ಸಿಂಪಲ್ ಅಮ್ಮ ಸೂಪರ್ ಮಗಳು

Share Button
Nishkala Gorur

ನಿಷ್ಕಲಾ ಗೊರೂರು

‘ಅಮ್ಮ ಪ್ಲೀಸ್ ನೀನ್ ಹೇಳ್ದಾಗೆ ಇರಕ್ಕೆ ಆಗಲ್ಲ. ನಿನ್ ಟೇಸ್ಟ್ ತುಂಬ ಔಡೇಟೆಡ್ ಆಗಿದೆ, ಇದೆಲ್ಲ ಹಾಕಂಡೋದ್ರೆ ನನ್ ಫ್ರೆಂಡ್ಸ್ ಆಡ್ಕೋತಾರೆ, ನಿಂಗೆ ಏನು ಗೊತ್ತಾಗಲ್ಲ ಹೋಗು.’

ಇದು ಪ್ರತಿಯೊಬ್ಬರ ಮನೆಯಲ್ಲೂ ಕೇಳಿಬರುವ ಮಾತು, ನಾವೆಲ್ಲರು ನಮ್ಮ ಮನೆಯಲ್ಲಿ ಈ ತರಹದ ಮಾತುಗಳನ್ನು ಕೇಳಿಯೂ ಆಥವಾ ಆಡಿಯೂ ಇರುತ್ತೇವೆ. ಹೌದು ಒಂದು ವಯಸ್ಸಿಗೆ ಬಂದ ಮೇಲೆ ನಮ್ಮೆಲ್ಲರಿಗೂ ಅಮ್ಮ ಔಡೆಟೆಡ್ ಅನಿಸುತ್ತೆ. ಆ ವಯಸ್ಸಿನಲ್ಲಿ ನಮ್ಮ ಬುದ್ಧಿಗೆ ತೋಚಿದ್ದನ್ನು ಮಾತ್ರ ನಾಲಿಗೆ ಆಡುತ್ತದೆ, ಮನಸ್ಸಿಗೆ ತೋಚಿದ್ದನ್ನಲ್ಲ. ಅಮ್ಮ ಮಾತ್ರ ಜಡೆ ಹಾಕಬೇಕು ಅನ್ನುತ್ತಿದ್ದ ನಾವು ನೀನು ಗೌರಮ್ಮನ ರೀತಿ ತಲೆ ಬಾಚ್ತೀಯ ಎನ್ನುತ್ತೇವೆ. ಅಮ್ಮನ ಸೆಲೆಕ್ಷನ್ ಸೊಪರ್ ಅನ್ನಿಸುತ್ತಿದ್ದ ನಮಗೆ ಅಮ್ಮನ ಟೇಸ್ಟ್ ಚನ್ನಾಗಿಲ್ಲ ಅನ್ನಿಸುತ್ತೆ. ಶಾಪಿಂಗ್, ಸ್ಕೂಲ್‌ಡೇ, ಸಿನಿಮಾ ಗಳಿಗೆಲ್ಲ ಅಮ್ಮನೇ ಜೊತೆಗಿರಬೇಕೆನ್ನುತ್ತಿದ್ದ ನಾವು ಇವೆಲ್ಲ ಸುಳ್ಳೇ ಸುಳ್ಳು ಎನಿಸುವಷ್ಟು ಬದಲಾಗಿಬಿಡುತ್ತೇವೆ. ಅಮ್ಮ ನಮ್ಮ ಜೊತೆ ಹೊರಗೆ ಬಂದರೆ ಒಂಥರ ಮುಜುಗರ. ಅಮ್ಮನ ಮಾತು ಕೆಲಸಕ್ಕೆಬಾರದ್ದು, ಅವಳ ಇಷ್ಟ-ಕಷ್ಟಗಳು ತಲೆನೋವು, ಕೊನೆಗೆ ಎಲ್ಲದ್ದಕ್ಕೂ ಪ್ರಶ್ನೆ ಮಾಡುವ ಅಮ್ಮನನ್ನು ನಾವು ಅವೈಡ್ ಮಾಡಲಾರಂಬಿಸುತ್ತೇವೆ.

