(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಸಂತಸ ಅರಳುವ ಸಮಯ ಸೆಂಟೋಸ
ಇಂದು ಸಿಂಗಪೂರ್ ಪ್ರವಾಸದ ಮೂರನೆಯ ದಿನ – ಸಿಂಗಪೂರ್‌ನ ಪ್ರಖ್ಯಾತ ಪ್ರವಾಸಿತಾಣವಾದ ಸೆಂಟೋಸ ದ್ವೀಪಕ್ಕೆ ಹೊರಟೆವು. ಸೆಂಟೋಸ ಎಂಬ ಪದದ ಮೂಲ ‘ಸಂತೋಷ’. ಮನರಂಜನೆಯ ಜೊತೆಜೊತೆಗೇ ನಿಸರ್ಗದ ಒಳ ಹೊರಮುಖಗಳನ್ನೂ ತೆರೆದಿಡುವ ದ್ವೀಪ ಸೆಂಟೋಸ. ಈ ದ್ವೀಪದಲ್ಲಿರುವ ಗಿರಿಶಿಖರವನ್ನೇರಿ ನಗರದ ವಿಹಂಗಮ ನೋಟ ನೋಡಲು ಕೇಬಲ್ ಕಾರುಗಳಿವೆ, ಬೆಟ್ಟದ ನೆತ್ತಿಯಿಂದ ಕೆಳಗೆ ಸುಯ್ಯೆಂದು ಜಾರಲು ಸ್ಕೈಲೈನ್ ಲ್ಯೂಜ್‌ಗಳಿವೆ. ಸಾಹಸಿ ಯುವಕರಿಗಾಗಿ ಸ್ಕೈವಾಕ್ ಇದೆ, ಹಿರಿಯರು ಆರಾಮವಾಗಿ ಕಾಲು ಚಾಚಿ ಮಲಗಲು ಬಿಳಿ ಬಿಳಿಯಾದ ಮರಳಿರುವ ಕಡಲತೀರಗಳಿವೆ, ಸಮುದ್ರದ ಒಡಲನ್ನೇ ತೆರೆದಿಡುವ ಅಕ್ವೇರಿಯಮ್ ಇದೆ, ಮನರಂಜನೆಗಾಗಿ ಯೂನಿವರ್ಸಲ್ ಸ್ಟುಡಿಯೋ ಇದೆ, ಮಕ್ಕಳಿಗಾಗಿ ವಾಟರ್ ಪಾರ್ಕ್ ಇದೆ, ಮೇಣದ ಅಪೂರ್ವ ಕಲಾಕೃತಿಗಳನ್ನು ಒಳಗೊಂಡ ‘ಮ್ಯಾಡಮ್ ಟ್ಯುಸಾಡ್ಸ್’ ಮ್ಯೂಸಿಯಮ್ ಸಹ ಇದೆ ಹಾಗೂ ಈ ನಾಡಿನ ಸಾಂಸ್ಕೃತಿಕ ಹಿನ್ನೆಲೆಯನ್ನು ತಿಳಿಸುವ ‘ವಿಂಗ್ಸ್ ಆಫ್ ಟೈಮ್’ ಸಹ ಇದೆ.
ಸೆಂಟೋಸ ದ್ವೀಪದ ಇತಿಹಾಸವನ್ನು ಕೇಳಿ ಅಚ್ಚರಿ ಪಡುವ ಸರದಿ ನಮ್ಮದಾಗಿತ್ತು. 1800 ರ ಪೂರ್ವದಲ್ಲಿ ಇದು ಕಡಲ್ಗಳ್ಳರ ಅಡಗುದಾಣವಾಗಿತ್ತು. ಆಗ ಇದರ ಹೆಸರು ‘ಪುಲಾವ್ ಬ್ಲಕಾಂಗ್ ಮಾಟಿ’ ಅಂದರೆ ಮಲಯ್ ಭಾಷೆಯಲ್ಲಿ ‘ಸಾವಿನ ದ್ವೀಪ’ ಎಂಭರ್ಥ. ಜಾನಪದರ ಹಾಡುಗಳಲ್ಲಿ ಈ ದ್ವೀಪವು ಯುದ್ಧದಲ್ಲಿ ಮಡಿದ ವೀರರ ಶವಸಂಸ್ಕಾರ ಮಾಡುವ ರುದ್ರಭೂಮಿಯೆಂದೇ ಬಿಂಬಿತವಾಗಿದೆ. 