ಜೀವಕ್ಕೆ ಬೆಲೆಯಿಲ್ಲ
ಇಲ್ಲಿ ಗಾಂಧಿ ಎಂದೋ ಸತ್ತಿದ್ದಾನೆ
ಹಿಟ್ಲರ್ ಮಾತ್ರ ಇನ್ನೂ ಬದುಕಿದ್ದಾನೆ
ಮತ್ತೆ ಮತ್ತೆ ಆವಿರ್ಭವಿಸುತಿದೆ ಹಿಂಸೆ
ಶಾಂತಿಮಂತ್ರಕಷ್ಟೇ ಶಾಂತಿ ಸೀಮಿತವಾಗಿದೆ
ಹಗಲಿರುಳೂ ನಡೆಯುತ್ತದೆ ಸಾವಿನ ರುದ್ರನರ್ತನ
ದಂಗೆ ಎಬ್ಬಿಸುವವರು ಯಾರೋ ಏನೋ
ದಿವಂಗತನಾಗುವವನು ಶ್ರೀಸಾಮಾನ್ಯ ಮಾತ್ರ
ಇಲ್ಲಿ ಪ್ರಾಣಕ್ಕೆ ಬೆಲೆಯೇ ಇಲ್ಲ
ಜಾತ್ಯಾತೀತವೋ ಕೋಮುವಾದವೋ ಗೊತ್ತಿಲ್ಲ
ಸಾವಿನ ಮನೆಯಲ್ಲೂ ನಡೆಯುತ್ತದೆ ರಾಜಕೀಯ
ದೇಶಕಾಯುವ ಸೈನಿಕನನ್ನೇ ಲೆಕ್ಕಿಸದವರು
ಜನಸಾಮಾನ್ಯನ ಸಾವಿಗೆ ದಂಗಾಗುವರೇ
ಲೆಕ್ಕವಿಲ್ಲದಷ್ಟು ನಡೆದಿವೆ ನರಮೇಧಗಳು
ಕೇಳುತ್ತಲೇ ಇದೆ ನೊಂದವರ ಚೀತ್ಕಾರಗಳು
ಒಡೆದದ್ದು ಮುತ್ತೈದೆಯ ಬಳೆಗಳು ಮಾತ್ರವಲ್ಲ
ಮನದಲ್ಲಿ ಗಂಡ ಕಟ್ಟಿದ್ದ ಕನಸಿನರಮನೆ ಕೂಡಾ
ಅನಾಥರಾಗುವುದು ಮಕ್ಕಳು ಮಾತ್ರವಲ್ಲ
ಅವರ ಭವಿತವ್ಯದ ಸುಂದರ ಸ್ವಪ್ನಗಳು ಕೂಡಾ
ಹಿಂಸಾರತಿಗೆ ಜಗತ್ತೇ ನಾಶವಾಗುತ್ತಿದ್ದರೂ
ಇಲ್ಲಿ ಜೀವಕ್ಕೆ ಬೆಲೆಯೇ ಇಲ್ಲ
ಧರ್ಮಗಳು ಶಾಂತಿ ಭೋದಿಸುವವಂತೆ
ಆದರಿಂದು ಹಿಂಸೆಗೂ ಮುನ್ನುಡಿ ಬರೆಯುತಿವೆಯಲ್ಲ
ಶೋಕತಪ್ತರು ಕಟುಕರಿಗೆ ಹಿಡಿಶಾಪ ಹಾಕುತ್ತಿದ್ದರೂ
ಇಲ್ಲಿ ಪ್ರಾಣಕ್ಕೆ ಬೆಲೆಯೇ ಇಲ್ಲ
ಮುಂದಿನ ಸ್ವರ್ಗದ ಕನಸು ಕಾಣುತ್ತಾ
ಇಂದಿನ ಜೀವನವನ್ನು ನರಕ ಮಾಡಿಕೊಂಡವರೆಷ್ಟೋ
ಸಾವು ಅದೆಷ್ಟು ಕ್ರೂರವೆಂದು ತಿಳಿದರೂ ಕೂಡಾ
ಇಲ್ಲಿ ಜೀವಕ್ಕೆ ಬೆಲೆಯೇ ಇಲ್ಲ
– ಲಕ್ಷ್ಮೀಶ ಜೆ.ಹೆಗಡೆ
ಭಾವಪೂರ್ಣ ಕವನ!
ಚನ್ನಾಗಿದೆ…..