(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಉಲುವಾಟು (Pura Luhur Uluwatu) ದೇವಾಲಯ
‘ಇನ್ನು ನಾವು ಉಲುವಾಟು ದೇವಾಲಯಕ್ಕೆ ಹೋಗಲಿದ್ದೇವೆ. ಅಲ್ಲಿ ಹಲವಾರು ಮಂಗಗಳಿವೆ. ಆದರೆ ಅವುಗಳಿಗೆ ‘ಮಂಕಿ ಫಾರೆಸ್ಟ್’ ನ ಕಪಿಗಳಂತೆ , ಪ್ರವಾಸಿಗರಿಂದ ಆಹಾರ ಕೊಡಿಸುವ ವ್ಯವಸ್ಥೆ ಇಲ್ಲ. ಅವುಗಳು ಸಾಕು ಮಂಗಗಳಲ್ಲ, ಹಾಗಾಗಿ ಹಸಿದಿರುತ್ತವೆ. ಹಾಗಾಗಿ ನಿಮ್ಮ ಕೈಯಲ್ಲಿ ಇರುವ ಬ್ಯಾಗ್ ,ಸರ, ಕ್ಯಾಮೆರಾ, ಕನ್ನಡಕ, ಟೋಪಿ ಇತ್ಯಾದಿ ಜೋಪಾನ, ಸರಕ್ಕನೆ ಬಂದು ಕಿತ್ತುಕೊಳ್ಳುತ್ತವೆ, ಯಾವುದನ್ನೂ ಅವುಗಳಿಗೆ ಕಾಣಿಸುವಂತೆ ಇಡಬೇಡಿ. ‘ದೀಸ್ ಆರ್ ಹಂಗ್ರಿ ಏಂಡಾ ಆಂಗ್ರಿ ಮಂಕೀಸ್’ ಎಂದು ಎಚ್ಚರಿಸಿದ್ದರು ಮಾರ್ಗದರ್ಶಿ ಮುದ್ದಣ.
ಸುಮಾರು ಒಂದು ಗಂಟೆ ಪ್ರಯಾಣಿಸಿ ‘ಉಲುವಾಟು’ ತಲಪಿದೆವು. ಇಂಡೋನೇಶ್ಯಾದ ಬಾಲಿ ದ್ವೀಪದಲ್ಲಿ ಹಿಂದೂ ಮಹಾಸಾಗರದ ಅಂಚಿನಲ್ಲಿರುವ ಪ್ರಾಚೀನ ಹಿಂದೂ ದೇವಾಲಯ ‘ಉಲುವಾಟು’ . 70 ಮೀಟರ್ ಎತ್ತರದಲ್ಲಿರುವ ಹೆಬ್ಬಂಡೆಯ ಮೇಲೆ ಕಟ್ಟಲಾದ ಈ ದೇವಾಲಯದಲ್ಲಿ ‘ಶಿವ’ನು ಮುಖ್ಯ ದೇವರಾಗಿ ಪೂಜಿಸಲ್ಪಡುತ್ತಾನೆ. ಬ್ರಹ್ಮ, ವಿಷ್ಣು, ಕುಬೇರ, ವರುಣ ಮೊದಲಾದ ಇತರ ದೇವರುಗಳ ಗುಡಿಗಳೂ ಇವೆ. ಬಾಲಿನೀಸ್ ಭಾಷೆಯಲ್ಲಿ ‘ಉಲು’ ಎಂದರೆ ಭೂಮಿಯ ಕೊನೆ, ‘ವಾಟು’ ಎಂದರೆ ಬಂಡೆ. ಸುಂದರವಾದ ಹಾಗೂ ಸ್ವಚ್ಚವಾದ ಕಡಲತೀರ ಹೊಂದಿರುವ ಈ ಪರಿಸರದಲ್ಲಿ , ಸಂಜೆಯ ವೇಳೆ ನೆರವೇರುವ ಸಾಂಪ್ರದಾಯಿಕ ಕೆಚಕ್ (Kecak) ನೃತ್ಯವು ಪ್ರಮುಖ ಪ್ರವಾಸಿ ಆಕರ್ಷಣೆಯೂ ಆಗಿದೆ. ಸುಮಾರು 50 ಮೆಟ್ಟಿಲುಗಳನ್ನೇರಿ ವಿಶಾಲವಾದ ಬಂಡೆಯ ಮೇಲೆ ಹೋದಾಗ ಸಮುದ್ರ ಮತ್ತು ದೇವಾಲಯ ಸಂಕೀರ್ಣ ಕಾಣಿಸುತ್ತದೆ. ಲಭ್ಯ ಮಾಹಿತಿಯ ಪ್ರಕಾರ , ಉಲುವಾಟು ಈ ದೇವಾಲಯವನ್ನು 11 ನೇ ಶತಮಾನದಲ್ಲಿ ಜಾವಾನೀಸ್ ಋಷಿ ಎಂಪು ಕುತುರಾನ್ (Mpu Kuturan) ಜೀರ್ಣೋದ್ಧಾರ ಮಾಡಿ ವಿಸ್ತರಿಸಿದರು. ಅನಂತರ ಹಲವಾರು ಬಾರಿ ನವೀಕರಣಕ್ಕೊಳಗಾಗಿದೆ.