1880 ರ ನಂತರದಲ್ಲಿ ಈ ಪ್ರದೇಶವು ಬ್ರಿಟಿಷರ ವಸಾಹತುವಾದ ಮೇಲೆ ಮಿಲಿಟರಿ ಕೇಂದ್ರವಾಗಿ ಮಾರ್ಪಟ್ಟಿತು. 1942ರಲ್ಲಿ ಬ್ರಿಟಿಷರ ಮೇಲೆ ಆಕ್ರಮಣ ಮಾಡಿ ಈ ದ್ವೀಪವನ್ನು ವಶಪಡಿಸಿಕೊಂಡ ಜಪಾನೀಯರು ಈ ದ್ವೀಪವನ್ನು ಯುದ್ಧಕೈದಿಗಳ ಬಂಧೀಖಾನೆಯನ್ನಾಗಿ ಬಳಸಿದರು. ನೂರಾರು ಚೀನೀ ಯುದ್ಧಕೈದಿಗಳ ಹತ್ಯೆ ಮಾಡಲಾಯಿತು. ಎರಡನೇ ಪ್ರಪಂಚದ ಮಹಾಯುದ್ಧದ ನಂತರ ಈ ದ್ವೀಪಕ್ಕೆ ಪುನರ್ಜನ್ಮ ನೀಡಲು ನಿರ್ಧರಿಸಿದ ರಾಜಕೀಯ ನಾಯಕರು ಈ ಪ್ರದೇಶವನ್ನು ‘ಸೆಂಟೋಸ ದ್ವೀಪ’ ಎಂದು ಹೆಸರಿಸಿದರು. ಇಲ್ಲಿಯವರೆಗೆ ಸಾವಿನ ಮಡಿಲಾಗಿದ್ದ ನಾಡು ಶಾಂತಿ ನೆಮ್ಮದಿ ನೀಡುವ ಸ್ಥಳವಾಗಲಿ ಎಂಬ ಆಶಯವನ್ನು ಹೊತ್ತು ಈ ದ್ವೀಪಕ್ಕೆ ಹೊಸ ರೂಪವನ್ನೇ ನೀಡಿದ ಕೀರ್ತಿ ‘ಲೀ ಕುವಾನ್ ಯೂ’ರವರಿಗೆ ಸಲ್ಲಬೇಕು. ಇಲ್ಲಿದ್ದ ಬಂಧಿಖಾನೆಗಳು ಇಂದು ಹೋಟೆಲ್ ಗಳಾಗಿ, ರೆಸಾರ್ಟ್ ಗಳಾಗಿ ಅಷ್ಟೇ ಏಕೆ, ಮ್ಯಾಡಮ್ ಟ್ಯುಸಾಡ್ಸ್ ಆಗಿ ಮಾರ್ಪಾಡಾಗಿದೆ.
ಮೌಂಟ್ ಫೇಬರ್‌ನ ನೆತ್ತಿಯ ಮೇಲಿರುವ ಮೂರು ಮೀಟರ್ ಎತ್ತರವಿರುವ ಸಿಂಗಪೂರ್‌ನ ರಾಷ್ಟ್ರೀಯ ಸ್ಮಾರಕವಾದ (ಮೀನಿನ ಒಡಲಿನ ಸಿಂಹದ ಶಿರವುಳ್ಳ) ‘ಮರ್‌ಲಯನ್’ ಆಕರ್ಷಣೀಯವಾಗಿದೆ. ಇಲ್ಲಿರುವ ಉದ್ಯಾನವನದಲ್ಲಿ ಎರಡು ದೊಡ್ಡದಾದ ಗಂಟೆಗಳಿದ್ದು, ಅಲ್ಲಿ ಜನಜಾತ್ರೆಯೇ ನೆರೆದಿತ್ತು. ನಾವು ಕುತೂಹಲದಿಂದ ಅತ್ತ ಹೆಜ್ಜೆ ಹಾಕಿದೆವು. ಈ ಗಂಟೆಗಳನ್ನು ಬಾರಿಸುವ ದಂಪತಿಗಳ ನಡುವೆ ಸ್ನೇಹ, ಪ್ರೀತಿ, ವಿಶ್ವಾಸ ಚಿರಕಾಲ ಉಳಿಯುವುದು ಎಂಬ ನಂಬಿಕೆ ಸ್ಥಳೀಯರಲ್ಲಿ ಮನೆಮಾಡಿದೆ. ನಮ್ಮ ತಂಡದಲ್ಲಿದ್ದ ಐವರು ದಂಪತಿಗಳೂ ನಮ್ಮಲ್ಲಿರುವ ಅನ್ಯೋನ್ಯತೆ ಚಿರವಾಗಿ ಉಳಿಯಲಿ ಎಂದು ಪ್ರಾರ್ಥಿಸುತ್ತಾ ಗಂಟೆ ಬಾರಿಸಿದೆವು.
ಬನ್ನಿ, ಮೊದಲು ಈ ಕೇಬಲ್ ಕಾರ್‌ನಲ್ಲಿ ಕುಳಿತು ಸೆಂಟೋಸಾ ದ್ವೀಪಕ್ಕೆ ಹೋಗೋಣ. ಈ ಗೊಂಡೋಲಾಗಳು ಗುಂಡಾಗಿದ್ದು ಗಾಜಿನಿಂದ ಮಾಡಿರುವುದರಿಂದ ಸುತ್ತಲಿರುವ ಸುಂದರವಾದ ದೃಶ್ಯಗಳನ್ನು ಸವಿಯುತ್ತಾ ಪ್ರವಾಸಿಗರು ಮುಂದೆ ಸಾಗಬಹುದು. ನಮ್ಮ ತಂಡದ ಮ್ಯಾನೇಜರ್ ಹೆಬ್ಬಾರ್‌ರವರು ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಮೊದಲೇ ಖರೀದಿಸಿದ್ದರಿಂದ ಸರತಿಸಾಲಿನಲ್ಲಿ ನಿಲ್ಲುವ ಗೋಜಿರಲಿಲ್ಲ. ಅವರ ಮೊಬೈಲಿನಲ್ಲಿದ್ದ ಟಿಕೇಟ್‌ಗಳನ್ನು ಅಲ್ಲಿದ್ದ ಪ್ರವೇಶದ್ವಾರಗಳಿಗೆ ಉಜ್ಜಿದ ಮೇಲೆಯೇ ಒಬ್ಬೊಬ್ಬರನ್ನಾಗಿ ಒಳಗೆ ಬಿಟ್ಟರು. ನಾವೆಲ್ಲಾ ಗೊಂಡೋಲಾದಲ್ಲಿ ಕುಳಿತು ಸುತ್ತಮುತ್ತ ಇದ್ದ ನಿಸರ್ಗ ಸೌಂದರ್ಯವನ್ನು ಸವಿಯುತ್ತಾ, ಫೋಟೋಗಳನ್ನು ಕ್ಲಿಕ್ಕಿಸುತ್ತಾ ಮುಂದೆ ಸಾಗಿದೆವು. ಬೆಟ್ಟದ ಸುತ್ತ ಇದ್ದ ಅಂಕುಡೊಂಕಿನ ಹಾದಿಯಲ್ಲಿ, ನೆಲಕ್ಕೆ ತಾಗಿದಂತೆ ಇದ್ದ ಸ್ಕೂಟಿಗಳಂತಹ ವಾಹನಗಳ ಮೇಲೆ ಕುಳಿತು ಮೋಜಿನ ಸವಾರಿ ಮಾಡುತ್ತಿದ್ದ ಯುವಕರ ಕೇಕೆ, ನಗು ಕೇಳಿಬಂತು. ಇವುಗಳನ್ನು ‘ಸ್ಕೈಲೈನ್ ಲ್ಯೂಜ್’ ಎಂದು ಕರೆಯುತ್ತಾರೆ. ಬೆಟ್ಟದ ನೆತ್ತಿಯಿಂದ ಲ್ಯೂಜ್‌ನಲ್ಲಿ ಕೆಳಗಿಳಿಯುವ ಇವರನ್ನು ಮತ್ತೆ ಮೇಲೆ ಕರೆತರಲು ಕೇಬಲ್ ಕಾರುಗಳು ಸಿದ್ಧವಾಗಿ ನಿಂತಿದ್ದವು. ಕೆಲವು ಸಾಹಸೀ ಯುವಕರು ‘ಸ್ಕೈ ಡೈವಿಂಗ್’ ಮಾಡುತ್ತಿದ್ದರು. ಅವರನ್ನು ಕಂಡು ಗಾಬರಿಯಿಂದ ಚೀರಿದವರು ನಾವು.
ನಮ್ಮ ಮೊದಲ ನಿಲುಗಡೆ ‘ಹಾರ್ಬರ್ ಫ್ರಂಟ್’. ನಾವು ಮ್ಯಾನೇಜರ್ ಸೂಚನೆಯಂತೆ ಅಲ್ಲಿ ಇಳಿಯದೇ ಮುಂದಿನ ನಿಲುಗಡೆಯಾದ ಸೆಂಟೋಸಾ ದ್ವೀಪದಲ್ಲಿ ಇಳಿದೆವು. ನಾವು ಮೊದಲಿಗೆ ಭೇಟಿ ನೀಡಿದ್ದು ‘ಓಷನೇರಿಯಮ್’ ಅಂದರೆ ಸಮುದ್ರದಲ್ಲಿ ವಾಸಿಸುವ ಜಲಚರಗಳನ್ನೆಲ್ಲಾ ಪ್ರದರ್ಶನಕ್ಕಿಡುವ ದೊಡ್ಡದಾದ ಅಕ್ವೇರಿಯಮ್. ಜುಲೈ 24, 2024 ರಲ್ಲಿ ಆರಂಭವಾದ ಈ ಅಕ್ವೇರಿಯಮ್‌ನಲ್ಲಿ ಸುಮಾರು 22 ವಿಭಾಗಗಳಿದ್ದು, ಅಲ್ಲಿ ವಿವಿಧ ಬಗೆಯ ಜಲಚರಗಳನ್ನು ನೀರಿನ ಟ್ಯಾಂಕುಗಳಲ್ಲಿ ಕೂಡಿ, ಅವುಗಳ ಮಾಹಿತಿಯನ್ನು ಗೋಡೆಗಳ ಮೇಲೆ ಬರೆಯಲಾಗಿದೆ. ಆದರೆ ಬಣ್ಣ ಬಣ್ಣದ ಮೀನುಗಳನ್ನು ನೋಡುವುದರಲ್ಲಿ ಮೈಮರೆತ ಜನರಿಗೆ ಮಾಹಿತಿಯನ್ನು ಓದುವ ವ್ಯವಧಾನ ಎಲ್ಲಿದೆ? ಇಲ್ಲಿ ಕೇವಲ ಮೀನುಗಳ ಪ್ರದರ್ಶನವಲ್ಲ, ಅಳಿವಿನ ಅಂಚಿನಲ್ಲಿರುವ ಜಲಚರಗಳ ಸಂರಕ್ಷಣೆ ಹಾಗೂ ಸಂಶೋಧನಾ ಕೇಂದ್ರಗಳೂ ಇದ್ದವು. ನಶಿಸಿಹೋದ ಕೆಲವು ಜೀವಿಗಳ ಪಳೆಯುಳಿಕೆಗಳೂ ಇದ್ದವು.
