ಪ್ರಾಚೀನ ಪಾಂಡವ ಗುಫಾ – ಲಾಖ್ ಮಂಡಲ್

Share Button

hema-14sept-2016

ಮಹಾಭಾರತದಲ್ಲಿ ಬರುವ ಕಥೆ-ಉಪಕಥೆಗಳು ಅಸಂಖ್ಯಾತ. ಅವುಗಳಲ್ಲಿ ಸ್ಥಳೀಯ ಮಾರ್ಪಾಡು ಮತ್ತು ಜನಪದ ಸೊಗಡು ಸೇರಿಕೊಂಡಿವೆ. ಪ್ರತಿ ಊರಿನಲ್ಲಿಯೂ ಅಲ್ಲಿಗೆ ಪಾಂಡವರು ಬಂದಿದ್ದರೆಂದು ಸಾರುವ ಉದಾಹರಣೆಗಳು ಬಹಳಷ್ಟು ಸಿಗುತ್ತವೆ. ಒಂದು ವೇಳೆ ಇದು ಕಲ್ಪನೆಯೇ ಆಗಿದ್ದರೂ, ಕಲ್ಪನೆಯಲ್ಲಿ ಸಾಮ್ಯತೆ ಇದೆ. ಈಗಿನಂತೆ ಮಾಹಿತಿಯ ಸಂರಕ್ಷಣೆ ಮತ್ತು ಸಂವಹನ ಮಾಧ್ಯಮಗಳು ಇಲ್ಲದಿದ್ದ ಕಾಲದಿಂದ ಇಂತಹ ಕಥೆಗಳು ಹೇಗೆ ಉಳಿದುಬಂದವು ಎಂದು ಅಚ್ಚರಿಯಾಗುತ್ತದೆ.

ಪಾಂಡವರು ಅರಗಿನ ಮನೆಯಿಂದ ಸುರಂಗ ಮಾರ್ಗದ ಮೂಲಕ ತಪ್ಪಿಸಿಕೊಂಡರು ಎಂಬ ಕುತೂಹಲಕಾರಿಯಾದ ಕಥೆಯನ್ನು ನಾವು ಕೇಳಿದ್ದೇವೆ. ಈ ಕಥೆಯಲ್ಲಿ , ಪಾಂಡವರು ಉಪಯೋಗಿಸಿದರೆನ್ನಲಾದ ಸುರಂಗ ಮಾರ್ಗವು ಉತ್ತರಾಖಂಡ ರಾಜ್ಯದ ‘ಲಾಖ್ ಮಂಡಲ್’ ಹಳ್ಳಿಯಲ್ಲಿದೆ. ಸ್ಥಳೀಯರ ಪ್ರಕಾರ ಲಾಖ್ ಮಂಡಲ್ ನಲ್ಲಿ ಈಗ ಶಿವನ ದೇವಾಲಯವಿರುವ ಜಾಗದಲ್ಲಿ ಅರಗಿನ ಮನೆಯಿತ್ತಂತೆ. ಅಲ್ಲಿಂದ ಅನತಿ ದೂರದಲ್ಲಿ ‘ಪ್ರಾಚೀನ ಪಾಂಡವ ಗುಫಾ’ ಎಂಬ ಫಲಕವಿರುವ ಗವಿಯೊಂದಿದೆ. 13 ಸೆಪ್ಟೆಂಬರ್ 2016 ರಂದು, ಯಮುನೋತ್ರಿಗೆ ಹೋಗುವ ಮಾರ್ಗದಲ್ಲಿ, ನಾವು ಅಲ್ಲಿಗೂ ಭೇಟಿ ಕೊಟ್ಟಿದ್ದೆವು

.pracheen-pandava-gufa

ಕುರುಕ್ಷೇತ್ರ ಯುದ್ಧದ ಮೊದಲು ದುರ್ಯೋಧನನು ತನ್ನ ಸಹಾಯಕನಾಗಿದ್ದ ಶಿಲ್ಪಿ ಪುರೋಚನನಿಗೆ ವಾರಣಾವತದಲ್ಲಿ ಒಂದು ಲಾಕ್ಷಾಗೃಹವನ್ನು (ಅರಗಿನ ಮನೆ) ಕಟ್ಟಲು ಆದೇಶಿದ್ದನು. ವನವಾಸ, ಅಜ್ಞಾತವಾಸ ಮುಗಿಸಿ ಬಂದ ಪಾಂಡವರನ್ನು ಅಲ್ಲಿಗೆ ಬರಮಾಡಿ , ಅವರಿಗೆ ವಾಸಕ್ಕೆ ಅವಕಾಶ ಮಾಡಿಕೊಟ್ಟನು. ಪಾಂಡವರು ನಿದ್ರಿಸುತ್ತಿರುವಾಗ, ಸಮಯ ಸಾಧಿಸಿ ಮನೆಗೆ ಬೆಂಕಿ ಕೊಟ್ಟು ಎಲ್ಲರನ್ನೂ ಏಕಕಾಲದಲ್ಲಿ ಕೊಲ್ಲಬೇಕೆಂದೂ ಪುರೋಚನನಿಗೆ ಆದೇಶಿಸಿದ್ದನು. ಅರಗು ಬೇಗನೆ ಉರಿಯುವ ವಸ್ತುವಾದುದರಿಂದ, ಪಾಂಡವರೆಲ್ಲರೂ ಉರಿಯುವ ಮನೆಯಲ್ಲಿ ಸಿಲುಕಿ ಸತ್ತು ಹೋಗುವಂತೆ ಮಾಡಿದರೆ, ಯುದ್ಧಮಾಡದೆಯೇ ಗೆಲ್ಲಬಹುದೆಂಬ ಕುತಂತ್ರ ಇದಾಗಿತ್ತು.