ಗುಡಿಗಳಿಗೆ ಪ್ರದಕ್ಷಿಣೆ ಹಾಕಿ ಹಿಂತಿರುಗಿ ಬರುವಾಗ, ‘ಮಂಗನಾಟ’ಕ್ಕೆ ನಾವೇ ಸಾಕ್ಷಿಯಾದೆವು. ಅಲ್ಲಿಗೆ ಬಂದಿದ್ದ ಭಾರತೀಯ ಪ್ರವಾಸಿಯೊಬ್ಬರು ತಮ್ಮ ಚಪ್ಪಲಿಯನ್ನು ಕೆಳಗೆ ಬಿಟ್ಟು ಕಟ್ಟೆಯೊಂದರಲ್ಲಿ ಕುಳಿತಿದ್ದರು. ಅವರ ಒಂದು ಚಪ್ಪಲಿಯನ್ನು ಹಾರಿಸಿಕೊಂಡು ಹೋದ ಕಪಿಯೊಂದು ಆಗಲೇ ತಾರಸಿಯೇರಿತ್ತು. ಅಲ್ಲಿದ್ದ ಪ್ರವಾಸಿಗರ ಗುಂಪಿನವರು ಮತ್ತು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದ ಪ್ರಕಾರ, ಉಲುವಾಟು ಆಸುಪಾಸಿನ ಮಂಗಗಳು ‘ವಸ್ತು ವಿನಿಮಯ ಚಾತುರ್ಯ‘ವನ್ನು ಕರಗತಮಾಡಿಕೊಂಡ ಜಾಣ ಕಪಿಗಳಂತೆ. ತಿನ್ನಲಾಗದ ವಸ್ತುಗಳೆಂದು ಗೊತಿದ್ದರೂ ಕನ್ನಡಕ, ಟೋಪಿ ಇತ್ಯಾದಿ ಕಿತ್ತುಕೊಂಡು ಮರವನ್ನೋ ಕಟ್ಟಡವನ್ನೋ ಏರಿಬಿಡುತ್ತವೆ. ಸಹಜವಾಗಿ, ತಮ್ಮ ವಸ್ತುಗಳನ್ನು ಕಳೆದುಕೊಂಡ ಪ್ರವಾಸಿಗರು ಅಲ್ಲಿ ಮಾರಾಟಕ್ಕೆ ಲಭ್ಯವಿದ್ದ ಹಣ್ಣುಗಳನ್ನೋ, ತಿಂಡಿಯನ್ನೋ ಖರೀದಿಸಿ ಮಂಗಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಾರೆ. ಅವಕ್ಕೆ ಇಷ್ಟವಾಗುವ ತಿನಿಸನ್ನು ಕಂಡರೆ ಮಾತ್ರ, ತಮ್ಮ ಕೈಯಲ್ಲಿರುವ ಕಿತ್ತುಕೊಂಡ ವಸ್ತುವನ್ನು ಮಂಗಗಳು ಕೆಳಗೆಸೆದು ಆಹಾರವನ್ನು ಕಬಳಿಸುತ್ತವೆಯಂತೆ. ಅದೃಷ್ಟ ಚೆನ್ನಾಗಿದ್ದರೆ ಆ ವಸ್ತುಗಳು ಇನ್ನೂ ಸುಸ್ಥಿತಿಯಲ್ಲಿರುತ್ತವೆ. ಕೆಲವೊಮ್ಮೆ ಪ್ರವಾಸಿಗರ ದುಬಾರಿ ಕನ್ನಡಕ, ಕ್ಯಾಮೆರಾಗಳು ಹೀಗೆ ಕಪಿಚೇಷ್ಟೆಯಿಂದ ಹಾನಿಗೀಡಾಗಿರುವುದೂ ಇದೆಯಂತೆ.