ಒಂದು ಹನಿ ನೀರಿನಿಂದ ಹೊರಹೊಮ್ಮಿದ ಜೀವಜಾಲ, ನಿಸರ್ಗದ ಅದ್ಭುತ ಸೃಷ್ಟಿಯೇ ಸರಿ. ಸುಮಾರು ಮೂರರಿಂದ ಏಳು ಬಿಲಿಯನ್ ವರ್ಷಗಳ ಹಿಂದೆ ಸಾಗರದಾಳದಲ್ಲಿ ಸೃಷ್ಟಿಯಾದ ಜೀವ ವಿಕಾಸ ಹೊಂದುತ್ತಲೇ ಇದೆ. ಸುಮಾರು ಐನೂರು ಮಿಲಿಯನ್ ವರ್ಷಗಳ ಹಿಂದೆ ಉದಯಿಸಿದ ಜೆಲ್ಲಿಫಿಶ್‌ಗಳು ಪ್ಯಾರಾಚೂಟ್‌ಗಳನ್ನು ಹಿಡಿದು ತೇಲುವ ಹಾಗೆ ನೀರಿನಲ್ಲಿ ತೇಲುತ್ತಿದ್ದವು. ಅವುಗಳ ಅಂದಚೆಂದವನ್ನು ಬಣ್ಣಿಸಲು ಅಸಾಧ್ಯ. ನಂತರದಲ್ಲಿ ಜನಿಸಿದ ಹಲವು ಬಗೆಯ ಮೀನುಗಳು, ಏಡಿಗಳು ನಮ್ಮನ್ನೇ ದಿಟ್ಟಿಸುತ್ತಿದ್ದವು. ವಿಕಾಸ ಹೊಂದುತ್ತಲೇ ಇದ್ದ ಜೀವ ನಿಧಾನವಾಗಿ ನೀರ ಬಿಟ್ಟು ನೆಲದ ಮೇಲೆ ಬರುವ ಯತ್ನ ಮಾಡತೊಡಗಿತ್ತು. ವಿವಿಧ ಪ್ರಾಕಾರದ ಕಪ್ಪೆಗಳು ಈ ವರ್ಗಕ್ಕೆ ಸೇರಿದವು. ಆಗ ನಮ್ಮ ಮುಂದಿತ್ತು ದೊಡ್ಡದಾದ ಸುರಂಗ, ಸುತ್ತಲೂ ನೀರು, ನಮ್ಮ ಮೇಲೆ, ಎಡ ಬಲದಲ್ಲಿ ಗುಲಾಬಿ ಬಣ್ಣದ, ಶ್ವೇತ ವರ್ಣದ ಶಾರ್ಕ್ ಗಳು ತಿರುಗಾಡುತ್ತಿದ್ದವು. ಒಂದು ಕ್ಷಣ ಗಾಬರಿಯಾಗಿತ್ತು, ನಾವು ನರಭಕ್ಷಕ ಶಾರ್ಕ್ ಗಳ ಬಲೆಯಲ್ಲಿ ಬೀಳುವ ಭಯ. ಅಬ್ಬಾ ನಮ್ಮ ತಲೆಯ ಮೇಲೆ ವಿಹರಿಸುತ್ತಿದ್ದ ಶಾರ್ಕ್ ನ ಹಲ್ಲುಗಳು ಅದೆಷ್ಟು ಹರಿತವಾಗಿದ್ದವು! ಶಾರ್ಕ್ಗಳ ಸಂತತಿಯನ್ನು ಸಂರಕ್ಷಣೆ ಮಾಡಲು, ಅವುಗಳ ಮೊಟ್ಟೆಗಳನ್ನು ಸಂಗ್ರಹಿಸಿ ಇನ್‌ಕ್ಯುಬೇಟರ್‌ಗಳಲ್ಲಿ ಇಟ್ಟು ಮರಿಗಳನ್ನು ಮಾಡಿ ಮತ್ತೆ ಅವುಗಳ ವಾಸಸ್ಥಾನಕ್ಕೆ ಬಿಡುತ್ತಿದ್ದರು. ಮುಂದೆ ಹವಳದ ಬಂಡೆಗಳು, ಅವುಗಳ ಮಡಿಲಲ್ಲಿ ಮನೆ ಕಟ್ಟಿಕೊಂಡಿರುವ ಹಲವಾರು ಬಗೆಯ ಮೀನುಗಳು, ಸೀ ಎನ್ಮೋನ್‌ಗಳು, ನಕ್ಷತ್ರ ಮೀನುಗಳು, ಸ್ಪಾಂಜ್ ಮೀನುಗಳು, ಕಡಲ ಕುದುರೆಗಳು ಮುಂತಾದ ಜಲಚರಗಳು ಸಡಗರದಿಂದ ಹವಳದ ಬಂಡೆಗಳ ಮಧ್ಯೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದವು. ಕೆಲವೆಡೆ ಅಪಘಾತಕ್ಕೀಡಾದ ನೌಕೆಗಳೇ ಈ ಜಲಚರಗಳ ವಾಸಸ್ಥಾನವಾಗಿದ್ದವು.
ಈಗ ನಾವು ದೊಡ್ಡ ಸಮುದ್ರದ ಮುಂದೆ ನಿಂತ ಹಾಗೆ ಭಾಸವಾಗುತ್ತಿತ್ತು, ಕೋಣೆಯ ಒಂದು ಗೋಡೆಯ ಮೇಲೆ ದೊಡ್ಡದಾದ ಗಾಜು, ಅದರ ಹಿಂದೆ ತರಹೇವಾರಿ ಮೀನುಗಳು ಅತ್ತಿಂದಿತ್ತ, ಇತ್ತಿಂದತ್ತ ತಿರುಗಾಡುತ್ತಲೇ ಇದ್ದವು. ಈ ಮೀನುಗಳಿಗೆ ತಿರುಗಾಟದಿಂದ ಬಳಲಿಕೆಯಾಗುವುದೇ ಇಲ್ಲವೇನೋ ಎಂದು ಅನ್ನಿಸಿತ್ತು. ಆದರೆ ನಮಗೆ ಮಾತ್ರ ಕಾಲು ನೋವು, ಅಲ್ಲೊಂದು ಕೆಫೆ ಕಂಡ ತಕ್ಷಣ ಕುಳಿತು ಕಾಫಿ ಕುಡಿಯುತ್ತಾ ಸುಧಾರಿಸಿಕೊಂಡೆವು. ಇನ್ನೂ ಸಾಕಷ್ಟು ನೋಡುವುದಿತ್ತು. ಅಲ್ಲೊಂದು ಅನಾನಸ್ ಹಣ್ಣಿನ ಆಕಾರವುಳ್ಳ ಮೀನು ತಿರುಗಾಡುತ್ತಾ, ನಮ್ಮೆಡೆ ನೋಡಿತ್ತು. ಇನ್ನು ವಲಸೆ ಹೋಗುವ ಮೀನುಗಳ ಬಗ್ಗೆ ಹೇಳಲೇಬೇಕು. ಕೆಲವು ಬಗೆಯ ಮೀನುಗಳು ಮೊಟ್ಟೆ ಇಟ್ಟು ಮರಿಮಾಡಲೆಂದೇ ಲಂಬವಾಗಿ ಅಥವಾ ಅಡ್ಡಲಾಗಿ ವಲಸೆ ಹೋಗುವ ವಾಡಿಕೆಯೂ ಇದೆ. ಸಾಗರದಾಳದಲ್ಲಿ ವಾಸಿಸುವ ಕೆಲವು ನಿಗೂಢ ಜಲಚರಗಳನ್ನೂ ಗಾಜಿನ ಟ್ಯಾಂಕುಗಳಲ್ಲಿ ಇಟ್ಟಿದ್ದರು. ಬೃಹತ್ತಾದ ತಿಮಿಂಗಲಗಳ ಅಸ್ಥಿಪಂಜರಗಳನ್ನೂ ಸಂಗ್ರಹಿಸಿ ಇಟ್ಟಿದ್ದರು. ಎಲ್ಲಾ ಮೀನುಗಳನ್ನೂ ಅವುಗಳ ನೈಸರ್ಗಿಕವಾದ ವಾಸಸ್ಥಾನಗಳನ್ನು ಹೋಲುವಂತಹ ಪರಿಸರದಲ್ಲಿಯೇ ಇಟ್ಟಿರುವುದು ಈ ‘ಓಷನೇರಿಯಮ್’ನ ವೈಶಿಷ್ಟ್ಯ. ನಾವು ಎಲ್ಲಾ ಬಗೆಯ ಮೀನುಗಳನ್ನು ನೋಡುತ್ತಾ, ಸೃಷ್ಟಿಕರ್ತನ ಕೌಶಲವನ್ನು ಮೆಚ್ಚುತ್ತಾ ಕೊನೆಯ ಹಂತಕ್ಕೆ ಬಂದು ತಲುಪಿದಾಗ ಸುಮಾರು ಮೂರು ಗಂಟೆಗಳು ಕಳೆದಿತ್ತು. ಇಷ್ಟೊಂದು ಬಗೆಯ ಜಲಚರಗಳನ್ನು ಪ್ರದರ್ಶಿಸಿದ್ದರೂ, ವಿಜ್ಞಾನಿಗಳ ಅಭಿಮತದಂತೆ ನಮಗೆ ಕಂಡಿರುವುದು ಕೇವಲ ಇಪ್ಪತೈದು ಪ್ರತಿಶತವಷ್ಟೇ, ಇನ್ನೂ ಎಪ್ಪತೈದರಷ್ಟು ಜಲಚರಗಳು ಇನ್ನೂ ಕಣ್ಣಿಗೆ ಕಾಣದಂತೆ ನಿಗೂಢವಾಗಿಯೇ ಉಳಿದಿವೆ. ಎಲ್ಲರ ಮೊಬೈಲುಗಳೂ ಫೋಟೋಗಳಿಂದ ತುಂಬಿ ಹೋಗಿದ್ದವು. ಆಗ ಕಂಡಿದ್ದು ಒಂದು 3 ಡಿ ಚಿತ್ರಣದ ಅದ್ಭುತ –‘ನಮ್ಮ ಬದಿಯಲ್ಲಿದ್ದ ಹಿಮಬಂಡೆಗಳು ಹವಾಮಾನದ ವೈಪರೀತ್ಯದಿಂದ ಕರಗಿ ಕುಸಿದು ಬೀಳುತ್ತಿರುವ ದೃಶ್ಯ, ಹಾಗೆಯೇ ಉಕ್ಕಿ ಹರಿಯುವ ಸಮುದ್ರರಾಜ ಭೂಮಿಯನ್ನು ಕಬಳಿಸುತ್ತಾ ಸಾಗುವ ದೃಶ್ಯ ನಮ್ಮನ್ನೆಲ್ಲಾ ತಲ್ಲಣಗೊಳಿಸಿದವು. ನಮ್ಮ ನೆರೆಯ ರಾಜ್ಯವಾದ ಮುಂಬೈ ಗತಿ ಏನಾಗುವುದೋ ಎಂಬ ಆತಂಕ ಮೂಡಿತ್ತು.
ಈ ‘ಓಷನೇರಿಯಮ್’ ಒಂದು ಮರೆಯಲಾಗದ ಅನುಭವ. ಕೊನೆಯಲ್ಲಿ ಭರವಸೆಯ ಬೆಳಕು ಮೂಡಿಸುವ ‘ಹಾಲ್ ವೇ ಆಫ್ ಹೋಪ್’. ನಮ್ಮ ನೆಲ ಜಲವನ್ನು ಸಂರಕ್ಷಿಸೋಣ. ಅಭಿವೃದ್ಧಿಯೊಂದಿಗೆ ಪರಿಸರ ಸಂರಕ್ಷಣೆಯನ್ನೂ ಮಾಡೋಣ, ಪರಿಸರದೊಂದಿಗೆ ಸಾಮರಸ್ಯದೊಂದಿಗೆ ಬಾಳೋಣ ಎಂಬ ಸಂದೇಶವನ್ನು ನೀಡಿತ್ತು ಈ ‘ಓಷನೇರಿಯಮ್’.