ಆದರೆ ಭೀಮನಿಗೆ ಪುರೋಚನನ ಬಗ್ಗೆ ಅನುಮಾನವಿದ್ದುದರಿಂದ ಅವನು ಸದಾ ಎಚ್ಚರವಿರುತ್ತಿದ್ದ. ಹೀಗಾಗಿ ಪುರೋಚನನಿಗೆ ಮನೆಗೆ ಬೆಂಕಿ ಕೊಡಲು ಸಾಧ್ಯವಾಗಲಿಲ್ಲ. ಕೊನೆಗೆ, ಪುರೋಚನನು ಒಂದು ದಿನ ತನ್ನ ಪತ್ನಿ ಮತ್ತು 5 ಮಕ್ಕಳನ್ನು ಅರಗಿನ ಮನೆಗೆ ಬರಹೇಳಿದ. ಪಾಂಡವರ ಆಹಾರದಲ್ಲಿ ವಿಷ ಬೆರೆಸಿ ಅವರು ಸಾವಿಗೀಡಾಗುವಂತೆ ಮಾಡುವ ಉದ್ದೇಶ ಅವರದಾಗಿತ್ತು. ಇದನ್ನು ಮುಂಚಿತವಾಗಿ ಅರಿತ ಭೀಮನು ವಿಷ ಬೆರೆಸಿದ ಆಹಾರವನ್ನು ತಾನೊಬ್ಬನೇ ತಿಂದು ಮುಗಿಸಿದ. ಅವನು ಬಾಲ್ಯದಲ್ಲಿ ಕಾಲಕೂಟ ವಿಷವನ್ನು ಸೇವಿಸಿದ್ದನಾದುದರಿಂದ ಆಹಾರಕ್ಕೆ ಬೆರೆಸಿದ ವಿಷ ಅವನ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡಿರಲಿಲ್ಲ.

 

pracheen-pandava-cave

ದುರ್ಯೋಧನನ ಕಪಟ ಬುದ್ಧಿಯನ್ನು ಅರಿತಿದ್ದ ವಿದುರನು ಮುಂಬರಬಹುದಾದ ಅನಾಹುತದ ಬಗ್ಗೆ ಯುಧಿಷ್ಠಿರನಿಗೆ ಮಾತ್ರ, ಸೂಚ್ಯವಾಗಿ, ಅರಗಿನ ಮನೆಗೆ ಬರುವ ಮೊದಲೇ ತಿಳಿಸಿದ್ದನು. ಹಾಗೂ ಆ ಮನೆಯಿಂದ ಹೊರ ಹೋಗಲು ಗುಪ್ತ ಸುರಂಗ ಮಾರ್ಗವನ್ನು ರಚಿಸಲು ವ್ಯವಸ್ಥೆ ಮಾಡಿದ್ದನು.

ಇದನ್ನರಿಯದ ಪುರೋಚನನು, ಅಂದು ರಾತ್ರಿ ಪಾಂಡವರೆಲ್ಲರೂ ನಿದ್ರಿಸುತ್ತಿರುವಾಗ , ಅವರು ವಿಷಾಹಾರವನ್ನು ಉಂಡು ಸತ್ತಿರಬೇಕೆಂದು ಭಾವಿಸಿ ಸಂಭ್ರಮಿಸುತ್ತಿದ್ದನು. ಈ ಸಮಯದಲ್ಲಿ, ಭೀಮನು ತಾನೇ ಅರಗಿನ ಮನೆಗೆ ಬೆಂಕಿ ಕೊಟ್ಟು, ನಿದ್ರಿಸುತ್ತಿದ್ದ ತಾಯಿ ಕುಂತಿ ಮತ್ತು ಒಡಹುಟ್ಟಿದವರನ್ನು ಎತ್ತಿಕೊಂಡು, ಸುರಂಗ ಮಾರ್ಗದ ಮೂಲಕ ಹೊರಬಂದನು. ಹೀಗೆ ಪಾಂಡವರೆಲ್ಲರೂ ಸುರಕ್ಷಿತ ತಾಣವನ್ನು ಸೇರಿದರು. ತಾನು ಕಟ್ಟಿದ ಅರಗಿನ ಮನೆಯಲ್ಲಿ ತನ್ನ ಸಂಸಾರವೇ ಸುಟ್ಟು ಹೋಗಿದ್ದು ಪುರೋಚನನ ದುರಂತ.

 

– ಹೇಮಮಾಲಾ.ಬಿ

2 Responses

  1. Kiran Desai says:

    ವಾಹ್…. ಅದ್ಭುತ …ಚೆಂದ ಬರಿದಿರಿ ಕಥೆ ಕಣ್ಮುಂದೆ ಬಂದಹಾಗೆ ಆಯ್ತು

  2. Pushpa Nagathihalli says:

    ಹೌದು ಈಗೇ ಇಡೀ ಉತ್ತರಾಕಾಂಡದಲ್ಲೆಲ್ಲಾ ಮಹಾಭಾರತದ ಪಾತ್ರಗಳ ಹೆಜ್ಜೆಗಳು ಕಾಣಸಿಗುತ್ತವೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: