ಮರೆಯಲಾಗದ, ಮರೆಯಬಾರದ ನಾಥು-ಲಾ ಪಾಸ್..
ನಾಥು ಲಾ ಪಾಸ್ ಗೆ ತುಸು ದೂರದಲ್ಲಿ ನಿಲ್ಲಿಸಿದ ಚಾಲಕ ನಮ್ಮ ಕೈನ ಕ್ಯಾಮರಾ, ಪರ್ಸ್, ಮೊಬೈಲ್ ಕಾರಿನಲ್ಲಿ ಬಿಡಲು ಸೂಚಿಸಿದ. ಅಲ್ಲಿಗೆ ಅದೆಲ್ಲ ಒಯ್ಯುವ ಹಾಗಿಲ್ಲ. ಅದಾಗಲೇ ವಿಪರೀತ ಶೈತ್ಯದ ಪರಿಣಾಮ ಗದಗುಡುತ್ತಿತ್ತು. ಸ್ವೆಟರ್ ಮೇಲಿನ ಬಟನ್ ಹಾಕಲೂ ಕೈ ಸಹಕರಿಸಲಿಲ್ಲ. ಮರಗಟ್ಟುತ್ತಿತ್ತು. ಚಾಲಕ ತಕ್ಷಣ ಹಾಕಿ ಕೊಟ್ಟು ಮುಖ ಕ್ಯಾಪ್ ನಲ್ಲಿ ಕವರ್ ಮಾಡಿದ. ಇದೀಗ ಸಮುದ್ರ ಮಟ್ಟದಿಂದ 14,740 ಅಡಿ ಎತ್ತರದ ಜಾಗ. ಮೂವತ್ತರಷ್ಟು ಮೆಟ್ಟಲ ಮೂಲಕ ಹತ್ತಬೇಕು. ಅಲ್ಲಿ ಸೂಚನಾಫಲಕ “8 ವಯಸ್ಸಿಗಿಂತ ಕಡಿಮೆಯ ಮಕ್ಕಳು, ಹಾರ್ಟ್ ಪೇಷೆಂಟ್ ಗಳು, ಉಸಿರಾಟದ ಸಮಸ್ಯೆ( ಅಸ್ತಮಾಟಿಕ್) ಇದ್ದವರು ಹತ್ತಬೇಡಿ.”
ಮೆಟ್ಟಲು ಪೂರಾ ಹಿಮ ಬಿದ್ದು ಜಾರುತ್ತಿತ್ತು. ಎರಡು ಮೂರು ಮೆಟ್ಟಲು ಏರಬೇಕಾದರೆ ಶ್ವಾಸಕ್ಕೆ ಗಾಳಿ ಸಾಲದೆ ಬಾಯಿ ಮೂಲಕ ಎಳೆವ ಸ್ಥಿತಿ. ಬಾಯಿ ತೆರೆದರೆ ಬುಸುಬುಸು ಹೊಗೆ. ಮುಖದ ಬಣ್ಣ ಕೆಂಪೇರುತ್ತಿತ್ತು. ಹತ್ತಾರು ಮಂದಿ ಸ್ತ್ರೀ ಪುರುಷರೆನ್ನದೆ ಗಳಗಳನೆ ಅಳುತ್ತಿದ್ದರು ಉಸಿರಾಟಕ್ಕೆ ಕಷ್ಟವಾಗಿ. ಕಣ್ಣಿಂದ ನೀರಿಳಿಯುವ ದಾರುಣತೆ. ಮುಂದೆ ಇದ್ದವರು ಹಿಂದಿನವರಿಗೆ ಕೈಯಾಸರೆ ಕೊಟ್ಟು ಹತ್ತಿಸುವ ಪರಿ. ಬಲು ಕಷ್ಟದಿಂದ ಸುಮಾರು ಮೂವತ್ತರಷ್ಟು ಮೆಟ್ಟಲು ಹತ್ತಿದ್ದೆವು. ಈಗ ವಿಸ್ತಾರ ಮೈದಾನ. ಅಲ್ಲಿ ಸೇನಾ ಕಟ್ಟಡ,ಕ್ಯಾಂಟೀನ್ , ಸೈನ್ಯದ ಮಂದಿ. ಅಡಗಿಸಿ ಕ್ಯಾಮರಾ ತಂದವರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟು ಫೊಟೋ ತೆಗೆಯಲು ಬಿಟ್ಟಿರಲಿಲ್ಲ. ಆ ವಿಸ್ತಾರ ಭೂಮಿಯ ಗಾಳಿ, ಚೆಲುವು ಶಬ್ದಕ್ಕೆ ನಿಲುಕದ್ದು. ತುಸು ದೂರದಲ್ಲಿ ತಂತಿಬೇಲಿ. ಅಲ್ಲಲ್ಲಿ ಸೂಚನಾಫಲಕ- ‘ಚೀನೀಯರು ನಿಮ್ಮನ್ನು ಗಮನಿಸುತ್ತಿದ್ದಾರೆ, ಅವರ ಗಡಿ ದಾಟಬೇಡಿ. ಬಂಧಿಸಬಹುದು‘ ಎನ್ನುವ ಎಚ್ಚರಿಕೆ. ಅಲ್ಲಿ ಅವರ ಸೈನಿಕರ ಗಸ್ತು. ಅದು ಚೀನಿ ಆಕ್ರಮಿತ ಟಿಬೆಟ್ ಭಾಗ. ಮೇಲಿನ ವಿಸ್ತಾರವಾದ ಭಾಗದಲ್ಲಿ ಸುತ್ತಾಡಿ ಮಿಲಿಟರಿಯವರು ಕೊಟ್ಟ ಸುಡುವ ಟೀ ಕುಡಿದಾಗ ಅಲ್ಲಿ ಕಂಡ ಫಲಕ “we have given our today, for your tomorrow”.
ಭಾರತೀಯ ಸೇನೆ , ಆ ಛಳಿ, ಮರಗಟ್ಟುವ ಹವೆ, ಮೂಗಿನಿಂದ ಅಕಾಲಿಕ ರಕ್ತಸ್ರಾವ , ಉಸಿರುಗಟ್ಟಿಸುವ ಆಮ್ಲಜನಕದ ಕೊರತೆ ಇರುವ ದುರ್ಗಮ ಸ್ಥಳದಲ್ಲಿ ಹಗಲಿರುಳಿನ ಭೇದವಿಲ್ಲದೆ ಗಡಿ ಕಾಯುತ್ತದೆ. ಗಂಟೆಗಟ್ಟಲೆ ನೆಟ್ಟಗೆ ನಿಂತಿರಬೇಕು. ಮಂಜು ಬಿದ್ದು ಸೂರ್ಯನ ಬಿಸಿಲು ಪ್ರತಿಫಲಿಸುವಾಗ ಕಣ್ಣಿಗೆ ಚುಚ್ಚುವ ಯಾತನೆ (ಕುರುಡಾಗಬಹುದು ಸನ್ ಗ್ಲಾಸ್ ಇಲ್ಲವಾದರೆ) ಅಷ್ಟೇನಾ? ಅಲ್ಲ. ಹೆತ್ತವರಿಂದ, ಕುಟುಂಬದವರಿಂದ, ಮಡದಿ, ಮಕ್ಕಳಿಂದ ದೂರವಾಗಿ ದೇಶ ಕಾಯಬೇಕು. ಅಲ್ಲಿ ಜಾತಿ, ಮತಗಳ ಭೇದವಿಲ್ಲ. ಶಿಸ್ತಿನ ಸಿಪಾಯಿಗಳು. ನಮ್ಮ ಕೆಲವು ರಾಜಕಾರಿಣಿಗಳ ಅಸಂಬದ್ಧ ಅಪಲಾಪಗಳನ್ನು ಕೇಳುವಾಗ, ಇಲ್ಲಿನ ರಕ್ಷಣಾಪಡೆಗಳ ಅಸಾಧಾರಣ ಶ್ರಮದ ಕಾಯಕವನ್ನು ಕಾಣುವಾಗ ಇವರು ಬಾನೆತ್ತರದ ಸ್ಥಾನಮಾನದಲ್ಲಿ ಇದ್ದಾರೆ. ಇವರ ಕೆಲಸ ಕಾರ್ಯಗಳನ್ನು ಪ್ರತಿ ಭಾರತೀಯ ಪ್ರಜೆ ಕಣ್ಣಾರೆ ಕಾಣಬೇಕು. ಆಗ ಇಲ್ಲಿ ಸೈನ್ಯದ ತ್ಯಾಗ,ಕೆಚ್ಚು, ಸಾಹಸ, ಜೀವವನ್ನೇ ಬಲಿದಾನವಾಗಿ ದೇಶಕ್ಕಾಗಿ ಸಮರ್ಪಿಸಿ, ಅಹರ್ನಿಶಿ ಹೋರಾಡುವ ಕೆಚ್ಚಿನ ವೀರರನ್ನು ಸ್ಮರಿಸಿದಷ್ಟೂ ಕಡಿಮೆ. ದೇವರು ಎಂದರೆ ಅದು ನಮ್ಮ ಸೈನ್ಯವೂ ಹೌದು.
ಫೋಟೋ ತುಂಬ ಚೆನ್ನಾಗಿದೆ.
Superb ಮೇಡಂ , ಎಷ್ಟು ಕಷ್ಟಗಳಿದ್ದರೂ ಅದನ್ನೆಲ್ಲ ಎದುರಿಸಿ ನಮ್ಮನ್ನು ಕಾಯುವ ಯೋಧರುಗಳು ನಿಜಕ್ಕೂ ದೇವರೇ. ನಾವಿಲ್ಲಿ ಆರಾಮ್ ಸೆ ac ರೂಮ್ಗಳಲ್ಲಿ ಕೂತ್ಕೊಂಡು ದೇಶ ರಕ್ಷಣೆ ಅಂತ ಹೇಳ್ಕೊಂಡು ಏನೇನೋ ಪ್ಲಾನ್ ವೇಸ್ಟ್ ಪ್ಲಾನ್ಗಳನ್ನು ಹಾಕುತ್ತಿರುತ್ತೇವೆ . ಅದು ಯಾವುದು ಉಪಯೋಗಕ್ಕೆ ಬರುವಂತಿರುವುದಿಲ್ಲ . ನಾವಿಲ್ಲಿ ಅಷ್ಟು ಆರಾಮ್ ಆಗಿರಲಿಕ್ಕೆ ಕಾರಣ ಅಲ್ಲಿ ಯಾವ ಕಷ್ಟಗಳನ್ನು ಲೆಕ್ಕಿಸದೆ , ತಮ್ಮ ಪ್ರಾಣವನ್ನು ಒತ್ತೆ ಇಟ್ಟು ನಮ್ಮನ್ನು ಕಾಯುವ ಸೈನಿಕರು . ಇವತ್ತು ಬಹಳಷ್ಟು ಜನ ಆ ವೀರರನ್ನೇ ನಾವು ಕಳೆದು ಕೊಂಡಿದ್ದೇವೆ , ಇದು ದುರಂತ .
ಮೇಡಂ, ಚೆನ್ನಾಗಿ ಬರ್ದಿದ್ದೀರಿ ನಮ್ಮ ಯೋಧರ ಬಗ್ಗೆ