ನಮ್ಮ ಮುಂದಿನ ಪ್ರವಾಸಿ ತಾಣದ ಹೆಸರೇ ಎಲ್ಲರಲ್ಲೂ ಹರ್ಷ ಉಲ್ಲಾಸ ಹುಟ್ಟಿಸಿತ್ತು – ಅದುವೇ ‘ಮ್ಯಾಡಂ ಟುಸ್ಸಾಡ್ಸ್’ ಜಗತ್ತಿನ ಪ್ರಖ್ಯಾತ ನಾಯಕರ ಮೇಣದ ಮೂರ್ತಿಗಳ ಖಜಾನೆ ಇದಾಗಿತ್ತು. ಸಿನೆಮಾ ರಂಗದ, ಕ್ರೀಡಾ ಜಗತ್ತಿನ, ರಾಜಕೀಯ ನೇತಾರರ ಹಾಗೂ ಈ ನಾಡಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಸುಮಾರು ಎಂಭತ್ತು ಮಹನೀಯರ ಪ್ರತಿಮೆಗಳನ್ನು ಇಲ್ಲಿ ಇಡಲಾಗಿದೆ. ನಾವು ಮೊದಲು ಕಂಡದ್ದು ಬಾಲಿವುಡ್ ಸಿನೆಮಾದ ನಕ್ಷತ್ರಗಳಾದ ಕರಣ್ ಜೋಹರ್, ಶಾರುಖ್ ಖಾನ್, ಅಮಿತಾಭ್ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆ, ಮಾಧುರಿ ದೀಕ್ಷಿತ್ ಮುಂತಾದವರ ಪ್ರತಿಮೆಗಳನ್ನು. ಎಲ್ಲರೂ ಸಂಭ್ರಮದಿಂದ ತಮ್ಮ ಅಚ್ಚುಮೆಚ್ಚಿನ ಸ್ಟರ‍್ಸ್ ಜೊತೆ ವಿವಿಧ ಭಂಗಿಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು. ಹಿಂದಿ ಸಿನೆಮಾ ಹಾಡಿಗೆ ನರ್ತಿಸುತ್ತಿದ್ದ ವಿಡೀಯೋಗಳನ್ನು ನೋಡುತ್ತಾ ಅವರನ್ನು ಅನುಕರಣೆ ಮಾಡುತ್ತಾ ಕುಣಿದರು. ತುಂಡುಡುಗೆ ಧರಿಸಿದ್ದ ಮರ್‌ಲಿನ್ ಮನ್ರೋ ಜೊತೆ ಪೋಸ್ ಕೊಟ್ಟವರು ರಮೇಶ್. ಮೈಖೇಲ್ ಜಾಕ್ಸನ್ ನಿಂತಿದ್ದ ವೇದಿಕೆಯ ಮೇಲೆ ನಿಂತು ಮೈಕ್ ಹಿಡಿದು ಹಾಡುತ್ತಾ ನರ್ತಿಸಿದವರು ಸಾವಿತ್ರಿ. ಎಲ್ಲರೂ ಹದಿಹರೆಯದವರಂತೆ ನಕ್ಕು ನಲಿದರು. ಮುಂದೆ ಬಂದರೆ ಮಹಾತ್ಮ ಗಾಂಧಿ, ನೆಲ್ಸನ್ ಮಂಡೇಲಾ, ಮಾರ್ಗರೆಟ್ ಥ್ಯಾಚರ್, ಒಬಾಮಾ, ನರೇಂದ್ರ ಮೋದಿಯವರ ಪ್ರತಿಮೆಗಳು ರಾರಾಜಿಸುತ್ತಿದ್ದವು. ಈ ನಾಯಕರ ದೇಶಪ್ರೇಮ, ತ್ಯಾಗ, ಬಲಿದಾನದ ಕಥೆಗಳನ್ನು ನೆನೆದು ಭಾವುಕರಾದೆವು. ಕ್ರೀಡಾ ಕ್ಷೇತ್ರದಲ್ಲಿ ಮಿನುಗಿದ ನಕ್ಷತ್ರಗಳನ್ನು ಮರೆಯಲಾದೀತೆ – ಸಚಿನ್ ತೆಂಡೂಲ್ಕರ್ ಮುಂತಾದ ಕ್ರೀಡಾ ಪಟುಗಳ ಪ್ರತಿಮೆಗಳನ್ನು ಕಂಡು ಖುಷಿಯಾಯಿತು.
ಈ ಮ್ಯೂಸಿಯಮ್‌ನ ಆಕರ್ಷಕ ರೈಡ್ ಎಂದರೆ ಸಿಂಗಪೂರ್‌ನ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ದೋಣಿ ವಿಹಾರ. ಕತ್ತಲ ಗುಹೆಯಂತಿದ್ದ ಸುರಂಗದಲ್ಲಿ ಹರಿಸಿದ್ದ ನೀರಿನಲ್ಲಿ ತೇಲುತ್ತಾ ನಡೆದೆವು. ನಾವು ದೋಣಿಯಲ್ಲಿ ಸಾಗಿದಂತೆ ಆ ಸ್ಥಳಗಳಲ್ಲಿ ಬಣ್ಣ ಬಣ್ಣದ ದೀಪಗಳು ಜಾದೂ ಮಾಡಿದಂತೆ ಹೊತ್ತಿಕೊಳ್ಳುತ್ತಿದ್ದವು. ಅವರ ಪ್ರಾಚೀನ ಇತಿಹಾಸ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಪ್ರತಿಮೆಗಳು, ದಟ್ಟವಾದ ಅರಣ್ಯ ಪ್ರದೇಶ, ಅಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಸ್ಥಳೀಯರು, ಎರಡನೇ ಮಹಾಯುದ್ಧ ಸಮಯದಲ್ಲಿ ಜಪಾನೀಯರ ಆಕ್ರಮಣದ ಜೀವಂತ ಚಿತ್ರಣಗಳು, ಮಲೇಶಿಯಾದಿಂದ ಬಿಡುಗಡೆ ಹೊಂದಿದ ಪುಟ್ಟ ನಾಡು, ಈ ನಾಡಿನ ಚುಕ್ಕಾಣಿ ಹಿಡಿದು ದೇಶವನ್ನು ಕಟ್ಟಿದ ‘ಲೀ ಕುವಾನ್ ಯೂ’. ಕೇವಲ ಹತ್ತು ನಿಮಿಷಗಳ ಅವಧಿಯಲ್ಲಿ ಈ ದೇಶದ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಟ್ಟಿತ್ತು. ಚೀನೀಯರು, ಮಲಯಾದವರು, ಭಾರತೀಯರು ಇರುವ ಬಹು ಸಂಸ್ಕೃತಿಯ ನಾಡಾದ ಸಿಂಗಪೂರ್ ಸರ್ವ ಜನಾಂಗದ ಶಾಂತಿಯ ನಾಡಾಗಿರುವುದು. ನಾವು ಅವರಿಂದ ಕಲಿಯಬೇಕಾಗಿರುವುದು ಬಹಳಷ್ಟಿದೆಯಲ್ಲವೇ?
‘ಮ್ಯಾಡಂ ಟುಸ್ಸಾಡ್ಸ್’ ಯಾರು? ಅವಳ ಹೆಸರಿನಲ್ಲಿರುವ ಈ ಮ್ಯೂಸಿಯಂಗಳು ಎಲ್ಲೆಲ್ಲಿವೆ? ಇವಳು ಫ್ರಾನ್ಸ್ ದೇಶದವಳು. ಬಾಲ್ಯದಿಂದಲೇ ಮೇಣದ ಮೂರ್ತಿಗಳನ್ನು ಮಾಡುವುದರಲ್ಲಿ ನೈಪುಣ್ಯತೆಯನ್ನು ಪಡೆದವಳು. ಪ್ರೆಂಚ್ ಕ್ರಾಂತಿಯ ಸಮಯದಲ್ಲಿ ತನ್ನ ದೇಶವನ್ನು ತೊರೆದು ಲಂಡನ್‌ಗೆ ಬಂದು ನೆಲಸುತ್ತಾಳೆ. ಅವಳ ಕಲಾತ್ಮಕವಾದ ಮೇಣದ ಮೂರ್ತಿಗಳಿಗೆ ಮನಸೋತ ಬ್ರಿಟಿಷರು ಅವಳ ಹೆಸರಿನಲ್ಲಿಯೇ ಮೊದಲ ಬಾರಿಗೆ ‘ಮ್ಯಾಡಂ ಟ್ಯುಸಾಡ್ಸ್’ ಎಂಬ ಮ್ಯೂಸಿಯಂನ್ನು ಆರಂಬಿಸುತ್ತಾರೆ. ಈಗ ಜಗತ್ತಿನ ಹಲವಾರು ಕಡೆ ಈ ಮ್ಯೂಸಿಯಂಗಳು ಆರಂಭವಾಗಿವೆ. ‘ಮ್ಯಾಡಂ ಟುಸ್ಸಾಡ್ಸ್’ನಲ್ಲಿ ತನ್ನ ಮೇಣದ ವಿಗ್ರಹ ಇರುವುದು ಇಂದು ಹೆಮ್ಮೆಯ ಸಂಗತಿಯಾಗಿದೆ.
‘ಮ್ಯಾಡಂ ಟುಸ್ಸಾಡ್ಸ್’ ನೋಡಿ ಬಂದಮೇಲೆ ಎಲ್ಲರೂ ಹದಿಹರೆಯದವರಂತೆ ಉತ್ಸಾಹದಿಂದ ಪುಟಿಯುತ್ತಿದ್ದರು. ಇದೇ ಅಲ್ಲವೆ ಪ್ರವಾಸದ ಮೋಡಿ.
(ಮುಂದುವರೆಯುವುದು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=45109

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ



ಪ್ರವಾಸ ಕಥನ ಸುಲಲಿತವಾಗಿ ಓದಿಸಿಕೊಂಡು..ಹೋಯಿತು… ಆ ಅನುಭವ ನಮ್ಮೊಳಗೆ ಮಿಳಿತವಾಗಿ ಮುಂದೆ…ಯಾವುದರ ಬಗ್ಗೆ …ಹೇಳುತ್ತಾರೆಂಬ ಕುತೂಹಲ ಹುಟ್ಟಿ ಹಾಕಿದೆ ಮೇಡಂ…
ಪ್ರವಾಸ ಕಥನದಲ್ಲಿ ನಿಡಿರುವ ವಿವರಣೆಗಳು ಸಿಂಗಪೂರ್ ಗೆ ಪ್ರವಾಸ ಹೋಗಲೇ ಬೇಕೆಂಬ ಅಭಿಲಾಷೆಯನ್ನು ಹುಟ್ಟುಹಾಕುವಂತಿವೆ.