆಂದು ಇತರ ಅಣ್ಣ-ಭಾವಂದಿರು ಹರಸಾಹಸ ಪಡುತ್ತಾರೆ. ಭಾವ ಮಾತ್ರ ಇವರುಗಳ ಚೇಷ್ಟೆಗೆ ಪ್ರತಿಕ್ರಿಯೆ ನೀಡದೆ ಉಣ್ಣುತ್ತಿದ್ದರು. ಕನಿಷ್ಟಪಕ್ಷ ಭಾವ ಅವರಿಗೆ ನಗು ಬರುವಂತೆ ಮಾಡಿದರೆ ‘ ನಾವೇ ಗೆದ್ದೆವು’ ಎಂದು ಇತರ ಭಾವಂದಿರು ಸಂತಸ ಪಡುತ್ತಿದ್ದರು!ಇದೆಲ್ಲಾ ಹಳೆಯ ಕೂಡುಕುಟುಂಬದ ಸವಿನೆನಪುಗಳು.
ಆದರೆ ಈ ದಿನಗಳಲ್ಲಿ ನಮಗೆ ಧಾವಂತ . ಸಮಾರಂಭಗಳಲ್ಲಿ ಬಫೆಯಲ್ಲಿ ನಿಂತು ತಿನ್ನುತ್ತಾ. ಒಬ್ಬರನ್ನೊಬ್ಬರು ತಳ್ಳಿಕೊಳ್ಳುತ್ತಾ ತಮ್ಮ ಸರದಿಗಾಗಿ ಕಾಯುತ್ತಾ, ಹೊರಡಲು ಲೇಟ್ ಆಯಿತು ಎಂದು ಚಡಪಡಿಸುತ್ತಾ ಬೇಗ ಬೇಗ ಕಬಳಿಸುವುದು ಒಂದು ಪರಿ.
ಭಾರತೀಯ ಸಂಪ್ರದಾಯ ಪ್ರಕಾರ ಶುಚಿಯಾದ ಜಾಗದಲ್ಲಿ, ನೆಲದ ಮೇಲೆ ಕುಳಿತು, ಶಾಂತಚಿತ್ತದಿಂದ ನಿಶ್ಯಬ್ಧವಾಗಿ ಭೋಜನ (ಊಟ) ಮಾಡಬೇಕು. ಊಟ ಮಾಡುವಾಗ ಮೌನವಾಗಿರ ಬೇಕು ಎಂದು ನಮ್ಮ ಹಿರಿಯರು ನಿಯಮ ರೂಪದಲ್ಲಿ ನಮಗೆ ಬೋಧಿಸಿದ್ದಾರೆ.
ನಾವು ಉಸಿರಾಡುವ ಗಾಳಿ ಮೂಗಿನಿಂದ ಶ್ವಾಸನಾಳದೊಳಕ್ಕೆ ಪ್ರವೇಶಿಸುತ್ತದೆ. ಉಣ್ಣುವಾಗ ಆಹಾರ ಅನ್ನನಾಳದ ಮೂಲಕ ಜಠರ ಸೇರುತ್ತದೆ. ನಾವು ಊಟ ಮಾಡುವಾಗ ಮಾತನಾಡಿದರೆ, ಆಹಾರ ಶ್ವಾಸನಾಳಕ್ಕೆ ಹೋಗುವ ಸಾಧ್ಯತೆಯಿದ್ದು ‘ನೆತ್ತಿ ಹತ್ತಿ’ ಸೀನು/ಬಿಕ್ಕಳಿಕೆ/ ಕೆಮ್ಮು ಬಂದು ಬಾಯಿಯಲ್ಲಿರುವ ಅನ್ನವು ಎದುರುಗಡೆ ಇರುವವರ ಎಲೆಗೆ ಬಿದ್ದರೆ….ಅಬ್ಬಾ ಅದೆಂಥಾ ಮುಜುಗರ,ಅವಮಾನ! ಆದ್ದರಿಂದ ಬಾಯಿಯಲ್ಲಿರುವ ತುತ್ತನ್ನು ನುಂಗುವ ತನಕವಾದರೂ ಮಾತನಾಡಬಾರದು.
– ಹೇಮಮಾಲಾ.ಬಿ
ಒಗ್ಗರಣೆ ಚೆನ್ನಾಗಿದೆ
ಚೆನ್ನಾಗಿದೆ , ನನಗೂ ನನ್ನ ಬಾಲ್ಯದ ದಿನಗಳು ನೆನಪಾಯ್ತು .
ಚೆನ್ನಾಗಿದೆ ಉತ್ತಮ ಸಲಹೆ…
ಊಟ ಮಾಡುವಾಗ ಕುಳಿತು ನಿಧಾನವಾಗಿ ಉ೦ಡರೆ ಚೆನ್ನಾಗಿರುತ್ತದೆ
ಕುಟುಂಬದ ಸಂಗತಿಯ ಕುರಿತು ಹೇಳಿರುವುದು ಓದುಗರನ್ನು ಅವರ ಜೀವನದಲ್ಲೂ ನಡೆದ ಸಂದರ್ಭಗಳು ನೆನಪಿಗೆ ಬರುವಂತೆ ಇದೆ. ಕೊನೆಯಲ್ಲಿ ಸ್ತೂಲ ಸಂದೇಶವೂ ಚೆನ್ನಾಗಿದೆ.
ಧನ್ಯವಾದಗಳು 🙂