ನಮ್ಮ ಬಾಲ್ಯದಲ್ಲಿ ಕೇಳಿರುವ ಕತೆಯೊಂದರಲ್ಲಿ ಟೊಪ್ಪಿ ಮಾರುವ ಒಬ್ಬಾತ ದಣಿವಾರಿಸಿಕೊಳ್ಳಲು ಮರದ ಕೆಳಗೆ ಮಲಗಿದ್ದಾಗ, ಆ ಮರದ ಮೇಲಿದ್ದ ಮಂಗಗಳು ವ್ಯಾಪಾರಿಯ ಮೂಟೆಯಿಂದ ಟೊಪ್ಪಿಗಳನ್ನು ಕಸಿದು ಮರವೇರಿದ್ದುವಂತೆ. ಜಾಣ ಟೊಪ್ಪಿ ವ್ಯಾಪಾರಿಯು ಒಂದು ಟೊಪ್ಪಿಯನ್ನು ತನ್ನ ತಲೆಗೆ ಹಾಕಿಕೊಂಡಾಗ, ಕಪಿಗಳೂ ಅನುಕರಿಸಿದವಂತೆ. ಥಟ್ಟನೇ ವ್ಯಾಪಾರಿಯು ತನ್ನ ಟೋಪಿಯನ್ನು ಎಸೆದ. ಕಪಿಗಳೂ ಅವನನ್ನು ಅನುಕರಿಸಿ ಟೊಪ್ಪಿಗಳನ್ನು ಎಸೆದುವು. ವ್ಯಾಪಾರಿಯು ನೆಲಕ್ಕೆ ಬಿದ್ದ ಟೊಪ್ಪಿಗಳನ್ನು ಹೆಕ್ಕಿ, ಮೂಟೆಕಟ್ಟಿ ಅಲ್ಲಿಂದ ಹೊರಟ. ಹೀಗೆ ಭಾರತದ ಕಪಿಗಳನ್ನು ‘ಮಂಕು ಮಾಡಿದಂತೆ’ ಇಂಡೋನೇಶ್ಯಾದ ಕಪಿಗಳನ್ನು ಮಂಕು ಮಾಡಲು ಸಾದ್ಯವಿಲ್ಲ ಎಂದು ಮನದಟ್ಟಾಯಿತು! ಹಿಂದಿನ ಕಾಲದಲ್ಲಿ ‘ವಸ್ತು ವಿನಿಮಯ’ ವ್ಯಾಪಾರಿ ಪದ್ಧತಿಯಿತ್ತು. ಈ ಕಪಿಗಳಿಗೆ ಇದನ್ನು ಕಲಿಸಿದವರಾರು? ‘ಭೇಷ್ ಕಪಿಗಳೇ’ ಎಂದು ಉದ್ಗರಿಸಿ ಅಲ್ಲಿಂದ ಹೊರಟೆವು!
ನಮ್ಮ ವಸತಿ ಇದ್ದ ಹೋಂ ಸ್ಟೇ ಗೆ ಹಿಂತಿರುಗುವ ದಾರಿಯಲ್ಲಿ ಬಾಲಿ ಮಂದಾರ ಟೋಲ್ ರಸ್ತೆ ಅಥವಾ ‘ನುಸಾ ದುವಾ’ ರಸ್ತೆಯಲ್ಲಿ , ಸಮುದ್ರದ ಮೇಲೆ ಹಾದುಹೋಗುವ ಸೊಗಸಾದ 8.3 ಕಿಮೀ ಉದ್ದದ ಸೇತುವೆಯ ಮೂಲಕ ಪ್ರಯಾಣಿಸಬೇಕಿತ್ತು. ಹೋಂ ಸ್ಟೇ ತಲಪಿದ ಮೇಲೆ, ಬಿಸಿ ಕಾಫಿಯ ಜೊತೆಗೆ , ಸಹ ಪ್ರವಾಸಿಗರು ತಂದಿದ್ದ ಕುರುಕಲು ತಿನಿಸುಗಳು ಹೊಟ್ಟೆ ಸೇರಿದುವು. ರಾತ್ರೆ ಊಟಕ್ಕೆ ಅನ್ನ, ಸಾರು, ಪಲ್ಯ , ಚಟ್ನಿ, ಮಜ್ಜಿಗೆ, ಉಪ್ಪಿನಕಾಯಿ ಹಿತವಾಗಿತ್ತು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44375

–ಹೇಮಮಾಲಾ.ಬಿ. ಮೈಸೂರು




