ಮಡಿದರೂ…. ಮಣಿಯಲಿಲ್ಲ ನೀನು.
ಮತ್ತೆ ಸೇರುವೆವೆಂಬ ನಂಬಿಕೆಯಲಿ …
ದೂರದೂರಿಗೆ ಹೋಗಿ ಬರುವೆನೆಂಬ ಮಾತ ಹೇಳಲು ಕೈ ಬೆರಳಿನ ಅಂತರ ಸಡಿಲಿಸಿ,
ತುಸು ದೂರ ನೀ ನಡೆದು ಹಿಂತಿರುಗಿ ನೋಡಿ,
ಮಾಡಿದ ಆ ಸದ್ದಿಲ್ಲದ ಸಂಭಾಷಣೆಯ ಅರ್ಥ ದೇಶ ಸೇವೆ ಮೊದಲು
ಎಂದು ನಾ ನನ್ನ ಪುಟ್ಟ ಮನಕೆ ಅರ್ಥೈಸಿ,
ನನ್ನ ನಾ ಮತ್ತೊಮ್ಮೆ ಮೌನ ಶಾಲೆಗೆ ಸೇರಿಸಿ,
ನೀ ಬರುವ ದಾರಿಯ ಕಾದು ಕೂತಿರುವೆ,
ಮಗದೊಮ್ಮೆ ಬಾಳಲು ನಿನ್ನ ತೋಳಲ್ಲಿ ನನ್ನ ನಾ ಇಡಿಯಾಗಿ ಸೇರಿಸಿ..
ನಿರೀಕ್ಷೆ ,ನಂಬಿಕೆ ,ನಿನ್ನ ನೆನಪುಗಳೇ ನಮ್ಮ ಹಂಗಾಮಿ ಸಂಗಾತಿಗಳು ಈಗ …….
ಮಡಿದರೂ…. ಮಣಿಯಲಿಲ್ಲ ನೀನು.
ನೀ ಹುಟ್ಟಿದ್ದು ಒಬ್ಬ ತಾಯ ಮಗನಾಗಿ,
ಮಡಿದಿದ್ದು ಕೋಟಿ ತಾಯಂದಿರ ಹರಕೆಯಾಗಿ…
ಉಸಿರದು ನಿಂತಿದೆ ದೇಶಕ್ಕಾಗಿ..
ನಿನ್ನ ಹೃದಯ ಬಡಿತ ಇನ್ನೂ ಕೇಳುತಿದೆ,
ಮತ್ತೆ ಹುಟ್ಟಿ ಬರುವೆನು ನಾ.. ತಾಯ್ನಾಡ ಸೇವೆಗಾಗಿ….
-ಮಾಲಾ ಎನ್ ಮೂರ್ತಿ
ಹೃದಯ ಸ್ಪರ್ಶಿಯಾಗಿದೆ . ಶಬ್ದಗಳಿಲ್ಲ