‘ಬಕುಳ ಹೂವಿನ’ ಗಂಧ …

Share Button

ಸಂಜೆಯ ವಾಯುವಿಹಾರದ ಸಮಯದಲ್ಲಿ ನಮ್ಮ ಬಡಾವಣೆಯ ಶಾಲಾ ಮೈದಾನದ ಪಕ್ಕದಲ್ಲಿ ನಡೆಯುತ್ತಿದ್ದಾಗ, ನವಿರಾದ ಸುಗಂಧ ತೇಲಿ ಬಂದು, ಸೆಕೆಯ ವಾತಾವರಣದಲ್ಲಿಯೂ ತಂಪಾದ ಅನುಭೂತಿ ಕೊಟ್ಟಿತು. ಇದು ಒಂದು ‘ಕಾಡುಸುಮ’ದ ಸುವಾಸನೆ ಎಂದು ಮನಸ್ಸು ಹೇಳಿತು. ಯಾವ ಹೂವು ಎಂದು ತತ್ಕ್ಷಣ ನೆನಪಾಗಲಿಲ್ಲ. ಸುತ್ತ ಮುತ್ತ ಇದ್ದ ಮರಗಳನ್ನು ಗಮನಿಸಿದಾಗ, ಅಚ್ಚ ಹಸಿರಿನ ದೊಡ್ಡ ಮರವೊಂದರಲ್ಲಿ ಪುಟ್ಟದಾಗಿ ಬಿಳಿಯಾಗಿ ಕಂಗೊಳಿಸುತ್ತಿದ್ದ ‘ ಬಕುಳ ಹೂಗಳು’ ಕಾಣಸಿಕ್ಕಿದುವು. ತೊಟ್ಟು ಕಳಚಿ ನೆಲದಲ್ಲಿ ಬಿದ್ದಿದ್ದ ಹಳೆಯ ಹೂಗಳು ಕಂದು ಬಣ್ಣಕ್ಕೆ ತಿರುಗಿದ್ದವಾದರೂ ಇನ್ನೂ ಸುವಾಸನೆ ಬೀರುತ್ತಿದ್ದವು.

ಮರದ ಗಾತ್ರಕ್ಕೆ ಹೋಲಿಸಿದರೆ, ಬಕುಳ ಹೂವು ತೀರಾ ಪುಟ್ಟದೆನಿಸುತ್ತದೆ. ಹಸಿರೆಲೆಗಳ ನಡುವೆ ಪುಟ್ಟ ಹೂಗಳು ಅಲ್ಲಲ್ಲಿ ಇರುತ್ತವೆ. ಇನ್ನು ಹೂಗಳ ಆಕಾರವು , ನಾಜೂಕಾದ ಕಿವಿಯೋಲೆಯಂತೆ ಇದೆ. ಹೆಚ್ಚೆಂದರೆ 2 ಸೆಂಟಿಮೀಟರ್ ಅಗಲದ ಹೂವು ಇದು.

ಸಾಮಾನ್ಯವಾಗಿ ಕಾಡುಗಳಲ್ಲಿ ತಾನಾಗಿ ಬೆಳೆಯುವ ಈ ವೃಕ್ಷವು, ಮೈಸೂರಿನಲ್ಲಿ ನಮ್ಮ ಬಡಾವಣೆಯಲ್ಲಿಯೇ ಇರುವುದು ಇಷ್ಟು ದಿನ ನನಗೆ ಗೊತ್ತಿರಲೇ ಇಲ್ಲ. ಶಾಲೆಯ ಆಟದ ಮೈದಾನದ ಒಳಗೆ ಇರುವುದರಿಂದ ಈ ಮರಕ್ಕೆ ಇನ್ನೂ ಆಯುಸ್ಸಿದೆ.ಬೇರೆ ಕಡೆ ಇದ್ದಿದ್ದರೆ ಗೃಹ ನಿರ್ಮಾಣಕ್ಕೆ ಅಡ್ಡಿಯಾಗಿ ಯಾವಾಗಲೋ ಗರಗಸಕ್ಕೆ ಬಲಿಯಾಗುತಿತ್ತು!

ಮನಸ್ಸು ಹಿಂದಕ್ಕೆ ಓಡಿತು. ಈ ಹೂಗಳನ್ನು ದಕ್ಷಿಣಕನ್ನಡ-ಕರಾವಳಿ ಜಿಲ್ಲೆಗಳಲ್ಲಿ ನಮ್ಮ ಆಡುಭಾಷೆಯಲ್ಲಿ ‘ರೆಂಜೆ ಹೂ’ ಅಂತ ಕರೆಯುತ್ತಾರೆ. ಬೇಸಿಗೆ ಶಿಬಿರಗಳ ಹೆಸರೇ ಕೇಳಿ ಗೊತ್ತಿಲ್ಲದ ನಮ್ಮ ಬಾಲ್ಯದಲ್ಲಿ, ಗೆಳತಿಯರ ಜೊತೆಯಲ್ಲಿ, ಮನೆಯ ಹತ್ತಿರದ ಗುಡ್ಡಗಳಲ್ಲಿ ಸುತ್ತಾಡುತ್ತಾ, ಉದುರಿಬಿದ್ದ ‘ರೆಂಜೆ ಹೂ’ ಗಳನ್ನು ಒಂದೊಂದಾಗಿ ಹೆಕ್ಕಿ, ತೆಂಗಿನ ಗೆರಟೆಯಲ್ಲಿ ಶೇಖರಿಸಿ, ಸೂಜಿ-ದಾರ ಹಿಡಿದು ಹಾರ ಪೋಣಿಸಿ, ದೇವರ ಫೊಟೋಗಳಿಗೆ ಅಲಂಕಾರ ಮಾಡುತ್ತಿದ್ದೆವು. ಸಾಮಾನ್ಯವಾಗಿ ಎಪ್ರಿಲ್ ತಿಂಗಳಲ್ಲಿ ಹೂಬಿಡುವ ಬಕುಳ ಮರದಲ್ಲಿ , ಹಸಿರು ಕಾಯಿಗಳಾಗಿ, ಆಮೇಲೆ ಕಂದು ಬಣ್ಣದ ಹಣ್ಣುಗಳಾಗುತ್ತದೆ. ಸ್ವಲ್ಪ ಹುಳಿ-ಸಿಹಿ-ಒಗರು ಮಿಶ್ರಿತ ರುಚಿಯ ಹಣ್ಣು. ಪಕ್ಷಿಗಳಿಗೆ ಪ್ರಿಯವಾದ ಹಣ್ಣು ಇದು.

ಬಕುಳ ಮನುಕುಲಕ್ಕೆ ಬಹಳ ಹಿಂದಿನಿಂದಲೇ ಪರಿಚಯವಿರುವ ಪುಷ್ಪ. ಪೌರಾಣಿಕ ಕತೆಗಳಲ್ಲಿಯೂ ಬಕುಳ ಪುಷ್ಪದ ವಿಚಾರ ಕೇಳಿದ್ದೇವೆ. ಕಾಳಿದಾಸನ ‘ಮೇಘದೂತ’ ಕಾವ್ಯದಲ್ಲಿಯೂ ಬಕುಳ ಮರದ ಪ್ರಸ್ತಾಪವಿದೆ. ಬಕುಳ ಮರದ ಸಸ್ಯಶಾಸ್ತ್ತ್ರೀಯ ಹೆಸರು Mimusops Elengi . ಈ ಮರದ ತೊಗಟೆ ಮತ್ತು ಎಲೆಗಳು ಕೆಲವು ಆಯುರ್ವೇದ ಔಷಧಗಳ ತಯಾರಿಯಲ್ಲಿ, ಮುಖ್ಯವಾಗಿ ದಂತಚಿಕಿತ್ಸೆಗೆ ಸಂಬಂಧಿಸಿದ ಔಷಧಿಗಳಿಗಾಗಿ ಬಳಕೆಯಾಗುತ್ತವೆ.

ಹೇಮಮಾಲಾ.ಬಿ

10 Responses

  1. Rangaprasad Prasad says:

    ನಮ್ಮೂರಿನ ಈಶ್ವರನ ಗುಡಿಯ ಆವರಣದಲ್ಲಿ ಇಂಥ ಎರಡು ಮರ ಇವೆ.
    ನಾವು ಇದನ್ನ. ಪಗಡೆ ಮರ ಅಂತೀವಿ
    ತಮಿಳು ನಾಡಿನ ಸೇಲಂ ಭಾಗದಲ್ಲಿ ಈ ಹೂವನ್ನು ಮಗಡಂ ಪೂ ಅಂತಾರೆ. ಈ ಮರದ ಹೂಗಳನ್ನ ಪೋಣಿಸಿ ಒಂದು ಮೊಳಕ್ಕೆ ಐದರಿಂದ ಹತ್ತು ರೂಪಾಯಿಗೆ ಮಾರುತ್ತಾರೆ.