ಹೇಳಿ-ಕೇಳಿ ಹದಿ ಹರೆಯದ ವಯಸ್ಸು. ನಮಸ್ಸಿಗೆ ಬರುವುದೆಲ್ಲವು ಎಡಬಿಡಂಗಿ ಹುಚ್ಚು ಯೋಚನೆಗಳೇ. ಚಿಕ್ಕಪುಟ್ಟದ್ದಕ್ಕೂ ಥ್ರಿಲ್ ಅನುಭವಿಸುವ ಸಮಯ. ಸೆಲ್ಫ್ ಐ‌ಎಡೆಂಟಿಟಿಗಾಗಿ ಹಾತೊರೆಯುವ ಮನಸ್ಸು. ಈಗ ತಾನೆ ಚಿಗುರುತ್ತಿರುವ ಉತ್ಸಾಹಕ್ಕೆ ಬಣ್ಣ ಹಚ್ಚುವ ತವಕ, ಹುಚ್ಚುಕೊಡಿ ಮನಸ್ಸು ನಿಂತಲ್ಲಿ ನಿಲ್ಲಲ್ಲ ಕುಂತಲ್ಲಿ ಕೂರಲ್ಲ. ಹೊಸ ಕನಸುಗಳು ಮೈತುಂಬಿರಲು ಮಮತೆಯ ಮಡಿಲು ಬೇಕೆನಿಸುವುದಿಲ್ಲ. ನಮ್ಮ ತಾಯಿಗೆ ಒಡಲಾಳ ಬರಿದಾದ ಅನುಭವ, ನಮಗೆ ಹೊಸದರ ಹುಡುಕಾಟವಾದರೆ, ಅವಳಿಗೆ ಸೆರೆಗಿನಲ್ಲಿರುವ ಅಮೂಲ್ಯ ವಸ್ತುವೊಂದು ಕೈ ಬಿಟ್ಟು ಹೋಗುತ್ತಿರುವ ಭಾವ. ಈ ಮನಸ್ಥಿತಿಯಿಂದ ತುಂಬ ಬಾರಿ ಹಲವರಿಗೆ ನೋವಾಗಿರುವುದು ಉಂಟು. ಆದ್ದರಿಂದ ಇದಕ್ಕಿರುವ ಪರಿಹಾರ ಒಂದೇ

ಅಮ್ಮ ಮಗಳಾಗಲಿ- ಮಗಳು ಅಮ್ಮನಾಗಲಿ:

ಹರೆಯವನ್ನು ನಮ್ಮ ಅಮ್ಮನೂ ದಾಟಿ ಬಂದಿರುತ್ತಾಳೆ. ನಾವುಗಳು ಏಕೆ ಚೆಲ್ಲುಚೆಲ್ಲಾಗಿ ಆಡ್ತೇವೆ, ಇದ್ದಕ್ಕಿದ್ದಂತೆ ಸಿಟ್ಟು ಮಾಡಿಕೊಳೊದ್ಯಾಕೆ ಅಂತೆಲ್ಲ ಅಮ್ಮನಿಗೆ ಗೊತ್ತಿಲ್ಲದ್ದಲ್ಲ. ಅದೇ ತರಹ ಇಷ್ಟು ದಿನ ಅಮ್ಮನ ಸೆರಗು ಹಿಡಿದುಕೊಂಡು ಓಡಾಡಿತ್ತದ್ದ ನಾವುಗಳು, ಇದ್ದಕ್ಕಿದಂತೆ ಯಾರೋ ಸ್ನೇಹಿತರು ಸಿಕ್ಕಾಕ್ಷಣ ಅಮ್ಮ ಅಂದ್ರೆ ಬೋರು ಅನ್ನುವುದಿದೆಯಲ್ಲ ಅದು ಹೆತ್ತ ಕರುಳನ್ನು ಗಾಸಿಗೊಳಿಸದೆ ಇರದು. ಅದು ಮಕ್ಕಳಾದ ನಮಗೆ ಅರ್ಥವಾಗದ ವಯಸ್ಸೇನಲ್ಲ. ಅಮ್ಮನೂ ಮೊದಲಿನಂತೆ ಎಲ್ಲವನ್ನೂ ತೀರ ಸಲೀಸಾಗಿ ತೆಗೆದುಕೊಳ್ಳುವಷ್ಟು ಉತ್ಸಾಹ ಅಥವಾ ಧೈರ್ಯ ಉಳಿಸಿಕೊಂಡಿರುವುದಿಲ್ಲ. ಏಕೆಂದರೆ ಅವಳೂ ಮೆನೋಪಾಸ್ ಸಮೀಪಿಸುತ್ತಿರುತ್ತಾಳೆ. ಅವಳ ದೇಹವೂ ಶಕ್ತಿ ಕಳೆದು, ಮನಸ್ಸು ಮುದುಡಲಾರಂಬಿಸಿರುತ್ತದೆ, ಅಂದರೆ ಅವಳಲ್ಲೂ ಹಾರ್ಮೋನ್ ನದಲಾವಣೆಯ ಸಮಯ. ಅದು ಒಂದಿಷ್ಟು ನಿರಾಸೆ, ಹತಾಷೆ ಭಾವ ಮೂಡಿಸುತ್ತಿರಬಹುದು. ಅದೇ ಮಗಳು ಕೈ ಬಿಟ್ಟು ಹೋಗುತ್ತಿದ್ದಾಳೆ, ತಾನು ನಿರ್ಲಕ್ಷ್ಯಕ್ಕೆ ಒಳಗುತ್ತಿದ್ದೇನೆ, ಅಂತೆಲ್ಲ ಭಾವಗಳು ಕಾಡಲಾರಂಬಿಸುತ್ತದೆ. ನಮ್ಮ ಕೆಲಸದಲ್ಲೇ ಸುಖ ನೆಮ್ಮದಿ ಕಾಣುತ್ತಿದ್ದ ಆಕೆಗೆ ನಮ್ಮ ಈ ಪರಿಯಿಂದ ಒಂಟಿತನ ಕಾಡಲು ಶುರುವಾಗುತ್ತದೆ.

ತನ್ನ ಮಗಳ ಪ್ರೀತಿಯನ್ನು ಎಲ್ಲಿ ಕಳೆದುಕೊಳ್ಳುತ್ತಿದ್ದೇನೆಯೆ? ತನ್ನ ಮಾತೃ ಪ್ರೇಮಕ್ಕೆ ಕಿಂಚಿತ್ ಬೆಲೆಯಿಲ್ಲವೇ? ಇಂಥ ಹಲವಾರು ಪ್ರಶ್ನೆಗಳು ಎದುರಾದಾಗ ಹರೆಯಕ್ಕೆ ಬಂದ ನಮ್ಮ ಮನಸ್ಸನ್ನು ಅರಿಯಲು ವಿಫಲವಾಗುತ್ತಾಳೆ.

 

mother daughterಹರೆಯದ ಮನಸ್ಸು ಚಂಚಲ ವಯೋಸಹಜವಾದ ಆಕರ್ಷಣೆ ಮನಸ್ಸನ್ನು ಚಿತ್ತಗೊಳಿಸಿದರೂ ಅಲ್ಲೇನೂ ಅಸಹಜ ಭಾವ ಇರುವುದಿಲ್ಲ. ಆ ವಯಸ್ಸಿಗೆ ಈ ಭಾವ ಚಿಂತನೆಯೆಲ್ಲ ಸಹಜ. ಅಲ್ಲೇ ತಪ್ಪು ತಿಳಿದುಕೊಳ್ಳುತ್ತಾಳೆ ಅಮ್ಮ, ಮಾಗಿಯೂ ಮಾಗದ ಮನಸ್ಸು, ಅರಳು ಹರಿದಂತೆ ಪಟಪಟ ಅಂತ ಆಕೆಯ ಎದುರು ನಮ್ಮ ಮನದ ತಲ್ಲಣ ತೆರೆದಿಡುತ್ತೇವೆ. ಅಮ್ಮ ಅರ್ಥ ಮಾಡಿಕೊಳ್ಳದೆ ಅಪಾರ್ಥಕ್ಕೆ ಜಾಗ ಕೊಟ್ಟಾಗ ನಾವು ಮಾನಸಿಕವಾಗಿ ಆಕೆಯಿಂದ ದೂರ ಸರಿಯ ತೊಡಗುತ್ತಾವೆ. ನಮಗೆ ಬೇಕಾಗಿರುವುದು ಭಾವನೆಗಳನ್ನರಿಯುವ ಹೃದಯ, ಮನದ ಮಾತು ಕೇಳುವ ಗೆಳತಿ. ಅದು ಆಗದಿದ್ದಾಗ ನಾವು ನಿಮಗರ್ಥವಾಗುವುದಿಲ. ನೀವು ನಮಗರ್ಥವಾಗುವುದಿಲ್ಲ.

ಅಮ್ಮ ಹೀಗಿರಬೇಕು: ನಾವು ಹೆರಯಕ್ಕೆ ಕಾಲಿಟ್ಟೊಡನೆ ತನ್ನ ಹರೆಯವನ್ನು ನೆನಪಿಸಿಕೊಂಡು ತಾನ್ಹೇಗೆ ಇದ್ದನೆಂಬುದನ್ನು ಮನಸ್ಸಿಗೆ ತಂದುಕೊಳ್ಳಬೇಕು. ಆಗ ಹದಿ-ಹರೆಯದ ಮನಸ್ಸಿನ ತುಮುಲ- ತಲ್ಲಣಗಳ ಅರಿವಾಗುವುದಲ್ಲದೆ ನಮ್ಮನ್ನು ಅರಿಯುವಲ್ಲಿ ಸಹಾಯವಾಗುತ್ತದೆ. ನಮ್ಮೊಂದಿಗೆ ಮುಕ್ತವಾಗಿ ಮಾತಾನಾಡಿ ಒಳ್ಳೆಯ ಗೆಳೆತಿಯಾಗಿ ನಮ್ಮ ಭಾವನೆಗೆ ಸ್ಪಂದಿಸಿ, ನಿಮ್ಮ ನಿಯಮ- ನಿಬಂದಬೆಗಳು ಒಂದು ಹಂತದಲ್ಲಿದ್ದು ನಮ್ಮ ಅಭಿಪ್ರಾಯಗಳಿಗೂ ಬೆಲೆ ಕೊಡಿ.

ಹರೆಯದ ಸೂಕ್ಷ್ಮ ಮನಸ್ಸಿನ ವಿಚಾರ- ವಿಮರ್ಶೆಗೆ ಆರೊಗ್ಯಕರ ಸ್ವಾತಂತ್ರ್ಯವನ್ನು ನೀಡಿ ಮತ್ತು ಸಮಾಧಾನ ತಾಳ್ಮೆಯಿಂದ ನಮ್ಮ ತಪ್ಪು-ಒಪ್ಪುಗಳನ್ನು ತಿದ್ದಿ. ಎಷ್ಟೇ ಕೆಲಸದ- ಒತ್ತಡಗಳಿದ್ದರೂ ನಮಗಾಗಿ ಸಮಯ ಮಡಿಕೊಂಡು ಸಂವಹನ ಕೊರತೆ ಕಡಿಮೆ ಮಾಡಿಕೊಳ್ಳಿ. ಅವಳಿನ್ನು ಚಿಕ್ಕವಳಲ್ಲ ಎನ್ನುವ ಭಾವ ನಿಮ್ಮ ನಡೆ ನುಡಿಯಲ್ಲಿರದೆ, ದೊಡ್ಡವಳಾಗಿದ್ದಾಳೆನ್ನುವ ಸಮಾನ ಭಾವ ಮೂಡಿಸುವ ಅವಶ್ಯ ಇದೆ. ನಗು- ಹರಟೆಯಲ್ಲಿ ಜತೆಯಾಗಿ ನಮ್ಮನ್ನು ಅರ್ಥಮಾಡಿಕೊಂಡಿದ್ದನೆನ್ನುವ ನಂಬಿಕೆ ವಿಶ್ವಾಸ ಸದಾ ಅವಳೊಂದಿಗಿದ್ದರೆ ಸಾಕು.

mother daughter1

ನಾವೂ ಬದಲಾಗೋಣ: ನಮ್ಮಲ್ಲೇ ತನ್ನ ಸುಖ ಸಂತೋಷ ಕಾರಣ ಅಮ್ಮನಿಗಾಗಿ ಒಂದಿಷ್ಟು ಕಾಳಜಿ ಪ್ರೀತಿ, ನಾನಿನ್ನು ನೆಗ್ಲೆಕ್ಟ್ ಮಾಡುತ್ತಿಲ್ಲ ಎನ್ನುವಂಥ ಅಂಶಗಳನ್ನು ಮನವರಿಕೆ ಮಾಡುವುದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಕೈ ತುತ್ತುಕೊಟ್ಟು ಬೆಳೆಸಿದ ಅಮ್ಮನ್ನು ಹರೆಯಕ್ಕೆ ಬಂದಾಗ ಅಲಕ್ಷ್ಯ ಮಾಡಬಾರದು. ನಮ್ಮ ದೈಹಿಕ ಮತ್ತು ಮಾನಸಿಕ ತೊಳಲಾಟವನ್ನು ಮುಚ್ಚುಮರೆಯಿಲ್ಲದೆ ಹಂಚಿಕೊಳ್ಳಿ, ಅಮ್ಮ ಅಂದಾಕ್ಷಣ ಭಯ ಬೇಡ. ಅವಳು ನಮ್ಮ ವಯಸ್ಸನ್ನು ದಾಟಿ ಬಂದಿದ್ದಾಳೆ ನಮ್ಮ ಮನಸ್ಸಿನ ಹೊಯ್ದಾಟ, ತುಮುಲಗಳನ್ನು ಅರ್ಥ ಮಾಡೊಕೊಳ್ಳುತ್ತಾಳೆ. ಎಲ್ಲವನ್ನು ಅಲ್ಲದಿದ್ದರೂ ಒಂದಿಷ್ಟು ವಿಷಯಗಳನ್ನು ಹೇಳಿಕೊಂಡರೆ ತಪ್ಪೇನು ಇಲ್ಲ. ಬದಲಾಗಿ ನಮ್ಮ ಹಾಗೂ ಅಮ್ಮನ ಹಾಗೂ ಅಮ್ಮನ ನಡುವಿನ ಸಂಭಂದ ಮತ್ತಷ್ಟು ಗಟ್ಟಿಯಾಗುತ್ತದೆ. ನನ್ನಮ್ಮ ಅರ್ಥಾನೆ ಮಾಡಿಕೊಳ್ಳಲ್ಲ ಎನ್ನುವ ಭಾವ ಪಕ್ಕಕ್ಕಿಟ್ಟು ಅಮ್ಮನ್ನು ಅರಿಯಲು ಪ್ರಯತ್ನಿಸಿ. ಒಟ್ಟಿನಲ್ಲಿ ಅಮ್ಮ ಔಡೇಟೆಡ್ ಅನ್ನೋ ಮಗಳೂ ಅಪ್‌ಡೇಟೆಡ್ ಆಗಬೇಕು. ಮಗಳು ಇನೋಸೆಂಟ್ ಅನ್ನೋ ಅಮ್ಮ ಬದಲಾಗಬೇಕು.

 

.

– ನಿಷ್ಕಲಾ ಗೊರೂರು

7 Responses

  1. Shruthi Sharma says:

    ಸತ್ಯ.. !

  2. VK Valpadi says:

    ಒಳ್ಳೆಯ ಆರೋಗ್ಯಕರವಾದ ಬರೆಹ.ಅಭಿನಂದನೆಗಳು

  3. anu says:

    ಸಿಂಪಲ್ ಅಮ್ಮ ಸೂಪರ್ ಮಗಳು :

    ನಿಜವಾಗ್ಲು ತುಂಬಾ ಉಪಯುಕ್ತ ಮಾಹಿತಿ . ಬೆಳೆದ ಹೆಣ್ಣು ಮಕ್ಕಳಿರೋ ಎಲ್ಲ ಅಮ್ಮಂದಿರು, ಬೆಳೆದ ಹೆಣ್ಣುಮಕ್ಕಳು ತಿಳ್ಕೊಳ್ಳೆ ಬೇಕಾದ ವಿಷಯಗಳು . ತುಂಬಾ ಇಷ್ಟ ಆಯ್ತು

  4. Sneha Prasanna says:

    ಒಳ್ಳೆಯ ಬರಹ ಧನ್ಯವಾದಗಳು…

  5. umavallish says:

    ಬಹಳ ಸಮಯೋಚಿತವಾದ ಲೇಖನ. ಆದರೆ ನನ್ನ ಅನುಭವದಲ್ಲಿ ನಾನು ನನ್ನ ಮಗಳು ತುಂಬಾ ಒಳ್ಳೆಯ ಗೆಳತಿಯರು. ಇಂಜಿನಿಯರ್ ಆಗಿರುವ ನನ್ನ ಮಗಳಿಗೆ, ಈಗ ೪ ತಿಂಗಳ ಹಿಂದೆ ಮದುವೆಯಾಯಿತು. ಕಂಪ್ಯೂಟರ್ ಕಲಿಸಿ, ಈ ಫೇಸ್ ಬುಕ್ ಗೆ ಅವಳೇ ನನ್ನ ಸೇರಿಸಿದ್ದು. ಅವಳು ಈ ವರೆಗೂ ನನಗೆ ಹೇಳದ ,ಸಲಹೆ ಕೇಳದ ವಿಷಯವೇ ಇಲ್ಲ. ಆದರೂ ಈ ಲೇಖನದಲ್ಲಿ ಇರುವಂತೆ ಎಲ್ಲಾ, ಅಮ್ಮ-ಮಗಳು ಇರಲಿ ಅಂತ ಆಶಿಸುತ್ತೇನೆ.

  6. nishakala gorur says:

    ವಹ್ ವಹ್!!!!! ನೀವು ಹೇಳಿದಂತೆ ಎಲ್ಲಾ ಅಮ್ಮ ಮಗಳು ನಿಮ್ಮ ತರಹ ಇರುವುದಿಲ್ಲ….. ನಾನು ಕಂಡರಿರುವ ಬಹಳಷ್ಟು ಮಂದಿ ಮಗಳ ಮೇಲೆ ಸಂಶಯ ಪಡುವವರೆ….. !!!!!!!

  7. krisnaveni kidoor says:

    ವಿಷಯ ನಿಜಕ್ಕೂ ಎಲ್ಲರೂ ಒಪ್ಪುವ ಹಾಗಿದೆ . ಪ್ರತಿಯೊಂದಕ್ಕೂ ಅದರದ್ದೇ ಆದ ಹೊರತಾದವುಗಳೂ ಇರುತ್ತವೆ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: