ಹಬ್ಬದ ದಿನದಂದೂ ನಿರ್ಜಲ ಉಪವಾಸ
ನಾನಾಗ ಮಂಗಳೂರಿನ ಸರಕಾರೀ ಡಿಪ್ಲೊಮಾ ಕಾಲೇಜಿನಲ್ಲಿ ಕಲಿಯುತ್ತಿದ್ದೆ. ಮೊದಲು ಸ್ವಲ್ಪ ಸಮಯ ಮೂರ್ನಾಲ್ಕು ತಿಂಗಳು -ಹಾಸ್ಟೆಲ್ಲಿನಲ್ಲಿ ಜಾಗ ಸಿಗುವ ವರೆಗೆ- ನಮ್ಮ ಮಾವನ ಮನೆಯಲ್ಲಿದ್ದೆ. ಕಾಲೇಜು ಮುಗಿಸಿ ಬಸ್ಸಿನಲ್ಲಿ ಬೊಂದೆಲ್ ಬಳಿ ಬಂದು ಅಲ್ಲಿಂದ ಸುಮಾರು ಮೂರ್ನಾಲ್ಕು ಕಿ ಮಿ ನಡೆದು ಮಾವನ ಮನೆಗೆ ತಲುಪುತ್ತಿದ್ದೆ. ನಡೆದು ಬರುವಾಗ ಒಂದೂವರೆ ಕಿಮೀ ರೈಲ್ವೇ ಲೈನಿದ್ದು ಮಧ್ಯೆ ಒಂದು ಸೇತುವೆಯೂ ಬರುತ್ತಿತ್ತು. ಅದೇಕೋ ನನಗೆ ಈ ದಾರಿ ತುಂಬಾನೇ ಪ್ರಿಯವಾಗಿತ್ತು. ಮುಂದೆ ನನ್ನ ಜೀವನದ ದಾರಿಯೂ ಹೀಗೇ ಉದ್ದಾನುದ್ದಕ್ಕೂ ದೇಶದ ವಿವಿದೆಡೆ ಸುತ್ತುವ ಪ್ರಯಾಣದ ದಾರಿಯೇ ಆಗುತ್ತದೆಂಬ ಸತ್ಯ ನನ್ನ ಭವಿಷ್ಯದಲ್ಲ್ಲಿದ್ದರೂ ನನಗೆ ತಿಳಿಯದ ವಿಷಯವಾಗಿತ್ತು.
ಅದರಲ್ಲೂ ಹಳಿಯ ಮೇಲೆ ನಡೆಯುತ್ತಾ ಸಾಗುವುದು ನನಗೆ ತುಂಬಾ ಪ್ರೀತಿ ಪಾತ್ರ ವಿಷಯ. ಎಂದೆಂದಿಗೂ ಕೂಡದಂತಹ ಈ ಸಮಾನಾಂತರ ಹಳಿಗಳು ಪರಸ್ಪರ ಕೂಡುವಂತೆ ಕಾಣುವ ದಿಗಂತದ ಕಾಲ್ಪನಿಕ ಸತ್ಯ ಹಳಿಯ ಮೇಲೇ ನಡೆಯುತ್ತ ಬ್ಯಾಲೆನ್ಸ್ ಮಾಡೋ ಆಟ ತುಂಬಾ ಪ್ರಿಯ. ಮನೆಯವರೆಲ್ಲಾ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಅವರ ಕಡೆಯ ಅಡುಗೆ ನಮ್ಮ ಕಡೆಯಿಂದ ಭಿನ್ನವಾಗಿದ್ದರೂ ಹಿಡಿಸುವಂತದ್ದೇ ಆಗಿರುತ್ತಿತ್ತು. ಅವರ ಮನೆಯ ಭಾಷೆ ತುಳು. ಕಾಲೇಜಿನಲ್ಲಿ ನಮ್ಮ ಸ್ನೇಹಿತರ ತುಳು ಬೇರೆ ಮನೆಯವರು ಮಾತನಾಡುವ ಶೈಲಿ ಬೇರೆಯೇ. ಮನೆಯಲ್ಲಿನ ಭಾಷೆ ಕಾಲೇಜಿನಲ್ಲಿ ನಗೆಪಾಟಲಾಗುತ್ತಿದ್ದರೆ ಕಾಲೇಜಿನ ತುಳು ಕಲಿತು ಮನೆಯಲ್ಲಿ. ನನ್ನ ತುಳು ಕಲಿಯುವ ಆಸೆಯೇ ನೆನಗುದಿಗೆ ಬಿದ್ದದ್ದು ಇದೇ ಕಾರಣದಿಂದ. ಅವರ ತುಳುವ ಹಬ್ಬ ಹರಿದಿನಗಳು ನಮ್ಮಲ್ಲಿಲ್ಲದ ಹಬ್ಬದ ಆಚರಣೆ. ನನ್ನ ಆಧುನಿಕ ಮನೋಭಾವ ಅವರ ಮನೆಯ ಶೃದ್ಧೆಯ ಕೆಲವೊಂದು ವಿಷಯ ಸ್ವಲ್ಪ ಸ್ವಲ್ಪ ಮಾನಸಿಕ ದೂರ ತರುತ್ತಿದ್ದರೂ ನನ್ನ ಜತೆಯ ಅವರ ನಡವಳಿಕೆಯಲ್ಲೇನೂ ವ್ಯತ್ಯಾಸ ವಿರುತ್ತಿರಲಿಲ್ಲ.
ಆಗಿನ ಎರಡು ಘಟನೆಗಳನ್ನು ನಿಮಗೆ ಹೇಳದೇ ಇರಲು ಮನಸ್ಸಾಗದು. ಮೊದಲಿನದ್ದು ನಾನು ಒಮ್ಮೆ ಆ ರೈಲ್ವೇ ಹಳಿಗಳಲ್ಲಿ ಬ್ಯಾಲೆನ್ಸ್ ಮಾಡುತ್ತಾ ಬರುತ್ತಿರುವಾಗ ಯಾವುದೋ ತರಲೆ ಹುಡುಗನ ಜತೆ ಜಗಳಕ್ಕಿಳಿದಿದ್ದೆ. ಸ್ನೇಹಿತನೊಬ್ಬನ ತಂಗಿಯನ್ನು ಚುಡಾಯಿಸಿದವನನ್ನು ಗದರಿಸಿದ್ದೇ ಕಾರಣವಾಗಿ ವೈಷಮ್ಯ ಸಾಧಿಸಲು ಆತ ಶನಿವಾರ ಮಟ ಮಟ ಮಧ್ಯಾಹ್ನ ಮನೆಗೆ ಬರುತ್ತಿರುವಾಗ ತನ್ನ ಸಂಗಡಿಗರ ಜತೆ ನನ್ನನ್ನು ಅಟಕಾಯಿಸಿಕೊಂಡ. ಆ ದಿನ ನಾನೊಬ್ಬನೇ ಇದ್ದೆ, ಓಡಲೂ ಜಾಸ್ತಿ ಸಾಧ್ಯವಿರಲಿಲ್ಲ ಯಾಕೆಂದರೆ ಅನತಿ ದೂರದಲ್ಲಿ ಸೇತುವೆ ಇದೆ. ಆ ಕ್ಷಣ ಅವರನ್ನು ಎದುರಿಸಲು ನನ್ನ ಮನಸ್ಸು ಸನ್ನದ್ಧವಾಗದಿದ್ದರು ಏನಾದರೊಂದು ಮಾಡಲೇ ಬೇಕಿತ್ತು.. ಆದರೆ ಹೇಗೆ? ಸುತ್ತಲೂ ಅವರ ಕಡೆಯವರ ಜಾಗವೇ ಆಗಿದ್ದು ಅವರು ನಾಲ್ವರು ನಾನು ಒಬ್ಬ. . ಏನೂ ತೋಚದಿದ್ದ ನನಗೆ ಪಕ್ಕನೆ ನೆನಪಾಗಿದ್ದು ನನ್ನ ಮಿನಿ ಡ್ರಾಫ್ಟರ್. ಅದು ಮಡಿಸಿದರೆ ಚಿಕ್ಕದಾಗಿದ್ದು ಬಿಡಿಸಿದರೆ ಮಾರುದ್ದ ಬಿಡಿಸಿ ಚಾಚಿಕೊಳ್ಳುತ್ತಿತ್ತು. ಅವರು ನನ್ನ ಹತ್ತಿರ ಬರುವಷ್ಟೂ ಹೊತ್ತು ಸುಮ್ಮನಿದ್ದು ಚಕ್ಕನೆ ಅದನ್ನು ಬಿಡಿಸಿ ಅವರತ್ತ ಬೀಸಿದೆ. ಅದರ ಕೊನೆಯಲ್ಲಿದ್ದ ಎರಡು ಅಲ್ಯುಮಿನಿಯಮ್ ತೆಳುಪಟ್ಟಿ ಕತ್ತಿಯಲುಗಿನಂತೆ ಕಂಡಿತ್ತೇನೋ ಅವರಿಗೆಲ್ಲ. ಅದೇನೊ ಭೂತ ಕಂಡವರಂತೆ ಬೆಚ್ಚಿ ಹೊಡೆಯಲು ಬಂದ ನಾಲ್ವರೂ ಹೆದರಿ ಎತ್ತೆತ್ತಲೋ ಚೆದುರಿ ಓಡಿಯೇ ಬಿಟ್ಟರು .
ಇನ್ನೊಂದು……
ಆದಿನ ರಾತ್ರೆ ಮಧ್ಯಾಹ್ನದ ಗಡಿಬಿಡಿ ತಿಂಡಿಯೋ ಅಥವಾ ಇನ್ಯಾವುದೂ ಕಾರಣದಿಂದ ಪ್ರಕೃತಿ ಕರೆಗೆ ಅರ್ಜೆಂಟಾಗಿ ಹೋಗಬೇಕಾಯ್ತು. ಆಗ ಅವರ ಮನೆ ಎದುರು ಗದ್ದೆ ಬಯಲಿತ್ತು. ಹೇಗೂ ಸಂಜೆ ಆಗಿ ಬಿಟ್ಟಿದೆ , ನಾನು ಮಾವನ ಬಳಿ ಟಾರ್ಚು ತೆಗೆದುಕೊಂಡು ಕೈಯ್ಯಲ್ಲೊಂದು ತಂಬಿಗೆ ಹಿಡಿದು ಗದ್ದೆ ಬೈಲಿಗೆ ಹೊರಟೆ.
ಸುತ್ತಲೂ ಕತ್ತಲು ದೂರದೂರದ ಮಿಣುಕು ಬೆಳಕು. ಕೈಯ್ಯಲ್ಲಿದ್ದ ಟಾರ್ಚನ್ನು ಆಗಾಗ್ಗೆ ಬೆಳಿಗಿಸಿಕೊಂಡು ನಂದಿಸಿ ನಡೆಯುತ್ತಿದ್ದೆ. ಅಲ್ಲಲ್ಲಿ ನೀರು ಕೆಸರುಮಣ್ಣಿನ ಗದ್ದೆಯದು. ಮಳೆಗಾಲದ ತಂಪು ತಂಪು ನೆಲ ನೆನಪು ನಾನು ಚಪ್ಪಲಿ ಧರಿಸಿದ್ದೆ. ನನಗೆ ಸರಿಯಾದ ಹುಡುಕಿ ಇನ್ನೇನು ಕುಳಿತುಕೊಳ್ಳಬೇಕೆನಿಸುವಷ್ಟರಲ್ಲಿ ನನ್ನ ಚಪ್ಪಲಿ ಒಂದು ಬಿಳೀ ಹಗ್ಗವನ್ನು ತುಳಿದ ಹಾಗಾಯ್ತು. ನೋಡ ನೋಡುವಷ್ಟರಲ್ಲಿ ಆ ಹಗ್ಗ ನನ್ನ ಕಾಲಿನಡಿಯಿಂದ ಹಟ್ಟಾತ್ತನೆ ನಿಟೂರಾಗಿ ಮೇಲೆದ್ದು ಹಾಗೆಯೇ ವೃತ್ತಾಕಾರವಾಗಿ ಬಾಗಿ ನನ್ನ ಪಾದದ ಮೇಲ್ಬಾಗವನ್ನು ಕಚ್ಚಿ ಹಿಡಿದು ಬಿಟ್ಟಿತ್ತು. ಸೂಜಿ ಚುಚ್ಚಿದ ಅನುಭವ ರಕ್ತವೂ ಹರಿದ ನೆನಪು. ಆದರೆ ಗಡಿಬಿಡಿಯಲ್ಲಿ ನಾನು ಕಾಲು ಎತ್ತಿ ಬಿಟ್ಟೆ, ನನ್ನ ಪಾದದ ಭಾರ ಇಳಿದ ಕೂಡಲೇ ಪಾಪಿ ಹಾವು ಆ ರಾತ್ರೆಯ ಕತ್ತಲಿನ ಲಾಭ ಪಡೆದು ಸಳ ಸಳ ಹರಿದು ಎತ್ತಲೋ ಮಾಯವಾಗಿ ಬಿಟ್ಟಿತ್ತು!!
ಆ ವಿಚ್ಚಿನ್ನ ಅನುಭ ಮತ್ತು ಕಾಲಿನ ಗಾಯ ಹೊತ್ತ ನಾನು ನಂತರ ಏನು ಮಾಡಿದ್ದೆ ಎನ್ನುವುದಕ್ಕಿಂತ ಭಯಂಕರವಾಗಿತ್ತು ನನ್ನ ನಂತರದ ಕಥೆ.ನಾನು ನನ್ನ ವಿಧಿ ಮುಗಿಸಿ ಮನೆಗೆ ತಲುಪಿದ್ದು ನನ್ನ ಅನುಭವ ಮೊದಲು ಸಿಕ್ಕಿದ ಮಾವನಲ್ಲಿ ಅರುಹಿಕೊಂಡೆ, ಮಾವ ಕೂಡಲೆ ಅತ್ತೆಯವರಿಗೆ ತಿಳಿಸಿ ಮನೆಯಲ್ಲಿನ ಎಲ್ಲರಿಗೂ ಕ್ಷಣ ಮಾತ್ರದಲ್ಲಿ ಹರಡಿ ಎಲ್ಲರನ್ನೂ ದಿಗ್ಭ್ರಮೆ ಕಾಡ ತೊಡಗಿತ್ತು. ಪದವಿ ಪೂರ್ವ ಕಲಿಕೆಯಲ್ಲಿ ನಾನು ಜೀವ ಶಾಸ್ಟ್ರ ತೆಗೆದುಕೊಂಡಿದ್ದರಿಂದ ಹಾಗೂ ನಮ್ಮ ಪ್ರಿನ್ಸಿ ಆಗೆಲ್ಲಾ ವಿವರ ವಿವರವಾಗಿ ಜೀವ ಶಾಸ್ತ್ರವನ್ನು ಕಲಿಸುತ್ತಾ ನಮ್ಮ ಅಂಧಶೃದ್ಧೆಯನ್ನು ಹಂತ ಹಂತವಾಗಿ ಕಡಿತಗೊಳಿಸಿದ್ದರಿಂದ ಹಾವಿನ ವಿಷಯದಲ್ಲಿನ ನನ್ನ ಮತ್ತು ಅವರೆಲ್ಲರ ನಂಬುಗೆ ಬೇರೆ ಬೇರೆಯೇ ಆಗಿತ್ತು. ನನ್ನ ಪದವಿ ಪೂರ್ವದ ಯಾವ ಓದಿನ ಅನುಭವವೂ ಅವರೆಲ್ಲರನ್ನು ಅತೀ ವಿಷಕಾರಿ ಹಾವಿನ ಕಚ್ಚಿವಿಕೆಯ ಭಯಂಕರ ಪರಿಣಾಮದ ಉದ್ವಿಗ್ನತೆಯನ್ನು ಕಡಿಮೆ ಮಾಡಲಾಗಲಿಲ್ಲ. ಯಾಕೆಂದರೆ ನನ್ನ ಅಲ್ಪ ಬುದ್ದಿಯಲ್ಲಿ ತಿಳಿದುಕೊಂಡ ವಿಷಯ ಹಾವು ಕಚ್ಚಿದಾಗ ಸರಿಯಾದ ಉರುಟು ಗಾಯವಾದರೆ ಆ ಹಾವು ವಿಷವಲ್ಲ ಅಂತ ಅರ್ಥ ಯಾಕೆಂದರೆ ಹಾವಿನ ಹಲ್ಲಿನಲ್ಲಿ ವಿಷ ಬರಲು ಬರಬೇಕಾದ ಜಾಗ ಕಚ್ಚಿದ ಜಾಗದಲ್ಲಿ ಸರಿಯಾಗಿ ಗೊತ್ತಾಗುತ್ತದಂತೆ. ನನ್ನ ಕಾಲಿನಲ್ಲಿನ ಗಾಯ ಉರುಟಾಗಿಯೇ ಇತ್ತು. ಆ ಅಪರಾತ್ರೆಯಲ್ಲಿ ನನ್ನ ಮಾವನ ಮಗಂದಿರು ಹೊರ ಹೊರಟು ದೂರದ ಯಾವುದೋ ಜಾಗದಲ್ಲಿದ್ದ ವಿಷ ಹರುಕ ನಾಟೀ ವೈದ್ಯನನ್ನು – ಆತ ನಡೆಯಲಾಗದಂತ ಸ್ಥಿತಿಯಲ್ಲಿದ್ದುದರಿಂದ- ಸರಿ ಸುಮಾರು ಹೊತ್ತುಕೊಂಡೇ ತಂದಿದ್ದರು. ಆತನ ಸ್ಥಿತಿಯನ್ನು ನೋಡಿ ನನಗೆ ನನ್ನ ಅವಸ್ಥೆಯ ಅರಿವಾಗಿತ್ತು. ರಾತ್ರೆಯ ಊಟ ಬಿಡಿ ನಾಳೆಯ ಹಬ್ಬದ ಸಂಭ್ರಮದ ಗೈರು ಕೂಡಾ.
ಇಲ್ಲಿಗೇ ಮುಗಿಯಲಿಲ್ಲ, ನನ್ನ ಕಥೆ, ಆತ ತಾನು ಮಯಕಲ್ಲಿದ್ದರೂ ನನಗೆ ಕಹಿ ಕಹಿ ಚೊಗರು ಖಾರ ಮಿಶ್ರಿತ ಹಸಿರು ಮದ್ದನ್ನು ಕುಡಿಸಲು ಯಾವ ತಪ್ಪೂ ಮಾಡಲೇ ಇಲ್ಲ, ಅವನೆಣಿಕೆಯ ಅರ್ಧ ವಿಷ ಆತ ಕುಡಿಸಿದ ವಿಚಿತ್ರ ಮದ್ದಿನಿಂದ ಇಳಿಯಲು ಪ್ರಾರಂಭಿಸಿದರೂ 24 ಗಂಟೆಯವರೆಗಿನ ನನ್ನ ಸಾವು ಬದುಕಿನ ನಡುವಣ ಸೇತುವೆ ಅಂತ ಅವರೆಲ್ಲರೂ ಆ ಹಕೀಮನ ಜತೆ ನಂಬಿದ್ದು ನನ್ನ ಬದುಕಿನ ದುರಂತ ಕ್ಷಣವಾಗಿತ್ತು. ಅವರೆಲ್ಲರು ಮೂಢೆ ಕಡುಬು ಚಟ್ನಿ, ಮುಂಚಿ ಕಜಿಪು ಮೆಣಸು ಕಾಯಿ ಪಾಯಸದ ಜತೆ ಹಬ್ಬದ ಸಂಭ್ರಮವನ್ನು ಹಂತ ಹಂತವಾಗಿ ಸವಿಯುತ್ತಲಿದ್ದರೆ ನನ್ನ ಮನಸ್ಸು ಸರಿ ರಾತ್ರಿಯಲ್ಲಿ ನನ್ನನ್ನು ಎಬ್ಬಿಸಿದ ನನ್ನ ಪ್ರಕೃತಿಗೂ ಆ ಸರಿರಾತ್ರೆಯ ಹಾವು ರಾಣಿಯ ಹಾದಿ ಸವೆದ ನನ್ನ ಪ್ರಾರಬ್ಧವನ್ನೂ ಹಳಿದುಕೊಳ್ಳುತ್ತಾ ಮಾರನೆಯ ದಿನದ ಅರ್ಧ ಭಾಗದ ವರೆಗೆ ನಾನು ನನ್ನ ಹಸಿದಿದ್ದ ಹೊಟ್ಟೆಯೊಂದಿಗೆ ಕ್ಷಣ ಕ್ಷಣ ಸವೆಯುತ್ತಾ ಕೃಮಿಸಲೇ ಬೇಕಾಯ್ತು. ಅತ್ತೆ ನನ್ನ ಕಷ್ಟವನ್ನು ಗೃಹಿಸಿಕೊಂಡವರಂತೆ ಮಧ್ಯಾಹ್ನ ಮೂರು ಗಂಟೆಗೆ ನನ್ನ ಆ ಅತ್ಯಂತ ಕಠಿಣ ವೃತವನ್ನು ಕಡಿದಿದ್ದರು, ಎಷ್ಟಿದ್ದರೂ ಮಾತೃ ಹೃದಯ ಹಾಗೇ ತಾನೆ…..ಆದಿನ ಆ ಹಸಿವಿನ ನಂತರದ ಊಟದ ರುಚಿ ಆಹಾ….
ಈಗಲೂ ಹಳೆಯ ನೆನಪಿನ ಜತೆ ನನ್ನ ಕಠಿಣಾತಿ ಕಠಿಣ ಸೈನ್ಯದ ಕವಾಯತ್ತಿನ ತರಭೇತಿಯ ನಡುವೆಯೂ ಪೂರ್ತಿ ಸಿವಿಲ್ ಬದುಕಿನನುಭವದ ಬುತ್ತಿಯಲ್ಲಿ ಎದ್ದು ಹಸಿರಾಗುತ್ತದೆ ಈ ಉಪವಾಸದ ಅನುಭವ..
– ಬೆಳ್ಳಾಲ ಗೋಪಿನಾಥ ರಾವ್
ಅಬ್ಬಾಬ್ಬಾ ನಿಮ್ಮ ಲೇಖನ ಓದಿದಾಗ ಮೈ ಜು೦ ಎ೦ದಿತು .ಸೊಗಸಾದ ಬರಹ .