  2. Kiggal Gireesh says:

    ಕೊಡಗು ಜಿಲ್ಲೆಯಲ್ಲಿ ಇದನ್ನು ರಂಜದ ಹೂವು ಎಂದು ಕರೆಯಲಾಗುತ್ತದೆ…ಮರದ ಬುಡದ ಸುತ್ತ ಚೆಲ್ಲಿಕೊಳ್ಳುವ ಈ ಹೂವು ತುಂಬಾ ಪರಿಮಳಭರಿತವಾಗಿರುತ್ತದೆ..

  3. Rohini Raj says:

    ಅಜ್ಜಿ ಮನೆಯಲ್ಲಿದ್ದಾಗಿನ ನೆನಪುಗಳು ಮರುಕಳಿಸಿತು

  4. Shankari Sharma says:

    ಹಾಂ…ನನ್ನ ಪ್ರೀತಿಯ ರೆಂಜೆ ಹೂ…ಚಿಕ್ಕಂದಿನ ನೆನಪು…ನಮ್ಮ ಮನೆಯಲ್ಲಿ ಇಲ್ಲದಿದ್ದರೂ ಬೇರೆ ಎಲ್ಲಿ ಸಿಕ್ಕರೂ ಒಂದು ಹೂವೂ ಬಿಡದೆ ಹೆಕ್ಕಿ ತಂದು ಹಗ್ಗದಲ್ಲಿ ಪೋಣಿಸಿ ಮುಡಿದರೆ ವಾರವಿಡೀ ತಲೆಯ ಮೇಲೆ ಇರುತ್ತಿತ್ತು..!!ಆಹಾ.. ಅದರ ಪರಿಮಳವೇ..,ಅದರ ಹಣ್ಣು ನನ್ನ ಪಾಲಿಗೆ ಅಮೃತ..!!! ಮರದ ಬುಡದಲ್ಲಿ ಒಂದೂ ಉಳಿಯಲು ಬಿಡುತ್ತಿರಲಿಲ್ಲ..!!

  5. ನಾವೆಲ್ಲಾ ಚಿಕ್ಕವರಿರುವಾಗ ೪ ಕಿ ಮೀ ದೂರ ನಡೆದೇ ಹೋಗುತ್ತಿದ್ದೆವು. ಈ ಮರದ ನೆರಳಲ್ಲಿ ಒಂದು ಗುತ್ತು ( ಆಶ್ರಮಿಸೋ ತಾಣ) ಇತ್ತು. ಇದರ ಹೂವಿನ ಹಾರ ಬಾಳೆ- ನಾರಿನಲ್ಲಿ ಸೂಜಿಗೆ ಪೋಣಿಸಿದಾಗ – ಕ್ಕಾಣುವ ಗಮ್ಮತ್ತೇ ಬೇರೆಯಿತ್ತು. ಇದಕ್ಕಿಂದ ಇದರ ಹೂವು ಮರದ ಕಾಂಡದ ಮೇಲೆಯೇ ಹುಟ್ಟುವ ಪರಿಯೂ ಆಸಕ್ತಿ ತರುತ್ತದೆ. ಧನ್ಯವಾದಗಳು

    • Hema says:

      ಮೆಚ್ಚಿದ ,ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

  6. Santosh says:

    ಕುಂದಾಪುರ ದಲ್ಲಿ ಇದನ್ನು ಬಾಗಳ ಮರ ಅಂತ ಹೇಳ್ತಾರೆ

  7. Rajith Kalappa says:

    ಹೌದು,ನಾವು ಚಿಕ್ಕವರಿದ್ದಾಗ ನಾನು ಮತ್ತು ನನ್ನ ಚಿಕ್ಕ ಅಕ್ಕ ಸೇರಿಕೊಂಡು ಮರಹತ್ತಲಾಗದೇ ಬಡಿಗೆಯಿಂದ ಮರದ ಕೊಂಬೆಗೆ ಬಡಿದು ಬಡಿದು‌ ಬೀಳಿಸಿ ತಿನ್ನುತ್ತಿದ್ದದ್ದನ್ನು ನೆನೆಸಿಕೊಂಡರೆ ಈಗಲೂ ಮನಸ್ಸಿಗೆ ಮುದ ನೀಡುತ್ತದೆ.ಇಂದಿನ ಬಹುಪಾಲು ಮಕ್ಕಳಿಗೆ ಆ ಭಾಗ್ಯ ದೊರೆಯುವುದು ‌ಕಷ್ಟವಾಗಿದೆ, ನಮ್ಮೂರು ಕೊಡಗಿನಲ್ಲಿ ಮೊದಲೆಲ್ಲ ಯತೇಚ್ಛವಾಗಿ ಕಂಡುಬರುತ್ತಿದ್ದ ಬಕುಳದ ಮರಗಳು ಇಂದಿನ ದಿನಗಳಲ್ಲಿ ವಿರಳವಾಗಿ ಕಾಣಬರುವ ಮರಗಳಾಗಿವೆ.

  8. Sunanda,Kemmannu says:

    ಆಹಾ ಬಕುಳದ ಹೂಗಳು….ಎಂಥಾ ಘಮಘಮ!
    ಸು.ರಂ.ಎಕ್ಕುಂಡಿಯವರ ಕವನ ಸಂಕಲನದ ಪುಟ ತೆರೆಯುವಾಗ ನಿಜವಾದ ಹೂವಿನ ಪರಿಮಳ ಗಾಳಿಯಲ್ಲಿ ತೇಲಿ ಬಂದಂತಾಗಿತ್ತು.ಅಷ್ಟೇ ಏಕೆ…ಡಾ.ಯು.ಆರ್.ಅನಂತಮೂರ್ತಿಯವರ “ಅಮ್ಮ” ಕೃತಿ ಓದುವಾಗಲೂ ಈ ಹೂವಿನ ಉಲ್ಲೇಖ ಬಂದಾಗ ಒಮ್ಮೆಲೆ ನನ್ನ ಬಾಲ್ಯ ಜೀವನ ಎಳೆಎಳೆಯಾಗಿ ಕಣ್ಣೆದುರು ಬಂದಂತಾಗುತ್ತದೆ.ಅಬ್ಬಾ! ಎಂಥಹ ಮೋಡಿ ಮಾಡಿದೆ ನೋಡಿ ಈ ಪುಟ್ಟ ಹೂವು.ಹೇಮಮಾಲಾರ ಈ ಲೇಖನ ಓದಿ ಮತ್ತೆ ನನ್ನ ಬಾಲ್ಯ ಮರುಕಳಿಸಿದಂತಾಯಿತು.ಉಡುಪಿ ಕಡೆ ಈ ಹೂವಿಗೆ ‘ರಂಜದ ಹೂವು’ಎಂದು ಕರೆಯುತ್ತಾರೆ.ನಾವು ಹಾಡಿಯ ದಾರಿಯಲ್ಲಿ ಶಾಲೆಗೆಹೋಗುತ್ತಿದ್ದಾಗ ರಂಜದ ಹೂಗಳನ್ನು ಹೆಕ್ಕಿ,ತೆಂಗಿನ ಗರಿಯ ತೆಳು ದಾರ ತೆಗೆದು ಈ ಹೂಗಳನ್ನು ಅದರಲ್ಲಿ ಪೋಣಿಸಿ ಮುಡಿಗೇರಿಸಿಕೊಂಡು ಹೋಗುತ್ತಿದ್ದೆವು.ದಿನವಿಡೀ ಹೂವಿನ ಘಮಘಮ ಮನಸ್ಸಿಗೆ ಮುದ ನೀಡುತಿತ್ತು.ಆದರೆ ಈಗ ಆ ಮರಗಳು ಕೊಡಲಿಯ ಏಟಿಗೆ ಬಲಿಯಾಗಿವೆ.ಮರಗಳೂ ಇಲ್ಲ,ಅದರ ಸುತ್ತ ಕೇಳಿ ಬರುತ್ತಿದ್ದ ಹಕ್ಕಿಗಳ ಕಲರವವೂ ಇಲ್ಲ.ಮೇಲಾಗಿ ರಂಜದ ಹೂ ಹೆಕ್ಕಲು ಬರುತ್ತಿದ್ದ ಗೆಳತಿಯರೂ ಹತ್ತಿರವಿಲ್ಲ.ಆದರೂ ಬೇಸಿಗೆ ಬಂದಾಗ ಅಲ್ಲೊಂದು ಇಲ್ಲೊಂದು ಮರಗಳು ರಂಜದ ಕಂಪನ್ನು ಪಸರಿಸುತ್ತವೆ.ಈಗ ನಾನು ಹೂ ಹೆಕ್ಕಿ ತಂದು ಪರಿಮಳವನ್ನು ಆಸ್ವಾದಿಸುವಾಗ ಗತ ಬಾಲ್ಯದ ಸವಿ ನೆನಪು ಮರುಕಳಿಸುತ್ತದೆ.

    • Hema says:

      ಅದೆಷ್ಟು ನವಿರಾಗಿ, ಆಪ್ತವಾಗಿ ಪ್ರತಿಕ್ರಿಯಿಸಿದ್ದೀರಿ! ಬಹಳ ಖುಷಿಯಾಯಿತು. ತಮ್ಮ ಮೆಚ್ಚುಗೆ, ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: